02030. ನಾಕುತಂತಿಯೊಂದು ಸಾಲು (2)


02030. ನಾಕುತಂತಿಯೊಂದು ಸಾಲು (2)
__________________________________


ಎರಡನೇ ಸಾಲು: ನಾನು ನೀನಿನ ಈ ನಿನಾನಿಗೆ ಬೇನೆ ಏನೋ? ಜಾಣಿ ನಾs
____________________________________________________________
ನಾನು ನೀನಿನ = ನಮ್ಮಿಬ್ಬರ
ಈ ನಿನಾನಿಗೆ = ಈಯುವಿಕೆಗೆ, ಜನಿಸುವಿಕೆಗೆ, ನೀನು ನಾನು ಎಂದು ಬಡಿದಾಡುವ ಪರಿಗೆ
ಬೇನೆ = ಕಾರಣ, ಒತ್ತಡ
ಜಾಣಿ ನಾs = ಜ್ಞಾನಿ ನಾನು
_____________________________________________________________

ನನ್ನ ಟಿಪ್ಪಣಿ: (ನಾನು ನೀನಿನ ಈ ನಿನಾನಿಗೆ ಬೇನೆ ಏನೋ? ಜಾಣಿ ನಾs)

ಎಲ್ಲಾ ನಾಕುತಂತಿಯ ತಾಳಮೇಳ ಎಂದೇನೋ ಹೇಳಿದ್ದಾಯ್ತು ಮೊದಲ ಸಾಲಲ್ಲಿ. ಈಗ ಆ ನಾಕುತಂತಿಗಳು ಪ್ರಕಟವಾಗುವ ಹೊತ್ತಿನ ಭಾವಾಭಾವ ತಲ್ಲಣೋಲ್ಲಾಸಗಳ ಪ್ರವೃತ್ತಿಯ ಅನಾವರಣ ಮುಂದಿನ ಸಾಲಿನಲ್ಲಿ. ಪ್ರವೃತ್ತಿಯನ್ನು ವಿವರಿಸುತ್ತಲೇ ಪ್ರಶ್ನೆಯನ್ನು ಮುಂದಿಡುವ ಹುನ್ನಾರ ಈ ಸಾಲಿನದು.

‘ನಾನು-ನೀನಿನ’ – ಅಂದರೆ ನಮ್ಮಿಬ್ಬರ (ನಮ್ಮಗಳ) ಈ ಹುಟ್ಟುವಿಕೆ / ಸೃಷ್ಟಿಗೆ (ಈನಿನಾನಿಗೆ) ಮೂಲಕಾರಣವಾದರು (ಮೂಲ ತುಡಿತ) ಏನು ? ಯಾರು ಇದರ ಕರ್ತೃ? ಈ ಪ್ರಸವವೆನ್ನುವುದು ತಾನು ನೋವನ್ನುಂಡು ಜಗಕೆ ಹೊಸಜೀವವನ್ನು ಸೃಜಿಸಿಕೊಡುವ ಸಂಕಟದ ಕಾಯಕ. ಅಂತಿದ್ದರು ಸಹ ಆ ಪ್ರಸವ ವೇದನೆಯನ್ನು ಸಹಿಸಿಕೊಂಡು ಹೊಸಜೀವಕೆ ಜನ್ಮವೀಯಲು , ತನ್ನ ನೆತ್ತರಿನ ಪ್ರತಿರೂಪನ್ನು ಸೃಷ್ಟಿಸಲು ಮನಸಾರೆ ಬಯಸುತ್ತದೆ ಹೆಣ್ಣು ಮನ.ಆ ಬಯಕೆಯ ಮೂರ್ತರೂಪದ ಮೂಲಕ ತನ್ನತನವನ್ನು, ತಾನೆಂಬ ಅಹಮಿಕೆಯ ಪ್ರತಿರೂಪವನ್ನು ಕಾಣಲು ಹವಣಿಸುತ್ತದೆ – ಆ ಸೃಷ್ಟಿಗೆ ಬೀಜರೂಪಿಯಾದ ಪುರುಷ ಪೌರುಷ. ಇದೊಂದು ಬಗೆಯ ನಿರಂತರ ಪ್ರಕ್ರಿಯೆಯಾಗಿ, ಪ್ರತಿ ಗಂಡು-ಹೆಣ್ಣಿನ ಮೂಲಕ ಪುನರಾವರ್ತಿಸುತ್ತ, ಮತ್ತೆಮತ್ತೆ ಅನುರಣಿಸಿಕೊಂಡೇ ಬಂದಿದೆ ಕಾಲಕಾಲದಿಂದಲೂ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ ಕವಿಮನದ ಅಚ್ಚರಿ ಎಣಿಕೆಗೆ ನಿಲುಕದ್ದು. ‘ತೃಣಮಪಿ ನ ಚಲತಿ ತೇನ ವಿನಾ’ ಎನ್ನುವ ನಂಬಿಕೆಗೆ ಬದ್ಧವಾದ ಮನಸಿಗೆ ತಟ್ಟನೆ ಕಾಡುವ ಯೋಚನೆ – ಇಷ್ಟೆಲ್ಲಾ ಅಚ್ಚುಗಟ್ಟಾದ ಸೃಷ್ಟಿಯಡಿಗೆ ಮಾಡಿ ಉಣಬಡಿಸುತ್ತಿರುವ ಕರ್ತೃತ್ವ ಶಕ್ತಿಯಾದರೂ ಯಾವುದು ? ಎಂದು. ತಪ್ಪಿಸಿಕೊಳ್ಳಲಾಗದ ನಿರ್ಬಂಧದಂತೆ ಪ್ರಸವ ವೇದನೆ ಅನುಭವಿಸುತ್ತ ತನ್ನ ಕಾಯಕ ನಡೆಸುತ್ತಿರುವ ಚಾಲಕಶಕ್ತಿಯ ‘ಯಾವ ಅನಿವಾರ್ಯ ಇದಕ್ಕೆ ಕಾರಣವಾಗಿರಬಹುದು ?’ ಎನ್ನುವ ಜಿಜ್ಞಾಸೆ ಕಾಡಿದಾಗ ಉದ್ಭವಿಸುವ ಪ್ರಶ್ನೆಗಳೂ ಪುಂಖಾನುಪುಂಖವೇ.

ಯಾವ ಬೇನೆ (ಅರ್ಥಾತ್ : ಯಾವ ಕಾರಣ, ಯಾವ ಒತ್ತಡ, ಯಾವ ಅನಿವಾರ್ಯತೆ, ಯಾವ ಬದ್ಧತೆ..?) ಇದರ ಹಿಂದಿನ ಶಕ್ತಿಯಾಗಿ ಕೆಲಸ ಮಾಡುತ್ತಿದೆ ? ಏನಿದರ ಉದ್ದೇಶ ? ಯಾವುದಿದರ ಅಂತಿಮ ನೆಲೆ, ಗಮ್ಯ ?’ ಎನ್ನುವ ಕಸಿವಿಸಿಗೆ ಉತ್ತರ ಮಾತ್ರ ಕಾಣುವುದಿಲ್ಲ. ವಿಸ್ಮಯವೆಂದರೆ, ಕವಿಗೂ ಸೇರಿದಂತೆ ಯಾರಿಗೂ ಈ ಅಂಶಗಳ ಸ್ಪಷ್ಟ ಅರಿವಿರುವಂತೆ ಕಾಣುತ್ತಿಲ್ಲ; ಅಷ್ಟಾದರೂ ಆ ಸೃಷ್ಟಿ ಪ್ರಕ್ರಿಯೆ ಮಾತ್ರ, ನಡೆದುಕೊಂಡು ಹೋಗಲೇಬೇಕಾದ ನಿಲ್ಲದ ಚಕ್ರದಂತೆ ನಿರಂತರವಾಗಿ ಸಾಗುತ್ತಿದೆ. ಒಂದು ವೇಳೆ ಈ ಪ್ರಶ್ನೆಗಳಿಗೇನಾದರೂ ಸೂಕ್ತ ಉತ್ತರ ಸಿಕ್ಕಿ, ಉದ್ದೇಶ ಮತ್ತು ಗಮ್ಯಗಳು ಸ್ಪಷ್ಟವಾದರೆ ಕವಿಗೂ (ನಮಗೂ) ಎಲ್ಲ ನಿಚ್ಚಳವಾದೀತು, ನಿರಾಳವಾದೀತು. ಹಾಗೇನಾದರು ಆದಲ್ಲಿ, ಆ ಪರಮ ಪರಿಪೂರ್ಣ ಸತ್ಯ ಗೊತ್ತಿರುವ ಕೆಲವೇ ಕೆಲವು ಬುದ್ಧಿವಂತರಲ್ಲಿ (ಜಾಣರಲ್ಲಿ), ತಾನೂ ಒಬ್ಬನೆಂದು ಹೆಮ್ಮೆಯಿಂದ ಬೀಗಬಹುದು ! ಆದರೆ ವಾಸ್ತವದಲ್ಲಿ ನೋಡಿದರೆ, ಎಲ್ಲರಿಗು ಈ ಗುಟ್ಟು ನಿಗೂಢವೇ; ಎಲ್ಲರು ಪೂರ್ಣಸತ್ಯದ ಅರಿವಿಲ್ಲದ ಗೊಂದಲದಲ್ಲಿ ಸಿಕ್ಕಿಬಿದ್ದವರೆ.

ಇಲ್ಲಿ ಜಾಣಿ ನಾ ಎಂದಾಗ ಹೊರಡುವ ಮತ್ತೊಂದು ಅರ್ಥ ಜ್ಞಾನಿ. ಬಹುಶಃ ಇಂತಹ ಎಷ್ಟೋ ನಿಗೂಢ ಪ್ರಶ್ನೆಗಳಿಗೆ ತಾರ್ಕಿಕ ಉತ್ತರ ಸಿಕ್ಕುವುದು ನಮ್ಮ ಪುರಾತನ ತತ್ವಶಾಸ್ತ್ರಗಳಲ್ಲೋ, ವೇದೋಪನಿಷತ್ತುಗಳ ಗ್ರಹಿಕೆಯಲ್ಲೋ ಏನೋ. ಅವುಗಳ ಅಧ್ಯಯನದಿಂದಲೋ ಅಥವಾ ತಿಳುವಳಿಕೆಯಿಂದಲೋ ಬರುವ ಜ್ಞಾನ ಆ ಅರಿವಿರುವವರನ್ನು ಜಾಣಿಗಳನ್ನಾಗಿಸುತ್ತದೆ, ಜ್ಞಾನಿಗಳನ್ನಾಗಿಸುತ್ತದೆ . ನಾನೊಬ್ಬ ಅಂತಹ ಅದೃಷ್ಟವಂತ, ಜ್ಞಾನಿ ಎಂದು ಹೇಳಿಕೊಂಡಂತಿದೆ ಇಲ್ಲಿನ ಕವಿಭಾವ. ಭಗವದ್ಗೀತೆಯ ಸಾರದಲ್ಲಿ ಹೇಳಿರುವಂತೆ ಎಲ್ಲಾ ಸಮಸ್ಯೆಯ ಮೂಲಕಾರಣ ತಪ್ಪಾದ ಆಲೋಚನೆಗಳು ಮತ್ತು ತಪ್ಪಾದ ತಿಳುವಳಿಕೆಗಳು (ಅಜ್ಞಾನ ಎಂದು ಒಟ್ಟಾಗಿ ಹೇಳಿಬಿಡಬಹುದು). ಮತ್ತದರ ಪರಿಹಾರವೆಂದರೆ ಸರಿಯಾದ ತಿಳುವಳಿಕೆ, ಸೂಕ್ತಜ್ಞಾನ. ಜ್ಞಾನದಿಂದ ಅಜ್ಞಾನದ ಮುಸುಕನ್ನು ಸರಿಸಿ ಮುನ್ನಡೆದರೆ ಮುಕ್ತಿಯ ಹಾದಿ ತೆರೆದುಕೊಂಡೀತು. ಅದಕ್ಕೆಂದೇ ಜ್ಞಾನಾರ್ಜನೆ ಮಾಡಿ ಜ್ಞಾನಿಯಾಗಬೇಕು, ಜಾಣಿಯಾಗಬೇಕು; ಆಗ ನಿಗೂಢಗಳ ಗುಟ್ಟೂ ಕೂಡ ತಂತಾನೇ, ಒಂದೊಂದಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

‘ಈ ನಿನಾನಿಗೆ’ (ಈ-ನೀನು-ನಾನಿಗೆ ) ಎನ್ನುವುದನ್ನು ಮತ್ತಷ್ಟು ಆಳದಲ್ಲಿ ನೋಡಿದರೆ ಸಿಕ್ಕುವ ಅರ್ಥ ಇನ್ನೂ ಗಾಢವಾದದ್ದು. ಹುಟ್ಟುವಾಗ ಅಮಲಭಾವದಿಂದ ಹುಟ್ಟುವ ನಾವು-ನೀವುಗಳು ಬೆಳೆದಂತೆಲ್ಲ – ‘ಇದು ನಾನು, ಅದು ನೀನು , ಇದು ನನ್ನದು, ಅದು ನಿನ್ನದು’ ಎಂದು ಬೇಲಿ, ಕಟ್ಟುಪಾಡು ಹಾಕಿಕೊಂಡು ಸ್ವಾರ್ಥಿಗಳಾಗಿಬಿಡುತ್ತೇವೆ. ‘ಹುಟ್ಟಿನಲ್ಲಿಲ್ಲದ ಯಾವ ವಾಸನೆ, ಯಾವ ಬೇನೆ (ಕಾರಣ) ನಮ್ಮನ್ನು ಆ ಮಟ್ಟಕ್ಕಿಳಿಸುತ್ತದೆ ?’ ಎನ್ನುವ ಪ್ರಶ್ನೆ ಇಲ್ಲಿ ಕಾಣಿಸಿಕೊಳ್ಳುತ್ತದೆ. ಅಂತಹ ಭಾವಲಾಲಸೆಗಾಸ್ಪದ ಕೊಡದ, ಎಲ್ಲವನ್ನು ಸೂಕ್ತ ಪಕ್ವತೆ, ಪ್ರಬುದ್ಧತೆ, ನಿರ್ಲಿಪ್ತತೆಯಲ್ಲಿ ನಿಭಾಯಿಸಬಲ್ಲ ‘ನಾನು-ನೀನು’ಗಳನ್ನೂ ಜಾಗೃತರಾಗಿಸಿದವರಷ್ಟೆ ಜಾಣರು, ಜ್ಞಾನಿಗಳು. ಅಂತಹವರು ಆ ಬೇನೆಗಳ ಮೂಲೋತ್ಪಾಟನೆಗೈದು ತಮ್ಮನ್ನೇ ಉನ್ನತ ಮಟ್ಟಕ್ಕೇರಿಸಿಕೊಳ್ಳಬಲ್ಲರು (ಸಾರ್ಥಕ ಬದುಕಿಗೆ ಅಂತಹ ಜ್ಞಾನ, ಜಾಣತನ ಪ್ರಾಮುಖ್ಯವಾದದ್ದೆನ್ನುವ ಭಾವದಲ್ಲಿ ).

ಪುರುಷ-ಪ್ರಕೃತಿಯ ಸಮಾಗಮದ ಅಂತಿಮ ಉದ್ದೇಶ ಜೀವಸೃಷ್ಟಿಯಾದರು, ಅದರ (ಪ್ರೇಮ, ಪ್ರಣಯ, ಮಿಲನಗಳಂತಹ) ಆರಂಭಿಕ ಪ್ರಕ್ರಿಯೆಗಳಲ್ಲಿ ಅಮಿತ ಸುಖಾನಂದ ಲಹರಿ, ಸಂತಸವನಿಟ್ಟಿದೆ ವಿಶ್ವಚಿತ್ತ. ಆದರೆ ಬೀಜಾಂಕುರ ಗರ್ಭವಾಗಿ, ಆ ಸೃಷ್ಟಿ ಮೂರ್ತವಾಗುವ ಹೊತ್ತಲ್ಲಿ ಮಾತ್ರ ಬೇನೆ, ನೋವು , ಸಂಕಟವನ್ನು ಅನುಭವಿಸಬೇಕು. ‘ಒಂದು ಸಂಬಂದಿತ ಪ್ರಕ್ರಿಯೆಯ ಅಂತಿಮ ತುದಿಗಳಲ್ಲಿ ನಲಿವು ಮತ್ತು ನೋವು – ಎರಡನ್ನೂ ಜತೆಜತೆಗಿಟ್ಟ ಪರಿಯಾದರು ಎಂತದ್ದು ? ಜೀವ ಜನನವಾದ ಮೇಲೆ ಸಿಗುವ ಭಾವವು ಸಂತಸವೇ ಅಂದಮೇಲೆ ಅದನ್ನು ನೋವಿನ (ಬೇನೆಯ) ಕೋಟೆಯ ಮೂಲಕ ಹೊರದಬ್ಬುವ ಅಗತ್ಯವೇನು ?’ ಎನ್ನುವುದು ಇಲ್ಲಿ ಎತ್ತಿರುವ ಮೂಲ ಪ್ರಶ್ನೆ. ಅಂತೆಯೇ, ಒಂದು ವೇಳೆ ಆ ಬೇನೆ-ನೋವಿರದಿದ್ದರೆ ಈ ಸೃಷ್ಟಿ ಅಮೂಲ್ಯವೆನಿಸುತ್ತಿರಲಿಲ್ಲ, ಅದ್ಭುತವೆನಿಸುತ್ತಿರಲಿಲ್ಲ; ನೋವಿನ ಗರ್ಭದಲ್ಲೇ ನಲಿವೂ ಇರುತ್ತದೆಯೆಂಬ ಸಂದೇಶವು ಇಲ್ಲಿ ಅಂತರ್ಗತ. ಹೀಗಾಗಿ ಈ ಬೇನೆಯೂ ಉದ್ದೇಶಪೂರ್ವಕವೇ ಎನ್ನುವ ಇಂಗಿತವೂ ಇದೆಯೆನ್ನುವುದು ನನ್ನ ಅನಿಸಿಕೆ.

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

ಚಿತ್ರಕೃಪೆ: ವಿಕಿಪಿಡಿಯಾ

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s