02033. ನಾಕುತಂತಿಯೊಂದು ಸಾಲು – ೪


02033. ನಾಕುತಂತಿಯೊಂದು ಸಾಲು – ೪
________________________________


ನಾಲ್ಕನೇ ಸಾಲು : ಹತವೊ ಹಿತವೊ ಆ ಅನಾಹತಾ ಮಿತಿಮಿತಿಗೆ ಇತಿ ನನನನಾ

________________________________________

ಹತವೊ = ನಿರ್ಜೀವವೋ
ಹಿತವೋ = ಮುದ ನೀಡುವಂತದ್ದು
ಅನಾಹತ = ಹೃದಯ
ಮಿತಿಮಿತಿಗೆ ಇತಿ = ಅಮಿತ
ನನನ ನಾ = ಸ್ವಾವಲಂಬಿತ , ನನ್ನನ್ನೇ ಅವಲಂಬಿತ..
________________________________________

ನನ್ನ ಟಿಪ್ಪಣಿ

(ಹತವೊ ಹಿತವೊ ಆ ಅನಾಹತಾ ಮಿತಿಮಿತಿಗೆ ಇತಿ ನನನನಾ)

ಸೃಷ್ಟಿಯೆಂಬುದು ಒಂದು ಸೃಜನಶೀಲ ಪ್ರಕ್ರಿಯೆ. ಅಂತಿಮ ಫಲಿತ ಏನೇ ಆಗಿದ್ದರೂ (ಒಳ್ಳೆಯದೋ, ಕೆಟ್ಟದ್ದೋ), ಸೃಷ್ಟಿಯಾಗುವಾಗ ಅದು ಅನುಭವಿಸುವ ನೋವು, ಸಂಕಟ, ಯಾತನೆ, ಹರ್ಷ, ಪುಳಕ, ಉದ್ವೇಗಾದಿ ಭಾವನೆಗಳು ಮಾತ್ರ ಒಂದೇ. ಹೀಗಾಗಿ ಸೃಷ್ಟಿಯಾದದ್ದೆಲ್ಲ ಅದ್ಭುತವಾಗಿರಬೇಕೆಂಬ ಬಯಕೆ, ಹೃದಯದ ಭಾವ ನಿರೀಕ್ಷೆ ಅಸಾಧುವೇನಲ್ಲ. ಹುಟ್ಟಿದ ಪ್ರತಿ ಮಗುವು ಭವಿತದಲ್ಲಿ ‘ನಃ ಭೂತೋ, ನಃ ಭವಿಷ್ಯತೋ’ ಎನ್ನುವ ಹಾಗೆ ಯಶಸ್ವಿಯಾಗಿ ಹೆಸರು ತರುವಂತವನಾಗಬೇಕೆಂದು ಯಾರು ತಾನೇ ಬಯಸುವುದಿಲ್ಲ? ಬರೆದ ಪ್ರತಿ ಕಾವ್ಯವೂ, ಬರಹವೂ ಅದ್ಭುತವೆನಿಸಿ ಪಂಡಿತ, ಪಾಮರರ ಮೆಚ್ಚುಗೆಗೆ ಪಾತ್ರವಾಗಬೇಕೆಂದು ಯಾವ ಕವಿಗೆ ತಾನೇ ಆಸೆಯಿರುವುದಿಲ್ಲ? ಆದರೆ ನೈಜದಲ್ಲಿ ಸೃಷ್ಟಿಯಾಗುವ ತನಕ ಮಾತ್ರವಷ್ಟೇ ನಮಗದರ ಮೇಲಿನ ಹತೋಟಿ. ತದನಂತರ ಏನಾಗುವುದು ಎನ್ನುವುದು ನಮ್ಮ ಹೃದಯದ ಇತಿಮಿತಿಯಿಲ್ಲದ ಭಾವನೆ, ಆಸೆಗಳ ಮೇಲೆ ಅವಲಂಬಿಸಿರುವುದಿಲ್ಲ. ಏನಾದರೂ ಆಗಲಿ, ನಮ್ಮ ನಿರೀಕ್ಷೆಗಳಿಗೊಂದು ಇತಿಮಿತಿ ಹಾಕಿಕೊಂಡಾಗ ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವ ಪಕ್ವ ಮನೋಭಾವ ಉದಿಸುತ್ತದೆ. ಇದು ಸೃಷ್ಟಿ-ಫಲಿತದ ನಿರೀಕ್ಷೆಯ ಒಂದು ಪಕ್ಕದ ನೋಟ.

ಹಾಗೆಂದುಕೊಂಡು ಪ್ರತಿಯೊಂದು ಸಾಧ್ಯತೆಗೂ ಇತಿಮಿತಿ, ನಿರ್ಬಂಧ ಹಾಕಿಕೊಳ್ಳುತ್ತಾ ಸಾಧ್ಯವಾಗುವ ಸಾಧನೆಗೂ ಅಡೆತಡೆ ನಿರ್ಮಿಸಿಕೊಳ್ಳುವಂತಾಗಬೇಕೇ ? ಅದು ಕೂಡಾ ಅಸಾಧುವೇ. ಸಾಧನೆಗೆ ಮಿತಿಯೆಂಬುದಿರುವುದು ಹೃದಯದ ಭಾವನೆಯಲ್ಲಿಯೇ ಹೊರತು ನೈಜದಲ್ಲಲ್ಲ. ‘ಬಹುಶಃ ನನ್ನ ಮಿತಿ ಇಷ್ಟೇ, ನನ್ನ ಕೈಲಾಗುವುದು ಇಷ್ಟೇ ಎಂದು ‘ ಎಂದನಿಸುವಂತೆ ಮಾಡುವುದು ನಮ್ಮ ಮನಸು, ನಮ್ಮ ಹೃದಯಗಳೇ ಹೊರತು – ಆ ಸಾಧನೆಗಳಲ್ಲ. ಅದಕ್ಕೆ ಸಾಧನೆಯ ಹಾದಿ ಹಿಡಿದು ಹೊರಟಾಗ ಸಾಧಿಸಬೇಕಾದ ಪರಿಮಾಣಕ್ಕೆ ಇತಿಮಿತಿ ಹಾಕುವುದರ ಬದಲು , ಆ ‘ಇತಿಮಿತಿಗೆ ಮಿತಿ’ ಹಾಕಿಕೊಂಡರೆ ಸಾಧಿಸಬಹುದಾದ ಕ್ಷೇತ್ರ ಆಕಾಶದಂತೆ ವಿಶಾಲವಾಗುತ್ತ, ಅನಂತವಾಗುತ್ತ ಹೋಗುತ್ತದೆ. ಇಲ್ಲಿಯೂ ಮಿತಿ ಹಾಕುವ ಅದೇ ಹೃದಯ, ಅದೇ ಮನಸ್ಸು ಕೆಲಸ ಮಾಡುವುದು ಸೋಜಿಗ. ಒಟ್ಟಾರೆ ನಮ್ಮ ಹೃದಯ-ಮನಸಿನ ಭಾವಗಳನ್ನು ಹಿಡಿತದಲ್ಲಿಟ್ಟುಕೊಂಡು, ಬಂದದ್ದನ್ನು ಹಾಗೆ ಸ್ವೀಕರಿಸುವ ನಿರ್ಲಿಪ್ತತೆಯೊಡನೆ ಸಾಧನೆಯ ಸಾಧ್ಯತೆಯ ಕಡೆ ಅನುಮಾನ, ಶಂಕೆಯಿಲ್ಲದೆ ಮುನ್ನಡೆಯಬೇಕು. ಅದೇ ಸೃಷ್ಟಿಜಗದ ಸಾರ್ಥಕತೆ.

ಈ ತತ್ವದ ಸಾರವನ್ನೇ ಧ್ವನಿಸುತ್ತಿದೆ ನಾಕುತಂತಿಯ ನಾಲ್ಕನೇ ಸಾಲು. ಹಿಂದಿನ ಸಾಲಲ್ಲಿ ಏನೆಲ್ಲಾ ತರತರದ ನಾಕುತಂತಿ/ತಂತ್ರಗಳನ್ನೆಲ್ಲ ಇಣುಕಿ ನೋಡಿ, ಎಲ್ಲವು ನಾಲ್ಕರ ಚೌಕಟ್ಟಿನಲ್ಲೇ ಪ್ರಸ್ತುತವಾಗುವ ಪರಿಗೆ ಅಚ್ಚರಿಪಡುವ ಸರದಿ; ಅದಕೊಂದು ಅಪರಿಮಿತ, ವಿಸ್ತೃತ ಪರಿಧಿಯ ಚೌಕಟ್ಟು ಹಾಕುವುದು ಈ ಸಾಲಿನ ವಿಸ್ಮಯ. ಶಬ್ದಬ್ರಹ್ಮದ ಸಾಕಾರರೂಪಾದ ಮಾತಾಗಲಿ, ತಂತಿ ಹೊರಡಿಸುವ ನಾದವಾಗಲಿ, ಕಾವ್ಯವಾಗಿ ಮುದ ನೀಡುವ ಕಾವ್ಯಕನ್ನಿಕೆಯಾಗಲಿ – ಹೀಗೆ ಸೃಷ್ಟಿಯ ಯಾವುದೇ ಪ್ರಕ್ರಿಯೆಯಾಗಲಿ, ಎಲ್ಲವು ಈ ನಾಕುತಂತಿಯ ಕಲ್ಪನೆಯ ಕೂಸುಗಳೇ. ಹಾಗೆಂದು ಹಾಗೆ ಸೃಜಿತವಾದದ್ದೆಲ್ಲ ಅಮರ, ಅದ್ಬುತ, ಅಮಲ, ಅಮೃತ ಎಂದೆಲ್ಲ ಅಂದುಕೊಳ್ಳಲು ಆಗುವುದಿಲ್ಲ. ಮಾತಿನ ಉದಾಹರಣೆಯನ್ನೇ ತೆಗೆದುಕೊಂಡರೆ ತೀಕ್ಷ್ಣವಾದ ಮಾತು ಕೊಲ್ಲಬಹುದು, ಹಿತವಾದ ಮಾತು ಪುಳಕವನ್ನೆಬ್ಬಿಸಬಹುದು. ಸಂಗೀತದ ನಾದ – ಅಭಿರುಚಿ ಮತ್ತು ಸಾಮರ್ಥ್ಯದಾನುಸಾರ ಮೆಚ್ಚುಗೆಗೂ ಪಾತ್ರವಾಗಬಹುದು, ಕೆಂಗಣ್ಣಿಗೂ ಗುರಿಯಾಗಬಹುದು. ಒಮ್ಮೆ ಸೃಜಿತವಾಯಿತೆಂದರೆ ಅದರ ಹಿತಾಹಿತ ಗಣನೆ ಹೀಗೇ ಇರಬೇಕೆಂದು ನಿರೀಕ್ಷಿಸಲಾಗದು. ಬದಲಿಗೆ ಹತವೊ ಹಿತವೊ, ಅದು ಬಂದ ಹಾಗೆ ಸ್ವೀಕರಿಸಿ ಮುಂದಿನ ಹೆಜ್ಜೆಯ ಕುರಿತು ಆಲೋಚಿಸುವುದು ಜಾಣತನ.

ಜತೆಗೆ ಒಬ್ಬರಿಗೆ ಹಿತವಾದದ್ದು ಮತ್ತೊಬ್ಬರಿಗೆ ಮುದ ತರುವಂತಿರಬೇಕೆಂದೇನೂ ಇಲ್ಲ. ಪ್ರತಿಯೊಂದೂ ಅವರವರ ಭಾವಕ್ಕೆ, ಅವರವರ ಭಕುತಿಗೆ ತಕ್ಕಂತೆ ನಿಲುಕುವ ಕೂಸು. ಫಲಿತವೆನ್ನುವುದು ಹತವೊ, ಹಿತವೊ ಎನ್ನುವುದರ ಪರಿಗಣನೆ ಪ್ರತಿಯೊಬ್ಬರ ಅನಾಹತದ (ಅರ್ಥಾತ್ ಹೃದಯದ) ಭಾವಸಾಮೀಪ್ಯ, ಸಾಮರ್ಥ್ಯ, ಇತಿಮಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಅಂದರೆ ಅದನ್ನು ಒಪ್ಪುವ ಅಥವಾ ಬಿಡುವ ಮಿತಿಯನ್ನು ಹಾಕಿಕೊಳ್ಳುವುದು ನಾವುಗಳೇ.

ಒಂದು ವೇಳೆ ನಾವು ಆ ಇತಿಮಿತಿಯನ್ನು ಲೆಕ್ಕಿಸದೆ, ಆ ಮಿತಿಯೆನ್ನುವ ಅನಿಸಿಕೆಗೆ ಇತಿಮಿತಿ ಹಾಕುತ್ತ ಇತಿಶ್ರೀ ಹಾಡಿಬಿಟ್ಟರೆ, ಯಾವುದೇ ಆವರಣವಿಲ್ಲದ ಸ್ವಚ್ಚಂದ ವಿಹಾರದ ಭಾಗ್ಯ ನಮ್ಮದಾಗುತ್ತದೆ. ಅಂದರೆ, ಪ್ರತಿಯೊಂದನ್ನು ಹಿತಾಹಿತವಾಗಿಸುವ ಪ್ರಕ್ರಿಯೆ ನಮ್ಮ ಕೈಯಳತೆಯಲ್ಲೇ ಇದೆ. ನಮ್ಮ ಮನಸಿನ ಭಾವನೆಯ ಹಾಗೆ ಅದರ ಪ್ರಕಟ ಸ್ವರೂಪವು ರೂಪುಗೊಳ್ಳುತ್ತದೆ. ‘ಮಿತಿಗಳಿಗೆ ಇತಿಮಿತಿ’ ಹಾಕುತ್ತ ಆ ಮಿತಿಗಳನ್ನು ಅಧಿಗಮಿಸುವ ಛಾತಿ-ಚತುರತೆಯನ್ನು ನಾವು ಪ್ರದರ್ಶಿಸಿದರೆ ನಮಗೆ ನಾವೇ ಉಣಬಡಿಸಿಕೊಂಡ ಆನಂದಲಹರಿಯಲ್ಲಿ ನಾವೇ ಸಂತಸದಿಂದ ತೇಲಾಡಿಕೊಳ್ಳುವ ಸುಕೃತ ಪ್ರಾಪ್ತವಾಗುತ್ತದೆ.

ಒಟ್ಟಾರೆ ಎಲ್ಲವು ನನ್ನ ಕೈಲಿಯೇ ಇದೆಯೆನ್ನುವ ಸೂಚ್ಯ ಭಾವ ಇಲ್ಲಿನ ಮುಖ್ಯ ಇಂಗಿತ.

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

ಚಿತ್ರಮೂಲ: ವಿಕಿಪೀಡಿಯ 

Advertisements