02059. ನಾಕುತಂತಿಯೊಂದು ಸಾಲು – ೧೭


02059. ನಾಕುತಂತಿಯೊಂದು ಸಾಲು – ೧೭
_____________________________________

[’ನಾನು’ ’ನೀನು’ ’ಆನು’ ’ತಾನು’ ನಾಕೆ ನಾಕು ತಂತಿ (೧೪)
ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ! (೧೫)
ಗಣನಾಯಕ ಮೈ ಮಾಯಕ ಸೈ ಸಾಯಕ ಮಾಡಿ (೧೬)]

“ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ. (೧೭)”


ಗಣನಾಯಕನ ಕೃಪೆಯಿಂದ ಅಣಿಗೊಳಿಸಿದ ತನುಮನಗಳನ್ನು, ಸೂಕ್ತ ಗುರಿಯತ್ತ ಹೂಡಿದ ಬಿಲ್ಲು ಬಾಣವಾಗಿಸಿ ಹುಟ್ಟು-ಸಾವಿನ ನಡುವಿನ ಬದುಕಿನಲಿ ಮುನ್ನಡೆವ ಹಾದಿ ತೋರಿಸಿದ್ದಾಯ್ತು – ಹದಿನಾರನೇ ಸಾಲಿನ ತನಕ. ಇನ್ನು ಆ ಗುರಿಯತ್ತ ನಡೆವ ನಡಿಗೆ ಹೇಗಿರಬೇಕೆಂಬ ಮಾರ್ಗದರ್ಶನವಿರದಿದ್ದರೆ ಹೇಗೆ ? ಏಕೆಂದರೆ ಗುರಿಯತ್ತ ನಡಿಗೆಯೆಂದಾಗ ಸರಿಯಾದ ಹಾದಿಯಲ್ಲೂ ಹೋಗಬಹುದು, ತಪ್ಪು ಹಾದಿಯಲ್ಲಿ ಅಡ್ಡಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಜೊತೆಗೆ ಹಾದಿಯೊಂದನ್ನು ಹುಡುಕಿ ಹೊರಟ ಮೇಲೆ ಅದರಲ್ಲಿ ಅಡೆತಡೆಗಳಿರದೆಂದು ಹೇಳಬರುವಂತಿಲ್ಲ. ಮುಖ್ಯವಾಗಿ ಅದನ್ನು ಕ್ರಮಿಸಲಿರಬೇಕಾದ ಮನಸ್ಥಿತಿ, ಆತ್ಮಸ್ಥೈರ್ಯ, ಏಕಾಗ್ರಚಿತ್ತತೆ ಮತ್ತು ಮನೋಭಾವಗಳು ಬಲು ಮುಖ್ಯ. ಅದನ್ನು ಮುಂದಿನ (ಕೊನೆಯ) ಹದಿನೇಳನೇ ಸಾಲಿನಲ್ಲಿ ಹೇಗೆ ವಿವರಿಸಲ್ಪಟ್ಟಿದೆ ಎಂದು ನೋಡೋಣ.

೧೭. ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ.

ಮೊದಲೇ ವಿವರಿಸಿದಂತೆ, ಗೊತ್ತು ಗುರಿಯಿಲ್ಲದ ಅಡ್ಡಾದಿಡ್ಡಿ ಗಮ್ಯದತ್ತ ಅನಿಯಂತ್ರಿತವಾಗಿ ಉರುಳಿಕೊಂಡು ಹೋಗುವ ಬದಲು, ಯಾವುದೊ ನಿಶ್ಚಿತ, ಪೂರ್ವ ನಿರ್ಧಾರಿತ ಗುರಿಯತ್ತ ನಡೆಯುವುದು ವಿಹಿತವೆಂದು ಹಿಂದಿನ ಸಾಲಿನ ಸಾರದಲ್ಲಿ ವಿವರಿಸಲಾಗಿತ್ತು. ಇನ್ನು ಈ ಸಾಲಿನಲ್ಲಿ ‘ಅಂತಹ ಗುರಿಯತ್ತ ನಡಿಗೆ ಹೇಗಿರಬೇಕು ?’ ಎನ್ನುವುದರ ವಿಸ್ತೃತ ಸುಳಿವು, ಸೂಚನೆ ದೊರಕುತ್ತದೆ. ಅದನ್ನು ಸರಿಯಾಗಿ ಮನದಟ್ಟಾಗಿಸಲೆಂದೇ ಪ್ರಾಸಂಗಿಕವಾಗಿ ಇಲ್ಲಿ ಕುರಿಯ ಕಣ್ಣಿನ ಪ್ರಸ್ತಾವನೆಯೂ ಬರುತ್ತದೆ. ಕುರಿ ಎಂದ ತಕ್ಷಣ ನಮ್ಮ ಮನಸಿನ ಕಣ್ಣ ಮುಂದೆ ನಿಸಾರರ ‘ಕುರಿಗಳು ಸಾರ್, ಕುರಿಗಳು..’ ನೆನಪಿಗೆ ಬರದಿರುವುದುಂಟೆ? ನಿಸಾರರ ಪದ್ಯದಲ್ಲಿ ತಲೆ ತಗ್ಗಿಸಿ, ಎಡ-ಬಲ ನೋಡದೆ, ಗೊತ್ತು-ಗುರಿಯಿಲ್ಲದೆ ಯಾಂತ್ರಿಕವಾಗಿ ನಡೆಯುತ್ತಿರುವ ಕುರಿಗಳು (ಅರ್ಥಾತ್ ಅಂತಹ ವ್ಯಕ್ತಿತ್ವವಿರುವ ನಮ್ಮಂತಹವರು), ತಮ್ಮ ಮೇಲೆ ಹೇರಿದ ವ್ಯವಸ್ಥೆಯನ್ನು ಪ್ರತಿಭಟಿಸದೇ ತೆಪ್ಪಗೆ ಒಪ್ಪಿಕೊಂಡು ಹೋಗುವ ಬಗೆಗಿನ ಗೇಲಿ ಮತ್ತು ವ್ಯಂಗ್ಯದ ದ್ಯೋತಕವಾಗಿ ಬರುತ್ತದೆ. ಆದರೆ ಬೇಂದ್ರೆಯವರ ನಾಕುತಂತಿಯ ಈ ಸಾಲಿನಲ್ಲಿ ಅದೇ ಕುರಿಯ ನಡಿಗೆಯಲ್ಲಡಕವಾಗಿರುವ ಧನಾತ್ಮಕ ಆಯಾಮವನ್ನು ಎತ್ತಿ ತೋರುವ ಪ್ರತೀಕವಾಗಿ ಮೂಡಿಬರುತ್ತದೆ. ಗುರಿಯತ್ತ ನಮ್ಮ ನಡಿಗೆ ಹೇಗಿರಬೇಕೆಂಬುದನ್ನು ವಿವರಿಸುತ್ತಾ, ಎಡಬಲ ನೋಡದೆ, ಹಿಂದೆಮುಂದೆ ಯೋಚಿಸದೆ, ಒಂದೇ ಸಮನೆ ತನ್ನ ಗುರಿಯತ್ತ ಕಾಲೆಳೆದುಕೊಂಡು ನಡೆಯುವ ಕುರಿಯ ಹಾಗೆಯೇ ನಮ್ಮ ಗುರಿಯೆಡೆಗಿನ ಹೆಜ್ಜೆಯೂ ಇರಬೇಕೆಂದು ಹೇಳುತ್ತದೆ. ಹಾಗೆ ನಡೆಯುತ್ತಿರುವ ಕುರಿಯ ಕಣ್ಣಿಗೆ ತಾನು ತಲುಪಬೇಕಿರುವ ಗುರಿಯ ಹೊರತಾಗಿ ಮತ್ತಾವ ಪರಿವೆಯೂ ಇರುವುದಿಲ್ಲ. ಒಂದು, ತಾನು ಸೇರಬೇಕಾದ ಕುರಿದೊಡ್ಡಿಯನ್ನೋ ಅಥವಾ ಮೇವು ಮೇಯಲು ತಲುಪಬೇಕಾದ ಹುಲ್ಲಿನ ಬಯಲನ್ನೋ ಲಕ್ಷದಲ್ಲಿಟ್ಟುಕೊಂಡು ಕಣ್ಣುರೆಪ್ಪೆ ಮಿಟುಕಿಸುವುದನ್ನೂ ಮರೆತಂತೆ ಲಯಬದ್ಧವಾಗು ಹೆಜ್ಜೆಹಾಕಿಕೊಂಡು ನಡೆದಿರುತ್ತದೆ. ಅದರ ಕಣ್ಣ ತುಂಬಾ ತಾನು ತಲುಪಬೇಕಾದ ಗಮ್ಯದ ಲಕ್ಷ್ಯದ ಹೊರತು ಮತ್ತೇನು ಇರುವುದಿಲ್ಲ. ಗುರಿಯತ್ತ ದಿಟ್ಟತನದಿಂದ ನಡೆಯುವಾಗ ನಮ್ಮಲ್ಲೂ ಅಂತಹ ವಿಧೇಯ ಏಕಾಗ್ರ ಚಿತ್ತವಿರಬೇಕು ಎನ್ನುವುದು ಈ ಸಾಲಿನಲ್ಲಡಗಿರುವ ಒಂದು ಆಶಯ.

ಗುರಿಯ ತುಂಬಿ ಕುರಿಯ ಕಣ್ಣು…

ಅಂದಹಾಗೆ ಹಿಂದಿನ ಸಾಲಿನಲ್ಲಿ ಗುರಿಯತ್ತಣ ನಡಿಗೆಗೆ ‘ಮೈ ಮಾಯಕ ಸೈ ಸಾಯಕ’ ಮಾಡುವ ಪ್ರಸ್ತಾವನೆ ಬಂದಿತ್ತು. ಅದರರ್ಥವನ್ನು ಈ ಸಾಲಿನ ಜತೆ ಸಮೀಕರಿಸಿದರೆ ಇನ್ನೂ ಹೆಚ್ಚಿನ ಅರ್ಥ ವೈವಿಧ್ಯ ಕಾಣಿಸುತ್ತದೆ. ಮೈಯನ್ನೆ ಮಾಯಾ ಶರೀರದಂತಹ ಧನುಸ್ಸಾಗಿಸಿ, ಅದಕ್ಕೆ ‘ಸರಿಯಾದ ಗಮ್ಯವೆಂಬ’ ಬಾಣವನ್ನು ಹೂಡಿ ಹೋರಾಡುತ್ತ ಮುನ್ನಡೆಯಲು ಸಿದ್ಧವಾಗಿರಬೇಕು ಎಂದಲ್ಲಿ ಅರ್ಥೈಸಿದ್ದೆವು, ಸಾರಾಂಶದಲ್ಲಿ. ಆದರೆ ಹಾಗಿಟ್ಟ ಆ ಬಾಣದ ಗುರಿ ದಿಕ್ಕುದೆಸೆ ತಪ್ಪಿ, ವ್ಯರ್ಥವಾಗಿ ಹೋಗಿ ಎಲ್ಲೆಲ್ಲೊ ಬೀಳಬಾರದಲ್ಲ? ಅದಕ್ಕೆಂದೇ, ಅದಕ್ಕೊಂದು ‘ಕುರಿಯ ಕಣ್ಣಿನಂತಹ’ ವಿಚಲಿತಗೊಳ್ಳದ, ನಿಖರ ದಿಕ್ಕಿನತ್ತ ಮುನ್ನಡೆಸುವ ಮಾರ್ಗದರ್ಶಿ ಚಿತ್ತ ಜತೆಗಿರಬೇಕು (ಗುರಿಯತ್ತ ಹೋಗುವ ಉದ್ದೇಶದಿಂದ, ಪೂರ್ಣ ನಂಬಿಕೆಯಿಂದ ಸುಮ್ಮನೆ ಕಣ್ಣು ಮುಚ್ಚಿಕೊಂಡು ನಡೆವಂತೆ). ಆಗ ಆ ಮನುಜನ ಚಂಚಲ ಚಿತ್ತ, ವಿಚಲಿತ ಮನ ಅಲ್ಲೀ-ಇಲ್ಲೀ ಅನಾವಶ್ಯಕವಾಗಿ ಗಮನ ಹರಿಸದೆ, ಅಡೆತಡೆಗಳಿಂದ ಗೊಂದಲಕ್ಕೊಳಗಾಗದೆ ತಾನಂದುಕೊಂಡ ಗಮ್ಯದತ್ತ ಕುರಿಯ ಹಾಗೆ ‘ವಿಧೇಯತೆಯಿಂದ’ ನಡೆಯಲು ಸಾಧ್ಯವಾಗುತ್ತದೆ. ಸುತ್ತಲಿನ ದಿಕ್ಕು ತಪ್ಪಿಸುವ ಪ್ರಲೋಭನೆಗಳಿದ್ದರು ಅದರ ಕಣ್ಣಿಗೆ ಕುದುರೆಯ ಕಣ್ಣಿನಪಟ್ಟಿಯಂತದ್ದನ್ನು ಜೋಡಿಸಿದೆಯೇನೋ? ಎನ್ನುವ ಹಾಗೆ ಅಂತಾಗ ಪ್ರಚೋದನೆಗಳನ್ನು ನಿರ್ಲಕ್ಷಿಸಿಕೊಂಡೇ ಮುನ್ನಡೆಯಲು ಪ್ರೇರಣೆಯಾಗುತ್ತದೆ. ಇದನ್ನೇ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ – ಹೀಗೆ ಗುರಿಯತ್ತ ಹೊರಟ ಬಾಣದ ಗುರಿ ಎಷ್ಟು ದೃಢವಾಗಿ, ಎಷ್ಟು ನಿಖರವಾಗಿರಬೇಕೆಂದರೆ, ಅಲ್ಲಿ ಬಾಣ ಬೇಧಿಸಬೇಕಾದ ಗುರಿಯಾದ ಹಕ್ಕಿಯ ಕಣ್ಣಿನ ಹೊರತು ಮಿಕ್ಕಿದ್ದೇನೂ ಕಾಣಿಸಲೇಬಾರದು! ದ್ರೋಣರೊಡನೆ ಶಸ್ತ್ರಾಭ್ಯಾಸದಲ್ಲಿ ಅರ್ಜುನನಿಗೆ ಹಕ್ಕಿಯಕಣ್ಣು ಮಾತ್ರ ಕಾಣಿಸುತ್ತಿತ್ತಲ್ಲ – ಹಾಗೆ ; ದ್ರೌಪದಿಯ ಸ್ವಯಂವರದಲ್ಲಿ ಎಣ್ಣೆಯ ಕೊಳದ ಪ್ರತಿಬಿಂಬದಲ್ಲಿ, ಅರ್ಜುನನಿಗೆ ಕಾಣಿಸುತ್ತಿದ್ದ ಚಕ್ರದೊಂದಿಗೆ ತಿರುಗುತ್ತಿದ್ದ ಮೀನಿನ ಹಾಗೆ.

….ಧಾತು ಮಾತು ಕೂಡಿ.

ಹೀಗೆ ನಮ್ಮನ್ನೇ ಬಿಲ್ಲುಬಾಣವಾಗಿಸಿಕೊಂಡು ಗುರಿಯತ್ತ ಹೂಡಿಕೊಂಡು ನಡೆದಿದ್ದು ಶುಭಾರಂಭದಂತೆ. ಹಾಗೆ ನಡೆಯುವಾಗ, ಗುರಿ ಸಾಧನೆಗಾಗಿ ಯಾವ ರೀತಿಯ ನೀತಿ, ನಿಯಮಾವಳಿಗಳ ಆಸರೆಯಿರಬೇಕು ಎನ್ನುವುದರ ಸೂಚ್ಯ ದನಿ ಮುಂದಿನ ಈ ಪದಗಳಲ್ಲಿ ವ್ಯಕ್ತವಾಗುತ್ತದೆ. ಜೀವನದ ಯಾವುದೇ ಹೆಜ್ಜೆಯಲ್ಲೂ ಗುರಿಯ ಬೆನ್ನಟ್ಟಿ ಹೊರಟಾಗ ಸರಿಯಾದ ನೈತಿಕ ಹಾದಿಯಲ್ಲಿ ಸಾಗುವುದು ಸಾಧ್ಯವಿದ್ದಂತೆ, ಸೂಕ್ತವಲ್ಲದ ತಪ್ಪಾದ ಅಡ್ಡದಾರಿಯಲ್ಲಿ ನಡೆಯುವುದೂ ಸಾಧ್ಯ – ವೇಗವಾಗಿ ಮತ್ತು ಶೀಘ್ರವಾಗಿ ಗುರಿ ತಲುಪಬಹುದೆನ್ನುವ ದುರಾಸೆಯಲ್ಲಿ. ಇದು ಮಾನವಸಹಜ ದೌರ್ಬಲ್ಯ. ಅಂದ ಹಾಗೆ ಈ ಸಾಲಿನಲ್ಲಿ ಉದಾಹರಣೆಯಾಗಿ ಬಂಡ ಕುರಿ ಕೂಡ ಒಂದೇ ವೇಗದಲ್ಲಿ, ಒಂದೇ ದಾರಿಯಲ್ಲಿ ನಡೆಯುತ್ತಾ ಹೋಗುವುದೇ ಹೊರತು, ಅಡ್ಡಾದಿಡ್ಡಿ ಎಲ್ಲೆಂದರಲ್ಲಿ ಓಡಿಹೋಗುವುದಿಲ್ಲ. ಒಂದು ವೇಳೆ ಅವು ಅಂತಹ ಅಡ್ಡಾದಿಡ್ಡಿ ವೇಗದ ನಡಿಗೆಗೆ ಯತ್ನಿಸಿದರೂ, ಅದು ತಾಳಮೇಳವಿಲ್ಲದೆ ಯಾವುದೋ ಬೇಡದ ಗುರಿಯತ್ತ ನಡೆದ ಮತ್ತು ಗುಂಪಿನಿಂದ ಬೇರಾದ ಒಬ್ಬಂಟಿ ಪಯಣವಾಗುತ್ತದೆ. ಅದು ಪಯಣವೇ ಹೌದಾದರೂ, ಸಮಷ್ಟಿಯಾನದ ನಿಜವಾದ ಉದ್ದೇಶ ಅದಲ್ಲ ; ನೈಜದಲ್ಲಿ ಗುರಿಯತ್ತ ಸಾಗಬೇಕಾಗಿರುವ ವಿಧಿ, ವಿಧಾನವೂ ಅದಲ್ಲ. ಅದರಲ್ಲೂ ಜೀವಸೃಷ್ಟಿಯ ಹಿನ್ನಲೆಯಲ್ಲಿ ಮತ್ತು ಪಾಮರರ ದೃಷ್ಟಿಯಿಂದ ನೋಡಿದಾಗ – ಅದರ ಉದ್ದೇಶ, ಗಹನತೆಗಳು ಅರ್ಥವಾಗಿರಲಿ, ಬಿಡಲಿ ಪ್ರತಿಯೊಬ್ಬರೂ ಕುರಿಗಳ ಹಾಗೆ ತಮ್ಮ ಪ್ರಜ್ಞಾಪೂರ್ವಕ ಅರಿವು ಮತ್ತು ಪ್ರಯತ್ನದ ಹೊರತಾಗಿಯೂ ಗುರಿಯತ್ತ ಸಾಗಲು ಸಾಧ್ಯವಾಗುವಂತಿರಬೇಕು.

ಅಂದ ಮೇಲೆ ಆ ಗುರಿಯತ್ತಣ ನಡಿಗೆ ಹೇಗಿರಬೇಕು ಅಂದರೆ – ವಾಕ್ ಮತ್ತು ಅರ್ಥ ಹೇಗೆ ಒಂದಕ್ಕೊಂದು ಬಿಗಿಯಾಗಿ ಪರಸ್ಪರದೊಡನೆ ಬಂಧಿಸಲ್ಪಟ್ಟಿರುತ್ತದೆಯೊ ಅದೇ ರೀತಿಯ ಅವಿನಾಭಾವ ಸಂಬಂಧದಲ್ಲಿ ಅವೆರಡೂ (ಗುರಿ ಮತ್ತು ನಡಿಗೆ) ಜತೆಯಾಗಿ ಸಾಗಬೇಕು. ‘ಧಾತು ಮಾತು ಕೂಡಿ’ ಎಂದಾಗ ಆಡುವ ಮಾತು ಮತ್ತು ಇಡುವ ಹೆಜ್ಜೆ ತಾಳಮೇಳದ ಹಾಗೆ ಹೊಂದಿಕೊಂಡು ಹೋಗುತ್ತಿರಬೇಕು ಎಂಬರ್ಥ ಧ್ವನಿಸುತ್ತದೆ. ಇಲ್ಲಿ ಧಾತು ಎಂದಾಗ – ‘ಯಾವುದರ ಧಾತು?’ ಎಂದು ಪ್ರಶ್ನಿಸಿಕೊಂಡರೆ – ಮಾತಿನ ಧಾತು ಎಂದು ಅರ್ಥೈಸಬೇಕಾಗುತ್ತದೆ. ‘ಮಾತಿನ ಮೂಲಧಾತು ಯಾವುದು?’ ಎಂದಾಗ ಮನಸು, ಅಂತರಂಗ, ಅಂತಃಕರಣಗಳನ್ನೆಲ್ಲ ಮಾತಿನ ಉಗಮಮೂಲವಾಗಿ ಉಲ್ಲೇಖಿಸಬಹುದು. ಅಥವಾ ಮಾತಿನ ಮೂಲಾತಿಮೂಲವಾದ ಶಬ್ದಬ್ರಹ್ಮವನ್ನು ಸಮೀಕರಿಸಿ ನಾಭಿಚಕ್ರಕ್ಕೂ ಹೋಲಿಸಬಹುದು. ಸಾಧಾರಣವಾಗಿ ಮನಸಿನಲ್ಲಿ ಮೂಡಿ ಬರುವ ಆಲೋಚನೆ (ಧಾತು) ಮತ್ತು ಅದು ಮಾತಾಗಿ ಹೊರಬರುವ ರೀತಿ ಎರಡೂ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಮನಸಿನೊಳಗೊಂದು ಅಂದುಕೊಂಡರು ಹೊರಗೇನೋ ಹೇಳುವ ರೀತಿ ನಮ್ಮ ಸಾಮಾನ್ಯ ಅನುಭವ. ‘ಧಾತು ಮಾತಿನ’ ನಡುವೆ ಪ್ರಾಮಾಣಿಕತೆಯಿರದ ಇಂತಹ ಅನಾವರಣಕ್ಕೆ ‘ಒಳಗೊಂದು, ಹೊರಗೊಂದು’ ಎಂದು ಹೇಳುತ್ತೇವೆ. ಏಕೆಂದರೆ ಎರಡರ ನಡುವಿನಲ್ಲಿರುವ ಅಗೋಚರ ಶೋಧಕವೊಂದು ನಡುವೆ ತಲೆಹಾಕಿ ಆಡಬಹುದಾದ ಮತ್ತು ಆಡಬಾರದಾದ ಮಾತುಗಳಾಗಿ ವರ್ಗಿಕರಿಸಿ ನಡುವೆ ಅಂತರವನ್ನು ಸೃಷ್ಟಿಸಿಬಿಡುತ್ತದೆ. ಆಗ ಮಾತು ಮತ್ತು ಅದರ ಧಾತು ಎರಡೂ ಒಂದೇ ಆಗದೆ ಬೇರೆಬೇರೆಯಾಗಿಬಿಡುತ್ತವೆ – ತಮ್ಮಲ್ಲಿ ಅಪ್ರಾಮಾಣಿಕತೆಯನ್ನು ಅಂತರ್ಗತವಾಗಿಸಿಕೊಂಡು.

ಆದರೆ ನಿಜವಾದ ಗುರಿಯತ್ತ ಪ್ರಾಂಜಲ ಮನದಿಂದ ನಡೆವಾಗ, ಅದರ ಸಾಧನೆಗಾಗಿ ಯಾವುದೇ ಹೊಂದಾಣಿಕೆ, ರಾಜಿಗೆ ಒಳಗಾಗದೆ ಪ್ರಾಮಾಣಿಕವಾಗಿ ನಡೆಯಬೇಕು. ಒಳಗಿನ ಆಲೋಚನೆಯಿದ್ದ ಹಾಗೆಯೆ ಬಾಹ್ಯದಲ್ಲೂ ನಡೆದುಕೊಳ್ಳುವ ಶುದ್ಧ ನೈತಿಕ ಕಾಳಜಿ ತೋರಬೇಕು. ಅಂತಹ ಗಣನೆ, ಪರಿವೆಯಿರದೆ ಸುಮ್ಮನೆ ಗುರಿ ಸಾಧಿಸಿದೆನೆಂದರೆ ಅದು ಪ್ರಯೋಜನಕ್ಕೆ ಬಾರದು. ಗುರಿಯಷ್ಟೇ, ಅದನ್ನು ಸಾಧಿಸಲು ನಡೆದ ಹಾದಿಯು ಬಲುಮುಖ್ಯ – ಧಾತುಮಾತು ಕೂಡಿ ನಡೆದ ಹಾಗೆ. ಅವೆರಡು ಒಟ್ಟಾಗಿಯೆ ಇರಬೇಕೆ ಹೊರತು, ಬೇರೆಯಾಗಲ್ಲ ಎನ್ನುವ ಅದ್ಭುತ ಅದ್ವೈತದ ಭಾವವನ್ನು ಕಟ್ಟಿಕೊಡುತ್ತವೆ ಈ ಪದಗಳು. ಒಟ್ಟಾರೆ ಸಾರಾಂಶದಲ್ಲಿ ಯಾರು, ಒಳಗಿನಲ್ಲೂ – ಹೊರಗಿನಲ್ಲೂ ಒಂದೇ ರೀತಿ ಬದುಕಿ ಹುಟ್ಟುಸಾವಿನ ನಡುವಿನ ದೂರವನ್ನು ಸಾರ್ಥಕವಾಗಿ ಕ್ರಮಿಸುತ್ತಾರೋ – ಅವರು ಅಯಾಚಿತವಾಗಿಯೇ ತಮ್ಮ ಅಂತಿಮ ಗಮ್ಯ ತಲುಪಲು ಸುಲಭ ಸಾಧ್ಯ ಎನ್ನುವ ಇಂಗಿತ ಇಲ್ಲಿನ ಮತ್ತೊಂದು ಆಶಯ.

ಹೀಗೆ ಅಂತಿಮವಾಗಿ – ನಾನು ನೀನು ಆನು ತಾನುಗಳ ನಿರಂತರ ವ್ಯಾಪಾರದಲ್ಲಿ ಸೃಜಿಸಲ್ಪಟ್ಟ ನಾವು ಅದಾವುದೋ ಘನ ಉದ್ದೇಶದ ಹಿನ್ನಲೆಯಲ್ಲಿ ನಡೆದಿರುವ ಮಹಾಯಜ್ಞದಲ್ಲಿ ಪಾಲ್ಗೊಂಡಿರುವ ಪಾತ್ರಧಾರಿಗಳು ಎಂಬುದನ್ನು ಅರಿಯಬೇಕು. ಆ ಪಾತ್ರ ನಿಭಾವಣೆಯಲ್ಲಿ ನಮ್ಮ ಕರ್ತವ್ಯವನ್ನು ಮಾಡಿಕೊಂಡು ಹೋಗಬೇಕು – ಸರಿಯಾದ ಮತ್ತು ಮಹಾಯಜ್ಞಕ್ಕೆ ಪೂರಕವಾದ ಗಮ್ಯದತ್ತ ನಡಿಗೆ ಹಾಕುತ್ತ. ಆಗ ತಾವಾಗಿಯೇ ಮಿಡಿಯುವ ಆ ನಾಕುತಂತಿಗಳು ಈ ಸಂಕೀರ್ಣ ಜೀವನಸಾಗರವನ್ನು ದಾಟಿಸುವ ನಾವೆಯಾಗುತ್ತವೆ, ಹರಿಗೋಲಾಗುತ್ತವೆ. ಗೊಂದಲ ಗದ್ದಲಗಳಿಲ್ಲದ ಪ್ರಶಾಂತ ಅರಿವಿನ ಬದುಕಿಗೆ ಅಡಿಪಾಯ ಹಾಸುತ್ತವೆ. ಹೀಗಾಗಿ ನಾಕುತಂತಿಗಳೆಂಬ ಕಲ್ಪನೆ, ಸಂಕಲ್ಪವೇ ನಮ್ಮ ಬದುಕಿನ ಸಾರ್ಥಕತೆಯ ಅದ್ಭುತ, ರಮ್ಯ ಅನಾವರಣ ಎಂದು ಹೇಳಬಹುದು. ಅಂತದ್ದೊಂದು ಅದ್ಭುತ ಕವನವನ್ನು ನೀರು ಕುಡಿದಷ್ಟೇ ಸಲೀಸಾಗಿ ಬರೆದಿಟ್ಟ ಅಂಬಿಕಾತನಯದತ್ತರಿಗೊಂದು ಸುಧೀರ್ಘದಂಡ ನಮನ !

– ನಾಗೇಶ ಮೈಸೂರು

ಸೂಚನೆ: ಇದರೊಂದಿಗೆ ನಾಕುತಂತಿಯ ಎಲ್ಲಾ ಸಾಲುಗಳ ವಿವರಣೆ ಮುಗಿದಂತಾದರೂ, ಇದನ್ನು ಬರೆಯುವ ಪ್ರೇರೇಪಣೆ ಹೇಗೆ ಬಂತೆನ್ನುವುದರ ಹಿನ್ನಲೆ ವಿವರಣೆಯೊಂದಿಗೆ ಮುಂದಿನ ಕಂತಿನಲ್ಲಿ ಮುಗಿಸುತ್ತೇನೆ.

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

Picture source: https://alchetron.com/D-R-Bendre-1304749-W

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮ ಟಿಪ್ಪಣಿ ಬರೆಯಿರಿ