02042. ನಾಕುತಂತಿಯೊಂದು ಸಾಲು – ೭


02042. ನಾಕುತಂತಿಯೊಂದು ಸಾಲು – ೭
________________________________

ಏಳನೇ ಸಾಲು : ಸಲಿಗೆಯ ಸುಲಿಗೆಯ ಬಯಕೆಯ ಒಲುಮೆ ಬಯಲಿನ ನೆಯ್ಗೆಯ ಸಿರಿಯುಡುಗಿ.


________________________________________________________________

ಸಲಿಗೆಯ ಸುಲಿಗೆಯ – ಸಲಿಗೆಯಿದ್ದ ಕಡೆ ಬಲವಂತದಿಂದಾದರೂ ಬೇಕಿದ್ದ ಪಡೆಯುವ ;
– ‘ಸುಲಿಗೆಯೆನಿಸುವ ಮಟ್ಟದ ಅಪೇಕ್ಷೆಯನ್ನು ಕೂಡ’ ತನ್ನ ಹಕ್ಕು ಎನ್ನುವಂತೆ ಪಡೆದೇ ತೀರುವಷ್ಟು ಸಲಿಗೆ.
(ಆ ಸಲಿಗೆಯೆಂತದ್ದೆಂದರೆ, ಸುಲಿಗೆಯೂ ಸುಲಿಗೆಯೆನಿಸದೆ ಸಹಜವೆನಿಸುವಂತೆ ತೋರಿಕೊಳ್ಳುವುದು)

ಸಲಿಗೆಯ ಸುಲಿಗೆಯ ಬಯಕೆಯ – ಬೇಕಿದ್ದ ಬಯಕೆಯನು ಬಲವಂತದಿಂದಲಾದರೂ ಪಡೆದೇ ತೀರುವ ಸ್ವೇಚ್ಛೆ, ಸಲಿಗೆ
(ತನಗದೆಷ್ಟು ಸಲಿಗೆಯಿದೆ ಎನ್ನುವುದನ್ನು ಹೆಮ್ಮೆಯಿಂದ, ಬಿಂಕದಿಂದ ತೋರ್ಪಡಿಸಿಕೊಳ್ಳುವ ಬಯಕೆ )

‘ಸಲಿಗೆಯ ಸುಲಿಗೆಯ ಬಯಕೆಯ’ ಒಲುಮೆ – ಒಲುಮೆ (ಯೆಂಬ ನವಿರಾದ, ಸೌಮ್ಯಭಾವ) ತನಗಿರುವ ಸಲಿಗೆಯಲ್ಲಿ, ತಾನು ಬಯಸಿದ್ದನ್ನು ಪಡೆದೇ ಪಡೆವ ಹಠದಲ್ಲಿ (ಆಸೆ, ಬಯಕೆಯಲ್ಲಿ) ಹೊರಟ ಭಾವ.
(ಆ ಸಲಿಗೆಯ ಸುಲಿಗೆಯ ಬಯಕೆ ಇರುವುದು ಯಾರಲ್ಲಿ ? – ಒಲುಮೆಯಲ್ಲಿ )

ಒಲುಮೆ ಬಯಲಿನ : ಮನದ ಒಲವೆಂಬ ವಿಶಾಲ ಆಕಾಶದಂತಹ ಬಯಲಿನಲ್ಲಿ..

ಸಿರಿಯುಡುಗಿ (1) – ಆ ಚಾತುರ್ಯದ ಮುಂದೆ ಮಿಕ್ಕೆಲ್ಲಾ ತರದ ಸಿರಿಯು ಸ್ಪರ್ಧಿಸಲಾಗದೆ ಉಡುಗಿಹೋಗಿ..
ಸಿರಿಯುಡುಗಿ (2) – ಆ ಚತುರ ಕಲೆಯಲ್ಲಿ ನಿಷ್ಣಾತೆಯಾದ, ಅದನ್ನೇ ಉಡುಗೆಯಂತೆ ತೊಟ್ಟ..(ಸಿರಿ + ಉಡುಗೆ / ಉಡುಗಿ)

ಬಯಲಿನ ನೆಯ್ಗೆಯ – ಬಯಲಿನಲ್ಲಿ ಇರುವ, ಕಣ್ಣಿಗೆ ಸುಲಭದಲ್ಲಿ ಗೋಚರಿಸದ (ಜೇಡ ನೇಯ್ದ) ಬಲೆ.

ಬಯಲಿನ ನೆಯ್ಗೆಯ ಸಿರಿಯುಡುಗಿ (1) – ಕಣ್ಣಿಗೆ ಕಾಣಿಸದಂತೆ, ಅರಿವಿಗೆ ನಿಲುಕದಂತೆ ಚಾಣಾಕ್ಷತೆ, ಜಾಣ್ಮೆಯಿಂದ ಸುತ್ತಲೂ ಒಲವಿನ ಬಲೆಯನ್ನು ನೇಯ್ದು, ಬಲೆಗೆ ಬೀಳಿಸಿಕೊಳ್ಳುವ ಚತುರೆ;
ಬಯಲಿನ ನೆಯ್ಗೆಯ ಸಿರಿಯುಡುಗಿ (2) – ಬಯಲಲಿ ನೇಯ್ದ ಹೊಳೆವ ಸಿರಿ ಬಲೆಯನ್ನೇ ಉಡುಗೆಯಂತೆ ತೊಟ್ಟ..
________________________________________________________________

ನನ್ನ ಟಿಪ್ಪಣಿ:

(ಸಲಿಗೆಯ ಸುಲಿಗೆಯ ಬಯಕೆಯ ಒಲುಮೆ ಬಯಲಿನ ನೆಯ್ಗೆಯ ಸಿರಿಯುಡುಗಿ;)

ಸಲಿಗೆಯ ಸುಲಿಗೆಯ ಬಯಕೆಯ ಒಲುಮೆ:

ಸಲಿಗೆಯಿಂದ ಸುಲಿಗೆ ಮಾಡಬಯಸುವ ಬಯಕೆಯನ್ನು ಹೊತ್ತುಕೊಂಡು ಬಂದಿರುವ ಸೌಮ್ಯರೂಪಿ ಒಲುಮೆ. ಇಲ್ಲಿ ಒಲುಮೆ ಎಂದಾಗ ಮೂಡುವ ಭಾವ ಮೃದುಲ. ಒಲುಮೆಯಿದ್ದ ಕಡೆ ಪರಸ್ಪರರಲ್ಲಿ ಸಲಿಗೆಯಿರುವುದು ಸಹಜ ತಾನೇ ? ಇಲ್ಲಿ ಒಲುಮೆ ಕೂಡ ಒಂದು ರೀತಿ ಸೌಮ್ಯರೂಪದ ಪ್ರತೀಕವೇ. ಆದರೆ ಇದು ಕೇವಲ ಪಟ್ಟಕದ ಒಂದು ಮುಖ ಮಾತ್ರವಷ್ಟೇ. ನವಿರು ಭಾವದ ಸೌಮ್ಯರೂಪ ಒಂದು ತುದಿಯಾದರೆ, ಅದನ್ನು ಸರಿದೂಗಿಸುವ ಸಲುವಾಗಿ ಮತ್ತೊಂದು ತುದಿಯಲ್ಲಿ ತುಸು ಒರಟುತನದ ಭಾವ ಕಾಣಿಸಿಕೊಳ್ಳುತ್ತದೆ – ಸುಲಿಗೆ ಮತ್ತು ಬಯಕೆ ಎನ್ನುವ ಪದಗಳ ಬಳಕೆಯಲ್ಲಿ. ಒಲುಮೆಯ ಸಲಿಗೆಯಿರದಿದ್ದಾಗ ಇಬ್ಬರು ವ್ಯಕ್ತಿಗಳು ತಮ್ಮ ನಡುವೆ ಒಂದು ಗೌರವ ಸರಿದೂರವನ್ನು ಏರ್ಪಡಿಸಿಕೊಂಡು , ಮಿತಿ ಕಾಯ್ದುಕೊಳ್ಳುವುದರಿಂದ ಅದು ಬಯಕೆಯ ಮತ್ತಾವ ಸ್ತರಕ್ಕೂ ವಿಸ್ತರಿಸಿಕೊಳ್ಳುವುದಿಲ್ಲ. ಆದರೆ, ಆ ಬಂಧವಿದ್ದವರ ನಡುವೆ ಸಲಿಗೆಯು ವಿಸ್ತರಿಸಿಕೊಳ್ಳುತ್ತ ಬಯಕೆಯ ರೂಪ ತಾಳುವುದು ಸಹಜವೇ.

ಕೆಲವೊಮ್ಮೆ ಬಯಕೆಯ ತೀವ್ರತೆ ತನ್ನ ಹದ್ದು ಮೀರಿ ಸುಲಿಗೆಯ ಮಟ್ಟಕ್ಕೂ (ತುಸು ಬಲವಂತದಿಂದ ಬೇಕಾದ್ದನ್ನು ಪಡೆಯುವ ಮಟ್ಟ) ಏರಿಬಿಡುವುದು ಅಪರೂಪವೇನಲ್ಲ. ಸೌಮ್ಯ-ಸಾತ್ವಿಕ ಪ್ರೇಮದ ಭಾವ ಅಧಿಕಾರಯುತ ಕಾಮನೆಯ ಒರಟುತನಕ್ಕೆ (ಸುಲಿಗೆಗೆ) ಹವಣಿಸಿ, ಅದನ್ನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗುವುದು ಆ ಸಲಿಗೆಯ ಮತ್ತೊಂದು ಮುಖ. ಸೃಷ್ಟಿಕಾರ್ಯದ ಹಿನ್ನಲೆಯಲ್ಲಿ ನೋಡಿದಾಗ, ಇದು ಮಿಥುನದ ಕಾಮನೆಯನ್ನು ಪೂರ್ಣಗೊಳಿಸಲು ಹೊರಟ ರತಿಯಾತ್ರೆಯ ಮುನ್ನುಡಿಯಂತೆ ಕಾಣುತ್ತದೆ. ಒಲುಮೆಯ ಸಲಿಗೆ ಸ್ವೇಚ್ಛೆಯಾಗಿ, ಆ ಸ್ವೇಚ್ಛೆಯ ಹಕ್ಕನ್ನು ಬಳಸಿಕೊಂಡು ತನ್ನಿಚ್ಛೆ ಬಂದಂತೆ ಸುಲಿಗೆ ಮಾಡಲ್ಹೊರಡುವ ಬಯಕೆಯನ್ನೇ ಮಿಥುನದ ಕಾಮನೆ ಎಂದು ಅರ್ಥೈಸಬಹುದು. ಒಂದೆಡೆ ಇದು ಸಲಿಗೆಯನ್ನು ದುರುಪಯೋಗ ಪಡಿಸಿಕೊಂಡ ಭಾವವಾದರೆ ಮತ್ತೊಂದೆಡೆ ಆ ಸಲಿಗೆ ಹೇಗೆ ಕಾಠಿಣ್ಯವನ್ನು ಸಡಿಲಿಸಿ ಮಧುರಾನುಭವದ ಸುಲಲಿತ ಸುರತವಾಗಿಸುತ್ತದೆ, ತನ್ಮೂಲಕ ಸೃಷ್ಟಿಗೆ ನಾಂದಿ ಹಾಡುವ ಕಾರ್ಯದಲ್ಲಿ ತನ್ನ ಕೈ ಜೋಡಿಸುತ್ತದೆ ಎನ್ನುವುದು ಗಮನೀಯ ಅಂಶ.

ಇದನ್ನೇ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ – ಒಲುಮೆಯೆನ್ನುವುದು ಕಾಡುವ ಬಯಕೆಯಾದಾಗ, ಪರಸ್ಪರ ಸಲಿಗೆಯ ಗೌರವ ಭಾವ ತನ್ನ ಬೇಲಿಯ ಮಿತಿ ದಾಟಿ ಸಂಗಾತಿಯ ಸುಲಿಗೆಯ ಮಟ್ಟಕ್ಕೂ ಹೋಗಿಬಿಡುತ್ತದೆ – ತನ್ನ ಬಯಕೆಯ ಪೂರೈಕೆಗಾಗಿ. ತನ್ನ ಸಂಗಾತಿಯಲ್ಲಿರುವ ಸಲಿಗೆ ಆ ಮಟ್ಟಿಗಿನ ಸ್ವೇಚ್ಛೆಯನ್ನು ನೀಡುತ್ತದೆಯೆನ್ನುವ ಇಂಗಿತ ಒಂದೆಡೆಯಾದರೆ, ಬಯಕೆಯ ತೀವ್ರತೆ ಯಾವ ಮಟ್ಟಕ್ಕೂ ಉದ್ದೀಪಿಸಿಬಿಡಬಹುದೆನ್ನುವ ಭಾವ ಮತ್ತೊಂದೆಡೆ. ಕಾವ್ಯಾವತಾರದಲ್ಲಿ, ಆವರಿಸಿಕೊಂಡ ಕಾವ್ಯದೇವಿಯ ಸ್ಫೂರ್ತಿಯ ಆವಾಹನೆ-ಪ್ರೇರಣೆಯಾದಾಗಲೂ, ಇಂಥದ್ದೇ ಸಲಿಗೆ ಭಾವೋತ್ಕರ್ಷದ ಸುಲಿಗೆ ಮಾಡಿ ಕಾವ್ಯಕನ್ನಿಕೆಯ ಸೃಷ್ಟಿಗೆ ಕಾರಣೀಭೂತವಾಗುತ್ತದೆಯೆನ್ನುವುದು ಇದೇ ಆಯಾಮದ ಮತ್ತೊಂದು ಮಜಲು.

ಬಯಲಿನ ನೆಯ್ಗೆಯ ಸಿರಿಯುಡುಗಿ

ಪ್ರಕೃತಿಯ ಸಾಕಾರ ರೂಪಾದ ಹುಡುಗಿಯಾದರೋ, ಬಯಲಿನಲ್ಲಿ ಕಣ್ಣಿಗೆ ಕಾಣದ ಜೇಡರ ಬಲೆಯ ನೇಯ್ಗೆಯಂತಹ ಸಂಕೀರ್ಣ ಮನಸ್ಸಿನವಳು. ಆ ಬಲೆಯ ಹಾಗೆಯೆ ಬರಿಯ ಕಣ್ಣಿಗೆ ಗೋಚರವಾಗದ ಅವಳ ಮನಸಿನ ಭಾವನೆ, ತಾಕಾಲಾಟಗಳು ಬೆಳಕಿನ ಕೋಲೊಂದರಡಿ ಫಕ್ಕನೆ ಮಿಂಚಿ ಮಾಯವಾಗುವ ಅದೇ ಬಲೆಯ ತೆಳ್ಳನೆ ಎಳೆಗಳಂತೆ, ಅವಳ ಕಣ್ಣಿನ ಕಾಂತಿಯಾಗಿ ಮಿಂಚಿ ಮಾಯವಾಗುತ್ತಿವೆ – ಅದೇನೆಂದು ಗ್ರಹಿಸಲು ಬೇಕಾದ ಬಿಡುವನ್ನೂ ನೀಡದೆ. ಅವಳಲ್ಲಿ ಅವಳದೇ ಆದ ಗೊಂದಲ, ಸಂಶಯ, ಸೌಂದರ್ಯ, ಲಾವಣ್ಯ, ಹೆಮ್ಮೆ ಇತ್ಯಾದಿಗಳ ಸಿರಿಯೆ ತುಂಬಿಕೊಂಡಿದೆ. ಆ ಗೊಂದಲದಲ್ಲಿ ಸಿಕ್ಕವಳ ಅರೆಬರೆ ಮನದ ಸಲಿಗೆಯನ್ನು ಸುಲಿಗೆ ಮಾಡಿ ತಾನು ಬಯಸಿದ್ದನ್ನು ತನ್ನದಾಗಿಸಿಕೊಳ್ಳುವ ಹುನ್ನಾರ – ಒಲುಮೆಯು ಗುಟ್ಟಿನಲ್ಲಿ ಪೋಷಿಸುತ್ತಿರುವ ಪುರುಷರೂಪಿಯದು. ಅದೇ ರೀತಿ, ತಾನು ಬಯಸಿದ ಪುರುಷನಲ್ಲಿ, ಇಂತಹ ಬಯಕೆ-ಕಾಮನೆ ಹೊತ್ತುಬರುವ ಹುಡುಗಿಯಾದರೂ (ಕಾವ್ಯ ಸೃಷ್ಟಿಯಲ್ಲಿ – ಕಾವ್ಯ ಕನ್ನಿಕೆಯಾದರೂ) ಎಂತಹವಳು ? ಎಂದರೆ ಸಿಗುವ ಉತ್ತರ ‘ಬಯಲಿನ ನೆಯ್ಗೆಯ ಸಿರಿಯುಡುಗಿ’… ಅದೆಂತಹ ಸಿರಿಯುಡುಗಿ ಎನ್ನುವುದನ್ನ ಕೆಳಗೆ ನೋಡೋಣ.

ಬಯಲೆಂದರೆ ವಿಶಾಲವೆಂದು (ಅಂತಹ ವಿಶಾಲವಾದ ಅಥವಾ ಅರ್ಥಮಾಡಿಕೊಳ್ಳಲಾಗದ ಚಂಚಲತೆಯುಳ್ಳ ಅಗಾಧ ವಿಸ್ತಾರವಿರುವ ಮನಸ್ಸತ್ತ್ವದ ರೂಪವೆಂದು) ಅರ್ಥೈಸಬಹುದು. ಬಯಲಲ್ಲಿ ನೆಯ್ಗೆಯೆಂದರೆ ಬಯಲಲ್ಲಿ ಕಂಡೂ ಕಾಣದ ಹಾಗೆ ಬಲೆ ಕಟ್ಟುವ ಜೇಡರ ಬಲೆ ಎನ್ನಬಹುದು. ತನ್ನ ಕಾರ್ಯಸಾಧನೆಗೆ, ಪುರುಷ-ಸಂತೃಪ್ತಿಯ ಹುನ್ನಾರ ಹೂಡಿ ಆ ನೆಪದಲ್ಲೇ ಗಂಡನ್ನು ವಶೀಕರಿಸಿಕೊಂಡುಬಿಡುವ ಯೋಜನೆಯಲ್ಲಿ ನೇಯ್ದ ಬಲೆಯದು. ಯಾರ ಕಣ್ಣಿಗೂ ಸುಲಭದಲ್ಲಿ ಕಾಣದ, ಸೂಕ್ತಯೋಜನೆಯ ಬಲೆಯನ್ನು ರೂಪಿಸಿಕೊಂಡೆ ಸನ್ನದ್ಧಳಾಗಿ ಬರುವ ಹುಡುಗಿಯೆಂದು ಕೂಡ ನಿಷ್ಪತ್ತಿಸಬಹುದು. ಮತ್ತೊಂದು ಅರ್ಥದಲ್ಲಿ, ಆ ಬರುವ ಆವೇಗ, ಅವಸರ ಹೇಗಿರುತ್ತದೆಯೆಂದರೆ, ಬರುವ ದಾರಿಗಡ್ಡವಾಗಿರುವ ಕಂಡೂ ಕಾಣಿಸದ ಅಡ್ಡಿ ಆತಂಕಗಳ (ಬಯಲಿನ ನೆಯ್ಗೆಯ / ಬಲೆಯ ರೂಪದಲ್ಲಿರುವ) ಸತ್ವವು ಉಡುಗಿಹೋಗುತ್ತದೆಯಂತೆ! ಕಾವ್ಯದ ಸ್ಫೂರ್ತಿ ಹರಿದುಬಂದಾಗಲೂ, ಏನೆಲ್ಲಾ ಅಡ್ಡಿಆತಂಕಗಳಿದ್ದರು ಅದನ್ನಧಿಗಮಿಸಿ ಬರುವ ಕಾವ್ಯದೇವಿಯ ಲಾಸ್ಯಕ್ಕೂ ಇದನ್ನು ಪ್ರತೀಕವಾಗಿ ಬಳಸಬಹುದು.

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

(Picture : Wikipedia)