02098. ಇರುಳಿಗೆಲ್ಲವೂ ಭೀತಿ


02098. ಇರುಳಿಗೆಲ್ಲವೂ ಭೀತಿ
________________________

ನಿಶ್ಯಬ್ದ ನೀರವ ರಾತ್ರಿ
ಗುಡಿ ಪ್ರಾಂಗಣ ಸುತ್ತ ಹಾಸು
ಗೋಡೆಯೆತ್ತರಕು ಜಿಗಿದ ಕತ್ತಲು
ನೆರಳಿನಾಟಕೆ ಬಿದ್ದು ಜೋತು
ಸುಯ್ಗಾಳಿಯೂ ಸ್ತಬ್ದ.

ತಟ್ಟನೆ ನಿಂತು ಹೋದವು
ಬಸ್ಸು ಕಾರು ಮೋಟಾರು ಸದ್ದು
ದೂರದಲ್ಲೆಲ್ಲೋ ಓಡುವ
ಕ್ಷೀಣ ಶಬ್ದ ಕುರುಹಿಲ್ಲ ಇಲ್ಲಿ
ಮೌನವೇ ಗಯ್ಯಾಳಿ.

ಗಿಜಿಗಿಜಿಗುಟ್ಟುವ ಮಂದಿ
ಹೊತ್ತು ಹರಕೆ ಹೂವು ಹಣ್ಣು
ಚೆಲ್ಲಾಡಿದ ಅರಿಶಿನ ಕುಂಕುಮ
ಆರಿದೆಳ್ಳು ಬತ್ತಿ ದೀಪದ ಸೊಲ್ಲು
ಯಾರೊಬ್ಬರ ಸುಳಿವಿಲ್ಲ.

ಪ್ರಶಾಂತವೋ ಭಯಾನಕವೋ
ದಿವ್ಯ ದರ್ಶನಕಿಲ್ಲ ಸರತಿ
ಸಾಲುಗಟ್ಟಲೆ ತಾಸು ತ್ರಾಸ
ಬೇಕಿಲ್ಲದ ಕಾಸುಗಾರಿಕೆ
ಬಾಗಿಲೇ ತೆರೆದಿಲ್ಲ !

ಕಿಟಕಿಯಿಂದಿಣುಕಿ ನೋಟ
ಬಂದಂತಾಯ್ತವಳಾರೋ ಎದುರಲಿ
ಗುಡಿಯ ದೇವಿಯೊ, ಮೋಹಿನಿಯೊ ?
ತಟ್ಟನುದಿಸಿ ಭಕ್ತಿಯಲೇ ಭೀತಿ
ಮುಚ್ಚಿತು ಕಿಟಕಿ, ಪರದೆ ಸಹಿತ..


– ನಾಗೇಶ ಮೈಸೂರು
೦೬.೦೭.೨೦೧೭
(Picture source : Creative Commons / social media / internet )

02097. ಓಡ್ಬೇಡಿ ಓದ್ಬಿಡಿ


02097. ಓಡ್ಬೇಡಿ ಓದ್ಬಿಡಿ..😎
_________________

(೦೧)
ನಿದ್ದೆ ಸುಳಿಯದ ಹೊತ್ತಲಿ
ಸಡ್ಡು ಹೊಡೆದು ಶುದ್ಧ
ಸದ್ದಾದವು ನೋಡಿ
ಸಮಯ ಕಾದು ;
ಮೊದ್ದಾದವು ಹೆತ್ತವರ
ಹೆಗ್ಗಣದ ಪಾಡು !

(೦೧)
ಇಲ್ಲೀಗ ಒಂದು ಗಂಟೆ ರಾತ್ರಿ
ಎಲ್ಲಾ ನೀರವ
ಮನಸಲ್ಲಿ ಮಾತ್ರ ಕಲರವ
ಗೋಜಲು ಭಾವ ನಿರ್ಭಾವ
ಗೊತ್ತಾಗದದೇನಿದೆ ಅಭಾವ
ರಾತ್ರಿಯೊಂದು ಗಂಟೆ..

(೦೨)
ಎಷ್ಟಾದರೇನು ಗಂಟೆ
ಅರಿವಾಗದು ಎಷ್ಟೋ ಮನಸು ಗಂಟೆ !
ಗಂಟ ಬಿಚ್ಚಿದರು ಗಂಟೆ
ಮತ್ತೆ ಕಾಡುವ ತಂಟೆ..
ಗಂಟೆಯಾಗುತ ಒಳಗೆ
ಸದ್ದಾಗುತ್ತಿದೆ ಮೌನ.

(೦೩)
ಮೌನವನಪ್ಪಲೊ
ನಿನ್ನನಪ್ಪಲೊ
ಸಂದಿಗ್ದ ;
ನೀನಿರುವ ದೂರ
ತೀರದ ಬಾಧೆ
ಮೌನವನಪ್ಪಿ
ಮೌನದಿ ಕೂತಿದೆ !

(೦೪)
ಇವತ್ತೇನೋ ಬೇಸರ
ಯಾವುದಕ್ಕೂ ಮೂಡಿಲ್ಲ.
ಅದೇ ಬೇಸರಕೋ ಏನೋ
ಕವಿತೆಯವಳು ಮೂಡಿಲ್ಲ ..
ಬಿಟ್ಟವಳ ಕೂತೆ ಒಂಟಿ
ಬಿಡದವಳು ಕಾಡುವ ತುಂಟಿ !

(೦೫)
ಯಾರೆಂದರವಳು ಯಾರಲ್ಲ ?
ಯಾರೆನ್ನುವ ಪ್ರಶ್ನೆಯೇ ಅವಳು
ಯಾರೆನ್ನುವ ಉತ್ತರವವಳು.
ಯಾರೆಂದು ಹುಡುಕುವವಳು
ಯಾರಲ್ಲವೆಂದು ನುಡಿವವಳು
ಬಲ್ಲೆಯಾ ಅವಳು ಯಾರೆಂದು ?

(೦೬)
ಒಗಟಾಗುವ ಮಾತು
ಕವಿತೆಯಾಗುವ ಸರಕು
ಜಿಗುಟು ಮಾತಾಗುತ
ಮೌನದ ಬಡಿದಾಟ
ಮಾತ ಬಂಡವಾಳ ಮೂಲಧನ
ತಂದಿತೇನು ಲಾಭ ?

– ನಾಗೇಶ ಮೈಸೂರು
೦೬.೦೭.೨೦೧೭