01214. ಸದ್ದೇ ಇಲ್ಲದ ಹರಟೆ..


01214. ಸದ್ದೇ ಇಲ್ಲದ ಹರಟೆ..
______________________


ಉಂಟೇನು, ನನ್ನೊಳಗೆ ನಾನು
ಮಾತಾಡಿಕೊಳ್ಳದ ಗಳಿಗೆ ?
ನಿತ್ಯ ಸತ್ಯದ ಹಾಗೆ ಅನವರತ
ಬೇಕಿದ್ದು, ಬೇಡದ್ದು, ಗೊತ್ತಾಗದೆ ಹೋದದ್ದು..

ಒಂದಾದರು ಗಳಿಗೆ ವಿರಾಮ
ಕೊಟ್ಟಿದ್ದನ್ನೇ ಕಾಣೆ ಕೊರಮ
ದಣಿವಿಲ್ಲವೊ ದಣಿವಾಗದವನೊ
ಈ ಕ್ಷಣದಲ್ಲೂ ಅದೆ ಸೂತ್ರ ತಂತ್ರ

ಯಾರೊಡನಾಟವೊ ಮಾತೊ ಕಾಣೆ
ಮರುಳೆನ್ನುತಿದ್ದರು ಹೊರ ಜಗದಲ್ಲಿ
ಆಡುವ ಅರಿವಷ್ಟೆ ಗ್ರಹಿಕೆ ಮೊತ್ತದೆ
ಕೇಳಿಸಿಕೊಳ್ಳುವನಾರೊ ಅಪರಿಚಿತ..

ಕುತೂಹಲಕೊಮ್ಮೊಮ್ಮೆ ಒಗಟಾ
ಬಿಡಿಸಹೊರಟರೆ ನಿಗೂಢ ಹಾದಿ
ಮಾತೊಳಗೊಂದು ಮಾತದರೊಳಗೆ
ಮಾತಿಲ್ಲದೆ ಗದ್ದಲ ಗೊಂದಲ ನೂರು..

ಬಿಟ್ಟು ಹೊರಳಿದೆ ಮತ್ತೆ ಜಗದ
ಬೇಕು ಬೇಡದ ಮಾತಿಗೆ ಕಟ್ಟು ಬಿದ್ದು
ಮತ್ತಾರೊ ಮಾತಾಡಿದಂತಾಗುತಿದೆ ಒಳಗೆ
ನನ್ನೊಡನಾಡಿದ ನನ್ನ ಮಾತೆ ಇರಬೇಕು !


– ನಾಗೇಶ ಮೈಸೂರು
೧೨.೦೪.೨೦೧೭
(Picture source: internet / social media)

01213. ನನ್ನ ಖಾಲಿ ಖೋಲಿ


01213. ನನ್ನ ಖಾಲಿ ಖೋಲಿ
_______________________


ನನ್ನದೆನ್ನುವ ಖೋಲಿ
ಮನಸೆನ್ನುವ ಜೋಕಾಲಿ
ತೂಗುಯ್ಯಾಲೆಯ ಅರಮನೆ
ನೆಲೆ ನಿಲ್ಲದೆ ಜೀಕುತ ತೂಗಾಟ..

ಅಡ್ಡಡ್ಡ ಉದ್ದ ಸುತ್ತ ಸುತ್ತುತ್ತ
ನಿರಾಧಾರ ವಸತಿ ಹಾಕಿ ಜೋಲಿ
ತಲೆಕೆಳಗೋ ಹೇಗೇಗೋ ಮಲಗುತ್ತ
ಅಡಿಪಾಯದ ಬುಡವೇ ಮೇಲು ಕೆಳಗೂ..

ಕೊಂಡಾಗಿದೆ ನಿವೇಶನ ಖಾಲಿ
ಬಯಲಲ್ಲಿ ಅವಕಾಶದ ಹರಹು
ಕಾಣದ ನೆಲೆ ಕಟ್ಟಬೇಕು ಕಿಟಕಿ ಗೋಡೆ
ಕಲ್ಲು ಮಣ್ಣಿಲ್ಲದೆ ತಳಪಾಯದ ಹಂಗಿಲ್ಲದೆ .

ಸಿಕ್ಕುತ್ತಿಲ್ಲ ಅಳತೆ ಉದ್ದಗಲ ಎತ್ತರ
ಒಬ್ಬೊಬ್ಬರದೊಂದೊಂದು ತರತರ ವಿನ್ಯಾಸ
ನಿನದೆ ಶಿಲ್ಪಿ ನ್ಯಾಸ ವಿನ್ಯಾಸ ಎಂದರು
ಕಣ್ಣಿಗೆ ಕಟ್ಟಿ ಬಟ್ಟೆ ಕಾಡಲ್ಲಿ ಬಿಟ್ಟು ನಕ್ಕರು !

ಹುಡುಕುತ್ತಿದ್ದೇನೆ ದುಡುಕುತಿದ್ದೇನೆ
ತಡಕುತ್ತಿದ್ದೇನೆ ಹೇಗಿರಬೇಕು ಎಂತು ..
ಸಿಕ್ಕಿಲ್ಲ ಅಂದಾಜು ಕೂಡಿಲ್ಲ ಬಂಡವಾಳ
ಕಾಲ ಕೂಡಿ ಬಂದಾಗ ಇರುವಾ ಖಾತರಿಯಿಲ್ಲ..

– ನಾಗೇಶ ಮೈಸೂರು
೧೪.೦೪.೨೦೧೭
(Picture source: internet / social media)