02032. ನಾಕುತಂತಿಯೊಂದು ಸಾಲು – ೩.೨


02032. ನಾಕುತಂತಿಯೊಂದು ಸಾಲು – ೩.೨
____________________________________
(ಭಾಗ ೨: ಉದ್ದದ ಕಾರಣ ಎರಡು ಭಾಗವಾಗಿ ಪೋಸ್ಟ್ ಮಾಡುತ್ತಿದ್ದೇನೆ)


ಮೂರನೇ ಸಾಲು: ಚಾರು ತಂತ್ರಿಯ ಚರಣ ಚರಣದ ಘನಘನಿತ ಚತುರಸ್ವನಾ – ಭಾಗ ೨

ಈ ಕೆಳಗೆ ಕಾಣಿಸಿರುವ ಉದಾಹರಣೆಗಳು ಇನ್ನೂ ಹಲವಾರು ನಾಲ್ಕು ತಂತಿಗಳ ದರ್ಶನ ಮಾಡಿಸುತ್ತದೆ – ಅದರ ವಿಶಾಲ ಅರ್ಥವ್ಯಾಪ್ತಿಯ ಸಾಧ್ಯತೆಯ ಮೇಲೆ ಬೆಳಕು ಚೆಲ್ಲುತ್ತ :

೧. ನುಡಿಸುವ ವಾದ್ಯದ ನಾಲ್ಕುತಂತಿಗಳು ನಾದ ಹೊರಡಿಸುವ ಪ್ರಮುಖ ಪರಿಕರ. ವೀಣೆಯನ್ನು ಉದಾಹರಣೆಗೆ ತೆಗೆದುಕೊಂಡಾಗ, ನಾಲ್ಕು ತಂತಿಗಳಲ್ಲಿ ಮೊದಲನೆಯದು “ಸಾರಣಿ”, ಎರಡನೆಯದು “ಪಂಚಮ”, ಮೂರನೆಯದು “ಮಂದ್ರ”, ನಾಲ್ಕನೆಯದು “ಅನುಮಂದ್ರ” ಎಂದು ಕರೆಯುತ್ತಾರೆ (ಇದಲ್ಲದೆ ಕುದುರೆಯ ಪಕ್ಕದಲ್ಲಿ ಬಾಗಿದ ಒಂದು ಹಿತ್ತಾಳೆಯ ರೇಕು ಜೋಡಿಸಿರುತ್ತಾರೆ. ಇದರ ಮೂಲಕ ಮೂರು ತಾಳದ ತಂತಿಗಳು ಹಾದು ಹೋಗುತ್ತವೆ. ಅವುಗಳು ಕ್ರಮವಾಗಿ ಮಧ್ಯ ಷಡ್ಜ, ಮಧ್ಯ ಪಂಚಮ ಮತ್ತು ತಾರ ಷಡ್ಜಗಳು. ಆದರೆ ಹೆಸರೇ ಹೇಳುವಂತೆ ಇವು ತಾಳದ ತಂತಿಗಳು. ನಾದ ಹೊರಡಿಸುವುದು ಮಿಕ್ಕ ನಾಲ್ಕು ಪ್ರಮುಖ ತಂತಿಗಳು ಮಾತ್ರವೆ). ಈ ನಾದದ ನಾಲ್ಕು ತಂತಿಗಳ ಮೂಲಾರ್ಥಕ್ಕೂ ಬೇಂದ್ರೆಯವರ ನಾಕುತಂತಿ ಕವನದ ಭಾವಾರ್ಥಕ್ಕೂ ಸಂಬಂಧವಿದೆಯೆಂದು ನನ್ನ ಅನಿಸಿಕೆ. ಆದರೆ ಆಳವಾದ ಸಂಗೀತ ಜ್ಞಾನವಿಲ್ಲದ ಮತ್ತು ನಾದ ಹೊರಡಿಸುವ ತಂತಿಗಳ ಅರ್ಥಗ್ರಹಿಕೆಯಿಲ್ಲದ ಸಾಮಾನ್ಯನಾಗಿ ಅದನ್ನು ವಿವರಿಸಲು ನಾನು ಅಸಮರ್ಥ. ನುರಿತ ನಾದಪಟು ಈ ನಾಲ್ಕು ತಂತಿಗಳ ಸಹಯೋಗದಿಂದ ಪರಿಪಕ್ವ ಸಂಗೀತವನ್ನು ಹೊಮ್ಮಿಸುತ್ತಾನೆ (ಹಂತಹಂತವಾಗಿ ಸ್ತರವನ್ನು ಮೇಲೇರಿಸುತ್ತ), ಮತ್ತದನ್ನು ಅರಿಯಬಲ್ಲ ಚತುರ ರಸಿಕ ಮನ ತಲ್ಲೀನತೆಯಿಂದ ತಲೆದೂಗುತ್ತಾ ಅದನ್ನು ಆಸ್ವಾದಿಸುತ್ತದೆ. ಇಲ್ಲಿ ಪ್ರಕಟಾಪ್ರಕಟ ಭಾವಗಳೆಲ್ಲ ತಾನಾಗಿಯೆ ಅನಾವರಣಗೊಂಡು ಹೃನ್ಮನಗಳನ್ನು ತುಂಬಿಕೊಳ್ಳುತ್ತ ಹೋಗುವ ಅದ್ಭುತ ಇಬ್ಬರಿಗೂ ಅರಿವಿಲ್ಲದೆಯೆಯೆ ನಡೆದುಹೋಗುತ್ತದೆ. ಇದು ಸಂಗೀತ ಸೃಷ್ಟಿಯ ರಸ ಪ್ರಸವ.

೨. ಬದುಕಿನ ಶರಧಿಯಲ್ಲಿ ಈಜಿ ದಡ ಸೇರಬೇಕಾದರೆ ಇರಬೇಕಾದ ನಾಕುತಂತ್ರಗಳು : ಸಾಮ, ದಾನ, ದಂಡ, ಬೇಧ. ಬದುಕಿನ ಪಂಥಗಳಿಗೆ ಒಡ್ಡಿಕೊಂಡಾಗ ಇವನ್ನೇ ಶಸ್ತ್ರಾಸ್ತ್ರಗಳನ್ನಾಗಿ ಬಳಸುತ್ತ ಅನುಭವದೊಂದಿಗೆ ಬುದ್ಧಿವಂತಿಕೆ , ಪರಿಪಕ್ವತೆಯನ್ನು ಹೆಚ್ಚುಸಿಕೊಳ್ಳುತ್ತ ಹೋಗುವ, ತನ್ಮೂಲಕ ಪರಿಪೂರ್ಣತೆಯತ್ತ ಹೆಜ್ಜೆಯಿಡುವ ಪ್ರಕ್ರಿಯೆ. ಇಲ್ಲಿಯೂ ಗಟ್ಟಿಯಾಗುತ್ತಾ ಹೋಗುವ, ಚತುರಾಶ್ವವಾಗುವ ವಿಷಯಗಳು ಸಂಗತವೇ.

೩. ಹುಟ್ಟಿನಿಂದ ಸಾವಿನವರೆಗೂ ನಡೆಯುವ ಯಾತ್ರೆಯಲ್ಲಿ ಹಾದು ಹೋಗುವ ಹಂತಗಳು. ಶೈಶವಾವಸ್ಥೆ, ಬಾಲ್ಯ, ಯೌವನ, ವೃದ್ಧಾಪ್ಯ – ಈ ನಾಲ್ಕು ಹಂತಗಳು ನಾಲ್ಕು ತಂತಿಯ ಹಾಗೆ ವಿಭಿನ್ನ ಸ್ವರ, ನಾದ ಹೊರಡಿಸುತ್ತಾ ವಿಭಿನ್ನ ಅನುಭವ, ಅನುಭಾವ ಪಕ್ವತೆಗಳೊಡನೆ ಸಾಗಿಸುತ್ತ ಗಟ್ಟಿಯಾಗಿಸುತ್ತ ಹೋಗುತ್ತವೆ ಮನುಜ ಜೀವಿಯನ್ನು.

೪. ಬೆಳವಣಿಗೆಯ / ಯಾವುದೇ ಸೃಷ್ಟಿಕ್ರಿಯೆಯ ನಾಲ್ಕು ಹಂತಗಳು: ಮೂಲ ಬೀಜ ರೂಪ, ಅದು ನಂತರ ಬದಲಾಗಿ ಪಡೆಯುವ ಭೌತಿಕ ಸ್ವರೂಪ, ಅಭೌತಿಕ ಅಂಶಗಳ ಅವಾಹನೆಯಾಗುವ ಬೌದ್ಧಿಕ – ಮಾನಸಿಕ ಸ್ತರ ಮತ್ತು ಇವೆಲ್ಲದರ ಒಟ್ಟಾರೆ ಸಮಷ್ಟಿಯಾಗಿ ನಿಲುಕಿಗೆ ಸಿಗುವ ಸಮಗ್ರ ಮೂರ್ತ ರೂಪ (ಅಮೂರ್ತ ಅಥವಾ ಅದೃಶ್ಯ ಸ್ವರೂಪದಿಂದ, ಮೂರ್ತ – ಪ್ರಕಟ – ವ್ಯಕ್ತರೂಪದವರೆಗೆ). ಎಲ್ಲ ಸೃಷ್ಟಿ, ಸೃಜನಾತ್ಮಕ ಕ್ರಿಯೆಯು ಈ ನಾಲ್ಕುತಂತುಗಳ ಮೊಗ್ಗಲ್ಹಿಡಿದೇ ಸಾಗಿ ಅನಾವರಣವಾಗಬೇಕು ಎನ್ನುವುದು ಇಲ್ಲಿನ ಅನಿಸಿಕೆ. ಇದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದು:

೪.೧ ಪ್ರಾಣಿ ಜೀವಿಯ ಸೃಷ್ಟಿ: ವೀರ್ಯಾಣು ಅಂಡಾಣುವಿನಿಂದಾಗುವ ಅಂಡಾಶಯ ಜೀವ ಸೃಷ್ಟಿಯ ಬೀಜರೂಪ. ಗರ್ಭದೊಳಗೆ ಅದರ ಭೌತಿಕ ಬೆಳವಣಿಗೆ ಎರಡನೇ ತಂತು. ಅಂತಃಕರಣಾದಿ ಭಾವಾವೇಶಗಳನ್ನು ಆರೋಪಿಸಿ, ಮಾನಸಿಕ ಅಟ್ಟಣೆಯನ್ನು ಹದಗೊಳಿಸಿ ಸಿದ್ಧಪಡಿಸುವುದು ಮೂರನೇ ತಂತು. ಇದೆಲ್ಲಾ ಮುಗಿದು ಹಂತಹಂತದ ಪರಿಪಕ್ವತೆಯನ್ನು ಸಾಧಿಸಿ ಪೂರ್ಣ ಪ್ರಕಟರೂಪಾಗಿ ಜಗತ್ತಿನಲ್ಲಿ ಕಾಣಿಸಿಕೊಳ್ಳುವುದು ನಾಲ್ಕನೇ ತಂತು / ಹಂತ. ಇದೆಲ್ಲವೂ ತಂತಾನೇ ಸ್ವಾಭಾವಿಕವಾಗಿ, ನಿರಂತರವಾಗಿ ನಡೆಯಬೇಕೆಂದರೆ ಅಲ್ಲಿ ಸೃಷ್ಟಿಕ್ರಿಯೆಯ ಚತುರತೆ ಇರಲೇಬೇಕಲ್ಲವೇ ?

೪.೨ ಶಬ್ದದ ಉತ್ಪತ್ತಿಗೂ ನಾಲ್ಕು ಹಂತಗಳಿವೆಯೆನ್ನುತ್ತಾರೆ. ಶಬ್ದಬ್ರಹ್ಮದ ಉತ್ಪತ್ತಿಗೆ ಕಾರಣವಾಗುವ ಆ ನಾಲ್ಕು ಹಂತಗಳನ್ನು ಪರಾ (ಮೂಲಾಧಾರಚಕ್ರದಲ್ಲಿ ಪಡೆದ ಬೀಜೋತ್ಪನ್ನ ರೂಪ), ಪಶ್ಯಂತಿ (ನಾಭಿ ಅಥವಾ ಸ್ವಾಧಿಷ್ಠಾನ ಚಕ್ರದಲ್ಲಿ ಪಡೆದ ಶಬ್ದರೂಪ), ಮಧ್ಯಮ (ಅನಾಹತ ಅರ್ಥಾತ್ ಹೃದಯ ಚಕ್ರದಲ್ಲಿ ಪಡೆದ ರೂಪ) ಮತ್ತು ಕೊನೆಯದಾದ ವೈಖರಿ ( ವಿಶುದ್ಧಿ ಅರ್ಥಾತ್ ಕಂಠ ಚಕ್ರದಲ್ಲಿ ಪಡೆವ ಅಂತಿಮ ಪ್ರಕಟ ಶಬ್ದ ರೂಪ). ಇಲ್ಲಿಯೂ ಅಮೂರ್ತ ಶಬ್ದದಿಂಗಿತವು ಬೀಜರೂಪ ಹಡೆದು, ನಾಭಿಯಲ್ಲಿ ಸ್ಪಷ್ಟಭೌತಿಕ ರೂಪವನ್ನಾಲಂಗಿಸಿ, ಹೃದಯದಲ್ಲಿ ಅದಕ್ಕೆ ಸರಿಸೂಕ್ತ ಭಾವಲಾಪಗಳ ವಸ್ತ್ರವುಡಿಸಿ, ಅಂತಿಮವಾಗಿ ಕಂಠದಲ್ಲಿ ಮೂರ್ತ ಶಬ್ದರೂಪದಲ್ಲಿ ಹೊರಬೀಳುತ್ತದೆ. ಇಲ್ಲಿಯೂ ಪ್ರತಿ ತಂತಿಯು ತನ್ನನ್ನು ಹಂತಹಂತದಲ್ಲಿ ಪ್ರಕ್ಷೇಪಿಸಿಕೊಂಡು ಸಾಗುವ ಪ್ರಕ್ರಿಯೆ ಗಮನೀಯ. ಈ ಹಂತಗಳು ಪ್ರಾಣಿಸೃಷ್ಟಿಯ ರೀತಿಯದೇ ಹಂತಗಳನ್ನು ಸಾಗಿ ಬರುವುದು ಮತ್ತೊಂದು ವಿಸ್ಮಯ.

೪.೩ ನಾನು ನೀನು ಆನು ತಾನು ಎನ್ನುವ ನಾಲ್ಕು ರೂಪಗಳು. ನಾನು (ನಾವು) ಎನ್ನುವುದರ ಹಿಂದೆ ಸಕ್ರಿಯವಾದ ಅಂಶ ಅಹಂ. ನಮ್ಮನ್ನು ನಾವೇ ಅರಿತುಕೊಳ್ಳುವ ಪ್ರಕ್ರಿಯೆ. ನೀನು (ನೀವು) ಎನ್ನುವುದರ ಹಿಂದಿರುವ ಭಾವ, ನಾನೆಂಬುದರ ಸುತ್ತಮುತ್ತಲಿರುವ ಪರಿಸರ; ನಮ್ಮದಲ್ಲದ ಮಿಕ್ಕೆಲ್ಲದರ ಅರಿವು, ಜ್ಞಾನ. ನಾನೆಂಬ ಅಹಮಿಕೆಯ ಸೂಕ್ತ ಉದ್ದೀಪನದೊಂದಿಗೆ (ಅಂತರಂಗಿಕವಾದದ್ದು) ನೀನೆಂಬ ಬಾಹ್ಯಜ್ಞಾನದ, ಪರಿಸರ ಪ್ರಜ್ಞೆಯನ್ನು ಸಮೀಕರಿಸಿಕೊಂಡರೆ ಅದು ಪೂರ್ಣತೆಯತ್ತ ಇಡುವ ಮೊದಲ ಹೆಜ್ಜೆ. ಇವೆರಡು ತಂತುಗಳ ಸಮೀಕರಣ ಸ್ಪಷ್ಟವಾಗುತ್ತಿದ್ದಂತೆ ಗೋಚರವಾಗುವ ಮೂರನೇ ತಂತು ಅವನು (ಸೃಷ್ಟಿಕರ್ತ). ನಾನು, ನೀನುಗಳ ಸೀಮಿತತೆ ಅರ್ಥವಾದಾಗ ಆ ಅಸಹಾಯಕತೆಯಲ್ಲಿ ಜ್ಞಾನದ ದೀವಿಗೆ ಹಚ್ಚುವ ಮೂರನೇ ತಂತಿ ಅದು. ಅದನ್ನು ಜೀರ್ಣಿಸಿಕೊಂಡು ಮುಂದೆ ಸಾಗುವಾಗ ಅರಿವಾಗುತ್ತದೆ – ನಾನು, ನೀನೆಲ್ಲ ಅವನದೆ ಪ್ರಕ್ಷೇಪಿತ ಸ್ವರೂಪ ಎಂದು ( = ಅಹಂ ಬ್ರಹ್ಮಾಸ್ಮಿ ). ಇದನ್ನು ಪುರುಷ, ಪ್ರಕೃತಿ, ಅವರ ಸಂಗಮದಿಂದುದಿಸುವ ಸೃಷ್ಟಿ ಜೀವ ಮತ್ತು ದೇವರು ಎನ್ನುವ ನಾಲ್ಕು ತಂತಿಗಳಾಗಿಯೂ ನೋಡಬಹುದು. ಒಟ್ಟಾರೆ ಇಲ್ಲಿಯೂ ಹಂತಹಂತದ ಬೆಳವಣಿಕೆ, ಪ್ರಬುದ್ಧತೆ, ಚತುರತೆ – ಎಲ್ಲವು ಪ್ರಸ್ತುತವಾಗುತ್ತದೆ.

೪.೪ ಬರಹದ ಅದರಲ್ಲೂ ಕಾವ್ಯದ ಸೃಷ್ಟಿ ಕ್ರಿಯೆಯೂ ಈ ನಾಕು ತಂತಿಯ ಬಂದದಿಂದ ಹೊರತಾದುದಲ್ಲ. ಅಲ್ಲಿಯೂ ಇದೇ
ಮೂಲಪ್ರಸವ ಮಹೋತ್ಸವದ ಮೊದಾಮೋದಗಳೆಲ್ಲ ಪ್ರಭಾವ ಬೀರಿ ಕಾರ್ಯ ನಿರ್ವಹಿಸುತ್ತವೆ. ಕವಿಭಾವದ ‘ನಾನು’ ಯಾವುದೋ ಪ್ರೇರಣೆಯಿಂದ ಪುಳಕಿತವಾದಂತೆ ಸ್ಫೂರ್ತಿಯ ಬೀಜ ಬಿತ್ತುತ್ತದೆ. ಸುತ್ತಲಿನ ಪರಿಸರ (ನೀನು) ಆ ಬೀಜಾಂಕುರಕ್ಕೆ ಮೂರ್ತರೂಪ ನೀಡುವ ಪದಗಳ ಅಲಂಕಾರಣಕ್ಕೆ ಕಾರಣವಾಗುತ್ತದೆ. ಹೀಗೆ ಪದಪದವಾಗಿ , ಚರಣ ಚರಣವಾಗಿ ರೂಪುಗೊಳ್ಳುತ್ತ ಹೋಗುವ ಪ್ರಕ್ರಿಯೆ ಒಂದು ಅರ್ಥವತ್ತಾದ, ಸುಂದರವಾದ ವಾಕ್ ರೂಪ ಪಡೆಯುವಲ್ಲಿ ಕಸರತ್ತು ನಡೆಸುವ ಆಯಾಮ ‘ತಾನು’. ತಾನುವಿನ ಅಗೋಚರ ಕಂಪನಗಳು ಅಂತಃಕರಣದ ಪರಿಕರಗಳ (ಬುದ್ಧಿ-ಮನಸು-ಅಹಂಕಾರ-ಚಿತ್ತಗಳೆಂಬ ನಾಕುತಂತಿಗಳು) ಮೂಲಕ ತಮ್ಮ ಪ್ರಭಾವ ಬೀರಿ, ಆ ಪ್ರಸವ ವೇದನೆಯಲ್ಲಿ ಭಾಗಿಯಾಗುತ್ತವೆ. ಅಂತಿಮ ಫಲಿತದ ಸ್ವರೂಪವನ್ನು (ಕಾವ್ಯ ಸೃಷ್ಟಿಯ ಅಂತಿಮ ಶಿಶುರೂಪವನ್ನು ) ವನ್ನು ರೂಪಿಸುವ ರೂವಾರಿಫಲಾಗುತ್ತವೆ. ಇನ್ನು ಸೃಷ್ಟಿಯಾದ ಮೇಲೆ ಉಳಿದ ನಾಲ್ಕನೇ ತಂತಿಯ (ಅವನು) ಕೆಲಸವೇನು ? ಸೃಷ್ಟಿಯ ಫಲಾಫಲ, ಯೆಶಾಪಯಶಗಳನ್ನು ನಿರ್ಧರಿಸುವುದು ! ಒಂದು ಕಾವ್ಯ ಸೃಷ್ಟಿಯಾದ ಹೊತ್ತಲ್ಲಿ ಎಲ್ಲರು ಒಂದೇ ಬಗೆಯ ಪ್ರಸವ ವೇದನೆ ಅನುಭವಿಸಿರುತ್ತಾರೆ. ಆದರೆ ಎಲ್ಲಾ ಸೃಷ್ಟಿಯೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವುದಿಲ್ಲ.. ಎಲ್ಲರ ಸೃಷ್ಟಿಯೂ ಒಂದೇ ಗುಣಮಟ್ಟದ್ದಿರುವುದಿಲ್ಲ.. ಅದು ನಮ್ಮಳತೆಗೆ ಮೀರಿದ ದೈವೇಚ್ಛೆ. ಭಗವದ್ಗೀತೆಯಲ್ಲಿ ನುಡಿದಂತೆ ನಮ್ಮ ಕಾರ್ಯ ನಾವು ಮಾಡಿ ಫಲಾಫಲ ನಿರ್ಧಾರಗಳನ್ನು ನಿಯಾಮಕನ ಪಾಲಿಗೆ ಬಿಡುವ ಹಾಗೆ.

ಹೀಗೆ ಇನ್ನು ಹೆಚ್ಚು ಉದಾಹರಣೆಗಳು ಸಾಧ್ಯವಾಗುವುದಾದರೂ, ಈ ಬರಹಕ್ಕೆ ಇಷ್ಟಕ್ಕೆ ಸೀಮಿತಗೊಳಿಸುತ್ತೇನೆ.

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)
ಚಿತ್ರ : ವಿಕಿಪೀಡಿಯಾ

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s