01209. ಬದಲಾಗಿ ಹೋಗಿ ವಿಳಾಸಗಳು..


01209. ಬದಲಾಗಿ ಹೋಗಿ ವಿಳಾಸಗಳು..
_________________________________


ಪತ್ರ ಬರೆದು ನಿಟ್ಟುಸಿರ ನಿರಾಳ
ಮತ್ತೆ ಮತ್ತೆ ಓದಿ ಮತ್ತಳುವಳ
ವೇದನೆಯಾಳ ಅರಿತವರಾರೊ ?
ಯಾತನೆಯಳತೆ ಹಿಡಿದವರೆಲ್ಲೊ ?

ಹೇಳಲಿಲ್ಲ ಹೇಳ ಬಿಡದ ಅನಿವಾರ್ಯ
ಯಾರಾಣತಿಗೊ ಕಾಣೆ ದುಡಿದ ಪ್ರಾಯ
ಮಗನಾದಳೂ ಮಗಳೆಂದವರ ಮೆಚ್ಚಿಸೆ
ದೀಪ ಹಚ್ಚಿ ತನ್ನೆ ಬತ್ತಿಯಾಗುರಿಸಿದಳು..

ಕಾಡಿದವದೆಷ್ಟೋ ಕನಸ ಕನವರಿಕೆ
ಕಣ್ಣ ಬಿಟ್ಟ ಹೊತ್ತಲೆಲ್ಲಾ ಕಲಬೆರಕೆ
ಕಣ್ಣಲ್ಲೇ ಕೇಳಿದರು ಸಮ್ಮತಿಯ ಸಾಲಾಗಿ
ಬೆಕ್ಕಂತೆ ಹಾಲ ಭ್ರಮಿಸಿ ಕಣ್ಮುಚ್ಚಿ ಕೂತಾಗ..

ಕೊಟ್ಟು ಹೋದರು ಪತ್ರ ಕೈಲಿಟ್ಟು ಆಶಯ
ಉತ್ತರಿಸಲಿಲ್ಲ ಏಕೋ ಮುಟ್ಟುಮನ ಅನಿಶ್ಚಯ
ಕುಪ್ಪಸದಲಡಗಿಸಿ ಗುಟ್ಟಲಿ ಕದ್ದು ಓದಿದ ಗಳಿಗೆ
ಮರೆಸಿತ್ತು ನೆರೆಗೂದಲು ಅವತರಿಸಿದ ಕೊರಗ..

ಇಂದೊಬ್ಬಳಾಗಿಹ ಹೊತ್ತು ಸಾಂಗತ್ಯ ಬೇಕಿತ್ತು
ಸಿಕ್ಕದವರೆಲ್ಲರ ಹುಡುಕೊ ಅನಿವಾರ್ಯ ತುರ್ತು
ಉತ್ತರಿಸುತಲಿರುವೆ ಎಲ್ಲರ ಪತ್ರವೊಂದೊಂದಾಗಿ
ಕಳಿಸಲೆಲ್ಲಿಗೆ ಅಂಚೆ ? ಬದಲಾಗಿ ಹೋಗಿ ವಿಳಾಸ..


– ನಾಗೇಶ ಮೈಸೂರು
೧೧.೦೪.೨೦೧೭
(Picture source: Creative Commons)