02137. ಸೋಮಾರಿ ಮೈಸೂರು 😛


02137. ಸೋಮಾರಿ ಮೈಸೂರು 😛
_________________________


ಸೋಮಾರಿ ಮೈಸೂರು
ನಿನ್ನ ಮೆಚ್ಚದವರಾದರು ಯಾರು ?
ಇರು ಹೀಗೆ ನಿವ್ವಳ ಮೊತ್ತ
ಎಷ್ಟು ಬೇಕೋ ಅಷ್ಟೇ ಬೆಳೆಯುತ್ತ !

ಬೇಡಮ್ಮ ವೇಗದ ತೇರು
ಯಾರಿಗೆ ಬೇಕು ಟ್ರಾಫಿಕ್ಕಿನ ಜೋರು ?
ಏಳದಿದ್ದರು ಸರಿ ಏಳಕ್ಕೆ ಮೊತ್ತ
ಎದ್ದು ಬಿದ್ದು ಹೇಗೊ ಮಾಡಲು ಹೆಣಗುತ್ತಾ !

ಸುಮ್ಮನ್ಯಾಕೆ ಬೇಕು ಅರ್ಜೆಂಟು
ಇಲ್ಲವೇ ಅಡ್ಜಸ್ಟ್ ಆಗೋ ಮಂದಿ ಸುತ್ತ ?
ನಿಗದಿತ ವೇಳೆ ಹೆಸರಿಗೆ ಮೊತ್ತ
ಹತ್ತುವರೆಗಾಫೀಸು ತೆಗೆಯೊ ಹೊತ್ತ !

ಮಾತಿಗೆ ಸಿಕ್ಕೋ ಪುರುಸೊತ್ತಿನ ಮಂದಿ
ವಿರಾಮವದೆಲ್ಲಿರುವುದೋ ಮಸಲಾ ?
ಲೋಕಾಭಿರಾಮ ಚರ್ಚಿಸಿ ಮೊತ್ತ
ಬೈಟು ಕಾಫಿ ಚಹಾ ಬಜ್ಜಿ ಬೋಂಡಾ ಸಸ್ತಾ !

ಹಂಗೆ ಇವೆ ಅದೇ ಹಳೆ ಬೀದಿಗಳು
ಹೊಸದಾಗ್ತಾವೇನು ಹೊಸ ಬಡಾವಣೆ ?
ಇಲ್ಲಿಯವರೇ ಅಲ್ಲಿಗೆ ಹೋಗೆ ಮೊತ್ತ
ಕೊಂಡೊಯ್ಯುವರಲ್ಲ ಮತ್ತದನೆ ಬಿತ್ತುತ್ತಾ !

– ನಾಗೇಶ ಮೈಸೂರು
೩೧.೦೭.೨೦೧೭
(ಸುಮ್ನೆ ತಮಾಷೆಗೆ)
(ಚಿತ್ರ ಕೃಪೆ: ಸ್ವಯಂಕೃತಾಪರಾಧ)

Advertisements

02136. ಮರುಕಳಿಕೆ ಜಗದ ಜೀವಾಳ


02136. ಮರುಕಳಿಕೆ ಜಗದ ಜೀವಾಳ
______________________________


ಮತ್ತದೇ ಭಾವಗಳ ಬಿಕರಿ
ಹೊಸೆದರೆಷ್ಟು ಹೊಸ ಕವನ ?
ಮತ್ತೆ ಮತ್ತದೇ ‘ತರ್ಕಾ’ರಿ
ಮತ್ತದೇ ಪಾಕ ಹೊಸತನ !

ಮರುಕಳಿಕೆ ಜಗನಿಯಮ
ಯಾರೆಂದವರು ಬೇಸರಿಕೆ ?
ಮರುಕಳಿಸದಿರೆ ಸೃಷ್ಟಿ ನಿರಂತರ ಹೀಗೆ
ಮನುಕುಲವಿರುತ್ತಿತ್ತೇ ? ಬ್ರಹ್ಮ ನಿಯಮ !

ಮರಳಿ ಮರಳಿ ಬೆಳೆದ ಬೆಳೆ
ಮರಳುತಿಲ್ಲವೇ ಅದೇ ನೀರಲಿ ?
ಮತ್ತದೇ ಕೂಳು ಹುಳಿ ಪಲ್ಲೆ ಕೂಟು
ಸಾಗಿಲ್ಲವೆ ಸತತ ಪೀಳಿಯಿಂದ ಪೀಳಿಗೆ ?

ಅದೇನಂಥಾ ಆಧುನಿಕತೆ ಬಿಡು
ಉಡುವ ವಸ್ತ್ರ ವೈವಿಧ್ಯತೆ ನೂರು
ಅಂದಿನಿಂದಿಂದಿನವರೆಗೂ ಮಾನ
ಮುಚ್ಚುವದೇ ಮೂಲ ಪುನರುತ್ಥಾನ..

ಮೂಗು ಮುರಿಯಬೇಡ ಮರುಕಳಿಕೆ
ಜಗ ನಿಯಮ ಕರ್ಮ ಪುನರ್ಜನ್ಮ
ಹೊಸ ಶೀಶೆಗದೇ ಹಳೆಮದ್ಯ ತುಂಬಿಸಿ
ಆಯುವಿನಂತರದಲಿ ಚಲಾಯಿಸೊ ನಿಗೂಢ..

– ನಾಗೇಶ ಮೈಸೂರು
೩೦.೧೦.೨೦೧೭
(Picture source: http://bigpicturequestions.com/what-is-karma-in-modern-spiritual-science/)

02135. ಅನಂತಕೆ ಜಾರಿದ ಮನ..


02135. ಅನಂತಕೆ ಜಾರಿದ ಮನ..
______________________________________


ತೊಟ್ಟಿಕ್ಕುತ್ತಿದೆ ಹನಿ, ಮಾಡಿಂದ ಜಾರಿ
ಮಳೆಯೋ? ಹನಿಯೊ? ನೆನಪೊ? ಕಂಬನಿಯೊ ?
ಕಿಟಕಿಯ ಹಿಂದೆ ನಿಂತು ಸರಳ ಹಿಡಿದು
ನೋಡುತ ನಿಂತವಳ ಮನ ಭೂಪಠದ ಚಿತ್ರಣವೋ ?

ಸದ್ದಿಲ್ಲದೇ ಸುರಿವ ಮಳೆ ಸದ್ದಷ್ಟೇ ಪ್ರಸ್ತುತ
ಸಡ್ಡು ಹೊಡೆದು ಸುತ್ತ, ನೀರವತೆ ನಿರಾಯಾಸ
ವರ್ಷಿಣಿ ಗಾಯನ ಮಾತ್ರ ಮೌನದ ಸದ್ದಂತೆ
ಪ್ರಕ್ಷೇಪಿಸಿ ತಲ್ಲಣ ಸೂತ್ರ ಚಂಚಲ ಮನಸಂತೆ !

ನಿರೀಕ್ಷಿಸಿಹಳೇನೋ ಅಸ್ಪಷ್ಟ ತನ್ನರಿವಿಲ್ಲದೆ
ನಿಲ್ಲಬಾರದು ಸುರಿತವೆನ್ನೋ ಆಸೆ ಮಾತ್ರ ಖಚಿತ
ಕನಸುಗಳ ಚೆಲ್ಲಾಟ ಬಹನೋ ಬಾರನೋ ಅವ ?
ಲೆಕ್ಕಿಸದೇ ಮುಸಲಧಾರೆ ಕುದುರೆಯೇರಿ ರಾಜಕುವರ !

ಮುಸಿಮುಸಿ ನಗೆ ಚೆಲ್ಲಿ ಹುಸಿ ಮುಗ್ದತೆ ಸ್ತಬ್ಧ
ಧುತ್ತೆಂದೆಲ್ಲಿಂದಲೋ ಆಗಮ ಪಕ್ವತೆ ಪ್ರಬುದ್ಧ
ತಂಗಾಳಿಗಾಡೋ ಮುಂಗುರುಳು ಮುಚ್ಚುತ ಕಣ್ಣ
ನೆಟ್ಟ ನೋಟ ಎತ್ತಲೋ ಸರಿದಾಟವನೂ ಗಮನಿಸದಲ್ಲ !

ನೆನೆದಿಹಳೆನೋ ಕಾಣದು ಜತೆ ನೆನೆಯುತ್ತಿದೆ ಧರಣಿ
ನೆನಪಿನ ಕೋಟೆಗೆ ಲಗ್ಗೆ ಭಾವವೊ? ಕಲ್ಪನೆಯೋ? ಸ್ಮೃತಿಯೊ?
ಅಯೋಮಯವೆಲ್ಲಾ ಪುಳಕ ಮಳೆ ಹೊತ್ತಿನ ಕೈಚಳಕ
ನೋಡಿಹಳು ತಲ್ಲೀನ ಅನಂತ ನಿಲ್ಲದಿರಲೆಂದು ಬೇಡುತ!

– ನಾಗೇಶ ಮೈಸೂರು
೩೦.೦೭.೨೦೧೭

(Picture source: http://onedio.co/content/21-problems-to-relate-if-you-hate-winter-10292)

02134. ಮಾಡಿದ್ದು, ಮಾಡದ್ದು..


02134. ಮಾಡಿದ್ದು, ಮಾಡದ್ದು..
__________________________________


ಮಾಡಿದ್ದೆಲ್ಲಾ ಪಟ್ಟಿ, ಬರಿ ಅಪರಾಧಗಳೇ ಗಟ್ಟಿ
ಮಾಡಬೇಕಿದೆಯಿನ್ನೆಷ್ಟೋ, ಕೊನೆ ಮೊದಲಿಲ್ಲದ ಯಾದಿ

ಯಾದಿ ಫಿರ್ಯಾದಿ ಗಣನೆ, ಅತ್ತುಬಿಟ್ಟೆಲ್ಲಾ ಗಳಗಳನೆ
ಮುತ್ತಿ ಕಾಡುವ ಚಿಂತೆ, ಯಾಕೋ ಮುಟ್ಟಲಿಲ್ಲವಿನ್ನೂ ಕೊನೆ

ಮಾಡಬಾರದು ನಿಜ, ಹಾಳು ಮನಸಲ್ಲ ತಾಜಾ
ಖನಿಜ ದೊರಕುವುದೇ ಕಲ್ಮಶ, ಸಂಸ್ಕರಿಸಬೇಕು ತಿಳಿಗೆ

ತಿಳಿಗೇಡಿ ಮರಳಿಸಿ ಮತ್ತೆ, ತಪ್ಪುಗಳಾಗಿಸೋ ಕ್ಷುಲ್ಲಕ
ಭಲ್ಲೆಯಿಂದಿರಿವಾ ಮಾತು, ಹೊರಡಿಸೋ ಧೂರ್ತ ಶುನಕ

ಮಾಡಬೇಕಿರುವುದ ಬಿಟ್ಟು, ಮಾಡಬಾರದ್ದರ ಪಟ್ಟಿ ಮಾಡಿ
ಪಾಲಿಸಬೇಕಿದೆ ಅವಡು ಕಚ್ಚಿ, ತಾನಾಗೇ ಆಗಲಿ ಬೇಕಿದ್ದುದು.

– ನಾಗೇಶ ಮೈಸೂರು
೨೭.೦೭.೨೦೧೭

(ಚಿತ್ರ : ಸ್ವಯಂಕೃತಾಪರಾಧ )

02133. ಬಾ ಬಾರೆ ಭಯ ಭೀತಿಯ ತೊರೆದು


02133. ಬಾ ಬಾರೆ ಭಯ ಭೀತಿಯ ತೊರೆದು
____________________________________


ಮನದೊಳಗಡಿಯನಿಡುವವಳು, ತೊದಲು ನುಡಿಯೇಕೆ ?
ಬಿಡು ಬೆರಗು ಭಯ ಭೀತಿ, ನಿನ್ನಾವರಣವಿದು ಮರುಳೆ !

ಯಾಕಲ್ಲಿ ಬೆವರ ಹನಿ, ಹಣೆ ಸಾಲಾಗಿ ಮಣಿ ಸಂದಣಿ ?
ಸಾಲದೇ ಮುತ್ತಿನ ಹಾರ ? ಕೊರಳ ಫಳಫಳಿಸಿಹುದೆ..

ತುಸು ಲಜ್ಜೆಯಿದೆ ಮುಖದಲಿ, ಪ್ರತಿಫಲಿಸುತಿದೆ ಹೆಜ್ಜೆಯಲಿ
ಎಲ್ಲಿಂದೆಲ್ಲಿಗೆ ಕೊಂಡಿ ತರುವೆ ? ಹೆಬ್ಬೆರಳಲೇಕೆ ನೆಲ ಕೆರೆವೆ ?

ಮುಡಿದ ಮಲ್ಲಿಗೆ ದಂಡೆ ಪಾಳಿ, ಇಣುಕಿಸಿದೆ ತೂಗಾಡಿಸಿ ಗಾಳಿ
ಮುಂಗುರುಳಿಗಿಲ್ಲ ಜತೆಯಿಲ್ಲದ ಚಿಂತೆ, ನೀನೇಕೆ ಮತ್ತಲ್ಲೇ ನಿಂತೆ ?

ಕಾಲವದು ಸರಿದು ಪುರಾತನ, ಆಧುನಿಕತೆ ಕಾಲಿಟ್ಟು ಅನನ್ಯ
ಕಾಲ ಹಿಡಿದಿದೆಯೇಕೆ ನಾಚಿಕೆ ? ಉಲಿಯಬಿಡಪರೂಪಕೆ ಗೆಜ್ಜೆ!

ಹೋಯಿತೆಲ್ಲಿ ಪಾಂಡಿತ್ಯದ ಸಾಂಗತ್ಯ? ದನಿ ನಡುಗುವ ಈ ಸತ್ಯ
ಮುಚ್ಚಿಡದಲ್ಲ ಹಾಡಿನ ಏರಿಳಿತ, ನಿನದಲ್ಲ ಬಿಡು ಈ ಭಾವದ ಸಖ್ಯ..

ಬಿಡು ಬಸವಳಿಯಬಿಡದೆ ಮನಸ, ಬಿಚ್ಚಿಡುವ ಕಟ್ಟಿದ ಕನಸ
ಹಾಸಿ ಪಗಡೆ ಹಾಸು ಅಳಿಗುಳಿ, ಮಕ್ಕಳಾಗುವ ನೆಚ್ಚುವವರೆಗೆ

ಹಾವು ಏಣಿಯಾಟ ಬದುಕಂತೆ, ಏಣಿಯಾಗೋಣ ಪರಸ್ಪರ
ಬರಲೇಳು ನದಿ ಪ್ರವಾಹ, ಹುಟ್ಟಾಗು ದೋಣಿಯಾಗುವೇ ನಾ

ಸಾಕಲ್ಲವೇ ಗೆಳತೀ ವಚನ? ಬೇಕೇನು ಆಣೆ ಪ್ರಮಾಣ ?
ನಂಬಲಿ ಬಿಡಲಿ ಕಾಲ, ನಂಬಿಕೆಯನದೆ ನಡೆಸುವ ನಾಣ್ಯ


– ನಾಗೇಶ ಮೈಸೂರು
೨೭.೦೭.೨೦೧೭

(Picture Source : internet / social media)

02132. ಕಡಲ ತೀರದಲೊಂದು ಹೆಜ್ಜೆ..


02132. ಕಡಲ ತೀರದಲೊಂದು ಹೆಜ್ಜೆ..
________________________________


ಉಕ್ಕುತಿದೆ ಕಡಲು, ಉಕ್ಕುಕ್ಕಿಸುತ ಒಡಲು
ನಕ್ಕು ನಲಿವಲೆಯು, ತೆರೆತೆರೆಯ ಮರೆ ಬಯಲು ||

ಕಪ್ಪೆಚಿಪ್ಪಿನ ಸುರತ, ಮರಳಲುರುಳಾಡುವ ಸ್ವಗತ
ನುಚ್ಚು ಮರಳಿನ ರೀತಿ, ನೂರಾಗಿ ಸ್ವಚ್ಚ ಮನ ಕವಿತ ||

ಅಲ್ಲೊಂದಿಲ್ಲೊಂದು ಶಂಖ, ಬಾರಿಸೆದೆಯೊಳ ಡೊಂಕ
ಬಿಟ್ಟು ಬಿಗುಮಾನ ಬಿಂಕ, ನಡೆವ ಪಾದದ ಬಿಸಿ ಕುಹಕ ||

ಬಿಸಿಲು ಬೆಚ್ಚಿಸಿದ ರಾಶಿಕಣ, ತಣ್ಣೀರಲೆ ನೇವರಿಸೋಣ
ತಂದೊತ್ತಿಕ್ಕುತ ಕಲ್ಲು ನುಣುಪು, ಬನ್ನಿ ಆರಿಸಿಕೊಳ್ಳೋಣ ||

ಭುವಿ ತೊಗಲ ಮಲಿನ ಪಾತ್ರೆ, ಮಾಡಿಟ್ಟಿದೆ ಜನ ಜಾತ್ರೆ
ನಿತ್ಯ ತೊಳೆವಾ ಶರಧಿ, ಸೆರಗಡಿ ಸರದಿ ಹಗಲು ರಾತ್ರೆ ||

– ನಾಗೇಶ ಮೈಸೂರು
೨೭.೦೭.೨೦೧೭
(ಚಿತ್ರ : ಸ್ವಯಂಕೃತಾಪರಾಧ)

02131. ಆಷಾಢ ಭಾದ್ರಪದ ನಡುವೆ


02131. ಆಷಾಢ ಭಾದ್ರಪದ ನಡುವೆ
________________________


ಸಮನೆ ಬಿಕ್ಕುತಿದೆ ಶ್ರಾವಣ
ಮುಸಲಧಾರೆಗೆ ಮುನ್ನುಡಿ
ಬಿಟ್ಟುಹೋದ ಆಷಾಢ ಕೆಳೆ
ದಕ್ಕದೆ ಹೋದ ವಿರಹಗಳು

ಯಾರರೆಲ್ಲಾ ಹೊದ್ದರೋ ?
ಆಷಾಢದ ತುಂತುರು ಗಾಳಿ
ಸೋನೆ ಸಿಡುಕುವ ಮುನ್ನ
ಚಡಪಡಿಸುತ್ತಾ ಶ್ರಾವಣ

ಅತ್ತ ಅಳಲಲ್ಲ ನಗಲಿಲ್ಲ
ದುಃಖ ದುಮ್ಮಾನ ಸುಖವಲ್ಲ
ಎದೆಯಲೇನೋ ತೀಡಿ ಒತ್ತಿದ ಹಾಗೆ
ತುಂಬಿದ ನದಿ ಭೋರ್ಗರೆತ ಒಳಗೆ

ಹಬ್ಬದ ಸಂಭ್ರಮ ಹಾಡು
ಶ್ರಾವಣಿಯ ಎದೆಗೂಡು
ಗೆಲ್ಲ ಹೊರಟವರ ಗೆದ್ದು ಬಿಡೆ
ಬಿದ್ದವರ ಕನಸೆಚ್ಚರ ಕೆಸರು..

ಮುದವದು ಶ್ರಾವಣ ಶ್ರವಣ
ಆಷಾಢ ಹಿನ್ನಲೆ ಗಾಯನ
ನೆನಪ ತಳ್ಳುತ ಜೀವ ದುಂಬಿ
ಹೂವಾಗಿ ಭಾದ್ರಪದ ಗುಂಗು !

– ನಾಗೇಶ ಮೈಸೂರು
೨೭.೦೭.೨೦೧೭
(ಚಿತ್ರ : ಸ್ವಯಂಕೃತಾಪರಾಧ)