02031. ನಾಕುತಂತಿಯೊಂದು ಸಾಲು – ೩.೧


02031. ನಾಕುತಂತಿಯೊಂದು ಸಾಲು – ೩.೧
________________________________
(ಭಾಗ ೧ : ಉದ್ದದ ಕಾರಣ ಎರಡು ಭಾಗವಾಗಿ ಪೋಸ್ಟ್ ಮಾಡುತ್ತಿದ್ದೇನೆ)


ಮೂರನೇ ಸಾಲು: ಚಾರು ತಂತ್ರಿಯ ಚರಣ ಚರಣದ ಘನಘನಿತ ಚತುರಸ್ವನಾ : ಭಾಗ ೧
__________________________________________________________________________
ಚಾರು = ನಾಲ್ಕು , ಸುಂದರ
ತಂತ್ರಿ = ತಂತಿ , ತಂತ್ರ
ಚರಣ = ಹಂತ, ಪ್ರತಿ ಚರಣದಲ್ಲೂ
ಘನಘನಿತ = ರೂಪುಗೊಂಡ, ಘನೀಕೃತ ಭಾವ, ಪರಿಪಕ್ವವಾದ
ಚತುರ = ಚತುರತೆ
ಸ್ವನ = ವರ್ಣ (ಅಕ್ಷರಮಾಲೆಯ); ಸಂವಹನ ಮಾಧ್ಯಮವಾಗಿ ವರ್ಣಾಕ್ಷರಗಳ ಪದ್ಧತಿ (ಲಿಪಿ ಸ್ವನದ ಸಾಂಕೇತಿಕ ಅಥವಾ ಪ್ರಕಟ ರೂಪ)
ಚತುರಸ್ವನಾ = ಚತುರ + ಸ್ವನಾ (ಸುಂದರ ಕಾವ್ಯದ ಸೃಷ್ಟಿಯಲ್ಲಿ ಚತುರತೆಯಿಂದ ಬಳಸಲ್ಪಡುವ ಸ್ವನಾ – ಅರ್ಥಾತ್ ವರ್ಣಮಾಲೆಯ ಎಲ್ಲಾ ಅಕ್ಷರಗಳು)
ಚತುರಸ್ವನಾ = ನಾಲ್ಕು-ರಸ-ಸ್ವನಾ ( ವರ್ಣಾಕ್ಷರ ಬಳಕೆಯಲ್ಲಿ ಸೂಕ್ತವಾಗಿ ಬಳಸಿದರೆ, ಭಾಷೆಯನ್ನೂ ಸಾಮಾನ್ಯ ಮಟ್ಟದಿಂದ ಇಂಪಾದ ಗಾಯನದ ಮಟ್ಟಕ್ಕೇರಿಸುವ ಅಲ್ಪಪ್ರಾಣ, ಮಹಾಪ್ರಾಣ, ಹ್ರಸ್ವಸ್ವರ, ಧೀರ್ಘಸ್ವರ ಎಂಬ ನಾಲ್ಕು ಸ್ವನಗಳು; ಮತ್ತೊಂದು ದೃಷ್ಟಿಕೋನದಲ್ಲಿ ವರ್ಣಾಶ್ರಮದ ನಾಲ್ಕು ಆಯಾಮಗಳು – ಬ್ರಹ್ಮಚರ್ಯ, ಗೃಹಸ್ಥಾ, ವೃದ್ಧಾ, ವಾನಪ್ರಸ್ಥ; ಅಥವಾ ಸ್ವಸ್ಥ ಸಮಾಜದ ರೂಪುಗೊಳ್ಳುವಿಕೆಯಲ್ಲಿ ಪರಸ್ಪರ ಪೂರಕ ಆಧಾರಸ್ತಂಭಗಳಾಗಿ ನಿಲ್ಲುವ ನಾಲ್ಕು ವೃತ್ತಿಯಾಧಾರಿತ ವರ್ಣಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ)
ಚತುರಸ್ವ ನಾ = ಚತುರಾಶ್ವ ನಾ(ಮನಸು) = ಚತುರ ಅಶ್ವದ ಹಾಗೆ ಚತುರಮತಿ ನಾನು
__________________________________________________________________________

ನನ್ನ ಟಿಪ್ಪಣಿ:

(ಚಾರು ತಂತ್ರಿಯ ಚರಣ ಚರಣದ ಘನಘನಿತ ಚತುರಸ್ವನಾ) – ಭಾಗ ೧

ಈ ಮೂರನೇ ಸಾಲಿನ ಸಾರವನ್ನು ಸಂಕ್ಷಿಪ್ತವಾಗಿ ಹೇಳಬೇಕೆಂದರೆ : ಹಿಂದೆ ವಿವರಿಸಿದ ನಾಕು ತಂತಿಗಳ (ನಾನು, ನೀನು, ತಾನು, ಅವನು = ಪ್ರಕೃತಿ, ಪುರುಷ, ಅವೆರಡರ ಮಿಲನ ಫಲಿತ ಜೀವಾತ್ಮ, ಅದರ ಚೇತನ ಶಕ್ತಿಯಾದ ಪರಮಾತ್ಮ) ಸೂಕ್ಷ್ಮರೂಪವನ್ನೇ ಮೂಲಧಾತುವಿನಂತೆ (ಇಟ್ಟಿಗೆಯಂತೆ) ಬಳಸುತ್ತ, ಸೂಕ್ತತಂತ್ರಗಳ ಬಳಕೆಯೊಂದಿಗೆ ಹಂತಹಂತವಾಗಿ (ಚರಣ ಚರಣವಾಗಿ) ಚತುರತೆಯಿಂದ ಕಟ್ಟುತ್ತಾ ಹೋದರೆ ಅದು ತಾನೇ ತಾನಾಗಿ ಘನೀಕೃತ ಸ್ವರೂಪ ಪಡೆದು ಸ್ಥೂಲ (ಪ್ರಕಟ) ರೂಪವಾಗುತ್ತದೆ. ಇದು ಗರ್ಭದಲ್ಲಿ ರೂಪ ತಾಳಿ ಬರುವ ಶಿಶುವಿನ ಸೃಷ್ಟಿಯಾದರು ಆಗಬಹುದು… ಕವಿಯೊಳಗೆ ಪ್ರಸವ ವೇದನೆಯುಕ್ಕಿಸಿ ಬರುವ ಕಾವ್ಯ ಸೃಷ್ಟಿಯಾದರು ಆಗಬಹುದು… ಸಂಗೀತವಾದ್ಯದಿಂದ ಹೊರಡುವ ಮಧುರ ನಿನಾದವೂ ಆಗಬಹುದು, ಸುಮಧುರ ಕಂಠದಿಂದ ಹೊರಡುವ ಗಾಯನವೂ ಆದೀತು. ಎಲ್ಲದರ ಮೂಲದಲ್ಲೂ ಅಗಾಧ ಪರಿಶ್ರಮ, ಯಾತನೆ, ಆನಂದ, ಅನುಭವಗಳಿರುತ್ತವೆ. ಯಾವ ಸೃಷ್ಟಿಯು ಸುಖಾಸುಮ್ಮನೆ ಸುಲಭದಲ್ಲಿ ಆಗುವುದಿಲ್ಲ ಎನ್ನುವುದು ಇಲ್ಲಿನ ಮುಖ್ಯ ಒಳನೋಟ. ಆದರೆ ಎಂದಿನಂತೆ ಬೇಂದ್ರೆಯವರ ಕಾವ್ಯವನ್ನು ಕೇವಲ ಒಂದರ್ಥಕ್ಕೆ ಬಂಧಿಸಿ ಸೀಮಿತಗೊಳಿಸುವುದು ಆಗದ ಕಾರ್ಯ. ಹೀಗಾಗಿ ಅದು ಹೊರಡಿಸುತ್ತಿರಬಹುದಾದ ಹಲವಾರು ಅರ್ಥಗಳ ಸಿಂಹಾವಲೋಕನ ಮಾಡಿಬಿಡುವ ಮುಂದಿನ ಪಂಕ್ತಿಗಳಲ್ಲಿ..!

ಚಾರು ಎಂದರೆ ‘ಸುಂದರ’ (‘ಚಾರು’ಲತೆಯಲಿದ್ದ ಹಾಗೆ); ಹಾಗೆಯೇ ನಾಲ್ಕು ಎನ್ನುವ ಅರ್ಥವೂ ಹೌದು. ತಂತ್ರಿಯೆಂದಾಗ ಒಂದೆಡೆ ಗಾನ ಹೊಮ್ಮಿಸುವ ತಂತಿಯ ಹಾಗೆ ಭಾಸವಾದರೆ (ಚಾರು-ತಂತ್ರಿ) , ಮತ್ತೊಂದೆಡೆ ಚಾತುರ್ಯಪೂರ್ಣವಾದ ತಂತ್ರವೆಂಬ (ವಿಧಾನವೆಂಬ) ಭಾವವು ಹೊರಡುತ್ತದೆ.

ಚರಣ ಚರಣದ ಎನ್ನುವಾಗ – ನಾಲ್ಕು ತಂತಿಯನ್ನು ಮೀಟುತ್ತ ಮಧುರ ನಾದವನ್ನು ಹೊರಡಿಸುತ್ತ, ಚರಣದಿಂದ ಚರಣಕ್ಕೆ ಸಾಗುವ ಅದ್ಭುತ ಪ್ರಕ್ರಿಯೆ, ತಲ್ಲೀನತೆ ಕಣ್ಮುಂದೆ ಬಂದು ನಿಲ್ಲುತ್ತದೆ . ಅದೇ ತಂತ್ರದ ಹಿನ್ನಲೆಯಲ್ಲಿ ನೋಡಿದರೆ ‘ಚರಣ ಚರಣ’ ಎನ್ನುವುದು ಹಂತದಿಂದ ಹಂತಕ್ಕೆ ಗಟ್ಟಿಯಾಗುತ್ತ ಸಾಗುವ ಪ್ರಕ್ರಿಯೆಯನ್ನು ನೆನಪಿಸುತ್ತದೆ (ಮತ್ಯಾವ್ಯಾವ ನಾಲ್ಕು ಹಂತವಿರಬಹುದೆಂದು ಆಮೇಲೆ ನೋಡೋಣ).

ಇನ್ನು ಘನಘನಿತ ಎಂದಾಗ ಗಟ್ಟಿಯಾಗುತ್ತಾ ಹೋಗುವ ಭಾವ, ಅಮೂರ್ತದಿಂದ ಮೂರ್ತವಾಗುತ್ತ ಹೋಗುವ ಪ್ರಕ್ರಿಯೆ ಎನ್ನುವ ಕಲ್ಪನೆ. ನಾಕು ತಂತಿಗಳು ಮಿಡಿಯುತ್ತ ಹೋದಂತೆ , ಚರಣದಿಂದ ಚರಣಕ್ಕೆ ಸಾಗುವಾಗ ಪಕ್ವವಾಗುತ್ತ, ಪ್ರಬುದ್ಧವಾಗುತ್ತ ಬೆಳೆಯುವ ಪರಿಕಲ್ಪನೆಯೆನ್ನಬಹುದು. ಇದೊಂದು ರೀತಿಯಲ್ಲಿ ‘ಐ ಯಾಮ್ ನಾಟ್ ಓಕೇ, ಯು ಆರ್ ನಾಟ್ ಓಕೆ’ ಎನ್ನುವ ಮೊದಲ ವ್ಯಸ್ತ ಮನಸ್ಥಿತಿಯಿಂದ ‘ಐ ಯಾಮ್ ಓಕೇ, ಯು ಆರ್ ಓಕೆ’ ಎನ್ನುವ ಪ್ರಬುದ್ಧ ನಾಲ್ಕನೇ ಮನಸ್ಥಿತಿಯನ್ನು ತಲುಪುವ ಹಾಗೆ.

ನಾಲ್ಕುತಂತಿಗಳನ್ನು (ನಾಲ್ಕು ತಂತ್ರಗಳನ್ನು) ಸರಿಸೂಕ್ತ ಅರಿತು, ತಲ್ಲೀನತೆಯಿಂದ ನುಡಿಸುತ್ತ ( ಸರಿಯಾದ ರೀತಿಯಲ್ಲಿ ತಂತ್ರಗಳ ಜೋಡಣೆಯನ್ನು ಬಳಸುತ್ತ ) ಚರಣದಿಂದ ಚರಣಕ್ಕೆ (ಹಂತದಿಂದ ಹಂತಕ್ಕೆ) ಚತುರತೆಯ ಸಹಯೋಗದಲ್ಲಿ ಸಾಗುತ್ತಿದ್ದರೆ, ಉಂಟಾಗುವ ಫಲಿತವು ಅದ್ಭುತ ರಸಾಸ್ವಾದನೆಯ ಅನುಭವ, ಅನುಭೂತಿಯನ್ನು ನಮ್ಮದಾಗಿಸುತ್ತದೆ. ಆದರೆ ಆ ಹಂತಗಳ ಆಸ್ವಾದಿಸುವಿಕೆ, ಗ್ರಹಿಕೆಗೆ ಬೇಕಾದ ಚತುರ ಮನಸ್ಥಿತಿ ನಮಗೆ ಇರಬೇಕು. ಅಂತಹ ಚತುರಾಶ್ವ ಮನಸ್ಥಿತಿ ನಮಗಿದ್ದರೆ ಈ ಹಂತ, ಪಕ್ವತೆಗಳು ನಿಲುಕಿಗೆ ಎಟುಕುತ್ತ ರಸಾಸ್ವಾದನೆಯ ಅನುಭವ ಮಾಡಿಸುತ್ತವೆ. ಅಂತ ಪಕ್ವತೆಯುಳ್ಳ ಚತುರಾಶ್ವ ನಾನು ಎನ್ನುವ ಕವಿಭಾವ, ಕವಿಗಿರುವ ಆತ್ಮವಿಶ್ವಾಸ ಮತ್ತು ಪ್ರಭುತ್ವವನ್ನು ಎತ್ತಿ ತೋರಿಸುತ್ತದೆ.

ಸಾರಾಂಶದಲ್ಲಿ ಹೇಳುವುದಾದರೆ, ಸೃಷ್ಟಿಯ ಪ್ರತಿಯೊಂದು ಅಂಕಣವು ಒಂದು ಬಗೆಯ ನಾಕು ತಂತಿಗಳ ಸ್ವರೂಪದಿಂದ ಲೇಪಿತವಾಗಿದ್ದಾಗಿದೆ. ನೋಡುತ್ತಾ ಹೋದರೆ, ಎಲ್ಲೆಲ್ಲೂ ನಾಕುತಂತಿಗಳೇ ಕಾಣುತ್ತವೆ .. ಒಟ್ಟಿನಲ್ಲಿ ಎಲ್ಲವು ಈ ನಾಕುತಂತಿಗಳ ವಿಭಿನ್ನ ಭಾವರೂಪಗಳೆ ಎಲ್ಲವು ಎನ್ನುವುದಿಲ್ಲಿನ ಮಥಿತಾರ್ಥ. ಅದರ ಹಂತಹಂತವನ್ನು ಗ್ರಹಿಸುತ್ತಾ, ಜೀರ್ಣಿಸಿಕೊಳ್ಳುತ್ತ ಸಾಗುವುದು ಪರಿಪಕ್ವತೆ, ಪ್ರಬುದ್ಧತೆಯತ್ತ ಇಡುವ ಹೆಜ್ಜೆಯ ಹಾಗೆ. ಹಾಗೆ ಇಡುತ್ತಾ ಸಾಗಿದಂತೆಲ್ಲ ಮಂದ್ರದಿಂದ ಸಾಂದ್ರವಾಗುತ್ತ, ಗಟ್ಟಿಗೊಳ್ಳುತ್ತ ಹೋಗುವ ಬೆಳವಣಿಗೆಯ ಪ್ರಕ್ರಿಯೆ, ನಮ್ಮನ್ನು ಆ ನಾಲ್ಕು ತಂತ್ರಗಳಲ್ಲೂ ಚತುರರನ್ನಾಗಿಸುತ್ತ ಹೋಗುತ್ತದೆ . ನಾನೆಂಬುದರ ಸ್ಪಷ್ಟ ಕಲ್ಪನೆಯತ್ತ ಹೆಜ್ಜೆ ಇಡಿಸುತ್ತದೆ ಈ ರೂಪಾಂತರದ ನಿರಂತರ ಪ್ರಕ್ರಿಯೆ. ಅದಕ್ಕೆ ಪೂರಕವಾಗಿ ನಡೆಯುವ ಸೃಷ್ಟಿಸಹಜ, ನಿಸರ್ಗಸಹಜ ಆಗುಹೋಗುಗಳು ಅದನ್ನು ಬಗೆಬಗೆಯ ರೀತಿಯಲ್ಲಿ ಸಾಧ್ಯವಾಗಿಸುತ್ತಾ ಹೋಗುತ್ತವೆ. ಆ ಬಗೆಬಗೆಯ ಖಾದ್ಯಗಳ ತುಣುಕನ್ನು ನೋಡಹೊರಟರೆ ಆದರ ಅಗಾಧ ವ್ಯಾಪ್ತಿ, ವಿಸ್ತಾರದ ಹರವಿನ ಜತೆಯಲ್ಲೇ ನಮ್ಮ ಅರಿವಿನ ಮಿತಿಯು ಗಮನಕ್ಕೆ ಬರುತ್ತದೆ .

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)
ಚಿತ್ರ : ವಿಕಿಪೀಡಿಯಾ

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s