02042. ಗಹನ ಪ್ರಶ್ನೋತ್ತರ ಸಮಯ..


02042. ಗಹನ ಪ್ರಶ್ನೋತ್ತರ ಸಮಯ..
______________________________


ನಾ ಮಾಡಿದ ತಪ್ಪುಗಳಿಗಾಗುತ್ತಿದೆಯೇ ಶಿಕ್ಷೆ?
ಅನುಭವಿಸು ಮಾತಿಲ್ಲ, ಮತ್ತೆ ಬೇಡದೆ ಭಿಕ್ಷೆ.

ನಾನರಿತಿರಲಿಲ್ಲ ತಪ್ಪೆಂದು, ಆದರೇಕೀ ಘೋರ?
ಅರಿತು ಮಾಡಿದ್ದರಿರುತ್ತಿತ್ತು ಇನ್ನೂ ಅಪಾರ.

ಬರಿ ತಪ್ಪ ಗಣನೆ ಸರಿಯೇ, ಬಿಟ್ಟು ಸರಿಯ ?
ಸರಿಗೆ ಕೊಟ್ಟ ಬಹುಮಾನ ನೋಡದು ಹೃದಯ.

ಆದರಿದು ಸರಿಯಲ್ಲ, ನಾನವನ ಕೈಗೊಂಬೆ ತಾನೆ ?
ಗೊಂಬೆಯಂತರಂಗದ ಬುದ್ಧಿ ನಿನ್ನದೆ ಕ್ರಿಯೆ, ನಿನ್ನ ಭಾವನೆ.

ಅವನದಿಲ್ಲವೆ ಹೊಣೆ, ಸೃಷ್ಟಿಕರ್ತ ಅವ ತಾನೆ ?
ಅದಕೆ ಕೊಟ್ಟ ಎಲ್ಲರಿಗು ಚಿಂತನೆ-ಆಲೋಚನೆ-ವಿವೇಚನೆ.


ಮಾಡಿದನೇಕಿಂತು, ಮಾಡಬಹುದಿತ್ತಲ್ಲವೇ ಪೂರ್ವ ನಿಶ್ಚಿತ?
ಮಾಡಿದ್ದರಾಗುತ್ತಿತ್ತು ಯಂತ್ರ ರಸವಿಲ್ಲದ ಪಂಚಭೂತ.

ಮತ್ತೇನಿಲ್ಲವೇ ದಾರಿ, ಬರಿ ಸಂಕಟ ಅನುಭವಿಸೊ ಹೃದಯ ?
ಕಾಯುತ್ತಿರು ಸಹನೆಯಲಿ ತೀರುವ ತನಕ ತಾಪ’ತ್ರಯ’.

ತೀರುವುದೆನ್ನುವೆಯ ಬದುಕಲಿ, ಬದುಕು ಮುಗಿವುದರೊಳಗೆ?
ಖಚಿತ ತೀರುವುದು ಉಚಿತ, ದೊರಕೊ ಮುಕ್ತಿ ಸಾವೊಳಗೆ.

ಕೊನೆಗೂ ಸಾವಾದರೆ ಉತ್ತರ, ಬದುಕಬೇಕಾದರು ಏಕೆ ?
ಸಾವಲ್ಲ – ಸಿದ್ಧತೆ ಮುಂದಿನ ಹಂತಕೆ, ಬದುಕೂ ಮಂಕೆ.

ಏನೋ ಅಯೋಮಯದುತ್ತರ ಅರಿವಾಗುತ್ತಿಲ್ಲವಲ್ಲ ವಿಚಾರ?
ಬಿಟ್ಟುಬಿಡೆಲ್ಲಾ ಕರ್ಮಕೆ, ಜೋತುಬಿದ್ದರೆ ತಾನೇ ಪರಿಹಾರ.


– ನಾಗೇಶ ಮೈಸೂರು
(Picture from Creative common