02046. ನಾಕುತಂತಿಯೊಂದು ಸಾಲು – ೯


02046. ನಾಕುತಂತಿಯೊಂದು ಸಾಲು – ೯


(ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ ಜೇನಿನ ಥಳಿಮಳಿ ಸನಿಹ ಹನಿ)

ಈ ಸಾಲಿಗೆ ಕೂಡ ಅದೆಷ್ಟೋ ವಿಭಿನ್ನಾರ್ಥಗಳ ಸಾಧ್ಯತೆ ಕಾಣಿಸುತ್ತಿದೆ. ಮೊದಲಿಗೆ ಇದರ ನೇರ, ಸರಳ ಸಾಧ್ಯತೆಯನ್ನು ಗಮನಿಸೋಣ. ಈ ಸಾಲಿನಲ್ಲಿ ಜೇನಿನ ಪ್ರಸ್ತಾಪ ಬಂದಿರುವುದರಿಂದ ಅದಕ್ಕೆ ಪೂರಕವಾಗಿಯೇ ಮೊದಲು ಅರ್ಥೈಸೋಣ – ಪದಪದವಾಗಿ.

‘ಮುಟ್ಟದ’ ಎಂದರೆ ಮುಟ್ಟಲಾಗದ (ಯಾಕೆಂದರೆ ನೆಲದಿಂದ ಎತ್ತರದಲ್ಲಿ, ಕೈಗೆ ಸಿಕ್ಕದ ಜಾಗದಲ್ಲಿದೆ ಜೇನುಗೂಡು); ‘ಮಾಟದ’ ಎಂದರೆ ಮಾಟವಾದ (ಯಾಕೆ ಮಾಟವಾಗಿದೆ, ವಿಶೇಷವಾಗಿದೆಯೆಂದರೆ – ಗುರುತ್ವಕ್ಕೆ ವಿರುದ್ಧವಾಗಿ ಮೇಲಿಂದ ಕೆಳಗೆ ಕಟ್ಟಿದ ವಿಶಿಷ್ಠ ವಿನ್ಯಾಸದ ಗೂಡದು) ; ‘ಹುಟ್ಟದ’ ಅಂದರೆ ‘ಹುಟ್ಟು + ಅದ’ = ಹುಟ್ಟು+ ಇದೆ = ಹುಟ್ಟೊಂದಿದೆ (ಜೇನಿನ ಹುಟ್ಟೊಂದು ಅಲ್ಲಿದೆ). ‘ಹುಟ್ಟಿಗೆ’ ಅಂದರೆ ಆ ಜೇನುಹುಟ್ಟಿಗೆ, ಆ ಜೇನುಗೂಡಿಗೆ ; ಜೇನಿನ ಥಳಿಮಳಿ = ಜೊಂಪೆ ಜೊಂಪೆ ಜೇನುಗಳ ಮುತ್ತಿಗೆ, ಆವರಿಸುವಿಕೆ – ಒಂದೆಡೆ ತಳಮಳದಿಂದ ಧಾಳಿಯಿಕ್ಕುವ ಸೈನ್ಯದ ಹಾಗೆ ಅನಿಸಿದರೆ, ಮತ್ತೊಂದೆಡೆ ಗೂಡಿನ ತುಂಬಾ ಜೇನಿನ ತಳಿಯ ಮಳೆಯೇ ಆಗಿಬಿಟ್ಟಿದೆಯೇನೋ – ಎನ್ನುವ ಹಾಗೆ ಗೂಡನ್ನು ಪೂರ್ತಿ ತಮ್ಮಲ್ಲೇ ಮುಚ್ಚಿಟ್ಟುಕೊಂಡಿವೆ. ‘ಸನಿಹ ಹನಿ’ ಅಂದರೆ ಸನಿಹದಲ್ಲೇ (ಜೇನಿನ ಹಿನ್ನಲೆಯಲ್ಲೇ) ಹನಿಯ ರೂಪದಲ್ಲಿ ಸಂಗ್ರಹವಾಗಿರುವ ಜೇನು ಎನ್ನುವ ಭಾವ. ಯಾಕೆ ಹಾಗೆ ಮುತ್ತಿವೆ ಅಂದರೆ – (ಗೂಡೊಳಗಿರುವ) ಜೇನಿನ ಹನಿಯನ್ನು ಕಾಯಲು.

ಕೈಗೆಟುಕದಂತೆ ದೂರದಲ್ಲಿ ಮಾಟವಾಗಿ ಕಟ್ಟಿದ, ಜೇನಿನ ಗೂಡನ್ನು ತಮ್ಮ ಮೈಯಿಂದಲೇ ಮುಚ್ಚಿಕೊಂಡ ರಾಶಿ ಜೇನುಹುಳುಗಳ ಹಿಂದೆ ಅಡಗಿದೆ ಸಿಹಿಯಾದ ಜೇನಿನ ಹನಿ. ಆ ಮಧುವಿನ ಮಧುರ ಅನುಭವ ಕೈಸೇರುವುದು, ಸುತ್ತುವರಿದ ಜೇನನ್ನು ನಿವಾರಿಸಿಕೊಂಡರಷ್ಟೇ ಸಾಧ್ಯ. ಕಾವ್ಯವೊಂದರ ಸೃಷ್ಟಿಯಲ್ಲೂ ಅಂತಿಮವಾಗಿ ಜೇನಿನ ಸಿಹಿಯಂತ ಕಾವ್ಯ ಹುಟ್ಟಬೇಕೆಂದರೆ ಅದು ಸುಮ್ಮನೆ ಕೈಗೆ ಸಿಗುವಂತದಲ್ಲ. ಎಟುಕಿಯೂ ಎಟುಕದ ಹಾಗೆ ಒಳಗೆಲ್ಲೋ ಕೂತು ಕಾಡುತ್ತಿರುತ್ತದೆ; ಹತ್ತಿರ ಹೋಗಿ ಹೆಕ್ಕಲು ಬಿಡದೆ, ಕಚ್ಚಿ ಓಡಿಸುವ ಜೇನಿನ ಹುಳುವಿನಂತಹ ಅಡೆತಡೆಗಳಿರುತ್ತವೆ. ಅದೆಲ್ಲವನ್ನು ದಾಟಿ ದಡ ಮುಟ್ಟಿದರೆ ಜೇನಿನ ಹನಿಯಂತೆ ಸಿಹಿಯಾದ ಕಾವ್ಯ ದ್ರವ್ಯ ಕೈಗುಟುಕುತ್ತದೆ , ಭವ್ಯ ಕವನದ ಸೃಷ್ಟಿಗೆ ನಾಂದಿಯಾಗುತ್ತದೆ. ಪ್ರತಿ ಕಾವ್ಯಸೃಷ್ಟಿಯಲ್ಲೂ ಕೈಗೆ ಸುಲಭದಲ್ಲೆಟುಕದ, ಬಚ್ಚಿಟ್ಟುಕೊಂಡ ನಿಗೂಢತೆಯೊಂದು ತನ್ನ ಸಿಹಿ ಮಾಧುರ್ಯದ ಆಮಿಷದೊಂದಿಗೆ ಕಾದುಕೊಂಡಿರುತ್ತದೆ – ಸ್ಫೂರ್ತಿದೇವಿಯ ರೂಪದಲ್ಲಿ ಕೆಣಕುತ್ತ . ಕಾವ್ಯಪುರುಷ ಆ ಪ್ರಕೃತಿಯನ್ನು ಅನ್ವೇಷಿಸುತ್ತ , ಮಥಿಸುತ್ತ, ಕಾಡುವ ಅಡೆತಡೆಗಳನ್ನು ಬದಿಗೆ ಸರಿಸುತ್ತ ಮುನ್ನಡೆದಾಗ ಸೂಕ್ತ ಮಿಲನದ ಹದ ಕೈಗೆಟುಕಿ ಪ್ರಕೃತಿ – ಪುರುಷ ಮಿಥುನವಾದಂತೆ ಕಾವ್ಯ ಬೀಜಾಂಕುರವಾಗುತ್ತದೆ. ಅದು ಚಿಗುರಿ, ಕವಲ್ಹೊಡೆದು ಹೂವು-ಹಣ್ಣಾದರೆ ಅದೇ ಕವನದ ಪ್ರತಿ ಸಾಲಾಗಿ ಅನಾವರಣಗೊಳ್ಳುತ್ತಾ ಹೋಗುತ್ತದೆ.

ಈಗ ಇದೇ ಸಾಲನ್ನು ಜೀವಸೃಷ್ಟಿಯ ಮೂಲವಾದ ಮಿಥುನ ಕ್ರಿಯೆಗೆ ಅನ್ವಯಿಸಿ ನೋಡೋಣ. ಹಿಂದಿನ ಎಂಟನೇ ಸಾಲಿನ ವಿವರಣೆಗೆ ಪೂರಕವಾಗಿ ನೋಡಿದರೆ ಕಾಣುವ ಒಳನೋಟ ಹೇಗಿರಬಹುದೆನ್ನುವ ಹಿನ್ನಲೆಯಲ್ಲಿ ಪರೀಕ್ಷಿಸೋಣ.

(ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ ಜೇನಿನ ಥಳಿಮಳಿ ಸನಿಹ ಹನಿ)

‘ಮುಟ್ಟದ’ ಎಂದಾಗ ಇನ್ನೂ ಯಾರು ಮುಟ್ಟಿರದ, ಕನ್ನೆತನದ ಧ್ವನ್ಯಾರ್ಥ ಕಾಣಿಸಿಕೊಳ್ಳುತ್ತದೆ (ವರ್ಜಿನ್). ‘ಮಾಟದ’ ಎಂದಾಗ ಸೊಬಗಿನ, ಆಕರ್ಷಕ ಮಾಟದ ಎನ್ನುವ ಭಾವ ಮೂಡುತ್ತದೆ. ಕನ್ಯತ್ವದಲ್ಲಿನ ಮುಗ್ದತೆ, ಕುತೂಹಲ, ಭೀತಿ, ಅಚ್ಚರಿ ಎಲ್ಲದರ ಸಂಗಮ ಭಾವ ‘ಮುಟ್ಟದ ಮಾಟದ’ ಹಿನ್ನಲೆಯಲ್ಲಿರುವ ಸಾರ. ‘ಮುಟ್ಟದ ಮಾಟ’ವನ್ನು ಈ ಭಾವದಲ್ಲಿ ಅರ್ಥೈಸಿಕೊಳ್ಳಬೇಕಿದ್ದರೆ ತುಸು ಆಳದ ಅರ್ಥೈಸುವಿಕೆ ಅಗತ್ಯ. ಮಾಟ ಎನ್ನುವುದು ಇಲ್ಲಿ ಚಾಕಚಕ್ಯತೆ, ಚಾತುರ್ಯ ಎನ್ನುವ ರೀತಿಯಲ್ಲಿ ಬಳಕೆಯಾಗಿದೆ ಎಂದು ನನ್ನ ಅನಿಸಿಕೆ. ಜೀವಸೃಷ್ಟಿಯಲ್ಲಿ ಹೆಣ್ಣಿನ ಗರ್ಭದಲ್ಲಿ ನಿಯಮಿತವಾಗಿ ಉತ್ಪತ್ತಿಯಾಗುವ ಅಂಡಾಣು ಪ್ರಮುಖಪಾತ್ರ ವಹಿಸುವುದು ನಮಗೆಲ್ಲ ತಿಳಿದ ವಿಚಾರ. ಮಿಥುನ ಕ್ರಿಯೆಯಲ್ಲಿ ಪುರುಷದ ವೀರ್ಯಾಣು ಹೆಣ್ಣಿನ ಅಂಡಾಣುವಿನೊಡನೆ ಮಿಲನವಾದಾಗಲಷ್ಟೇ ಅಂಡಾಶಯವಾಗಿ ಜೀವಸೃಷ್ಟಿಗೆ ನಾಂದಿಯಾಗುವುದು. ಆದರಿಲ್ಲಿ ಮಾಟ, ಚತುರತೆ, ಚಾತುರ್ಯದ ಮಾತೆಲ್ಲಿ ಬರಬೇಕು? ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಅದಕ್ಕೆ ಉತ್ತರವಿರುವುದು ಪುರುಷರೂಪಿ ವೀರ್ಯಾಣುಗಳ ವರ್ತನೆ ಮತ್ತು ಸಂಖ್ಯೆಯಲ್ಲಿ. ಮಿಥುನದ ಹೊತ್ತಲ್ಲಿ ಬಿಡುಗಡೆಯಾಗುವ ಕೋಟ್ಯಾಂತರ ವೀರ್ಯಾಣುಗಳಲ್ಲಿ ಅಂಡಾಣುವನ್ನು ನಿಖರ ರೀತಿಯಲ್ಲಿ ‘ಮುಟ್ಟಿ’ ಭವಿಷ್ಯದ ಭ್ರೂಣವಾಗುವ ಸಾಧ್ಯತೆಯಿರುವುದು ಕೇವಲ ಒಂದು ಚತುರ ವೀರ್ಯಾಣುವಿಗೆ ಮಾತ್ರ. ಎಲ್ಲಾ ವೀರ್ಯಾಣುಗಳು ಒಟ್ಟಿಗೆ ಗುರಿ ಮುಟ್ಟಲು ಸಾಧ್ಯವಿಲ್ಲ. ಇಲ್ಲಿ ಅಂಡಾಣುವಿನ ಚಾತುರ್ಯ (ಮಾಟವು) ವ್ಯಕ್ತವಾಗುವುದು, ಅದರ ಆಯ್ಕೆಯ ಬುದ್ಧಿವಂತಿಕೆಯಲ್ಲಿ. ಅಸಂಖ್ಯಾತ ಕಣಗಳ ಧಾಳಿಯ ನಡುವಲ್ಲೂ ನಿಭಾಯಿಸಲು ಸಾಧ್ಯವಾಗುವಷ್ಟನ್ನು ಮಾತ್ರ ಅನುಮತಿಸಿ ಮಿಕ್ಕದ್ದನ್ನು ನಿರಾಕರಿಸುತ್ತದೆ. ಅದೆಂತಹ ಅತಿಶಯದ ಚತುರತೆ ಎಂದರೆ, ಬೇಕೆಂದ ಹೊತ್ತಲಿ ಸೃಷ್ಟಿಕ್ರಿಯೆ ಸಾಧ್ಯವಾಗದು. ಸ್ತ್ರೀಯ ಋತುಚಕ್ರ ತನ್ನದೇ ಆದ ಕಾಲಗಣನೆ, ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತದೆ. ಮಾಸದ ನಿಗದಿತ ಕಾಲದಲ್ಲಿ ಮಾತ್ರ ಅಂಡಾಣುವಿನ ಉತ್ಪತ್ತಿ ಸಾಧ್ಯ. ಸೃಷ್ಟಿಕ್ರಿಯೆಯೊಂದು ಅಡ್ಡಾದಿಡ್ಡಿ ಜನನಯಂತ್ರವಾಗದಂತೆ ನೈಸರ್ಗಿಕ ನಿಯಂತ್ರಣವಿರಿಸಿಕೊಂಡ ಚಾತುರ್ಯವಿದು. ಹೀಗಾಗಿ ಎಲ್ಲಾ ವೀರ್ಯಾಣುಗಳಿಗೂ ‘ಸುಲಭದಲ್ಲಿ ಮುಟ್ಟಲು ಸಾಧ್ಯವಾಗದ ರೀತಿಯ ಚತುರ ವ್ಯವಸ್ಥೆಯಿರುವ (ಮಾಟವಿರುವ)’ ಅಂಡಾಣುವಿನ ವರ್ಣನೆಯನ್ನು ಇಲ್ಲಿ ಊಹಿಸಿಕೊಳ್ಳಬಹುದು.

‘ಹುಟ್ಟದ ಹುಟ್ಟಿಗೆ’ ಎನ್ನುವಾಗ ಹಿಂದೆ ಅಥವಾ ಇದುವರೆಗೂ ಇರದಿದ್ದಂತಹ, ಇನ್ನೂ ಹುಟ್ಟಿರದಂತ ಹೊಸ ಹುಟ್ಟಿಗೆ ನಾಂದಿಯೆನ್ನುವ ಅನಿಸಿಕೆ ಮೂಡುತ್ತದೆ. ಇನ್ನೂ ಹೊರಜಗತ್ತಿನ ದೃಷ್ಟಿಯಲ್ಲಿ ಹುಟ್ಟಿಲ್ಲದಿದ್ದರು (= ಹುಟ್ಟದ), ಈಗಾಗಲೇ ಬೀಜಾಂಕುರ ಫಲಿತವಾದ ‘ಅಂಡಾಶಯ’ ರೂಪದಲ್ಲಿ ಹುಟ್ಟು ಪಡೆದಾಗಿರುವ ಹುಟ್ಟಿದು. ಅಂಡವು ಸೂಕ್ಷ್ಮರೂಪದಲ್ಲಿ ಹುಟ್ಟಾಗಿದ್ದರು, ಇನ್ನೂ ಬಾಹ್ಯಜಗದ ಪ್ರಕಟರೂಪದಲ್ಲಿ (ಶಿಶುವಿನ ರೂಪದಲ್ಲಿ) ಹುಟ್ಟು ಪೂರ್ತಿಯಾಗಿಲ್ಲದ ಕಾರಣ ಇದನ್ನು ‘ಹುಟ್ಟದ ಹುಟ್ಟಿಗೆ’ ಎಂದು ಕರೆಯಲಾಗಿದೆ (ಈಗಾಗಲೇ ಹುಟ್ಟಾಗಿದೆಯೆಂದು ಹೇಳಲಾಗದ, ಅಂತೆಯೇ ಇನ್ನೂ ಹುಟ್ಟಿಲ್ಲವೆಂದು ನಿರಾಕರಿಸಲಾಗದ ಸ್ಥಿತಿ – ಮಿಲನಾನಂತರ ಮಿಥುನದ ಫಲಿತ ಯಶಸ್ವಿಯಾದರೆ ಅಂಡ ಮತ್ತು ವೀರ್ಯಾಣುಗಳ ಸಂಯೋಗವೇ ಸೃಷ್ಟಿಯ ಮೊದಲ ಹೆಜ್ಜೆಯಾಗಿ ಗರ್ಭದೊಳಗೆ ಅಂಡಾಶಯ ರೂಪ ತಾಳುತ್ತದೆ. ಇದು ಇನ್ನೂ ಹುಟ್ಟದ – ಹುಟ್ಟಿನ ವಿವರಣೆಗೆ ಹೊಂದಿಕೆಯಾಗುವ ಸೃಷ್ಟಿಹಂತ ).

ಇನ್ನು ‘ಜೇನಿನ ಥಳಿಮಳಿ ಸನಿಹ ಹನಿ’ ಮೂಲ ಉದ್ದೇಶವಾದ ಸೃಷ್ಟಿಯ ಜತೆಜತೆಗೆ ಮಿಲನದ ಸವಿಯನ್ನು ಸುಖಾನುಭವವಾಗಿ ರೂಪಿಸಿದ ಅನುಭಾವ. ಸುಲಭದಲ್ಲಿ ಮುಟ್ಟಲಾಗದ ಅದ್ಭುತ ಮಾಟದ (ಚಾತುರ್ಯದ) ಅಂಡಾಣು ಕೂಡ, ತನ್ನಂತಾನೆ ಹುಟ್ಟ ಸೃಜಿಸಲು ಸಾಧ್ಯವಾಗದು. ಅದಕ್ಕೆ ವೀರ್ಯಾಣುವಿನ ಸಹಯೋಗ ಬೇಕು. ಆ ಹುಟ್ಟಿಗೆ ಮೂಲಭೂತ ವೇದಿಕೆಯನ್ನು ಸಿದ್ದಪಡಿಸಿ ಸೂಕ್ತ ಹೊಂದಾಣಿಕೆಗೆ ಕಾಯುತ್ತಿರುವ ಅಂಡಾಣುವಿನ ಮೇಲೆ, ಪುರುಷಭಾವದ ವೀರ್ಯಾಣುವಿನ ಥಳಿಮಳಿಯಾಗಿ, ಹನಿ ಹನಿಯಾಗಿ ಸನಿಹ ಸೇರುತ್ತದೆ. ಹಿಂದೆ ವಿವರಿಸಿದಂತೆ ಅದರಲ್ಲಿ ಮಿಲನದ ಯಶ ಸಿಗುವುದು ಒಂದೇ ವಿರ್ಯಾಣುವಿಗೆ ಮಾತ್ರ. ಇನ್ನು ಈ ಮಿಲನ ಪ್ರಕ್ರಿಯೆಯನ್ನು ಆಕರ್ಷಕವಾಗಿರಿಸಲು ಅದಕ್ಕೆ ಸುಖಾನುಭವದ ‘ಜೇನಿನ’ ಲೇಪನವನ್ನು ಸೇರಿಸಿಬಿಟ್ಟಿದೆ.

ಹೀಗಾಗಿ ಎರಡು ಜೀವಗಳು ಪರಸ್ಪರ ಒಂದಾಗುತ್ತ ಮಧುರ ಮಿಲನದ ರಸಯಾತ್ರೆಗೆ ಹೊರಟಾಗ ಸಿಕ್ಕುವ ಅನುಭೂತಿಯೇ ಅದ್ಭುತ. ಆ ಮಾದುರ್ಯ, ಮಾರ್ದವತೆಯಿಂದಾಗಿ ಇಂತಹ ಅದ್ಭುತಕ್ಕೆ ಸಹಜವಾಗಿಯೇ ಜೇನಿನ ಸಿಂಚನದ ಲೇಪ ಸಿಕ್ಕಂತಾಗಿಬಿಟ್ಟಿರುತ್ತದೆ. ಅಂತಹ ಅಪರೂಪದ ಸಾಮೀಪ್ಯದ ಪ್ರತಿಹನಿಯು ರಸಭರಿತ, ವರ್ಣನಾತೀತ. ಫಲಿತವಾಗಿ ಇಂಥದ್ದೇ ಗುಣಗಳನ್ನು ಆರೋಪಿಸಿಕೊಂಡು ಬರುವ ಅದ್ಭುತ ಕಾವ್ಯ ಕೂಡ ಅಷ್ಟೇ ಮಟ್ಟದ ಮಾಧುರ್ಯದಿಂದ ಕೂಡಿರುತ್ತದೆ (ಕಾವ್ಯ ಸೃಷ್ಟಿಯಲ್ಲಿ). ಮಿಥುನದ ಆಯಾಮದಲ್ಲಿ ‘ಮುಟ್ಟಲಾಗದ ಮಾಟದ ಹುಟ್ಟದ ಹುಟ್ಟು’ ಇನ್ನು ಜನಿಸದ ಭ್ರೂಣರೂಪಿ ಶಿಶುವಿನ ಸಂಕೇತವಾಗುತ್ತದೆ (ಇನ್ನೂ ಹುಟ್ಟಿಲ್ಲ, ಆದರೆ ಈಗಾಗಲೇ ಜೀವವಿರುವ ಭ್ರೂಣವಾಗಿ ಗರ್ಭದೊಳಗೆ ಕುಳಿತಿದೆ). ಅದರ ರೂಪುಗೊಳ್ಳುವಿಕೆಯ, ಜನುಮದ, ಆಗಮನದ ನಿರೀಕ್ಷೆಯೇ ಜೇನಿನ ಹನಿ ಧಾರೆಯಾಗಿ ಹರಿದಂತೆ. ಗರ್ಭಧಾರಣೆಯಿಂದ ಜೀವಜನುಮದ ಪ್ರತಿಹಂತವು ಜೇನಿನ ಸಿಂಚನ, ಜೇನಿನ ಹನಿಯ ಸಾನಿಧ್ಯ, ಸನಿಹದ ನಿರಂತರ ಭಾವದ ಪ್ರತೀಕ.

ಹೀಗೆ ಈ ಒಂಭತ್ತನೇ ಸಾಲು ಸಾರಾಂಶದಲ್ಲಿ, ಪ್ರಕೃತಿ ಮತ್ತು ಪುರುಷ ಸತ್ವಗಳು ವೀರ್ಯಾಣು ಮತ್ತು ಅಂಡಾಣುಗಳ ರೂಪದಲ್ಲಿ ಸಮ್ಮಿಳಿತವಾಗಿ ಅಂಡಾಶಯದ ಸ್ವರೂಪದಲ್ಲಿ ಹುಟ್ಟಿಗೆ ನಾಂದಿಯಾಗುವುದನ್ನು ವಿವರಿಸುತ್ತದೆ – ಆ ಪ್ರಕ್ರಿಯೆಯನ್ನು ಜೀನಿನ ಮಧುರತೆಯ ಸುಖಾನುಭವದೊಂದಿಗೆ ಸಮೀಕರಿಸುತ್ತ.

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)