02096. ಸರ್ವಜ್ಞನ ಪದಗಳು (0001)


02096. ಸರ್ವಜ್ಞನ ಪದಗಳು (0001)
_______________________________

 

ಸಾಮಾನ್ಯ ಸರ್ವಜ್ಞನ ಪದಗಳು ಸರಳವಾಗಿ ಎಲ್ಲರ ಗ್ರಹಿಕೆಗೂ ಸುಲಭದಲ್ಲಿ ಎಟುಕುವಂತಿರುತ್ತದೆಯಾದರು ಕೆಲವೊಂದು ಪದಗಳ ಅರ್ಥ ಗೊತ್ತಾಗದೆ ತಿಣುಕಾಡುವುದು ಸಾಧ್ಯ. ಸುಮ್ಮನೆ ಒಂದು ತ್ರಿಪದಿ ವಿವರಿಸಲು ಪ್ರಯತ್ನಿಸೋಣವೆಂದು ನೋಡಿದೆ. ಅದರ ಫಲವಿದು.

ನಂದಿಯನು ಏರಿದನ | ಚಂದಿರನ ಸೂಡಿದನ |
ಕಂದನ ಬೇಡಿ , ನಲಿದಾನು ನೆನೆವುತ್ತ |
ಮುಂದೆ ಪೇಳುವೆನು ಸರ್ವಜ್ಞ||೦೦೦೧||

ಇದು ಸರ್ವಜ್ಞನ ಮೊದಲ ತ್ರಿಪದಿಯಿದ್ದಂತಿದೆ. ತನ್ನ ಪದ್ಯಗಳಿಗೆ ಮುನ್ನುಡಿಯೆಂಬಂತೆ ಈ ಪದಗಳ ಮೂಲಕ ಆರಂಭಿಕ ಪೂಜೆ ಸಲ್ಲಿಸಿ ಮುಂದುವರೆಯುವ ಇಂಗಿತ ಇದರಲ್ಲಿ ಕಾಣಿಸಿಕೊಂಡಿದೆ.

ನಂದಿಯನು ಏರಿದನ : ಅರ್ಥಾತ್ ನಂದಿಯನ್ನು ಏರಿದವನು, ನಂದಿಯನ್ನು ವಾಹನವಾಗಿ ಉಳ್ಳವನು – ಅಂದರೆ ಶಿವ (ನಂದಿಯನ್ನು ವಾಹನವಾಗುಳ್ಳವನ)

ಚಂದಿರನ ಸೂಡಿದನ : [ಸೂಚನೆ: ಹಲವಾರು ಗೆಳೆಯರು (Maniyoor Shrinidhi Acharya,ಸುಬ್ರಹ್ಮಣ್ಯ ಬಿ.ಎ. Yamunab Bsy) ಪ್ರತಿಕ್ರಿಯಿಸಿ ಸೂಡಿ ಎಂದರೆ ತಲೆಯ ಕೂದಲು ಸೇರಿಸಿ ಕಟ್ಟುವ ಗಂಟು, ತಲೆಗೆ ಕಟ್ಟುವ ಬಾಸಿಂಗ, ಮುಡಿ ಇತ್ಯಾದಿ ನೇರಾರ್ಥವಿರುವುದನ್ನು ಹೇಳಿದ್ದಾರೆ . ಹೀಗಾಗಿ ಮುಡಿಯಲ್ಲಿ ಚಂದಿರನನ್ನ ಧರಿಸಿದ ಶಿವ ಎನ್ನುವ ಅರ್ಥ ನೇರವಾಗಿ ಹೊರಡುತ್ತದೆ. ಆದರೂ ಅಧಿಕ ವಿವರಣೆಯಾಗಿ ಮೊದಲಿನದನ್ನು ಉಳಿಸಿಕೊಂಡಿದ್ದೇನೆ – ಮೂಲಾರ್ಥಕ್ಕೆ ಕುಂದು ಬರುವುದಿಲ್ಲವಾದ ಕಾರಣ.ಎಲ್ಲರಿಗು ಧನ್ಯವಾದಗಳು – ಒಂದು ಹೊಸ ಪದ ಕಲಿಸಿದ್ದಕ್ಕೆ 🙏😊]

ಇದನ್ನು ಸರಿಯಾಗಿ ಅರ್ಥೈಸಲು ಮೊದಲು ಎರಡನೇ ಪದದ ಅರ್ಥ ನೋಡಬೇಕು. ‘ಸೂಡಿ’ ಪದದ ಅರ್ಥ – ಪಂಜು, ದೀವಟಿಗೆ, ದೊಂದಿ,ಸೂಟಿ, ಕೊಳ್ಳಿ ಎಂದೆಲ್ಲಾ ಆಗುತ್ತದೆ. ಒಟ್ಟಾರೆ ಬೆಳಕು ನೀಡುವಂತಾದ್ದು ಎನ್ನುವ ಅರ್ಥದಲ್ಲಿ ನೋಡಬಹುದು. ‘ಚಂದಿರನ ಸೂಡಿದನ’ ಎಂದಾಗ ಚಂದಿರನನ್ನೇ ದೀವಟಿಗೆಯಾಗಿ, ದೊಂದಿಯಾಗಿ ಧರಿಸಿದವನು ಎಂದು ಅರ್ಥೈಸಿದರೆ ಅದು ಕೂಡ ‘ಶಿವ’ ನ ಮತ್ತೊಂದು ಸ್ವರೂಪದ ವರ್ಣನೆಯಾಗಿ ಕಾಣಿಸುತ್ತದೆ. (ಒಟ್ಟುಗೂಡಿಸಿದರೆ ನಂದಿಯನ್ನೇ ವಾಹನವಾಗಿಸಿಕೊಂಡ ಮತ್ತು ಚಂದಿರನನ್ನೇ ದೀಪದಂತೆ ಧರಿಸಿರುವ ಶಿವನ..ಎಂದಾಗುತ್ತದೆ)

(ಶಿವನ) ಕಂದನ ಬೇಡಿ : ಅಂತಹ ಶಿವನ ಕಂದನ ಬೇಡುತ್ತ; ಶಿವನ ಕಂದನೆಂದರೆ ಇಲ್ಲಿ ಗಣಪತಿ – ಯಾಕೆಂದರೆ ಎಲ್ಲಾ ಶುಭ ಕಾರ್ಯಗಳಿಗೂ ಮೊದಲು ಪೂಜಿಸಿ, ನಮಿಸಿ ಹೊರಡುವುದು ಅವನಿಗೆ ತಾನೇ ? ( ಶಿವಪುತ್ರ ಗಣಪನ ಬೇಡಿಕೊಳ್ಳುತ್ತ..)

(ಅಂತಹ ಗಣಪನ) ನಲಿದಾನು ನೆನೆವುತ್ತ : ನಲಿದಾನು ಅನ್ನುವುದನ್ನು ನಲಿದು + ನಾನು ಎಂದು ಬಿಡಿಸಿದರೆ , ‘ನಲಿವಿನಿಂದ-ಸಂತೋಷದಿಂದ-ಮನಸಾರೆ + ನಾನು’ ಎಂದಾಗುತ್ತದೆ. ನೆನೆವುತ್ತ – ಅಂದರೆ ನೆನೆಯುತ್ತ ಅಥವಾ ಭಕ್ತಿಯಿಂದ ನೆನಪಿಸಿಕೊಳ್ಳುತ್ತಾ. ಸೇರಿಸಿ ಓದಿದರೆ – ‘(ಗಣಪತಿಯನ್ನು) ಮನಸಾರೆ ಸಂತಸದಿಂದ ನೆನೆಯುತ್ತ’ ಎಂದು ಅರ್ಥೈಸಬಹುದು.

ಮುಂದೆ ಪೇಳುವೆನು ಸರ್ವಜ್ಞ: ಮುಂದಿನ ಪದ್ಯಗಳನ್ನು ಹೇಳುವೆನು (ನಿನ್ನ ಆಶೀರ್ವಾದದೊಂದಿಗೆ ಈ ಬರೆಯುವ ಕಾರ್ಯ ಮುಂದುವರೆಸುತ್ತೇನೆ)

(ಸಾರಾಂಶ : ನಂದಿವಾಹನನಾದ, ಚಂದ್ರಧರನಾದ ಆ ಶಿವಪುತ್ರ ವಿನಾಯಕನನ್ನು ಮನಸಾರೆ ಭಕ್ತಿಪೂರ್ವಕವಾಗಿ ಹರಸು-ಆಶೀರ್ವದಿಸೆಂದು ಬೇಡಿಕೊಳ್ಳುತ್ತೇನೆ ; ಮುಂದಿನ ಪದ್ಯಗಳನ್ನು ಮುಂದುವರೆಸಿಕೊಂಡು ಹೋಗುವ ಕಾರ್ಯದಲ್ಲಿ ನೆರವಾಗೆಂದು ಪ್ರಾರ್ಥಿಸಿಕೊಳ್ಳುತ್ತೇನೆ)

– ನಾಗೇಶ ಮೈಸೂರು
# ಸರ್ವಜ್ಞ

( ತಪ್ಪಾಗಿ ಅರ್ಥೈಸಿದ್ದರೆ ಬೈದುಕೊಳ್ಳಬೇಡಿ; ದಯವಿಟ್ಟು ತಿದ್ದಿ 😊🙏)

(Picture : Wikipedia: https://en.m.wikipedia.org/wiki/Sarvajna#/media/File%3ASarvagna.jpg)

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s