02085. ಮಾತೊಂದಿರಿಯುವ ಹೊತ್ತು..


02085. ಮಾತೊಂದಿರಿಯುವ ಹೊತ್ತು..

https://kannada.pratilipi.com/read?id=6671345000644608

ಮಾತೊಂದಿರಿಯುವ ಹೊತ್ತು
____________________


ಕುಟುಕಿ ಕುಟುಕಿ ಆಡೋ ಕಟಕಿಯ ಮಾತು
ಕೀಟಲೆಯಲ್ಲ ಕಿತ್ತು ಕಿತ್ತು ತಿನ್ನುವ ರಣಹದ್ದು
ಸರಹದ್ದು ಮೀರಿದ ಸಹನೆ ಕಳುವಾಗಿ ಚಿತ್ತ
ಲೋಕವ್ಯಾಪಾರದಲ್ಲು ಅಲೆದಿತ್ತು ಅಲೆಮಾರಿ ||

ಕಾಣಲೆಂದು ಹೊರಡೆ ತಪ್ಪು ಹುಡುಕೋ ಯಾತ್ರೆ
ಸರಿ ಸೀರೆಯಲ್ಲೂ ತಪ್ಪು ನೆರಿಗೆಗಳದೇ ಜಾತ್ರೆ
ಮೊಣಕೈಗೆ ಚಿಲಕ ಬಡಿದಂತೆ ಅಗಣಿತ ಎಣಿಕೆ
ಕ್ಷುಲ್ಲಕವೂ ಭಲ್ಲೆ ಇರಿದಂತೆ ಧಾಳಿಯ ಕುಣಿಕೆ ||

ಮಾತಿನ ಭರ್ಜಿ ಬರುವುದೆಲ್ಲಿಂದಲೋ ಅಮೂರ್ತ
ತುದಿ ಸವರಿ ಗರಳ ಬಂದಿರಿಯುವಾಗ ಕರಾಳ
ಕಿತ್ತೊಗೆದು ತಾಳ್ಮೆ ಮುಳ್ಳಿನ ಬೇಲಿಯಾಗುತ ಸಿದ್ಧ
ಮಾತಿಗೆ ಮಾತಾಗುವ ಚಿಲ್ಲರೆ ಪದಗಳ ವಾಗ್ಯುದ್ಧ ||

ನಾ ಸರಿ ನೀ ಸರಿ ಸಂಸಾರದಲಿಲ್ಲ ಸರಿಗಮ ಪರಿ
ಗಾನವಿರುವಷ್ಟೇ ಹುಯಿಲು ಊಳಿಡುವ ನಾಯ್ತೋಳ
ಬಳಸಲಿಲ್ಲ ತೋಳ ಕಳಿಸಲಿಲ್ಲ ನಗೆ ವಿಧಿ ಮನೆಹಾಳ
ಎಂದೆಲ್ಲರ ಹಳಿಯುತಲೇ ಉರುಳಿದೆ ಬಾಳ ಬಂಡಿ ಖಾಲಿ ||

ಕುಟುಕು ಜೀವ ಉಳಿದಿದೆ ಕುಟುಕದೆ ಬಿಟ್ಟರೆ ಸಾಕಿನ್ನು
ಕುಕ್ಕಿ ತಿನ್ನಬೇಕಿದೆ ಹೆಕ್ಕಿ ಕಾಳಕ್ಕಿ ಅನ್ನ ಸಿಕ್ಕಿದ್ದೇ ಭವತಿ
ಭಿಕ್ಷಾಂದೇಹಿ ಬದುಕಿಗು ಕಸುವಿರಬೇಕು ಜೋಳಿಗೆ ಹೊರೆ
ಬಿಟ್ಟಭಿಮಾನ ನಾಚಿಕೆ ಬೇಡುವುದೇನು ಕಡಿಮೆ ಮಾತೆ ? ||

– ನಾಗೇಶ ಮೈಸೂರು
೩೦.೦೬.೨೦೧೭

02084. ಹೃದಯದಧರದ ದ್ವಾರ


02084. ಹೃದಯದಧರದ ದ್ವಾರ
https://kannada.pratilipi.com/read?id=6423096830459904

ಹೃದಯದಧರದ ದ್ವಾರ
_________________


ಇನ್ನಷ್ಟೇ ಶುರು ತಕಿಟ ಧಿಂ ತನ
ಶುರುವಾಯಿತಲ್ಲೆ ಹೃದಯ ಚುಂಬನ
ಎಲ್ಲಿತ್ತದರ ಅಧರ? ಹೇಗಾಯಿತೋ ಸ್ಪರ್ಶ ?
ತಂತಾನೆ ಅಪ್ಪಿದವೆ ಬಗೆಹರಿಸಿ ಸಂಘರ್ಷ!

ಅದೆ ನೋಡು ಜಾಡು ಕಾಣದ ಕಾಡು
ನರನಾಡಿ ವ್ಯೂಹ ಲಂಟಾನದ ಜಿಗುಟು
ಚಕ್ರವ್ಯೂಹವದನೆ ಬೇಧಿಸುವ ಸರಿಗಮ
ಎಲ್ಲಿಂದ ಬಂತೆ ಬಿಲ್ಲಿಗ್ಹೂಡದೆಯೂ ಬಾಣ ?

ಹುಡುಕಾಡುತಿರುವೆ ಎಡವಿದ್ದೂ ಎಲ್ಲಿ ?
ಅಲ್ಲು ಕಾಡುತಿರುವೆ ಹೆಜ್ಜೆ ಗೆಜ್ಜೆ ದನಿಸಿ
ಬಲೆಗೆ ಬಿದ್ದದ್ದು ಗೆಲುವೊ ಸೋಲೊ ಅರಿಯೆ
ಬಲೆಯ ಸಿಕ್ಕಿಂದ ಬಿಡುಗಡೆಗೆಣಿಸಿ ಸೋತೆ..

ಸಿಹಿ ಬಾಂಧವ್ಯ ಮಧುರ ಬಿದ್ದಲ್ಲೆ ಅಚೇತನ
ಮನಬಾರದು ಚಲಿಸೆ ಜಡವಾಗಿ ಅಲೌಕಿಕ
ಯಾವುದೊ ಲೋಕದ ಭ್ರಮೆಯಾಧಿಕಾರಿ ಸಂಭ್ರಮ
ಬಿಟ್ಟರೆಲ್ಲಿ ಹೋದೀತೊ ಭೀತಿ, ಮರಗಟ್ಟಿತೆ ಕಾಲ..

ಅದೆಂತದೊ ಯಾನದ ದಿಗ್ಭ್ರಮೆಯಲಿ ಸಿಲುಕಿ
ಹುಡುಕಾಡುತಿರುವೆ ಮತ್ತೇನೇನೋ ಅರಸಿ
ಮತ್ತಿನ್ಹಂಗು ಬಿಡದೆ ಮುಟ್ಟುವಾಸೆ ಗಿರಿ ಶಿಖರ
ಹೀಗೆ ತೆರೆದಿಡು ಹೃದಯದಧರದ ದ್ವಾರಗಳ..!

– ನಾಗೇಶ ಮೈಸೂರು
೩೦.೦೬.೨೦೧೭

02083. ಎಡ್ಬಿಡಂಗಿ


02083. ಎಡ್ಬಿಡಂಗಿ
https://kannada.pratilipi.com/read?id=4669480205549568

ಎಡ್ಬಿಡಂಗಿ
___________________


ಎಡ್ಬಿಡಂಗಿ ನಾ ಎಡ್ವಟ್ ರಾಜ
ನನ್ಬಿಟ್ರಿಲ್ಲ ನಾ ಆಡಿದ್ದೇ ಆಟ
ಆರಕ್ಕೇರ್ಲಿಲ್ಲ ಮೂರಕ್ಕೀಳೀಲಿಲ್ಲ
ಹಾರ್ಲಿಲ್ಲ ಮುಳುಗ್ಲಿಲ್ಲ ನೆಲ್ದಲ್ಲೇ ಎಲ್ಲಾ ! || ಎಡ್ಬಿಡಂಗಿ ||

ಬರ್ದಿದ್ದನ್ನೆಲ್ಲಾರು ಅರ್ಥ ಮಾಡ್ಕೊಳ್ಲಿಲ್ಲ
ಹಾಗಂತ ಬುಡ್ತುನ್ನಿ ಬುದ್ಧೀಜೀವಿನೂ ಆಗ್ಲಿಲ್ಲ
ಮಾಡ್ಕೊಂಡೊರಷ್ಟಿಷ್ಟು ಮರ್ವಾದೆ ಉಳ್ತಾಯ
ಬಂದಿದ್ದೇನ್ ಭಾಗ್ಯ ಬರ್ದಿದ್ಕಿಲ್ಲ ಆದಾಯ ! || ಎಡ್ಬಿಡಂಗಿ ||

ಆಫೀಸರ್ ಆದ್ರೇನು ಮ್ಯಾನೇಜರ್ ಕುರ್ಚಿ
ಸಿಕ್ಕೊಲ್ದು ಬೇಕಾದ್ದು ಹಿಡಿದ್ರೂನೂ ಮರ್ಜಿ
ಆಸೆ ಬೆಟ್ಟದ್ ಮ್ಯಾಲೆ ಕಣ್ ಸಿಈಓ ಸೀಟ್ಗೆ
ನಡ್ವಲ್ಲೆ ನ್ಯಾತಾಡ್ತಾ ಬಡ್ದಾಡಿದ್ದಷ್ಟೇ ಮಾತ್ಮಾತ್ಗೆ ! || ಎಡ್ಬಿಡಂಗಿ ||

ಹುಡುಕ್ಕೊಂಡೇನೋ ಹೋದೆ ನೆಟ್ಗಿತ್ತು ದಾರಿ
ಓಡ್ತಾ ಗೆಲ್ತಾ ಇದ್ದೋರ್ ಮಧ್ಯೆ ನಾ ಅಬ್ಬೇಪಾರಿ
ಹುಡುಕ್ಲಿಲ್ಲ ಹೊಸ್ದಾರಿ ತಲುಪ್ಲಿಲ್ಲ ಅವ್ರುನ್ಸೇರಿ
ಅವ್ರಾಗ್ದೆ ನಾನೂ ಆಗ್ದೇ ತ್ರಿಶಂಕು ಸ್ವರ್ಗದ್ದಾರಿ ! || ಎಡ್ಬಿಡಂಗಿ ||

ಹಿಂಗೇ ಗೋಳು ಬದ್ಕೆಲ್ಲ ಸಿಕ್ದೋಳೂ ಖೋಟಾ
ಹಾಳ್ವಯ್ಸಲ್ಲಿ ಹಳ್ಳಕ್ಕೆ ಬೀಳ್ಸೊಕ್ಸಾಕು ಕಳ್ನೋಟ
ಮೇಲೆತ್ಲಿಲ್ಲ ಕೆಳಗೊತ್ಲಿಲ್ಲ ಬಿಡ್ಲಿಲ್ಲ ಹಿಡ್ದಿದ್ ಜುಟ್ಟು
ಹಿಂಗೇನ್ರಪ್ಪೋ ನಮ್ಬದ್ಕಲ್ಲಿ ಒಂದಲ್ಲ ಒಂದೆಡವಟ್ಟು ! || ಎಡ್ಬಿಡಂಗಿ ||

– ನಾಗೇಶ ಮೈಸೂರು
೩೦.೦೬.೨೦೧೭

02082. ಗುಟ್ಟಿಲ್ಲದ ಬದುಕಲ್ಲಿ..


02082. ಗುಟ್ಟಿಲ್ಲದ ಬದುಕಲ್ಲಿ..(pratilipi)

https://kannada.pratilipi.com/read?id=5381372645474304

ಗುಟ್ಟಿಲ್ಲದ ಬದುಕಲ್ಲಿ..
________________


ಬಚ್ಚಿಡಲೆಲ್ಲೋ ಡಿಜಿಟಲ್ಲು
ಯಾವ ಕಪಾಟಲಿಟ್ಟರು ರಟ್ಟು
ಗುಟ್ಟಾಗಿಡುತ್ತಿದ್ದ ಡಬ್ಬಿ ಸಂದಿ ಸಂದೂಕ
ಎಲ್ಲೆಡೆಗೂ ನುಗ್ಗುವ ವೈರ್ಲೆಸ್ ನಾವಿಕ

ಮೊದಲೊಂದು ಚೀಟಿಯ ಮೇಲೆ
ಪೆನ್ನೋ ಪೆನ್ಸಿಲ್ಲೋ ಗೀಚಿದ ಪುಸ್ತಕ
ಇಟ್ಟರೆ ಸಾಕಿತ್ತು ಒಳಗೆ ಹಾಕಿ ಬೀಗ
ಬೀಗದ ಕೈಯಿದ್ದರೂ ಕ್ಷೇಮವಲ್ಲಾ ಜಾಗ !

ಕಾಸೊ ನೋಟೊ ಒಡವೆ ಗಿಲೀಟೊ
ಗೊತ್ತಾಗದಂತೆ ಖರೀದಿಸಿದ ದಿರಿಸು
ಪುಡಿಗಾಸುಳಿಸಿದ ಕಾಂಚಾಣವು ಬ್ಯಾಂಕಲಿ
ನಾಕಂಕೆಯ ಒತ್ತಿದರೆಲ್ಲಾ ಬಯಲಲಿ

ಮೊದಲಿತ್ತು ಚೆಂದ ಒಂದೇ ಗುಟ್ಟಿನ ತಾಣ
ಈಗೆಲ್ಲಿ ಶಿವನೇ ಜಗವೇ ಊರಗಲದ ಜಾಗ
ಕೂತಲ್ಲೇ ರಟ್ಟು ಕದಿಯುವರೆಲ್ಲಾ ಗುಟ್ಟು
ಯಾವುದಿನ್ನು ಗುಟ್ಟು ಗೊತ್ತಾಗದೆ ಎಡವಟ್ಟು..

ಕಿವಿಯೂದುವ ಗುಟ್ಟಿಗೂ ಟೈಪಿಸುವ ಕಾಲ
ಗುಟ್ಟಿನ ವ್ಯಾಖ್ಯೆಯೆ ಬದಲು ಆಧುನಿಕ ಆಚಾರ್ಯ
ಬದಲಾಗದಿದ್ದರೆ ಕಠಿಣ ಬಗಲಿಗಿಲ್ಲ ಸರಾಗಾರಾಮ
ಐಷಾರಾಮಿ ಬದುಕಲಿ ಕೂತೆಡೆಗೆ ಬರಬೇಕು ಸಕಲ !


– ನಾಗೇಶ ಮೈಸೂರು
೩೦.೦೬.೨೦೧೭

02081. ಚರಾಚರ ಸಂಸಾರ..


02081. ಚರಾಚರ ಸಂಸಾರ.. 
________________________________


ಮರಗಳೇ ನೀವಚರ
ನಾ ನಡೆದಾಡುವ ಸಂಚರ
ನಾವಿಬ್ಬರೂ ಸೃಷ್ಟಿ ಜೀವಚರ
ಸಮತೋಲನ ಇಹದಾ ಸಾರ !

ನಿಂತಲ್ಲೇ ನೀವ್ಹೂವು ಕಾಯಿ ಹಣ್ಣು
ಸಂಚಲನೆಯಲೇ ನಾವ್ಗಂಡು ಹೆಣ್ಣು
ನಿಮ್ಮ ತಲೆ ಋತುವಿಗುದುರ್ಹುಟ್ಟೋ ಎಲೆ
ನಮ್ಮ ಕಾಯದ ಬೆಲೆ ಮುದುರೋ ಆಯಸ್ಸಲೆ !

ನಿಮಗುಂಟು ನಂಟು ಕಪ್ಪು ಬಿಳಿ ಬಣ್ಣದಂಟು
ನಾವುಡಬೇಕೆಲ್ಲ ಕೃತಕ ಹುಟ್ಟುಡುಗೆಯ ಹೊರತು
ಒರಟು ಮೃದುಲಾ ಕಠೋರ ನಯ ವಂಚಕ ಭಾವ
ಸಹಿಸೆಲ್ಲಾ ಅತ್ಯಾಚಾರ ಕೊಡುವಿರೆಂತು ನಿರ್ಭಾವ ?

ನೆರಳೀವ ಸಹನೆ ಬುದ್ಧನಿಗೂ ಜ್ಞಾನದ ಮನೆ
ತಪ ಕುಳಿತಾ ಮರಕೆ ಕೊಡಲಿ ಮಸೆವ ತಾನೇ
ಆದರೂ ಬೇಕಿಲ್ಲಿ ಸಾಲು ಮರ ಸುಂದರ ಸ್ವಾರ್ಥ
ಎಲ್ಲೋ ಅಡಗಿದ ಭೀತಿಗೆ ವಿಮೆಯಾಗಿ ಉಸಿರಾಟ

ತಪ್ಪುಒಪ್ಪುಗಳಿಗಿಹರು ಕವಿ ಪುಂಗವ ಪಂಡಿತರು
ಕಂತೆ ಬರೆದು ಕೆತ್ತನೆ ಕೆತ್ತಿ ಕುಂಚದೆ ಹಿಡಿದಿಟ್ಟವರು
ಯಾಕೋ ಬಿತ್ತುವರಿಲ್ಲ ಬಿತ್ತಿ ಬೆಳೆವ ಶ್ರಮದಾನ
ನೀಡದಿರೆ ಕಾಣಬೇಕಷ್ಟೆ ಚಿತ್ತಾರದೆ ಹಸಿರಿನ ಮೈದಾನ !


– ನಾಗೇಶ ಮೈಸೂರು
೩೦.೦೬.೨೦೧೭

(Picture source internet / social media / Creative Commons)

02080. ನೀಳವೇಣಿಯ ವ್ಯಥೆಗೆ..


02080. ನೀಳವೇಣಿಯ ವ್ಯಥೆಗೆ..
_________________________


ಕಾದು ಕೂತಿದೆ ಯೌವ್ವನ
ನೆನೆಯುತ ಬಿಟ್ಟು ಹೋದವನ
ಬಿಕ್ಕಳಿಕೆ ಸದ್ದು ಬಂಧಿ ಚೌಕಟ್ಟಲಿ
ಗಲ್ಲವೂರಿದ ಹಸ್ತ ಮೊಣಕೈಯ ಹಂಗಲಿ

ನೆನಪಲ್ಲಿ ನೆನೆದ ಹೊತ್ತು
ನೆನೆದರು ಒದ್ದೆಯಾಗದ ವಸ್ತು
ನಟಿಸುತ್ತಿದೆ ನಗುವಿನ ಸೆರಗಲಿ
ಎಷ್ಟೆಂದು ತಾನೇ ಹೀಗೆ ಮರುಗಲಿ ?

ಹೊಸಿಲ ಮೇಲೆ ಕೂತಿರುವೆ ಸ್ವಸ್ಥ
ಒಂದೊಮ್ಮೆ ಆಗಿದ್ದರೇನು ಶಾಪಗ್ರಸ್ತ
ಚಿಂತಿಸದೆ ಬಲಿಯಾಗುವೆ ಮಡಿಲಲಿ
ಹಾರವಾಗಿ ಕರುಳು ಸೇರಲಿ ನಿನ್ನ ಕೊರಳಲಿ..

ಲಂಗ ದಾವಣಿಯ ವಯಸು ಸುಕೃತ
ಭಾವ ದೊಂಬಿ ಪಕ್ವತೆಯಲ್ಲ ಹಿತ ಸಂಹಿತ
ಅರೆಬರೆ ಮಬ್ಬಿನ ಮನಸಾ ಗೆಲ್ಲುವ ಸುಲಭ
ವಂಚಿತನಾಗೆ ಕೈ ಸಿಗದು ಪ್ರಬುದ್ಧತೆ ಸಲಗ..

ಮಾತಿಲ್ಲ ಕಥೆಯಿಲ್ಲ ಮೌನದ ಗಾರುಡಿ
ಮನೆ ಕಟ್ಟಿಕೊಂಡು ನಿನಗಾಗಿ ಕಾದು ಕೂತಿದೆ
ಬರುವೆಯೊ ಬಾರೆಯೊ ಬರೆಯಲಿದೆ ಇತಿಹಾಸ
ಬೆಳಕ ಚೆಲ್ಲಿಬಿಡು ಕತ್ತಲು ಕವಿಯ ಬಿಡದಿರೆ ಸೊಗಸ !

– ನಾಗೇಶ ಮೈಸೂರು
೨೯.೦೬.೨೦೧೭

(Picture media : internet / social media)

02079. ಕಳುವಾಗಿದ್ದು ನೀನೊ, ನಾನೊ ?


02079. ಕಳುವಾಗಿದ್ದು ನೀನೊ, ನಾನೊ ?
_____________________________


ನೆನೆದಿದೆ ಮನ ಮೋಹನನ
ಮುರುಳಿಯ ಆರಾಧಿಸೋ ತನನ
ಜುಮ್ಮೆನಿಸಿ ತನು ಮನ ತಲ್ಲೀನ
ಉದ್ದೀಪಿಸಿ ಕನಸೊಳಗಿನ ಕನಸನ್ನ !

ಮೌನ ಮಾತಾಡಿಸುತಿದೆ ಸ್ವಪ್ನದೆ
ಬಿಚ್ಚಿಡುತ್ತ ನಿನದೇ ಕೊಳಲಿನ ಸದ್ದೇ
ನೀಲಶ್ಯಾಮನ ವದನ ನೇತ್ರ ಪರದೆ
ತುಂಬಿಕೊಂಡಿದೆ ಮತ್ತಾವ ನೆನಪೂ ಬರದೇ !

ಒರಗಿ ಕುಳಿತ ಭಂಗಿ, ಮರದ ಬುಡದೆ
ನಡುವೆ ಕೂತ, ನಿನ್ನ ಭುಜಕೊರಗಿದ ಹಾಗಿದೆ
ಒರಟು ಬೊಡ್ಡೆ, ಮೆತ್ತನೆ ಮಡಿಲಂತೆ ಭಾಸ
ಒತ್ತೊ ನೋವ ಮರೆಸೋ, ನಿನ್ನ ಮಂದಹಾಸ !

ನಿನ್ನ ಹುಡುಕುತ ಗರಿ, ಮಯೂರದೊಡನೆ ಧಾಳಿ
ದನಿ ಕೇಳಿತೆಂತು ಅವಕೆ, ನನ್ನ ಮನದ ಮುರಳಿ ?
ಭ್ರಮಿಸಿದವೇನೋ, ನೀನೇ ಬಂದೆಯೆಂದು..
ಅದೆಂಥಾ ಸೆಳೆತ, ಬರಿ ನಿನ್ನ ಸ್ಮರಣೆಗೂ ಖುದ್ದು !

ಮೊಣಕಾಲ ಬಳಸಿ, ಅಪ್ಪಿ ಹಿಡಿದ ತೋಳು
ಕರ ಜೋಡಿ ಪ್ರೀತಿ, ನೆನಪಿಸಿಸುತ್ತ ಆ ದಿನಗಳು
ಮೈ ಮರೆತ ಹೊತ್ತಲು, ಬಿಡದೆ ಕಾಡೋ ಯಾದವ
ಸುಮರಾಶಿಯಲಿ ಬೆರತು, ಮಾಧವ ಸದಾ ಕಾಡುವ !

– ನಾಗೇಶ ಮೈಸೂರು
೨೯.೦೭.೨೦೧೭

(ಅರ್ಚನ.ಫಾಸಿಯವರ (Archana Fasi) ಪೋಸ್ಟ್ ನಲ್ಲಿದ್ದ ಚಿತ್ರದಿಂದ ಪ್ರೇರಿತವಾಗಿ ಬರೆದ ಕವನ. Thank you Archana ji. )

02078. ಮಂಕುತಿಮ್ಮನ ಕಗ್ಗ ೦೬೫. ಕೃತಕ ಮಣಿಯಂತಲ್ಲ, ವಿಕಸಿಪ ಸುಮದಂತಿರಬೇಕು – ಜ್ಞಾನ !


02078. ಮಂಕುತಿಮ್ಮನ ಕಗ್ಗ ೦೬೫. ಕೃತಕ ಮಣಿಯಂತಲ್ಲ, ವಿಕಸಿಪ ಸುಮದಂತಿರಬೇಕು – ಜ್ಞಾನ !

http://kannada.readoo.in/2017/06/%E0%B2%95%E0%B3%83%E0%B2%A4%E0%B2%95-%E0%B2%AE%E0%B2%A3%E0%B2%BF%E0%B2%AF%E0%B2%82%E0%B2%A4%E0%B2%B2%E0%B3%8D%E0%B2%B2-%E0%B2%B5%E0%B2%BF%E0%B2%95%E0%B2%B8%E0%B2%BF%E0%B2%AA-%E0%B2%B8%E0%B3%81

02077. ಮೌನದ ಮಾತು


02077. ಮೌನದ ಮಾತು
___________________


ಯಾಕ್ಹೀಗೆ ಗುದ್ದುತೀರಾ ?
ಮೌನ ಹಾಗೆ, ಹೀಗೆ, ಹೇಗೇಗೋ ಎಂದು..
ಬರೆದದ್ದು ಬರೆದದ್ದೇ ಎಲ್ಲಾ
ಮಾತ ಗೆದ್ದ ಮೌನದ ವೈಭವ
ಸಾಧಿಸಿದಂತೇನೋ ಗಾಂಭೀರ್ಯ, ಪ್ರಬುದ್ಧತೆ
ಕಲಿತವರಂತೇನೋ ಬ್ರಹ್ಮ ವಿದ್ಯೆ .

ನನ್ನ ವರ್ಣಿಸುವವರೇ ಎಲ್ಲಾ
ಮಾತಿನ ಜುಟ್ಟ ಹಿಡಿದು ;
ಬಣ್ಣಿಸಲಿಲ್ಲಾ ಯಾರೂ ನೇರ
ಮೌನವೆಂದರೇನು ಅರಿತು.
ಮೌ’ಖಿಕ ಸಂವಹ’ನ ನಷ್ಟವಾಗಿ ನಡು
ಮೌನವೆಂದುಬಿಟ್ಟರಾಯ್ತೆ ? ಹೆಣ್ಣಲ್ಲ ಜಡೆ.

ನಾನೇಕೆ ವರ್ಣಿಸಲಿ ಇಲ್ಲದ ನನ್ನಾ ?
ನನ್ನ ಹೆಸರಲ್ಲದ ಹೆಸರ..
ಬೇಕೆನಿಸಿದಾಗ ಮನವಾಡುವ ಆಟ
ಸದ್ದೋ ನಿಶ್ಯಬ್ದವೋ ಶುದ್ಧ ಸ್ವಾರ್ಥ
ನಾ ನಿರಂತರ ಅಂತರಗಂಗೆ ಸಲಿಲ,
ಪ್ರಶಾಂತ ಪ್ರವಾಹ ಅಷ್ಟೇ ನಾನು.

ತಿಕ್ಕಲು ತೆವಲುಗಳಿಗೆಲ್ಲ ಬಲಿ
ನಾನಾಗಿದ್ದರು ಕೂತೆ ಮಾತಾಡದೆ –
ಸೆಗಣಿಯವನೊಡನೆ ಸರಸಕ್ಕಿಂತ
ಗಂಧದವನೊಡನೆ ಗುದ್ದಾಟ ಲೇಸೆಂದು.
ಸಾಕು ಮಾಡು ಮೌನ ಮೌನ ಮೌನ
ಎನ್ನುವ ಹಾಳು ಸದ್ದೇ ಮೌನದರ್ಥವ ಕೊಲ್ಲುತಿದೆ !

– ನಾಗೇಶ ಮೈಸೂರು
೨೩.೦೬.೨೦೧೭

02076. ನಾವಿರುವ ಲೋಕ ಕಸದ ತೊಟ್ಟಿ..


02076. ನಾವಿರುವ ಲೋಕ ಕಸದ ತೊಟ್ಟಿ..
__________________________________


ಜಗಸೃಷ್ಟಿಯೊಂದು ಕಸದ ತೊಟ್ಟಿ
ಬ್ರಹ್ಮಾಂಡ ತ್ಯಾಜ್ಯ ಎಸೆವ ಮುಷ್ಠಿ
ಕುಲುಮೆಯಲ್ಲಿ ತಿದಿಯೊತ್ತುವ ಹಾಗೆ
ಎಳ್ಳುಜೊಳ್ಳು ಗುಣ ಪರೀಕ್ಷೆಯ ಬಗೆ..

ಸೃಜಿಸುವಾಟ ಸುರಾಸುರ ಜನನ
ಉತ್ಕೃಷ್ಠ ಸೃಷ್ಟಿ ಗುರಿಯಿಟ್ಟ ಕಾರಣ
ತೇರ್ಗಡೆಯಾದವು ನೇರ ದೇವಲೋಕ
ಬಿದ್ದುಹೋಗಿ ಮಿಕ್ಕವು ಭೂಮಿಯ ಲೆಕ್ಕ..

ಅಸುರಭಾವ ಕ್ಷುದ್ರಗುಣ ಸಹಜವೆ
ಸೃಷ್ಟಿಯಾಗುತಿರೆ ಅಸಹನಿಯ ಜಗವೆ
ಅದಕೆಂದೇ ತೆರೆದ ಅಂಗಡಿ ಭೂಲೋಕ
ಕನಿಷ್ಠ ಗುಣಮಟ್ಟದ ಸರಕಲ್ಲೇ ಜಳಕ..

ಭೂಕುಲುಮೆಯಲೊಂದಷ್ಟು ಹೆಣಗಾಡಿ
ಪುಟಕ್ಕಿಟ್ಟ ಚಿನ್ನವಾಗಲು ಕೆಲವೇ ಗುದ್ದಾಡಿ
ಸ್ವರ್ಗಾರೋಹಣ ದೇವಲೋಕದ ಕದ ತಟ್ಟಿ
ನರಕ ಕೂಪದೆ ಮಿಕ್ಕವಕ್ಕೆ ಸಂಸಾರ ಗಟ್ಟಿ..

ಗೊತ್ತಿರದೆ ನರಳುವ ಕೂಪ ಮಂಡೂಕಗಳು
ಸ್ವರ್ಗನರಕದ ಹೆಸರಲ್ಲಿ ದೂಡುವ ದಿನಗಳು
ಕೇಳು ಮಂಕೆ ಅವರಾಟದ ಪಗಡೆ ಕಾಯಿ
ನೂರೆಂಟು ಕಥನ ಕಟ್ಟಿಹಾಕಿವೆ ನಮ್ಬಾಯಿ !


– ನಾಗೇಶ ಮೈಸೂರು
(Picture source : Creative Commons)

02075. ಮಂಕುತಿಮ್ಮನ ಕಗ್ಗ ೬೪: ಬತ್ತ ಕುಟ್ಟಿದರಕ್ಕಿ, ಚಿತ್ತ ಕುಟ್ಟಿದರೇ ತತ್ತ್ವ !


02075. ಮಂಕುತಿಮ್ಮನ ಕಗ್ಗ ೬೪: ಬತ್ತ ಕುಟ್ಟಿದರಕ್ಕಿ, ಚಿತ್ತ ಕುಟ್ಟಿದರೇ ತತ್ತ್ವ !

ಮಂಕುತಿಮ್ಮನ ಕಗ್ಗ ೬೪ ರ ಮೇಲಿನ ಟಿಪ್ಪಣಿ – ರೀಡೂ ಕನ್ನಡದಲ್ಲಿ..

http://kannada.readoo.in/2017/06/ಬತ್ತ-ಕುಟ್ಟಿದರಕ್ಕಿ-ಚಿತ್ತ
ಮಂಕುತಿಮ್ಮನ, ಕಗ್ಗ, ೬೪, ಬತ್ತ, ಕುಟ್ಟಿದರಕ್ಕಿ, ಚಿತ್ತ, ಕುಟ್ಟಿದರೇ, ತತ್ತ್ವ

02074. ತುಂತುರು..


02074. ತುಂತುರು..
_________________

ಬರುವ ಮುನ್ಸೂಚನೆ
ಗರಿ ಬಿಚ್ಚುವ ಮನಸು..
ಮೆಲ್ಲ ಬರುತಿರುವಾಗ
ಆಹ್ಲಾದವದೇನೋ ಭಾವ..!
ಧಾವಂತ ನಿಂತಾಗ
ಪಿಚ್ಚೆನಿಸುತೆಲ್ಲಾ ಖಾಲಿ
………
ತಟ್ಟನೆ ನಿಲಬೇಡವೇ
ಹನಿಸುತಿರು ತುಂತುರು ..

– ನಾಗೇಶ ಮೈಸೂರು
೧೮.೦೭.೨೦೧೭

02073. ಸುಖ-ಸಂತಸ-ಆನಂದ


02073. ಸುಖ-ಸಂತಸ-ಆನಂದ
_______________________

ಸುಖವೆಂದರೇನು ಗೊತ್ತಾ?
ಚಾಪೆಯ ಬದಲು ಹಾಸಿಗೆ
ಹೊದೆಯಲು ಮೆತ್ತನೆ ಹೊದಿಕೆ
ಬರಿಗಾಲಿಗೆ ಮಕಮಲ್ಲಿನ ಸೂಟು
ತಿನ್ನಲಾಗದೆ ತುಳುಕುವ ಪ್ಲೇಟು.

ಸಂತಸವೆಂದರೆ ಗೊತ್ತಾ?
ಸುಖವಿಲ್ಲದೆಯೂ ಸಡಗರ
ಉಲ್ಲಾಸ ಮನಸಿನ ತೀರ
ಹಾಸಿಗೆಯಿದ್ದಷ್ಟು ಕಾಲಲ್ಲ
ಕಾಲಿಗೆಷ್ಟು ಬೇಕೋ ಅಷ್ಟು..!

ಆನಂದವೆಂದರೆ ಗೊತ್ತಾ ?
ಅನುಭೂತಿಯ ಸ್ವೈರ ವಿಹಾರ
ಚಿತ್ತದಾಚೆಯ ದೂರ ಹರಿಕಾರ
ಮನ ಪ್ರಶಾಂತವನದ ಭಾವನೆ
ಎಲ್ಲೋ ತೇಲಿದ ಹಾಗೆ ಮೋಡದಲಿ…

ಸುಖವನಟ್ಟು ಸಂಪತ್ತು
ಸಂತಸ ಬೆನ್ನಟ್ಟು ಹಿಗ್ಗಿಗೆ
ಆನಂದಮಯ ಪರಕಾಯ
ಕಲಸುಮೇಲೋಗರ ಭೂಮಿ
ಅವರವರ ಪಾಲಿನ ಯೋಗ .

– ನಾಗೇಶ ಮೈಸೂರು
೧೭.೦೬.೨೦೧೭

02072. ತುಣುಕುಗಳ ತುಳುಕಾಟ…


02072. ತುಣುಕುಗಳ ತುಳುಕಾಟ…
__________________________


ಯಾರು ಯಾರನ್ನೋ ಓದುತ್ತಾ
ಇನ್ನಾರನ್ನೋ ಗ್ರಹಿಸುತ್ತಾ
ಮತ್ತಾರನ್ನೋ ಪರಿಗ್ರಹಿಸುತ್ತ
ನಡೆಸುತ್ತಿರುವ ಪ್ರಯೋಗಶಾಲೆ
ಈ ಭೂಮಿಯ ನಾದಲೀಲೆ

ಹಚ್ಚಿಕೊಂಡ ಆಪ್ತ ಅನಿವಾರ್ಯ
ಹೇಗಾಗಿಬಿಡುವ ಹೃದಯ?
ಹತ್ತಿರ ಹತ್ತಿರ ಅದ್ಭುತ ಗೆಳೆಯ
ಅಸಹನೀಯವಾಗುವ ವಿಸ್ಮಯ
ಈ ಸಂಬಂಧಗಳ ನಾಕುತಂತಿ

ಯಾರು ಹತ್ತಿರ ಯಾರು ದೂರ
ಯಾರು ಸಖ ಯಾರು ಗೋಮುಖ
ಹುಡುಕಾಟದಲ್ಲೇ ಗೊಂದಲ;
ಅಸ್ತವ್ಯಸ್ತ ಚಿತ್ತದ ಚೆಲ್ಲಾಟ
ಗರಿಗರಿಗೆದರುವ ಸಖಿಗೀತ.

ಚೈತ್ರ ವೈಶಾಖ ಶಿಶಿರ ತಂತು
ಆಷಾಢ ಜತೆ ಶ್ರಾವಣ ಬಂತು
ಉಕ್ಕುಕ್ಕುತ ಮುಕ್ಕುವ ಯೌವ್ವನ
ಸುಕ್ಕಿನೊಳಗೂ ಜೀವಂತ ಬಯಕೆ
ಹುಟ್ಟುಸಾವಿನ ಮಧ್ಯೆ ಕಾಮ ಕಸ್ತೂರಿ.

– ನಾಗೇಶ ಮೈಸೂರು
೧೭.೦೬.೨೦೧೭

02071. ಬರುವ ಅಪ್ಪನ ದಿನಕೊಂದು..


02071. ಬರುವ ಅಪ್ಪನ ದಿನಕೊಂದು..

ಮುಜುಗರದ ದೊರೆಯಿವನು, ಅಪ್ಪಾ..
_______________________________


ನಾಚಿದನೇಕೋ ಅಪ್ಪಾ
ತನ್ನ ಗುಣಗಾನಕು ದಾಕ್ಷಿಣ್ಯ
ಮೌನದಲಿಟ್ಟವನ ಸಾಧನೆ ಯಾತ್ರೆ
ಜಗಜ್ಜಾಹೀರಾಗುವುದೇಕೋ ಮುಜುಗರ..

ಮಾತಿನ ಜಿಪುಣತನ ನಿಜ
ಕೊರೆಯಲ್ಲ ನೈಪುಣ್ಯತೆ ಅಗಾಧ
ಬಿಚ್ಚಿಡಲೇಕೋ ಸಂಕೋಚವೆ ದೊರೆಗೆ
ಮೌನಸಾಧಕನ ಮಾತ ಮೀರಿಸೋ ಕೃತಿ..

ಗುಟ್ಟಲೆ ತಟ್ಟಿದ ರೊಟ್ಟಿಯ
ತಂದಿಕ್ಕುವವಳಿಗಿತ್ತು ಹಿರಿಮೆ
ದರ್ಪದ ಸರ್ಪಕು ಹುರಿ ಮೌನದ ಬೇಲಿ
ಕಡಿವಾಣ ಸಂಯಮ ಕಟ್ಟಿ ಕೆಡವಿ ಕೋಪವ..

ವರದಕ್ಷಿಣೆ ಪಡೆದನೊ ಬಿಟ್ಟನೊ
ಕೊಡಲಿಲ್ಲ ತಕರಾರು ಮಗಳ ಲೆಕ್ಕಕೆ
ಆದರ್ಶವೇನು ಮಹಾ, ನಗಣ್ಯವವಳ ಸುಖದೆದುರು..
ಧಾರೆಯೆದು ಕೊಟ್ಟವಳ ಜತೆಗೆ ವಿಶ್ರಾಂತಿ ವೇತನ..

ಪಿಂಚಣಿಯ ಸರದಾರ ಈಗ ಮೆತ್ತಗೆ
ಗತ್ತು ಗಮ್ಮತಿಗಿಲ್ಲ ರೊಕ್ಕದ ಬೊಕ್ಕಸ
ಬಿಟ್ಟೆಲ್ಲ ಪ್ರಿಯವ, ಆರೋಗ್ಯದ ನೆಪದಡಿ
ಮುಜುಗರವಿಲ್ಲದೆ ನಗುವ ಅಜಾತಶತ್ರು..


– ನಾಗೇಶ ಮೈಸೂರು
(Picture source: Creative Commons)

02070. ಸರಳವೇ ವಿರಳ


02070. ಸರಳವೇ ವಿರಳ
____________________


ಬರೆಯುತ್ತೀಯಲ್ಲ ಕರಾಳ
ಅರ್ಥವಾಗದ ಹೇರಳ
ಬರೆದುಬಿಡು ನೋಡುವ ಸರಳ ?
ಮಾತಂತಲ್ಲ, ಬಿಚ್ಚಬೇಡ ಬಾಲ..

ಎಲ್ಲಿ ತೋರಿಸು ನೋಡೋಣ
ಪಿಎಚ್ಡಿ ಡಾಕ್ಟರುಗಳ ಜ್ಞಾನ ?
ಪಾಠ ಹೇಳಲಿ ನರ್ಸರಿ ಕೂಸಿಗೆ
ನಿಭಾಯಿಸಲಿ ಅಕ್ಷರಮಾಲೆ ಜತೆಗೆ..

ಒಪ್ಪಿಕೊಂಡೆ ನೀ ಬುದ್ಧಿವಂತ
ಬಿಡಿಸಿ ಹೇಳು ನೋಡೋಣ ಸಂತ
ಸಾಮಾನ್ಯನಿಗೆ ಬೇಕು ಸರಳ
ನೀ ಹೊಕ್ಕಿದೆಡೆಯೆಲ್ಲ ಸರಳವೇ ವಿರಳ..

ನೋಡಲ್ಲಿ ಆ ಬೊಮ್ಮ ಕಿಲಾಡಿ
ಜೀವಸೃಷ್ಟಿಯಂತ ವಿಜ್ಞಾನದ ಕೈಪಿಡಿ
ಜ್ಞಾನಿ ಅಜ್ಞಾನಿ ಸಕಲರಿಗೂ ಲಭ್ಯ
ಹೇಳಿಕೊಡದೆಯೂ ಯುಗದಾರಭ್ಯ..

ನಾನೊಲ್ಲೆ ನನ್ನಲ್ಲೇ ಸಂಕೀರ್ಣತೆ
ಕಟ್ಟಬಲ್ಲೆ ಕವನದಲದೆ ಮಾತೆ
ಗೂಢನಿಗೂಢ ಆಗೀಗೊಮ್ಮೆ ಸಾಕು
ಸರಳ ಸುಲಲಿತ ಕವಿತೆ ನನ್ನ ಪರಾಕು !

– ನಾಗೇಶ ಮೈಸೂರು
೧೫.೦೬.೨೦೧೭
(Picture from internet / social media)

02069. ಹೇಳದೆ ಉಳಿದ ಮಾತು


02069. ಹೇಳದೆ ಉಳಿದ ಮಾತು
__________________________


ಹೇಳದೆ ಉಳಿದ ಮಾತು
ತುಟಿಯಂಚಲಿ ಮಿಕ್ಕಿತ್ತು
ಎದೆಯಾಳದಲ್ಲಿ ಬಿಕ್ಕಿತ್ತು..!

ಹೇಳದೆ ಉಳಿದ ಮಾತು
ಹೇಳಿಕೊಳಲೆಂತು ದಾಕ್ಷಿಣ್ಯ
ತಾನಾಗೇ ಅರಿಯಲಿ ಶಾಣ್ಯಾ..!

ಹೇಳದೆ ಉಳಿದ ಮಾತು
ಸಂಕೋಚದ ಗೋಡೆಗೆ ಬಂಧಿ
ಸಂಬಂಧಗಳಲೆ ಎಷ್ಟು ಕುದಿ..!

ಹೇಳದೆ ಉಳಿದ ಮಾತು
ಮೊದಲವಳು ಹೇಳಲೆಂದಿತ್ತು
ಅವನೂ ಹೇಳಬಹುದಿತ್ತು..😔

ಹೇಳದೆ ಉಳಿದ ಮಾತು
ಹೇಳಬಿಡಲಿಲ್ಲ ಬೇಡದ ಗತ್ತು
ಅಡ್ಡಗೋಡೆ ಕಟ್ಟಿ ಸಿರಿಸಂಪತ್ತು..

ಹೇಳದೆ ಉಳಿದ ಮಾತು
ಹೇಳಬಿಡಲಿಲ್ಲ ಒಳಗಿನ ಅಹಂ
ಹೇಳಲಾಗದಾಗದೆ ಒಳದಾಸೋಹಂ !

– ನಾಗೇಶ ಮೈಸೂರು
೧೫.೦೬.೨೦೧೭
(Picture source : internet / social media)

02068. ಅಮರ ಮಧುರ ಪ್ರೇಮ


02068. ಅಮರ ಮಧುರ ಪ್ರೇಮ
_________________________________


ಅಮರ ಮಧುರ ಪ್ರೇಮ
ಇದು ನಾವಾಡೊ ಭಾರಿ ಡ್ರಾಮಾ
ನೀ ಕಳ್ ಸಾಕ್ಷಿ ಚಂದಮಾಮ || ಅಮರ ||

ಅನಾದಿ ಕಾಲದ ಪ್ರೇಮವೇ ನಮದು
ಹುಟ್ಟುವ ಮೊದಲೇ ಗುಟ್ಟು ಬಿಡೆ
ವಯಸು ವಿದ್ಯೆ ಸಂಬಳ ಮೊದಲು
ನೋಡಿಕೊಂಡ ಮೇಲೆ ಪ್ರೀತಿ ನಡೆ || ನೀ ಕಳ್ ||

ಬರಲಿ ಬಿಡಲಿ ಅಡಿಗೆ ಮನೆ ಕೆಲಸ
ಐದಂಕಿ ಸಂಬಳ ಇರುವ ಜಡೆ
ಮಾಡದಿದ್ದರೂ ನಡೆದೀತು ಜಳಕ
ನೂರೆಂಟು ಸಿಕ್ಕುವುದೇ ಕಾಸು ಕೊಡೆ || ನೀ ಕಳ್||

ಮೆಚ್ಚಲಿ ಬಿಡಲಿ ಅಪ್ಪ ಅಮ್ಮಂದಿರು
ಜತೆಗತ್ತೆ ಮಾವಗಳು ಲೆಕ್ಕ ಬಿಡೆ
ಕಟ್ಟಿದ್ದೇ ತಾಳಿ ಗುಳೆ ಎತ್ತಿ ಸಿಟಿಗೆ
ಒಟ್ಟಾಗುವುದೇ ಹಬ್ಬ ಹರಿದಿನಕೆ || ನೀ ಕಳ್ ||

ಬಿಡು ಅವರ ಮಾತು ನಮದೇನು ಕಡಿಮೆ
ಸೂರ್ಯನ್ಹುಟ್ಟು ಮುಳುಗುವಿಕೆ ಕಾಣೆ ದಿನಾ
ಹಗಲಿರುಳು ಕೆಲಸ ಬರಿ ಫೋನಲ್ಲಿ ನಿಮಿಷ
ಸುಸ್ತು ಮಲಗೋ ಹೊತ್ತಿಗೆ ಪೂರಾ ನಿತ್ರಾಣ || ನೀ ಕಳ್ ||

ನೋಡಲ್ಲಿ ನೆರೆತು ಮುವ್ವತ್ತಕೆ ಜುಟ್ಟು
ನಿನ್ನದೇನೆ ವಾಸಿ ನನದು ಸಮತಟ್ಟು
ರಸ ಹೀರಿದ ಕಬ್ಬಿನ ಸಿಹಿ ಹೋಯಿತೆಲ್ಲೋ
ಅಮರ ಮಧುರ ಪ್ರೇಮ ಬರಿ ಹಾಡ ಸೊಲ್ಲೊ || ನೀ ಕಳ್ ||

– ನಾಗೇಶ ಮೈಸೂರು
೧೪.೦೭.೨೦೧೭

(Just for fun 😊)
(Picture source : internet / social media)

02067. ಸುಖಜೀವಿಗಳಿವರು..


02067. ಸುಖಜೀವಿಗಳಿವರು..
___________________________


ಜಗದ ಜೋಗುಳವೆಲ್ಲ
ತನಗೇ ಹಾಡಿದುದೆಂದು
ಮಲಗಿಹಳಲ್ಲಾ ನಾರಿ
ತಾನೆ ರಾಜಕುಮಾರಿ..

ಹೊತ್ತುಗೊತ್ತಿನ ಪರಿವೆ
ಮುಟ್ಟಿದಂತಿಲ್ಲ ಗೊಡವೆ
ನಿದಿರೆಯೊಡವೆ ನಕ್ಕಿದೆ
ಹಗಲುಗನಸಿನ ಸುಕ್ಕಿದೆ..

ರವಿ ಹಚ್ಚಿಟ್ಟಿಹ ದೀವಿಗೆ
ಹೊದ್ದು ಮಲಗೆ ಸೊಬಗೆ
ಮರೆತೆಲ್ಲ ಜಗದ ಜಾಡ್ಯ
ಎಂತೂ ಪರರಿಗಿಟ್ಟ ಖಾದ್ಯ..

ಪವಡಿಸುವ ಪರಮಾತ್ಮ
ಕುವರನವ ಸಮಾನ ಸುಖಿ
ಹಾಡಹಗಲೇ ನಿದಿರೆ ದರೋಡೆ
ಮಿಗಿಸಿ ರಾತ್ರಿಗೂ ಅದೆ ಗೂಡೆ..

ಯಾವ ಜನ್ಮದ ಮೈತ್ರಿ ?
ಕೇಳಿಕೊಂಡು ಬಂದವರು
ಯಾವ ಪುಣ್ಯ, ಕರ್ಮಫಲ ?
ನೆಮ್ಮದಿ ನಿದ್ರೆಯ ಧನ್ಯರು.


– ನಾಗೇಶ ಮೈಸೂರು
೩೦.೦೫.೨೦೧೭
(Picture source : internet / social media)

02066. ಹೀಗೊಂದು ಪತ್ರದ ಒಕ್ಕಣೆ..


02066.ಹೀಗೊಂದು ಪತ್ರದ ಒಕ್ಕಣೆ.. (published in pratilipi)
(http://kannada.pratilipi.com/read?id=6088354905980928)


ನೋಡಿದೆಯಾ? ಬರೆಯುವ ಮೊದಲೇ ನೂರೆಂಟು ಗೊಂದಲ, ಗದ್ದಲವುಕ್ಕಿ ಕಂಗೆಡಿಸುವ ಪರಿಯನ್ನು? ಪತ್ರ ಬರೆಯಲಿಲ್ಲವೆಂದು ಮುನಿಸಿಕೊಂಡು ಮಾತಾಡದೆ ಮೌನ ವ್ರತ ಹಿಡಿದು ಇಂದಿಗೆ ಆರು ದಿನಗಳಾದುವಲ್ಲ? ಹಠವೆಂದರೆ ನಿನ್ನದೇ ಸರಿ ಬಿಡು!

ಅಲ್ಲಾ.. ಯಾಕಿಷ್ಟು ಕೆಟ್ಟ ಹಠ ಅಂತ? ಇ ಮೇಲ್ ಇದೆ, ವಾಟ್ಸಾಪ್, ಫೇಸ್ಬುಕ್, ಮೊಬೈಲ್ ಅಂತ ನೂರೆಂಟು ದಾರಿಗಳಿವೆ ಮಾತಿಗೆ. ಸಾಲದ್ದಕ್ಕೆ ಕರೆದರೆ ಸಾಕು ಓಡಿ ಬಂದು ಮುಂದೆ ಕೂತು ಗುಬ್ಬಚ್ಚಿಯಂತೆ ಕವುಚಿಕೊಂಡು ಕೂರುವ ಈ ಬಡಪಾಯಿ ಜೀವಿಯಿದೆ. ಇಷ್ಟೆಲ್ಲಾ ಇದ್ದರೂ ಸಾಲದು – ಕಾಗದದ ಮೇಲೆ, ನನ್ನ ಕೈಯಾರೆ ಪತ್ರ ಬರೆದು ಪೋಸ್ಟ್ ಮಾಡು ಅಂತ ಸಂಪು ಹೂಡಿದ್ದೀಯಲ್ಲಾ ಹುಡುಗಿ? ಏನಿದು ನಿನ್ನ ಹುಚ್ಚಾಟ?

ಅಲ್ಲಾ ಕಣೆ.. ಈ ಕಾಲದಲ್ಲಿ ಯಾರೇ ಪೆನ್ನು, ಪೇಪರು ಹಿಡಿದು ಪುಟಗಟ್ಟಲೆ ಬರೆದುಕೊಂಡು ಕೂರುತ್ತಾರೆ? ಮೊದಲಿಗೆ, ಮೂರೂ ಸಾಲು ಬರೆಯಲಿಕ್ಕಿಲ್ಲ ಆಗಲೇ ಕೈನೋವೂ ಶುರುವಾಗುತ್ತದೆ; ಸ್ಕೂಲಿನಲ್ಲೆಲ್ಲಾ ಬರೆಯುತ್ತಿರಲಿಲ್ಲವಾ? ಎಂದು ಹಂಗಿಸಬೇಡ. ಈಗ ಅಲ್ಲಿ ಕೂಡ ಲ್ಯಾಪ್ಟಾಪ್, ಕಂಪ್ಯೂಟರ್ ಯುಗ. ಪೇಪರಿನ ಮೇಲೆ ಬರೆದ ಒಂದೆರಡು ಸಾಲಷ್ಟೇ ಮುತ್ತಿನಹಾರದ ಹಾಗೆ ನೆಟ್ಟಗೆ ಮೂಡೋದು. ಅಲ್ಲಿಂದಾಚೆಗೆ ಅಡ್ಡಾದಿಡ್ಡಿ, ಸೊಟ್ಟಂಬಟ್ಟ ಚಾಮುಂಡಿ ಬೆಟ್ಟ ಏರಿಳಿಯುತ್ತ, ಕೋಳಿ ಕಾಲನ್ನ ನೆನಪಿಸೋ ಬರವಣಿಗೆಯನ್ನು ಎಲ್ಲರು ನೋಡಿ ನಗುವಂತೆ ಮಾಡಲು ನಿನಗ್ಯಾಕಿಷ್ಟು ಉತ್ಸಾಹ, ಅವಸರ? ನನ್ನ ಕಕ್ಕಾಬಿಕ್ಕಿಯಾಗಿಸಿದರೆ ನಿನಗೆ ಯಾಕೆ ಉಲ್ಲಾಸ? ನಿನಗದರಿಂದೇನು ಸಿಗುತ್ತದೆ? ಹೋಗಲಿ ಬಿಡು.. ನಿನ್ನ ಖುಷಿಗೆ ಏನು ಬೇಕಾದರೂ ಮಾಡಲು ಸಿದ್ದ ಎಂದ ತಪ್ಪಿಗೆ ದಂಡ ಕಟ್ಟಲೇಬೇಕಲ್ಲಾ? ಅದೂ ಆಗಿಹೋಗಲಿ.

ಇಕೋ, ನೀ ಕೇಳಿದ್ದಂತೆ ನೂರಿಪ್ಪತ್ತು ಅಂಗಡಿಗಳಲ್ಲಿ ಸುತ್ತಾಡಿ ಈ ಗುಲಾಬಿ ನೀಲಿ ಹಳದಿ ಮಿಶ್ರಿತ ಕಾಗದವಿರುವ ಲೆಟರ್ ಪ್ಯಾಡ್ ತಂದಿಟ್ಟುಕೊಂಡು ಅದರ ಮೇಲೆ ಬರೆಯುತ್ತಿದ್ದೇನೆ. ಹಾಂ.. ಇರು ಇರು ಕೂಗಾಡಬೇಡ.. ಏನೂ ಮರೆತಿಲ್ಲ. ನೀನು ಬಯಸಿದ್ದಂತೆ ಅದರ ಮೇಲೇನು ಬರೆದಿರದ ಖಾಲಿ ಹಾಳೆಯದನ್ನೇ ಹುಡುಕಿ ತಂದಿದ್ದೇನೆ. ಹಿನ್ನಲೆಯಲ್ಲಿ ಕಂಡೂ ಕಾಣಿಸದಂತೆ ಹುದುಗಿಕೊಂಡಿರುವ ತಿಳಿಬಣ್ಣದ ಗುಲಾಬಿಯ ಚಿತ್ರ ಬಿಟ್ಟರೆ ಮತ್ತೇನು ಇಲ್ಲ. ಹಾಗೆಯೇ ಸಾಲುಗಳಿಲ್ಲದ ಖಾಲಿ ಹಾಳೆಯನ್ನೇ ನೋಡಿ ತಂದಿದ್ದೇನೆ. ನಿನ್ನ ಇಷ್ಟದ ಬಣ್ಣ, ನಿನ್ನ ನೆಚ್ಚಿನ ಹೂವು, ನೀನು ಬಯಸಿದ್ದಂತದ್ದೇ ಹಾಳೆ… ಇನ್ನು ಮಿಕ್ಕಿದ್ದು ಅದರಲ್ಲೇನಾದರೂ ಬರೆದು ತುಂಬಿಸುವುದಷ್ಟೇ – ಅದೇ ನಿನ್ನ ಪ್ರಿಯವಾದ ಕಪ್ಪು ಶಾಯಿಯ ಇಂಕ್ ಪೆನ್ನಿನಲ್ಲಿ…!

ಇಂಕ್ ಪೆನ್ನು ಅಂದಾಗ ನೆನಪಾಯ್ತು – ನಿನ್ನದೆಲ್ಲ ಇದೆಂತಹ ಡಿಮ್ಯಾಂಡ್ ಮಾರಾಯ್ತಿ? ಅದೆಲ್ಲಾ ಎಲ್ಲಿಂದ ಹುಡುಕಿ ತರ್ತೀಯಾ ಅಂತ? ಬಾಲ್ ಪೆನ್ನುಗಳದೇ ರಾಜ್ಯವಿರುವ ಈ ಕಾಲದಲ್ಲಿ ಫೌಂಟನ್ ಪೆನ್ನು ಮತ್ತದರ ಶಾಯಿಗೆ ಊರೆಲ್ಲ ಅಲೆದು ಬಂದೆ ಗೊತ್ತಾ? ಮಸಿಕುಡಿಕೆ ಇದೆಯಾ? ಅಂತ ಸ್ಟೇಷನರಿ ಅಂಗಡಿಗಳಲ್ಲಿ ಕೇಳಿದರೆ ಯಾವುದೋ ವಿಚಿತ್ರ ಪ್ರಾಣಿಯನ್ನ ನೋಡೋ ಹಾಗೆ ಮುಖ ನೋಡ್ತಾರೆ ; ಆಡುವಂತಿಲ್ಲ, ಅನುಭವಿಸುವಂತಿಲ್ಲ. ಏನು ನಿನ್ನ ಗೋಳೇ ಮಾರಾಯ್ತಿ? ಹೋಗಲಿ ಬಿಡು.. ಹೇಗೇಗೋ ಏಗಿ ಕೊನೇಗೆಲ್ಲೆಲ್ಲೋ ಹುಡುಕಿ ಅದನ್ನೂ ತಂದಿದ್ದಾಯ್ತು . ಇನ್ನೂ ಪೇಚಾಡಿಕೊಂಡಿದ್ದರೆ ಏನು ತಾನೇ ಪ್ರಯೋಜನ ? ಮುಖ್ಯ ಅದನ್ನು ಬಳಸಿ ಬರೆದುಬಿಟ್ಟರೆ ಸರಿ. ಆಗಲಾದರೂ ನಿನ್ನ ಮೌನಗೌರಿ ವ್ರತ ಮುರಿದು ಮುದ್ದು ಮುಖದಲ್ಲಿ ಮಲ್ಲಿಗೆಯಂತಹ ಮಂದಹಾಸದ ನಗೆ ಚೆಲ್ಲೀತು. ಅರೆ ! ಎಲ್ಲಾ ಸರಿ.. ಬರೆಯೋದಾದರೂ ಏನನ್ನ ? ಅದನ್ನೇ ಹೇಳಲಿಲ್ಲವಲ್ಲೇ ಹುಡುಗಿ ನೀನು ?

ನೀ ಬಿಡು ಜಾಣೆ.. ಪ್ರೇಮಪತ್ರವೇ ಬೇಕಿದ್ದರೂ ಬಾಯಿಬಿಡದೆ, ನನ್ನಿಂದ ಅದನ್ನೇ ಬರೆಸುವ ಛಾತಿಯವಳು. ನಿನ್ನ ಮನಸರಿತವನೇ ನಾನಾಗಿದ್ದರೆ ಅದೇನು ಬರೆಯಬೇಕೆಂದು ನನಗೆ ಗೊತ್ತಿರುತ್ತದೆಯೇ? ಕಿಲಾಡಿ ನೀನು (ಅದಕೆ ನಿನ್ನ ಕಂಡರೆ ನನಗಿಷ್ಟ!). ನಾನು ಏನು ಬರೆಯುವೆನೆಂದು ನಿನಗೂ ಗೊತ್ತು .. ಅದಕ್ಕೆ ಬಾಯಿ ಬಿಡದೆ ಸತಾಯಿಸುತ್ತೀಯಾ. ಹೋಗಲಿ , ಪ್ರೇಮಪತ್ರವೇ ಅಂತಿಟ್ಟುಕೊಳ್ಳೋಣ – ಯಾಕೋ ಏನು ಬರೆಯಲು ತೋಚುತ್ತಿಲ್ಲವಲ್ಲೇ ಹುಡುಗಿ ? ಹಾಗೆಂದುಕೊಂಡೇ, ಇಲ್ಲಿವರೆಗಿನ ಈ ಪೀಠಿಕೆಯೇ ಮೊದಲ ಪುಟ ತುಂಬಿಸಿಬಿಟ್ಟಿದೆಯಲ್ಲೇ ? ನಿನ್ನಂದಚಂದ ಹೊಗಳಿ ಬರೆದರೆ ನಿನಗದು ಇಷ್ಟವಿಲ್ಲ ಎನ್ನುತ್ತಿ – ಮುಖಸ್ತುತಿಯಿಂದ ನಾಚಿ ಕೆಂಪಾದ ನಿನ್ನ ಮುಖ ಬೇರೆಯದೇ ಕಥೆ ಹೇಳುತ್ತಿದ್ದರು… ನಿನ್ನ ಅಪರಂಜಿಯಂತಹ ಗುಣವನ್ನು ಹೊಗಳಲೇ ಎಂದರೆ ‘ ಸುಳ್ಳಾಡುವವರನ್ನು ಕಂಡರೆ ನನಗಾಗದು’ ಎನ್ನುತ್ತಿ. ಬರೆದರೆ ನಿನ್ನ ಮುನಿಸಿನ ಬಗೆಯೇ ಬರೆಯಬೇಕೇನೋ ? ಏನೇ ಮಾಡಿದರು ಜಗ್ಗದ ಹಠಮಾರಿ ಮುನಿಸಿನ ಮಹಾಕಾಳಿ ನೀನು. ಆ ಮುನಿಸಲ್ಲು ಮುದ್ದಾದ ಮುಖ ಕಾಣುವ ಹುಂಬ ನಾನೆಂಬ ಗುಟ್ಟನ್ನಿಲ್ಲಿ ಬಿಟ್ಟುಕೊಡುತ್ತಿದ್ದೇನೆ – ಖುಷಿ ತಾನೇ ? ಬೇರೇನೇ ಇರಲಿ , ಇದು ಮಾತ್ರ ಸತ್ಯದ ಮಾತು ; ಯಾವಾಗಲೂ ನೀನು ನೀನಾಗಿರುತ್ತೀಯಾ. ನಿನ್ನತನವನ್ನು ಬಿಟ್ಟುಕೊಡದೆ ಕಾದಾಡುತ್ತೀಯ. ಆವರಣಗಳಿಲ್ಲದ ನೇರ ನಡೆನುಡಿಯ ನಿನ್ನೀ ಗುಣವೇ ನನಗೆ ತುಂಬಾ ಪ್ರಿಯವಾದದ್ದು. ಅದರ ಹಿಂದಿರುವ ಮಗುವಿನಂತಹ ಮನಸು, ಮಾಗಿದ ಗೃಹಿಣಿಗಿರುವ ಪಕ್ವತೆ, ಎರಡು ಕಡೆಗೂ ಓಲಬಿಡದೆ-ಹೋಲಿಸಬಿಡದೆ ತುಯ್ದಾಟದಲ್ಲಿರಿಸುವ ಚಂಚಲತೆ – ಎಲ್ಲವು ಹಿತವಾಗುವುದು ಬಹುಶಃ ನೀನೆ ಒಂದು ಹಿತವಾದ, ಸಹನೀಯವಾದ ಪ್ಯಾಕೇಜ್ ಆಗಿರುವುದರಿಂದ. ಅದೆಲ್ಲವನ್ನೂ ಮೀರಿ – ಹೆಣ್ಣಿನ ಸಹಜ ಹೊಯ್ದಾಟಗಳ ನಡುವೆಯೂ ನನ್ನತನವನ್ನು ಗಮನಿಸಿ, ಗೌರವಿಸುವ ಸಂಸ್ಕಾರವೊಂದೇ ಸಾಕು ನನಗೆ, ಮಿಕ್ಕಿದ್ದೆಲ್ಲಾ ಗೌಣ… 🙂

ಅಯ್ಯೋ ! ನಿನ್ನ ಬಗ್ಗೆ ಬರೆಯಹೊರಡಲಿಕ್ಕಿಲ್ಲ, ಆಗಲೇ ಎರಡನೇ ಪುಟದ ಕೊನೆ ಬಂದುಬಿಟ್ಟಿತೇ? ಎರಡು ಪುಟ ಮುಗಿಸಿದ ಮೇಲಷ್ಟೇ ನನ್ನ ಜೊತೆಗೆ ಮಾತು ಅಂದೆಯಲ್ಲಾ? ನೋಡೀಗ. ಮುಗಿದಾಯ್ತು ಎರಡು ಪುಟ, ಮೂರನೆಯದರತ್ತ ನಡೆದಿದೆ ಓಟ. ಆದರೆ ನೀ ಮಾತು ಕೊಟ್ಟಂತೆ ನನ್ನೊಡನೆ ಮಾತಾಡದ ಹೊರತು ನಾನು ಮೂರನೇ ಪುಟದತ್ತ ಮುಖ ಮಾಡುವುದಿಲ್ಲ. ನೋಡೀಗ ನಿನಗೊಂದು ಮೊಬೈಲ್ ಮೇಘ ಸಂದೇಶ ಕಳಿಸುತ್ತಿದ್ದೇನೆ – ಎರಡು ಪುಟ ಮುಗಿಸಿದ ಸಾಕ್ಷಿಯಾಗಿ ಅದರ ಫೋಟೋ ಕೂಡ ತೆಗೆದು ಕಳಿಸುತ್ತಿದ್ದೇನೆ. ಈಗ ನೀನಾಗಿ ಬಂದು ಮಾತನಾಡಿಸಿ ಏಕೆ ನನ್ನಲ್ಲಿ ಹೀಗೆ ಪತ್ರ ಬರೆಸಲು ಹವಣಿಸಿದೆ ? ಯಾಕಿಷ್ಟು ಬಲವಂತ ಮಾಡಿ ಬರೆಸಿದೆ ಎಂದು ಹೇಳುವ ತನಕ ಪತ್ರವನ್ನು ಮುಂದುವರೆಸುವುದಿಲ್ಲ ಮತ್ತು ಮುಗಿಸುವುದಿಲ್ಲ, ನಿನ್ನಾಣೆ!

ಹಾಂ.. ಮೇಘಸಂದೇಶ ರವಾನಿಸಿಯೂ ಆಯ್ತು ನೋಡು. ಈಗ ಕಾಯುತ್ತಿದ್ದೇನೆ ಜಾತಕ ಪಕ್ಷಿಯ ಹಾಗೆ.. ನಿನ್ನ ಮೌನವ್ರತ ಮುರಿವ ಆ ಕರೆಗಾಗಿ, ರಾಧೆಯ ದನಿಗಾಗಿ..

ನಿನ್ನ ಕೊರಳಿನ ಮುರಳಿ,
ಮಾಧವ

ಉಪಸಂಹಾರ:

ಮಿಕ್ಕಿದ್ದೇನಾಯ್ತು, ಮುಂದೇನಾಯ್ತು ಎನ್ನುವುದಿಲ್ಲಿ ಅಪ್ರಸ್ತುತ. ನನ್ನ ಹುಡುಗಿ ಯಾಕೀ ಪತ್ರ ಬರೆಸಿದಳೆಂಬುದು ಮಾತ್ರ ಇಲ್ಲಿ ಸಂಗತ, ಮಿಕ್ಕಿದ್ದೆಲ್ಲ ‘ನಮ್ಮ’ ವೈಯಕ್ತಿಕ! ಅದನ್ನು ಮಾತ್ರ ಬಹಿರಂಗಪಡಿಸುತ್ತಿದ್ದೇನೆ – ಮಿಕ್ಕಿದ್ದನ್ನ ಕೆಳಬಾರದೆನ್ನುವ ಕಟ್ಟಳೆಯೊಂದಿಗೆ . ನಿಜ ಹೇಳಬೇಕೆಂದರೆ ಇದೂ ಕೂಡ ಅವಳು ನನಗೆ ನೇರ ಹೇಳಿದ್ದಲ್ಲ.. ನಾನೇ ಆಕಸ್ಮಿಕವಾಗಿ ಕಂಡುಕೊಂಡಿದ್ದು. ನಾ ಬರೆದ ಪತ್ರವನ್ನ ಕ್ಲಿಕ್ಕಿಸಿ ಅವಳಿಗೆ ಫೋಟೋ ಕಳಿಸಿದೆನೆಂದು ಹೇಳಿದ್ದೆನಲ್ಲಾ? ಅದನ್ನೇ ಯಥಾವತ್ತಾಗಿ ಡಿಜಿಟಲಿಗಿಳಿಸಿ ಪ್ರತಿಲಿಪಿ ಲೆಟರ್ ಬಾಕ್ಸ್ ಸ್ಪರ್ಧೆಗೆ ನನ್ನ ಹೆಸರಿನಲ್ಲಿ, ನನಗರಿವಿಲ್ಲದಂತೆ ಕಳಿಸಿಬಿಟ್ಟಿದ್ದಾಳೆ! ಆ ಕಾರಣಕ್ಕಾಗಿ ಎಂದು ನನಗೆ ಹೇಳದೇನೆ ನನ್ನಿಂದ ಬರೆಸಿ ಸ್ವಾಮಿಕಾರ್ಯ, ಸ್ವಕಾರ್ಯ ಎರಡೂ ಮಾಡಿಸಿಕೊಂಡು ಬಿಟ್ಟಿದ್ದಾಳೆ ನನ್ನ ಚತುರ ಹುಡುಗಿ!

ಪ್ರತಿಲಿಪಿಗೆ ಕಳಿಸಿರುವುದು ನನಗೂ ಹೇಳಿಲ್ಲ.. ನನಗೆ ಗೊತ್ತಿಲ್ಲ ಅಂದುಕೊಂಡಿದ್ದಾಳೆ.. ಗೊತ್ತು ಎಂದು ತೋರಿಸಿಕೊಂಡು ಅವಳ ಉತ್ಸಾಹಕ್ಕೆ, ಸಂತೋಷಕ್ಕೆ ತಣ್ಣೀರೆರಚುವುದಾದರೂ ಏಕೆ .. ಅಲ್ಲವಾ ? ನೀವೂ ಹೇಳಬೇಡಿ ಸುಮ್ಮನಿದ್ದುಬಿಡಿ. ಇಂತ ಚಿಕ್ಕಪುಟ್ಟ ಸಂತಸಗಳಿಂದ ಅವಳಿಗೆ ಖುಷಿಯಾಗುವುದಾದರೆ ನಾವ್ಯಾಕೆ ಆ ಸುಖದ ಬಲೂನಿಗೆ ಸೂಜಿ ಚುಚ್ಚಬೇಕಲ್ಲವ? ಹುಶ್.. ಎಲ್ಲಾರೂ ಗಫ್ಚುಪ್ !!

02065. ಯಾರದೋ ಹಾಡು..


02065. ಯಾರದೋ ಹಾಡು..
_______________________

ಕಾಡಿನ ಜಾಡು ಕಂಗಾಲಾಗಿ ಹೋಗಿದೆ
ಹೆಜ್ಜೆಯಿಕ್ಕುವವರಿಲ್ಲದೆ ಪಾಳು ಬಿದ್ದು..
ಕುರುಚಲು ಚುಚ್ಚುವ ಬಿರುಸಿದ್ದೆಡೆ ಮೆತ್ತೆ
ಸೊಂಪು ಹುಲುಸು ಹುಲ್ಲುಗಾವಲು ತುಂಬಾ..

ದಟ್ಟೈಸಿದ ದಿಟ್ಟತನದಡಿ ಮುಚ್ಚಿದ ಹಾದಿ
ಕಾದು ಕೂತಿದೆ ಶೋಧನೆ ಅನ್ವೇಷಣೆ ಹಾರೆ
ಯಾಕೋ ಮರೆತಂತಿದೆ ಜಗ ಎಡತಾಕುವರಿಲ್ಲ
ಹುಲ್ಲಬಣದ ಸುತ್ತಣ ಜಿಗ್ಗು ಲಂಟಾನ ಸುಳಿವಿಲ್ಲ..

ಹರಿತವಿಲ್ಲ ಅಲುಗು ಹುಲ್ಲದು ಸುಪ್ಪತ್ತಿಗೆ
ಅಭೇದ್ಯ ಕಾನನವಲ್ಲ ಮರಗಿಡಗಳ ಗೋಜಿಲ್ಲ
ಸರಳ ಸುಲಲಿತ ನಡೆದಿದ್ದೇ ಹಾದಿ ಮುನ್ನುಗ್ಗೆ
ಹುಡುಕುವುದೇಕೋ ಜಟಿಲ ದುರ್ಗಮ ಅಭೇದ್ಯ..

ಅದು ಮಾನವ ಸಹಜ ದೌರ್ಬಲ್ಯ ಎಟುಕಿದ್ದು
ಜಿಲ್ಲೆನ್ನದು ಹೃದಯ ಬಯಸುತ್ತ ಎಟುಕದ ಶೂನ್ಯ
ಅಡವಿಯ ನಿಗೂಢತೆ ರಮ್ಯಾ ಕುತೂಹಲ ಬಂಧಿ
ಯಾಕರಿವಾಗದು? ಮೊತ್ತದಲೆಲ್ಲ ಅದೇ ಮೂಲದ ತಿದಿ..

ಅರಸುವ ಜೀವಕೆ ಕಾದಿದೆ ಪ್ರಕೃತಿ ನೈಜದ ಸೆರಗು
ಬೆಡಗು ಬಿನ್ನಾಣ ವೈಯ್ಯಾರ ಗತಕಾಲದಡಿ ನೆನಪು
ನಿಜದ ಫಲವತ್ತತೆ ಉತ್ತು ಬಿತ್ತು ಬೆಳೆವಾ ಹಂಬಲಕೆ
ಕಾದ ನೆಲವಾಗುವೆ ನೇಗಿಲು ಹಿಡಿದು ಬರುವ ಯೋಗಿಗೆ..

– ನಾಗೇಶ ಮೈಸೂರು
12.06.2017

02064. ಮಂಕುತಿಮ್ಮನ ಕಗ್ಗ ೬೩ ರ ಟಿಪ್ಪಣಿ , ರೀಡೂ ಕನ್ನಡದಲ್ಲಿ …


02064. ಮಂಕುತಿಮ್ಮನ ಕಗ್ಗ ೬೩ ರ ಟಿಪ್ಪಣಿ , ರೀಡೂ ಕನ್ನಡದಲ್ಲಿ …

http://kannada.readoo.in/2017/06/ಬಿಡು-ಒರಟು-ನರಭಾಷೆ-ಆಲಿಸೊಳಗ

02063. ಅತ್ತರು ಜಗದತ್ತರು


02063. ಅತ್ತರು ಜಗದತ್ತರು
__________________________


ಹೆತ್ತವರು ಕೊನೆಗೆ ಅತ್ತರು
ಹೆತ್ತು ಹೊತ್ತವರು ಉದ್ದಕ್ಕೂ ಅತ್ತರು
ಹೆತ್ತ ಹೊರೆ ಹಗುರವಾದ ಹೊತ್ತಲ್ಲೂ
ಅತ್ತರು ಘಮಘಮಿಸುತ್ತ ಕರುಳ ನೆತ್ತರು..

ಕಟ್ಟಿದ ಕಾಲಬಳ್ಳಿ ಅನಂತ
ಕಾಣದ ಸೇತುವೆ ಅದೃಶ್ಯ ಸಂತ
ದಿಗಂತದೆತ್ತರ ಹಕ್ಕಿ ಹಾರಲು ಬಿಟ್ಟರು
ಬಿಟ್ಟ ತಪ್ಪಿಗೆ ತೆತ್ತ ದಂಡ ನಿಟ್ಟುಸಿರು ಅತ್ತರು..

ಜೋಪಾನ ಜೋಗುಳದ ಗಾನ
ಗಾಯನದೊಳಿತ್ತೇನು ಮಾತಿನುದ್ಯಾನ
ಮಾಯದ ನೋವಿತ್ತು ವ್ರಣಗಳಾಗಿ ಕಾಡಿತ್ತು
ಮುಚ್ಚಿಟ್ಟು ಅತ್ತರು ಕಾಣಬಿಡದ ಸೊಕ್ಕಿದ ಯೌವನ..

ನಿಚ್ಚಳ ಬೆಳಕಲ್ಲಿಂದು ಕಾಣುತಿದೆ
ಅಳುವ ದನಿ ಬಳಿದ ಅತ್ತರಿನ ನಂಟು
ಅತ್ತತ್ತು ಬತ್ತಿದ ಕಣ್ಣುಗಳೀಗ ಒಣಗಿದ ದೀವಟಿಗೆ
ಬತ್ತಿ ಹಚ್ಚಲು ಬಿಡದು ಹಾಸಿ ಹೊದ್ದ ಹಾಸಿಗೆ ಚಾದರ..

ಅತ್ತರು ಅತ್ತೇ ಅತ್ತರು ಸದಾ
ಅಳುತೊಳಗೊಳಗೆ ತೋಳ ಬಂಧನ ನೆನೆದು
ಅಳಿಸಿದವರೇ ಅತ್ತರು, ಹಚ್ಚಿಕೊಂಡ ಹೊದರು..
ಪರಿಪೂರ್ಣತೆಯತ್ತ ನಡಿಗೆ ನಿರಂತರ; ನಡಿಗೆ ನಿಂತರೆ ಗಡಿಯಾರ.

– ನಾಗೇಶ ಮೈಸೂರು
೧೧.೦೬.೨೦೧೭

(Picture : This work is licensed under a Creative Commons Attribution-NonCommercial-ShareAlike 3.0 Unported License)

02062.ತಣ್ಣುಗ್ ಪದ ಬರ್ಕೊ


02062.ತಣ್ಣುಗ್ ಪದ ಬರ್ಕೊ
____________________
(ಸುಮ್ನೆ ಒಂದ್ ಬಿಂದಾಸ್ ಗಾನಾ.. 😊)


ತಣ್ಣುಗ್ ಪದ ಬರ್ಕೊ ಮಗಾ
ತಣ್ಣುಗ್ ಪದ ಬರ್ಕೊ
ಬಿದ್ದಿದ್ದೆದ್ದಿದ್ದು ನಡೆದಿದ್ದೋಡಿದ್ದು
ಕುಣಿದಿದ್ದು ಕೂತಾಡಿದ್ದೂ
ಮುನಿದಿದ್ದು ಮಾತಾಡಿದ್ದು
ಎಲ್ಲಾ ಅಷ್ಟಷ್ಟ್ ಬರ್ಕೊ

ಏನೇನೋ ಹೆಂಗೆಂಗೋ ಹುಡ್ಗಾಟ
ಏನೇನ್ ಮಾಡಿದ್ಯೋ ಹೊಡ್ದಾಟ
ವಯ್ಸಿನ್ ಐಕಳ ಹಾಡು
ಹುಡ್ಗೀರ ಬೆನ್ಬಿದ್ದಿದ್ದ ಪಾಡು
ಅಳ್ತಿದ್ವೊ ನಗ್ತಿದ್ವೋ ಅವ್ಮಾನದ್ ತುರ್ಕೆ
ತಣ್ಣಗ್ ಬರ್ಕೊ ಮಗ್ನೆ ತಣ್ಣಗ್ಪದ ಬರ್ಕೊ

ಯಾವಳ್ನೋ ಇಟ್ಕೊಂಡು ಮನಸಲ್ಲಿ
ಯಾವನ್ನೊ ಕಟ್ಕೊಂಡು ಮಕ್ಕಳಲ್ಲಿ
ಪಾಲಿಗ್ ಬಂದಿದ್ ಪಂಚಾಮೃತ ತಿಳ್ಕೊ
ಮೇಲ್ನಗ್ನಗ್ತಾನೇ ಒಳೊಳಗೆ ಉರ್ಕೋ
ಮುಖ್ವಾಡ ಹಾಕೊಂಡೆ ಬದ್ಕೋದ ಕಲ್ತ್ಕೋ
ಬರ್ಯೋದ್ ಮಾತ್ರ ನಿನ್ನಿಷ್ಟ್ದಂಗೆ ಬರ್ಕೊ

ಬದ್ಕೋದೆ ಬೇರೆ ಬರ್ಯೋದೇ ಬೇರೆ
ಕೇಳೋರಿಲ್ಲ ಇಲ್ಲಿ ಮಾನ ಮರ್ವಾದೆ ಕಳ್ದ್ಹೋದ್ರೆ
ಗುಟ್ಗುಟ್ನಾಗೇ ಇಟ್ಕೋ ಬೆಟ್ ಮಡ್ಚೋಕೆ ಬಿಡ್ದೆ
ಬೀಳ್ಬೇಡ ಸಂತೆಲಿ ಅಷ್ಟಿಷ್ಟ್ ದೂರ್ವಾಗೆ ಸದ್ದೇ
ಮಾಡ್ಕೊಂಡಿದ್ರೆ ಕ್ಷೇಮ ಇರ್ಲಪ್ಪಾ ಸ್ವಲ್ಪ್ ಡ್ರಾಮಾ
ತಣ್ಣಗಾಗೋಕೆ ಮುಂಚೆ ಬರ್ದಿಟ್ಬುಡು ಆರಾಮ !

– ನಾಗೇಶ ಮೈಸೂರು
೦೮.೦೬.೨೦೧೭

02061. ಬೇಂದ್ರೆ ಅಜ್ಜಾ..


02061. ಬೇಂದ್ರೆ ಅಜ್ಜಾ..
____________________
(ಮಕ್ಕಳಿಗಾಗಿ)


ಅಂಬಿಕಾತನಯದತ್ತ
ಯಾರು ಅಂತ ಗೊತ್ತಾ ?
ನಾಕುತಂತಿ ಬರೆದ ತಾತ
ಕಾವ್ಯದಲೆ ಸೃಷ್ಟಿ ಸಂಗೀತ..!

‘ಕೃಷ್ಣಾಕುಮಾರಿ’ ಬರೆದ ‘ಗರಿ’
‘ಸಖೀಗೀತ’ ಹಾಡಿ ನಲಿದ ಪರಿ
ಜೀವನವನೆ ಜೀಕಿ ‘ಉಯ್ಯಾಲೆ’
ತಾತ ಕಟ್ಟಿಕೊಟ್ಟ ‘ನಾದಲೀಲೆ..!’

ತಾನೆ ಬಂದನಲ್ಲ ‘ಮೇಘದೂತ’
‘ಗಂಗಾವತರಣ’ದಾ ಭಗೀರಥ
ಹೊಟ್ಟೆಬಟ್ಟೆ ಕಟ್ಟಿ ‘ಹಾಡುಪಾಡು’
‘ಸೂರ್ಯಪಾನ’ ಮತ್ತ ಕುಡಿದಾಡು..!

ಉದ್ಘೋಷಿಸಿ ‘ಹೃದಯಸಮುದ್ರ’
‘ಮುಕ್ತಕಂಠ’ದಿ ಹಾಡಿತ್ತು ಮಧುರ
‘ಚೈತ್ಯಾಲಯ’ ಋತುಗಾನ ಸವಾರಿ
ಕುಣಿದಾಡಿ ತುಂಬಿದ ‘ಜೀವಲಹರಿ..!’

ತಾನೇ ‘ಮೂರ್ತಿ ಮತ್ತು ಕಾಮಕಸ್ತೂರಿ’
ಅಲ್ಲ ‘ಅರುಳುಮರುಳು’ ವಿದ್ಯುಲ್ಲಹರಿ
ಜ್ಞಾನಪೀಠ ತಂದ ಅಜ್ಜನಿಗೆ ‘ನಮನ’
‘ಸಂಚಯ’ವೀ ಬಾಳಿಗೆ ಎರವಲು ಜ್ಞಾನ..!

ಕಾದಿತ್ತಾಣತಿ ‘ಉತ್ತರಾಯಣ’ ಕಾಲ
‘ಮುಗಿಲಮಲ್ಲಿಗೆ’ ತಾ ಮೇಘ ಸಂಕುಲ
ಬೆರಗದೊ ‘ಯಕ್ಷಯಕ್ಷಿ’ ಮೀಟಿದಾಗ
‘ನಾಕುತಂತಿ’ಯಲೆ ಹುಟ್ಟಿತೀ ಜಗ..!

ಸಾಹಿತ್ಯ ಜಗಕೆ ಗೌರವ ‘ಮರ್ಯಾದೆ’
‘ಶ್ರೀಮಾತೆ’ಗು ಸುತ ‘ಬಾ ಹತ್ತರ’ ಎಂದೆ
ಇಳೆಯಲಿ ಮೊಳಗಿದ ‘ನಭೋವಾಣಿ’
ಪಚ್ಛೆಕುಪ್ಪಸ ‘ಶ್ರಾವಣ ಬಂತು’ ಧರಣಿ..!

‘ಒಲವೇ ನಮ್ಮ ಬದುಕು’ ಬಾಳಿದ ಬಾಳು
‘ಚತುರೋಕ್ತಿ ಮತ್ತು ಇತರ ಕವಿತೆಗಳು’
ಹಾಕಲಿಲ್ಲ ಯಾರಿಗೂ ಪದವಿಗೆ ‘ಪರಾಕಿ’
ಅನಿಸಿದ್ದ ಬರೆದ ‘ಕಾವ್ಯವೈಖರಿ’ ಚಾಲಾಕಿ..!

ಪುಟ್ಟ, ‘ತಾ ಲೆಕ್ಕಣಿಕೆ ತಾ ದೌತಿ’ ಎಂದ
‘ಬಾಲಬೋಧೆ’ಗೆ ತೊಡೆಯೇರಿ ಕೂತ ಕಂದ
ಜತೆ ಕಲಿಯಲು ಕೂಡೆ ‘ಚೈತನ್ಯದ ಪೂಜೆ’
ಅಜ್ಜನ ‘ಪ್ರತಿಬಿಂಬಗಳು’ ಮನೆಮನೆಗು ಹೆಜ್ಜೆ..!

– ನಾಗೇಶ ಮೈಸೂರು
೦೯.೦೬.೨೦೧೭

(ಬೇಂದ್ರೆ ಕವನ ಸಂಕಲನಗಳ ಹೆಸರನ್ನು ಬಳಸಿ ಹೊಸೆದ ಕವಿತೆ)
(Picture source – internet )

02060. ನಾಕು ತಂತಿಯ ಮೇಲಿನ ಟಿಪ್ಪಣಿ ಬರೆದುದ್ದರ ಹಿನ್ನಲೆ …


02060. ನಾಕು ತಂತಿಯ ಮೇಲಿನ ಟಿಪ್ಪಣಿ ಬರೆದುದ್ದರ ಹಿನ್ನಲೆ …
__________________________________________________


ಅಂಬಿಕಾತನಯದತ್ತರ ನಾಕುತಂತಿಗೊಂದು ಟಿಪ್ಪಣಿ ಬರಲಿ ಅಂತ ಹೆದರಿದವರ ಮೇಲೆ ಕಪ್ಪೆ ಎಸೆದದ್ದು ಗೆಳೆಯ ದೀಪಕ್. ಜಿ.ಕೆ. (Deepak GK) ಅವರ ಸಲಹೆಯನ್ನು ಪಕ್ಕಕ್ಕೆ ತಳ್ಳಿ ಸುಮ್ಮನಿದ್ದರಾಯ್ತು ಅನಿಸುವ ಹೊತ್ತಲ್ಲೆ, ಹೀಗೊಂದು ಪ್ರಯತ್ನ ಪಟ್ಟರೆ ಅರ್ಥಮಾಡಿಕೊಳ್ಳುವ ಸಾಧ್ಯತೆಯಾದರು ಇರುವುದಲ್ಲವೇ? ಅನಿಸಿತು. ಹೇಗೂ ಸಾಕಷ್ಟು ವಿವರಣೆ ಸಾಹಿತ್ಯಿಕ ಜಗದಲ್ಲಿ ಈಗಾಗಲೆ ಇರಬೇಕು, ಅದಕ್ಕೆ ಜೊತೆಯಾಗಿ ಮತ್ತೇನಾದರೂ ಹೊಳೆದರೂ ಹೊಳೆಯಬಹುದೇನೊ ಅನಿಸಿ ಒಂದು ಕೈ ನೋಡಲು ನಿರ್ಧರಿಸಿಯೆ ಬಿಟ್ಟೆ.. ಹಾಗೆ ಬರೆಯಹೊರಟ ಗಳಿಗೆಯಲ್ಲಿ ಮೊದಲು ಗಮನಕ್ಕೆ ಬಂದ ಸಂಗತಿ – ಬೇಂದ್ರೆಯವರ ಈ ಪದ್ಯದಲ್ಲಿ ನಾಲ್ಕು ಭಾಗಗಳಿವೆ ಎಂಬುದು. ಅದನ್ನು ನೋಡಿದಾಗ ತಟ್ಟನೆ ಅನಿಸಿತು – ನಾಕುತಂತಿ ಎನ್ನುವ ಹೆಸರಿಗೂ ಈ ನಾಲ್ಕು ಭಾಗಕ್ಕೂ ಏನಾದರೂ ಕೊಂಡಿಯಿರಬಹುದೇನೋ ಎಂದು.

ಹಾಗೆಂದುಕೊಂಡೆ ಮುನ್ನಡೆದಾಗ ನಾಕುತಂತಿ ಎನ್ನುವ ಹೆಸರಿನ ಮೂಲ ಏನಿರಬಹುದೆಂದು ಪ್ರಶ್ನೆ ಬಂತು. ತಂತಿ ಎಂದ ತಕ್ಷಣ ನಮಗೆ ಮನಸಿಗೆ ಬರುವುದು ತಂತಿಯ ಮೂಲಕ ನಾದ ಹೊರಡಿಸುವ ಸಂಗೀತ ವಾದ್ಯಗಳದು. ಅದರಲ್ಲೂ ವೀಣೆಯಂತಹ ಪಾರಂಪಾರಿಕ, ಸಾಂಪ್ರದಾಯಿಕ ವಾದ್ಯ ತಟ್ಟನೆ ಕಣ್ಮುಂದೆ ನಿಲ್ಲುತ್ತದೆ. ವೀಣೆಯಲ್ಲಿರುವ ಒಟ್ಟು ಏಳು ತಂತಿಗಳಲ್ಲಿ ನಾಲ್ಕು ಪ್ರಮುಖ ನಾದ ಹೊರಡಿಸುವ ತಂತಿಗಳಿರುವುದು ತುಸುವಾದರೂ ಸಂಗೀತ ಬಲ್ಲವರಿಗೆ / ಕಂಡವರಿಗೆ ಗೊತ್ತಿರುವ ಅಂಶ. (ಈ ನಾಲ್ಕು ತಂತಿಗಳನ್ನು ಕ್ರಮವಾಗಿ ಸಾರಣಿ, ಪಂಚಮ, ಮಂದ್ರ, ಅನುಮಂದ್ರ ಎನ್ನುತ್ತಾರೆ. ಮಿಕ್ಕ ಮೂರು ತಂತಿಗಳು ತಾಳದ ತಂತಿಗಳಂತೆ – ಮಧ್ಯ ಷಡ್ಜ, ಮಧ್ಯ ಪಂಚಮ, ತಾರಾ ಷಡ್ಜ ಅನ್ನುವ ಹೆಸರಿನವು). ಸಂಗೀತದ ‘ಓಂ’ ನಾಮವು ಗೊತ್ತಿರದ ನನ್ನಂತಹವನು ಇದರ ಬಗ್ಗೆ ಖಚಿತವಾಗಿ, ಪಾಂಡಿತ್ಯ ಪೂರ್ಣವಾಗಿ ಮಾತಾಡಬಲ್ಲ ಸಾಧ್ಯತೆ ಇಲ್ಲವಾದರೂ ನನಗನಿಸಿದ್ದು – ನಾಲ್ಕುತಂತಿಯ ನಾಲ್ಕು ಭಾಗಕ್ಕೂ ಈ ವಾದನದ ನಾಲ್ಕು ತಂತಿಗಳು ಹೊರಡಿಸುವ ನಿನಾದಕ್ಕೂ ಏನೊ ನಂಟಿರಬಹುದೇನೋ ಎಂದು. ಈ ನಾಲ್ಕುತಂತಿಗಳು ಹೊರಡಿಸುವ ಭಾವವನ್ನೇ ಪ್ರತಿ ಭಾಗದ ಕವನವು ಸೂಚ್ಯವಾಗಿ, ಸಾಂಕೇತಿಕವಾಗಿ ಹೊರಡಿಸುತ್ತಿದೆಯೆ ? ಎನ್ನುವುದು ಕುತೂಹಲಕರ ಅಂಶ. ಒಂದು ವೇಳೆ ಇದ್ದರೂ, ವಿವಿಧ ಧ್ವನಿಗಳನ್ನು ಹೊರಡಿಸುವ ಬೇಂದ್ರೆ ಕವನಗಳಲ್ಲಿ ಇದರ ಗ್ರಹಿಸುವಿಕೆಯೇನು ಸುಲಭದ ಮಾತಲ್ಲ. ಆ ಸಾಧ್ಯತೆಯನ್ನು ಮನಸಿನಲ್ಲಿಟ್ಟುಕೊಂಡೆ ಈ ಟಿಪ್ಪಣಿ ಬರೆಯಲು ಹೊರಟೆ..

ಕಾವ್ಯ ಪ್ರಪಂಚದಲ್ಲಿ ಒಂದು ಮಾತಿದೆ – ಬರೆಯುವಾಗ ಬರೆವವನ ಭಾವ ಏನೇ ಇದ್ದರು, ಓದುಗನ ಮನದಲ್ಲಿ ಯಥಾವತ್ ಅದೇ ಭಾವ ಉದಿಸಬೇಕೆಂದೇನೂ ಇಲ್ಲ. ಕವಿಯ ಮೂಲ ಆಶಯದೊಡನೆ ಕವಿಗೇ ಅರಿವಿರದಿದ್ದ ಅನೇಕ ಭಾವಗಳು, ಅರ್ಥಗಳು, ಆಶಯಗಳು ಹೊಳೆದುಬಿಡಬಹುದು. ಕೆಲವು ಕವಿ ಐಚ್ಚಿಕವಾಗಿ ಸೇರಿಸಿದ ಅಂಶಗಳಾಗಿದ್ದರೆ ಮಿಕ್ಕ ಹಲವು ಕವಿಯ ಕಲ್ಪನೆಯನ್ನು ಮೀರಿ ಹೇಗೆ ನುಸುಳಿಕೊಂಡ ಸೃಜನಾತ್ಮಕ ಆಯಾಮಗಳೂ ಆಗಿರಬಹುದು. ಹೀಗಾಗಿ, ಇಲ್ಲಿ ನಾನು ಬರೆದ ಟಿಪ್ಪಣಿಗಳೆಲ್ಲವೂ ಬೇಂದ್ರೆಯವರ ಮೂಲಕಲ್ಪನೆ ಅಥವಾ ಆಶಯವಾಗಿತ್ತು ಎಂದು ಹೇಳಿದರೆ ಅದು ಬರಿ ಉತ್ಪ್ರೇಕ್ಷೆಯಾದೀತು. ಅವರ ಆಶಯವೇನಿದ್ದೀತು ಎಂದು ಊಹಿಸಿಕೊಳ್ಳುತ್ತಲೇ, ಮತ್ತಾವ ಗೂಢಾರ್ಥಗಳು ಹುದುಗಿರಬಹುದೆಂಬ ಚಿಕಿತ್ಸಕ ದೃಷ್ಟಿಯಲ್ಲಿ ನೋಡಿದಾಗ ಕಂಡು ಬಂದ ಆಯಾಮಗಳನ್ನೆಲ್ಲ ಪರಿಗಣಿಸಿ ವಿವರಿಸಲೆತ್ನಿಸಿದ್ದೇನೆ – ನನಗೆ ತೋಚಿದ ಹಾಗೆ. ಶಾಸ್ತ್ರೀಯವಾಗಿ ಕನ್ನಡ ಅಧ್ಯಯನ ಮಾಡಿ ತನ್ಮೂಲಕ ಗಳಿಸಿದ ಪಾಂಡಿತ್ಯದಿಂದ ಬರೆದ ವಿದ್ವತ್ಪೂರ್ಣ ಬರಹವಿದಲ್ಲ. ಬದಲಿಗೆ ಬಾಲ್ಯದಲ್ಲಿ ಕಲಿತಿದ್ದ ಮತ್ತು ಇನ್ನು ಮಿಕ್ಕುಳಿದುಕೊಂಡಿರುವ ಸಾಮಾನ್ಯ ಸ್ತರದ ಕನ್ನಡ ಭಾಷಾಜ್ಞಾನವನ್ನೇ ಬಂಡವಾಳವಾಗಿಟ್ಟುಕೊಂಡು ಸಿದ್ಧಪಡಿಸಿದ ‘ಸಂತೆ ಹೊತ್ತಿಗೆ ಮೂರೂ ಮೊಳ ನೇಯ್ದನಂತಹ’ ಸರಕು. ಹೀಗಾಗಿ ಅಲ್ಲಲ್ಲಿ ಕಂಡುಬಂದಿರಬಹುದಾದ ವ್ಯಾಕರಣ ದೋಷ, ತಪ್ಪಾದ ಪದ ಪ್ರಯೋಗ, ಅಸಂಬದ್ಧ ವಾಕ್ಯ ಸಂಯೋಜನೆ, ತಪ್ಪಾದ ವಿವರಣೆ, ಅಸಂಗತತೆ, ಅಪರಿಪೂರ್ಣತೆ ಅಥವಾ ಗೊಂದಲ ಹುಟ್ಟಿಸುವ ವಿವರಣೆಗಳನ್ನೂ ನಾ ಮೇಲೆ ಹೇಳಿದ ಹಿನ್ನಲೆಯಲ್ಲಿ ದಯವಿಟ್ಟು ಮನ್ನಿಸಿಬಿಡಿ.

ಬರೆಯ ಹೊರಟಂತೆ ಒಂದೆರಡು ಕಂತಿನಲ್ಲಿ ಮುಗಿಸಬೇಕೆಂದು ಅಂದುಕೊಂಡಿದ್ದು ಹತ್ತಿರ ಹತ್ತಿರ ಇಪ್ಪತ್ತು ಕಂತುಗಳಾಗಿ ಹೋಯ್ತು. ಬರೆಯುವಾಗ ಏನೇನೋ ಹೊಸ ಅರ್ಥ, ಹೊಳಹುಗಳು ತೋಚುತ್ತಿದ್ದವು. ಅವು ತೋಚಿದ ಹಾಗೆಯೇ ಬರೆದುಕೊಂಡು ಹೋಗುತ್ತಿದ್ದೆ. ಇಷ್ಟು ವಿಸ್ತೃತವಾಗಿ ಬರಬಹುದೆನ್ನುವ ಕಲ್ಪನೆ ನನಗೂ ಇರಲಿಲ್ಲ. ಧೀರ್ಘವಾದರೂ ಅದರಲ್ಲಿ ಬಹುಶಃ ಅಷ್ಟಿಷ್ಟಾದರೂ ತಥ್ಯವಿರಬಹುದೆಂಬ ಭರವಸೆಯಿದೆ. ಹಾಗಿದ್ದರೂ ತೀರಾ ಧೀರ್ಘವಾಯಿತು, ಸಂಕೀರ್ಣವಾಯಿತು ಎನಿಸಿದ್ದರೆ ಮತ್ತೆ ಕ್ಷಮೆಯಿರಲಿ. ಇಷ್ಟು ಕಂತುಗಳನ್ನೆಲ್ಲ ಓದಿ, ಪ್ರತಿಕ್ರಿಯೆ ಹಾಕಿ ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ಹೃತ್ಪೂರ್ವಕ ನಮನಗಳು ಮತ್ತು ಕೃತಜ್ಞತೆಗಳು. ಇಂತಹ ಬರಹವೊಂದಕ್ಕೆ ಪ್ರೇರಣೆಯಾಗುವಂತಹ ಕವಿತೆಯನ್ನು ಸೃಜಿಸಿದ ಕವಿ ಅಂಬಿಕಾತನಯದತ್ತರಿಗೆ ಪೊಡಮಟ್ಟಿ ಶರಣು.

ಮುಖ್ಯವಾಗಿ ಇದನ್ನು ಬರೆಯಲು ಮೂಲ ಪ್ರೇರಣೆಯಾದ ಸನ್ಮಿತ್ರ ದೀಪಕ ಜಿ.ಕೆ. ಗೆ (Deepak GK) ಮತ್ತೆ ಎದೆಯಾಂತರಾಳದ ವಿನಮ್ರ ನಮನಗಳು ಮತ್ತು ಹೃತ್ಪೂರ್ವಕ ಧನ್ಯವಾದಗಳು. ಅವರ ಆಗ್ರಹಪೂರ್ವಕ ಕೋರಿಕೆಯಿಲ್ಲದಿದ್ದರೆ ನಾನಿದನ್ನು ಬರೆಯುವ ಕುರಿತು ಚಿಂತಿಸುತ್ತಲೂ ಇರಲಿಲ್ಲ ಎನ್ನುವುದು ಮಾತ್ರ ಅಪ್ಪಟ ಸತ್ಯ. ಅದಕ್ಕೆಂದೇ ಅವರು ಈ ವಿಷಯದಲ್ಲಿ ಸ್ತುತಾರ್ತರು ಮತ್ತು ವಂದನಾರ್ಹರು !

ನಮಸ್ಕಾರಗಳೊಂದಿಗೆ,

– ನಾಗೇಶ ಮೈಸೂರು
೦೭.೦೬.೨೦೧೭
(Picture source : internet)

02059. ನಾಕುತಂತಿಯೊಂದು ಸಾಲು – ೧೭


02059. ನಾಕುತಂತಿಯೊಂದು ಸಾಲು – ೧೭
_____________________________________

[’ನಾನು’ ’ನೀನು’ ’ಆನು’ ’ತಾನು’ ನಾಕೆ ನಾಕು ತಂತಿ (೧೪)
ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ! (೧೫)
ಗಣನಾಯಕ ಮೈ ಮಾಯಕ ಸೈ ಸಾಯಕ ಮಾಡಿ (೧೬)]

“ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ. (೧೭)”


ಗಣನಾಯಕನ ಕೃಪೆಯಿಂದ ಅಣಿಗೊಳಿಸಿದ ತನುಮನಗಳನ್ನು, ಸೂಕ್ತ ಗುರಿಯತ್ತ ಹೂಡಿದ ಬಿಲ್ಲು ಬಾಣವಾಗಿಸಿ ಹುಟ್ಟು-ಸಾವಿನ ನಡುವಿನ ಬದುಕಿನಲಿ ಮುನ್ನಡೆವ ಹಾದಿ ತೋರಿಸಿದ್ದಾಯ್ತು – ಹದಿನಾರನೇ ಸಾಲಿನ ತನಕ. ಇನ್ನು ಆ ಗುರಿಯತ್ತ ನಡೆವ ನಡಿಗೆ ಹೇಗಿರಬೇಕೆಂಬ ಮಾರ್ಗದರ್ಶನವಿರದಿದ್ದರೆ ಹೇಗೆ ? ಏಕೆಂದರೆ ಗುರಿಯತ್ತ ನಡಿಗೆಯೆಂದಾಗ ಸರಿಯಾದ ಹಾದಿಯಲ್ಲೂ ಹೋಗಬಹುದು, ತಪ್ಪು ಹಾದಿಯಲ್ಲಿ ಅಡ್ಡಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಜೊತೆಗೆ ಹಾದಿಯೊಂದನ್ನು ಹುಡುಕಿ ಹೊರಟ ಮೇಲೆ ಅದರಲ್ಲಿ ಅಡೆತಡೆಗಳಿರದೆಂದು ಹೇಳಬರುವಂತಿಲ್ಲ. ಮುಖ್ಯವಾಗಿ ಅದನ್ನು ಕ್ರಮಿಸಲಿರಬೇಕಾದ ಮನಸ್ಥಿತಿ, ಆತ್ಮಸ್ಥೈರ್ಯ, ಏಕಾಗ್ರಚಿತ್ತತೆ ಮತ್ತು ಮನೋಭಾವಗಳು ಬಲು ಮುಖ್ಯ. ಅದನ್ನು ಮುಂದಿನ (ಕೊನೆಯ) ಹದಿನೇಳನೇ ಸಾಲಿನಲ್ಲಿ ಹೇಗೆ ವಿವರಿಸಲ್ಪಟ್ಟಿದೆ ಎಂದು ನೋಡೋಣ.

೧೭. ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ.

ಮೊದಲೇ ವಿವರಿಸಿದಂತೆ, ಗೊತ್ತು ಗುರಿಯಿಲ್ಲದ ಅಡ್ಡಾದಿಡ್ಡಿ ಗಮ್ಯದತ್ತ ಅನಿಯಂತ್ರಿತವಾಗಿ ಉರುಳಿಕೊಂಡು ಹೋಗುವ ಬದಲು, ಯಾವುದೊ ನಿಶ್ಚಿತ, ಪೂರ್ವ ನಿರ್ಧಾರಿತ ಗುರಿಯತ್ತ ನಡೆಯುವುದು ವಿಹಿತವೆಂದು ಹಿಂದಿನ ಸಾಲಿನ ಸಾರದಲ್ಲಿ ವಿವರಿಸಲಾಗಿತ್ತು. ಇನ್ನು ಈ ಸಾಲಿನಲ್ಲಿ ‘ಅಂತಹ ಗುರಿಯತ್ತ ನಡಿಗೆ ಹೇಗಿರಬೇಕು ?’ ಎನ್ನುವುದರ ವಿಸ್ತೃತ ಸುಳಿವು, ಸೂಚನೆ ದೊರಕುತ್ತದೆ. ಅದನ್ನು ಸರಿಯಾಗಿ ಮನದಟ್ಟಾಗಿಸಲೆಂದೇ ಪ್ರಾಸಂಗಿಕವಾಗಿ ಇಲ್ಲಿ ಕುರಿಯ ಕಣ್ಣಿನ ಪ್ರಸ್ತಾವನೆಯೂ ಬರುತ್ತದೆ. ಕುರಿ ಎಂದ ತಕ್ಷಣ ನಮ್ಮ ಮನಸಿನ ಕಣ್ಣ ಮುಂದೆ ನಿಸಾರರ ‘ಕುರಿಗಳು ಸಾರ್, ಕುರಿಗಳು..’ ನೆನಪಿಗೆ ಬರದಿರುವುದುಂಟೆ? ನಿಸಾರರ ಪದ್ಯದಲ್ಲಿ ತಲೆ ತಗ್ಗಿಸಿ, ಎಡ-ಬಲ ನೋಡದೆ, ಗೊತ್ತು-ಗುರಿಯಿಲ್ಲದೆ ಯಾಂತ್ರಿಕವಾಗಿ ನಡೆಯುತ್ತಿರುವ ಕುರಿಗಳು (ಅರ್ಥಾತ್ ಅಂತಹ ವ್ಯಕ್ತಿತ್ವವಿರುವ ನಮ್ಮಂತಹವರು), ತಮ್ಮ ಮೇಲೆ ಹೇರಿದ ವ್ಯವಸ್ಥೆಯನ್ನು ಪ್ರತಿಭಟಿಸದೇ ತೆಪ್ಪಗೆ ಒಪ್ಪಿಕೊಂಡು ಹೋಗುವ ಬಗೆಗಿನ ಗೇಲಿ ಮತ್ತು ವ್ಯಂಗ್ಯದ ದ್ಯೋತಕವಾಗಿ ಬರುತ್ತದೆ. ಆದರೆ ಬೇಂದ್ರೆಯವರ ನಾಕುತಂತಿಯ ಈ ಸಾಲಿನಲ್ಲಿ ಅದೇ ಕುರಿಯ ನಡಿಗೆಯಲ್ಲಡಕವಾಗಿರುವ ಧನಾತ್ಮಕ ಆಯಾಮವನ್ನು ಎತ್ತಿ ತೋರುವ ಪ್ರತೀಕವಾಗಿ ಮೂಡಿಬರುತ್ತದೆ. ಗುರಿಯತ್ತ ನಮ್ಮ ನಡಿಗೆ ಹೇಗಿರಬೇಕೆಂಬುದನ್ನು ವಿವರಿಸುತ್ತಾ, ಎಡಬಲ ನೋಡದೆ, ಹಿಂದೆಮುಂದೆ ಯೋಚಿಸದೆ, ಒಂದೇ ಸಮನೆ ತನ್ನ ಗುರಿಯತ್ತ ಕಾಲೆಳೆದುಕೊಂಡು ನಡೆಯುವ ಕುರಿಯ ಹಾಗೆಯೇ ನಮ್ಮ ಗುರಿಯೆಡೆಗಿನ ಹೆಜ್ಜೆಯೂ ಇರಬೇಕೆಂದು ಹೇಳುತ್ತದೆ. ಹಾಗೆ ನಡೆಯುತ್ತಿರುವ ಕುರಿಯ ಕಣ್ಣಿಗೆ ತಾನು ತಲುಪಬೇಕಿರುವ ಗುರಿಯ ಹೊರತಾಗಿ ಮತ್ತಾವ ಪರಿವೆಯೂ ಇರುವುದಿಲ್ಲ. ಒಂದು, ತಾನು ಸೇರಬೇಕಾದ ಕುರಿದೊಡ್ಡಿಯನ್ನೋ ಅಥವಾ ಮೇವು ಮೇಯಲು ತಲುಪಬೇಕಾದ ಹುಲ್ಲಿನ ಬಯಲನ್ನೋ ಲಕ್ಷದಲ್ಲಿಟ್ಟುಕೊಂಡು ಕಣ್ಣುರೆಪ್ಪೆ ಮಿಟುಕಿಸುವುದನ್ನೂ ಮರೆತಂತೆ ಲಯಬದ್ಧವಾಗು ಹೆಜ್ಜೆಹಾಕಿಕೊಂಡು ನಡೆದಿರುತ್ತದೆ. ಅದರ ಕಣ್ಣ ತುಂಬಾ ತಾನು ತಲುಪಬೇಕಾದ ಗಮ್ಯದ ಲಕ್ಷ್ಯದ ಹೊರತು ಮತ್ತೇನು ಇರುವುದಿಲ್ಲ. ಗುರಿಯತ್ತ ದಿಟ್ಟತನದಿಂದ ನಡೆಯುವಾಗ ನಮ್ಮಲ್ಲೂ ಅಂತಹ ವಿಧೇಯ ಏಕಾಗ್ರ ಚಿತ್ತವಿರಬೇಕು ಎನ್ನುವುದು ಈ ಸಾಲಿನಲ್ಲಡಗಿರುವ ಒಂದು ಆಶಯ.

ಗುರಿಯ ತುಂಬಿ ಕುರಿಯ ಕಣ್ಣು…

ಅಂದಹಾಗೆ ಹಿಂದಿನ ಸಾಲಿನಲ್ಲಿ ಗುರಿಯತ್ತಣ ನಡಿಗೆಗೆ ‘ಮೈ ಮಾಯಕ ಸೈ ಸಾಯಕ’ ಮಾಡುವ ಪ್ರಸ್ತಾವನೆ ಬಂದಿತ್ತು. ಅದರರ್ಥವನ್ನು ಈ ಸಾಲಿನ ಜತೆ ಸಮೀಕರಿಸಿದರೆ ಇನ್ನೂ ಹೆಚ್ಚಿನ ಅರ್ಥ ವೈವಿಧ್ಯ ಕಾಣಿಸುತ್ತದೆ. ಮೈಯನ್ನೆ ಮಾಯಾ ಶರೀರದಂತಹ ಧನುಸ್ಸಾಗಿಸಿ, ಅದಕ್ಕೆ ‘ಸರಿಯಾದ ಗಮ್ಯವೆಂಬ’ ಬಾಣವನ್ನು ಹೂಡಿ ಹೋರಾಡುತ್ತ ಮುನ್ನಡೆಯಲು ಸಿದ್ಧವಾಗಿರಬೇಕು ಎಂದಲ್ಲಿ ಅರ್ಥೈಸಿದ್ದೆವು, ಸಾರಾಂಶದಲ್ಲಿ. ಆದರೆ ಹಾಗಿಟ್ಟ ಆ ಬಾಣದ ಗುರಿ ದಿಕ್ಕುದೆಸೆ ತಪ್ಪಿ, ವ್ಯರ್ಥವಾಗಿ ಹೋಗಿ ಎಲ್ಲೆಲ್ಲೊ ಬೀಳಬಾರದಲ್ಲ? ಅದಕ್ಕೆಂದೇ, ಅದಕ್ಕೊಂದು ‘ಕುರಿಯ ಕಣ್ಣಿನಂತಹ’ ವಿಚಲಿತಗೊಳ್ಳದ, ನಿಖರ ದಿಕ್ಕಿನತ್ತ ಮುನ್ನಡೆಸುವ ಮಾರ್ಗದರ್ಶಿ ಚಿತ್ತ ಜತೆಗಿರಬೇಕು (ಗುರಿಯತ್ತ ಹೋಗುವ ಉದ್ದೇಶದಿಂದ, ಪೂರ್ಣ ನಂಬಿಕೆಯಿಂದ ಸುಮ್ಮನೆ ಕಣ್ಣು ಮುಚ್ಚಿಕೊಂಡು ನಡೆವಂತೆ). ಆಗ ಆ ಮನುಜನ ಚಂಚಲ ಚಿತ್ತ, ವಿಚಲಿತ ಮನ ಅಲ್ಲೀ-ಇಲ್ಲೀ ಅನಾವಶ್ಯಕವಾಗಿ ಗಮನ ಹರಿಸದೆ, ಅಡೆತಡೆಗಳಿಂದ ಗೊಂದಲಕ್ಕೊಳಗಾಗದೆ ತಾನಂದುಕೊಂಡ ಗಮ್ಯದತ್ತ ಕುರಿಯ ಹಾಗೆ ‘ವಿಧೇಯತೆಯಿಂದ’ ನಡೆಯಲು ಸಾಧ್ಯವಾಗುತ್ತದೆ. ಸುತ್ತಲಿನ ದಿಕ್ಕು ತಪ್ಪಿಸುವ ಪ್ರಲೋಭನೆಗಳಿದ್ದರು ಅದರ ಕಣ್ಣಿಗೆ ಕುದುರೆಯ ಕಣ್ಣಿನಪಟ್ಟಿಯಂತದ್ದನ್ನು ಜೋಡಿಸಿದೆಯೇನೋ? ಎನ್ನುವ ಹಾಗೆ ಅಂತಾಗ ಪ್ರಚೋದನೆಗಳನ್ನು ನಿರ್ಲಕ್ಷಿಸಿಕೊಂಡೇ ಮುನ್ನಡೆಯಲು ಪ್ರೇರಣೆಯಾಗುತ್ತದೆ. ಇದನ್ನೇ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ – ಹೀಗೆ ಗುರಿಯತ್ತ ಹೊರಟ ಬಾಣದ ಗುರಿ ಎಷ್ಟು ದೃಢವಾಗಿ, ಎಷ್ಟು ನಿಖರವಾಗಿರಬೇಕೆಂದರೆ, ಅಲ್ಲಿ ಬಾಣ ಬೇಧಿಸಬೇಕಾದ ಗುರಿಯಾದ ಹಕ್ಕಿಯ ಕಣ್ಣಿನ ಹೊರತು ಮಿಕ್ಕಿದ್ದೇನೂ ಕಾಣಿಸಲೇಬಾರದು! ದ್ರೋಣರೊಡನೆ ಶಸ್ತ್ರಾಭ್ಯಾಸದಲ್ಲಿ ಅರ್ಜುನನಿಗೆ ಹಕ್ಕಿಯಕಣ್ಣು ಮಾತ್ರ ಕಾಣಿಸುತ್ತಿತ್ತಲ್ಲ – ಹಾಗೆ ; ದ್ರೌಪದಿಯ ಸ್ವಯಂವರದಲ್ಲಿ ಎಣ್ಣೆಯ ಕೊಳದ ಪ್ರತಿಬಿಂಬದಲ್ಲಿ, ಅರ್ಜುನನಿಗೆ ಕಾಣಿಸುತ್ತಿದ್ದ ಚಕ್ರದೊಂದಿಗೆ ತಿರುಗುತ್ತಿದ್ದ ಮೀನಿನ ಹಾಗೆ.

….ಧಾತು ಮಾತು ಕೂಡಿ.

ಹೀಗೆ ನಮ್ಮನ್ನೇ ಬಿಲ್ಲುಬಾಣವಾಗಿಸಿಕೊಂಡು ಗುರಿಯತ್ತ ಹೂಡಿಕೊಂಡು ನಡೆದಿದ್ದು ಶುಭಾರಂಭದಂತೆ. ಹಾಗೆ ನಡೆಯುವಾಗ, ಗುರಿ ಸಾಧನೆಗಾಗಿ ಯಾವ ರೀತಿಯ ನೀತಿ, ನಿಯಮಾವಳಿಗಳ ಆಸರೆಯಿರಬೇಕು ಎನ್ನುವುದರ ಸೂಚ್ಯ ದನಿ ಮುಂದಿನ ಈ ಪದಗಳಲ್ಲಿ ವ್ಯಕ್ತವಾಗುತ್ತದೆ. ಜೀವನದ ಯಾವುದೇ ಹೆಜ್ಜೆಯಲ್ಲೂ ಗುರಿಯ ಬೆನ್ನಟ್ಟಿ ಹೊರಟಾಗ ಸರಿಯಾದ ನೈತಿಕ ಹಾದಿಯಲ್ಲಿ ಸಾಗುವುದು ಸಾಧ್ಯವಿದ್ದಂತೆ, ಸೂಕ್ತವಲ್ಲದ ತಪ್ಪಾದ ಅಡ್ಡದಾರಿಯಲ್ಲಿ ನಡೆಯುವುದೂ ಸಾಧ್ಯ – ವೇಗವಾಗಿ ಮತ್ತು ಶೀಘ್ರವಾಗಿ ಗುರಿ ತಲುಪಬಹುದೆನ್ನುವ ದುರಾಸೆಯಲ್ಲಿ. ಇದು ಮಾನವಸಹಜ ದೌರ್ಬಲ್ಯ. ಅಂದ ಹಾಗೆ ಈ ಸಾಲಿನಲ್ಲಿ ಉದಾಹರಣೆಯಾಗಿ ಬಂಡ ಕುರಿ ಕೂಡ ಒಂದೇ ವೇಗದಲ್ಲಿ, ಒಂದೇ ದಾರಿಯಲ್ಲಿ ನಡೆಯುತ್ತಾ ಹೋಗುವುದೇ ಹೊರತು, ಅಡ್ಡಾದಿಡ್ಡಿ ಎಲ್ಲೆಂದರಲ್ಲಿ ಓಡಿಹೋಗುವುದಿಲ್ಲ. ಒಂದು ವೇಳೆ ಅವು ಅಂತಹ ಅಡ್ಡಾದಿಡ್ಡಿ ವೇಗದ ನಡಿಗೆಗೆ ಯತ್ನಿಸಿದರೂ, ಅದು ತಾಳಮೇಳವಿಲ್ಲದೆ ಯಾವುದೋ ಬೇಡದ ಗುರಿಯತ್ತ ನಡೆದ ಮತ್ತು ಗುಂಪಿನಿಂದ ಬೇರಾದ ಒಬ್ಬಂಟಿ ಪಯಣವಾಗುತ್ತದೆ. ಅದು ಪಯಣವೇ ಹೌದಾದರೂ, ಸಮಷ್ಟಿಯಾನದ ನಿಜವಾದ ಉದ್ದೇಶ ಅದಲ್ಲ ; ನೈಜದಲ್ಲಿ ಗುರಿಯತ್ತ ಸಾಗಬೇಕಾಗಿರುವ ವಿಧಿ, ವಿಧಾನವೂ ಅದಲ್ಲ. ಅದರಲ್ಲೂ ಜೀವಸೃಷ್ಟಿಯ ಹಿನ್ನಲೆಯಲ್ಲಿ ಮತ್ತು ಪಾಮರರ ದೃಷ್ಟಿಯಿಂದ ನೋಡಿದಾಗ – ಅದರ ಉದ್ದೇಶ, ಗಹನತೆಗಳು ಅರ್ಥವಾಗಿರಲಿ, ಬಿಡಲಿ ಪ್ರತಿಯೊಬ್ಬರೂ ಕುರಿಗಳ ಹಾಗೆ ತಮ್ಮ ಪ್ರಜ್ಞಾಪೂರ್ವಕ ಅರಿವು ಮತ್ತು ಪ್ರಯತ್ನದ ಹೊರತಾಗಿಯೂ ಗುರಿಯತ್ತ ಸಾಗಲು ಸಾಧ್ಯವಾಗುವಂತಿರಬೇಕು.

ಅಂದ ಮೇಲೆ ಆ ಗುರಿಯತ್ತಣ ನಡಿಗೆ ಹೇಗಿರಬೇಕು ಅಂದರೆ – ವಾಕ್ ಮತ್ತು ಅರ್ಥ ಹೇಗೆ ಒಂದಕ್ಕೊಂದು ಬಿಗಿಯಾಗಿ ಪರಸ್ಪರದೊಡನೆ ಬಂಧಿಸಲ್ಪಟ್ಟಿರುತ್ತದೆಯೊ ಅದೇ ರೀತಿಯ ಅವಿನಾಭಾವ ಸಂಬಂಧದಲ್ಲಿ ಅವೆರಡೂ (ಗುರಿ ಮತ್ತು ನಡಿಗೆ) ಜತೆಯಾಗಿ ಸಾಗಬೇಕು. ‘ಧಾತು ಮಾತು ಕೂಡಿ’ ಎಂದಾಗ ಆಡುವ ಮಾತು ಮತ್ತು ಇಡುವ ಹೆಜ್ಜೆ ತಾಳಮೇಳದ ಹಾಗೆ ಹೊಂದಿಕೊಂಡು ಹೋಗುತ್ತಿರಬೇಕು ಎಂಬರ್ಥ ಧ್ವನಿಸುತ್ತದೆ. ಇಲ್ಲಿ ಧಾತು ಎಂದಾಗ – ‘ಯಾವುದರ ಧಾತು?’ ಎಂದು ಪ್ರಶ್ನಿಸಿಕೊಂಡರೆ – ಮಾತಿನ ಧಾತು ಎಂದು ಅರ್ಥೈಸಬೇಕಾಗುತ್ತದೆ. ‘ಮಾತಿನ ಮೂಲಧಾತು ಯಾವುದು?’ ಎಂದಾಗ ಮನಸು, ಅಂತರಂಗ, ಅಂತಃಕರಣಗಳನ್ನೆಲ್ಲ ಮಾತಿನ ಉಗಮಮೂಲವಾಗಿ ಉಲ್ಲೇಖಿಸಬಹುದು. ಅಥವಾ ಮಾತಿನ ಮೂಲಾತಿಮೂಲವಾದ ಶಬ್ದಬ್ರಹ್ಮವನ್ನು ಸಮೀಕರಿಸಿ ನಾಭಿಚಕ್ರಕ್ಕೂ ಹೋಲಿಸಬಹುದು. ಸಾಧಾರಣವಾಗಿ ಮನಸಿನಲ್ಲಿ ಮೂಡಿ ಬರುವ ಆಲೋಚನೆ (ಧಾತು) ಮತ್ತು ಅದು ಮಾತಾಗಿ ಹೊರಬರುವ ರೀತಿ ಎರಡೂ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಮನಸಿನೊಳಗೊಂದು ಅಂದುಕೊಂಡರು ಹೊರಗೇನೋ ಹೇಳುವ ರೀತಿ ನಮ್ಮ ಸಾಮಾನ್ಯ ಅನುಭವ. ‘ಧಾತು ಮಾತಿನ’ ನಡುವೆ ಪ್ರಾಮಾಣಿಕತೆಯಿರದ ಇಂತಹ ಅನಾವರಣಕ್ಕೆ ‘ಒಳಗೊಂದು, ಹೊರಗೊಂದು’ ಎಂದು ಹೇಳುತ್ತೇವೆ. ಏಕೆಂದರೆ ಎರಡರ ನಡುವಿನಲ್ಲಿರುವ ಅಗೋಚರ ಶೋಧಕವೊಂದು ನಡುವೆ ತಲೆಹಾಕಿ ಆಡಬಹುದಾದ ಮತ್ತು ಆಡಬಾರದಾದ ಮಾತುಗಳಾಗಿ ವರ್ಗಿಕರಿಸಿ ನಡುವೆ ಅಂತರವನ್ನು ಸೃಷ್ಟಿಸಿಬಿಡುತ್ತದೆ. ಆಗ ಮಾತು ಮತ್ತು ಅದರ ಧಾತು ಎರಡೂ ಒಂದೇ ಆಗದೆ ಬೇರೆಬೇರೆಯಾಗಿಬಿಡುತ್ತವೆ – ತಮ್ಮಲ್ಲಿ ಅಪ್ರಾಮಾಣಿಕತೆಯನ್ನು ಅಂತರ್ಗತವಾಗಿಸಿಕೊಂಡು.

ಆದರೆ ನಿಜವಾದ ಗುರಿಯತ್ತ ಪ್ರಾಂಜಲ ಮನದಿಂದ ನಡೆವಾಗ, ಅದರ ಸಾಧನೆಗಾಗಿ ಯಾವುದೇ ಹೊಂದಾಣಿಕೆ, ರಾಜಿಗೆ ಒಳಗಾಗದೆ ಪ್ರಾಮಾಣಿಕವಾಗಿ ನಡೆಯಬೇಕು. ಒಳಗಿನ ಆಲೋಚನೆಯಿದ್ದ ಹಾಗೆಯೆ ಬಾಹ್ಯದಲ್ಲೂ ನಡೆದುಕೊಳ್ಳುವ ಶುದ್ಧ ನೈತಿಕ ಕಾಳಜಿ ತೋರಬೇಕು. ಅಂತಹ ಗಣನೆ, ಪರಿವೆಯಿರದೆ ಸುಮ್ಮನೆ ಗುರಿ ಸಾಧಿಸಿದೆನೆಂದರೆ ಅದು ಪ್ರಯೋಜನಕ್ಕೆ ಬಾರದು. ಗುರಿಯಷ್ಟೇ, ಅದನ್ನು ಸಾಧಿಸಲು ನಡೆದ ಹಾದಿಯು ಬಲುಮುಖ್ಯ – ಧಾತುಮಾತು ಕೂಡಿ ನಡೆದ ಹಾಗೆ. ಅವೆರಡು ಒಟ್ಟಾಗಿಯೆ ಇರಬೇಕೆ ಹೊರತು, ಬೇರೆಯಾಗಲ್ಲ ಎನ್ನುವ ಅದ್ಭುತ ಅದ್ವೈತದ ಭಾವವನ್ನು ಕಟ್ಟಿಕೊಡುತ್ತವೆ ಈ ಪದಗಳು. ಒಟ್ಟಾರೆ ಸಾರಾಂಶದಲ್ಲಿ ಯಾರು, ಒಳಗಿನಲ್ಲೂ – ಹೊರಗಿನಲ್ಲೂ ಒಂದೇ ರೀತಿ ಬದುಕಿ ಹುಟ್ಟುಸಾವಿನ ನಡುವಿನ ದೂರವನ್ನು ಸಾರ್ಥಕವಾಗಿ ಕ್ರಮಿಸುತ್ತಾರೋ – ಅವರು ಅಯಾಚಿತವಾಗಿಯೇ ತಮ್ಮ ಅಂತಿಮ ಗಮ್ಯ ತಲುಪಲು ಸುಲಭ ಸಾಧ್ಯ ಎನ್ನುವ ಇಂಗಿತ ಇಲ್ಲಿನ ಮತ್ತೊಂದು ಆಶಯ.

ಹೀಗೆ ಅಂತಿಮವಾಗಿ – ನಾನು ನೀನು ಆನು ತಾನುಗಳ ನಿರಂತರ ವ್ಯಾಪಾರದಲ್ಲಿ ಸೃಜಿಸಲ್ಪಟ್ಟ ನಾವು ಅದಾವುದೋ ಘನ ಉದ್ದೇಶದ ಹಿನ್ನಲೆಯಲ್ಲಿ ನಡೆದಿರುವ ಮಹಾಯಜ್ಞದಲ್ಲಿ ಪಾಲ್ಗೊಂಡಿರುವ ಪಾತ್ರಧಾರಿಗಳು ಎಂಬುದನ್ನು ಅರಿಯಬೇಕು. ಆ ಪಾತ್ರ ನಿಭಾವಣೆಯಲ್ಲಿ ನಮ್ಮ ಕರ್ತವ್ಯವನ್ನು ಮಾಡಿಕೊಂಡು ಹೋಗಬೇಕು – ಸರಿಯಾದ ಮತ್ತು ಮಹಾಯಜ್ಞಕ್ಕೆ ಪೂರಕವಾದ ಗಮ್ಯದತ್ತ ನಡಿಗೆ ಹಾಕುತ್ತ. ಆಗ ತಾವಾಗಿಯೇ ಮಿಡಿಯುವ ಆ ನಾಕುತಂತಿಗಳು ಈ ಸಂಕೀರ್ಣ ಜೀವನಸಾಗರವನ್ನು ದಾಟಿಸುವ ನಾವೆಯಾಗುತ್ತವೆ, ಹರಿಗೋಲಾಗುತ್ತವೆ. ಗೊಂದಲ ಗದ್ದಲಗಳಿಲ್ಲದ ಪ್ರಶಾಂತ ಅರಿವಿನ ಬದುಕಿಗೆ ಅಡಿಪಾಯ ಹಾಸುತ್ತವೆ. ಹೀಗಾಗಿ ನಾಕುತಂತಿಗಳೆಂಬ ಕಲ್ಪನೆ, ಸಂಕಲ್ಪವೇ ನಮ್ಮ ಬದುಕಿನ ಸಾರ್ಥಕತೆಯ ಅದ್ಭುತ, ರಮ್ಯ ಅನಾವರಣ ಎಂದು ಹೇಳಬಹುದು. ಅಂತದ್ದೊಂದು ಅದ್ಭುತ ಕವನವನ್ನು ನೀರು ಕುಡಿದಷ್ಟೇ ಸಲೀಸಾಗಿ ಬರೆದಿಟ್ಟ ಅಂಬಿಕಾತನಯದತ್ತರಿಗೊಂದು ಸುಧೀರ್ಘದಂಡ ನಮನ !

– ನಾಗೇಶ ಮೈಸೂರು

ಸೂಚನೆ: ಇದರೊಂದಿಗೆ ನಾಕುತಂತಿಯ ಎಲ್ಲಾ ಸಾಲುಗಳ ವಿವರಣೆ ಮುಗಿದಂತಾದರೂ, ಇದನ್ನು ಬರೆಯುವ ಪ್ರೇರೇಪಣೆ ಹೇಗೆ ಬಂತೆನ್ನುವುದರ ಹಿನ್ನಲೆ ವಿವರಣೆಯೊಂದಿಗೆ ಮುಂದಿನ ಕಂತಿನಲ್ಲಿ ಮುಗಿಸುತ್ತೇನೆ.

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

Picture source: https://alchetron.com/D-R-Bendre-1304749-W

02058. ಮಂಕುತಿಮ್ಮನ ಕಗ್ಗ ೬೨ ರ ಟಿಪ್ಪಣಿ, ರೀಡೂ ಕನ್ನಡದಲ್ಲಿ..


02058. ಮಂಕುತಿಮ್ಮನ ಕಗ್ಗ ೬೨ ರ ಟಿಪ್ಪಣಿ, ರೀಡೂ ಕನ್ನಡದಲ್ಲಿ..

http://kannada.readoo.in/2017/06/ಹೊರಗಿನದೆಲ್ಲವನ್ನೂ-ಗೆದ್ದೇ

02057. ನಾಕುತಂತಿಯೊಂದು ಸಾಲು – ೧೬


02057. ನಾಕುತಂತಿಯೊಂದು ಸಾಲು – ೧೬
____________________________________

’ನಾನು’ ’ನೀನು’ ’ಆನು’ ’ತಾನು’ ನಾಕೆ ನಾಕು ತಂತಿ (೧೪)
ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ! (೧೫)
ಗಣನಾಯಕ ಮೈ ಮಾಯಕ ಸೈ ಸಾಯಕ ಮಾಡಿ (೧೬)


(ಗಣನಾಯಕ ಮೈ ಮಾಯಕ ಸೈ ಸಾಯಕ ಮಾಡಿ)

ಹಿಂದಿನ ಹದಿನಾಲ್ಕು-ಹದಿನೈದನೇ ಸಾಲುಗಳಲ್ಲಿ ಸೃಷ್ಟಿಯ ಮೂಲಸೂತ್ರದಲ್ಲಿ (ಹುಟ್ಟುಸಾವಿನ ನಿರಂತರ ಚಕ್ರದ ಹೆಸರಿನಲ್ಲಿ) ಅದೇ ನಾಲ್ಕುತಂತಿಗಳ ಅನುರಣನೆಯಿದ್ದರೂ ಅದರ ನಿಯಂತ್ರಣ ಮಾತ್ರ ನಮ್ಮ ಕೈಲಿರುವುದಿಲ್ಲ, ಎಲ್ಲವು ದೈವದ ಚಿತ್ತದಂತೆ ಎಂದು ಅರಿತೆವು. ಆದರೆ ನಮ್ಮಲ್ಲಿ ನಿಯಂತ್ರಣವಿಲ್ಲ ಎಂದ ಮಾತ್ರಕ್ಕೆ ನಿರ್ವಹಣೆಯಲ್ಲಿ ನಮ್ಮದೇನೂ ಪಾತ್ರವಿಲ್ಲ ಎಂದರ್ಥವಲ್ಲ. ಸೃಷ್ಟಿ-ಸ್ಥಿತಿ-ಲಯವೆಂಬ ತ್ರಿಕಾರ್ಯದಲ್ಲಿ ಹುಟ್ಟುಸಾವುಗಳು ಜೀವಿಯ ಸೃಷ್ಟಿ ಮತ್ತು ಲಯವನ್ನು ಮಾತ್ರ ಪ್ರತಿನಿಧಿಸುವಂತಹದ್ದು. ಅವೆರಡರ ನಡುವಿನ ಅಂತರವನ್ನು ಈಜಿಕೊಂಡು, ಏಗಿಕೊಂಡು, ಸರಿದೂಗಿಸಿಕೊಂಡು ಕ್ರಮಿಸುವ ಹೊಣೆ ಜೀವಿಗಳದೇ. ಆ ನಡುವಿನ ‘ಸ್ಥಿತಿ’ಯ ನಿರ್ವಹಣೆಯಲ್ಲಿ ಜೀವಿಯು ತನ್ನ ಪಾತ್ರವನ್ನು ಹೇಗೆ ನಿಭಾಯಿಸಿದರೆ ಅಂತಿಮದಲ್ಲಿ ಸಾರ್ಥಕ್ಯ, ಮೋಕ್ಷಭಾವ ಸಿದ್ದಿಸುತ್ತದೆಯೆನ್ನುವುದನ್ನು ಸಾರುತ್ತವೆ ಮಿಕ್ಕೆರಡು ಸಾಲುಗಳ ಮೂಲಕ (೧೬, ೧೭). ಇಲ್ಲಿ ಮೊದಲು ಹದಿನಾರನೇ ಸಾಲನ್ನು ಗಮನಿಸೋಣ.

ಗಣನಾಯಕ ಮೈ ಮಾಯಕ ಸೈ ಸಾಯಕ ಮಾಡಿ

ಗಣನಾಥನೆಂದರೆ ಸಿದ್ಧಿ, ಬುದ್ಧಿಯ ಸಂಕೇತ. ಬದುಕಿನಲ್ಲಿ ಹೇಗೋ ಏಗುತ್ತಾ ಸಾಗಿ, ಸಂಸಾರಸಾಗರದಲ್ಲಿ ಈಜಿ ಈ ಇಹಜಗದ ಬಂಧನದಿಂದ ಪಾರಾಗಬೇಕೆಂದರೆ (ಜೀವನದುದ್ದಕ್ಕೂ) ಸಿದ್ಧಿಬುದ್ಧಿಯ ರೂಪದಲ್ಲಿ ಅವನ ಕರುಣೆಯಿರುವುದು ಅತ್ಯಗತ್ಯ. ಅವನ ಕೃಪೆಯಿದ್ದರೆ ಇಹಜಗದ ಎಲ್ಲಾ ಜಂಜಾಟಗಳನ್ನು ಎದುರಿಸಿ, ಅಡ್ಡಿಆತಂಕಗಳನ್ನೆಲ್ಲ ದಾಟಿ ಜಯಿಸಿ ಗುರಿಯತ್ತ ನಡೆಯಬಹುದು. ನಮ್ಮದು ಕೇವಲ ಭೌತಿಕ ದೇಹ. ಅದಕ್ಕೆ ಅವನ ಕೃಪೆ ಜತೆಗೂಡಿತೆಂದರೆ ಈ ಬರಿಯ ದೇಹವು ಕೂಡ ಮಾಯಾಕಸುವಿನಿಂದ ತುಂಬಿದ ಚಮತ್ಕಾರಿಕ ಶರೀರವಾಗಬಹುದು. ಬಾಳುವೆಯ ಹೊತ್ತಲ್ಲಿ ಈ ಅಂಕೆಶಂಕೆಯಿಲ್ಲದ ದೇಹವು ಯಾವ್ಯಾವ ರೀತಿಯ ಪ್ರಲೋಭನೆಗಳಿಗೆ ಓಗೊಡುತ್ತ ಏನೆಲ್ಲಾ ಮಾಡುವುದೆಂದು ಹೇಳಬಲ್ಲವರಾರು ? ಅದೇ ಗಣನಾಥನ ‘ಸಿದ್ಧಿಬುದ್ಧಿಯ ಮಾಯಕ (ಮಾಯೆ, ಮಾಯಾಜಾಲ)’ ಮೈಗೆ ಆವಾಹನೆಯಾಗಿಬಿಟ್ಟರೆ ಅಂತಹ ಪರಿಪಕ್ವ ದೇಹವನ್ನು ಹಿಡಿದು ನಿಲ್ಲಿಸಲುಂಟೆ? ಆನೆ ನಡೆದಿದ್ದೇ ಹಾದಿ ಎನ್ನುವ ಹಾಗೆ ಯಾವುದೋ ಮಾಯೆ ಹೊಕ್ಕ ಅಲೌಕಿಕ ಸ್ಥಿತಿಯಲ್ಲಿ ಗಮ್ಯದತ್ತ ನಡೆಯತೊಡಗುತ್ತದೆ ಈ ಭೌತಿಕ ಜೀವ.

ಈ ಸಂಸಾರಚಕ್ರವನ್ನು ಯಶಸ್ವಿಯಾಗಿ ನಿಭಾಯಿಸಿ ‘ಸರಿಯಾದ’ ಕರ್ಮಕಾಯಕಗಳನ್ನು ಮಾಡಿದರೆ ಮಾತ್ರ ಮುಂದಿನ ‘ಸರಿಸೂಕ್ತವಾದ’, ನಿಖರವಾದ ಗುರಿ ಸೇರಲು ಸಾಧ್ಯ. ಅದು ಮುಕ್ತಿಯೋ, ಕೈವಲ್ಯವೋ ಮತ್ತೊಂದೋ – ಅಲ್ಲಿಗೆ ತಲುಪಬೇಕೆಂದರೆ ಆ ಗುರಿಯತ್ತ ಸರಿಯಾಗಿ ಗುರಿಯಿಟ್ಟು ಮುನ್ನಡೆಯಬೇಕು. ಆ ಗುರಿ ತಲುಪುವಿಕೆ ಎಂತಿರಬೇಕೆಂದರೆ – ಸೈ (=ಸರಿಯಾದ, ಸೂಕ್ತವಾದ) ಸಾಯಕ (=ಬಾಣ), ಅರ್ಥಾತ್ ಸೂಕ್ತವಾದ ಗುರಿಯತ್ತ ಹೂಡಿದ ಸರಿಯಾದ ಬಾಣದ (= ಸೈ ಸಾಯಕ) ಹಾಗಿರಬೇಕು. ಹೀಗೆ ನಿಖರ ಗುರಿಯತ್ತ ತೊಟ್ಟ, ಗುರಿತಪ್ಪದ ಬಾಣವನ್ನು ಮಾಡಬಲ್ಲವರು (ಬುದ್ಧಿ) , ಹೂಡಬಲ್ಲವರು (ಸಿದ್ಧಿ) ಯಾರು ? ಅದಕ್ಕೆ ಬೇಕಾದ ಸಿದ್ಧಿಬುದ್ಧಿಗಳನ್ನು ದಯಪಾಲಿಸುವ ಗಣನಾಯಕ. ಅವನ ಕೃಪಾಕಟಾಕ್ಷದಿಂದ ಈ ಕೇವಲ ಭೌತಿಕ ಶರೀರವು ಯಾವುದೊ ಅಗೋಚರ ಶಕ್ತಿಪ್ರೇರಿತ ಆವೇಶ, ಉನ್ಮೇಷದ ಮಾಯೆಗೊಳಗಾದಂತೆ ವರ್ತಿಸಿ, ಸರಿ ಗುರಿಯತ್ತ ತನ್ನನ್ನೇ ಬಾಣದಂತೆ ಹೂಡಿಕೊಳಲಿ ಎನ್ನುವ ಆಶಯ ಇಲ್ಲಿನ ಇಂಗಿತವಾಗಿದೆ. ಇಲ್ಲಿ ಗುರಿಯೆನ್ನುವುದು ಕೂಡ ಬರಿ ಅಲೌಕಿಕದ್ದೆ ಇರಬೇಕೆಂದೇನಿಲ್ಲ. ಕವಿಯ ಕಾವ್ಯಸೃಷ್ಟಿಯ ಗುರಿಗು ಇದು ಅನ್ವಯವಾಗಬಹುದು. ಸೃಷ್ಟಿಕ್ರಿಯೆಗೂ ಅನ್ವಯಿಸಬಹುದು. ಲೌಕಿಕ ಜಗದ ಐಹಿಕ ಮತ್ತು ಪ್ರಾಪಂಚಿಕ ಗಮ್ಯಗಳಿಗೂ ಅನ್ವಯಿಸಬಹುದು. ಒಟ್ಟಾರೆ ಗುರಿಯತ್ತ ಗಮನ ಎಂಬುದಿಲ್ಲಿಯ ಸಾಮಾನ್ಯ ಅಪವರ್ತನ ಗಾಯನ. ಬದುಕಿಗೊಂದು ನಿಖರ ಗಮ್ಯ, ಅಂತಿಮ ಗುರಿಯಿರಬೇಕೆನ್ನುವ ಸಂದೇಶವು ಕೂಡ ಇಲ್ಲಿನ ಆಶಯವೆ. ಸರಿಯಾದ ಗುರಿಯ ಬೆನ್ನಟ್ಟುತ್ತಾ, ಒಂದರಿದ ಮತ್ತೊಂದು ಗುರಿಗೆ ಹಿಂದಿನದನ್ನೆ ಕೊಂಡಿಯಾಗಿಸಿಕೊಂಡು ಜಿಗಿಯುತ್ತ ಅಂತಿಮ ಗಮ್ಯದತ್ತ ಪಯಣ ನಡೆಸಬೇಕು. ಆ ಪಯಣಕ್ಕೆ ಈ ಮಾಯದಂತ ಮೈಯನ್ನೇ (ಲೋಕದ ಮಾಯೆಗೆ ಸೋಲುವ ಅದರ ದೌರ್ಬಲ್ಯವನ್ನು ಮೆಟ್ಟಿ) ವಾಹಕವಾಗಿಸಿಕೊಂಡು, ಅದನ್ನೇ ಪಳಗಿಸಿ ಬಾಣ ಹೂಡುವ ಬಿಲ್ಲಾಗಿಸಿಕೊಂಡು, ತಲುಪಬೇಕಾದ ಸರಿಸೂಕ್ತವಾದ ಗುರಿಯನ್ನೇ ಅದಕ್ಕೆ ಹೂಡಿದ ಬಾಣವಾಗಿಸಿಕೊಂಡು ನಡೆದಾಗ ಅದು ಹುಟ್ಟು-ಸಾವಿನ ಸೃಷ್ಟಿ-ಲಯದ ನಡುವಿನ ತನ್ನ ‘ಸ್ಥಿತಿ’ಕಾರ್ಯವನ್ನು ಸೂಕ್ತವಾಗಿ ನಿರ್ವಹಿಸಲು ವೇದಿಕೆ ನಿರ್ಮಾಣ ಮಾಡಿದಂತಾಗುತ್ತದೆ. ಅದೆಲ್ಲವನ್ನು ಸೂಕ್ತವಾಗಿ ನಿರ್ವಹಿಸುವ ಸಿದ್ಧಿಬುದ್ಧಿಯ ಕೃಪೆ ತೋರಬೇಕಾದವನು ಗಣನಾಯಕ ಅರ್ಥಾತ್ ಗಣಪ.

ಅಂದಹಾಗೆ, ಇಲ್ಲಿ ಕವಿ ಗಣಪನನ್ನೆ ಯಾಕೆ ಉಲ್ಲೇಖಿಸಬೇಕಿತ್ತು ? ಸಂಪ್ರದಾಯದಂತೆ ಆದಿದೇವ ಗಣಪನಿಗೆ ಮೊದಲ ಪೂಜೆಯೆನ್ನುವ ವಿಷಯ ಸರ್ವವಿದಿತ; ತನ್ನ ಕಾವ್ಯದಲ್ಲೂ ಅದೇ ಸತ್ಸಂಪ್ರದಾಯ ಅನುಕರಿಸುವ ಉದ್ದೇಶವು ಇರಬಹುದು. ಅಥವಾ ಬಹುತೇಕ ಜನರಂತೆ ಕವಿಯೂ ಕೂಡ ಗಣನಾಯಕನನ್ನು ಬಲವಾಗಿ ನಂಬಿರಬಹುದಾದ ಕಾರಣವೂ ಇರಬಹುದು. ಆದರೆ ನನಗನಿಸುವ ಮತ್ತೊಂದು ಸೂಕ್ಷ್ಮಕಾರಣ : ಗಣನಾಥನ ಸೃಷ್ಟಿಗೆ ಕಾರಣವಾದ ವಿಭಿನ್ನ ಜನ್ಮವಿಧಾನ. ಮಿಕ್ಕೆಲ್ಲ ಸಾಧಾರಣ ಸೃಷ್ಟಿಕ್ರಿಯೆಯಲ್ಲಿ ಪ್ರಕೃತಿ-ಪುರುಷ ಸಂಯೋಜನೆಯನುಸಾರ ನಾಕುತಂತಿಗಳ ತಾಳಮೇಳವಿದ್ದರೆ, ಗಣಪನ ಸೃಷ್ಟಿ – ಪುರುಷದ ಭಾಗವಹಿಸುವಿಕೆಯಿಲ್ಲದೆ ಬರಿ ಪ್ರಕೃತಿಯ ಇಚ್ಚಾ-ಜ್ಞಾನ-ಕ್ರಿಯಾಶಕ್ತಿಗಳ ಅದ್ಭುತ ಬಳಕೆಯಿಂದ ಸಮೀಕರಿಸಲ್ಪಟ್ಟದ್ದು. ಒಂದು ರೀತಿ ಯಾವುದೇ ಮೂಲಸರಕಿನ ಅಗತ್ಯವಿಲ್ಲದೆ, ಇದ್ದುದ್ದನ್ನೇ ಇಂಧನ-ಮೂಲವಸ್ತುವಾಗಿ ಬಳಸಿಕೊಂಡು ರೂಪುಗೊಂಡ ಸ್ವಯಂಭು ಪ್ರವೃತ್ತಿಯ ಸೃಷ್ಟಿಫಲ ಅವನದು. ಜತೆಗೆ ಪ್ರಕೃತಿಯ ಶಕ್ತಿಯಿಂದ ಮಾತ್ರವೇ ಸೃಜಿಸಲ್ಪಟ್ಟದ್ದರಿಂದ ಪುರುಷದ ಜಡಶಕ್ತಿಯ ಸಾಂಗತ್ಯವೆ ಇಲ್ಲವಾಗಿ, ಕೇವಲ ಪ್ರಕೃತಿಯ ಕ್ರಿಯಾಶೀಲ ಚಲನಶಕ್ತಿ ಮಾತ್ರ ಅಂತರ್ಗತವಾಗಿಹೋಗಿದೆ. ಆ ಕಾರಣದಿಂದ ಕಾರ್ಯಸಿದ್ಧಿಯ ವೇಗವು ಹೆಚ್ಚು, ನಿರಂತರ ಚಲನೆಯಿಂದಾಗುವ ಬುದ್ಧಿತೀಕ್ಷ್ಣತೆಯೂ ಹೆಚ್ಚು (ಸಿದ್ಧಿಬುದ್ಧಿಯ ಮೂಲ). ಇಂತಹ ವೈಶಿಷ್ಠ್ಯವಿರುವ, ಸೃಷ್ಟಿಯ ಸಾಮಾನ್ಯ ಪ್ರಕ್ರಿಯೆಗೆ ಸಡ್ಡುಹೊಡೆದು ಮೂರ್ತೀಭವಿಸಿರುವ ಗಣನಾಥ ತನ್ನೀ ವಿಶೇಷ ಗುಣ ಸ್ವರೂಪಗಳಿಂದಲೆ ಇಲ್ಲಿ ಕಾಣಿಸಿಕೊಂಡಿದ್ದಾನೆ – ಆದಿಪೂಜೆಯ ಇಂಗಿತದ ಹೊರತಾಗಿಯು ಎಂದು ನನ್ನ ಭಾವನೆ. ಅಸಾಮಾನ್ಯ ಸೃಷ್ಟಿಯ ದೃಷ್ಟಾಂತವಾದ ಗಣನಾಥ ಸಾಮಾನ್ಯ ಸೃಷ್ಟಿಯ ದೃಷ್ಟಿಯಲ್ಲಿ ವಿಶೇಷವೆನಿಸುವ ದೈವ – ದೈವಿಕ ದೃಷ್ಟಿಯಲ್ಲಿ ಮಾತ್ರವಲ್ಲದೆ ವೈಜ್ಞಾನಿಕ ಸಾಧ್ಯತೆಯ ದೃಷ್ಟಿಯಲ್ಲೂ ಪ್ರಸ್ತುತವೆನಿಸುವ ಕಲ್ಪನೆ (ಕ್ಲೋನಿಂಗ್ ತರಹದ ಇತ್ತೀಚಿನ ವೈಜ್ಞಾನಿಕ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ). ಹಾಗೆಂದೇ ಇಲ್ಲಿಯೂ ಗಣನಾಯಕ ವಿಶಿಷ್ಠವೆನಿಸುತ್ತಾನೆ.

ಈ ದೈವಬಲದ ಜತೆಗೆ ಹೇಗೆ ಮನೋಬಲವನ್ನು ಸೇರಿಸಿಕೊಂಡು ಮುನ್ನುಗ್ಗಬೇಕೆನ್ನುವುದು ಮುಂದಿನ ಹಾಗು ಕೊನೆಯ ಸಾಲಿನ ಸಾರ (ಹದಿನೇಳನೆಯದು – ೧೭. ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ.)

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

(Picture source: https://www.pinterest.com/pin/352266002077297299/)

02056. ನಾಕುತಂತಿಯೊಂದು ಸಾಲು – ೧೫


02056. ನಾಕುತಂತಿಯೊಂದು ಸಾಲು – ೧೫
___________________________________


(’ನಾನು’ ’ನೀನು’ ’ಆನು’ ’ತಾನು’ ನಾಕೆ ನಾಕು ತಂತಿ – ೧೪);
ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ! (೧೫)
______________________________________________________________

ಹದಿನೈದನೇ ಸಾಲನ್ನು ಅರ್ಥೈಸುವ ಹೊತ್ತಲ್ಲಿ ಹದಿನಾಲ್ಕರ ಸಾರವನ್ನು ಹಿನ್ನೆಲೆಯಾಗಿಟ್ಟುಕೊಂಡು ಅರ್ಥೈಸಿದರೆ ಎರಡರ ನಡುವೆ ಇರುವ ಸಂಬಂಧ ಸ್ಪಷ್ಟವಾಗುತ್ತದೆ. ಹದಿನಾಲ್ಕರ ಸಾರದಲ್ಲಿ ಮುಖ್ಯವಾಗಿ ಹೇಳಿದ್ದು – ಇಡೀ ಜೀವಜಗವನ್ನು ಆಳುತ್ತಿರುವುದು ನಾನು-ನೀನು-ಆನು-ತಾನೆಂಬ ನಾಲ್ಕು ಮೂಲತಂತಿಗಳು ಮಾತ್ರ ಎಂದು. ಆ ನಾಲ್ಕು ತಂತಿಗಳ ಮಿಡಿತದಲ್ಲೇ ಜೀವಸೃಷ್ಟಿಯಾಗುವುದು. ಆ ಸೃಷ್ಟಿ ಕೂಡ ಹೇಗೆ ದೈವ ನಿಯಾಮಕದ ಚೌಕಟ್ಟಿನಲ್ಲಿ ಬಂಧವಾಗಿದೆ ಎಂದು ಸಾರುವ ಹದಿನೈದನೇ ಸಾಲು – ‘ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ’. ಅದೇನೆಂಬುದನ್ನು ವಿವರವಾಗಿ ಮುಂದಿನ ಸಾಲುಗಳಲ್ಲಿ ನೋಡೋಣ.

ಸೃಷ್ಟಿಕ್ರಿಯೆಯನ್ನು ದೈವತ್ವದ ಮಟ್ಟಕ್ಕೇರಿಸಿ, ಮನುಕುಲವನ್ನು ಅದರೊಟ್ಟಿಗೆ ಸಮೀಕರಿಸಿ ಅದಕ್ಕೊಂದು ಗಮ್ಯೋದ್ದೇಶವನ್ನು ಆರೋಪಿಸಿ ಆದ ಮೇಲೆ, ಆ ಕುರಿತಾದ ಹೆಮ್ಮೆ-ಗರ್ವ, ಮಾನವನಲ್ಲಿ ಅಹಂಕಾರದ ರೂಪ ತಾಳಬಾರದಲ್ಲ? ಯಾವುದೇ ಸಾಧನೆಯ ಮೇರುಶಿಖರಕ್ಕೇರಿದರೂ, ಅಂತಿಮ ಆಭರಣವಾಗಿ ವಿನಮ್ರತೆ, ವಿನಯವಿದ್ದರೆ ಆ ಸಾಧನೆಗೆ ಭೂಷಣ. ದೈವದುತ್ಕ್ರುಷ್ಟ ಸೃಷ್ಟಿ ನಾವೆಂಬ ಅರಿವು, ಅಹಮಿಕೆಯ ಕಾರಣದಿಂದ ಪೊಗರಿನ ಸೊಕ್ಕಾಗಿ ಸ್ವನಾಶಕ್ಕೆ ಕಾರಣವಾಗದಿರಲೆಂದೊ ಏನೋ – ಬದುಕಿನ ತುಂಬಾ ಏರಿಳಿತಗಳ, ಕಷ್ಟಸುಖಗಳ, ಸುಖದುಃಖಗಳ ಸಮ್ಮಿಶ್ರಿತ ತಿಕ್ಕಾಟ ನಡೆದೇ ಇರುತ್ತದೆ. ಅಂತೆಯೇ ನಿಯಮಿತ ಪರಿಧಿಯ ಗಡಿ ಮೀರದ ಹಾಗೆ ಬದುಕು ನಡೆಸಲು ಅನುವಾಗುವಂತೆ ಅನೇಕಾನೇಕ ನೀತಿ-ನಿಯಮ-ಶಾಸ್ತ್ರ-ಪದ್ಧತಿ-ನಂಬಿಕೆ ಸಂಪ್ರದಾಯಗಳ ಸಾಂಗತ್ಯವೂ ಇರುತ್ತದೆ. ಈ ಚೌಕಟ್ಟು ನಾವು ಎಲ್ಲೆ ಮೀರದೆ, ಗಡಿಯೊಳಗಿನ ಲಕ್ಷ್ಮಣರೇಖೆಯನ್ನು ದಾಟದೆ ನೆಮ್ಮದಿಯಿಂದಿರಲು ಅನುವು ಮಾಡಿಕೊಡುತ್ತದೆ – ಆ ಮಿತಿಯಲ್ಲೆ ನೈಜ ಗಮ್ಯದತ್ತ ಹೆಜ್ಜೆ ಹಾಕಿಸುತ್ತ. ಆ ಗಮ್ಯದ ಸ್ಪಷ್ಟ ಅರಿವಿರದಿದ್ದರು ಕಣ್ಣಿಗೆ ಬಟ್ಟೆ ಕಟ್ಟಿ ತಡವುತ್ತ ನಡೆದ ಹಾಗೆ ನಡೆಯಿಸಿಕೊಂಡು ಹೋಗುತ್ತಾ , ಪ್ರತಿಹೆಜ್ಜೆಯಲ್ಲೂ ಇಷ್ಟಿಷ್ಟೇ ಇಷ್ಟಿಷ್ಟೇ ಬಿಚ್ಚಿಕೊಳ್ಳುತ್ತಾ ಮುಂದೆ ಮುಂದೆ ಸಾಗಿಸುತ್ತದೆ – ಜೀವನದ ಅಂತಿಮದವರೆಗೂ ಪೂರ್ಣಚಿತ್ರದ ಕುತೂಹಲವನ್ನು ಬಿಟ್ಟುಕೊಡದೆ.

ನಾಕುತಂತಿಯ ಕಡೆಯ ಭಾಗದ ಈ ಸಾಲುಗಳು ಸಾರುವುದು ಬಹುಶಃ ಹುಟ್ಟುಸಾವಿನ ನಿರಂತರತೆಯ ಈ ಎಚ್ಚರಿಕೆಯ ಗಂಟೆಯನ್ನೆ. ದಂತಿ ಎಂದರೆ ಗಣನಾಥ. ಯಾವುದೇ ಕಾರ್ಯಕ್ಕೆ ಮೊದಲು ಅವನನ್ನು ಪೂಜಿಸಿ ತಾನೆ ನಂತರದ ಕಾರ್ಯ ? ಈ ನಡುವೆ ಯಾವುದೇ ವಿಘ್ನವೂ ಅಡೆತಡೆ ಒಡ್ಡದಿರಲೆಂದು, ಮೊದಲು ಅವನನ್ನು ಪೂಜಿಸಿ ಓಲೈಸಿ ನಂತರ ಮುಂದೆ ಹೆಜ್ಜೆ ಇಡುವುದು ನಮ್ಮ ಪರಂಪರಾನುಗತ ಸಂಪ್ರದಾಯ. ನಡುವೆ ಏನೇ ತೊಡಕು ಎದುರಾದರು ಅವನನ್ನು ಮತ್ತೆ ಪೂಜಿಸಿ, ಓಲೈಸಿ ಆರಾಧಿಸುವುದು ಕೂಡ ಸಾಮಾನ್ಯ ವಿಷಯ. ಹೀಗೆ ಎಲ್ಲದಕು ಮೊದಲು ‘ಓಂ ಓಂ ದಂತಿ’ ಎಂದು ಆ ಗಣನಾಥನ ನಾಮಸ್ಮರಣೆ ಮಾಡುತ್ತೇವೆ. ಆದರೆ ಈ ಸಾಲುಗಳಲ್ಲಿ ಆ ಸಾಮಾನ್ಯ ಸ್ಮರಣೆಯನ್ನು ಮೀರಿದ ಅರ್ಥವಂತಿಕೆಯಿದೆ. ‘ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ!’ ಎಂದಾಗ ಸೃಷ್ಟಿಚಕ್ರದ ಅವಿಭಾಜ್ಯ ಅಂಗವಾದ ಹುಟ್ಟುಸಾವಿನ ನೇರ ಪ್ರಸ್ತಾವನೆ ಕಾಣಿಸಿಕೊಳ್ಳುತ್ತದೆ. ಸೊಲ್ಲಿಸಿದರು – ಎಂದರೆ ‘ಮಾತು’ ಅರ್ಥಾತ್ ‘ಶಬ್ದ’ ಹೊರಡಿಸಿದರೂ ಎಂದರ್ಥ. ಜನನವಾದಾಗ ಬಾಹ್ಯಜಗದಲ್ಲಿ ಶಿಶು ಉಸಿರಾಡತೊಡಗಿದಂತೆ ಮೊದಲು ಕೇಳುವುದು ಅದರ ಅಳುವಿನ ಶಬ್ದ. ಆ ಅಳುವ ಸೊಲ್ಲಿನಲ್ಲಿ ತುಳುಕಾಡುವುದು ಸಂಭ್ರಮದ ಛಾಯೆ. ಆಗಲು ಜನನದ ಶುಭಕಾರ್ಯಕ್ಕೆ ದೈವಕ್ಕೆ ಪ್ರಾರ್ಥನೆ ಸಲ್ಲಿಸುತ್ತೇವೆ. ನಿಲ್ಲಿಸಿದರು – ಎಂದಾಗ ‘ಉಸಿರು-ಮಾತು’ ನಿಂತಾಗ ಎಂಬರ್ಥ; ಅಂದರೆ ಭೌತಿಕ ಜೀವಸೃಷ್ಟಿಯ ಕೊನೆಯಾಗುವ, ಜೀವನ ವ್ಯಾಪಾರ ಮುಗಿಸುವ – ಸಾವಿನ ಹಂತ. ಸಾವಿನಲ್ಲೂ ದೈವದ ಹಸ್ತವನ್ನು ಕಾಣುತ್ತ, ಮರಣೋತ್ತರ ಸದ್ಗತಿಗಾಗಿ ಅದೇ ದೈವಕ್ಕೆ ಪ್ರಾರ್ಥನೆ ಸಲ್ಲಿಸುವುದು ಕೂಡ ನಮ್ಮಲ್ಲಿ ಸಾಮಾನ್ಯವಾಗಿ ಕಾಣುವ ಪ್ರಕ್ರಿಯೆ. ಹೀಗೆ ತಾನೇ ಸೃಜಿಸಿದ ಜೀವಿಯನ್ನು ‘ಸೊಲ್ಲಿಸಿದರು , ನಿಲ್ಲಿಸಿದರು’ – ಎರಡರಲ್ಲೂ ಅವನಾಟವೆ ಕಾಣುತ್ತದೆಯೆ ಹೊರತು ಮಾನವನ ಹೆಚ್ಚುಗಾರಿಕೆಯಲ್ಲ. ಇಲ್ಲಿ ಒಳ್ಳೆಯದಾಗಲಿ ಕೆಟ್ಟದಾಗಲಿ ಎಲ್ಲವು ದೈವೇಚ್ಛೆ ಎನ್ನುವ ಭಾವದಲ್ಲಿ ಬರುವ ಶರಣಾಗತ ಮನೋಭಾವವು ಪ್ರಧಾನವಾಗುತ್ತದೆ. ಎಲ್ಲದ್ದಕ್ಕೂ ಅವನನ್ನೆ ನಂಬಿ ಪ್ರಾರ್ಥಿಸಬೇಕು, ಓಲೈಸಬೇಕು ಎನ್ನುವುದು ಇಲ್ಲಿನ ಮತ್ತೊಂದು ಅಂತರ್ಗತ ಭಾವ.

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

Picture source: https://alchetron.com/D-R-Bendre-1304749-W

02055. ಹುಡುಕು ಹುಡುಕು ಯಾರವನು..


02055. ಹುಡುಕು ಹುಡುಕು ಯಾರವನು..
__________________________________


ಸೃಷ್ಟಿ ಜಗದ ಬೇಹುಗಾರ
ಸುತ್ತುವರಿದಾ ನಿರಾಕಾರ
ಯಾರವನು ? ಯಾರವನು ?
ಕಣ್ಣಿಗೆ ಕಾಣದ ಅಗೋಚರ..

ಎಲ್ಲಾ ಅವನದೆ ಸಾಹುಕಾರ
ಕಾಣಿಸಿಕೊಳದ ಜಾದೂಗಾರ
ಎಲ್ಲಿಹನು? ಎಲ್ಲವಿತಿಹನು ?
ಗೊತ್ತಿರುವವರು ಹೇಳುವಿರಾ ?

ಕೂತಂತಿಹನೊಳಗೊಮ್ಮೊಮ್ಮೆ
ನಿಂತಂತೆದುರಲಿ ಮತ್ತೊಮ್ಮೆ
ಎದುರಿಹನೆ ? ಎದುರಾಳಿಯವನೆ ?
ಕಂಡೂ ಕಾಣದ ಭ್ರಮೆಯ ಗೋಣೆ ?

ಕಿವಿಗ್ಯಾರೋ ನುಡಿದಂತೆ – ಅವನೇನು?
ಸದ್ದಿಲ್ಲದ ದನಿ ಅವನಾ ಮಾತೇನು?
ಅವನು ಅವನೋ ? ನಾನೋ ?
ನಾನಿಲ್ಲದೇ ಇದ್ದರು ಅವನಿಹನೆನು ?

ಯಾರಿಲ್ಲಿ ಬೇಹುಗಾರ ಸಹಜ ?
ಸ್ವಗತದಲಿ ಬೇಟೆಯಾಗೊ ಮನುಜ
ಬೇಟೆಯಾಡುವನೊ ? ಆಡಿಸುವನೊ ?
ನೋಡಲಶಕ್ಯ ಬರಿ ಭಾವದ ಸಜಾ !

– ನಾಗೇಶ ಮೈಸೂರು
೦೩.೦೬.೨೦೧೭

(Picture source : social media / whatsapp receipt)

02054. ನಾಕುತಂತಿಯೊಂದು ಸಾಲು – ೧೪


02054. ನಾಕುತಂತಿಯೊಂದು ಸಾಲು – ೧೪
________________________________


ನಾಕುತಂತಿ ಭಾಗ-೪:
______________________

‘ನಾನು’ವಿನಲ್ಲಿ ಗಮನ ಕೇಂದ್ರೀಕೃತವಾಗಿದ್ದ ಮೊದಲ ಭಾಗ, ಎರಡನೆಯ ಭಾಗದಲ್ಲಿ ‘ನೀನು’ವಿನ ಜತೆಗೂಡಿ ಎರಡು ಒಂದಾಗುವ ಅದ್ವೈತವನ್ನು ಬಿಂಬಿಸಿದ್ದನ್ನು ನೋಡಿದೆವು. ಮೂರನೆಯ ಭಾಗದಲ್ಲಿ ‘ನಾನು-ನೀನು’ಗಳ ಫಲಿತ ಮತ್ತೊಂದನ್ನು ಸೃಜಿಸಿ ಮೂರು ತಂತಿಗಳ ಸಂಯೋಜಿತ ಮಿಡಿತವಾದದ್ದನ್ನು ಗ್ರಹಿಸಿದೆವು. ಇನ್ನು ಕೊನೆಯ ನಾಲ್ಕನೇ ಭಾಗ – ಮೂರರ ಜೊತೆಗೆ ಅದಮ್ಯ ಮೂಲಾಧಾರ ಚೇತನದ ಅಂಶವೂ ಜೊತೆಗೂಡಿ, ನಾಲ್ಕುತಂತಿಗಳ ಸಮಷ್ಟಿ, ಸಮಗ್ರತೆ, ಸಂಪೂರ್ಣತೆಯ ಸಂಕೇತವಾಗುವುದನ್ನು ಕಾಣುತ್ತೇವೆ. ಬಾಲ್ಯ, ಯೌವ್ವನ, ಪ್ರೌಢತ್ವಗಳ ಹಂತಗಳಲ್ಲಿ ಬೆಳೆಯುತ್ತ ಸಾಗುವ ನಮ್ಮ ಬದುಕು ವೃದ್ಧ್ಯಾಪ್ಯದ ನಾಲ್ಕನೇ ಹಂತ ತಲುಪುತ್ತಿದ್ದಂತೆ ಮಾಗಿದ ವ್ಯಕ್ತಿತ್ವ, ಆಧ್ಯಾತ್ಮಿಕ ಓಲೈಕೆ, ದೈವ ಮತ್ತು ಕರ್ಮದ ಲೆಕ್ಕಾಚಾರಕ್ಕೊಪ್ಪಿಸಿಕೊಳ್ಳುವ ಬಗೆ ನಮ್ಮಲ್ಲಿ ಸಹಜವಾಗಿ ಗೋಚರವಾಗುವ ಅಂಶ. ಎಲ್ಲಾ ವಿಧಿ ನಿಯಮಿತ, ದೈವನಿಯಾಮಕ ಎನ್ನುವ ನಂಬಿಕೆ ಬಲವಾಗಿ, ಎಲ್ಲವನ್ನು ಆ ನಂಬಿಕೆಯ ಚೌಕಟ್ಟಿಗೊಪ್ಪಿಸಿ ಅಲ್ಲಿಯೇ ಉತ್ತರಗಳಿಗ್ಹುಡುಕಾಟ ನಡೆಸುವುದು, ಸತ್ಯಾನ್ವೇಷಣೆಗೆ ಹವಣಿಸುವುದು ಸಹಜವಾಗಿ ಕಾಣಿಸಿಕೊಳ್ಳುವ ಹಂತವಿದು. ಆ ಮೂಲಸಾರವೇ ನಾಕುತಂತಿಯ ಕೊನೆಯ ಭಾಗದ ಸಾಲುಗಳಲ್ಲಿಯೂ ಹುದುಗಿಕೊಂಡಿರುವುದನ್ನು ಕಾಣಬಹುದು. ಎಲ್ಲವೂ ಅದೇ ನಾಕುತಂತಿಗಳ ಪುನರುಚ್ಚಾರ ಮತ್ತು ಅದೇ ಅನುರಣದ ಪುನರುದ್ಗಾರ ಎನ್ನುವ ಸಂದೇಶವೂ ಇಲ್ಲಿ ಕಾಣಿಸಿಕೊಳ್ಳುತ್ತದೆ.

ನಾಕುತಂತಿಯೊಂದು ಸಾಲು – ೧೪
__________________________________

’ನಾನು’ ’ನೀನು’ ’ಆನು’ ’ತಾನು’ ನಾಕೆ ನಾಕು ತಂತಿ,

ನಾವಿರುವ ಈ ಜಗದಲ್ಲಿ ಅಸಂಖ್ಯಾತ ಜೀವರಾಶಿಯನ್ನು ಕಾಣುತ್ತೇವೆ. ಭೂಮಂಡಲದ ಮೇಲಿನ ಮಾನವ ಜನಸಂಖ್ಯೆಯನ್ನು ಮಾತ್ರವೇ ಪರಿಗಣಿಸಿದರು ಶತಕೋಟಿಗಳ ಲೆಕ್ಕದಲ್ಲಿ ಗಣಿಸುತ್ತೇವೆ. ಸೃಷ್ಟಿಜಗದ ಈ ವಿಸ್ತರಿಕೆ, ಎಣಿಕೆ ಇನ್ನು ಮುಂದುವರೆಯುತ್ತಲೇ ಇದೆ – ಹೊಸ ಪೀಳಿಗೆ, ಸಂತಾನಗಳ ಸೇರ್ಪಡೆ ಆಗುತ್ತಲೆ ಇದೆ. ಅಂತೆಯೇ ಈ ಪ್ರತಿಯೊಬ್ಬರ, ಪ್ರತಿಯೊಂದರ ರೂಪ-ಸ್ವರೂಪ-ಗುಣಾವಗುಣಗಳ ಗಣನೆಗಿಳಿದರೆ ಬಿಲಿಯಾಂತರ ಜನರ ಟ್ರಿಲಿಯಾಂತರ ಸ್ವರೂಪಗಳ ಅಗಾಧ ಸಾಧ್ಯತೆಯ ಕಲ್ಪನೆ ಕಣ್ಮುಂದೆ ನಿಲ್ಲುತ್ತದೆ. ಪ್ರತಿವ್ಯಕ್ತಿಯು, ಪ್ರತಿಜೀವಿಯು ವಿಭಿನ್ನವಾಗಿ ಕಾಣುತ್ತ, ವೈವಿಧ್ಯಮಯವಾಗಿ ತೋರಿಕೊಳ್ಳುತ್ತ ಅನಾವರಣಗೊಳ್ಳುವ ಪರಿಗೆ – ಇಡೀ ಜಗತ್ತೇ ಒಂದು ವಿಪರೀತ ಸಂಯೋಜನೆಗಳ, ಅತಿ ಸಂಕೀರ್ಣದ ಜಟಿಲ ಸಮೀಕರಣವಿರಬಹುದೇನೊ ಎನ್ನುವ ಅನುಮಾನ ಹುಟ್ಟಿಸಿಬಿಡುತ್ತದೆ. ಆ ಅನುಮಾನದಿಂದಲೇ ‘ಇವೆಲ್ಲದರ ಮೂಲದಲ್ಲೂ ಸುಲಭದಲ್ಲಿ ಅರ್ಥವಾಗದ, ಜಟಿಲವಾದ ಸೂತ್ರವಿರಬಹುದೇನೋ’ ಎಂಬ ಸಂಶಯ ಹುಟ್ಟಿಸುತ್ತದೆ. ಅದೆಲ್ಲಾ ಅನುಮಾನಕ್ಕೆ ಉತ್ತರವೆನ್ನುವಂತೆ ಕಾಣಿಸಿಕೊಳ್ಳುತ್ತದೆ ಈ ಸಾಲು.

ಹಿಂದಿನ ಸಾಲಲ್ಲಿ ನಾಕುತಂತಿಯ ಮೊಟ್ಟಮೊದಲ ಮಿಡಿತದ ಫಲವಾಗಿ ಮೊಟ್ಟಮೊದಲ ಕಂದನ ಜನ್ಮವಾಯ್ತು ಎಂದು ತರ್ಕಿಸಿದ್ದಾಯ್ತು. ತದನಂತರ ಮಿಕ್ಕಿದ್ದೆಲ್ಲ ಸೃಷ್ಟಿಯ ಮುಂದುವರಿಕೆ ಅಷ್ಟು ಸರಳವಾಗಿಲ್ಲ ಅಂದುಕೊಂಡಿದ್ದರೆ ಅದು ಕೇವಲ ತಪ್ಪುಗ್ರಹಿಕೆ; ಯಾಕೆಂದರೆ, ಆದಿಸೃಷ್ಟಿಯಾದ ಪುರಾತನ ಕಾಲದಿಂದ ಇಲ್ಲಿಯವರೆಗೂ ನಡೆದುಕೊಂಡು ಬಂದಿರುವುದು ಹಾಗು ಸೃಷ್ಟಿಚಕ್ರವನ್ನು ನಿಭಾಯಿಸಿಕೊಂಡು ಬಂದಿರುವುದು ಕೇವಲ ಆ ನಾಲ್ಕುತಂತಿಗಳ ಸಮ್ಮೇಳನ ಮಾತ್ರವೆ. ಮೊದಲ ಅಚ್ಚಿನಲ್ಲಿ ಎರಕ ಹೊಯ್ದು ಸೃಜಿಸಿದ ಕಂದ(ಗಳು) ಸಂಸಾರಚಕ್ರದ ಬಾಲ್ಯ-ಯೌವನ-ಫ್ರೌಢಾದಿ ಹಂತಗಳನ್ನು ದಾಟುತ್ತಲೆ ಅದೇ ಮೂಲಅಚ್ಚಿನ-ಮೂಲಮಾದರಿಯ ಮೂಸೆಯಾಗುತ್ತ, ಹೊಸ ಎರಕಹೊಯ್ದು ನವಸೃಷ್ಟಿಗೆ ಕಾರಣವಾಗುತ್ತಾನೆ. ಆ ಪ್ರಕ್ರಿಯೆಯಲ್ಲಿ ಸಕ್ರಿಯವಾಗುವುದೂ ಅದೇ ನಾಕುತಂತಿಗಳು ಮಾತ್ರವೆ. ಹೀಗೆ ಎಷ್ಟೇ ಬಾರಿ ಗುಣಿತವಾಗಿ, ಎಷ್ಟೇ ಸಲ ಪುನರಾವರ್ತಿಸಿದರೂ ಅದೇ ‘ನಾನು, ನೀನು, ಆನು, ತಾನು’ ಗಳೆಂಬ ನಾಕುತಂತಿಗಳ ಪುನರುಚ್ಚಾರ ಮಾತ್ರವೆ ಮರುಕಳಿಸಿಕೊಂಡು ಹೋಗುತ್ತವೆ. ಆ ಮರುಕಳಿಕೆಯಲ್ಲಿ ಜಟಿಲತೆ ಬರುವುದು ಸೃಷ್ಟಿಯ ನಂತರದ ಹೊಂದಾಣಿಕೆ, ಅನಾವರಣದ ಸ್ವರೂಪದಲ್ಲಿ. ಫಲಿತಗಳೆಲ್ಲದರ ಸಂಯೋಜಿತ ಒಟ್ಟಾರೆ ರೂಪ ಮೂಲದ ಸರಳತೆಯನ್ನು ಮರೆಮಾಚಿಬಿಡುತ್ತದೆ. ಹೀಗಾಗಿ ಅಲ್ಲಿ ಅದೇ ಹಳೆಯದರ, ಹಳೆ ಮೂಲಸೂತ್ರದ ಮೂಲಕ ಸೃಜಿಸಿದ ಹೊಸಸೃಷ್ಟಿ(ಮರುಕಳಿಕೆ)ಯಿದೆಯೆ ಹೊರತು ಹೊಚ್ಚಹೊಸತಿನ ಅನ್ವೇಷಣೆ, ಅವಿಷ್ಕಾರವಿಲ್ಲ.

ಎಷ್ಟೇ ಶಾಸ್ತ್ರಗ್ರಂಥ-ಜ್ಞಾನ-ವಿಜ್ಞಾನ-ವಾದ-ವಿವಾದ-ಜಿಜ್ಞಾಸೆಗಳ ಬುಡ ಸೋಸಿ ಶೋಧಿಸಿದರು, ಕೊನೆಗವೆಲ್ಲವು ಅಂತಿಮವಾಗಿ ಇದೇ ತೀರ್ಮಾನಕ್ಕೆ ತಲುಪುತ್ತವೆ. ಯಾಕೆಂದರೆ ಇದು ಜೀವಸೃಷ್ಟಿಯ ಮೂಲಸೂತ್ರದ ಕೀಲಿ. ಭೌತಶಾಸ್ತ್ರದಲ್ಲಿ ನಾವರಿತಂತೆ ಪ್ರತಿವಸ್ತುವು ಅದರದೇ ಆದ ಅಣುಪರಮಾಣು ಕಣಗಳಿಂದ ಮಾಡಲ್ಪಟ್ಟಿವೆ. ಹಾಗೆಯೆ ಮಾನವ ಜೀವಸೃಷ್ಟಿಯ ವಿಷಯದಲ್ಲಿ ನಾಕುತಂತಿಯ ಪ್ರತಿ ತಂತುವು ಒಂದೊಂದು ವಿಭಿನ್ನ ಪರಮಾಣುವಿದ್ದ ಹಾಗೆ. ಅದರ ಅರ್ಥಭರಿತ ಸಂಯೋಜನೆಯ ಪ್ರಕ್ರಿಯೆ ಒಂದು ಗುರುತರ ಮೂಲೋದ್ದೇಶಪೂರಿತ ಅಣುವಿದ್ದ ಹಾಗೆ. ಇಡೀ ಜಗತ್ತು ಈ ಅಣುಗಳೆಂಬ ಇಟ್ಟಿಗೆಯಿಂದ ಕಟ್ಟಲ್ಪಟ್ಟ ಭವ್ಯ, ವಿಶಾಲಸೌಧವಿದ್ದ ಹಾಗೆ. ಪರಮಾಣುವಿನ ರೂಪದಲ್ಲಿ ಹರವಿಕೊಂಡಿರುವ ‘ನಾನು, ನೀನು, ಆನು, ತಾನು’ ಎಂಬ ನಾಕುತಂತುಗಳು ಏನೆಲ್ಲಾ ಸರ್ಕಸ್ಸು ಮಾಡುತ್ತಾ ಯಾವುದೋ ಒಂದು ರೀತಿಯಲ್ಲಿ ಒಗ್ಗೂಡಿ ಪರಮಾಣುವಿನ ಸ್ವರೂಪದಿಂದ ಸಂಯೋಜಿತ ಅಣುರೂಪಿಯಾಗಿ ಬದಲಾಗುತ್ತ ಈ ಚಕ್ರವನ್ನು ನಿರಂತರವಾಗಿಸಿದೆಯಷ್ಟೆ. ಅದಕ್ಕೆ ಪೂರಕವಾಗಿ (ಅಥವಾ ವಿರುದ್ಧವಾಗಿ) ಏನೆಲ್ಲಾ ನೈತಿಕ-ಸಾಮಾಜಿಕ-ಭಾವನಾತ್ಮಕ-ವೈಜ್ಞಾನಿಕ-ಪರಿಸರಾತ್ಮಕ ಆವರಣಗಳು, ಅಂಶಗಳ ಹೊದಿಕೆಯಾದರೂ ಕೂಡ ಮೂಲಸತ್ವ-ಮೂಲತತ್ವಗಳು ಬದಲಾಗುವುದಿಲ್ಲ.

ಸಾರಾಂಶದಲ್ಲಿ ಹೇಳುವುದಾದರೆ ಈ ಮೂಲ ಸೃಷ್ಟಿಸಂಗೀತವೇ, ಅದೇ ನಾಕುತಂತಿಗಳ ಝೇಂಕಾರದಲ್ಲಿ, ನಿರಂತರವಾಗಿ, ವಿವಿಧ ರಾಗಗಳಲ್ಲಿ ಅದೇ ಮೂಲನಾದ ಹೊರಡಿಸುತ್ತಲೇ ಇದೆ – ಇಡೀ ಭೂಮಂಡಲದಲ್ಲಿ (ಪ್ರಾಯಶಃ ಮಿಕ್ಕೆಲ್ಲೆಡೆಯೂ). ನಾನು-ನೀನು-ಆನು-ತಾನೆಂಬ ಆ ನಾಲ್ಕುತಂತಿಗಳ ಗುಟ್ಟರಿತುಕೊಂಡರೆ ಇಡೀ ಜಟಿಲತೆಯ ಸ್ವರೂಪ ಸರಳವಾಗಿ ಕಣ್ಮುಂದೆ ನಿಲ್ಲುತ್ತದೆ. ಅದನ್ನರಿಯದೆ ಬರಿಯ ಬಾಹ್ಯ ಸಂಕೀರ್ಣತೆಯ ಸಾವಿರಾರು ಕುರುಹುಗಳ ಜತೆ ಹೊಡೆದಾಡಿಕೊಂಡಿದ್ದರೆ ಎಲ್ಲವೂ ಗೋಜಲು, ಗೋಜಲಾಗಿ ಅರ್ಥವೇ ಆಗದ ಗೊಂದಲದ ಒಗಟಾಗಿ ಕಾಣಿಸಿಕೊಳ್ಳುತ್ತವೆ. ಈ ವಿಷಯ ಬರಿಯ ಜೀವಸೃಷ್ಟಿಗೆ ಮಾತ್ರ ಸೀಮಿತವಾದದ್ದಲ್ಲ, ಬದುಕಿನ ಎಲ್ಲಾ ವಿಷಯಕ್ಕೂ, ಎಲ್ಲಾ ರಂಗಕ್ಕೂ ಅನ್ವಯಿಸುವಂತದ್ದು. ಜಟಿಲವೆಂಬಂತೆ ಕಾಣುವ ಎಲ್ಲದರ ಹಿನ್ನಲೆಯಲ್ಲೂ, ಮೂಲದಲ್ಲೂ ನಾಕುತಂತಿಗಳಂಥದ್ದೇ ಸರಳ ಮೂಲಾಂಶವಿದ್ದು, ಅದರ ವೈವಿಧ್ಯಮಯ ಸಂಯೋಜಿತ ರೂಪಗಳಷ್ಟೇ ಬಾಹ್ಯದಲ್ಲಿ ಕಾಣಿಸಿಕೊಳ್ಳುತ್ತವೆ. ಸತ್ಯದರಿವಿಗೆ ಹೊರಟರೆ ಹೊರಗಿನ ಅಂಶಗಳು ಮಾಯೆಯ ಹಾಗೆ ಪ್ರಭಾವ ಬೀರಿ ತೊಡರುಗಾಲು ಹಾಕುತ್ತವೆ. ಯಾರು ಅದರ ಜಟಿಲ ಸ್ವರೂಪಕ್ಕೆ ಮೋಸಹೋಗದೆ, ಒಳಗಿನ ಮೂಲದಲ್ಲಿರುವ ನಾಕುತಂತಿಗಳ ಮೂಲಸ್ವರೂಪದ ಗುಟ್ಟನ್ನರಿಯುತ್ತಾನೋ ಅವನಿಗೆ ಎಲ್ಲವೂ ಸರಳ ಸತ್ಯದಂತೆ ಗೋಚರವಾಗಿ ದಾರಿ ನಿಚ್ಛಳವಾಗಿ, ಬದುಕು ಸುಲಲಿತವಾಗುತ್ತದೆ. ಇದೇ ನಾಕುತಂತಿಗಳಲ್ಲಿರುವ ಬಹುಮುಖ್ಯವಾದ ಮೂಲ ಆಶಯ.

ಸೃಷ್ಟಿಸಂಕಲ್ಪಗಳ ಸೂಕ್ಷ್ಮವಾಹಕಗಳಾದ ವರ್ಣತಂತುಗಳ ವಿಷಯಕ್ಕೆ ಬಂದರೆ ಇಲ್ಲಿಯೂ ನಾಕುತಂತುಗಳ ಸಮ್ಮೇಳನವಿರುವುದನ್ನು ಕಾಣಬಹುದು. ಆಧುನಿಕ ವಿಜ್ಞಾನ ಗಂಡು ಜೀನ್ಸಿನಲ್ಲಿ ‘ಎಕ್ಸ್’ ಮತ್ತು ‘ವೈ’ ಜೋಡಿ ಕ್ರೋಮೋಸೋಮುಗಳಿರುತ್ತವೆ ಎಂದು ಸಾರುತ್ತದೆ. ಹಾಗೆಯೆ ಹೆಣ್ಣು ಜೀನ್ಸಿನಲ್ಲಿ ಬರಿಯ ‘ಎಕ್ಸ್’ ಮತ್ತು ‘ಎಕ್ಸ್’ ಸಂಯೋಜನೆಯಿರುತ್ತದೆಯೆನ್ನುವುದು ಗೊತ್ತಿರುವ ವಿಷಯವೆ. ಮಿಲನದ ಪ್ರಕ್ರಿಯೆಯಲ್ಲಿ ಒಗ್ಗೂಡಿದಾಗ ಒಂದಾಗುವ ಈ ‘ಎಕ್ಸ್, ಎಕ್ಸ್, ಎಕ್ಸ್, ವೈ’ ತಂತುಗಳು, ನಾಕುತಂತಿಯ ಪ್ರತೀಕವಾಗಿ, ಪ್ರತಿನಿಧಿಯಾಗಿ ಕಾಣುತ್ತವೆ – ಕಣರೂಪಿ ಮೂಲಭೂತ ಸ್ವರೂಪದಲ್ಲಿ. ಇದರ ಸಂಯೋಜನೆಯ ಸ್ವರೂಪವೇ ಹುಟ್ಟುವ ಜೀವಿ ಗಂಡೋ, ಹೆಣ್ಣೋ ಎಂದು ನಿರ್ಧರಿಸುವುದು. ತನ್ಮೂಲಕ ಪುರುಷ-ಪ್ರಕೃತಿಯ ಸಂಖ್ಯೆಯ ಸಮತೋಲನದಲ್ಲೂ ತನ್ನ ಪಾತ್ರ ನಿರ್ವಹಿಸುತ್ತದೆ. ಕವಿಯ ಮೂಲಆಶಯ ಈ ದೃಷ್ಟಿಕೋನದಲ್ಲಿತ್ತೊ, ಇಲ್ಲವೊ – ಆದರೆ ಅಲ್ಲಿಗೂ ಹೊಂದಿಕೆಯಾಗುವ ಮೂಲತತ್ವ ಈ ನಾಕುತಂತಿಯ ಮಹತ್ವ..!

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)