02043. ನಾಕುತಂತಿಯೊಂದು ಸಾಲು – ೮


02043. ನಾಕುತಂತಿಯೊಂದು ಸಾಲು – ೮


ನಾಡಿಯ ನಡಿಗೆಯ ನಲುವಿನ ನಾಲಿಗೆ ನೆನೆದಿರೆ ಸೋಲುವ ಸೊಲ್ಲಿನಲಿ
____________________________________________________________
ನಾಡಿಯ – ನರನಾಡಿ, ರಕ್ತ ನಾಡಿ
ನಡಿಗೆಯ – ಚಲನೆ
ನಾಡಿಯ ನಡಿಗೆ – ನಾಡಿಯಲ್ಲಿರುವ ನಡಿಗೆ ಅರ್ಥಾತ್ ನಾಡಿಯಲ್ಲಿ ರಕ್ತದ ಚಲನೆ
ನಲುವಿನ – ನಲಿಯುವ, ಸುಲಲಿತವಾಗಿ ಆಡುವ, ಸಂತಸದ
ನಲುವಿನ ನಾಲಿಗೆ – ಎಲುಬಿಲ್ಲದ, ನುಲಿಯಬಲ್ಲ, ನಲಿಯಬಲ್ಲ ನಾಲಿಗೆ; ನಾಲಿಗೆಯಂತೆ ಚಾಚಿಕೊಂಡು ಉದ್ದವಾಗಬಲ್ಲ..
ನೆನೆದಿರೆ – ಒದ್ದೆಯಾಗುವಿಕೆ, ನೆನಪಾಗುವಿಕೆ
ಸೋಲುವ ಸೊಲ್ಲಿನಲ್ಲಿ – ಸೋಲುವ ಭೀತಿಯಲ್ಲಿ, ಸೋಲುವ ದನಿಯಲ್ಲಿ, ಸೋತು ಗೆಲ್ಲುವಾಟ
_____________________________________________________________

ನಾಕುತಂತಿಯ ಎಂಟನೇ ಸಾಲು – ನನ್ನ ಟಿಪ್ಪಣಿ:

(ನಾಡಿಯ ನಡಿಗೆಯ ನಲುವಿನ ನಾಲಿಗೆ ನೆನೆದಿರೆ ಸೋಲುವ ಸೊಲ್ಲಿನಲಿ)

ನನ್ನ ಮಟ್ಟಿಗೆ ಇದೊಂದು ತೀರಾ ಅರ್ಥ ಗರ್ಭಿತ ಸಾಲು. ಪ್ರತಿಬಾರಿಯೂ ಓದಿನಲ್ಲೂ ವಿಭಿನ್ನಾರ್ಥ ಹೊರಡಿಸಿ ಕಾಡಿದ ಪದಪುಂಜಗಳಿವು. ಇದನ್ನು ಸೃಷ್ಟಿಕ್ರಿಯೆಯೆ ಎರಡು ಸೃಜನಾತ್ಮಕ ಆಯಾಮಗಳಲ್ಲಿ ಅರ್ಥೈಸಲು ಯತ್ನಿಸೋಣ. ಮೊದಲಿಗೆ ಕಾವ್ಯಸೃಷ್ಟಿಯೊಂದರ ಹಿನ್ನಲೆಯನ್ನು ಪರಿಗಣಿಸಿ ವಿವರಿಸಲೆತ್ನಿಸುವ. ಹಿಂದಿನ ಸಾಲಿನಲ್ಲಿ ಪ್ರಕೃತಿ ಪುರುಷದ ಭಾವಗಳು ಪರಸ್ಪರ ಸಮೀಪಿಸಿ ಮಿಲನಕ್ಕೆ ಈಗಾಗಲೇ ಮುನ್ನುಡಿ ಹಾಕಿದ್ದವೆನ್ನುವುದನ್ನು ನೆನಪಿನಲ್ಲಿಟ್ಟುಕೊಂಡೇ ಮುಂದುವರೆಯುವ. ಕಾವ್ಯಸೃಷ್ಟಿಯಲ್ಲಿ ಸ್ಫೂರ್ತಿದೇವಿ ವಿಜೃಂಭಿಸಿ ಕಾವ್ಯಪುರುಷನನ್ನು ಉದ್ದೀಪಿಸಿ ಬಡಿದೆಬ್ಬಿಸಿಬಿಟ್ಟಿದ್ದಾಳೆ. ಇನ್ನು ಹುಲುಸಾದ ಸೃಜನಾತ್ಮಕ ಕಾವ್ಯಸೃಷ್ಟಿಗೆ ಇವೆರಡರ ಹದವಾದ, ಹಿತಕರ ಮಿಲನವಾಗಬೇಕು. ಸ್ಫೂರ್ತಿದೇವಿಯ ಉಲ್ಲಾಸ, ಉತ್ಸಾಹಗಳು ಕಾವ್ಯಪುರುಷನಲ್ಲಿನ ಭಾವೋತ್ಕರ್ಷಕ್ಕೆ ಇಂಬುಗೊಟ್ಟು ತನ್ಮೂಲಕ ಸ್ರವಿಸುವ ಭಾವಸ್ಖಲನದಲ್ಲಿ ಕಲ್ಪನೆಯ ಲೇಖನಿಯದ್ದಿ ಕವಿತೆಯ ಆಯಾಮಕೆ ರಕ್ತ, ಮಾಂಸ, ಬೀಜಗಳನ್ನು ತುಂಬಬೇಕು.

ಆ ಭಾವೋನ್ಮಾದವಾದಾಗ ತುಂಬಿಬರುವ ಆವೇಶ ನರನಾಡಿಗಳಲ್ಲಿ ಮಿಂಚಿನಂತೆ ಪಸರಿಸಿ, ಮೈಪೂರಾ ಚಲಿಸಿ ಆವರಿಸಿಕೊಂಡು ಯಾವುದೋ ಬೇರೆ ಲೋಕಕ್ಕೆ ಒಯ್ದುಬಿಡುತ್ತದೆಯಂತೆ ಕವಿಮನಸ್ಸನ್ನ. ಈ ‘ ನಾಡಿಯ ನಡಿಗೆ’ ದಿವ್ಯಾನುಭೂತಿಯಾದಂತೆ ಮೈಮನ ತುಂಬಿಕೊಂಡಾಗ ಆ ಸಂತಸದಲ್ಲಿ, ಅನುಭಾವದಲ್ಲಿ ಪದಗಳ ತಕಧಿಮಿತಾ ನಲಿಯುತ, ಕುಣಿಯುತ ನಾಲಿಗೆಯಲ್ಲಿ ಬಂದು ಅನುರಣಿಸತೊಡಗುತ್ತವೆಯಂತೆ – ಪದ ಸಾಲಾಗುವ ಹವಣಿಕೆಯಲ್ಲಿ. ಆದರೆ ಈ ‘ನಾಲಿಗೆಯನ್ನು ನಲಿಸುವ’ ಚಲನೆಯ ವೇಗೋತ್ಕರ್ಷ ಅದೆಷ್ಟು ತೀವ್ರವೆಂದರೆ, ಹಾಗೆ ಬಂದ ಪದಗಳನ್ನು ನೆನಪಿಟ್ಟುಕೊಳ್ಳುವ ಮೊದಲೇ ಮತ್ತೊಂದು ನುಗ್ಗಿ ಬಂದು ಮೊದಲನೆಯದನ್ನು ಕೊಚ್ಚಿ ಹಾಕಿಬಿಡುವಷ್ಟು. ಹೀಗಾಗಿ, ಹೇಗಾದರೂ ಮಾಡಿ ಬಂದದ್ದರಲ್ಲಿ ಎಷ್ಟು ದಕ್ಕೀತೋ ಅಷ್ಟನ್ನು ನೆನಪಿನ ಜಾಡಿಗೆ ತುಂಬಿಟ್ಟುಕೊಳ್ಳುತ್ತ ಹೋಗಬೇಕು; ಲಾಲಾರಸದ ತೇವದಲ್ಲಿ ಒದ್ದೆಯಾದ ನಾಲಿಗೆಯಲ್ಲಿ ಅದೆಷ್ಟು ಅಂಟಿಸಿ ಹಿಡಿದಿಟ್ಟುಕೊಳ್ಳಲು ಸಾಧ್ಯವೋ, ನೆನಪಿಟ್ಟುಕೊಳ್ಳಲು ಆಗುವುದೋ ಅಷ್ಟನ್ನು ಹಿಡಿದಿಡುವ ಯತ್ನ ಮಾಡಬೇಕು. ಮನದ ಮೌನದಲ್ಲಿ ಮೂಡಿದ ಕಾವ್ಯಲಹರಿ ಏಕಾಏಕಿ ತೀವ್ರಗತಿಯಾಗುತ್ತ, ಬುದ್ಧಿಯ ದನಿಯಲ್ಲಿ (ಸೊಲ್ಲಿನಲ್ಲಿ) ಪುಂಖಾನುಪುಂಖವಾಗಿ ಪ್ರಕಟವಾಗುತ್ತಾ ಹೋಗುವಾಗ ಆ ಸ್ಖಲನದ ವೇಗ ಭರಿಸಲಾಗದೆ, ಒಂದಷ್ಟು ಕಾವ್ಯದ ಅಂಗವಾಗಿ ಉಳಿದುಕೊಂಡರೆ, ಮತ್ತೆಷ್ಟೋ ಹಿಡಿತಕ್ಕೆ ಸಿಗದೇ ಜಾರಿ ಕಣ್ಮರೆಯಾಗುವುದು ಸಹಜ ಕ್ರಿಯೆಯೇ. ಒಟ್ಟಾರೆ, ಇಡೀ ಸ್ಫೂರ್ತಿ ಮಿಥುನದ ಕ್ರಿಯೆಯಲ್ಲಿ ಅಳಿದುಳಿದ ಭಾಗಾಂಶವಷ್ಟೇ ಮೂರ್ತರೂಪ ಪಡೆದು ಕಣ್ಮುಂದೆ ನಿಲ್ಲುವುದು – ಅಂತಿಮ ಕಾವ್ಯದ ರೂಪದಲ್ಲಿ. ದಕ್ಕಿದ್ದೆಷ್ಟೋ, ಮಿಕ್ಕಿದ್ದೆಷ್ಟೋ ಎಂಬ ಜಿಜ್ಞಾಸೆ, ಅತೃಪ್ತಿಯ (ಸೋಲುವ ಸೊಲ್ಲಿನ) ಕವಿಭಾವವನ್ನು ಉಳಿಸಿಯೂ ಮಿಕ್ಕವರ ಪಾಲಿಗೆ ಅಭೂತಪೂರ್ವ ಸೃಷ್ಟಿಯಂತೆ ಕಾಣಿಸಿಕೊಳ್ಳುವ ಕವಿ-ಕಾವ್ಯ ಚಮತ್ಕಾರ ಇಲ್ಲಿನ ಪ್ರಮುಖ ಅಂಶ.

(ನಾಡಿಯ ನಡಿಗೆಯ ನಲುವಿನ ನಾಲಿಗೆ ನೆನೆದಿರೆ ಸೋಲುವ ಸೊಲ್ಲಿನಲಿ )

ಈಗ ಕಾವ್ಯ ಸೃಷ್ಟಿಯ ಬದಲು ನೈಜ ಮೈಥುನದ, ಜೀವಸೃಷ್ಟಿಯ ದೃಷ್ಟಿಕೋನದಲ್ಲಿ ಅವಲೋಕಿಸೋಣ. ಹಾಗೆ ನೋಡಿದಾಗ ಕಾಣುವ ಅದ್ಭುತ ಗೂಢಾರ್ಥ ಅವರ್ಣನೀಯ..! ಸೃಷ್ಟಿಕ್ರಿಯೆಗೆ ಮೂಲ ಬಿತ್ತನೆಯಾಗುವ ಮೈಥುನದ ಉತ್ಕರ್ಷದ ಹಂತದ ಚಿತ್ರಣವನ್ನು ಕಟ್ಟಿಕೊಡುವಂತಿದೆ ಈ ಸಾಲುಗಳ ಭಾವಾರ್ಥ. ‘ನಾಡಿಯ ನಡಿಗೆ’ ಎಂದಾಗ ಕಾಮೋತ್ತೇಜಕ ಸ್ಥಿತಿಯಲ್ಲಿ ಪ್ರಕೃತಿ, ಪುರುಷಗಳ ಉದ್ರಿಕ್ತ ಸ್ಥಿತಿಯನ್ನು ಪ್ರತಿಬಿಂಬಿಸುವ, ಆ ಗಳಿಗೆಯಲ್ಲಿ ತೀವ್ರ ರಕ್ತಚಲನೆಯಲ್ಲಿ, ವೇಗದಲ್ಲಿ ಸ್ಪಂದಿಸುವ ಕಾಮಾಂಗಗಳ ಚಿತ್ರಣ ಕಣ್ಮುಂದೆ ನಿಲ್ಲುತ್ತದೆ. ಆ ಕ್ಷಣದ ವೇಗಾವೇಗ, ನಲಿಯುತ, ನುಲಿದಾಡುವ ಪರಿ ಪುರುಷ-ಪ್ರಕೃತಿ ಇಬ್ಬರನ್ನು ಮತ್ತಷ್ಟು ಪ್ರೇರೇಪಿಸಿ ಸುಖದ, ಸೌಖ್ಯದ ಔನ್ನತ್ಯ ಶಿಖರಕ್ಕೇರಿಸಿಬಿಡುತ್ತದೆ. ಆ ಶಿಖರಾಗ್ರದ ಹಂತದಲ್ಲಿ ತಡೆಹಿಡಿದಿಟ್ಟ ಒಡ್ಡು ಹೊಡೆದಂತೆ ಒಳಗಿನದೆಲ್ಲ ದ್ರವಿಸಿ, ಸ್ರವಿಸುತ್ತ, ಸ್ಖಲನದ ಚರಮಾಂತಕ್ಕೆ ತಲುಪಿದಾಗ ಕೊನೆಗದರ ಕುರುಹಾಗಿ ಉಳಿಯುವುದು ಸ್ಖಲನದ್ರವದಲ್ಲಿ ನೆನೆದು ಒದ್ದೆಯಾದ ಅನಿಸಿಕೆ ಮಾತ್ರ. ಸ್ಖಲನದ ಅಂತಿಮ ಚಣದವರೆಗೂ ರಣೋತ್ಸಾಹದಲಿದ್ದಂತಿದ್ದ ಪುರುಷ ಸತ್ವವು, ಅದಾಗುತ್ತಿದ್ದಂತೆ, ಕಸುವೆಲ್ಲ ಕುಸಿದು ಹೋದಂತಹ, ಏನೋ ಕಳೆದುಕೊಂಡ ಭಾವದಲ್ಲಿ (ಸೋಲಿನ ಸೊಲ್ಲಿನಲ್ಲಿ, ಸೋಲಿನ ದನಿಯಲ್ಲಿ) ಚರಣ ಹಾಡುತ್ತದೆ. ಆದರೆ ಪ್ರಕೃತಿ ಸತ್ವವು ಅದಕ್ಕೆ ತದ್ವಿರುದ್ಧವಾಗಿ, ಸ್ರಾವೋತ್ತರವಾಗಿ ಏನೋ ಪಡೆದುಕೊಂಡ ಹಿಗ್ಗಲಿ ನಲಿಯುತ್ತದೆ; ಸ್ರಾವದ ಜಲಪಾತದಡಿ ಸಿಕ್ಕಿ ಅಂತರ್ನಾಲಿಗೆಯೆಲ್ಲಾ ಏನೋ ತುಂಬಿಕೊಂಡಂತಹ ಮಾರ್ದವತೆಯಲ್ಲಿ ನೆನೆದು ಒದ್ದೆಯಾಗಿ, ಆ ಹಿಗ್ಗು ಸಿಗ್ಗಲೇ ಖುಷಿಯಿಂದ ನಲಿವ ಅನುಭೂತಿಗೊಳಗಾಗುತ್ತದೆ.

ಈ ಸಾಲನ್ನು ಮಿಥುನದ ಪರಿಭಾಷೆಯಲ್ಲಿ ಹಿಂದಿನ ಸಾಲಿನ ಜತೆ ಸಮೀಕರಿಸುತ್ತ ಮತ್ತೊಂದು ರೀತಿಯಲ್ಲಿ ಅವಲೋಕಿಸಿದರೆ: ಪುರುಷದಲ್ಲಿ ಸಾಧು ಗೋವಿನ ರೂಪದಲ್ಲಿದ್ದ ಕೊಡುಗೆ (ಸೃಷ್ಟಿಯ ಕಾರಣಕರ್ತ ಜಡಬೀಜರೂಪಿ – ಅರ್ಥಾತ್ ವೀರ್ಯ), ಅದೆಲ್ಲಿಂದಲೋ ಅಪಾರ ಶಕ್ತಿಯನ್ನು ಒಗ್ಗೂಡಿಸಿಕೊಂಡು, ಬೆಡಗಿನಿಂದ , ಉದ್ರೇಕದಿಂದ (ನಡುಗುತ್ತ), ವೇಗದಿಂದ ಬರತೊಡಗುತ್ತಾಳೆ. ಒಲುಮೆಯಿಂದ ಪ್ರೇರೇಪಿತವಾದ ಕಾಮನೆ, ತನಗಿರುವ ಸಲಿಗೆಯನ್ನು ಬಳಸಿಕೊಂಡು ಒತ್ತಾಯಪೂರ್ವಕ ಸುಲಿಗೆಗಾದರು ಸರಿಯೇ – ಎಂದು ಮುನ್ನುಗ್ಗುತ್ತದೆ. ಆ ಆವೇಗಕ್ಕೆ ಹೆಣ್ಣಿನಲ್ಲಿ ಬಯಲಿನ ನೇಯ್ಗೆಯಂತಿದ್ದ (ಜೇಡರಬಲೆಯಂತಹ ಅಡೆತಡೆಗಳನ್ನು ನಿರ್ಮಿಸಿಕೊಂಡಿರುವ) ಬಲೆಗಳೆಲ್ಲ ಚದುರಿಹೋಗಿ ಸೋತು ಶರಣಾಗತವಾಗಿಬಿಡುತ್ತದೆ – ಆ ಆವಾಹನೆಗೆ ವೇದಿಕೆಯಾಗುತ್ತ.

ನಾಡಿಯ ಎಂಬಲ್ಲಿ ‘ನರನಾಡಿಯ’ ಪ್ರಸ್ತಾಪವನ್ನು ಊಹಿಸಿಕೊಳ್ಳಬಹುದು. ನಡಿಗೆ ಎಂದಾಗ ನಾಡಿಯಲ್ಲುಂಟಾಗುವ ನಡಿಗೆ ಎಂದು ಅರ್ಥೈಸಿದರೆ ಆನಂದ, ಸಂಭ್ರಮಗಳಿಂದ ಉಂಟಾದ ಉದ್ವಿಗ್ನ, ಉದ್ರೇಕಿತ ಸ್ಥಿತಿಯೆಂದೂ ಪ್ರಕ್ಷೇಪಿಸಬಹುದು; ಆ ಸ್ಥಿತಿಯಲ್ಲಿ ರಕ್ತಪರಿಚಲನೆಯಲ್ಲುಂಟಾಗುವ ಉದ್ರಿಕ್ತ ಸ್ಥಿತಿಯನ್ನು ಕೂಡ ಭಾವಿಸಿಕೊಳ್ಳಬಹುದು. ಈ ಸಂಭ್ರಮದ ನಲುವಿನ ಸ್ಥಿತಿ ತಾರಕಕ್ಕೇರಿದಾಗ ಅದರ ಅಂತಿಮದಲ್ಲಿರುವ ನಾಲಿಗೆ (ಪುರುಷತ್ವದ ಮದನಾಂಗ ಅಥವಾ ಪ್ರಕೃತಿ ತತ್ವದ ಮರ್ಮಾಂಗವೆಂದು ಊಹಿಸಿಕೊಂಡು) ಸುಖ ಸ್ಖಲನದಲ್ಲಿ ನೆನೆದು (ನೆನೆದಿರೆ) ಒದ್ದೆಯಾಗುತ್ತದೆ – ಕಡೆಗೆ ತನ್ನನ್ನೇ ಕಳೆದುಕೊಂಡು ಸೋತುಹೋಗುವ ದನಿ ಹೊರಡಿಸುತ್ತಾ. ಮಿಥುನ ನಿರತ ಪುರುಷವು ಭೋರ್ಗರೆತದಲಿ ಕೊನೆಗೆ ತನ್ನೆಲ್ಲ ರೋಷಾವೇಶವನ್ನು ಕಳೆದುಕೊಂಡು ಸಂತೃಪ್ತ ಸೋಲಿಗೆ ಶರಣಾಗುವುದು – ಇದರ ಭಾವ (ಪುರುಷವು ಪ್ರಕೃತಿಯಲ್ಲಿ ಮಿಳಿತವಾಗಿ, ಅಂತಿಮವಾಗಿ ವೀರ್ಯವನ್ನು ತ್ಯಜಿಸಿ ಸಂತೃಪ್ತಿಯಲಿ ಸೋತು ಒರಗುವ ಹಾಗೆ).

ಇದು ನಿಜಕ್ಕೂ ಕವಿಮನದೇ ಮೂಡಿದ್ದ ಮೂಲಭಾವವೇ? ಅಥವಾ ಈ ಸಾಲು ಕಾಕತಾಳೀಯವಾಗಿ ಹೊರಡಿಸುತ್ತಿರುವ ವಿಭಿನ್ನ ದನಿಯೇ? ಅಥವಾ ಎರಡೂ ಅಲ್ಲದ ಕೇವಲ ನನ್ನ ತಪ್ಪುಗ್ರಹಿಕೆಯ ವಿಶ್ಲೇಷಣೆಯೇ ? ಎಂದು ಖಚಿತವಾಗಿ ಹೇಳುವ ಸಾಮರ್ಥ್ಯ, ಪಾಂಡಿತ್ಯ ನನ್ನಲಿಲ್ಲ. ಸರಿಯೋ, ತಪ್ಪೋ, ನಾನು ಅರ್ಥೈಸಿದ ಬಗೆ ಹೀಗೆ – ಎಂದಷ್ಟೇ ಹೇಳಿಕೊಳ್ಳಬಲ್ಲೆ 🙂

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

(Picture : Wikipedia)