02024. ಸೋಲಿನ ಹೂರಣ ಚಾರಣ..


02024. ಸೋಲಿನ ಹೂರಣ ಚಾರಣ..
____________________________


ಸೋಲಿನ ಕೋಲು ಮಾರುದ್ದ
ಬಡಿದದ್ದೇ ಬಡಿದದ್ದು ಸತತ
ಬಿತ್ತಲ್ಲ ಲತ್ತೆ ಬಿದ್ದಲ್ಲಿಗೆ ಮತ್ತೆ ಮತ್ತೆ
ಮುದುರೊರಗುವುದೋ? ಪುಟಿದೇಳುವುದೋ ?
ಚಿಂತನೆಗೂ ಬಿಡದೆ ಚೆಂಡಾಟ..!

ಮೊದಮೊದಲು ಬಿದ್ದಾಗ ಸರಿ
ಗರ್ವದ ಹುರಿಮೀಸೆ ತೀಡಿದ್ದು
ನೋಡೀಗ ಪಟ್ಟನು ತೋರಿಸುವೆ ಗೆದ್ದು ;
ಪೆಟ್ಟೇ ಮುಟ್ಟಿ ನೋಡಿಕೊಳ್ಳುವ ಹಾಗೆ ಕೊಟ್ಟಾಗ
ಗೆಲಿಸಿದ್ದು ಕದನೋತ್ಸಾಹ, ಸೋಲೇ ಕಂಗಾಲು !

ರಣೋತ್ಸಾಹ ಉನ್ಮಾದದ ಕೇಕೆ
ಬೆತ್ತಕೆ ಬೆನ್ನಾಗುತ ನಡೆದ ಹುಮ್ಮಸು
ಬೆಟ್ಟವೇರುತ ಹೊತ್ತ ಕಲ್ಲು ಒಂದೊಂದು
ಬಂಡೆಯಾಗುವ ಎತ್ತರ ಏದುಸಿರಾಗೋ ಬಿರುಸು
ಪೆಟ್ಟಿಗೊಂದಿಷ್ಟು ಕುಸಿಯುತ್ತಿದ್ದದ್ದು ಬೆವರೊರೆಸುತ್ತ..

ಬಾರಿಸೋ ಬಡಿಗೆಯ ಅದೇ ಲಯ
ಮೆತ್ತನೆ ಪೆಟ್ಟಿಗೂ ಯಾಕೋ ಉಬ್ಬಸ
ತಡೆಯಲಾಗದು ಸಹನೆ ಹಿಡಿಯಲಾಗದು
ಬೆಟ್ಟದ ಬುಡದ ಜಲ್ಲಿಕಲ್ಲೂ ಗುಡ್ಡಾ, ಶಿಖರ ;
ಆದದ್ದಾಗಲಿ ಬಿಡು, ಸೋತು ಕೈ ಚೆಲ್ಲಿದ ಯೋಧ..

ಬಿಡುವೆನೆ ಕಸುವಿಲ್ಲವೆಂದ ಮಾತ್ರಕೆ ?
ಉಸಿರಿರುವವರೆಗೆ ಹೋರಾಡುವ ಬದುಕಾಟ.
ಬೆತ್ತಕಡ್ಡ ಬೆತ್ತಗಳನಾಗಿಸಿ ಕತ್ತಿ, ಗುರಾಣಿ
ಬೆತ್ತದಲೇ ಬೆಟ್ಟಕೊಂದು ಸುರಂಗ ಕೊರೆಯುತ
ಕಾಯುತಿರುವೆ ಸುರಂಗದಾ ತುದಿಯ ಬೆಳಕಿಗೆ…


– ನಾಗೇಶ ಮೈಸೂರು
೩೦.೦೪.೨೦೧೭
(Picture source : internet / social media, Creative Commons)