02029. ನಾಕುತಂತಿಯೊಂದು ಸಾಲು…


02029. ನಾಕುತಂತಿಯೊಂದು ಸಾಲು…
_____________________________

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)


ಮೊದಲ ಸಾಲು: ಆವು ಈವಿನ ನಾವು ನೀವಿಗೆ ಆನು ತಾನಾದ ತನ ನನಾs

___________________________________________________________

ಆವು – ಆಕಳು, ಹಸು, ದೇವತೆ, ಮಾತೆಯೆನ್ನುವ ಅರ್ಥ, ದೇವರ ಪ್ರತಿನಿಧಿ
ಈವಿನ – ಈಯುವ , ಈದ ಪ್ರಕ್ರಿಯೆ (ಪ್ರಸವ)
ನಾವು , ನೀವಿಗೆ – ಹುಟ್ಟಿಬಂದ ನಾವು, ನೀವು ಇಬ್ಬರಿಗೂ
ಆನು – ಅವನು (ದೇವರು) , ಆತನು, ಅವನು
ತಾನಾದ – ತಾನೇ ನಾವಾದ (ಪ್ರತಿ ಜೀವಿಯಲ್ಲಿರುವ ಪರಬ್ರಹ್ಮ ಎನ್ನುವಂತೆ)
ತನ = ಅವನೇ ನಾವಾದ ತನ (ತಾದಾತ್ಮ್ಯ ಭಾವ, ಅದ್ವೈತ ಭಾವ)
ತನನ- ಸಂತಸ, ಪರಮಾನಂದ
ನಾs – ನಾನು
____________________________________________________________

ನನ್ನ ಟಿಪ್ಪಣಿ : (ಆವು ಈವಿನ ನಾವು ನೀವಿಗೆ ಆನು ತಾನಾದ ತನ ನನಾs)

ಆಕಳು ನಮಗೆ ಮಾತೃ ಸ್ವರೂಪಿ. ಕಾಮಧೇನು ಆಕಳೊಳಗೆ ೩೩ ಕೋಟಿ ದೇವತೆಗಳ ವಾಸ ಎನ್ನುವಷ್ಟು ಮಹತ್ವದ ಸ್ಥಾನ ಕೊಟ್ಟಿದ್ದೇವೆ. ಆ ಗೋಮಾತೆ ಹೆತ್ತ ಕರುವಿಗೆ ಹಾಲೂಡಿಸಿ, ಲಾಲನೆ, ಪೋಷಣೆ ಮಾಡುತ್ತಾ ಮಾತೃತ್ವದ ಮಹಿಮೆಯನ್ನು ಎತ್ತಿ ತೋರಿಸುತ್ತದೆ. ಅದರಂತೆಯೇ ನಮ್ಮನ್ನು ಹೆತ್ತು, ಹೊತ್ತು, ಪೊರೆವ ತಾಯಿಯು ಅದರಷ್ಟೇ ಪೂಜನೀಯಳು. ಇಲ್ಲಿ ತಾಯಿಯನ್ನೇ ಆವು (ಹಸು) ಎಂದು ಸಂಬೋಧಿಸಲಾಗಿದೆ – ತನ್ಮೂಲಕ ಅವಳಿಗೂ ಕಾಮಧೇನುವಿನ , ಗೋವಿನ ದೈವತ್ವವನ್ನು ಆರೋಪಿಸಲಾಗಿದೆ ಎನ್ನುವುದು ನನ್ನ ಗ್ರಹಿಕೆ. ಆ ಕಾಮಧೇನಿವಿನಂತಹ ಮಾತೆ ಹೆತ್ತ ನಾವು, ನೀವುಗಳೆಲ್ಲರೂ ಒಂದೇ, ಯಾರು ಬೇರೆಬೇರೆಯಲ್ಲ.. ಯಾಕೆಂದರೆ , ಹೀಗೆ ಜನಿಸಿದ ‘ನಾವು, ನೀವಿಗೆ’ ಆತನು (ಆನು, ಅವನು) ತನ್ನತನವನ್ನು ಬೆರೆಸಿಬಿಟ್ಟಿದ್ದಾನೆ ಆತ್ಮದ ರೂಪದಲ್ಲಿ (ಪ್ರತಿಯೊಬ್ಬರಲ್ಲಿಯೂ ಇರುವ ಆ ಪರಮಾತ್ಮ ಒಂದೇ ಎನ್ನುವ ಮಾತಿಗೆ ಹೋಲಿಸಿ ನೋಡಿ). ಆ ತಾದಾತ್ಮ್ಯದಲ್ಲಿನ ಅದ್ವೈತ ಭಾವದಲ್ಲೆ ಪರಮಾನಂದ, ಪರಮ ಸಂತಸ ಅಡಗಿದೆಯೆನ್ನುವುದನ್ನು ‘ತನನ’ ವ್ಯಕ್ತಪಡಿಸುತ್ತದೆ. ಕೊನೆಯ – ‘ನಾs’ ಅಕ್ಷರ ಕೂಡ ಇಲ್ಲಿ ಮಹತ್ವದ್ದು ; ಆ ಪರಮಾನಂದವೇ ನಾ (ನಾನು) . ನಾನೇ ಅವನಾದ ಮೇಲೆ , ಅವನೇ ನಾನಾದಂತೆ.. ಆಗ ಅವನ ಪರಮಾನಂದಕ್ಕೆ ನಾನು ಭಾಗಿಯಾಗಬಲ್ಲವನ್ನು, ಅರ್ಹನು ಎಂಬರ್ಥದಲ್ಲಿ ನೋಡಬಹುದು.

ಸೃಷ್ಟಿಯೆನ್ನುವುದು ಅವನ ಕ್ರಿಯೆ. ಅದನ್ನು ಪ್ರಕೃತಿ ಸಹಜವಾಗಿ ತಂತಾನೇ ನಿಭಾಯಿಸಿಕೊಳ್ಳುವ ಪ್ರಕ್ರಿಯೆಯಾಗಿಸಿ ಗೋವಿನಷ್ಟೇ ಪವಿತ್ರಳಾದ ಮಾತೃ ಸ್ವರೂಪಿಣಿಯಲ್ಲಿ ಪ್ರಸವಿಸುವ ‘ನಾವು, ನೀವುಗಳ’ ಮೂಲಕ ಅವನು ತನ್ನ ಸ್ವರೂಪವನ್ನು ಪ್ರಕಟಿಸಿಕೊಳ್ಳುತ್ತಾನೆ. ಹೀಗೆ ಜನಿಸಿದ ‘ನಾವು, ನೀವುಗಳು’ ಕೂಡ ಆ ಸೃಷ್ಟಿಯ ಸರಪಣಿ ಕ್ರಿಯೆಯ ಕೊಂಡಿಯಾಗಿ ಮುಂದಿನ ಪೀಳಿಗೆಯ ಕಾರಣ ಜನ್ಮರಾಗುತ್ತೇವೆ. ಹೀಗೆ ನಿರಂತರವಾಗಿ ಹರಿವ ಸಂತಸ, ಪರಮಾನಂದ, ಆನಂದ ಲಹರಿಯ ನಿರಂತರ ಪ್ರವಹಿಸುವಿಕೆಗೆ ಕಾರಣವಾಗುತ್ತದೆ. ಇದನ್ನೇ ತುಸು ವಿಸ್ತರಿಸಿ ನೋಡಿದರೆ, ಇಡೀ ಜಗದೆಲ್ಲಾ ಚರಾಚರ ಸೃಷ್ಟಿಯದು ಇದೆ ಮೂಲಭೂತ ಪ್ರಕ್ರಿಯೆಯ ಫಲಿತವೆನ್ನಬಹುದು. ಒಟ್ಟಾರೆ ಸೃಷ್ಟಿಯ ಕುರಿತಾದ ಬೃಹತ್ ನೋಟವನ್ನು ಹೀಗೆ ಸರಳ, ಸುಲಲಿತ ಯಂತ್ರದ ಹಾಗೆ ನಿಭಾಯಿಸುತ್ತಿರುವುದು ಒಟ್ಟಾರೆ ನಾಲ್ಕೇ ತಂತುಗಳು ಮಾತ್ರ – ಜನ್ಮವೀಯುವ ಮಾತೃ ಸ್ವರೂಪ (ಮೂಲ ತಂತು) , ನಾವು ನೀವೆನ್ನುವ ಎರಡು ಫಲಿತ ತಂತು, ಅವನ್ನೆಲ್ಲ ಒಂದು ಸೂತ್ರದಿ ಬಂಧಿಸಿಟ್ಟ ಅವನೆಂಬ ಅದೃಶ್ಯ ಕಾರಣತಂತುಗಳು.

‘ನಾನು ನೀನು’ ಎಂಬುದು ಪುರುಷದ ಮತ್ತು ಪ್ರಕೃತಿಯ (ಸ್ವಾರ್ಥ, ನಿಸ್ವಾರ್ಥ) ಸಂಕೇತವಾದರೆ ಅವೆರಡರ ಗುಣಿತದ ಫಲಿತವಾಗಿ ಬರುವ ಸೃಷ್ಟಿ ಮತ್ತದರ ಮೂಲಕಾರಣಕರ್ತರು ‘ಆನು ತಾನು’ ಆಗುತ್ತಾರೆ. ಇಡೀ ಜಗವೆ ಈ ನಾಲ್ಕು ತಂತುಗಳ ಸಮಷ್ಟಿತ ಅಥ ವಿಸ್ತೃತ ಭಾವದ ಫಲಶ್ರುತಿ. ಇಲ್ಲಿ ನಾನು ನೀನು – ಗಳಲ್ಲಿ ಯಾವುದು ಬೇಕಾದರೂ ಪುರುಷವಾಗಬಹುದು, ಮತ್ತೊಂದು ಪ್ರಕೃತಿಯಾಗುತ್ತ. ಹಾಗೆಯೇ ಆನು ಎಂಬುದನ್ನು ಇವೆರಡರ ಮಿಲನದ ಫಲಿತ ಸೃಷ್ಟಿ ಎಂದೂ ಭಾವಿಸಬಹುದು ಅಥವಾ ಮೂಲಕರ್ತ (ಆನು = ಅವನು) ಎಂದು ಅನುಭಾವಿಸಬಹುದು. ಅದೇ ರೀತಿ ತಾನು ಎಂದಾಗ ಪ್ರಕೃತಿ ಪುರುಷದ ಫಲಿತಸೃಷ್ಟಿ ಎಂದೂ ನೋಡಬಹುದು, ಆ ಸೃಷ್ಟಿಯಲ್ಲೂ ಅಂತರ್ಗತನಾದ ‘ಅವನು’ ಎಂದೂ ಭಾವಿಸಬಹುದು. ಒಟ್ಟಾರೆ ಇದು ನಾಲ್ಕು ತಂತಿಗಳ ತಾಳಮೇಳ ಎಂಬುದಷ್ಟೇ ಇಲ್ಲಿನ ಮೂಲಸಾರ.

– ನಾಗೇಶ ಮೈಸೂರು
೦೧.೦೫.೨೦೧೭
(Picture source: Wikipedia)

Advertisements

02028. ರಾಮಾನುಜ ಸಹಸ್ರಮಾನದ ನೆನಪಿಗೆ (೧೦೧೭)


02028. ರಾಮಾನುಜ ಸಹಸ್ರಮಾನದ ನೆನಪಿಗೆ (೧೦೧೭)
__________________________________

(೦೧)
ವಿಶಿಷ್ಠಾದ್ವೈತ
ರಾಮಾನುಜ ವೇದಾಂತ
ಸಹಸ್ರಮಾನ

(೦೨)
ಗೀತಾ ಭಾಷ್ಯಮ್
ವೇದಾರ್ಥ ಸಂಗ್ರಹಮ್
ಶ್ರೀ ಭಾಷ್ಯಂ ಜತೆ

(೦೩)
ಭಕ್ತಿ ಪ್ರೇರಣೆ
ಮೋಕ್ಷ ಸಾಧನೆ ಹಾದಿ
ವಿಷ್ಣು ಸ್ಮರಣೆ

(೦೪)
ಜೀವಾತ್ಮ ಬ್ರಹ್ಮ
ಒಂದಲ್ಲ ಬೇರೆ ಬೇರೆ
ಏಕತೆ ಸಾಧು

(೦೫)
ವೇದಾರ್ಥ ಸಾರ
ಸಂಗ್ರಹ ಸಂಸ್ಕೃತದೆ
ರಾಮಾನುಜತೆ

(೦೬)
ಶ್ರೀ ಭಾಷ್ಯ ವ್ಯಾಖ್ಯೆ
ಬ್ರಹ್ಮ ಸೂತ್ರ ವಿಮರ್ಶೆ
ಸಂಸ್ಕೃತ ಜ್ಞಾನ

(೦೭)
ಪೂರ್ಣ ವೇದಾಂತ
ವಿವರಿಸಲಶಕ್ಯ
ದ್ವೈತಾದ್ವೈತದೆ

(೦೮)
ತತ್ ತ್ವಂ ಅಸಿ
ಮೂಲೋಪನಿಷದ್ಮಾತ್ರ
ಅದ್ವೈತ ಮಿತಿ

(೦೯)
ವಿವರಿಸಲು
ಸರ್ವ ವೇದಾಂತ ತರ್ಕ
ವಿಶಿಷ್ಠಾದ್ವೈತ

(೧೦)
ದ್ವೈತ ಅದ್ವೈತ
ವೇದಾಂತದೆ ವಿಹಿತ
ಎರಡೂ ಸತ್ಯ

– ನಾಗೇಶ ಮೈಸೂರು
೦೧.೦೫.೨೦೧೭

02027. ಶಂಕರ..


02027. ಶಂಕರ..
________________

(೦೧)
ಆದಿ ಶಂಕರ
ಹಿಡಿದಿತ್ತು ಮಕರ
ಬಿಟ್ಟ ಸಂಸಾರ

(೦೨)
ಮಂಡನ ಮಿತ್ರ
ವಿದ್ವತ್ವಾಗ್ವಾದ ಶುದ್ಧ
ಗುರು ಶಂಕರ

(೦೩)
ಶಂಕರಾಚಾರ್ಯ
ಕಾಲಿಗೆ ಕಟ್ಟಿ ಚಕ್ರ
ತತ್ತ್ವ ಪ್ರಚಾರ

(೦೪)
ಬ್ರಹ್ಮಚಾರಿಯ
ಸೌಂದರ್ಯ ಲಹರಿಗೆ
ಮಾತೆ ತನ್ಮಯ

(೦೫)
ಬಾಲ ಶಂಕರ
ಕುಡಿ ಮೊಳಕೆಯಲ್ಲೆ
ತೋರಿ ಪ್ರಖರ

(೦೬)
ದ್ವೈತ ಅದ್ವೈತ
ಅನುಮಾನದ ಚಿತ್ತ
ಪರಿಹರಣೆ

(೦೭)
ಅಹಂ ಬ್ರಹ್ಮಾಸ್ಮಿ
ಬ್ರಹ್ಮವಾಯಿತು ಕಾಯ
ಜೀವ ನಿಲಯ

(೦೮)
ಶೃಂಗೇರಿ ಪೀಠ
ವೇದಘೋಷ ನಿಕಟ
ಸ್ತುತಿ ಶಾರದೆ

(೦೯)
ಮುಕುಟ ಮಣಿ
ಧರ್ಮಸೆರೆ ಬಿಡಿಸೆ
ಅವತರಿಸಿ

(೧೦)
ಮಾತೆಯ ಸ್ತುತಿ
ಅಯಗಿರಿ ನಂದಿನಿ
ಕೈ ಬಿಡಲಿಲ್ಲ

– ನಾಗೇಶ ಮೈಸೂರು
೩೦.೦೪.೨೦೧೭

02026. ವಚನದಲಿ…


02026. ವಚನದಲಿ…
___________________

(೦೧)
ಬಸವೇಶ್ವರ
ವಚನ ಸಾರಾಮೃತ
ಬದುಕೇ ವರ

(೦೨)
ವಚನ ಘನ
ಕೂಡಲ ಸಂಗಮನ
ಆಶೀರ್ವಚನ

(೦೩)
ಬಸವ ನುಡಿ
ಕಳ ಕೊಲ ಬೇಡೆಂದ
ಹುಸಿಯಾಗದು

(೦೪)
ಬಸವ ಕೊಟ್ಟ
ಅನುಭವ ಮಂಟಪ
ಧಾರೆಯೆರೆದು

(೦೫)
ಶರಣ ಮೇಳ
ಹಂಚಿಕೊಂಡ ಹವಳ
ವಚನಾಮೃತ

(೦೬)
ಸತ್ಯ ವಚನ
ಕಾಯಕವೇ ಕೈಲಾಸ
ನಿತ್ಯ ವಾಚನ

(೦೭)
ಒಡಲ ಉರಿ
ತನ್ನ ಸುಡುವ ಪರಿ
ಪರರ ಸುಡ

(೦೮)
ಕುಲವೆಲ್ಲಿತ್ತು
ವಚನಕಾರರಲ್ಲಿ
ವೃತ್ತಿ ಕಾಯಕ

(೦೯)
ವಚನ ಕಟ್ಟಿ
ಮನುಜ ಮನ ಮುಟ್ಟಿ
ಮಾಡಿದ ಕ್ರಾಂತಿ

(೧೦)
ಮಡಿ ಮೈಲಿಗೆ
ಕಟ್ಟಿಕೊಂಡ ಜೋಳಿಗೆ
ನುಡಿ ವಚನ

(ನಾಗೇಶ ಮೈಸೂರು)
೨೯.೦೪.೨೦೧೭

02025. ಮಂಕುತಿಮ್ಮನ ಕಗ್ಗ ೫೭ರ ಟಿಪ್ಪಣಿ – ಸುತ್ತಮುತ್ತಲ ಸಕಲ, ಅಂತರಂಗದಿ ಕಟ್ಟುವ ಜಾಲ ! – ರೀಡೂ ಕನ್ನಡದಲ್ಲಿ..


02025. ಮಂಕುತಿಮ್ಮನ ಕಗ್ಗ ೫೭ರ ಟಿಪ್ಪಣಿ – ಸುತ್ತಮುತ್ತಲ ಸಕಲ, ಅಂತರಂಗದಿ ಕಟ್ಟುವ ಜಾಲ ! – ರೀಡೂ ಕನ್ನಡದಲ್ಲಿ..