02016.ಮೆಟ್ಟಿದ ಭೂತ ಬಿಟ್ಟಿತು !


02016.ಮೆಟ್ಟಿದ ಭೂತ ಬಿಟ್ಟಿತು !
____________________________


ಬಿಟ್ಟಿತು ಬಿಟ್ಟು ಹೋಯಿತು
ಮೆಟ್ಟಿದ ಭೂತ ಹೇಳುತಾ ವಿದಾಯ
ಕಾಡಿದ ಏಳರಾಟದ ಕಟ್ಟಳೆಯ ದಾಟಿ
ಕತ್ತಲಿನಿಂದ ಬೆಳಕಿನ ದೀಪ ಹಚ್ಚುವ ಹೊತ್ತು..

ಇರಬಹುದೇನು ಇದುವೇ
ಕೊಳವೆಯ ಕೊನೆ ಬೆಳಕಿನ ತುದಿ ?
ಕಂಡಂತಿತ್ತು ಕಾಣದೆ ಆಡಿಸುತ್ತಿತ್ತಲ್ಲ ಆಟ
ಕಾಡಿಸಿ ಕೊಟ್ಟ ಕಾಟದ ಕೊನೆಯಾಟವೇ ಇಂದು ?

ಅಚ್ಚರಿಯಾಗಿ ಅದ್ಭುತ ದೀಪ
ಅಲ್ಲಾದೀನನ ಮಾಂತ್ರಿಕ ಜಾದೂ
ಬಿಡಿಸೆಲ್ಲಾ ತರ ಒಗಟಿಗೊಂದು ಮಂಗಳ
ಹಾಡಲೆಂದೇನೋ ಬಂದತಿದೆಯಲ್ಲಾ ತಿಂಗಳ !?

ಮೆಟ್ಟಿ ಹಿಡಿದಿತ್ತು ಮೆಟರೆ
ಉಸಿರು ಕಟ್ಟಿಸಿ ಒಳ ಪೊಟರೆ
ಮುಟ್ಟಿದ್ದೆಲ್ಲ ಮಣ್ಣ ಬಣ್ಣವ ಮೆಟ್ಟಿತ್ತಲ್ಲಾ
ಮಣ್ಣು ಚಿನ್ನವಾಗುವ ಹೊತ್ತಿನ ಕಾಲ ಬಂತೇನು ?

ಬಿಟ್ಟಿತೊ ಬಿಡಲಿಲ್ಲವೊ ಬದುಕು
ಬಿಡುವುದಿಲ್ಲಾ ಬಾಡಿಸೊ ಸಂಘರ್ಷ
ಕೆಸರೆಲ್ಲರಳಿದ ಕಮಲಾ ಸೊಗವದರಿಂದೆ
ಪಠಿಸಿರೆ ಬಿಟ್ಟೇಬಿಟ್ಟಿತು ಬಿಡದಿದ್ದೀತೆ ಮುಂದೊಮ್ಮೆ..!

– ನಾಗೇಶ ಮೈಸೂರು
೧೫.೦೪.೨೦೧೭

02015. ಯಾರದೋ ಕನವರಿಕೆಗಳು…..


02015. ಯಾರದೋ ಕನವರಿಕೆಗಳು…..
_________________________________


ತುಪಾಕಿ
ಮಾತವಳದು ಭರ್ಜಿ
ನಿಸ್ತಂತು ಇರಿತ
ಕಾಣದ ದೇವರಿಗರ್ಜಿ..

ಕಟಕಿ
ಮಾತಲೆ ಕೊಲೆ ನಿತ್ಯ
ಕಮರಿ ಅಂತಃಸತ್ವ
ಮನ ರೋಧನ ಮುದುರಿ

ನಿರ್ಲಕ್ಷ್ಯ
ತುಚ್ಚ ಕಾಣುವ ಕಿಚ್ಚ
ಭುಗಿಲೆಬ್ಬಿಸೊ ಕೊಂಕು
ನುಡಿಯಲ್ಲೆ ಮಾಡು ಮಡಿ..

ಸಿಡಿಲು
ಮಾತಿನ ಮಡಿಲು
ಎತ್ತಾಡುತ ಇತಿಹಾಸ
ವರ್ತಮಾನ ನೀರಸ ಗೋಳು..

ನಿದಿರೆ
ಬಾರದ ಹಗಲಿರುಳು
ಬಂದರೂ ಅಲರ್ಜಿ
ಹಿಡಿದು ಏಕಾಂಗಿತನದ ಮರ್ಜಿ..

– ನಾಗೇಶ ಮೈಸೂರು
೧೫.೦೪.೨೦೧೭
(Picture source: Creative Commons)