02060. ನಾಕು ತಂತಿಯ ಮೇಲಿನ ಟಿಪ್ಪಣಿ ಬರೆದುದ್ದರ ಹಿನ್ನಲೆ …


02060. ನಾಕು ತಂತಿಯ ಮೇಲಿನ ಟಿಪ್ಪಣಿ ಬರೆದುದ್ದರ ಹಿನ್ನಲೆ …
__________________________________________________


ಅಂಬಿಕಾತನಯದತ್ತರ ನಾಕುತಂತಿಗೊಂದು ಟಿಪ್ಪಣಿ ಬರಲಿ ಅಂತ ಹೆದರಿದವರ ಮೇಲೆ ಕಪ್ಪೆ ಎಸೆದದ್ದು ಗೆಳೆಯ ದೀಪಕ್. ಜಿ.ಕೆ. (Deepak GK) ಅವರ ಸಲಹೆಯನ್ನು ಪಕ್ಕಕ್ಕೆ ತಳ್ಳಿ ಸುಮ್ಮನಿದ್ದರಾಯ್ತು ಅನಿಸುವ ಹೊತ್ತಲ್ಲೆ, ಹೀಗೊಂದು ಪ್ರಯತ್ನ ಪಟ್ಟರೆ ಅರ್ಥಮಾಡಿಕೊಳ್ಳುವ ಸಾಧ್ಯತೆಯಾದರು ಇರುವುದಲ್ಲವೇ? ಅನಿಸಿತು. ಹೇಗೂ ಸಾಕಷ್ಟು ವಿವರಣೆ ಸಾಹಿತ್ಯಿಕ ಜಗದಲ್ಲಿ ಈಗಾಗಲೆ ಇರಬೇಕು, ಅದಕ್ಕೆ ಜೊತೆಯಾಗಿ ಮತ್ತೇನಾದರೂ ಹೊಳೆದರೂ ಹೊಳೆಯಬಹುದೇನೊ ಅನಿಸಿ ಒಂದು ಕೈ ನೋಡಲು ನಿರ್ಧರಿಸಿಯೆ ಬಿಟ್ಟೆ.. ಹಾಗೆ ಬರೆಯಹೊರಟ ಗಳಿಗೆಯಲ್ಲಿ ಮೊದಲು ಗಮನಕ್ಕೆ ಬಂದ ಸಂಗತಿ – ಬೇಂದ್ರೆಯವರ ಈ ಪದ್ಯದಲ್ಲಿ ನಾಲ್ಕು ಭಾಗಗಳಿವೆ ಎಂಬುದು. ಅದನ್ನು ನೋಡಿದಾಗ ತಟ್ಟನೆ ಅನಿಸಿತು – ನಾಕುತಂತಿ ಎನ್ನುವ ಹೆಸರಿಗೂ ಈ ನಾಲ್ಕು ಭಾಗಕ್ಕೂ ಏನಾದರೂ ಕೊಂಡಿಯಿರಬಹುದೇನೋ ಎಂದು.

ಹಾಗೆಂದುಕೊಂಡೆ ಮುನ್ನಡೆದಾಗ ನಾಕುತಂತಿ ಎನ್ನುವ ಹೆಸರಿನ ಮೂಲ ಏನಿರಬಹುದೆಂದು ಪ್ರಶ್ನೆ ಬಂತು. ತಂತಿ ಎಂದ ತಕ್ಷಣ ನಮಗೆ ಮನಸಿಗೆ ಬರುವುದು ತಂತಿಯ ಮೂಲಕ ನಾದ ಹೊರಡಿಸುವ ಸಂಗೀತ ವಾದ್ಯಗಳದು. ಅದರಲ್ಲೂ ವೀಣೆಯಂತಹ ಪಾರಂಪಾರಿಕ, ಸಾಂಪ್ರದಾಯಿಕ ವಾದ್ಯ ತಟ್ಟನೆ ಕಣ್ಮುಂದೆ ನಿಲ್ಲುತ್ತದೆ. ವೀಣೆಯಲ್ಲಿರುವ ಒಟ್ಟು ಏಳು ತಂತಿಗಳಲ್ಲಿ ನಾಲ್ಕು ಪ್ರಮುಖ ನಾದ ಹೊರಡಿಸುವ ತಂತಿಗಳಿರುವುದು ತುಸುವಾದರೂ ಸಂಗೀತ ಬಲ್ಲವರಿಗೆ / ಕಂಡವರಿಗೆ ಗೊತ್ತಿರುವ ಅಂಶ. (ಈ ನಾಲ್ಕು ತಂತಿಗಳನ್ನು ಕ್ರಮವಾಗಿ ಸಾರಣಿ, ಪಂಚಮ, ಮಂದ್ರ, ಅನುಮಂದ್ರ ಎನ್ನುತ್ತಾರೆ. ಮಿಕ್ಕ ಮೂರು ತಂತಿಗಳು ತಾಳದ ತಂತಿಗಳಂತೆ – ಮಧ್ಯ ಷಡ್ಜ, ಮಧ್ಯ ಪಂಚಮ, ತಾರಾ ಷಡ್ಜ ಅನ್ನುವ ಹೆಸರಿನವು). ಸಂಗೀತದ ‘ಓಂ’ ನಾಮವು ಗೊತ್ತಿರದ ನನ್ನಂತಹವನು ಇದರ ಬಗ್ಗೆ ಖಚಿತವಾಗಿ, ಪಾಂಡಿತ್ಯ ಪೂರ್ಣವಾಗಿ ಮಾತಾಡಬಲ್ಲ ಸಾಧ್ಯತೆ ಇಲ್ಲವಾದರೂ ನನಗನಿಸಿದ್ದು – ನಾಲ್ಕುತಂತಿಯ ನಾಲ್ಕು ಭಾಗಕ್ಕೂ ಈ ವಾದನದ ನಾಲ್ಕು ತಂತಿಗಳು ಹೊರಡಿಸುವ ನಿನಾದಕ್ಕೂ ಏನೊ ನಂಟಿರಬಹುದೇನೋ ಎಂದು. ಈ ನಾಲ್ಕುತಂತಿಗಳು ಹೊರಡಿಸುವ ಭಾವವನ್ನೇ ಪ್ರತಿ ಭಾಗದ ಕವನವು ಸೂಚ್ಯವಾಗಿ, ಸಾಂಕೇತಿಕವಾಗಿ ಹೊರಡಿಸುತ್ತಿದೆಯೆ ? ಎನ್ನುವುದು ಕುತೂಹಲಕರ ಅಂಶ. ಒಂದು ವೇಳೆ ಇದ್ದರೂ, ವಿವಿಧ ಧ್ವನಿಗಳನ್ನು ಹೊರಡಿಸುವ ಬೇಂದ್ರೆ ಕವನಗಳಲ್ಲಿ ಇದರ ಗ್ರಹಿಸುವಿಕೆಯೇನು ಸುಲಭದ ಮಾತಲ್ಲ. ಆ ಸಾಧ್ಯತೆಯನ್ನು ಮನಸಿನಲ್ಲಿಟ್ಟುಕೊಂಡೆ ಈ ಟಿಪ್ಪಣಿ ಬರೆಯಲು ಹೊರಟೆ..

ಕಾವ್ಯ ಪ್ರಪಂಚದಲ್ಲಿ ಒಂದು ಮಾತಿದೆ – ಬರೆಯುವಾಗ ಬರೆವವನ ಭಾವ ಏನೇ ಇದ್ದರು, ಓದುಗನ ಮನದಲ್ಲಿ ಯಥಾವತ್ ಅದೇ ಭಾವ ಉದಿಸಬೇಕೆಂದೇನೂ ಇಲ್ಲ. ಕವಿಯ ಮೂಲ ಆಶಯದೊಡನೆ ಕವಿಗೇ ಅರಿವಿರದಿದ್ದ ಅನೇಕ ಭಾವಗಳು, ಅರ್ಥಗಳು, ಆಶಯಗಳು ಹೊಳೆದುಬಿಡಬಹುದು. ಕೆಲವು ಕವಿ ಐಚ್ಚಿಕವಾಗಿ ಸೇರಿಸಿದ ಅಂಶಗಳಾಗಿದ್ದರೆ ಮಿಕ್ಕ ಹಲವು ಕವಿಯ ಕಲ್ಪನೆಯನ್ನು ಮೀರಿ ಹೇಗೆ ನುಸುಳಿಕೊಂಡ ಸೃಜನಾತ್ಮಕ ಆಯಾಮಗಳೂ ಆಗಿರಬಹುದು. ಹೀಗಾಗಿ, ಇಲ್ಲಿ ನಾನು ಬರೆದ ಟಿಪ್ಪಣಿಗಳೆಲ್ಲವೂ ಬೇಂದ್ರೆಯವರ ಮೂಲಕಲ್ಪನೆ ಅಥವಾ ಆಶಯವಾಗಿತ್ತು ಎಂದು ಹೇಳಿದರೆ ಅದು ಬರಿ ಉತ್ಪ್ರೇಕ್ಷೆಯಾದೀತು. ಅವರ ಆಶಯವೇನಿದ್ದೀತು ಎಂದು ಊಹಿಸಿಕೊಳ್ಳುತ್ತಲೇ, ಮತ್ತಾವ ಗೂಢಾರ್ಥಗಳು ಹುದುಗಿರಬಹುದೆಂಬ ಚಿಕಿತ್ಸಕ ದೃಷ್ಟಿಯಲ್ಲಿ ನೋಡಿದಾಗ ಕಂಡು ಬಂದ ಆಯಾಮಗಳನ್ನೆಲ್ಲ ಪರಿಗಣಿಸಿ ವಿವರಿಸಲೆತ್ನಿಸಿದ್ದೇನೆ – ನನಗೆ ತೋಚಿದ ಹಾಗೆ. ಶಾಸ್ತ್ರೀಯವಾಗಿ ಕನ್ನಡ ಅಧ್ಯಯನ ಮಾಡಿ ತನ್ಮೂಲಕ ಗಳಿಸಿದ ಪಾಂಡಿತ್ಯದಿಂದ ಬರೆದ ವಿದ್ವತ್ಪೂರ್ಣ ಬರಹವಿದಲ್ಲ. ಬದಲಿಗೆ ಬಾಲ್ಯದಲ್ಲಿ ಕಲಿತಿದ್ದ ಮತ್ತು ಇನ್ನು ಮಿಕ್ಕುಳಿದುಕೊಂಡಿರುವ ಸಾಮಾನ್ಯ ಸ್ತರದ ಕನ್ನಡ ಭಾಷಾಜ್ಞಾನವನ್ನೇ ಬಂಡವಾಳವಾಗಿಟ್ಟುಕೊಂಡು ಸಿದ್ಧಪಡಿಸಿದ ‘ಸಂತೆ ಹೊತ್ತಿಗೆ ಮೂರೂ ಮೊಳ ನೇಯ್ದನಂತಹ’ ಸರಕು. ಹೀಗಾಗಿ ಅಲ್ಲಲ್ಲಿ ಕಂಡುಬಂದಿರಬಹುದಾದ ವ್ಯಾಕರಣ ದೋಷ, ತಪ್ಪಾದ ಪದ ಪ್ರಯೋಗ, ಅಸಂಬದ್ಧ ವಾಕ್ಯ ಸಂಯೋಜನೆ, ತಪ್ಪಾದ ವಿವರಣೆ, ಅಸಂಗತತೆ, ಅಪರಿಪೂರ್ಣತೆ ಅಥವಾ ಗೊಂದಲ ಹುಟ್ಟಿಸುವ ವಿವರಣೆಗಳನ್ನೂ ನಾ ಮೇಲೆ ಹೇಳಿದ ಹಿನ್ನಲೆಯಲ್ಲಿ ದಯವಿಟ್ಟು ಮನ್ನಿಸಿಬಿಡಿ.

ಬರೆಯ ಹೊರಟಂತೆ ಒಂದೆರಡು ಕಂತಿನಲ್ಲಿ ಮುಗಿಸಬೇಕೆಂದು ಅಂದುಕೊಂಡಿದ್ದು ಹತ್ತಿರ ಹತ್ತಿರ ಇಪ್ಪತ್ತು ಕಂತುಗಳಾಗಿ ಹೋಯ್ತು. ಬರೆಯುವಾಗ ಏನೇನೋ ಹೊಸ ಅರ್ಥ, ಹೊಳಹುಗಳು ತೋಚುತ್ತಿದ್ದವು. ಅವು ತೋಚಿದ ಹಾಗೆಯೇ ಬರೆದುಕೊಂಡು ಹೋಗುತ್ತಿದ್ದೆ. ಇಷ್ಟು ವಿಸ್ತೃತವಾಗಿ ಬರಬಹುದೆನ್ನುವ ಕಲ್ಪನೆ ನನಗೂ ಇರಲಿಲ್ಲ. ಧೀರ್ಘವಾದರೂ ಅದರಲ್ಲಿ ಬಹುಶಃ ಅಷ್ಟಿಷ್ಟಾದರೂ ತಥ್ಯವಿರಬಹುದೆಂಬ ಭರವಸೆಯಿದೆ. ಹಾಗಿದ್ದರೂ ತೀರಾ ಧೀರ್ಘವಾಯಿತು, ಸಂಕೀರ್ಣವಾಯಿತು ಎನಿಸಿದ್ದರೆ ಮತ್ತೆ ಕ್ಷಮೆಯಿರಲಿ. ಇಷ್ಟು ಕಂತುಗಳನ್ನೆಲ್ಲ ಓದಿ, ಪ್ರತಿಕ್ರಿಯೆ ಹಾಕಿ ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ಹೃತ್ಪೂರ್ವಕ ನಮನಗಳು ಮತ್ತು ಕೃತಜ್ಞತೆಗಳು. ಇಂತಹ ಬರಹವೊಂದಕ್ಕೆ ಪ್ರೇರಣೆಯಾಗುವಂತಹ ಕವಿತೆಯನ್ನು ಸೃಜಿಸಿದ ಕವಿ ಅಂಬಿಕಾತನಯದತ್ತರಿಗೆ ಪೊಡಮಟ್ಟಿ ಶರಣು.

ಮುಖ್ಯವಾಗಿ ಇದನ್ನು ಬರೆಯಲು ಮೂಲ ಪ್ರೇರಣೆಯಾದ ಸನ್ಮಿತ್ರ ದೀಪಕ ಜಿ.ಕೆ. ಗೆ (Deepak GK) ಮತ್ತೆ ಎದೆಯಾಂತರಾಳದ ವಿನಮ್ರ ನಮನಗಳು ಮತ್ತು ಹೃತ್ಪೂರ್ವಕ ಧನ್ಯವಾದಗಳು. ಅವರ ಆಗ್ರಹಪೂರ್ವಕ ಕೋರಿಕೆಯಿಲ್ಲದಿದ್ದರೆ ನಾನಿದನ್ನು ಬರೆಯುವ ಕುರಿತು ಚಿಂತಿಸುತ್ತಲೂ ಇರಲಿಲ್ಲ ಎನ್ನುವುದು ಮಾತ್ರ ಅಪ್ಪಟ ಸತ್ಯ. ಅದಕ್ಕೆಂದೇ ಅವರು ಈ ವಿಷಯದಲ್ಲಿ ಸ್ತುತಾರ್ತರು ಮತ್ತು ವಂದನಾರ್ಹರು !

ನಮಸ್ಕಾರಗಳೊಂದಿಗೆ,

– ನಾಗೇಶ ಮೈಸೂರು
೦೭.೦೬.೨೦೧೭
(Picture source : internet)

Advertisements