02056. ನಾಕುತಂತಿಯೊಂದು ಸಾಲು – ೧೫


02056. ನಾಕುತಂತಿಯೊಂದು ಸಾಲು – ೧೫
___________________________________


(’ನಾನು’ ’ನೀನು’ ’ಆನು’ ’ತಾನು’ ನಾಕೆ ನಾಕು ತಂತಿ – ೧೪);
ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ! (೧೫)
______________________________________________________________

ಹದಿನೈದನೇ ಸಾಲನ್ನು ಅರ್ಥೈಸುವ ಹೊತ್ತಲ್ಲಿ ಹದಿನಾಲ್ಕರ ಸಾರವನ್ನು ಹಿನ್ನೆಲೆಯಾಗಿಟ್ಟುಕೊಂಡು ಅರ್ಥೈಸಿದರೆ ಎರಡರ ನಡುವೆ ಇರುವ ಸಂಬಂಧ ಸ್ಪಷ್ಟವಾಗುತ್ತದೆ. ಹದಿನಾಲ್ಕರ ಸಾರದಲ್ಲಿ ಮುಖ್ಯವಾಗಿ ಹೇಳಿದ್ದು – ಇಡೀ ಜೀವಜಗವನ್ನು ಆಳುತ್ತಿರುವುದು ನಾನು-ನೀನು-ಆನು-ತಾನೆಂಬ ನಾಲ್ಕು ಮೂಲತಂತಿಗಳು ಮಾತ್ರ ಎಂದು. ಆ ನಾಲ್ಕು ತಂತಿಗಳ ಮಿಡಿತದಲ್ಲೇ ಜೀವಸೃಷ್ಟಿಯಾಗುವುದು. ಆ ಸೃಷ್ಟಿ ಕೂಡ ಹೇಗೆ ದೈವ ನಿಯಾಮಕದ ಚೌಕಟ್ಟಿನಲ್ಲಿ ಬಂಧವಾಗಿದೆ ಎಂದು ಸಾರುವ ಹದಿನೈದನೇ ಸಾಲು – ‘ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ’. ಅದೇನೆಂಬುದನ್ನು ವಿವರವಾಗಿ ಮುಂದಿನ ಸಾಲುಗಳಲ್ಲಿ ನೋಡೋಣ.

ಸೃಷ್ಟಿಕ್ರಿಯೆಯನ್ನು ದೈವತ್ವದ ಮಟ್ಟಕ್ಕೇರಿಸಿ, ಮನುಕುಲವನ್ನು ಅದರೊಟ್ಟಿಗೆ ಸಮೀಕರಿಸಿ ಅದಕ್ಕೊಂದು ಗಮ್ಯೋದ್ದೇಶವನ್ನು ಆರೋಪಿಸಿ ಆದ ಮೇಲೆ, ಆ ಕುರಿತಾದ ಹೆಮ್ಮೆ-ಗರ್ವ, ಮಾನವನಲ್ಲಿ ಅಹಂಕಾರದ ರೂಪ ತಾಳಬಾರದಲ್ಲ? ಯಾವುದೇ ಸಾಧನೆಯ ಮೇರುಶಿಖರಕ್ಕೇರಿದರೂ, ಅಂತಿಮ ಆಭರಣವಾಗಿ ವಿನಮ್ರತೆ, ವಿನಯವಿದ್ದರೆ ಆ ಸಾಧನೆಗೆ ಭೂಷಣ. ದೈವದುತ್ಕ್ರುಷ್ಟ ಸೃಷ್ಟಿ ನಾವೆಂಬ ಅರಿವು, ಅಹಮಿಕೆಯ ಕಾರಣದಿಂದ ಪೊಗರಿನ ಸೊಕ್ಕಾಗಿ ಸ್ವನಾಶಕ್ಕೆ ಕಾರಣವಾಗದಿರಲೆಂದೊ ಏನೋ – ಬದುಕಿನ ತುಂಬಾ ಏರಿಳಿತಗಳ, ಕಷ್ಟಸುಖಗಳ, ಸುಖದುಃಖಗಳ ಸಮ್ಮಿಶ್ರಿತ ತಿಕ್ಕಾಟ ನಡೆದೇ ಇರುತ್ತದೆ. ಅಂತೆಯೇ ನಿಯಮಿತ ಪರಿಧಿಯ ಗಡಿ ಮೀರದ ಹಾಗೆ ಬದುಕು ನಡೆಸಲು ಅನುವಾಗುವಂತೆ ಅನೇಕಾನೇಕ ನೀತಿ-ನಿಯಮ-ಶಾಸ್ತ್ರ-ಪದ್ಧತಿ-ನಂಬಿಕೆ ಸಂಪ್ರದಾಯಗಳ ಸಾಂಗತ್ಯವೂ ಇರುತ್ತದೆ. ಈ ಚೌಕಟ್ಟು ನಾವು ಎಲ್ಲೆ ಮೀರದೆ, ಗಡಿಯೊಳಗಿನ ಲಕ್ಷ್ಮಣರೇಖೆಯನ್ನು ದಾಟದೆ ನೆಮ್ಮದಿಯಿಂದಿರಲು ಅನುವು ಮಾಡಿಕೊಡುತ್ತದೆ – ಆ ಮಿತಿಯಲ್ಲೆ ನೈಜ ಗಮ್ಯದತ್ತ ಹೆಜ್ಜೆ ಹಾಕಿಸುತ್ತ. ಆ ಗಮ್ಯದ ಸ್ಪಷ್ಟ ಅರಿವಿರದಿದ್ದರು ಕಣ್ಣಿಗೆ ಬಟ್ಟೆ ಕಟ್ಟಿ ತಡವುತ್ತ ನಡೆದ ಹಾಗೆ ನಡೆಯಿಸಿಕೊಂಡು ಹೋಗುತ್ತಾ , ಪ್ರತಿಹೆಜ್ಜೆಯಲ್ಲೂ ಇಷ್ಟಿಷ್ಟೇ ಇಷ್ಟಿಷ್ಟೇ ಬಿಚ್ಚಿಕೊಳ್ಳುತ್ತಾ ಮುಂದೆ ಮುಂದೆ ಸಾಗಿಸುತ್ತದೆ – ಜೀವನದ ಅಂತಿಮದವರೆಗೂ ಪೂರ್ಣಚಿತ್ರದ ಕುತೂಹಲವನ್ನು ಬಿಟ್ಟುಕೊಡದೆ.

ನಾಕುತಂತಿಯ ಕಡೆಯ ಭಾಗದ ಈ ಸಾಲುಗಳು ಸಾರುವುದು ಬಹುಶಃ ಹುಟ್ಟುಸಾವಿನ ನಿರಂತರತೆಯ ಈ ಎಚ್ಚರಿಕೆಯ ಗಂಟೆಯನ್ನೆ. ದಂತಿ ಎಂದರೆ ಗಣನಾಥ. ಯಾವುದೇ ಕಾರ್ಯಕ್ಕೆ ಮೊದಲು ಅವನನ್ನು ಪೂಜಿಸಿ ತಾನೆ ನಂತರದ ಕಾರ್ಯ ? ಈ ನಡುವೆ ಯಾವುದೇ ವಿಘ್ನವೂ ಅಡೆತಡೆ ಒಡ್ಡದಿರಲೆಂದು, ಮೊದಲು ಅವನನ್ನು ಪೂಜಿಸಿ ಓಲೈಸಿ ನಂತರ ಮುಂದೆ ಹೆಜ್ಜೆ ಇಡುವುದು ನಮ್ಮ ಪರಂಪರಾನುಗತ ಸಂಪ್ರದಾಯ. ನಡುವೆ ಏನೇ ತೊಡಕು ಎದುರಾದರು ಅವನನ್ನು ಮತ್ತೆ ಪೂಜಿಸಿ, ಓಲೈಸಿ ಆರಾಧಿಸುವುದು ಕೂಡ ಸಾಮಾನ್ಯ ವಿಷಯ. ಹೀಗೆ ಎಲ್ಲದಕು ಮೊದಲು ‘ಓಂ ಓಂ ದಂತಿ’ ಎಂದು ಆ ಗಣನಾಥನ ನಾಮಸ್ಮರಣೆ ಮಾಡುತ್ತೇವೆ. ಆದರೆ ಈ ಸಾಲುಗಳಲ್ಲಿ ಆ ಸಾಮಾನ್ಯ ಸ್ಮರಣೆಯನ್ನು ಮೀರಿದ ಅರ್ಥವಂತಿಕೆಯಿದೆ. ‘ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ!’ ಎಂದಾಗ ಸೃಷ್ಟಿಚಕ್ರದ ಅವಿಭಾಜ್ಯ ಅಂಗವಾದ ಹುಟ್ಟುಸಾವಿನ ನೇರ ಪ್ರಸ್ತಾವನೆ ಕಾಣಿಸಿಕೊಳ್ಳುತ್ತದೆ. ಸೊಲ್ಲಿಸಿದರು – ಎಂದರೆ ‘ಮಾತು’ ಅರ್ಥಾತ್ ‘ಶಬ್ದ’ ಹೊರಡಿಸಿದರೂ ಎಂದರ್ಥ. ಜನನವಾದಾಗ ಬಾಹ್ಯಜಗದಲ್ಲಿ ಶಿಶು ಉಸಿರಾಡತೊಡಗಿದಂತೆ ಮೊದಲು ಕೇಳುವುದು ಅದರ ಅಳುವಿನ ಶಬ್ದ. ಆ ಅಳುವ ಸೊಲ್ಲಿನಲ್ಲಿ ತುಳುಕಾಡುವುದು ಸಂಭ್ರಮದ ಛಾಯೆ. ಆಗಲು ಜನನದ ಶುಭಕಾರ್ಯಕ್ಕೆ ದೈವಕ್ಕೆ ಪ್ರಾರ್ಥನೆ ಸಲ್ಲಿಸುತ್ತೇವೆ. ನಿಲ್ಲಿಸಿದರು – ಎಂದಾಗ ‘ಉಸಿರು-ಮಾತು’ ನಿಂತಾಗ ಎಂಬರ್ಥ; ಅಂದರೆ ಭೌತಿಕ ಜೀವಸೃಷ್ಟಿಯ ಕೊನೆಯಾಗುವ, ಜೀವನ ವ್ಯಾಪಾರ ಮುಗಿಸುವ – ಸಾವಿನ ಹಂತ. ಸಾವಿನಲ್ಲೂ ದೈವದ ಹಸ್ತವನ್ನು ಕಾಣುತ್ತ, ಮರಣೋತ್ತರ ಸದ್ಗತಿಗಾಗಿ ಅದೇ ದೈವಕ್ಕೆ ಪ್ರಾರ್ಥನೆ ಸಲ್ಲಿಸುವುದು ಕೂಡ ನಮ್ಮಲ್ಲಿ ಸಾಮಾನ್ಯವಾಗಿ ಕಾಣುವ ಪ್ರಕ್ರಿಯೆ. ಹೀಗೆ ತಾನೇ ಸೃಜಿಸಿದ ಜೀವಿಯನ್ನು ‘ಸೊಲ್ಲಿಸಿದರು , ನಿಲ್ಲಿಸಿದರು’ – ಎರಡರಲ್ಲೂ ಅವನಾಟವೆ ಕಾಣುತ್ತದೆಯೆ ಹೊರತು ಮಾನವನ ಹೆಚ್ಚುಗಾರಿಕೆಯಲ್ಲ. ಇಲ್ಲಿ ಒಳ್ಳೆಯದಾಗಲಿ ಕೆಟ್ಟದಾಗಲಿ ಎಲ್ಲವು ದೈವೇಚ್ಛೆ ಎನ್ನುವ ಭಾವದಲ್ಲಿ ಬರುವ ಶರಣಾಗತ ಮನೋಭಾವವು ಪ್ರಧಾನವಾಗುತ್ತದೆ. ಎಲ್ಲದ್ದಕ್ಕೂ ಅವನನ್ನೆ ನಂಬಿ ಪ್ರಾರ್ಥಿಸಬೇಕು, ಓಲೈಸಬೇಕು ಎನ್ನುವುದು ಇಲ್ಲಿನ ಮತ್ತೊಂದು ಅಂತರ್ಗತ ಭಾವ.

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

Picture source: https://alchetron.com/D-R-Bendre-1304749-W

Advertisements

02055. ಹುಡುಕು ಹುಡುಕು ಯಾರವನು..


02055. ಹುಡುಕು ಹುಡುಕು ಯಾರವನು..
__________________________________


ಸೃಷ್ಟಿ ಜಗದ ಬೇಹುಗಾರ
ಸುತ್ತುವರಿದಾ ನಿರಾಕಾರ
ಯಾರವನು ? ಯಾರವನು ?
ಕಣ್ಣಿಗೆ ಕಾಣದ ಅಗೋಚರ..

ಎಲ್ಲಾ ಅವನದೆ ಸಾಹುಕಾರ
ಕಾಣಿಸಿಕೊಳದ ಜಾದೂಗಾರ
ಎಲ್ಲಿಹನು? ಎಲ್ಲವಿತಿಹನು ?
ಗೊತ್ತಿರುವವರು ಹೇಳುವಿರಾ ?

ಕೂತಂತಿಹನೊಳಗೊಮ್ಮೊಮ್ಮೆ
ನಿಂತಂತೆದುರಲಿ ಮತ್ತೊಮ್ಮೆ
ಎದುರಿಹನೆ ? ಎದುರಾಳಿಯವನೆ ?
ಕಂಡೂ ಕಾಣದ ಭ್ರಮೆಯ ಗೋಣೆ ?

ಕಿವಿಗ್ಯಾರೋ ನುಡಿದಂತೆ – ಅವನೇನು?
ಸದ್ದಿಲ್ಲದ ದನಿ ಅವನಾ ಮಾತೇನು?
ಅವನು ಅವನೋ ? ನಾನೋ ?
ನಾನಿಲ್ಲದೇ ಇದ್ದರು ಅವನಿಹನೆನು ?

ಯಾರಿಲ್ಲಿ ಬೇಹುಗಾರ ಸಹಜ ?
ಸ್ವಗತದಲಿ ಬೇಟೆಯಾಗೊ ಮನುಜ
ಬೇಟೆಯಾಡುವನೊ ? ಆಡಿಸುವನೊ ?
ನೋಡಲಶಕ್ಯ ಬರಿ ಭಾವದ ಸಜಾ !

– ನಾಗೇಶ ಮೈಸೂರು
೦೩.೦೬.೨೦೧೭

(Picture source : social media / whatsapp receipt)

02054. ನಾಕುತಂತಿಯೊಂದು ಸಾಲು – ೧೪


02054. ನಾಕುತಂತಿಯೊಂದು ಸಾಲು – ೧೪
________________________________


ನಾಕುತಂತಿ ಭಾಗ-೪:
______________________

‘ನಾನು’ವಿನಲ್ಲಿ ಗಮನ ಕೇಂದ್ರೀಕೃತವಾಗಿದ್ದ ಮೊದಲ ಭಾಗ, ಎರಡನೆಯ ಭಾಗದಲ್ಲಿ ‘ನೀನು’ವಿನ ಜತೆಗೂಡಿ ಎರಡು ಒಂದಾಗುವ ಅದ್ವೈತವನ್ನು ಬಿಂಬಿಸಿದ್ದನ್ನು ನೋಡಿದೆವು. ಮೂರನೆಯ ಭಾಗದಲ್ಲಿ ‘ನಾನು-ನೀನು’ಗಳ ಫಲಿತ ಮತ್ತೊಂದನ್ನು ಸೃಜಿಸಿ ಮೂರು ತಂತಿಗಳ ಸಂಯೋಜಿತ ಮಿಡಿತವಾದದ್ದನ್ನು ಗ್ರಹಿಸಿದೆವು. ಇನ್ನು ಕೊನೆಯ ನಾಲ್ಕನೇ ಭಾಗ – ಮೂರರ ಜೊತೆಗೆ ಅದಮ್ಯ ಮೂಲಾಧಾರ ಚೇತನದ ಅಂಶವೂ ಜೊತೆಗೂಡಿ, ನಾಲ್ಕುತಂತಿಗಳ ಸಮಷ್ಟಿ, ಸಮಗ್ರತೆ, ಸಂಪೂರ್ಣತೆಯ ಸಂಕೇತವಾಗುವುದನ್ನು ಕಾಣುತ್ತೇವೆ. ಬಾಲ್ಯ, ಯೌವ್ವನ, ಪ್ರೌಢತ್ವಗಳ ಹಂತಗಳಲ್ಲಿ ಬೆಳೆಯುತ್ತ ಸಾಗುವ ನಮ್ಮ ಬದುಕು ವೃದ್ಧ್ಯಾಪ್ಯದ ನಾಲ್ಕನೇ ಹಂತ ತಲುಪುತ್ತಿದ್ದಂತೆ ಮಾಗಿದ ವ್ಯಕ್ತಿತ್ವ, ಆಧ್ಯಾತ್ಮಿಕ ಓಲೈಕೆ, ದೈವ ಮತ್ತು ಕರ್ಮದ ಲೆಕ್ಕಾಚಾರಕ್ಕೊಪ್ಪಿಸಿಕೊಳ್ಳುವ ಬಗೆ ನಮ್ಮಲ್ಲಿ ಸಹಜವಾಗಿ ಗೋಚರವಾಗುವ ಅಂಶ. ಎಲ್ಲಾ ವಿಧಿ ನಿಯಮಿತ, ದೈವನಿಯಾಮಕ ಎನ್ನುವ ನಂಬಿಕೆ ಬಲವಾಗಿ, ಎಲ್ಲವನ್ನು ಆ ನಂಬಿಕೆಯ ಚೌಕಟ್ಟಿಗೊಪ್ಪಿಸಿ ಅಲ್ಲಿಯೇ ಉತ್ತರಗಳಿಗ್ಹುಡುಕಾಟ ನಡೆಸುವುದು, ಸತ್ಯಾನ್ವೇಷಣೆಗೆ ಹವಣಿಸುವುದು ಸಹಜವಾಗಿ ಕಾಣಿಸಿಕೊಳ್ಳುವ ಹಂತವಿದು. ಆ ಮೂಲಸಾರವೇ ನಾಕುತಂತಿಯ ಕೊನೆಯ ಭಾಗದ ಸಾಲುಗಳಲ್ಲಿಯೂ ಹುದುಗಿಕೊಂಡಿರುವುದನ್ನು ಕಾಣಬಹುದು. ಎಲ್ಲವೂ ಅದೇ ನಾಕುತಂತಿಗಳ ಪುನರುಚ್ಚಾರ ಮತ್ತು ಅದೇ ಅನುರಣದ ಪುನರುದ್ಗಾರ ಎನ್ನುವ ಸಂದೇಶವೂ ಇಲ್ಲಿ ಕಾಣಿಸಿಕೊಳ್ಳುತ್ತದೆ.

ನಾಕುತಂತಿಯೊಂದು ಸಾಲು – ೧೪
__________________________________

’ನಾನು’ ’ನೀನು’ ’ಆನು’ ’ತಾನು’ ನಾಕೆ ನಾಕು ತಂತಿ,

ನಾವಿರುವ ಈ ಜಗದಲ್ಲಿ ಅಸಂಖ್ಯಾತ ಜೀವರಾಶಿಯನ್ನು ಕಾಣುತ್ತೇವೆ. ಭೂಮಂಡಲದ ಮೇಲಿನ ಮಾನವ ಜನಸಂಖ್ಯೆಯನ್ನು ಮಾತ್ರವೇ ಪರಿಗಣಿಸಿದರು ಶತಕೋಟಿಗಳ ಲೆಕ್ಕದಲ್ಲಿ ಗಣಿಸುತ್ತೇವೆ. ಸೃಷ್ಟಿಜಗದ ಈ ವಿಸ್ತರಿಕೆ, ಎಣಿಕೆ ಇನ್ನು ಮುಂದುವರೆಯುತ್ತಲೇ ಇದೆ – ಹೊಸ ಪೀಳಿಗೆ, ಸಂತಾನಗಳ ಸೇರ್ಪಡೆ ಆಗುತ್ತಲೆ ಇದೆ. ಅಂತೆಯೇ ಈ ಪ್ರತಿಯೊಬ್ಬರ, ಪ್ರತಿಯೊಂದರ ರೂಪ-ಸ್ವರೂಪ-ಗುಣಾವಗುಣಗಳ ಗಣನೆಗಿಳಿದರೆ ಬಿಲಿಯಾಂತರ ಜನರ ಟ್ರಿಲಿಯಾಂತರ ಸ್ವರೂಪಗಳ ಅಗಾಧ ಸಾಧ್ಯತೆಯ ಕಲ್ಪನೆ ಕಣ್ಮುಂದೆ ನಿಲ್ಲುತ್ತದೆ. ಪ್ರತಿವ್ಯಕ್ತಿಯು, ಪ್ರತಿಜೀವಿಯು ವಿಭಿನ್ನವಾಗಿ ಕಾಣುತ್ತ, ವೈವಿಧ್ಯಮಯವಾಗಿ ತೋರಿಕೊಳ್ಳುತ್ತ ಅನಾವರಣಗೊಳ್ಳುವ ಪರಿಗೆ – ಇಡೀ ಜಗತ್ತೇ ಒಂದು ವಿಪರೀತ ಸಂಯೋಜನೆಗಳ, ಅತಿ ಸಂಕೀರ್ಣದ ಜಟಿಲ ಸಮೀಕರಣವಿರಬಹುದೇನೊ ಎನ್ನುವ ಅನುಮಾನ ಹುಟ್ಟಿಸಿಬಿಡುತ್ತದೆ. ಆ ಅನುಮಾನದಿಂದಲೇ ‘ಇವೆಲ್ಲದರ ಮೂಲದಲ್ಲೂ ಸುಲಭದಲ್ಲಿ ಅರ್ಥವಾಗದ, ಜಟಿಲವಾದ ಸೂತ್ರವಿರಬಹುದೇನೋ’ ಎಂಬ ಸಂಶಯ ಹುಟ್ಟಿಸುತ್ತದೆ. ಅದೆಲ್ಲಾ ಅನುಮಾನಕ್ಕೆ ಉತ್ತರವೆನ್ನುವಂತೆ ಕಾಣಿಸಿಕೊಳ್ಳುತ್ತದೆ ಈ ಸಾಲು.

ಹಿಂದಿನ ಸಾಲಲ್ಲಿ ನಾಕುತಂತಿಯ ಮೊಟ್ಟಮೊದಲ ಮಿಡಿತದ ಫಲವಾಗಿ ಮೊಟ್ಟಮೊದಲ ಕಂದನ ಜನ್ಮವಾಯ್ತು ಎಂದು ತರ್ಕಿಸಿದ್ದಾಯ್ತು. ತದನಂತರ ಮಿಕ್ಕಿದ್ದೆಲ್ಲ ಸೃಷ್ಟಿಯ ಮುಂದುವರಿಕೆ ಅಷ್ಟು ಸರಳವಾಗಿಲ್ಲ ಅಂದುಕೊಂಡಿದ್ದರೆ ಅದು ಕೇವಲ ತಪ್ಪುಗ್ರಹಿಕೆ; ಯಾಕೆಂದರೆ, ಆದಿಸೃಷ್ಟಿಯಾದ ಪುರಾತನ ಕಾಲದಿಂದ ಇಲ್ಲಿಯವರೆಗೂ ನಡೆದುಕೊಂಡು ಬಂದಿರುವುದು ಹಾಗು ಸೃಷ್ಟಿಚಕ್ರವನ್ನು ನಿಭಾಯಿಸಿಕೊಂಡು ಬಂದಿರುವುದು ಕೇವಲ ಆ ನಾಲ್ಕುತಂತಿಗಳ ಸಮ್ಮೇಳನ ಮಾತ್ರವೆ. ಮೊದಲ ಅಚ್ಚಿನಲ್ಲಿ ಎರಕ ಹೊಯ್ದು ಸೃಜಿಸಿದ ಕಂದ(ಗಳು) ಸಂಸಾರಚಕ್ರದ ಬಾಲ್ಯ-ಯೌವನ-ಫ್ರೌಢಾದಿ ಹಂತಗಳನ್ನು ದಾಟುತ್ತಲೆ ಅದೇ ಮೂಲಅಚ್ಚಿನ-ಮೂಲಮಾದರಿಯ ಮೂಸೆಯಾಗುತ್ತ, ಹೊಸ ಎರಕಹೊಯ್ದು ನವಸೃಷ್ಟಿಗೆ ಕಾರಣವಾಗುತ್ತಾನೆ. ಆ ಪ್ರಕ್ರಿಯೆಯಲ್ಲಿ ಸಕ್ರಿಯವಾಗುವುದೂ ಅದೇ ನಾಕುತಂತಿಗಳು ಮಾತ್ರವೆ. ಹೀಗೆ ಎಷ್ಟೇ ಬಾರಿ ಗುಣಿತವಾಗಿ, ಎಷ್ಟೇ ಸಲ ಪುನರಾವರ್ತಿಸಿದರೂ ಅದೇ ‘ನಾನು, ನೀನು, ಆನು, ತಾನು’ ಗಳೆಂಬ ನಾಕುತಂತಿಗಳ ಪುನರುಚ್ಚಾರ ಮಾತ್ರವೆ ಮರುಕಳಿಸಿಕೊಂಡು ಹೋಗುತ್ತವೆ. ಆ ಮರುಕಳಿಕೆಯಲ್ಲಿ ಜಟಿಲತೆ ಬರುವುದು ಸೃಷ್ಟಿಯ ನಂತರದ ಹೊಂದಾಣಿಕೆ, ಅನಾವರಣದ ಸ್ವರೂಪದಲ್ಲಿ. ಫಲಿತಗಳೆಲ್ಲದರ ಸಂಯೋಜಿತ ಒಟ್ಟಾರೆ ರೂಪ ಮೂಲದ ಸರಳತೆಯನ್ನು ಮರೆಮಾಚಿಬಿಡುತ್ತದೆ. ಹೀಗಾಗಿ ಅಲ್ಲಿ ಅದೇ ಹಳೆಯದರ, ಹಳೆ ಮೂಲಸೂತ್ರದ ಮೂಲಕ ಸೃಜಿಸಿದ ಹೊಸಸೃಷ್ಟಿ(ಮರುಕಳಿಕೆ)ಯಿದೆಯೆ ಹೊರತು ಹೊಚ್ಚಹೊಸತಿನ ಅನ್ವೇಷಣೆ, ಅವಿಷ್ಕಾರವಿಲ್ಲ.

ಎಷ್ಟೇ ಶಾಸ್ತ್ರಗ್ರಂಥ-ಜ್ಞಾನ-ವಿಜ್ಞಾನ-ವಾದ-ವಿವಾದ-ಜಿಜ್ಞಾಸೆಗಳ ಬುಡ ಸೋಸಿ ಶೋಧಿಸಿದರು, ಕೊನೆಗವೆಲ್ಲವು ಅಂತಿಮವಾಗಿ ಇದೇ ತೀರ್ಮಾನಕ್ಕೆ ತಲುಪುತ್ತವೆ. ಯಾಕೆಂದರೆ ಇದು ಜೀವಸೃಷ್ಟಿಯ ಮೂಲಸೂತ್ರದ ಕೀಲಿ. ಭೌತಶಾಸ್ತ್ರದಲ್ಲಿ ನಾವರಿತಂತೆ ಪ್ರತಿವಸ್ತುವು ಅದರದೇ ಆದ ಅಣುಪರಮಾಣು ಕಣಗಳಿಂದ ಮಾಡಲ್ಪಟ್ಟಿವೆ. ಹಾಗೆಯೆ ಮಾನವ ಜೀವಸೃಷ್ಟಿಯ ವಿಷಯದಲ್ಲಿ ನಾಕುತಂತಿಯ ಪ್ರತಿ ತಂತುವು ಒಂದೊಂದು ವಿಭಿನ್ನ ಪರಮಾಣುವಿದ್ದ ಹಾಗೆ. ಅದರ ಅರ್ಥಭರಿತ ಸಂಯೋಜನೆಯ ಪ್ರಕ್ರಿಯೆ ಒಂದು ಗುರುತರ ಮೂಲೋದ್ದೇಶಪೂರಿತ ಅಣುವಿದ್ದ ಹಾಗೆ. ಇಡೀ ಜಗತ್ತು ಈ ಅಣುಗಳೆಂಬ ಇಟ್ಟಿಗೆಯಿಂದ ಕಟ್ಟಲ್ಪಟ್ಟ ಭವ್ಯ, ವಿಶಾಲಸೌಧವಿದ್ದ ಹಾಗೆ. ಪರಮಾಣುವಿನ ರೂಪದಲ್ಲಿ ಹರವಿಕೊಂಡಿರುವ ‘ನಾನು, ನೀನು, ಆನು, ತಾನು’ ಎಂಬ ನಾಕುತಂತುಗಳು ಏನೆಲ್ಲಾ ಸರ್ಕಸ್ಸು ಮಾಡುತ್ತಾ ಯಾವುದೋ ಒಂದು ರೀತಿಯಲ್ಲಿ ಒಗ್ಗೂಡಿ ಪರಮಾಣುವಿನ ಸ್ವರೂಪದಿಂದ ಸಂಯೋಜಿತ ಅಣುರೂಪಿಯಾಗಿ ಬದಲಾಗುತ್ತ ಈ ಚಕ್ರವನ್ನು ನಿರಂತರವಾಗಿಸಿದೆಯಷ್ಟೆ. ಅದಕ್ಕೆ ಪೂರಕವಾಗಿ (ಅಥವಾ ವಿರುದ್ಧವಾಗಿ) ಏನೆಲ್ಲಾ ನೈತಿಕ-ಸಾಮಾಜಿಕ-ಭಾವನಾತ್ಮಕ-ವೈಜ್ಞಾನಿಕ-ಪರಿಸರಾತ್ಮಕ ಆವರಣಗಳು, ಅಂಶಗಳ ಹೊದಿಕೆಯಾದರೂ ಕೂಡ ಮೂಲಸತ್ವ-ಮೂಲತತ್ವಗಳು ಬದಲಾಗುವುದಿಲ್ಲ.

ಸಾರಾಂಶದಲ್ಲಿ ಹೇಳುವುದಾದರೆ ಈ ಮೂಲ ಸೃಷ್ಟಿಸಂಗೀತವೇ, ಅದೇ ನಾಕುತಂತಿಗಳ ಝೇಂಕಾರದಲ್ಲಿ, ನಿರಂತರವಾಗಿ, ವಿವಿಧ ರಾಗಗಳಲ್ಲಿ ಅದೇ ಮೂಲನಾದ ಹೊರಡಿಸುತ್ತಲೇ ಇದೆ – ಇಡೀ ಭೂಮಂಡಲದಲ್ಲಿ (ಪ್ರಾಯಶಃ ಮಿಕ್ಕೆಲ್ಲೆಡೆಯೂ). ನಾನು-ನೀನು-ಆನು-ತಾನೆಂಬ ಆ ನಾಲ್ಕುತಂತಿಗಳ ಗುಟ್ಟರಿತುಕೊಂಡರೆ ಇಡೀ ಜಟಿಲತೆಯ ಸ್ವರೂಪ ಸರಳವಾಗಿ ಕಣ್ಮುಂದೆ ನಿಲ್ಲುತ್ತದೆ. ಅದನ್ನರಿಯದೆ ಬರಿಯ ಬಾಹ್ಯ ಸಂಕೀರ್ಣತೆಯ ಸಾವಿರಾರು ಕುರುಹುಗಳ ಜತೆ ಹೊಡೆದಾಡಿಕೊಂಡಿದ್ದರೆ ಎಲ್ಲವೂ ಗೋಜಲು, ಗೋಜಲಾಗಿ ಅರ್ಥವೇ ಆಗದ ಗೊಂದಲದ ಒಗಟಾಗಿ ಕಾಣಿಸಿಕೊಳ್ಳುತ್ತವೆ. ಈ ವಿಷಯ ಬರಿಯ ಜೀವಸೃಷ್ಟಿಗೆ ಮಾತ್ರ ಸೀಮಿತವಾದದ್ದಲ್ಲ, ಬದುಕಿನ ಎಲ್ಲಾ ವಿಷಯಕ್ಕೂ, ಎಲ್ಲಾ ರಂಗಕ್ಕೂ ಅನ್ವಯಿಸುವಂತದ್ದು. ಜಟಿಲವೆಂಬಂತೆ ಕಾಣುವ ಎಲ್ಲದರ ಹಿನ್ನಲೆಯಲ್ಲೂ, ಮೂಲದಲ್ಲೂ ನಾಕುತಂತಿಗಳಂಥದ್ದೇ ಸರಳ ಮೂಲಾಂಶವಿದ್ದು, ಅದರ ವೈವಿಧ್ಯಮಯ ಸಂಯೋಜಿತ ರೂಪಗಳಷ್ಟೇ ಬಾಹ್ಯದಲ್ಲಿ ಕಾಣಿಸಿಕೊಳ್ಳುತ್ತವೆ. ಸತ್ಯದರಿವಿಗೆ ಹೊರಟರೆ ಹೊರಗಿನ ಅಂಶಗಳು ಮಾಯೆಯ ಹಾಗೆ ಪ್ರಭಾವ ಬೀರಿ ತೊಡರುಗಾಲು ಹಾಕುತ್ತವೆ. ಯಾರು ಅದರ ಜಟಿಲ ಸ್ವರೂಪಕ್ಕೆ ಮೋಸಹೋಗದೆ, ಒಳಗಿನ ಮೂಲದಲ್ಲಿರುವ ನಾಕುತಂತಿಗಳ ಮೂಲಸ್ವರೂಪದ ಗುಟ್ಟನ್ನರಿಯುತ್ತಾನೋ ಅವನಿಗೆ ಎಲ್ಲವೂ ಸರಳ ಸತ್ಯದಂತೆ ಗೋಚರವಾಗಿ ದಾರಿ ನಿಚ್ಛಳವಾಗಿ, ಬದುಕು ಸುಲಲಿತವಾಗುತ್ತದೆ. ಇದೇ ನಾಕುತಂತಿಗಳಲ್ಲಿರುವ ಬಹುಮುಖ್ಯವಾದ ಮೂಲ ಆಶಯ.

ಸೃಷ್ಟಿಸಂಕಲ್ಪಗಳ ಸೂಕ್ಷ್ಮವಾಹಕಗಳಾದ ವರ್ಣತಂತುಗಳ ವಿಷಯಕ್ಕೆ ಬಂದರೆ ಇಲ್ಲಿಯೂ ನಾಕುತಂತುಗಳ ಸಮ್ಮೇಳನವಿರುವುದನ್ನು ಕಾಣಬಹುದು. ಆಧುನಿಕ ವಿಜ್ಞಾನ ಗಂಡು ಜೀನ್ಸಿನಲ್ಲಿ ‘ಎಕ್ಸ್’ ಮತ್ತು ‘ವೈ’ ಜೋಡಿ ಕ್ರೋಮೋಸೋಮುಗಳಿರುತ್ತವೆ ಎಂದು ಸಾರುತ್ತದೆ. ಹಾಗೆಯೆ ಹೆಣ್ಣು ಜೀನ್ಸಿನಲ್ಲಿ ಬರಿಯ ‘ಎಕ್ಸ್’ ಮತ್ತು ‘ಎಕ್ಸ್’ ಸಂಯೋಜನೆಯಿರುತ್ತದೆಯೆನ್ನುವುದು ಗೊತ್ತಿರುವ ವಿಷಯವೆ. ಮಿಲನದ ಪ್ರಕ್ರಿಯೆಯಲ್ಲಿ ಒಗ್ಗೂಡಿದಾಗ ಒಂದಾಗುವ ಈ ‘ಎಕ್ಸ್, ಎಕ್ಸ್, ಎಕ್ಸ್, ವೈ’ ತಂತುಗಳು, ನಾಕುತಂತಿಯ ಪ್ರತೀಕವಾಗಿ, ಪ್ರತಿನಿಧಿಯಾಗಿ ಕಾಣುತ್ತವೆ – ಕಣರೂಪಿ ಮೂಲಭೂತ ಸ್ವರೂಪದಲ್ಲಿ. ಇದರ ಸಂಯೋಜನೆಯ ಸ್ವರೂಪವೇ ಹುಟ್ಟುವ ಜೀವಿ ಗಂಡೋ, ಹೆಣ್ಣೋ ಎಂದು ನಿರ್ಧರಿಸುವುದು. ತನ್ಮೂಲಕ ಪುರುಷ-ಪ್ರಕೃತಿಯ ಸಂಖ್ಯೆಯ ಸಮತೋಲನದಲ್ಲೂ ತನ್ನ ಪಾತ್ರ ನಿರ್ವಹಿಸುತ್ತದೆ. ಕವಿಯ ಮೂಲಆಶಯ ಈ ದೃಷ್ಟಿಕೋನದಲ್ಲಿತ್ತೊ, ಇಲ್ಲವೊ – ಆದರೆ ಅಲ್ಲಿಗೂ ಹೊಂದಿಕೆಯಾಗುವ ಮೂಲತತ್ವ ಈ ನಾಕುತಂತಿಯ ಮಹತ್ವ..!

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)