02047. ನಾಕುತಂತಿಯೊಂದು ಸಾಲು – ೧೦


02047. ನಾಕುತಂತಿಯೊಂದು ಸಾಲು – ೧೦


(ಬೆಚ್ಚಿದ ವೆಚ್ಚವು ಬಸರಿನ ಮೊಳಕೆ ಬಚ್ಚಿದ್ದಾವದೊ ನಾ ತಿಳಿಯೆ.)

ಹಿಂದಿನ ಸಾಲುಗಳಲ್ಲಿ ವೀರ್ಯಾಣು ಅಂಡಾಣುಗಳ ಸಂಯೋಗದ ಪ್ರಸ್ತಾಪವಾದಾಗ ಎಷ್ಟೋ ಕೆಲವರಿಗೆ ಸಂಶಯ ಬಂದಿರಲೂಬಹುದು – ಈ ಅರ್ಥ ವಿವರಣೆ ಸರಿಯಾದ ತರ್ಕವೇ, ಅಲ್ಲವೇ ? ಎಂದು. ಆ ಅನುಮಾನಕ್ಕೊಂದು ಪೂರ್ಣವಿರಾಮ ಹಾಕಿ ಆ ಸಂಶಯವನ್ನು ನಿವಾರಿಸಲೇನೋ ಎಂಬಂತೆ ಮೂಡಿ ಬಂದಿದೆ ಈ ಹತ್ತನೇ ಸಾಲು. ಅದರಲ್ಲೂ ‘ಬಸರಿನ ಮೊಳಕೆ’ ಎನ್ನುವ ಪದಪುಂಜದಲ್ಲಿ ಈ ಸಂಬಂಧದ ನೇರ ಕೊಂಡಿ ಢಾಳಾಗಿ ಕಾಣಿಸಿಕೊಂಡಿದೆ. ಈ ಪೀಠಿಕೆಯೊಂದಿಗೆ ಹತ್ತನೇ ಸಾಲನ್ನು ಪರಿಶೀಲಿಸೋಣ. ಈ ಸಾಲನ್ನು ಹಿಂದಿನ ಸಾಲುಗಳೊಡನೆ ಸಮೀಕರಿಸಿ ಅರ್ಥೈಸಿದರೆ, ಸೃಷ್ಟಿಪ್ರಕ್ರಿಯೆಯ ಮುಂದಿನ ಭಾಗದ ವಿವರಣೆಯ ಕೊಂಡಿಯಾಗಿರುವುದು ಕೂಡ ಸ್ಪಷ್ಟವಾಗಿ ಎದ್ದು ಕಾಣುತ್ತದೆ.

ಬೆಚ್ಚಿದ ವೆಚ್ಚವು, ಬಸರಿನ ಮೊಳಕೆ..

ಒಂಭತ್ತನೇ ಸಾಲಿನಲ್ಲಿ ಅಂಡಾಣು, ವೀರ್ಯಾಣು ಮಿಲನವಾಗುವ ಪ್ರಸ್ತಾಪ ಮತ್ತು ತನ್ಮೂಲಕ ಅಂಡದ ಉತ್ಪನ್ನವಾಗುವ ‘ಹುಟ್ಟದ ಹುಟ್ಟಿನ’ ಕುರಿತಾಗಿಯೂ ವಿವರಿಸಲ್ಪಟ್ಟಿತ್ತು. ಆ ಸಂಯೋಗದ ಕ್ರಿಯೆಯ ಮತ್ತಷ್ಟು ಆಳದ ತಾಂತ್ರಿಕ ವಿವರಣೆ ಇಲ್ಲಿ ಪ್ರಸ್ತಾಪವಾಗಿರುವ ಅಂಶ. ಮೊದಲಿನೆರಡು ಪದಗಳಾದ ‘ಬೆಚ್ಚಿದ ವೆಚ್ಚವು’ – ಇವುಗಳಲ್ಲಿ ಬೆಚ್ಚಿದ್ದೇನು ? ವೆಚ್ಚವಾದದ್ದೇನು ?ಎನ್ನುವುದು ಮೊದಲು ಪರಿಗಣಿತವಾಗಬೇಕಾದ ವಿಷಯ. ಮೊದಲಿಗೆ ವೆಚ್ಚದ ಕುರಿತು ನೋಡೋಣ. ಇಲ್ಲಿ ವೆಚ್ಚವೆಂದಾಗ ಮಿಲನ ಪ್ರಕ್ರಿಯೆಯ ಅಂತಿಮದಲ್ಲಿ ವ್ಯಯವಾದ (ವೆಚ್ಚವಾದ) ವೀರ್ಯಾಣು ಎಂದು ಭಾವಿಸಬಹುದು. ಬಸಿರಿನ ಮೊಳಕೆಯಾಗಲು ಇದು ತಾನೇ ಆಗಬೇಕಾದ ನಿಸರ್ಗ ಸಹಜ ಕ್ರಿಯೆ? ಆದರೀ ವೆಚ್ಚದಲ್ಲಿ ಬೆಚ್ಚುವ ಭಾವ ಎಲ್ಲಿಂದ ಬಂತು ? ಅಗತ್ಯಕ್ಕಿಂತ ಹೆಚ್ಚು ವ್ಯಯವಾದಾಗ ತಾನೇ ನಾವು ಬೆಚ್ಚಿಬೀಳುವುದು ? ಬೆಚ್ಚುವ ಎಂದಾಗ ಬೆಚ್ಚಿ ಬೀಳುವುದು ಮಾತ್ರವಲ್ಲದೆ ಬೆಚ್ಚಗಾಗುವ ಎಂದೂ ಅರ್ಥೈಸಬಹುದೇ ? ಹೀಗೆಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ ಉತ್ತರ ಹುಡುಕೋಣ.

ಸ್ಖಲನದ ನಂತರ ಕೋಟ್ಯಂತರ ವೀರ್ಯಾಣುಕಣಗಳು ಒಂದೇ ಗಮ್ಯದತ್ತ (ಏಕಮಾತ್ರ ಅಂಡಾಣುವಿನತ್ತ) ಧಾಳಿಯಿಟ್ಟಾಗ, ಆ ಒಬ್ಬಂಟಿ ಕಣವು ಅತಿ ವೇಗದ ಸಮಗ್ರ ಧಾಳಿಗೆ ಕಂಗಾಲಾದಂತೆ ಬೆಚ್ಚಿ ಬೀಳುವುದು ಸಹಜ ತಾನೇ ? ಗುಂಪಲ್ಲಿ ಬಂದು ದಾಂಧಲೆ ಎಬ್ಬಿಸಿದರೂ, ಈ ಸಮೂಹದಲ್ಲಿ ಯಾವುದೊ ಒಂದು ವೀರ್ಯಾಣು ಮಾತ್ರವೆ ಬಸರಿನ ಮೊಳಕೆಗೆ ಶ್ರೀಕಾರ ಹಾಕಬಲ್ಲಂತದ್ದು. ಆ ಒಂದು ಭಾಗ್ಯಶಾಲಿ ಹನಿ (ಕಣ), ಮಿಕ್ಕ ಆ ಕೋಟಿ ಕಣಸಮೂಹದಲ್ಲಿ ಬಚ್ಚಿಟ್ಟುಕೊಂಡಿದೆ; ಆ ಅಸಂಖ್ಯಾತ ಗಣಸಮೂಹದಲ್ಲಿ, ಅದಾವ ವೀರ್ಯಾಣುವಿಗೆ ಬಸರಿನ (ತನ್ಮೂಲಕ ಹುಟ್ಟಿನ, ಸೃಷ್ಟಿಯ) ಅಧಿಕಾರ ಸಿಗುವುದೋ ಯಾರಿಗೂ ತಿಳಿಯಲಾಗದು. ಅದು ಸಹಜ ಮಿಲನದ ತೃಪ್ತಾತೃಪ್ತ ಪ್ರಕ್ರಿಯೆಯ ಹಿನ್ನಲೆಯಲ್ಲೆ ನಡೆಯುವ ಅಂತರಾಳದ ನಿಗೂಢ ಪ್ರಕ್ರಿಯೆ. ಕವಿಗೆ ಆ ನಿಗೂಢತೆಯಲ್ಲೂ ಅರಿವಾಗದ ವಿಸ್ಮಯ – ಸೃಷ್ಟಿಕ್ರಿಯೆಗೆ ಬೇಕಾದ್ದು ಕೇವಲ ಒಂದು ವೀರ್ಯಾಣು ಕಣ; ಆದರೆ ಸಮಾಗಮದಲ್ಲಿ ಬಿಡುಗಡೆಯಾಗುವ, ವ್ಯಯವಾಗುವ, ವೆಚ್ಚವಾಗುವ ಕಣಗಳ ಸಂಖ್ಯೆ ಕೋಟಿ,ಕೋಟಿ ! ಯಾಕಿಷ್ಟು ಬೆಚ್ಚಿಬೀಳಿಸುವಂತಹ ದುಂದು ವೆಚ್ಚ ? ಈಗಿನ ಆಧುನಿಕ ಲೆಕ್ಕಾಚಾರ, ಪರಿಮಾಣಗಳನ್ನು ಗಣನೆಗೆ ತೆಗೆದುಕೊಂಡರೆ ‘ ಇದೆಂತಹ ವೇಸ್ಟ್ (ವ್ಯರ್ಥ ಬಳಕೆ) ಅನಿಸುವುದಿಲ್ಲವೇ? ಯಾಕೋ ಇದೊಂದು ದಕ್ಷತೆಯಿಲ್ಲದ, ಕ್ಷಮತೆಯಿಲ್ಲದ ಅನಿಯಂತ್ರಿತ ಪ್ರಕ್ರಿಯೆಯಿದ್ದಂತಿದೆಯಲ್ಲ ?’ ಎಂದೆನಿಸಿಬಿಟ್ಟಿದೆ. ಹಾಗೆ ಆಲೋಚಿಸುತ್ತಾ , ‘ವೀರ್ಯಾಣು ಕಡಿಮೆಯಿದ್ದಾಗ ಅದು ಅಂಡಾಣುವಿಗೆ ಡಿಕ್ಕಿ ಹೊಡೆದು ಅದರೊಡನೆ ಸಂಯೋಗವಾಗುವ ಸಾಧ್ಯತೆ ಕಡಿಮೆ. ಬಹುಶಃ ಅಂಡಾಣು-ವೀರ್ಯಾಣು ಮಿಲನವಾಗುವ ಸಾಧ್ಯತೆಯನ್ನು ಅಮಿತಗೊಳಿಸಲೋಸುಗ ನಿಸರ್ಗ ಈ ವಿಧಾನ ಅನುಸರಿಸಿರಬೇಕು’ ಎಂದು ತರ್ಕಿಸುತ್ತದೆ. ಹೀಗಾಗಿ ‘ಬೆಚ್ಚಿಬೀಳುವಷ್ಟು ಮೊತ್ತದ ವೀರ್ಯಾಣು ವೆಚ್ಚವಾಗುತ್ತಿದೆ’ಯೆನ್ನುವ ಉದ್ಗಾರವು ‘ಬೆಚ್ಚಿದ ವೆಚ್ಚವು’ ಎನ್ನುವ ರೂಪದಲ್ಲಿ ಮೂಡಿಬಂದಿದೆ.

ಅಂತೆಯೇ ಶಕ್ತಿ ವ್ಯಯವಾಗುವ ಯಾವುದೇ ಯಾಂತ್ರಿಕ ಕ್ರಿಯೆಯಲ್ಲಿ ಸಹಜವಾಗಿ ಶಾಖದ ಉತ್ಪಾದನೆಯಾಗುತ್ತದೆ ಮತ್ತು ಅದರಿಂದಾಗಿ ಬಿಸಿಯ (ಬೆಚ್ಚನೆಯ) ಅನುಭವವಾಗುವುದು ಸಹಜ. ಆ ಹಿನ್ನಲೆಯಲ್ಲಿ ಬೆಚ್ಚಿದ ವೆಚ್ಚ, ಶಾಖದಿಂದ ಕೂಡಿದ ಬೆಚ್ಚನೆಯ ವೆಚ್ಚವೂ ಆಗಬಹುದು. ಮಿಲನದ ಹೊತ್ತಲ್ಲಿ ಬೆಚ್ಚಗಾಗುವ ತನುಮನಗಳ ಇಂಗಿತ ಇದೆಂದುಕೊಳ್ಳಲು ಅಡ್ಡಿಯಿಲ್ಲ.

ಈ ಸಾಲಿನ ಮುಂದಿನ ಪದಗಳು ‘ಬಸರಿನ ಮೊಳಕೆ’. ಹಿಂದಿನ ಪದಗಳ (= ಬೆಚ್ಚಿದ ವೆಚ್ಚವು) ಅರ್ಥಕ್ಕೆ ತಾರ್ಕಿಕವಾಗಿ ಜೋಡಿಸಿದರೆ ಈ ಪದಗಳ ಅರ್ಥ ಆಯಾಚಿತವಾಗಿ ಗ್ರಹಿಕೆಗೆ ಸಿಕ್ಕಿಬಿಡುತ್ತದೆ. ‘ಬೆಚ್ಚಿದ ವೆಚ್ಚವು’ ಅರ್ಥಾತ್ ಅಂಡಾಣುವನ್ನು ಮುಟ್ಟುವ ವೀರ್ಯಾಣುವು, ತನ್ನ ಹೋರಾಟದಲ್ಲಿ ಮಿಕ್ಕೆಲ್ಲವನ್ನು ಅಧಿಗಮಿಸಿ ಅಂತಿಮವಾಗಿ ಅಂಡಾಣುವಿನೊಳಗೆ ಯಶಸ್ವಿಯಾಗಿ ಹೊಕ್ಕು ಅಂಡವಾಗುತ್ತ ‘ಬಸರಿನ ಮೊಳಕೆಗೆ’ ಕಾರಣವಾಗುತ್ತದೆ.

ಇದಾದ ನಂತರವೂ ಕವಿಯ ಜಿಜ್ಞಾಸೆ ಇನ್ನು ಮುಗಿದಿಲ್ಲವೆನ್ನುವುದನ್ನು ಸಾರುವ ಸಾಲು…’ಬಚ್ಚಿದ್ದಾವದೊ ನಾ ತಿಳಿಯೆ..’ ಅದೇನಿರಬಹುದೆಂದು ಈಗ ಗಮನಿಸೋಣ. ಅದನ್ನು ವಿವರಿಸಲು ಈಗಾಗಲೇ ಹೇಳಿರುವ ಅಂಶಗಳನ್ನೇ ಮತ್ತೊಮ್ಮೆ ಪುನರುಚ್ಚರಿಸಬೇಕಾದ ಅಗತ್ಯವಿದೆ – ಹಿನ್ನಲೆಯ ಪೂರಕ ವಿವರಣೆಯ ರೂಪದಲ್ಲಿ.

ಕೋಟ್ಯಾನುಕೋಟಿ ವೀರ್ಯಾಣು ಕಣಗಣ ಬಿಡುಗಡೆಯಾದಾಗ ಅದರಲ್ಲಿ ಬಚ್ಚಿಟ್ಟುಕೊಂಡಿರುವ ಯಾವುದೋ ಒಂದು ಕಣ ಮಾತ್ರ ಯಶಸ್ವಿಯಾಗಿ ಬಸಿರಿಗೆ ಮೊಳಕೆಯಾಗುತ್ತದೆ ಎಂದು ಅರಿತಾಯ್ತು. ಆದರೆ ಆ ಒಂದು ಅದೃಷ್ಟಶಾಲಿ ವೀರ್ಯಾಣು ಯಾವುದಿರಬಹುದು ಎನ್ನುವುದು ಮೊದಲೇ ಗೊತ್ತಿರುವುದಿಲ್ಲ ಎನ್ನುವುದನ್ನೂ ತಿಳಿದಾಯ್ತು. ಇದೊಂದು ಪೂರ್ತಿ ಸಂಭವನೀಯತೆಯ ನಿಯಮದನುಸಾರ ನಡೆಯುವ ಅನಿಯಂತ್ರಿತ ಪ್ರಕ್ರಿಯೆ; ಬಿಡುಗಡೆಯಾಗುವ ವೀರ್ಯಾಣುಧಾರೆಯ ಕಣಗಳಿಗೂ ತಮ್ಮಲ್ಲಿ ಯಾರಿಗೆ ಸಂಯೋಗದ ಋಣವಿದೆಯೆಂದು ಗೊತ್ತಿರುವುದಿಲ್ಲ. ಅದರ ಸೃಷ್ಟಿಕರ್ತ ಪುರುಷನಿಗೂ ಕೂಡ ಆ ಬಚ್ಚಿಟ್ಟುಕೊಂಡ ಗುಟ್ಟಿನ ಕಣ ಯಾವುದೆಂದು ಗೊತ್ತಿರುವುದಿಲ್ಲ ಮತ್ತು ಅದರ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ ಎಂದು ತರ್ಕಿಸಿದ್ದಾಯ್ತು. ಸುಖದ ಚರಮಸೀಮೆಯನ್ನೇರಿಸುವ ಮಿಲನಕ್ರಿಯೆಯಲ್ಲಿ, ಅದರಲ್ಲಿ ಭಾಗವಹಿಸುವ ಪಾಲುದಾರರು ಸಹ ಅಂತಿಮ ಫಲಿತದ ಮೇಲೆ ಯಾವ ಪ್ರಭಾವವನ್ನೂ ಬೀರಲಾಗದ ಅಸಹಾಯಕತೆಯಿಂದ, ಆ ಫಲಿತಾಂಶವನ್ನು ಸ್ವೀಕರಿಸಬೇಕೆನ್ನುವುದೇ ಒಂದು ರೀತಿಯ ವಿಪರ್ಯಾಸವೆನ್ನಬಹುದು. ಆ ಕ್ಷಣದಲ್ಲಿ ಋಣ, ಕರ್ಮಫಲ, ದೈವೇಚ್ಛೆ – ಇತ್ಯಾದಿಗಳೆಲ್ಲದರ ಹೆಸರಿನಲ್ಲಿ ಬಂದ ಫಲಿತವನ್ನು ಬಂದ ಹಾಗೆ ಸ್ವೀಕರಿಸಬೇಕು.ಸ್ವತಃ ತಮ್ಮದೇ ಸೃಷ್ಟಿಫಲಿತ ಉನ್ನತ ಮಟ್ಟದ್ದೋ, ಅಲ್ಲವೋ ಎನ್ನುವುದರ ತೀರ್ಮಾನದಲ್ಲಿ, ಕಾರಣಕರ್ತರ ವಶೀಲಿಬಾಜಿ ಒಂದಿನಿತು ನಡೆಯದ, ನಿಸರ್ಗದ ವಿಶಿಷ್ಠ ಸ್ವಯಂಚಾಲಿತ ಪ್ರಕ್ರಿಯೆ ಇದೆನ್ನಬಹುದು. ಒಟ್ಟಾರೆ ಈ ಬಸಿರು ತನ್ನೊಳಗೆ ಬಚ್ಚಿಟ್ಟುಕೊಂಡ ಫಲಿತ ಯಾವುದೆನ್ನುವುದನ್ನು ನಾನೂ ಅರಿಯೆ. ನಾನೇ ಅದರ ಕಾರಣ ಪುರುಷನಾದರೂ, ನಾನು ಕೂಡ ಅದನ್ನು ನಿಯಂತ್ರಿಸಲಾರೆ ಎನ್ನುವ ಸತ್ಯದ ಅರಿವಾಗುತ್ತದೆ ಜೀವಿಗೆ . ಹೀಗಾಗಿ, ಆದದ್ದೆಲ್ಲ ಆದಮೇಲೆ ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವುದಷ್ಟೇ ನಮಗುಳಿದ ಹಾದಿ ಎನ್ನುವುದನ್ನು ಮಾರ್ಮಿಕವಾಗಿ ಸೂಚಿಸುತ್ತಿದೆ ಈ ಪದಗುಚ್ಛ. ಇದು ಸೃಷ್ಟಿಕ್ರಿಯೆಗೆ ಮಾತ್ರವಲ್ಲ, ಜೀವನದ ಪ್ರತಿ ಪ್ರಕ್ರಿಯೆಗೂ ಅನ್ವಯವಾಗುವ ಸರಳ ಸತ್ಯವೆನ್ನಬಹುದೇನೋ.

ಇದೇ ಭಾವ ಕಾವ್ಯವೊಂದರ ಸೃಷ್ಟಿಯ ನೆಲೆಗಟ್ಟಿನಲ್ಲೂ ಅನ್ವಯವಾಗುತ್ತದೆ. ಯಾವುದೊ ಕಿಡಿ ಹೊತ್ತಿದ ಹೊತ್ತಲ್ಲಿ ಸ್ಫೂರ್ತಿಯ ಹನಿ ಸಿಡಿದಾಗ ಎಲ್ಲಾ ಹನಿಗಳು ಭವ್ಯ ಕಾವ್ಯದ ಸುಶ್ರಾವ್ಯ ಮುನ್ನುಡಿಯಾಗಲಾಗದು. ಕೆಲವು ಹನಿಯಾಗುವ ಮೊದಲೇ ಕರಗಿಹೋಗುತ್ತವೆ. ಕೆಲವು ಬೆಚ್ಚಿಸಬಲ್ಲ (ಬೆಕ್ಕಸ ಬೆರಗಾಗಿಸಬಲ್ಲ) ಅಗಾಧ ಸಾಮರ್ಥ್ಯದ ಮೂಲಬೀಜ ಹೊತ್ತುಕೊಂಡು ಅದ್ಭುತ ಸೃಷ್ಟಿಗೆ ನಾಂದಿಯಾಗುತ್ತದೆ. ಆದರೆ ಯಾವ ಹನಿ ಬಸಿರಿನ ಮೊಳಕೆ ಬಿತ್ತಿ, ಪ್ರಸವ ವೇದನೆಯ ಹಂತವನ್ನೆಲ್ಲ ದಾಟಿ ಮೂರ್ತರೂಪಿ ಕಾವ್ಯವಾಗುವುದೊ ಎನ್ನುವುದನ್ನು ಸ್ವತಃ ಕವಿಯೂ ಅರಿತಿರುವುದಿಲ್ಲ. ಅಂತೆಯೇ ಯಾವ ಫಲಿತದ ಸಾಲು ಅದ್ಭುತ ಕಾವ್ಯದ ಸರಕಾಗುವುದೋ, ಯಾವುದು ಸತ್ವವಿಲ್ಲದ ನಿಸ್ತೇಜ ಪದಪುಂಜವಾಗುವುದೋ ಹೇಳಲಸದಳ. ಒಟ್ಟಾರೆ ಸೃಷ್ಟಿಯ ಯಾಂತ್ರಿಕ ಪ್ರಕ್ರಿಯೆಯಲ್ಲಿ, ನಮಗೆ ವಹಿಸಿದ ಜವಾಬ್ದಾರಿಯನ್ನು ನಿಯಂತ್ರಿಸುವ ಯಂತ್ರದ ಭಾಗಗಳಂತೆ ನಾವು ಕಾರ್ಯ ನಿರ್ವಹಿಸುತ್ತಿದ್ದರೂ, ಅದರ ಫಲಿತ ಭಾಗ ಮಾತ್ರ ಅರಿವಿನ ಪರಿಧಿಗೆ ಮೀರಿದ ಸ್ತರದಲ್ಲಿ ನಡೆಯುವ ಅಭೌತಿಕ, ಅಲೌಕಿಕ ಪ್ರಕ್ರಿಯೆ ಎನ್ನುವ ಭಾವವನ್ನು ಇಲ್ಲಿ ಕಾಣಬಹುದು. ನಮ್ಮ ಕೈಯಲ್ಲೇನಿದೆ, ಎಲ್ಲಾ ವಿಧಿಲಿಖಿತ, ಎಲ್ಲಾ ದೈವ ನಿಯಮ – ಇತ್ಯಾದಿ ಉದ್ಗಾರಗಳೆಲ್ಲದರ ಮೂಲ ಇಂತಹ ನಿಯಂತ್ರಿಸಲಾಗದ ಅಸಹಾಯಕ ಸ್ಥಿತಿಯಲ್ಲೆ ಹುದುಗಿರಬಹುದೇನೋ!

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

Advertisements