02029. ನಾಕುತಂತಿಯೊಂದು ಸಾಲು…


02029. ನಾಕುತಂತಿಯೊಂದು ಸಾಲು…
_____________________________

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)


ಮೊದಲ ಸಾಲು: ಆವು ಈವಿನ ನಾವು ನೀವಿಗೆ ಆನು ತಾನಾದ ತನ ನನಾs

___________________________________________________________

ಆವು – ಆಕಳು, ಹಸು, ದೇವತೆ, ಮಾತೆಯೆನ್ನುವ ಅರ್ಥ, ದೇವರ ಪ್ರತಿನಿಧಿ
ಈವಿನ – ಈಯುವ , ಈದ ಪ್ರಕ್ರಿಯೆ (ಪ್ರಸವ)
ನಾವು , ನೀವಿಗೆ – ಹುಟ್ಟಿಬಂದ ನಾವು, ನೀವು ಇಬ್ಬರಿಗೂ
ಆನು – ಅವನು (ದೇವರು) , ಆತನು, ಅವನು
ತಾನಾದ – ತಾನೇ ನಾವಾದ (ಪ್ರತಿ ಜೀವಿಯಲ್ಲಿರುವ ಪರಬ್ರಹ್ಮ ಎನ್ನುವಂತೆ)
ತನ = ಅವನೇ ನಾವಾದ ತನ (ತಾದಾತ್ಮ್ಯ ಭಾವ, ಅದ್ವೈತ ಭಾವ)
ತನನ- ಸಂತಸ, ಪರಮಾನಂದ
ನಾs – ನಾನು
____________________________________________________________

ನನ್ನ ಟಿಪ್ಪಣಿ : (ಆವು ಈವಿನ ನಾವು ನೀವಿಗೆ ಆನು ತಾನಾದ ತನ ನನಾs)

ಆಕಳು ನಮಗೆ ಮಾತೃ ಸ್ವರೂಪಿ. ಕಾಮಧೇನು ಆಕಳೊಳಗೆ ೩೩ ಕೋಟಿ ದೇವತೆಗಳ ವಾಸ ಎನ್ನುವಷ್ಟು ಮಹತ್ವದ ಸ್ಥಾನ ಕೊಟ್ಟಿದ್ದೇವೆ. ಆ ಗೋಮಾತೆ ಹೆತ್ತ ಕರುವಿಗೆ ಹಾಲೂಡಿಸಿ, ಲಾಲನೆ, ಪೋಷಣೆ ಮಾಡುತ್ತಾ ಮಾತೃತ್ವದ ಮಹಿಮೆಯನ್ನು ಎತ್ತಿ ತೋರಿಸುತ್ತದೆ. ಅದರಂತೆಯೇ ನಮ್ಮನ್ನು ಹೆತ್ತು, ಹೊತ್ತು, ಪೊರೆವ ತಾಯಿಯು ಅದರಷ್ಟೇ ಪೂಜನೀಯಳು. ಇಲ್ಲಿ ತಾಯಿಯನ್ನೇ ಆವು (ಹಸು) ಎಂದು ಸಂಬೋಧಿಸಲಾಗಿದೆ – ತನ್ಮೂಲಕ ಅವಳಿಗೂ ಕಾಮಧೇನುವಿನ , ಗೋವಿನ ದೈವತ್ವವನ್ನು ಆರೋಪಿಸಲಾಗಿದೆ ಎನ್ನುವುದು ನನ್ನ ಗ್ರಹಿಕೆ. ಆ ಕಾಮಧೇನಿವಿನಂತಹ ಮಾತೆ ಹೆತ್ತ ನಾವು, ನೀವುಗಳೆಲ್ಲರೂ ಒಂದೇ, ಯಾರು ಬೇರೆಬೇರೆಯಲ್ಲ.. ಯಾಕೆಂದರೆ , ಹೀಗೆ ಜನಿಸಿದ ‘ನಾವು, ನೀವಿಗೆ’ ಆತನು (ಆನು, ಅವನು) ತನ್ನತನವನ್ನು ಬೆರೆಸಿಬಿಟ್ಟಿದ್ದಾನೆ ಆತ್ಮದ ರೂಪದಲ್ಲಿ (ಪ್ರತಿಯೊಬ್ಬರಲ್ಲಿಯೂ ಇರುವ ಆ ಪರಮಾತ್ಮ ಒಂದೇ ಎನ್ನುವ ಮಾತಿಗೆ ಹೋಲಿಸಿ ನೋಡಿ). ಆ ತಾದಾತ್ಮ್ಯದಲ್ಲಿನ ಅದ್ವೈತ ಭಾವದಲ್ಲೆ ಪರಮಾನಂದ, ಪರಮ ಸಂತಸ ಅಡಗಿದೆಯೆನ್ನುವುದನ್ನು ‘ತನನ’ ವ್ಯಕ್ತಪಡಿಸುತ್ತದೆ. ಕೊನೆಯ – ‘ನಾs’ ಅಕ್ಷರ ಕೂಡ ಇಲ್ಲಿ ಮಹತ್ವದ್ದು ; ಆ ಪರಮಾನಂದವೇ ನಾ (ನಾನು) . ನಾನೇ ಅವನಾದ ಮೇಲೆ , ಅವನೇ ನಾನಾದಂತೆ.. ಆಗ ಅವನ ಪರಮಾನಂದಕ್ಕೆ ನಾನು ಭಾಗಿಯಾಗಬಲ್ಲವನ್ನು, ಅರ್ಹನು ಎಂಬರ್ಥದಲ್ಲಿ ನೋಡಬಹುದು.

ಸೃಷ್ಟಿಯೆನ್ನುವುದು ಅವನ ಕ್ರಿಯೆ. ಅದನ್ನು ಪ್ರಕೃತಿ ಸಹಜವಾಗಿ ತಂತಾನೇ ನಿಭಾಯಿಸಿಕೊಳ್ಳುವ ಪ್ರಕ್ರಿಯೆಯಾಗಿಸಿ ಗೋವಿನಷ್ಟೇ ಪವಿತ್ರಳಾದ ಮಾತೃ ಸ್ವರೂಪಿಣಿಯಲ್ಲಿ ಪ್ರಸವಿಸುವ ‘ನಾವು, ನೀವುಗಳ’ ಮೂಲಕ ಅವನು ತನ್ನ ಸ್ವರೂಪವನ್ನು ಪ್ರಕಟಿಸಿಕೊಳ್ಳುತ್ತಾನೆ. ಹೀಗೆ ಜನಿಸಿದ ‘ನಾವು, ನೀವುಗಳು’ ಕೂಡ ಆ ಸೃಷ್ಟಿಯ ಸರಪಣಿ ಕ್ರಿಯೆಯ ಕೊಂಡಿಯಾಗಿ ಮುಂದಿನ ಪೀಳಿಗೆಯ ಕಾರಣ ಜನ್ಮರಾಗುತ್ತೇವೆ. ಹೀಗೆ ನಿರಂತರವಾಗಿ ಹರಿವ ಸಂತಸ, ಪರಮಾನಂದ, ಆನಂದ ಲಹರಿಯ ನಿರಂತರ ಪ್ರವಹಿಸುವಿಕೆಗೆ ಕಾರಣವಾಗುತ್ತದೆ. ಇದನ್ನೇ ತುಸು ವಿಸ್ತರಿಸಿ ನೋಡಿದರೆ, ಇಡೀ ಜಗದೆಲ್ಲಾ ಚರಾಚರ ಸೃಷ್ಟಿಯದು ಇದೆ ಮೂಲಭೂತ ಪ್ರಕ್ರಿಯೆಯ ಫಲಿತವೆನ್ನಬಹುದು. ಒಟ್ಟಾರೆ ಸೃಷ್ಟಿಯ ಕುರಿತಾದ ಬೃಹತ್ ನೋಟವನ್ನು ಹೀಗೆ ಸರಳ, ಸುಲಲಿತ ಯಂತ್ರದ ಹಾಗೆ ನಿಭಾಯಿಸುತ್ತಿರುವುದು ಒಟ್ಟಾರೆ ನಾಲ್ಕೇ ತಂತುಗಳು ಮಾತ್ರ – ಜನ್ಮವೀಯುವ ಮಾತೃ ಸ್ವರೂಪ (ಮೂಲ ತಂತು) , ನಾವು ನೀವೆನ್ನುವ ಎರಡು ಫಲಿತ ತಂತು, ಅವನ್ನೆಲ್ಲ ಒಂದು ಸೂತ್ರದಿ ಬಂಧಿಸಿಟ್ಟ ಅವನೆಂಬ ಅದೃಶ್ಯ ಕಾರಣತಂತುಗಳು.

‘ನಾನು ನೀನು’ ಎಂಬುದು ಪುರುಷದ ಮತ್ತು ಪ್ರಕೃತಿಯ (ಸ್ವಾರ್ಥ, ನಿಸ್ವಾರ್ಥ) ಸಂಕೇತವಾದರೆ ಅವೆರಡರ ಗುಣಿತದ ಫಲಿತವಾಗಿ ಬರುವ ಸೃಷ್ಟಿ ಮತ್ತದರ ಮೂಲಕಾರಣಕರ್ತರು ‘ಆನು ತಾನು’ ಆಗುತ್ತಾರೆ. ಇಡೀ ಜಗವೆ ಈ ನಾಲ್ಕು ತಂತುಗಳ ಸಮಷ್ಟಿತ ಅಥ ವಿಸ್ತೃತ ಭಾವದ ಫಲಶ್ರುತಿ. ಇಲ್ಲಿ ನಾನು ನೀನು – ಗಳಲ್ಲಿ ಯಾವುದು ಬೇಕಾದರೂ ಪುರುಷವಾಗಬಹುದು, ಮತ್ತೊಂದು ಪ್ರಕೃತಿಯಾಗುತ್ತ. ಹಾಗೆಯೇ ಆನು ಎಂಬುದನ್ನು ಇವೆರಡರ ಮಿಲನದ ಫಲಿತ ಸೃಷ್ಟಿ ಎಂದೂ ಭಾವಿಸಬಹುದು ಅಥವಾ ಮೂಲಕರ್ತ (ಆನು = ಅವನು) ಎಂದು ಅನುಭಾವಿಸಬಹುದು. ಅದೇ ರೀತಿ ತಾನು ಎಂದಾಗ ಪ್ರಕೃತಿ ಪುರುಷದ ಫಲಿತಸೃಷ್ಟಿ ಎಂದೂ ನೋಡಬಹುದು, ಆ ಸೃಷ್ಟಿಯಲ್ಲೂ ಅಂತರ್ಗತನಾದ ‘ಅವನು’ ಎಂದೂ ಭಾವಿಸಬಹುದು. ಒಟ್ಟಾರೆ ಇದು ನಾಲ್ಕು ತಂತಿಗಳ ತಾಳಮೇಳ ಎಂಬುದಷ್ಟೇ ಇಲ್ಲಿನ ಮೂಲಸಾರ.

– ನಾಗೇಶ ಮೈಸೂರು
೦೧.೦೫.೨೦೧೭
(Picture source: Wikipedia)

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s