02034. ನಾಕುತಂತಿಯೊಂದು ಸಾಲು – ೫


02034. ನಾಕುತಂತಿಯೊಂದು ಸಾಲು – ೫
____________________________________


ಐದನೇ ಸಾಲು : ಬೆನ್ನಿನಾನಿಕೆ ಜನನ ಜಾನಿಕೆ ಮನನವೇ ಸಹಿತಸ್ತನಾ
____________________________________________________________
ಬೆನ್ನಿನಾನಿಕೆ = ಬೆನ್ನಿಗೆ ಒರಗಿಕೊಂಡ, ಹಿಂದೆಯೇ ಬರುವ (ಉದಾ: ಹುಟ್ಟು ಸಾವು )
ಜಾನಿಕೆ = ಧ್ಯಾನ , ಧ್ಯಾನಿಸುವಿಕೆ, ಉದ್ದೇಶ
ಮನನವೇ = ಅರಿತುಕೊಳ್ಳುವಿಕೆ
ಸಹಿ = ಒಪ್ಪಿಕೊಂಡು ಪಾಲ್ಗೊಳ್ಳುವಿಕೆ
ತಸ್ತನಾ = ಒಪ್ಪಂದಕ್ಕೆ ಬದ್ಧ ನಾ
ಸಹಿತ = ಸಮೇತ, ಹಿತವಾದದ್ದು (ಮನನ / ಅರ್ಥ ಮಾಡಿಕೊಂಡರೆ ಒಳ್ಳೆಯದು, ಹಿತಕರ)
ಸ್ತನಾ = ಸ-ತನಾ, ಸ್ವಂತಿಕೆ, ನನ್ನತನ (ನಾಕು ತಂತಿಯಲ್ಲೊಂದಾದ ‘ನಾನು’ ಎನ್ನುವ ಭಾವ)
ಸಹಿತಸ್ತನಾ = ಸ-ಹಿತ-ಸ-ತನಾ ( ಸಮಷ್ಟಿ ಹಿತ, ಸಮಷ್ಟಿ ಸಮಾನ ಭಾವ)
___________________________________________________________

ನನ್ನ ಟಿಪ್ಪಣಿ:

(ಬೆನ್ನಿನಾನಿಕೆ ಜನನ ಜಾನಿಕೆ ಮನನವೇ ಸಹಿತಸ್ತನಾ)

ಇದು ನಾಕುತಂತಿ ಪದ್ಯದ ಮೊದಲ ಭಾಗದ ಕೊನೆಯ ಸಾಲು. ಇದುವರೆಗೂ ಕಂಡಂತೆ ನಿಗೂಢ ಸೃಷ್ಟಿಯ ವಿಭಿನ್ನ ಆಯಾಮಗಳತ್ತ ತಾತ್ವಿಕವಾಗಿ ಇಣುಕುವ ಈ ಕವಿತೆಯ ಒಟ್ಟಾರೆ ಆಶಯದಲ್ಲಿ, ಮೊದಲ ಭಾಗ ಸೃಷ್ಟಿಯ ಸಾರ್ವತ್ರಿಕ (ಜನರಿಕ್) ಆಯಾಮದತ್ತ ಕೇಂದ್ರೀಕೃತವಾಗಿದೆ ಎಂದು ನನ್ನ ಭಾವನೆ. ಸೃಷ್ಟಿಯ ಬಾಹ್ಯ ಅಂಶಗಳತ್ತ, ಮತ್ತದನ್ನು ಸಾಧ್ಯವಾಗಿಸುವ ಸ್ಥೂಲ ಅಂಶಗಳನ್ನು ಮೊದಲ ಭಾಗದಲ್ಲಿ ನೋಡಬಹುದು (ಇದಕ್ಕೆ ಹೋಲಿಸಿದರೆ ಎರಡನೇ ಭಾಗದಲ್ಲಿ ಸೃಷ್ಟಿಯ ಆಳವಾದ ತಾಂತ್ರಿಕ ವಿವರ / ವರ್ಣನೆಯ ಆಯಾಮಕ್ಕೆ ಹೆಚ್ಚು ಒತ್ತು ನೀಡುವುದನ್ನು ಕಾಣಬಹುದು). ಒಟ್ಟಾರೆ, ಇಡೀ ಮೊದಲ ಭಾಗ ನಾಕುತಂತಿಗಳಲ್ಲೊಂದಾದ ‘ನಾನು’ ವಿನ ದೃಷ್ಟಿಕೋನದಲ್ಲಿ ಸೃಜಿತವಾದ ಸಾಲುಗಳಂತೆ ಕಾಣಿಸಿಕೊಳ್ಳುತ್ತವೆ.

ಹಿಂದಿನ ನಾಲ್ಕನೇ ಸಾಲಲ್ಲಿ, ನಾವಂದುಕೊಳ್ಳುವ ಎಲ್ಲಾ ಇತಿಮಿತಿಗಳು ನಮ್ಮ ಕೈಯಳತೆಯ ಕೂಸು, ನಾವೇ ಹಾಕಿಕೊಂಡ ಪರಿಧಿ ಎನ್ನುವುದನ್ನು ನೋಡಿದೆವು. ಸಾಧ್ಯತೆಗಳು ಅನಂತ ಎಂದಾಗ ಅದರ ಅಗಾಧತೆಯಲ್ಲಿ ದಿಕ್ಕುದೆಸೆಗಾಣದೆ ಕಂಗಾಲಾಗುವ ಆತಂಕವು ಇರುವುದು ಸಾಮಾನ್ಯ. ಆ ಕೊರತೆಯನ್ನು ನಿವಾರಿಸಲೇನೋ ಎಂಬಂತೆ, ಈ ಐದನೇ ಸಾಲಿನಲ್ಲಿ ಅದಕ್ಕೊಂದು ಸೈದ್ಧಾಂತಿಕ ಚೌಕಟ್ಟನ್ನು ಹಾಕುವ ಉದ್ದೇಶ ಕಾಣಿಸಿಕೊಳ್ಳುತ್ತದೆ. ಯಾವುದೋ ಉದ್ದೇಶದಿಂದ ಆ ವಿಧಾತನಿಂದ ಸೃಷ್ಟಿಯಾದ ಜೀವಿಗಳು ನಾವು. ಆ ಮೂಲ ಉದ್ದೇಶ ಅರಿವಾಗಲಿ ಬಿಡಲಿ, ಈ ಜಗದಲ್ಲಿ ಸ್ಪಷ್ಟವಾಗಿ ಎದ್ದು ಕಾಣಿಸುವ ಒಂದು ಅಂಶವೆಂದರೆ – ನಿರಂತರವಾಗಿ ಪ್ರತಿ ಪೀಳಿಗೆಯು ನಡೆಸುತ್ತಿರುವ, ಮುಂದುವರೆಸಿಕೊಂಡು ಬಂದ ಸೃಷ್ಟಿಕ್ರಿಯೆ. ಅದೊಂದು ಪರಂಪರಾಗತವಾಗಿ ಬಂದ ಕರ್ತವ್ಯದ ತುಣುಕೆಂಬಂತೆ ನಿರಂತರವಾಗಿ ಪಾಲಿಸಿಕೊಂಡು ಬಂದಿದೆ ಮನುಕುಲ. ಪಂಡಿತನಾಗಲಿ, ಪಾಮರನಾಗಲಿ ಅರಿವಿದ್ದೋ, ಇಲ್ಲದೆಯೋ ಜೀವಕುಲ ಪಾಲಿಸುತ್ತಿರುವ ಅಲಿಖಿತ ನಿಯಮವಿದು. ಇಲ್ಲಿ ಸೃಷ್ಟಿಕ್ರಿಯೆ ಮತ್ತದರ ಉದ್ದೇಶ ನಿರಂತರವಾದರೂ, ಅದರಲ್ಲಿ ಭಾಗಿಯಾಗಿರುವ ನಾವು ಮತ್ತು ನಮ್ಮ ಬದುಕು ಅನಂತವಲ್ಲ. ಆ ಪರಿಮಿತಿಯೇ ಅನಂತತೆಯಲ್ಲೊಂದು ಅದೃಶ್ಯ ಮಿತಿಯ (ಅಂತದ) ಚೌಕಟ್ಟು ಹಾಕಿಕೊಟ್ಟುಬಿಟ್ಟಿದೆ. ಹೀಗಾಗಿ ಈ ಕ್ರಿಯೆಯಲ್ಲಿ ಕೇವಲ ಒಬ್ಬರೇ ಭಾಗವಹಿಸುವಂತಿದ್ದರೆ ಅದಕ್ಕೆ ಅನಂತ ನಿರಂತರತೆಯ ಸ್ವರೂಪ ಬರಲು ಆಗುವುದಿಲ್ಲವಲ್ಲ ? ಅದಕ್ಕೆಂದೇ ಇಡೀ ಸಮಷ್ಟಿ ಈ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು, ಪೀಳಿಗೆಯಿಂದ ಪೀಳಿಗೆಗೆ ದಾಟಿಸುತ್ತ ನಿರಂತರತೆಯನ್ನು ಕಾಯ್ದುಕೊಂಡಿದೆ. ಅಂತವಾಗುವ ಜೀವನಚಕ್ರದ ಇಟ್ಟಿಗೆಗಳಿಂದಲೇ ಅನಂತದ ಸೃಷ್ಟಿಕ್ರಿಯೆಯನ್ನು ವಿಶ್ವಚಿತ್ತವು ಮುನ್ನಡೆಸುತ್ತಿದೆ ಎನ್ನುವ ಸೋಜಿಗವು ಅದರ ಚಾತುರ್ಯಕ್ಕೆ ಸಾಕ್ಷಿಯೂ ಹೌದು !

ಒಟ್ಟಾರೆ ಸೃಷ್ಟಿಕ್ರಿಯೆಯ ಉದ್ದೇಶ, ಚರ್ಯೆಗಳೇನೇ ಇದ್ದರೂ (ಅರಿವಾಗಲಿ, ಬಿಡಲಿ), ಮನುಕುಲದ ಬೆನ್ನಿಗಾನಿಕೊಂಡ ಹಾಗೆ ಇರುವ ಮುಖ್ಯ ಗುರಿ ಜನನದ (ಸೃಷ್ಟಿಯ) ಜಾನಿಕೆ (ಧ್ಯಾನಿಸುವಿಕೆ). ನಾವೀ ಜಗದಲ್ಲಿ ಹುಟ್ಟಿದ ಬಳಿಕ ಬಾಲ್ಯಾವಸ್ಥೆಯನ್ನು ಕಳೆದು, ಪ್ರಾಯದ ಮಜಲೇರಿ ‘ನೆಲೆ ನಿಂತೇ’ ಎಂದುಕೊಳ್ಳುವ ಹೊತ್ತಿಗೆ ಪ್ರಾಪಂಚಿಕ ಬಂಧನದ ಕುಣಿಕೆಯೆಂಬಂತೆ ವಿವಾಹವಾಗಿ ಗೃಹಸ್ಥಾಶ್ರಮ ಸ್ವೀಕರಿಸುವ ಅನಿವಾರ್ಯ ಹುಟ್ಟುತ್ತದೆ. ಅದಕ್ಕೆ ಪ್ರೇರಕವಾಗಿ ಬರುವ ದೈಹಿಕ ಕಾಮನೆ, ಅವಲಂಬನೆ, ಆಕರ್ಷಣೆ, ಪ್ರೀತಿ, ವಿಶ್ವಾಸ ಇತ್ಯಾದಿಗಳೆಲ್ಲ ಅಂತಿಮವಾಗಿ ಸೃಷ್ಟಿಕಾರ್ಯವೆಂಬ ನಿಲ್ಲದೆ ನಿರಂತರವಾಗಿ ಸಾಗಬೇಕಾದ ಯಜ್ಞಕ್ಕೆ ಪೂರಕವಾದ ಪರಿಕರಗಳಾಗಿಬಿಡುತ್ತವೆ. ಪ್ರತಿಯೊಂದು ಚರ್ಯೆಯ ಹಿಂದೆಯೂ ನೇರವಾಗಿಯೋ, ಪರೋಕ್ಷವಾಗಿಯೋ ಸೃಷ್ಟಿಕ್ರಿಯೆಯ ಇಂಗಿತ ಕೆಲಸ ಮಾಡುತ್ತಿರುತ್ತದೆ. ಎಲ್ಲದರ ಹಿನ್ನಲೆಯಲ್ಲೂ ಜನನದ (ಸೃಷ್ಟಿಕ್ರಿಯೆಯ) ಧ್ಯಾನ ಬೆನ್ನಿಗಾತುಕೊಂಡೆ ಇರುತ್ತದೆ. ಅದನ್ನು ಮನವರಿಕೆ ಮಾಡಿಕೊಂಡು, ಅರ್ಥ ಮಾಡಿಕೊಂಡು ಆ ಮಹಾನ್ ವಿಶ್ವ ಪ್ರಕ್ರಿಯೆಗೆ ಸಹಿ ಹಾಕುತ್ತ (ಒಪ್ಪಿ ಪಾಲಿಸುತ್ತ) ನಾವು ಅದರಲ್ಲಿ ಪಾಲುದಾರರಾಗಬೇಕು. ಅದರ ನಿರಂತರತೆಯನ್ನು ಕಾಪಾಡಿಕೊಳ್ಳಬೇಕು. ಆ’ತನ’ವನ್ನು ಉಳಿಸಿಕೊಂಡು ಪೋಷಿಸಿಕೊಂಡು ಹೋಗಬೇಕು , ಹಾಗೆ ಹೋಗುವವರಲ್ಲಿ ನಾನು (ನಾವೂ) ಒಬ್ಬನಾಗಬೇಕು. ಇದು ಈ ಸಾಲಿನ ಒಟ್ಟಾರೆ ತಾತ್ಪರ್ಯ.

ಇದನ್ನೇ ಮತ್ತೊಂದು ದೃಷ್ಟಿಕೋನದಲ್ಲಿ ನೋಡಿದಾಗ ಬರುವ ಆಯಾಮ ಹುಟ್ಟುಸಾವಿನದು. ಒಂದರ ಬೆನ್ನ ಹಿಂದೆ ಮತ್ತೊಂದು ಬಂದು ಹೋಗುವ ಹುಟ್ಟುಸಾವಿನ ಸಹಜ ಕ್ರಿಯೆಯನ್ನು ಮನನ ಮಾಡಿಕೊಂಡು ಅದನ್ನನುಸರಿಸಿಕೊಂಡು ನಡೆವ ಸ್ಥಿತಪ್ರಜ್ಞತೆಯನ್ನು ಬೆಳೆಸಿಕೊಳ್ಳಬೇಕು. ಹುಟ್ಟುಸಾವಿನ ನಿರಂತರತೆಯನ್ನು ಜೀವಂತವಾಗಿಟ್ಟಿರುವುದೇ ಸೃಷ್ಟಿಕ್ರಿಯೆ. ಹುಟ್ಟು-ಬದುಕು-ಸಾವು-ಪುನರುತ್ಥಾನ ಕೂಡ ನಾಲ್ಕು ತಂತಿಗಳ ಹಾಗೆಯೇ. ಜನುಮದ ಬೆನ್ನಲ್ಲೇ ಕರ್ಮಾನುಸಾರ ಮರುಜನ್ಮ ಪಡೆದುಕೊಳ್ಳುವ ಪುನರ್ಜನ್ಮದ ಪ್ರಕ್ರಿಯೆಯನ್ನು ಇದೇ ಆಯಾಮದಲ್ಲಿ ಊಹಿಸಿಕೊಳ್ಳಬಹುದು. ಹೀಗೆ ಯಾವುದೋ ಘನೋದ್ದೇಶದಿಂದ ಉದ್ದೀಪಿತಗೊಂಡ ಸೃಷ್ಟಿಕ್ರಿಯೆ, ನಿರಂತರವಾಗಿ ನಡೆದುಕೊಂಡು ಬಂದಿದೆ – ನಮ್ಮೆಲ್ಲರನ್ನೂ ಅದರ ಪಾತ್ರಧಾರಿಗಳನ್ನಾಗಿಸಿಕೊಂಡು. ಅದರ ಗಮ್ಯಾಗಮ್ಯದ ಸ್ಪಷ್ಟ ಅರಿವಿರದಿದ್ದರು, ಈ ಮಹಾನ್ ಕಾರ್ಯದ ಭೂಮಿಕೆಯಲ್ಲಿ ನಮ್ಮ ಪಾತ್ರ ನಿಭಾಯಿಸಲು ನಾವು ಸಿದ್ಧರಾಗಬೇಕು. ಹಾಗೆ ಪಾತ್ರಧಾರಿಗಳಾಗಿ ಪಯಣ ಹೊರಟಾಗ ಸಿಕ್ಕುವ ಅವಕಾಶದಲ್ಲಿ, ಆ ವಿಶಾಲ ಚೌಕಟ್ಟಿನ ಪರಿಧಿಯನ್ನು ಎಟುಕಿದಷ್ಟು ಗ್ರಹಿಸಿ, ಅದರೊಳಗಿನ ಮಿತಿಗಳನ್ನೆಲ್ಲ ಸಾಮರ್ಥ್ಯಕ್ಕನುಗುಣವಾಗಿ ಅಧಿಗಮಿಸಿ, ತನ್ಮೂಲಕ ಸೃಷ್ಟಿಯ ನಿಗೂಢತೆಯನ್ನು (ಅರ್ಥಾತ್ ನಮ್ಮನ್ನು ನಾವೇ) ಅರಿತುಕೊಳ್ಳುತ್ತಾ ಹೋಗಬೇಕು – ಎಷ್ಟಾದರೆ ಅಷ್ಟು. ಅರಿಯಲಾಗದ ಸಂಕೀರ್ಣತೆಯನ್ನು ಅರಿವಿಗೆಟುಕುವ ಸರಳ ಸತ್ಯಗಳ ನೆಲೆಗಟ್ಟಿನಲ್ಲಿ ಮನನ ಮಾಡಿಕೊಂಡರೆ ಈ ಇಹದ ಬದುಕು ಸುಗಮವಾದೀತು ಎನ್ನುವುದಿಲ್ಲಿನ ಸರಳ ಸಂದೇಶ .

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

(ಚಿತ್ರ : ವಿಕಿಪಿಡಿಯಾ)

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s