02053. ನಾಕುತಂತಿಯೊಂದು ಸಾಲು – ೧೩


02053. ನಾಕುತಂತಿಯೊಂದು ಸಾಲು – ೧೩
____________________________________


’ಈ ಜಗ, ಅಪ್ಪಾ, ಅಮ್ಮನ ಮಗ ಅಮ್ಮನೊಳಗ ಅಪ್ಪನ ಮೊಗ ಅಪ್ಪನ ಕತ್ತಿಗೆ ಅಮ್ಮನ ನೊಗ ನಾ ಅವರ ಕಂದ ಶ್ರೀ ಗುರುದತ್ತ ಅಂದ.’

ಹಿಂದಿನ ಸಾಲಲ್ಲಿ ತಾತ್ವಿಕ ಮತ್ತು ಮಾನಸಿಕ ಸ್ತರದಲ್ಲಿ ವಿಹರಿಸುತ್ತಿದ್ದ ಕವಿಭಾವ ವೈಯಕ್ತಿಕ ಮಟ್ಟದಿಂದ ಸಾರ್ವತ್ರಿಕ ಮಟ್ಟಕ್ಕೇರಿಬಿಡುವುದನ್ನು ಇಲ್ಲಿ ಕಾಣಬಹುದು. ಇಲ್ಲಿಯತನಕ ಸೃಷ್ಟಿಯ ಬಿಡಿಬಿಡಿ ಭಾಗಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುತ್ತಿದ್ದ ಪರಿಗಣನೆ, ಈಗ ಏಕಾಏಕಿ ಸಮಗ್ರತೆ, ಸಮಷ್ಟಿಯ ಮಟ್ಟಕ್ಕೇರಿ ಇಡೀ ಜಗದ ಮತ್ತು ಬ್ರಹ್ಮಾಂಡದ ಸೃಷ್ಟಿಯ ಬಗ್ಗೆ ಪ್ರಸ್ತಾಪಿಸತೊಡಗುತ್ತದೆ. ಹಾಗೆಯೇ ಇಲ್ಲಿ ಕಂಡುಬರುವ ಮತ್ತೊಂದು ವಿಶೇಷವೆಂದರೆ – ಈ ಸಾಲಿನಲ್ಲಿ ಕವಿಹೃದಯ ತಟ್ಟನೆ ಆಧ್ಯಾತ್ಮಿಕ ಸ್ತರದತ್ತ ನೆಗೆದುಬಿಟ್ಟಿದೆ. ಪರಂಪರಾಗತ ನಂಬಿಕೆ, ಪೌರಾಣಿಕ ಹಿನ್ನಲೆಯ ದೃಷ್ಟಿಕೋನಗಳೆಲ್ಲದರ ಸಮ್ಮೇಳನವಾದಂತಾಗಿ ಸೃಷ್ಟಿಯ ಮೂಲ ಕಾರಣಕರ್ತರು ಮತ್ತು ಆದಿದಂಪತಿಗಳೆಂದು ಪರಿಗಣಿಸಲ್ಪಟ್ಟಿರುವ ಶಿವ-ಪಾರ್ವತಿಯರನ್ನು ಓಲೈಸುವ ದನಿ ಕಂಡುಬರುತ್ತದೆ – ಅವರನ್ನು ಈ ಜಗದ ಅಪ್ಪ-ಅಮ್ಮ ಎಂದು ಸಂಭೋಧಿಸುವ ಮುಖಾಂತರ. ಈ ಜಗ (ಅರ್ಥಾತ್ ನಾವಿರುವ ಸೃಷ್ಟಿ) ಆ ಅಪ್ಪ-ಅಮ್ಮರ ಮಗನಂತೆ. ಆ ಆದಿದಂಪತಿಗಳ ಮಿಲನದ ಫಲಿತವಾಗಿ ಜನಿಸಿದ ಸೃಷ್ಟಿಯಿದು, ಈ ಪ್ರಪಂಚ. ಅಂದರೆ ಆ ದೈವಿಕ ಪ್ರಕೃತಿ-ಪುರುಷಗಳ ಮಿಲನ ಸಮ್ಮೇಳನದಲ್ಲಿ ಈ ಸುಂದರ ಜಗದ ಸೃಷ್ಟಿಯಾಗಿಹೋಗಿದೆ. ಆದರೆ ಇಲ್ಲಿನ ಸೋಜಿಗವೆಂದರೆ – ಇಲ್ಲಿ ಪ್ರಕೃತಿ ಬೇರೆಯಲ್ಲ, ಪುರುಷವು ಬೇರೆಯಲ್ಲ. ಎರಡೂ ಒಂದೇ ಸ್ವರೂಪದ ವಿಭಿನ್ನ ಅಸ್ತಿತ್ವಗಳು ಅಷ್ಟೆ. ಅದನ್ನೇ ನಾವೂ ಪರಬ್ರಹ್ಮವೆನ್ನುತ್ತೇವೆ. ಪ್ರಕೃತಿ, ಪುರುಷ ಎರಡೂ ಸ್ವರೂಪಗಳು ಬ್ರಹ್ಮದ ವಿವರಣೆಗೆ ಹೊಂದುವಂತದ್ದೆ. ಅದು ಅವನೂ ಅಲ್ಲ, ಅವಳೂ ಅಲ್ಲದ ವರ್ಣನಾತೀತ ಏಕೀಕೃತ ಸ್ವರೂಪ. ಆ ತತ್ತ್ವದ ಸಾರವನ್ನು ಅವಿರತ ಸಾರುವ ಹಾಗೆ ಅನಾವರಣಗೊಂಡ ಬಗೆಯೇ ಶಿವಶಿವೆಯರ ಅರ್ಧನಾರೀಶ್ವರ – ಅರ್ಧನಾರೀಶ್ವರಿ ರೂಪ.

ಇದನ್ನು ವಿವರಿಸುವ ಪದಪುಂಜ ‘ಅಮ್ಮನೊಳಗೆ ಅಪ್ಪನ ಮೊಗ’. ಅಮ್ಮನೊಳಗೆ ಅಪ್ಪನ ಮೊಗವು ಸೇರಿಕೊಂಡಿದೆ ಎಂದಾಗ ಅವರಿಬ್ಬರೂ ಒಂದೇ ಎನ್ನುವ ಭಾವ ಸ್ಪಷ್ಟವಾಗಿ ಒಡಮೂಡುತ್ತದೆ. ಆದರೆ ಇಲ್ಲಿಯೂ ಗಮನಿಸಬೇಕಾದ ಒಂದು ಚತುರತೆಯಿದೆ. ಯಾಕಿದು ‘ಅಪ್ಪನೊಳಗೆ ಅಮ್ಮನ ಮೊಗ’ ಆಗದೆ ‘ ಅಮ್ಮನೊಳಗೆ ಅಪ್ಪನ ಮೊಗ’ ಆಯ್ತು ? ಪರಬ್ರಹ್ಮದ ವಿವರಣೆಯಲ್ಲಿ ಪುರುಷ (ಅಪ್ಪ) ಜಡಶಕ್ತಿ, ನಿಶ್ಚಲತೆಯ ಸಂಕೇತ. ಪ್ರಕೃತಿ (ಅಮ್ಮ) ಚಲನಶೀಲತೆ ಮತ್ತು ಚಂಚಲತೆಯ ಸಂಕೇತ. ಪರಬ್ರಹ್ಮ ದರ್ಶನವಾಗಲಿಕ್ಕೂ ಮಾತೆಯ ಮೂಲಕವೇ ಪ್ರಯತ್ನಿಸಬೇಕು. ಹಾಗಾಗಿ ದೇವಿ ಪರಾಶಕ್ತಿಯ ಸ್ವರೂಪ – ಆ ಕಾರಣದಿಂದಲೇ ಅಮ್ಮನೊಳಗೆ ಅಪ್ಪನ ಮೊಗವೆಂದು ಪ್ರಸ್ತಾಪಿಸಲ್ಪಟ್ಟಿದೆ ಎಂದು ನನ್ನ ಅನಿಸಿಕೆ. ಸರಳವಾಗಿ ಹೇಳಬೇಕೆಂದರೆ ಇಲ್ಲಿ ಪ್ರಕೃತಿ ಪುರುಷಗಳೆರಡೂ ಏಕೀಕೃತವಾಗಿ, ಮಿಲನದಲ್ಲಿ ಒಬ್ಬರಲ್ಲೊಬ್ಬರು ಅಂತರ್ಗತವಾಗಿ ಹೋದ ಭಾವ ಸಾಮಾನ್ಯನೊಬ್ಬನ ಆಡುನುಡಿಗಳಾಗಿ ಕಾಣಿಸಿಕೊಂಡಿವೆ. ಎರಡು ಭೌತಿಕ ಕಾಯಗಳು ಒಂದೇ ಕಾಯದ ಪಾತ್ರಕ್ಕೆ ಹೊಂದಿಕೊಳ್ಳುವುದು ಲೌಕಿಕ ಜಗದ ಭೌತಶಾಸ್ತ್ರದ ನಿಯಮಕ್ಕೆ ಅಪವಾದ. ಜಗನ್ಮಾತಾಪಿತರ ವಿಷಯವೆಂದರೆ ಅದು ಲೌಕಿಕ ಜಗದ ಮಾತಲ್ಲ – ಹೀಗಾಗಿ ಲೌಕಿಕ ನಿಯಮಗಳನ್ನು ಮೀರಿದ ವರ್ಣನೆ ಇದು. ಹಾಗೆಯೇ ಸೃಷ್ಟಿಯೆನ್ನುವ ನಾಕುತಂತಿಯ ಪ್ರಕ್ರಿಯೆ ಲೌಕಿಕಾಲೌಕಿಕ ಜಗಗಳೆಲ್ಲವನ್ನು ತನ್ನ ಸಾಮಾನ್ಯಸೂತ್ರದಿಂದ ಬಂಧಿಸಿಡುವ ಏಕಮಾತ್ರ ಸಾಮಾನ್ಯ ಎಳೆ (ಕಾಮನ್ ತ್ರೆಡ್) ಎಂದೂ ನಿಷ್ಪತ್ತಿಸಬಹುದು. ಅರ್ಥಾತ್ – ಸಕಲ ಬ್ರಹ್ಮಾಂಡವನ್ನು ರಚಿಸಲು ಬಳಸಿದ ಏಕಮಾತ್ರ ಮೂಲಸೂತ್ರವೇನಾದರೂ ಈ ಜಗದಲ್ಲಿ ಇದ್ದರೆ – ಅದು ಸೃಷ್ಟಿಕ್ರಿಯೆಯ ಸೂತ್ರ ಮಾತ್ರ ಎಂದು.

ಮತ್ತೆ ಕವಿತೆಯ ಸಾಲಿಗೆ ಬಂದರೆ, ಅದೇ ಜಗದಪ್ಪಾ-ಅಮ್ಮನ ಕಥೆ ಮತ್ತೊಂದು ಆಯಾಮದಲ್ಲಿ ಮುಂದುವರೆಯುತ್ತದೆ – ಸೃಷ್ಟಿಯೋತ್ತರ ಪರಿಪಾಲನ ಪರ್ವದ ಕಾರ್ಯನಿರ್ವಹಣೆಯ ರೂಪದಲ್ಲಿ. ಇಲ್ಲಿಯೂ ಮಾತೃರೂಪಿಣಿ ದೇವಿಯ ಕೃತ್ಯವೇ ವೈಭವೀಕರಿಸಲ್ಪಟ್ಟಿದೆ – ಮತ್ತೆ ಅವಳ ಪ್ರಾಮುಖ್ಯತೆಯನ್ನು ಸಾರುತ್ತ: ಯಾಕೆಂದರೆ ‘ಅಪ್ಪನ ಕತ್ತಿಗೆ ಅಮ್ಮನ ನೊಗ’ ಎಂದಾಗ ನೆನಪಾಗುವ ದೃಶ್ಯ – ಪರಶಿವ ಹಾಲಾಹಲವನ್ನು ಕುಡಿದು ವಿಷಕಂಠನಾದ ಕಥಾನಕ. ಸಮುದ್ರ ಮಥನದಲೆದ್ದ ಹಾಲಾಹಲ ಮಿಕ್ಕವರನ್ನು ನಾಮಾವಶೇಷವಾಗಿಸುವ ಮೊದಲೆ, ಹಿಂದೆಮುಂದೆ ಯೋಚಿಸದೆ ಅದನ್ನೆತ್ತಿ ಆಪೋಷಿಸಿಕೊಂಡುಬಿಟ್ಟನಂತೆ ಜಗದೀಶ ! ಆದರೆ ಆತಂಕ ಬಿಟ್ಟಿದ್ದಾದರೂ ಯಾರನ್ನು ? ಅಲ್ಲೇ ಇದ್ದ ಜಗನ್ಮಾತೆಗೆ ಗಾಬರಿಯಾಯ್ತಂತೆ – ಪೂರ್ತಿ ಕುಡಿದು ತನ್ನ ಜೀವಕ್ಕೆ ಅಪಾಯ ತಂದುಕೊಂಡರೆ ಎಂದು ಹೆದರಿ, ಆ ವಿಷ ದೇಹದೊಳಕ್ಕೆ ಇಳಿದು ಹೋಗದಂತೆ ಅವನ ಗಂಟಲಲ್ಲೇ ತಡೆದು ನಿಲ್ಲಿಸಿಬಿಟ್ಟಳಂತೆ – ಅವನ ಕತ್ತಿನ ಹತ್ತಿರ ತನ್ನ ಕೈಯಿಂದ ‘ನೊಗ ಹೊತ್ತಂತೆ ‘ ತಡೆಯೊಡ್ಡುತ್ತ ! (ಅಪ್ಪನ ಕತ್ತಿಗೆ ಅಮ್ಮನ ನೊಗ).

ಇಲ್ಲಿ ನೊಗ ಎನ್ನುವ ಪದ ಹೊಣೆಗಾರಿಕೆ, ಜವಾಬ್ದಾರಿಯ ಇಂಗಿತ. ಸೃಷ್ಟಿಯ ನಂತರವೂ ಎಲ್ಲವೂ ಸುಗಮವಾಗೇನು ಇರುವುದಿಲ್ಲ; ಅಲ್ಲಿಯೂ ಅನೇಕ ತಳಮಳ ಹೋರಾಟಗಳನ್ನು ಎದುರಿಸಿಕೊಂಡೆ ಸಾಗುತ್ತ, ಹೊಣೆಗಾರಿಕೆಯಿಂದ ನಡೆಯುತ್ತಾ ಪಕ್ವತೆ, ಪ್ರಬುದ್ಧತೆಯತ್ತ ಸಾಗಬೇಕು. ಜತೆಗೆ ನೊಗವನ್ನು ಹೆಗಲ ಮೇಲೆ ಹೊತ್ತ ಎತ್ತು ಕರ್ಮಸಿದ್ದಾಂತಕ್ಕೆ ಬದ್ಧನಾಗಿ, ಒಂದಿನಿತೂ ಪ್ರಶ್ನಿಸದೆ ಉಳುಮೆ ಮಾಡಿಕೊಂಡು ನಡೆದಿರುತ್ತದೆ – ತನ್ನ ಹೊಣೆಗಾರಿಕೆಯನ್ನು ಹೇಗಾದರೂ ನಿರ್ವಹಿಸಬೇಕೆನ್ನುವ ತಪನೆಯಿಂದ. ಈ ನಿರ್ವಹಣೆ, ನಿಭಾವಣೆಯ ಹೊಣೆಗಾರಿಕೆ ಆ ತ್ರಿಮೂರ್ತಿಗಳಾದಿಯಾಗಿ ಆ ಆದಿದಂಪತಿಗಳಿಗೂ ತಪ್ಪಿದ್ದಲ್ಲ. ಅವರೂ ಕರ್ಮಬದ್ಧತೆಗೆ ಹೊರತಲ್ಲ ಎಂದ ಮೇಲೆ, ಮಿಕ್ಕ ಸೃಷ್ಟಿಯ ಕುರಿತು ಹೇಳುವುದಾದರೂ ಏನಿದೆ ? ಈ ಸೃಷ್ಟಿಯಲ್ಲಿ ನಾವುಗಳು ವಹಿಸಬೇಕಾದ ಪಾತ್ರವು ಸಹ ಅಂತದ್ದೇ. ಅದನ್ನೇ ಒತ್ತಿ ಹೇಳುತ್ತಾ ಕವಿ – ಅಂತಹ ಮಹಾನ್ ದಂಪತಿಗಳು ಸೃಜಿಸಿದ ಸೃಷ್ಟಿಯಲ್ಲಿ ಹುಟ್ಟಿದ ಕೋಟ್ಯಾನುಕೋಟಿ ಚರಾಚರ ವಸ್ತುಗಳ ಪೈಕಿ ನಾನು ಕೂಡ ಒಬ್ಬ… ಅಂದ ಮೇಲೆ ನಾನು ಅವರ ಕಂದನಿದ್ದ ಹಾಗೆ ಲೆಕ್ಕ ತಾನೇ ? ಅವರೇ ನನ್ನ ಆದಿ ಗುರುಗಳಿದ್ದ ಹಾಗೆ ಅಲ್ಲವೇ ? (ನಾ ಅವರ ಕಂದ ಶ್ರೀ ಗುರುದತ್ತ ಅಂದ.) ಎನ್ನುತ್ತಾ ಮನುಜನಿಗೂ ದೈವತ್ವಕ್ಕೂ ಇರುವ ಅವಿನಾಭಾವ ಸಂಬಂಧವನ್ನು ಮಾತಾ-ಪಿತ-ಸುತ ತ್ರಿಕೋನದಡಿ ಹೊಂದಿಸಿಟ್ಟುಬಿಡುತ್ತಾರೆ – ಜತೆಜತೆಗೆ ಗುರುತ್ವವನ್ನೂ ಸಮೀಕರಿಸುತ್ತ. ಹೀಗೆ ತನ್ನನು ತಾನೇ (ಅರ್ಥಾತ್ ಮನುಕುಲವನ್ನೆ) ದೇವರ ಮಗ ಎಂದು ಹೇಳಿಕೊಳ್ಳುವ ಉತ್ಸಾಹ, ಧಾರ್ಷ್ಟ್ಯ ತೋರುತ್ತದೆ ಕವಿಮನಸ್ಸು. ಒಂದೆಡೆ ಅದು ಹೆಮ್ಮೆಯ ಪ್ರತೀಕವಾದರೆ ಮತ್ತೊಂದೆಡೆ ‘ನಾನು’ ಎಂಬ ಭಾವದ ಉತ್ಕೃಷ್ಟತೆಯ ಪ್ರತೀಕವಾಗುತ್ತದೆ.

ಒಟ್ಟಾರೆ ಇಡೀ ಜಗ ವ್ಯಾಪಾರವೆ ಆ ದೇವರ ಆಟ. ನಾವಲ್ಲಿ ಆಟವಾಡುವ ಪಗಡೆ ಕಾಯಿಗಳಂತೆ ಆದರೂ, ಎಲ್ಲಾ ನಮ್ಮಿಂದಲೇ ನಡೆಯುತ್ತಿದೆಯೆನ್ನುವ ಹಮ್ಮು, ಅಹಮಿಕೆ ತೋರುತ್ತೇವೆ. ಆದರೆ ನಮ್ಮನ್ನೆಲ್ಲ ಸೃಜಿಸಿದ ಆ ಪುರುಷ-ಪ್ರಕೃತಿ ಮೂಲಸ್ವರೂಪಿಗಳಲ್ಲಿ ಯಾರೂ ಹೆಚ್ಚಿಲ್ಲ, ಯಾರೂ ಕಡಿಮೆಯಿಲ್ಲ ಎನ್ನುವ ವಿನೀತ ಭಾವದ ಪ್ರದರ್ಶನವಾಗುತ್ತದೆ – ಅರ್ಧನಾರೀಶ್ವರ, ಅರ್ಧನಾರೀಶ್ವರಿ ರೂಪಧಾರಣೆಯಾದಾಗ. ಲೋಕರಕ್ಷಣೆಗಾಗಿ ವಿಷವನ್ನುಂಡು ನೀಲಕಂಠನಾಗುವ ಹಿನ್ನಲೆಯಲ್ಲಿ ಸ್ವಾರ್ಥರಹಿತ ಅರ್ಪಣಾಭಾವ ಎದ್ದು ಕಾಣುತ್ತದೆ. ನೊಗವೆಂದಾಗ ಹೆಗಲೇರುವ ಹೊಣೆಗಾರಿಕೆಯ ನೆನಪಾಗುತ್ತದೆ – ಕರ್ಮಸಿದ್ಧಾಂತದ ಜತೆಜತೆಗೆ. ಆದರೆ ಅವರ ಸರಪಳೀಕೃತ ಸೃಷ್ಟಿಯ ಕೊಂಡಿಯಾದ ನಾವು ಮಾತ್ರ – ನಾವಾ ದೇವರ ಅತಿಶಯದ ಸೃಷ್ಟಿ, ಬೆಲೆ ಕಟ್ಟಲಾಗದ ಅದ್ಭುತ ಎಂದೆಲ್ಲ ಭ್ರಮಿಸುತ್ತಾ ಅಹಂಕಾರ ಪಡುತ್ತೇವೆ. ಸೃಷ್ಟಿಕರ್ತನಿಗೂ ಇರದ ಸೊಕ್ಕಿನ ಪ್ರದರ್ಶನ ಸಾಧಾರಣ ಹುಲುಮಾನವರಲ್ಲಿದ್ದರೆ ಅದರಲ್ಲಿ ಅಚ್ಚರಿಯೇನು ಇಲ್ಲ. ಅಂತಿದ್ದಲ್ಲಿ, ಆ ದೈವದ ಭಾಗಾಂಶ ಸೌಜನ್ಯ ನಮ್ಮಲ್ಲಿ ಅಂತರ್ಗತವಾದರೆ ಅದು ದೇವಸೃಷ್ಟಿಯ ನಿಜವಾದ ಗೆಲುವು ಎಂದು ಪರಿಗಣಿಸಬಹುದು. ಬಹುಶಃ ಆ ಸಮಗ್ರ ಆಶಯವೆ ಈ ಸಾಲಿನ ಮೂಲೋದ್ದೇಶವಿರಬಹುದೆನಿಸುತ್ತದೆ.

ಅದ್ವೈತದ ತಾದಾತ್ಮ್ಯಕತೆ ಕೂಡ ಇಲ್ಲಿ ಪರೋಕ್ಷವಾಗಿ ಸೂಚಿತವಾಗಿದೆಯೆಂದು ಹೇಳಬಹುದು – ಆ ಆದಿದಂಪತಿಗಳ ವರಪುತ್ರ ತಾನೆಂದು ಹೇಳಿಕೊಳ್ಳುವಾಗ. ಈ ಚೌಕಟ್ಟಿನಲ್ಲಿ ನಾನು-ನೀನು ಎನ್ನುವ ಪ್ರಕೃತಿ-ಪುರುಷಸ್ವರೂಪರು ಆದಿದಂಪತಿಗಳೆ ಆಗುತ್ತಾರೆ. ಅವರ ಸೃಷ್ಟಿಯಾದ ಮನುಜ ‘ಕಂದ’ನು ದೇಹದಲ್ಲಿ ಅಮೂರ್ತ ಜೀವಾತ್ಮದ ಜತೆ ಏಕೀಭವಿಸಿ ಆ ಅನುಸಂಧಾನದಲ್ಲೆ ‘ಆನು-ತಾನು’ಗಳ ಪ್ರತಿನಿಧಿಯಾಗುತ್ತಾನೆ. ಹುಟ್ಟಿದ ಮಗುವನ್ನು ಸಾಕ್ಷಾತ್ ದೇವರ ಸ್ವರೂಪ ಎಂದು ಹೇಳುವ ಪರಿಪಾಠ, ಈ ದೃಷ್ಟಿಯಿಂದ ಅದೆಷ್ಟು ಅರ್ಥಪೂರ್ಣ ಅನಿಸಿಬಿಡುತ್ತದೆ ! ಹೀಗೆ ನಾಕುತಂತಿಗಳ ಮೊಟ್ಟಮೊದಲ ಝೇಂಕಾರ ಮಾನವತೆಯಿಂದ ದೈವಿಕಸ್ವರೂಪ ಪಡೆದುಕೊಳ್ಳುತ್ತದೆ. ಅಲ್ಲಿಂದ ಮುಂದೆ ಪೀಳಿಗೆಯಿಂದ ಪೀಳಿಗೆಗೆ, ಸಂತತಿಯಿಂದ ಸಂತತಿಗೆ ನಡೆಯುವುದೆಲ್ಲ ಬರಿ ಇದೆ ನಾಕುತಂತಿಗಳ ನಾದದ ಪುನರಾವರ್ತನೆ – ಸಂತತವಾಗಿ, ನಿರಂತರವಾಗಿ..

ಹಾಗೆಯೇ ಕೊನೆಯ ‘ನಾ ಅವರ ಕಂದ ಶ್ರೀ ಗುರುದತ್ತ ಅಂದ..’ ಎನ್ನುವ ಪದಪುಂಜ ಮತ್ತೊಂದು ಅರ್ಥವನ್ನು ಕೂಡ ಸೂಚಿಸುತ್ತದೆ. ಅವರು ಕೇವಲ ಆದಿಮಾತಾಪಿತಗಳು ಮಾತ್ರರಲ್ಲ, ಅವರೇ ಮೊಟ್ಟಮೊದಲ ಗುರುಗಳೂ ಸಹ. ಅವರ ಅದ್ಭುತಸೃಷ್ಟಿ ಮಾನವಜೀವಿ. ಅದರ ಸೃಜಿತ ರೀತಿ, ಸ್ವಯಂನಿಯಂತ್ರಿತ ನಿರಂತರ ಚಲನೆಯ ಸೃಷ್ಟಿ-ಸಂಸಾರ ಚಕ್ರ, ದ್ವಿಗುಣದಿಂದ ಬಹುಗುಣವಾಗುತ್ತ ಮೂಲೋದ್ದೇಶವನ್ನು ನಿರಂತರ ಕಾಲಯಾನದೊಂದಿಗೆ ವರ್ಗಾಯಿಸಿಕೊಂಡು ನಡೆದಿರುವ ಪ್ರಕ್ರಿಯೆ – ಎಲ್ಲವು ವಿಸ್ಮಯವನ್ನು ಮೂಡಿಸುವುದು ಮಾತ್ರವಲ್ಲದೆ, ಅದರ ನೈಸರ್ಗಿಕ ಸ್ವರೂಪದ ಸೊಬಗಿಗೆ, ಅದರ ಒಟ್ಟಾರೆ ಅಂದಕ್ಕೆ ಬೆರಗಾಗುವಂತೆ ಮಾಡಿಬಿಡುತ್ತದೆ. ಒಮ್ಮೆ ಊಹಿಸಿಕೊಳ್ಳಿ – ಇಡೀ ಜೀವ ಜಗದೆಲ್ಲ ಸೃಷ್ಟಿ-ಸ್ಥಿತಿ-ಲಯ ಪ್ರಕ್ರಿಯೆ ಒಂದು ಅದ್ಭುತ ಗುಂಡಿಯೊತ್ತಿದ ಸ್ವಯಂಚಾಲಿತ ಯಂತ್ರದ ಹಾಗೆ ಯಾರ ನಿತ್ಯ ಉಸ್ತುವಾರಿ, ಮೇಲ್ವಿಚಾರಣೆಯ ಅಗತ್ಯವೂ ಇಲ್ಲದಂತೆ ತನ್ನಂತಾನೆ ನಡೆದುಕೊಂಡು, ನಡೆಸಿಕೊಂಡು ಹೋಗುತ್ತಿದ್ದರೆ ಅದೆಷ್ಟು ಅತಿಶಯದ ಸೃಷ್ಟಿನಿರ್ವಹಣೆಯಾಗಿರಬೇಕು? ಸಾಲದ್ದಕ್ಕೆ ಇಡೀ ಜೀವಜಗರಾಶಿಯನ್ನೂ ಅವಕ್ಕರಿವಿಲ್ಲದಂತೆ ಅಲ್ಲಿಯೇ ಪಾತ್ರಧಾರಿಗಳಾಗಿಸಿ, ತನ್ಮೂಲಕ ಅದರ ನಿರ್ವಹಣೆ-ನಿಯಂತ್ರಣದಲ್ಲಿ ಅವರನ್ನು ಪಾಲುದಾರರನ್ನಾಗಿಸಿಕೊಂಡಿರುವುದೇನು ಸಾಮಾನ್ಯ ವಿಷಯವೇ ? ಅವರಾರಿಗೂ ಅರಿವಿಲ್ಲದ ಹಾಗೆ ಅಲ್ಲೇ ಸುಖದುಃಖ, ನೋವುನಲಿವು, ಸೌಂದರ್ಯಕುರೂಪಾದಿ ಅಂತರಗಳನ್ನಿಟ್ಟು, ಎಲ್ಲರು ಆಸ್ಥೆಯಿಂದ, ಆಸಕ್ತಿಯಿಂದ, ಆಕರ್ಷಣೆಗೊಳಗಾಗಿ ಅವುಗಳ ಸುತ್ತಲೇ ಗಿರಕಿ ಹೊಡೆಯುತ್ತ ತಮ್ಮ ಜೀವನಯಾತ್ರೆ ಸವೆಸುವಂತೆ ಮಾಡುವ ಈ ವ್ಯವಸ್ಥೆಯ ಅಂದಚಂದವನ್ನು ಬರಿ ಮಾತಲ್ಲಿ ವರ್ಣಿಸುವುದಾದರೂ ಹೇಗೆ ? ಅದಕ್ಕೆಲ್ಲ ಕಲಶಪ್ರಾಯವಾಗುವಂತೆ ಈ ಮಾನವ ಜೀವಿಯನ್ನು ಸೃಜಿಸಿದ ಆ ಸೃಷ್ಟಿಕರ್ತನ ಊಹಾನೈಪುಣ್ಯತೆಯ ಅಂದವನ್ನು ಬರಿ ಮಾತಲ್ಲಿ ಹೇಳುವುದಾದರೂ ಎಂತು ?

ಜತೆಗೆ ಇಲ್ಲಿ ಹೊರಡುವ ಮತ್ತೊಂದು ದನಿಯೂ ಮುಖ್ಯವಾದದ್ದು: ‘ನಾನವರ ಕಂದ, ಆ ಗುರುದತ್ತ ಅಂದ’ – ಎಂದಾಗ ನಾವವರ (ದೇವರ) ಮಕ್ಕಳು ಎಂದು ಆ ದೇವರೆ ಗುರುರೂಪಿಯಾಗಿ ಬೋಧಿಸಿಬಿಟ್ಟಿದ್ದಾನೆ, ಉಪದೇಶಿಸಿಬಿಟ್ಟಿದ್ದಾನೆ – ತನ್ಮೂಲಕ ತನ್ನ ಒಳ್ಳೆಯತನ, ತನ್ನ ಇಂಗಿತದಂದವನ್ನು ನಾವೆಲ್ಲ ಕಾಣುವಂತೆ ಮಾಡಿದ್ದಾನೆ. ಅದಕ್ಕೆ ಅವನಿಗೆ ನಾವೆಲ್ಲ ಚಿರಋಣಿಗಳಾಗಿರಬೇಕು ಮತ್ತವನ ಆಶಯವನ್ನರಿತು ಪಾಲಿಸುವ ನಿಷ್ಠೆ ತೋರಬೇಕು ಎನ್ನುವ ಭಾವ ಇಲ್ಲಿ ಪ್ರಮುಖವಾಗುತ್ತದೆ. ಅದೇ ಭಾವ ಇಲ್ಲಿನ ಕವಿವಾಣಿಯ ಉದ್ಗಾರಕ್ಕೂ ಕಾರಣವಾಗಿದೆಯೆನ್ನಬಹುದು – ಸೃಷ್ಟಿಯ ಸೊಬಗೆಲ್ಲ ಈ ಕಂದನ (ಜೀವಸೃಷ್ಟಿಯ) ಅಂದದ ರೂಪಾಗಿ, ಆದಿಗುರುವಿನ ಕೃಪಾರೂಪದಲ್ಲಿ ನಮ್ಮ ಬದುಕಿಗೆ, ನಮ್ಮ ಲೋಕಕ್ಕೆ ಬಂದಿದೆ ಎನ್ನುವ ಇಂಗಿತವನ್ನು ವ್ಯಕ್ತಪಡಿಸುತ್ತ. ಹಾಗೆನ್ನುವಾಗ ಸೃಷ್ಟಿಯನ್ನು ಸೃಜಿಸಿದ ವಿಶ್ವಚಿತ್ತವೆ ಸೃಷ್ಟಿಯೆಲ್ಲಕ್ಕೂ ಆದಿಗುರು ಎನ್ನುವ ಭಾವ ತಾನಾಗಿಯೇ ಉದ್ಭವಿಸುತ್ತದೆ.

ಈ ಸಾಲಿನೊಂದಿಗೆ ನಾಕುತಂತಿಯ ಮೂರನೆ ಭಾಗ ಮುಗಿಯುತ್ತದೆ. ಮುಂದಿನ ಕೊನೆಯ ಭಾಗ ಇಡೀ ಕವಿತೆಯ ಮೂಲಾಶಯ ಸಾರಾಂಶವನ್ನು ಸಮಷ್ಟಿಯಾಗಿ ಕಟ್ಟಿಕೊಡುವ ಪ್ರಬುದ್ಧ, ಪರಿಪಕ್ವ ಕಾರ್ಯ ನಿರ್ವಹಿಸುತ್ತದೆ – ಮಿಕ್ಕ ನಾಲ್ಕು ಸಾಲುಗಳಲ್ಲಿ.

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

(Picture source : Wikipedia)