02050. ನಾಕುತಂತಿಯೊಂದು ಸಾಲು ೧೨ (ಭಾಗ-೩)


02050. ನಾಕುತಂತಿಯೊಂದು ಸಾಲು ೧೨ (ಭಾಗ-೩)

ಮೂರನೆ ಭಾಗದ ಮುಂದಿನೆರಡು ಉದ್ದನೆ ಸಾಲುಗಳು ‘ನಾನು-ನೀನು’ ಸೇರಿ ‘ಆನು’ ಆದ ವಿಸ್ಮಯದ ಮತ್ತಷ್ಟು ಆಳಕ್ಕಿಳಿಯುವ, ತಾತ್ವಿಕ ಜಿಜ್ಞಾಸೆಯೊಡನೆ ಸಮೀಕರಿಸುವ ಯತ್ನದಂತೆ ಕಾಣಿಸುತ್ತದೆ. ಇಲ್ಲಿ ನಾನು ನೀನು ಮತ್ತದರ ಫಲಶ್ರುತಿ ಮೂರರ ಸಂವಾದ ಮತ್ತು ಸಂಭಾಷಣೆ ಗಮನೀಯ ಅಂಶ. ಚಿಂತನೆಯಲ್ಲಿನ ಪಕ್ವತೆ, ಪ್ರಬುದ್ಧತೆ ಮತ್ತೊಂದು ಸ್ತರದ ಮೇಲೇರುವ ಬೆಳವಣಿಗೆಯೂ ಇಲ್ಲಿನ ವಿಶಿಷ್ಠ ಅಂಶ. ಯಥಾರೀತಿ, ಯಾವ ಸೃಷ್ಟಿಯ ಕುರಿತಾಗಿ ಪರಿಗಣನೆಯಿದೆಯೋ ಅದರ ಪ್ರಕಾರದ ವಿಭಿನ್ನ ಅರ್ಥ ಹೊರಡುವುದು ಇಲ್ಲಿಯೂ ಗೋಚರಿಸುತ್ತದೆ. ಸೃಷ್ಟಿಯೆನ್ನುವುದು ಬರಿ ಆರಂಭ ಮಾತ್ರ, ಮತ್ತದರ ಪಾಲನೆ, ಪೋಷಣೆ, ಅಭಿವೃದ್ಧಿಯ ಹೊಣೆಗಾರಿಕೆಯೂ ಪ್ರಾಮುಖ್ಯವೆನ್ನುವುದು ಇಲ್ಲಿ ಇಣುಕುವ ಮತ್ತೊಂದು ಇಂಗಿತ.


ನಾಕುತಂತಿಯೊಂದು ಸಾಲು – ೧೨
______________________________

’ಚಿತ್ತೀಮಳಿ ತತ್ತೀ ಹಾಕತಿತ್ತು ಸ್ವಾತಿ ಮುತ್ತಿನೊಳಗ ಸತ್ತಿsಯೊ ಮಗನs ಅಂತ ಕೂಗಿದರು ಸಾವೀ ಮಗಳು, ಭಾವೀ ಮಗಳು ಕೂಡಿ’

ಮೊದಲಿಗೆ ಈ ಸಾಲನ್ನು ಸ್ವಾತಿಮಳೆಯ ಹನಿಯೊಂದು ಸ್ವಾತಿಮುತ್ತಾಗುವ ಹಿನ್ನಲೆಯ ನೇರ ಅರ್ಥದ ಬದಲು, ಅದರ ಮಥಿತಾರ್ಥದಲ್ಲಿ ಹುಡುಕಿ ನೋಡೋಣ.

‘ಚಿತ್ತೀಮಳಿ’ಎಂಬುದನ್ನು ಚಿತ್ತದಿಂದುದ್ಭವಿಸುವ ಪುಂಖಾನುಪುಂಖ ಆಲೋಚನೆಗೂ ಸಮೀಕರಿಸಬಹುದು – ವಿಶೇಷವಾಗಿ ಕಾವ್ಯ ಸೃಷ್ಟಿಯ ದಿಕ್ಕಿನಲ್ಲಿ ಆಲೋಚಿಸಿದಾಗ. ಮಳೆಯಂತೆ ಧಾರಾಕಾರವಾಗಿ ಎಷ್ಟೆಲ್ಲಾ ಆಲೋಚನೆಗಳು, ಹೊಳಹುಗಳು, ಅತಿಶಯವೆನಿಸುವ ಪದಸಾಲುಗಳು ತಟ್ಟನೆ ಹೊಳೆದು ಮನದಲ್ಲಿ ಆವರಿಸಿಕೊಂಡುಬಿಡುತ್ತವೆ. ಆದರೆ ಎಲ್ಲವು ಅದ್ಭುತ ಕವಿತೆಯಾದೀತೆಂದು ಹೇಳಲಾಗದು. ಕೆಲವು ಸರಿಯಾದ ಚಿಂತನೆ, ಕಲ್ಪನೆಯ ಚಿಪ್ಪಿನಲ್ಲಿ ಸೇರಿ ಸ್ವಾತಿಮುತ್ತಿನ ತರಹದ ಉತ್ಕೃಷ್ಟ ಸೃಷ್ಟಿಯಾಗಬಹುದು. ಮತ್ತೆ ಕೆಲವು, ಅಷ್ಟೆಲ್ಲ ಕಸರತ್ತಿನ ನಂತರವೂ ಸಪ್ಪೆಯಾಗಿ, ಕೆಲಸಕ್ಕೆ ಬಾರದ ಖಾಲಿ ಪದಪುಂಜವಾಗಿಬಿಡಬಹುದು. ಕೆಲವೊಮ್ಮೆ ಸ್ಫೂರ್ತಿ ಬಂದ ಹೊತ್ತಲಿ ಆ ಅಮೂರ್ತ ಪದಗಳನ್ನು ಹಿಡಿದು , ಚಿತ್ತದಿಂದ ಮರೆಯಾಗುವ ಮೊದಲೇ ಕಟ್ಟಿಹಾಕದಿದ್ದರೆ , ಅವು ಶಾಶ್ವತವಾಗಿ ಕಳೆದುಹೋಗಿಬಿಡಬಹುದು. ಹಾಗಾಗುವ ಮುನ್ನ ಅದನ್ನು ಮೂರ್ತೀಭವಿಸಿಬಿಡಬೇಕು; ಸ್ವಾತಿಮುತ್ತಿನಂತಹ ಅಪರೂಪದ ಮುತ್ತಾಗಿಸಿಬಿಡಬೇಕು. ಚಿತ್ತವಿಡುವ ತತ್ತಿಯಲ್ಲಿ ಅದೆಷ್ಟೋ ಇಂತಹ ತತ್ತಿಗಳು ಉದ್ಭವವಾದರೂ ನಿಜವಾದ ಮುತ್ತಾಗುವ ಭಾಗ್ಯ ಕೆಲವಕ್ಕೆ ಮಾತ್ರ. ಅದಕ್ಕೆ ಅದನ್ನು ಕಳೆದುಹೋಗದ ಹಾಗೆ, ಹುಟ್ಟುವ ಮೊದಲೇ ಸತ್ತು ಹೋಗದ ಎಚ್ಚರದಿಂದ ಹಿಡಿದಿಟ್ಟುಕೋ ಎನ್ನುವ ಕಾಳಜಿಯನ್ನು ಇಲ್ಲಿ ಕಾಣಬಹುದು.

ಆ ಗಳಿಗೆಯ ಮನದೊಳಗಣ ಹೋರಾಟ, ಗೊಂದಲಗಳು ಈ ಸಾಲಿನ ಇಬ್ಬರು ಮಗಳುಗಳ ರೂಪದಲ್ಲಿ ಇಣುಕುತ್ತದೆ. ಮಗಳು ಎಂದರೆ ಹೆತ್ತವರಿಗೆ ಹೆಚ್ಚು ಪ್ರೀತಿ. ಕವಿಗೆ ಕಾವ್ಯವಾಗುವ ಹೊತ್ತಲಿ ಸೃಷ್ಟಿಸಿದ ಪ್ರತಿ ಪದ, ಸಾಲು, ಭಾವ, ಆಶಯಗಳು ಹೆತ್ತ ಮಗಳಿದ್ದ ಹಾಗೆಯೇ. ಆದರೆ ಎಲ್ಲವು ಸ್ಪಷ್ಟವಿರದ, ಮೂರ್ತಾಮೂರ್ತ ಸಮ್ಮಿಶ್ರ ಗೊಂದಲಗಳ ಕಲಸುಮೇಲೋಗರ ಆ ಗಳಿಗೆ. ಏನೋ ಹುರುಪು, ಉತ್ಸಾಹ ಹುಟ್ಟಿಸಿದಂತೆ ಮೂಡುವ ಸ್ಫೂರ್ತಿಭಾವದನಿಸಿಕೆಯೊಂದು ‘ಠುಸ್’ ಪಟಾಕಿಯಂತೆ ಹುಟ್ಟುವ ಮೊದಲೇ ಸತ್ತುಹೋಗಿಬಿಡಬಹುದು – ಅದನ್ನೇ ‘ ಸಾಯುವ ಈ ಮಗಳು – ಸಾವೀ ಮಗಳು’ ಎನ್ನುವ ಪದಗಳಲ್ಲಿ ಪ್ರತಿನಿಧಿಸಿದಂತಿದೆ. ಅದರ ನಡುವಲ್ಲೇ ಮತ್ತೊಂದಷ್ಟು ಸ್ಫೂರ್ತಿಸರಕು ತಟ್ಟನೆ, ಸುಲಲಿತವಾಗಿ ಹರಿದು ತೃಪ್ತಿನೀಡುವ ಸಾಲಾಗಿಬಿಡಬಹುದು – ಆ ಅನಾವರಣದಲ್ಲಿ ವ್ಯರ್ಥವಾಗದೆ ಮೂರ್ತವಾದ ‘ಭಾವೀ ಮಗಳಾಗುತ್ತಾ’. ಒಟ್ಟಾರೆ ಈ ಇಬ್ಬರು ಮಗಳೂ ಕೂಡಿ ಕುಲುಮೆಯಲ್ಲಿ ಬೇಯಿಸಿ, ಭಟ್ಟಿ ಇಳಿಸಿದ ಪಾಕವೇ ಅಂತಿಮ ರೂಪವಾಗುತ್ತದೆ. ಸಾವೀ ಮಗಳು ಎಂದರೆ ಭೂತಕಾಲದ ಅನುಭವದಿಂದ ಗ್ರಹಿಸಿದ ತಿಳುವಳಿಕೆ ಎಂತಲೂ ಅಂದುಕೊಳ್ಳಬಹುದು.. ಆಗ ಭಾವಿ ಮಗಳು ಎಂದರೆ ಭವಿತದ ಸ್ವರೂಪ. ಭೂತದ ಕೊಂಡಿಯಲ್ಲಿ ಭವಿತವನ್ನು ಸಮೀಕರಿಸಿ ಕಟ್ಟುವ ಅಗತ್ಯ, ಅನಿವಾರ್ಯತೆಯನ್ನು ಇದು ಸೂಚಿಸುತ್ತದೆ.

ಈಗ ಇದೆ ಸಾಲನ್ನು ಸ್ವಾತಿ ಮಳೆಹನಿ ಸ್ವಾತಿಮುತ್ತಾಗುವ ನಿಸರ್ಗಸಹಜ ಕ್ರಿಯೆಯ ಹಿನ್ನಲೆಯಲ್ಲಿ ನೋಡೋಣ:

‘ಚಿತ್ತೀ ಮಳಿ’ ಎಂದಾಕ್ಷಣ ತಟ್ಟನೆ ಕಣ್ಮುಂದೆ ನಿಲ್ಲುವ ಚಿತ್ರ ಚಿತ್ತಾ ನಕ್ಷತ್ರದಲ್ಲಿ ಮುಹೂರ್ತವಿಟ್ಟುಕೊಂಡು ಬರುವ ಸ್ವಾತಿಮಳೆ. ಹಾಗೆಂದು ನನ್ನ ಅನಿಸಿಕೆ; ಹಾಗೊಂದು ಸ್ವಾತಿಮಳೆಗೂ-ಚಿತ್ತಾನಕ್ಷತ್ರಕ್ಕೂ ಗಂಟುಹಾಕಬಹುದಾದ ಸಂಬಂಧ ಇದೆಯೋ, ಇಲ್ಲವೇ ನಿಜಕ್ಕೂ ಗೊತ್ತಿಲ್ಲ! ಅದೆಂತೆ ಇರಲಿ, ಮಳೆಯ ವಿಷಯಕ್ಕೆ ಬಂದಾಗ ಸ್ವಾತಿಮಳೆಗೊಂದು ವಿಶಿಷ್ಠ ಸ್ಥಾನವಿದೆ. ಸ್ವಾತಿಮಳೆಯ ಹನಿ, ನೀರೊಡಲಿನಲ್ಲಿರುವ ಮುತ್ತಿನ ಚಿಪ್ಪನು ಸೇರಿ ಅದರೊಳಗಿನ ಸ್ವಾತಿಮುತ್ತಾಗುವುದು ನೈಸರ್ಗಿಕ ಪ್ರಕ್ರಿಯೆಯ ಅದ್ಭುತಗಳಲ್ಲೊಂದು. ಅದು ಕವಿಭಾವದಲ್ಲಿ ವಿಹಂಗಮವಾಗಿ ಅರಳುವ ಪರಿ ನೋಡಿ : ‘ಚಿತ್ತೀಮಳೆ ತತ್ತಿ ಹಾಕುತ್ತಿತ್ತಂತೆ’ ( ಚಿತ್ತೀಮಳೆ ‘ಮುಂದೆ ಮುತ್ತಾಗುವ ತತ್ತಿಯ’ ಮಳೆ ಸುರಿಸುತ್ತಿತ್ತು ) – ಆ ಮುತ್ತಿನೊಳಗೆ. ಆ ಮಳೆಯಿಟ್ಟ ತತ್ತಿ ಪ್ರಬುದ್ಧವಾಗಿ, ಪರಿಪಕ್ವವಾಗಿ ರೂಪುಗೊಳ್ಳುತ್ತ ಮುಂದೆ ಸ್ವಾತಿಮುತ್ತಾಗಬೇಕಾಗಿದೆ. ಅದಕ್ಕೆಂದೇ ಈ ತತ್ತಿಯನಿಡುವ ಕಾಯಕ ಜರುಗುತ್ತಲಿದೆ ಮಳೆ ಹನಿಯ ಸ್ವರೂಪದಲ್ಲಿ.

ಆದರೆ ಹಾಗಿಟ್ಟ ಎಲ್ಲ ಹನಿಯು ಮುತ್ತಾಗುವುದಿಲ್ಲವಲ್ಲ? ಮುತ್ತಾಗಬೇಕಾದರೆ ಸ್ವಾತಿ ಮಳೆಹನಿ ಚಿಪ್ಪಿನೊಳಗೆ ಸೇರಿಕೊಂಡು, ಯಾವುದೋ ನಿರ್ದಿಷ್ಠ ಪ್ರಕ್ರಿಯೆ ನಡೆದು ಸಾಂದ್ರೀಕೃತಗೊಂಡು, ಸ್ವಾತಿಮುತ್ತಿನ ರೂಪಾಂತರವಾಗಬೇಕು. ಎಷ್ಟೋ ತತ್ತಿಗಳು (ಹನಿಗಳು) ಮುತ್ತಾಗದೆ ನಶಿಸಿಹೋಗುವುದುಂಟು, ಕೊಳೆತು ಹೋಗುವುದುಂಟು. ಪುಣ್ಯ ಮಾಡಿದ ಕೆಲವೇ ಹನಿಗಳು ಮಾತ್ರ ಮುತ್ತಾಗುವ ಸಾರ್ಥಕ್ಯ ಹೊಂದಲು ಸಾಧ್ಯವಾಗುತ್ತದೆ. ಹೀಗಾಗಿ ಹನಿಯಿಂದ ರೂಪುಗೊಂಡ ತತ್ತಿಗಳಿಗೆ ‘ಮುತ್ತಾಗದೆ ಸತ್ತುಹೋದಿಯಾ, ಸರಿಯಾಗಿ ಸಂಭಾಳಿಸಿಕೋ’ ಎಂದು ಎಚ್ಚರಿಸಿದಂತಿದೆ ಈ ಸಾಲುಗಳ ಭಾವ. ಹಾಗೆಂದು ಎಚ್ಚರಿಸಿದವರು ಯಾರು ? ಅಂದರೆ ಸಾವೀ ಮಗಳು ಮತ್ತು ಭಾವಿ ಮಗಳು ಇಬ್ಬರು ಸೇರಿ. ಯಾರಿವರಿಬ್ಬರು ? ಭೂತ ಮತ್ತು ಭವಿತದ ಪ್ರತೀಕವೆ ? ಮಗಳು ಮತ್ತು ಸೊಸೆಯೆ ? ವಾಸ್ತವ (ಸಾವೀ) ಮತ್ತು ಕಲ್ಪನೆಗಳ (ಭಾವೀ) ಪ್ರತೀಕವೇ ? ಸಾವಿನ ಮತ್ತು ಹೊಸಹುಟ್ಟಿನ ಎರಡು ತುದಿಗಳ ಸಂಕೇತವೆ ? ಜೀವಾತ್ಮ (ಸಾವಿನಲ್ಲಿ ಬಿಡುಗಡೆಯಾಗುವ) ಅಥವಾ ಪರಮಾತ್ಮಗಳ (ಭಾವೀ ಲೋಕದ, ಐಕ್ಯವಾಗಬೇಕಾದ ಅವಿನಾಶಿ ಸ್ವರೂಪ) ಸಂಕೇತಿಸುವ ಬಗೆಯೇ ? ವಿಭಿನ್ನ ಕೋನದಲ್ಲಿ ವಿಭಿನ್ನ ಅರ್ಥ ಹೊರಡಿಸುವ ಪದ ಪ್ರಯೋಗವಿದು. ಆದರೆ ಸ್ವಾತಿಮುತ್ತಿನ ರೂಪುಗೊಳ್ಳುವಿಕೆಯ ಹಿನ್ನಲೆಯಲ್ಲಿ ನೋಡಿದಾಗ ಈ ಮುಂದಿನ ವಿವರಣೆ ಹೆಚ್ಚು ಸಂಗತವೆನಿಸುತ್ತದೆ. ಹನಿ ತತ್ತಿಯ ರೂಪ ಧರಿಸುವುದು ಒಂದು ಘಟ್ಟವಷ್ಟೇ. ಪ್ರತಿ ತತ್ತಿ ಮುತ್ತಾಗುವತನಕ ಅದು ಆಗಿಯೇ ತೀರುವುದೆಂಬ ಭರವಸೆಯಿಲ್ಲ. ಹಾಗೆಯೇ ಮುತ್ತು ಆದಮೇಲು ಅದನ್ನು ಜತನದಿಂದ ಪೋಷಿಸಿ, ಪಕ್ವವಾಗಿಸುವ ಜವಾಬ್ದಾರಿಯಿರುತ್ತದೆ. ಮುತ್ತಾಗುವತನಕ ಸರಿಯಾದ ಆರೈಕೆ ಇರದಿದ್ದರೆ ಹುಟ್ಟುವ ಮೊದಲೇ ಕಮರಿ ಹೋಗುತ್ತದೆ (ಸಾವೀ ಮಗಳು). ಮುತ್ತಾಗತೊಡಗಿದ ಮೇಲೂ ಭಾವೀಮಗಳಾಗುವತನಕ ಸರಿಯಾದ ಪಾಲನೆ ಪೋಷಣೆ ಅಗತ್ಯ. ಎರಡೂ ಸುಗಮವಾಗಿ ನಡೆಯುವಂತಿದ್ದರಷ್ಟೇ ಕೊನೆಗೂ ಅಮೂಲ್ಯಮುತ್ತಾಗಿ ಕೈಸೇರಲು ಸಾಧ್ಯವಾಗುವುದು.

ಇನ್ನು ಜೀವಸೃಷ್ಟಿಯ ದೃಷ್ಟಿಕೋನದಲ್ಲಿ ನೋಡಿದಾಗ ಹೊರಡುವ ಭಾವಗಳೂ ತೀರಾ ವಿಭಿನ್ನವೇನಲ್ಲ.

ಆ ದೃಷ್ಟಿಯಲ್ಲಿ ನೋಡಿದಾಗ, ಕಾಮನೆಯ ಆಲೋಚನೆಯ ಮೂಲ ಚಿತ್ತದಿಂದಲೇ ಹೊರಡುವಂತದ್ದು. ಅದು ಇಚ್ಚಾಶಕ್ತಿಯ ರೂಪದಿಂದ ಕ್ರಿಯಾಶಕ್ತಿಯಾಗಿ ಬದಲಾದಾಗ ಪುರುಷದ ವೀರ್ಯಾಣು ಅಂಡಾಶಯದೊಡನೆ ಸೀಮಿತ ಅವಧಿಯ, ಪರಿಪಕ್ವ ಸನ್ನಿವೇಶದಲ್ಲಿ ಮಿಳಿತವಾದಾಗಷ್ಟೇ ಸೃಷ್ಟಿಕ್ರಿಯೆ ಸಾಧ್ಯ. ಇಲ್ಲವಾದಲ್ಲಿ ಬಿಡುಗಡೆಯಾಗಿ ಹೋದ ವೀರ್ಯಾಣುಗಳು ಫಲಿತವಾಗದೆ ಸಾವನ್ನಪ್ಪುತ್ತವೆ. ಸ್ವಾತಿಮುತ್ತಿನ ಹಾಗೆ ಯಾವುದೋ ಒಂದು ವೀರ್ಯಾಣುವಷ್ಟೇ ಫಲಿತವಾಗಿ ಜನ್ಮತಾಳಲು ಸಾಧ್ಯ. ಅದೊಂದು ಸಾಧ್ಯತೆಯೂ ತಪ್ಪಿಹೋದರೆ, ಸೃಷ್ಟಿಫಲಿತ ಶೂನ್ಯವಾಗಿಬಿಡುತ್ತದೆ. ಅಸಂಖ್ಯಾತವಾಗಿ ಹೊರಟರು ವೀರ್ಯಾಣುಗಳ ಆಯಸ್ಸು ಸೀಮಿತ. ಅಂಡಾಣು ಸಂಗಮವಾಗದಿದ್ದರೆ ಕೆಲದಿನಗಳಲ್ಲಿ ತಂತಾನೇ ಸತ್ತುಹೋಗುವ ‘ಸಾವೀ ಮಗಳು’ ಇವುಗಳೇ. ಆದರೆ ಈ ಹೋಲಿಕೆಯಲ್ಲಿ ಮುಂದೆ ಸೃಷ್ಟಿಸಿದ ಜೀವಿಯಾಗಿ (ಭಾವೀ ಮಗಳಾಗಿ) ರೂಪುಗೊಳ್ಳುವ ಅಂಡಾಣುವಿನ ಆಯಸ್ಸು ಜಾಸ್ತಿ. ಭಾವೀಮಗಳಾಗುವ ಅದು ತನಗೆ ಬೇಕಾದ ಒಂದು ವೀರ್ಯಾಣುವಿನ (ಸಾವೀ ಮಗಳ) ಜೊತೆ ಕೂಡಿಕೊಂಡರೆ ಸಾಕು – ಸೃಷ್ಟಿ ವೇದಿಕೆ ಸಿದ್ಧ. ಆ ಗುಂಪಿನ ಗದ್ದಲದಲ್ಲಿ ಕಳೆದುಹೋಗದೆ ಇವರಿಬ್ಬರು ಹೇಗಾದರೂ ಕೂಡಿಬಿಟ್ಟರೆ ಸಾಕು (ಸಾವೀ ಮಗಳು, ಭಾವೀ ಮಗಳು ಕೂಡಿ). ಹಾಗಾಗುವ ಮೊದಲೇ ಸಾವಿಗೀಡಾದರೆ (ಸತ್ತೀಯೋ ಮಗನಾ) ಜೀವಸೃಷ್ಟಿ ಆಗುವುದಿಲ್ಲ – ಅದಕ್ಕೆ ಇಬ್ಬರು ಮಗಳುಗಳು ಎಚ್ಚರಿಕೆಯಿಂದ ಸಂಭಾಳಿಸಬೇಕು, ನಿಭಾಯಿಸಬೇಕು ಎನ್ನುವ ಜಾಗೃತಗೊಳಿಸುವ ಮಾತು, ಬೇಡಿಕೆಯ ದನಿ ಇಲ್ಲಿ ಇಣುಕುತ್ತದೆ.

ಒಟ್ಟಾರೆ ಸಾರಾಂಶದಲ್ಲಿ ಹೇಳುವುದಾದರೆ ಎರಡನೆಯ ಭಾಗದಲ್ಲಿ ಭೌತಿಕ ಮಟ್ಟದಲ್ಲಿದ್ದ ವಿವರಣೆ ಇಲ್ಲಿ ತಾತ್ವಿಕ ಮತ್ತು ಮಾನಸಿಕ ಸ್ತರಕ್ಕೇರುವ ಪ್ರಬುದ್ಧತೆಯನ್ನು ತೋರುತ್ತದೆ. ಜತೆಜತೆಗೆ ಸಹಜ ಪ್ರಕ್ರಿಯೆಯೆ ಆದರೂ ಅದರಲ್ಲಿರುವ ಸಂದಿಗ್ದಗಳು ಎಷ್ಟೊಂದು ಸೀಮಿತ ನಿರ್ಬಂಧಗಳ ನಡುವೆ ಕಾರ್ಯ ನಿರ್ವಹಿಸಬೇಕು, ಆದ ಕಾರಣ ಎಷ್ಟು ಮುನ್ನೆಚ್ಚರಿಕೆ ಅಗತ್ಯ ಎನ್ನುವುದನ್ನು ಒತ್ತಿ ಹೇಳುತ್ತವೆ.

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

ಚಿತ್ರಕೃಪೆ: ವಿಕಿಪಿಡಿಯಾ

02049. ಸಿಹಿಗೊಂದು ಸಿಹಿಗುದ್ದು


02049. ಸಿಹಿಗೊಂದು ಸಿಹಿಗುದ್ದು
_______________________


(೦೧)
ಇರೆ ಅಕ್ಕರೆ
ಸಕ್ಕರೆ ನೀರ ಹಾಗೆ
ನೀರೆ ಸಕ್ಕರೆ

(೦೨)
ಸಕ್ಕರೆ ಪಿಷ್ಠ
ನನ್ನಿಷ್ಟ ಅಂದ ದೊರೆ
ಸಕ್ಕರೆ ರೋಗ

(೦೩)
ಸಕ್ಕರೆ ಮಾತು
ಒಂದೆರಡು ಜಾಮೂನು
ಕಾನೂನು ಮಿತಿ

(೦೪)
ಸಕ್ಕರೆ ಸರಿ
ತೂಕವಿರೆ ಸೊಗಸು
ಬೊಜ್ಜರಗಿಸು

(೦೫)
ಒಂದಕೆ ತೃಪ್ತಿ
ಎರಡಕೆ ಸಂತೃಪ್ತಿ
ಮೂರಕೆ ಮುಕ್ತಿ

(೦೬)
ಜಾಮೂನು ತಿನ್ನು
ರಸ ತಿನ್ನಬಾರದು
ಮೂರ್ಖರ ವಾದ

(೦೭)
ಹಬ್ಬಕೆ ಸಿಹಿ
ಸಿಹಿಗಿಲ್ಲದ ಹಬ್ಬ
ನಮ್ಮ ಪಾಲಿಗೆ

(೦೮)
ಕುಡಿದು ತಿಂದು
ಚಪ್ಪರಿಸೋ ನಾಲಿಗೆ
ಸಂಚು ಒಳಗೆ

(೦೯)
ಇರುತ್ತಿತ್ತೇನು
ರುಚಿಯಿರದೆ ಇದ್ದರೆ
ಬೊಜ್ಜು ಸಕಲ

(೧೦)
ಸಕ್ಕರೆ ತುಟಿ
ಹಚ್ಚಿದ್ದೋ ಹಂಚಿಸಿದ್ದೋ
ಬಯಕೆ ತುಟ್ಟಿ


– ನಾಗೇಶ ಮೈಸೂರು
೨೭.೦೫.೨೦೧೭

(Picture source : internet / social media / Creative Commons)