02048. ನಾಕುತಂತಿಯೊಂದು ಸಾಲು – ೧೧


02048. ನಾಕುತಂತಿಯೊಂದು ಸಾಲು – ೧೧
________________________________


(ಭೂತದ ಭಾವ ಉದ್ಭವ ಜಾವ ಮೊಲೆ ಊಡಿಸುವಳು ಪ್ರತಿಭೆ ನವ.)

ಇದು ಎರಡನೇ ಭಾಗದ ಕೊನೆಯ ಸಾಲು. ಮೊದಲ ಭಾಗದ ‘ನಾನು’ವಿನ ಜತೆ ‘ನೀನು’ (ಪ್ರಕೃತಿ ಮತ್ತು ಪುರುಷ) ಸೇರಿಕೊಂಡು ಮಿಲನೋತ್ಸವದಲ್ಲಿ ಏಕವಾಗುವ ಪ್ರಕಟಾಪ್ರಕಟರೂಪ ಈ ಭಾಗದ ಒಟ್ಟು ಸಾರ. ಹಿಂದಿನ ಸಾಲುಗಳಲ್ಲಿ ವಿವರಿಸಿದ್ದು ಮಿಥುನದ ಹಿಂದಿನ ವಿಜ್ಞಾನದ ಕಥನ. ಮನ್ಮಥನ (ಮನ + ಮಥನ) ಪ್ರೇರಣೆಯು ರತಿಭೋಗದ ನೆಲೆಗಟ್ಟಾಗಿ, ಸುಖದ ಅಮಲಲ್ಲಿ ತೇಲಿಸುವ ಸಂತೃಪ್ತಿಯ ಸರಕಾದರೂ ಅದರ ಹಿನ್ನಲೆಯಲ್ಲಿದ್ದುದ್ದು ಸೃಷ್ಟಿಕಾರ್ಯದ ಪ್ರೇರಣೆ ಎಂದು ಸೂಕ್ಷ್ಮವಾಗಿ, ಸೂಚ್ಯವಾಗಿ ಅರುಹಿದವು ಈ ಸಾಲುಗಳು. ಆ ಪ್ರೇರಣೆಯ ಮೂರ್ತರೂಪಾಗಿ ಗರ್ಭದೊಳಗೆ ಅಂಡವೂ ರೂಪುಗೊಂಡಿದ್ದಾಯ್ತು. ಇನ್ನು ಮಿಕ್ಕಿದ್ದು ಬಾಹ್ಯಜಗದಲ್ಲಿ ಅದನ್ನು ಪ್ರಕಟರೂಪದಲ್ಲಿ ಕಾಣುವುದಷ್ಟೇ. ಆ ಬಾಹ್ಯರೂಪಿ ಜನನ ಸ್ವರೂಪವನ್ನು ವಿವರಿಸುತ್ತಿದೆ ಈ ಮುಂದಿನ ಸಾಲು.

ಭೂತದ ಭಾವ..

ಭೂತದ ಭಾವ ಎಂದಾಗ ಭೂತಕಾಲದಲ್ಲಿ ನಡೆದ ಬಿತ್ತನೆ, ಪೋಷಣೆ ಕಾರ್ಯದ ಸಂಕೇತ. ಜತೆಗೆ ಭೂತ ಎಂಬುದು ಭೀತಿಯುಟ್ಟಿಸುವ ಸ್ವರೂಪದ ಸಂಕೇತವು ಹೌದು. ಗರ್ಭ ಧರಿಸಿಯಾದ ಮೇಲೆ ಜೀವದ ಜನನವಾಗುವತನಕ ಅದೊಂದು ಬಗೆಯ ಅದ್ಭುತ ಭಾವಯಾತ್ರೆ. ಹೆಮ್ಮೆ, ಸಂತಸ, ಅಳುಕು, ಖಿನ್ನತೆ, ಜವಾಬ್ದಾರಿ-ಹೊಣೆಗಳೆಲ್ಲದರ ಸಂಗಮರೂಪಾಗಿ ಅನಾವರಣವಾಗುವ ಕ್ರಿಯೆ. ಅದನ್ನು ಅನುಭವಿಸಿಕೊಂಡು ನಿಭಾಯಿಸಬೇಕಾದ ಹೊಣೆ ಪ್ರಕೃತಿರೂಪಿ ಹೆಣ್ಣಿನದು. ಹೆಣ್ಣೆಂದರೆ ಭಾವಜಗದ ಅಲಿಖಿತ ಸಂಕೇತವಿದ್ದಂತೆ. ಆ ಬಸುರಿನ ಸ್ಥಿತಿಯಲ್ಲಿರುವಷ್ಟು ಕಾಲ ಎಲ್ಲಾ ತರದ ಭಾವಗಳಿಗೂ ಒಳಗಾಗುತ್ತ, ನಿಭಾಯಿಸುತ್ತಾ ಜತನದಿಂದ ಮುನ್ನಡೆಯಬೇಕಾದ ಸ್ಥಿತಿ ಅವಳದು. ಆ ಭಾವಫಲದ ಮೂಲ ಪ್ರೇಮವೊ, ಕಾಮವೊ, ಭೀತಿಯ ನೆಲೆಯಲ್ಲುಂಟಾದ ಪೈಶಾಚಿಕ ನೆಲೆಗಟ್ಟೋ – ಒಟ್ಟಾರೆ ಅನುಭವಿಸಿಕೊಂಡು ನಡೆಯಬೇಕು. ಅದೊಂದು ಸಹಜವಾದ, ಹಿತಕರವಾದ ಅನುಭವವಾದಷ್ಟೇ ಹೊಚ್ಚ ಹೊಸತನ ಪರಿಚಯ ಮಾಡಿಸುವ ನೈಸರ್ಗಿಕ ಪ್ರಕ್ರಿಯೆಯು ಹೌದು.

ಉದ್ಭವ ಜಾವ…

ಎಲ್ಲಕ್ಕೂ ಆದಿಯ ಜೊತೆಯೇ ಅಂತ್ಯವೊಂದಿರುತ್ತದೆಯಲ್ಲ ? ಗರ್ಭದೊಳಗೆ ಕತ್ತಲರಾಜ್ಯದಲ್ಲಿ ಕಣ್ಮುಚ್ಚಿಕೊಂಡು ವಿಹರಿಸಿಕೊಂಡಿದ್ದ ಜೀವಕ್ಕೂ ಹೊರಜಗತ್ತಿಗೆ ಕಾಲಿಡುವ ಹೊತ್ತು ಹತ್ತಿರವಾಗುತ್ತದೆ. ಅದರ ನಿಗದಿತ ಕಾಲಚಕ್ರ ಉರುಳಿ ಕತ್ತಲೆಯ ಲೋಕ ಹರಿದು ಬೆಳಗಾಗುತ್ತದೆ – ಶಿಶುವಾಗಿ ಜನಿಸುವ ಮೂಲಕ (ಉದ್ಭವ ಜಾವ). ಅದಮ್ಯ ಕುತೂಹಲ, ನಿರೀಕ್ಷೆಯಿಂದ ಕಾಯುತ್ತಿದ್ದವರಿಗೆಲ್ಲ ಅದೊಂದು ನಸುಕಿನ ಜಾವದ ಅರುಣೋದಯವಾದ ಲೆಕ್ಕ. ಬದುಕಿಗೆ ಹೊಸ ಬೆಳಕು ಬಂದ ಸಂತಸದಲ್ಲಿ ‘ಉದ್ಭವವಾಯಿತು ಹೊಸ ಜಾವ’ ಎಂದು ಕುಣಿದಾಡುತ್ತದೆ ಆ ಜೀವಿಯನ್ಹೆತ್ತ ಮಾತೃ ಹೃದಯ, ಮತ್ತದರ ಸೃಷ್ಟಿಗೆ ಕೈಜೋಡಿಸಿದ ಪುರುಷ ಮನ.

ಮೊಲೆ ಊಡಿಸುವಳು ಪ್ರತಿಭೆ ನವ.

ಇಲ್ಲೊಂದು ಅತಿಶಯದ ವಿಷಯವು ಅಡಕವಾಗಿದೆ. ಮಿಥುನದಲ್ಲಿ ಪುರುಷನೊಡನೆ ಬೆರೆಯ ಬಂದ ಹೆಣ್ಣು ತನ್ನ ಒನಪು, ಒಯ್ಯಾರ, ಶೃಂಗಾರ ಭಾವಗಳಿಂದ ಅವನನ್ನಾಕರ್ಷಿಸಿ ಸುಖವನ್ನುಣಿಸುವ ರತಿ ಸ್ವರೂಪದಲ್ಲಿ ವಿಜ್ರುಂಭಿಸಿದ್ದವಳು. ಆದರೆ ಅದರ ಫಲಿತ ಗರ್ಭದ ಜೀವವಾದಾಗ ಅಲ್ಲಿ ಏಕಾಏಕಿ ಮಾತೆಯ ಮಮತಾಭಾವ ಉದ್ಭವಿಸಿಬಿಡುತ್ತದೆ! ಆ ಬೆಳಕಿನ ರೂಪದ ಸೃಷ್ಟಿಯ ಫಲಿತ ಮಡಿಲ ಕೂಸಾದಾಗ, ಕಾಮನೆಯ ಅಮಲಿಲ್ಲ ಕರಗಿ ಹೋಗಿ, ಅಲ್ಲಿ ಮಿಕ್ಕುಳಿಯುವುದು ಕೇವಲ ಮಾತೃಪ್ರೇಮವಷ್ಟೆ. ಅಲ್ಲಿಯವರೆಗೂ ಕಾಮನ ತೋಟದ ಅರಗಿಣಿಯೆನಿಸುವಂತಿದ್ದ ಚಂಚಲ ಭಾವದ ಹುಡುಗಿಯಲ್ಲೂ ತಾಯ್ತನದ ಗಾಂಭೀರ್ಯವೆಂಬ ನವ ಪ್ರತಿಭೆ ಜಾಗೃತವಾಗಿ, ಹೆತ್ತ ಕಂದನಿಗೆ ಮೊಲೆಯೂಡಿಸುತ್ತ ಸಾರ್ಥಕ ಭಾವವನ್ನು ಕಾಣುತ್ತದೆ. ಅದಕ್ಕೂ ಮೊದಲು ಚಂಚಲ ಹೆಣ್ಣಾಗಿ, ಚೆಲ್ಲುಚೆಲ್ಲಾಗಿ ವರ್ತಿಸುವ ಎಳಸು ಹುಡುಗಿಯಾಗಿ ಕಾಣಿಸಿದ್ದವಳು, ಈಗ ಯಾವುದೋ ಮಾಯೆಯಲ್ಲಿ ಪರಿವರ್ತನೆಯಾದವಳಂತೆ ಗಾಂಭೀರ್ಯ, ಜವಾಬ್ದಾರಿಕೆ, ಪರಿಪಕ್ವತೆ, ಅನುಭವಗಳ ಸಂಗಮರೂಪಿಯಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಂಡುಬಿಡುತ್ತಾಳೆ – ಯಾವುದೇ ತರಬೇತಿನ ಅಗತ್ಯವಿಲ್ಲದೆಯೂ. ಆ ರೂಪಾಂತರದ ಪರಿಯನ್ನು, ಹುಡುಗಾಟದಿಂದ ಗಾಂಭಿರ್ಯತೆಯ ಪಟ್ಟಕ್ಕೇರುವ ಚಾಕಚಕ್ಯತೆಯನ್ನು ಕಂಡು ‘ಇದೆಂಥ ನವ ಪ್ರತಿಭೆ, ತಟ್ಟನೆ ವಿಕಸಿಸಿಬಿಟ್ಟಿದೆಯಲ್ಲ’ ಎಂದು ಅಚ್ಚರಿ ಪಡುವಂತಾಗುತ್ತದೆ. !’ ಬಾಲೆಯಂತೆ ಆಡುತ್ತಿದ್ದ ಹುಡುಗಿ ಫ್ರೌಢತೆಯಿಂದ, ಜನಿಸಿದ ಶಿಶುವಿಗೆ ಮೊಲೆಯೂಡಿಸುತ್ತ ಮಾತೃತ್ವದ ಧಾರೆಯೆರೆಯುತ್ತ ತನ್ನ ಹೊಸ ಪ್ರತಿಭೆಯನ್ನು ನಿಸ್ಸಂಕೋಚವಾಗಿ ಮತ್ತು ಸಹಜವಾಗಿ ತೋರಿಸಿಕೊಂಡಾಗ – ಆ ಹುಡುಗಿ ಈ ತಾಯಿ ಇಬ್ಬರು ಒಬ್ಬರೇನಾ ? ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗುತ್ತದೆ. ಆ ಹೊತ್ತಿನಲ್ಲಿ ಸೃಷ್ಟಿಯ ಭೂತಕಾಲದ ಬಿತ್ತನೆ ಹೇಗಿತ್ತೆನ್ನುವ ಪರಿಗಣನೆ ಬರುವುದಿಲ್ಲ; ಫಲಿತ ಅಂದುಕೊಂಡಂತಿರಲಿ, ಇಲ್ಲದಿರಲಿ – ಹೇಗಿದ್ದರೂ, ಯಾವುದೇ ರೀತಿಯಲ್ಲಿ ಬಂದಿದ್ದರು, ಅದನ್ನು ತಾಯ್ತನದ ಪ್ರೇಮದ ಮಡಿಲಲ್ಲಿ ಕಟ್ಟಿಹಾಕಿ ಸಂತೃಪ್ತಗೊಳ್ಳುತ್ತದೆ ಮಾತೃಭಾವ.

ಇದೇ ಭಾವ ಕಾವ್ಯ ಸೃಷ್ಟಿಯಲ್ಲೂ ಕಾಣಿಸಿಕೊಳ್ಳುತ್ತದೆ. ಎಷ್ಟೆಲ್ಲಾ ನೋವು, ವೇದನೆ ಅನುಭವಿಸಿ ಪ್ರಸವವಾಗುವ ಕಾವ್ಯದ ಮೂಲ ಸೃಷ್ಟಿಯಲ್ಲೂ ನೋವು, ನಲಿವು, ಸಂಕಟ, ಸಂತಸ ಇತ್ಯಾದಿಗಳ ಭೂತದ ಛಾಯೆ ಗಾಢವಾಗಿರುತ್ತದೆ. ಹೀಗಾಗಿ ಬರುವ ಸೃಷ್ಟಿಯೆಲ್ಲ ಅದ್ಭುತವೆಂದೇ ಹೇಳಲಾಗುವುದಿಲ್ಲ. ಆದರೆ ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವ ಹಾಗೆ ಕವಿ ಹೃದಯಕ್ಕೆ ಪ್ರತಿ ಕಾವ್ಯವು ಆಪ್ಯಾಯವೆ. ಪ್ರತಿಯೊಂದಕ್ಕೂ ಒಂದೇ ರೀತಿಯ ಮಾತೃಪ್ರೇಮ ದೊರಕುತ್ತದೆಯೆನ್ನುವುದು ಇಲ್ಲಿ ವ್ಯಕ್ತವಾಗಿದೆ.

ಭೂಮಿಯ ಬಸಿರ ಸೀಳಿ ಬೆಳೆಯಾಗುವ ಸೃಷ್ಟಿ ಪ್ರಕ್ರಿಯೆಯಲ್ಲಿ – ಅಷ್ಟೇಕೆ, ಯಾವುದೇ ಸೃಷ್ಟಿ ಪ್ರಕ್ರಿಯೆಯಲ್ಲೂ ಈ ಭಾವ ಅಂತರ್ಗತವಾಗಿರುತ್ತದೆಯೆನ್ನುವುದು ಇಲ್ಲಿ ಗಮನಾರ್ಹ.

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)