02109. ಸರ್ವಜ್ಞನ ವಚನಗಳು ೦೦೦೨.


02109. ಸರ್ವಜ್ಞನ ವಚನಗಳು ೦೦೦೨.
_______________________________


ಎಲುವಿನೀ ಕಾಯಕ್ಕೆ | ಸಲೆ ಚರ್ಮದಾ ಹೊದಿಕೆ |
ಮಲಮೂತ್ರ ಕ್ರಿಮಿಗಳೊಳಗಿರ್ದ, ದೇಹಕೆ |
ಕುಲವಾವುದಯ್ಯ ಸರ್ವಜ್ಞ ||

ಮೇಲಿನ ತ್ರಿಪದಿಯಲ್ಲಿ ಸಲೆ ಪದವನ್ನು ಹೊರತುಪಡಿಸಿ ಮಿಕ್ಕೆಲ್ಲವೂ ನೇರವಾಗಿ ಅರ್ಥವಾಗುವ ಪದಗಳೇ. ಅದಕ್ಕೆ ಮುಂದೆ ಸಲೆ ಪದವನ್ನು ಸ್ವಲ್ಪ ವಿವರವಾಗಿ ನೋಡೋಣ .

ಎಲುವಿನೀ ಕಾಯಕ್ಕೆ :

ಎಲುವಿನ (ಎಲುಬಿನಿಂದಾದ) + ಈ + ಕಾಯಕ್ಕೆ ( ದೇಹಕ್ಕೆ)
ಎಲುಬಿನ ಹಂದರದಿಂದಾದ ಈ ದೇಹಕ್ಕೆ.

ಸಲೆ ಚರ್ಮದಾ ಹೊದಿಕೆ :

ದೇಹದ ಹೊರ ಆವರಣವಾಗಿರುವ ತೊಗಲೇ (ಚರ್ಮವೇ) ಮೂಳೆಗಳಿಂದಾದ ದೇಹಕ್ಕೆ ಹೊದಿಸಿದ ಹೊದಿಕೆ.

ಮಲಮೂತ್ರ ಕ್ರಿಮಿಗಳೊಳಗಿರ್ದ, ದೇಹಕೆ :

ಮೂಳೆಗಳ ಹಂದರದಲ್ಲಿ ಚರ್ಮದ ಆವರಣದೊಳಗೆ ಬಂಧಿಯಾಗಿರುವ ದೇಹದಲ್ಲಿ ಮಲ, ಮೂತ್ರಗಳಂತಹ ತ್ಯಾಜ್ಯ ವಸ್ತುಗಳು ಮಾತ್ರವಲ್ಲದೆ ಅದನ್ನೇ ವಸತಿಯನ್ನಾಗಿಸಿಕೊಂಡು ವಾಸಿಸುತ್ತಿರುವ ಅನೇಕ ಕ್ರಿಮಿಗಳು ( ಸೂಕ್ಷ್ಮರೂಪ ಜೀವಿಗಳಿಂದ ಹಿಡಿದು ದೃಗ್ಗೋಚರ ಮಟ್ಟದವರೆಗೆ ).

ಕುಲವಾವುದಯ್ಯ ಸರ್ವಜ್ಞ :

ಇಂತಹ ದೇಹಕ್ಕೆ ಯಾವ ಕುಲ, ಯಾವ ಜಾತಿ ?

ವಿವರಣೆ :
_________

ಸಲೆ ಪದದ ಕುರಿತು: ನಾನು ಚಿಕ್ಕಂದಿನ ಶಾಲಾ ದಿನಗಳಲ್ಲಿ ಗಣಿತ ಲೆಕ್ಕ ಮಾಡುವಾಗ ಈ ಸಲೆ ಪದವನ್ನು ಓದಿದ್ದ ನೆನಪು. ರೇಖಾಗಣಿತದ ಆಕೃತಿಗಳ ಗಾತ್ರವನ್ನು ಕಂಡುಹಿಡಿಯುವ ಸಮಸ್ಯೆ ಬಿಡಿಸುವಾಗ ಕೆಲವೊಮ್ಮೆ ಗಾತ್ರದ ಬದಲು ಸಲೆಯನ್ನು ಕಂಡುಹಿಡಿಯಿರಿ ಎಂದು ಪ್ರಶ್ನೆಯಿರುತ್ತಿತ್ತು. ಆ ಗಾತ್ರ ಎನ್ನುವ ಪರೋಕ್ಷಾರ್ಥವನ್ನು ಇಲ್ಲಿಯೂ ಬಳಸಬಹುದು. ವಿಕಿ ಪದಕೋಶದಲ್ಲಿ ವಿಸ್ತೀರ್ಣ, ಕ್ಷೇತ್ರಫಲ ಎನ್ನುವ ವಿವರಣೆಯು ಇತ್ತು. ಯಾಕೋ ಗಾತ್ರವೇ (ಆಂಗ್ಲದಲ್ಲಿ ವಾಲ್ಯೂಮ್) ಸೂಕ್ತವಾದದ್ದು ಅನಿಸಿತು – ಯಾಕೆಂದರೆ ಗಾತ್ರ ಉದ್ದ-ಅಗಲ-ಎತ್ತರಗಳ ಮೂರು ಆಯಾಮವನ್ನು (೩ಡಿ) ಪ್ರತಿನಿಧಿಸುತ್ತದೆ (ವಿಸ್ತೀರ್ಣ ಬರಿ ಎರಡು ಆಯಾಮದ್ದು). (ಇದಕ್ಕೆ ಹೊರತಾದ ಬೇರೆ ಸೂಕ್ತ ಅರ್ಥ ಗೊತ್ತಿದ್ದರೆ ದಯವಿಟ್ಟು ಕಾಮೆಂಟಿನಲ್ಲಿ ಸೇರಿಸಿ). ದೇಹದ ಪೊಟರೆಯನ್ನು ಸುತ್ತುವರಿದು ಅದರ ಒಳಗನ್ನು (ಸಲೆಯನ್ನು) ರಕ್ಷಿಸುವ ಮತ್ತು ಚಂದದ ಸ್ವರೂಪವಿರುವ ಹೊರಪದರವನ್ನು ಒದಗಿಸುವ ಚರ್ಮ ಎಂದು ಹೇಳಬಹುದು. ಈ ಹಿನ್ನಲೆಯಲ್ಲಿ ಮಿಕ್ಕ ಸಾಲುಗಳನ್ನು ಅರ್ಥೈಸೋಣ.

ಎಲುವಿನೀ ಕಾಯಕ್ಕೆ | ಸಲೆ ಚರ್ಮದಾ ಹೊದಿಕೆ |

ಭಕ್ತ ಕುಂಬಾರ ಚಿತ್ರದ ‘ಮಾನವ ದೇಹವು ಮೂಳೆ ಮಾಂಸದ ತಡಿಕೆ , ಅದರ ಮೇಲಿದೆ ತೊಗಲಿನ ಹೊದಿಕೆ’ ಎನ್ನುವ ಹಾಡಿನ ಸಾಲು ನೆನಪಾಗುತ್ತಿದೆ ಇದರ ವಿವರಣೆಗೆ ಹೊರಟಾಗ. ಮಾನವನು ಸೇರಿದಂತೆ ಯಾವುದೇ ಜೀವಿಯ ಎಲುಬುಗಳ ಹಂದರಕ್ಕೆ ಮಾಂಸದ ತಡಿಕೆ ಹಾಕಿ ನೋಡಿದರೆ ಅದು ಹೇಗೆ ಕಾಣಿಸುವುದೆಂದು ನಾವೆಲ್ಲಾ ಬಲ್ಲೆವು. ಆ ಸ್ವರೂಪವನ್ನು ನೋಡುವುದಿರಲಿ, ಊಹಿಸಿಕೊಳ್ಳುವುದಕ್ಕೂ ಹಿಂಜರಿಯುತ್ತದೆ ನಮ್ಮ ಮನಸು. ಅದಕ್ಕೊಂದು ತೊಗಲಿನ ಆವರಣ ಹಾಕಿ ಒಂದು ಸುಂದರ ಬಾಹ್ಯ ಚೌಕಟ್ಟನ್ನು ಒದಗಿಸಿದ ಸ್ವರೂಪ ಮಾತ್ರವೇ ನಮ್ಮ ಕಣ್ಮುಂದೆ ನಿಲ್ಲುತ್ತದೆ. ಆದರೆ ನೈಜದಲ್ಲಿ ದೇಹದ ಮೂಲ ಬಲಕ್ಕೆ ಆಧಾರವಾದದ್ದೇ ಈ ಎಲುಬಿನ ಚೌಕಟ್ಟು. ಬರಿ ಎಲುಬಿನ ಹಂದರವನ್ನು ಅಸ್ತಿಪಂಜರದಂತೆ ಮಾತ್ರ ಕಾಣುವ ನಾವು ನೆನಪಿಸಿಕೊಳ್ಳಬೇಕಾದ ಮುಖ್ಯ ವಿಷಯ – ಸ್ವತಃ ನಾವೇ ಅಂತಹ ಅಸ್ತಿಪಂಜರಗಳಿಂದಾದ ಕಾಯವೆಂಬುದು. ಸ್ನಾಯುಗಳಿಂದ ಹಿಡಿದು ಚರ್ಮದ ಹೊದಿಕೆಯ ತನಕ ಮಿಕ್ಕಿದ್ದೆಲ್ಲಾ ಆ ಮೂಲಹಂದರಕ್ಕೆ ಹಚ್ಚಿದ ತೇಪೆಯ ಹಾಗೆ.

ವಿಪರ್ಯಾಸವೆಂದರೆ, ಜೀವಿಯ ಸೌಂದರ್ಯದ ಅಳತೆಗೋಲಾಗಿ ಮುಖ್ಯ ಪಾತ್ರ ವಹಿಸುವುದು ಈ ತೊಗಲಿನ ಬಾಹ್ಯ ಸ್ವರೂಪವೇ ಎನ್ನುವುದು. ಇದು ಹೊರಗಿನ ಸೌಂದರ್ಯಕ್ಕೆ ನಾವೆಷ್ಟು ಪ್ರಾಮುಖ್ಯತೆ ಕೊಡುತ್ತೇವೆ ಎನ್ನುವುದನ್ನು ಕೂಡ ಎತ್ತಿ ತೋರಿಸಿತ್ತದೆ. ನಾವು ಪ್ರತಿನಿತ್ಯ ಮಾಡುವ ಸ್ನಾನಾದಿ ಶುದ್ಧ ಕಾರ್ಯಗಳಾಗಲಿ, ಸೌಂದರ್ಯವರ್ಧಕಗಳ ಬಳಕೆಯಿಂದ ಸೌಂದರ್ಯವನ್ನು ಹೆಚ್ಚಿಸುವ ಹುನ್ನಾರವಾಗಲಿ, ಸುಗಂಧ ದ್ರವ್ಯಗಳ ಬಳಕೆಯಿಂದ ಘಮಘಮಿಸುವ ಪ್ರಯತ್ನವಾಗಲಿ – ಎಲ್ಲವು ಬಾಹ್ಯದ ಸ್ವರೂಪವನ್ನು, ಮತ್ತದರ ಅಂದ ಚಂದವನ್ನು ಎತ್ತಿ ತೋರಿಸುವ, ಅದನ್ನು ಸ್ವಚ್ಛ – ಶುದ್ಧವಾಗಿಟ್ಟುಕೊಳ್ಳುವ ಯತ್ನವೇ. ಸ್ನಾನ ಮಾಡದವನನ್ನು, ಕೊಳಕು ಬಟ್ಟೆ ಹಾಕಿಕೊಂಡು ಬರುವವನನ್ನು ದೂರವಿರಿಸುವುದೋ, ಟೀಕಿಸುವುದೋ ಕೂಡ ಅಸಹಜವೇನಲ್ಲ ನಮ್ಮಲ್ಲಿ. ಅಂದರೆ ಆ ತೊಗಲಿನಿಂದಾವೃತ್ತವಾದ ಬಾಹ್ಯ ಸ್ವರೂಪ ಅಷ್ಟೊಂದು ಮಹತ್ವದ್ದೇ ? ಅಷ್ಟೊಂದು ಶ್ರೇಷ್ಠತೆಯದೇ ? ಆ ಜಿಜ್ಞಾಸೆಯ ಮೇಲೆ ಬೆಳಕು ಚೆಲ್ಲುವುದು ಮುಂದಿನ ಸಾಲು.

ಮಲಮೂತ್ರ ಕ್ರಿಮಿಗಳೊಳಗಿರ್ದ, ದೇಹಕೆ |

ಸ್ವಲ್ಪ ತಾಳಿ..ಹೊರಗಿನ ಅವತಾರವನ್ನು ಮಾನದಂಡವಾಗಿ ಪರಿಗಣಿಸಿ, ಹೊರಗಿನ ಸ್ವರೂಪವೇ ಶ್ರೇಷ್ಠವೆಂದು ತೀರ್ಮಾನಿಸುವ ಮುನ್ನ ಆ ಚರ್ಮದ ಹೊದಿಕೆಯ ಅಂಗಳದೊಳಗೊಮ್ಮೆ ಇಣುಕಿ ನೋಡಿ. ಹೀಗೆ ದೇಹದ ಅಂತರಂಗದ ಒಳಹೊಕ್ಕು ನೋಡಿದಾಗ, ದೇಹದ ಕಾರ್ಯಾಚರಣೆಗೆ ಬೇಕಾದ ಭಾಗ, ಅಂಗಾಂಗಗಳ ಜತೆಗೆ ಬೇಕು-ಬೇಡಾದ ಹಲವಾರು ಸ್ವರೂಪಗಳು, ಜೀವಿಗಳು ಕಾಣಿಸಿಕೊಳ್ಳುತ್ತವೆ. ಹೊಟ್ಟೆಯಲ್ಲಿ ಸೇರಿಕೊಳ್ಳುವ ಪರತಂತ್ರ ಜೀವಿ ಜಂತುಹುಳು, ಲಾಡಿ ಹುಳುಗಳಿಂದ ಹಿಡಿದು ಸೂಕ್ಷ್ಮರೂಪದ ಬ್ಯಾಕ್ಟೀರಿಯಾಗಳವರೆಗೆ ಎಲ್ಲಕ್ಕೂ ವಾಸಸ್ಥಾನ ಈ ದೇಹದ ಪೊಟರೆ. ಕೆಲವು ಸಕಾರಣವಾಗಿ ಅಸ್ತಿತ್ವದಲ್ಲಿದ್ದರೆ, ಮತ್ತಷ್ಟು ವಿನಾಕಾರಣವಾಗಿ. ಅಷ್ಟು ಮಾತ್ರವಲ್ಲ – ನಮ್ಮ ದೇಹದ ಅಂಗಾಗಗಳ ಕಾರ್ಯ ವೈಖರಿ, ವಿಧಾನವನ್ನೇ ಗಮನಿಸಿದರು ಸಾಕು – ಅವು ನಿರಂತರವಾಗಿ ನಡೆಸುವ ದೈನಿಕ ಕ್ರಿಯೆಯಲ್ಲಿ ರಸ ಮತ್ತು ಕಸಗಳ ತಾಳಮೇಳ ನಿರಂತರವಾಗಿರುವುದನ್ನು ಗಮನಿಸಬಹುದು.

ಉಸಿರಾಟದ ಕ್ರಿಯೆಯಲ್ಲಿ ಒಳಗೆ ಉಳಿಯುವ ಆಮ್ಲಜನಕದ ಜೊತೆಗೆ ಹೊರಗೆಸೆಯಬೇಕಾದ ಇಂಗಾಲಾಮ್ಲದ ತ್ಯಾಜ್ಯವೂ ಸೇರಿಕೊಂಡಿರುತ್ತದೆ. ರಕ್ತದ ಪರಿಚಲನೆಯಲ್ಲಿ ಶುದ್ಧ ಮತ್ತು ಮಲಿನ ರಕ್ತಗಳ ನಿರಂತರ ಸಂವಹನದಲ್ಲಿ ಹೃದಯದ ಒಂದು ಭಾಗ ಶುದ್ಧರಕ್ತ ವಿಲೇವಾರಿಯಲ್ಲಿ ತೊಡಗಿಸಿಕೊಂಡರೆ ಮತ್ತೊಂದು ಭಾಗ ಮಲಿನರಕ್ತದ ಶುದ್ಧೀಕರಣದ ಕಾರ್ಯದಲ್ಲಿ ಸೇವಾನಿರತ. ಇನ್ನು ಜೀರ್ಣಕ್ರಿಯೆಯ ವಿಷಯಕ್ಕೆ ಬಂದರಂತೂ ನಾವು ತಿಂದ ಆಹಾರದಲ್ಲಿಯೂ, ಜೀರ್ಣವಾದ ಆಹಾರದ ಭಾಗವಿರುವಂತೆ ಜೀರ್ಣವಾಗದೇ ಬೆವರು ಮಲಮೂತ್ರಾದಿಗಳ ರೂಪದಲ್ಲಿ ಹೊರಗೆಸೆಯಬೇಕಾದ ಅಜೀರ್ಣ ಆಹಾರದ ತ್ಯಾಜ್ಯ ಭಾಗವು ಸೇರಿಕೊಂಡಿರುತ್ತದೆ. ಇವೆಲ್ಲವೂ ನಮ್ಮ ದೇಹದೊಳಗೆ ಇದ್ದರು, ಅವುಗಳ ಅಂತರಂಗಿಕ ಕಾರ್ಯ ನಮಗೆ ಗೋಚರಿಸದಂತೆ ಚರ್ಮದ ಆವರಣವು ಎಲ್ಲವನ್ನು ಮರೆಮಾಚಿಬಿಟ್ಟಿರುತ್ತದೆ. ಹಾಗೆಂದು ಅಲ್ಲಿ ಮಲಿನವಿಲ್ಲವೆಂದು ಅರ್ಥವೇ ? ಹಾಗಲ್ಲ. ಉಗುಳು ಮತ್ತು ಮಂತ್ರಗಳೆಂಬ ಮಡಿ-ಮೈಲಿಗೆ ಒಂದೇ ಕಡೆ ಇರುವ ಹಾಗೆ ನಮ್ಮೆಲ್ಲರ ದೇಹದಲ್ಲೂ ಕಸ-ರಸಗಳ ಸಮ್ಮಿಶ್ರಣ ಸದಾ ಅಸ್ತಿತ್ವದಲ್ಲಿರುತ್ತದೆ. ನಾವೆಷ್ಟೇ ಹೊರಗೆ ಬಣ್ಣ ಬಳಿದು, ತೇಪೆ ಹಚ್ಚಿದರು ಒಳಗಿನದೇನು ಬದಲಾಗದು. ಅರ್ಥಾತ್ ನಮ್ಮದೆನ್ನುವ ನಮ್ಮ ಒಳಗಿನ ದೇಹವನ್ನು ಕೂಡ ನಮಗೆ ಬೇಕಾದಂತೆ ಇಟ್ಟುಕೊಳ್ಳುವ ಸ್ವೇಚ್ಛೆ ನಮಗಿಲ್ಲ. ಅದು ಇರುವ ರೀತಿಯಲ್ಲೇ ಒಪ್ಪಿಕೊಂಡು ಅನುಸರಿಸಿಕೊಂಡು ಹೋಗಬೇಕು. ಹೀಗಿರುವಾಗ, ಬರಿ ಬಾಹ್ಯದಲಂಕರಣದೊಂದಿಗೆ ಸೌಂದರ್ಯವನ್ನೋ,ಪ್ರದರ್ಶಿತ ಸ್ವರೂಪವನ್ನೊ ಜಗಮಗಿಸಿಕೊಂಡು ‘ನಾನು ಹೆಚ್ಚು, ನೀನು ಕಡಿಮೆ’ ಎಂದುಕೊಳ್ಳುವುದು ಎಷ್ಟರಮಟ್ಟಿಗೆ ಸರಿ ? ಎನ್ನುವ ಭಾವ ಇಲ್ಲಿ ವ್ಯಕ್ತವಾಗಿದೆ.

ಕುಲವಾವುದಯ್ಯ ಸರ್ವಜ್ಞ ||

ಕೊನೆಯದಾಗಿ, ನಮ್ಮ ದೇಹದೊಳಗಿನ ಮಡಿ, ಮೈಲಿಗೆಗಳನ್ನೇ ನಿಯಂತ್ರಿಸಲಾಗದ ನಾವು ಬೇರೆಯ ಮನುಜರನ್ನು, ಜೀವಿಗಳನ್ನು ಜಾತಿ, ಮತ, ಕುಲಗಳೆಂಬ ಆಧಾರದಲ್ಲಿ ಮೇಲು , ಕೀಳೆಂದು ವಿಭಾಗಿಸುವುದು ಎಷ್ಟು ಸರಿ ? ಪ್ರತಿಯೊಬ್ಬರೂ ನಮ್ಮ ಹಾಗೆಯೇ ಒಂದೇ ತರಹದ ಸರಕಿನಿಂದಾದ, ಒಂದೇ ತರದ ಕಸರಸಗಳಿಂದಾವೃತ್ತವಾದ, ಒಂದೇ ಮೂಲ ಗುಣಸ್ವರೂಪಗಳಿಂದಾದ ವಿಭಿನ್ನ ಆವೃತ್ತಿಗಳಷ್ಟೇ. ಅಂದಮೇಲೆ ನಮ್ಮನ್ನು ನಾವೇ ಜಾತಿಕುಲಾದಿಗಳ ಆಧಾರದಲ್ಲಿ ವಿಭಜಿಸಿ ನೋಡುವುದು ಮೂರ್ಖತನ ಎನ್ನುವ ಇಂಗಿತವನ್ನು ಈ ವಚನ ಸರಳವಾಗಿ ವ್ಯಕ್ತಪಡಿಸುತ್ತದೆ. ಇದು ಮನುಕುಲ ಜಾತಿಕುಲಗಳ ಆಧಾರದ ಮೇಲೆ ಮೇಲುಕೀಳಿನ ಗಣನೆ ಮಾಡುವುದನ್ನು ಕಂಡು, ಅದರಲ್ಲಿ ಯಾವ ಹುರುಳೂ ಇಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡಲು ಮನುಜದೇಹದ ರಚನೆಯನ್ನೇ ಉದಾಹರಣೆಯಾಗಿ ಬಳಸಿಕೊಂಡ ಚಾತುರ್ಯಪೂರ್ಣ ಸಂಗತಿ ಸಹ ಹೌದು (ಯಾಕೆಂದರೆ ಈ ಉದಾಹರಣೆಯಲ್ಲಿ ವಿವರಿಸುವ ವಿಷಯಗಳನ್ನು ಯಾರೂ ನಿರಾಕರಿಸಲಾಗದು, ಅಲ್ಲಗಳೆಯಲಾಗದು – ಎಲ್ಲವನ್ನು, ಎಲ್ಲರು ಸ್ವಾನುಭವದಿಂದ ಅರಿತವರೇ). ತಾನು ಕಂಡ ಸತ್ಯವನ್ನು ಮನಮುಟ್ಟುವ ಹಾಗೆ, ಯಾರಿಗೂ ನೋವಾಗದ ಹಾಗೆ ಸರಳವಾಗಿ ವಿವರಿಸಿದ ರೀತಿ ಸರ್ವಜ್ಞನ ವಚನಗಳ ಸಾಮರ್ಥ್ಯಕ್ಕೆ ಸಾಕ್ಷಿ.

– ನಾಗೇಶ ಮೈಸೂರು
೦೯.೦೭.೨೦೧೭
(Picture :Wikipedia : https://en.m.wikipedia.org/wiki/Sarvajna)

02108. ಐಟಿ ಜಗದ ಹೆಣಗಾಟ – ದಿಕ್ಕು ತಪ್ಪಿದ ನಾವೆಯ ಪಯಣಿಗರ ಪಾಡೇನು ?


02108. ಐಟಿ ಜಗದ ಹೆಣಗಾಟ – ದಿಕ್ಕು ತಪ್ಪಿದ ನಾವೆಯ ಪಯಣಿಗರ ಪಾಡೇನು ?
____________________________________________________________
(ಪ್ರಬಂಧ / ಲೇಖನ : ಸ್ವಲ್ಪ ಸಂಡೇ ಪುರುಸೊತ್ತಿಗೆ ಸೀರಿಯಸ್ ಮ್ಯಾಟರ್ 😊)


ದೇಶದ ಹೊರಗೆ ವಿದೇಶದಲ್ಲಿ ಕೂತು, ಆಗೀಗೊಮ್ಮೆ ಊರೊಳಗಿನ ಸುದ್ದಿಯತ್ತ ಇಣುಕುವುದು ನನ್ನ ದಿನನಿತ್ಯದ ಹವ್ಯಾಸ. ಹಾಗೆ ನೋಡುವಾಗ ತಪ್ಪದೆ ಓದುವ ವಸ್ತುವೆಂದರೆ ಐಟಿ ಜಗಕ್ಕೆ ಸಂಬಂಧಿಸಿದ್ದು. ಪ್ರಾಜೆಕ್ಟು ಮ್ಯಾನೇಜ್ಮೆಂಟಿನ ಜಗದೊಡನಿರುವ ಕೊಂಡಿಯಿಂದಾಗಿ ಕೆಲವು ಕುತೂಹಲಜನ್ಯವಾದರೆ ಮಿಕ್ಕಿದವು ಅನಿವಾರ್ಯತೆಯಿಂದ ಪ್ರೇರಿತವಾದ ಶಿಶುಗಳು. ಆಗೆಲ್ಲ ರಾಚುವ ಹಾಗೆ ಎದ್ದು ಕಾಣುವ ವಿದ್ಯಾಮಾನಗಳಲ್ಲಿ ಕೆಲವು ಗಮನಾರ್ಹ ಸಂಗತಿಗಳು ಕಾಡದೆ ಬಿಡವು. ಅದಕ್ಕೆ ಆ ಕ್ಷೇತ್ರದಲ್ಲೇ ಕೆಲಸ ಮಾಡಿಕೊಂಡಿರುವುದು ಒಂದು ಕಾರಣವಾದರೆ, ಜಾಗತಿಕ ಗೋಮಾಳದಲ್ಲಿ ಎಲ್ಲಿ ಏನೇ ನಡೆದರೂ ಅದರ ಪರಿಣಾಮ ಎಲ್ಲರಿಗು ಒಂದಲ್ಲ ಒಂದು ರೀತಿ ತಟ್ಟಿಯೇ ತೀರುವುದರಿಂದ ಐಟಿ ಜಗದ ವಿದ್ಯಾಮಾನಗಳ ಮೇಲೆ ಒಂದು ಕಣ್ಣಿಟ್ಟಿರಬೇಕಾದ ಅನಿವಾರ್ಯ ಇನ್ನೊಂದು ಕಾರಣ.

ವರ್ಷಕ್ಕೋ ಆರು ತಿಂಗಳಿಗೋ, ಊರಿಗೆ ಬಂದಾಗಲೊ ಅಥವಾ ಇಲ್ಲಿಗೆ ಬಂದವರಾರೊ ಸಿಕ್ಕಿದಾಗಲೋ – ಹೀಗೆ ಯಾರಾದರೂ ಸಂಪರ್ಕಕ್ಕೆ ಬಂದಾಗ ಒಂದಲ್ಲ ಒಂದು ರೀತಿಯಲ್ಲಿ ತಪ್ಪದೆ ಇಣುಕುವ ವಿಷಯ – ಅವರ ಕುಟುಂಬದಲ್ಲೊ ಅಥವಾ ಹತ್ತಿರದ ಸಂಬಂಧದಲ್ಲೋ ಯಾರೋ ಒಬ್ಬರು ಇಂಜಿನಿಯರಿಗೂ ಮಾಡುತ್ತಿರುವ ಕುರಿತದ್ದು . ಯಾವ ಬ್ರಾಂಚ್, ಎಷ್ಟನೇ ವರುಷ ಇತ್ಯಾದಿಗಳೆಲ್ಲದರ ಯಾದಿ ಮುಗಿದ ಮೇಲೆ ಕೊನೆಯಲ್ಲಿ ತಪ್ಪದೆ ಬರುವ ಕೋರಿಕೆ – ‘ಇನ್ನೆರಡು ವರ್ಷಕ್ಕೆ ಕೋರ್ಸ್ ಮುಗಿಯುತ್ತೆ.. ಆಗ ನಿಮ್ಮ ಕಂಪನಿಲೋ, ಇನ್ನೆಲ್ಲಾದ್ರೂ ಒಂದು ಕೆಲಸಕ್ಕೆ ಹೆಲ್ಪ್ ಮಾಡಿ ಸಾರ್..’ ಅಂತ ಯಾವುದಕ್ಕೂ ಇರಲಿ ಅನ್ನೋ ಒಂದು ಅರ್ಜಿ ಗುಜರಾಯಿಸುತ್ತಾರೆ. ಆ ಮಾತಿನ ಹಿಂದೆ ‘ಕ್ಯಾಂಪಸ್ ಇಂಟರ್ವ್ಯೂಲೇ ಸಿಗುತ್ತೆ.. ಬೈ ಚಾನ್ಸ್ ಮಿಸ್ ಆದ್ರೆ ಇರಲಿ, ಹೇಳಿಟ್ಟುಕೊಂಡಿರೋಣ’ ಅನ್ನೋ ಭಾವನೆ ಹೇಳದೆ ಇದ್ರೂ ಇಣುಕಿರುತ್ತೆ.

ನಾನೂ ಹೊರಗಿನ ದೇಶದಲ್ಲಿರೋದ್ರಿಂದ ಇಲ್ಲಿನ ಸ್ಥಳೀಯ ಸಂಪರ್ಕ ಕಡಿಮೆ ಅಂದರೂ ‘ನಿಮ್ ಫ್ರೆಂಡ್ಸ್ ಗೊತ್ತಿರ್ತಾರಲ್ಲ ಬಿಡಿ ಸಾರ್’ ಅಂತ ನನ್ನನ್ನೇ ಅನಧಿಕೃತ ‘ಎಂಪ್ಲಾಯ್ಮೆಂಟ್ ಎಕ್ಸ್ಚೇಂಜ್’ ಲೆವೆಲ್ಲಿಗೆ ಏರಿಸಿ ನಕ್ಕುಬಿಡುತ್ತಾರೆ. ಆ ಲೋಕಾಭಿರಾಮದ ಮಾತಿನಲ್ಲೇ ಬೇರೇನೂ ಕೇಳಲು ವಿಷಯವಿರದಿದ್ದರೆ ನಾನೂ ತಪ್ಪದೆ ಕೇಳುವ ಒಂದು ಪ್ರಶ್ನೆ , ‘ ಯಾವ ಕಾಲೇಜು ?’ ಪ್ರತಿಬಾರಿಯೂ ಅವರ ಉತ್ತರ ನನ್ನನ್ನ ಮೂಕವಿಸ್ಮಿತನನ್ನಾಗಿಸುತ್ತದೆ. ಯಾಕೆಂದರೆ ಅವರು ಹೇಳುವ ಕಾಲೇಜ್ಯಾವುದೂ ನಾ ಕೇಳೇ ಇರದ ಹೆಸರುಗಳು. ನಾನೂ ಮೈಸೂರಿನಲ್ಲಿ ಓದುತ್ತಿದ್ದಾಗ ಇಂಜಿನಿಯರಿಂಗ್ ಅಂದರೆ ಕಿವಿಗೆ ಬೀಳುತ್ತಿದ್ದುದ್ದು ಎರಡೇ ಕಾಲೇಜುಗಳ ಹೆಸರು – ಏನ್.ಐ.ಇ ಮತ್ತು ಜೆ.ಸಿ.ಇ. ‘ ಯಾವ ಕಾಲದಲ್ಲಿದೀರಿ ಸಾರ್ ನೀವು , ಈಗ ಹತ್ತದಿನೈದು ಇಂಜಿನಿಯರಿಂಗ್ ಕಾಲೇಜುಗಳಿವೆ ಮೈಸೂರಲ್ಲಿ’ ಎಂದಾಗ ‘ಅಷ್ಟೊಂದಾಗಿವೆಯ?’ ಅನಿಸಿ ದಿಗ್ಭ್ರಮೆಯ ಜತೆ ಪಿಚ್ಚೆನಿಸುವ ಭಾವವು ಮೂಡುತ್ತದೆ. ‘ಇಷ್ಟೊಂದು ಕಾಲೇಜುಗಳಿಂದ ಬರುವ ಎಲ್ಲರಿಗು ಸಿಗುವಷ್ಟು ಕೆಲಸಗಳು ನಮ್ಮಲ್ಲಿ ಪ್ರತಿವರ್ಷವೂ ಹುಟ್ಟಿಕೊಳ್ಳುತ್ತಿದೆಯಾ ?’ ಎಂದು ತಲೆಕೆರೆದುಕೊಳ್ಳುತ್ತೇನೆ.

‘ದೊಡ್ಡ ದೊಡ್ಡ ಕಂಪನಿಯವರು ಬಂದು ಕ್ಯಾಂಪಸ್ ಇಂಟರ್ವ್ಯೂ ಮಾಡಿದರು ಬರಿ ಟಾಪರ್ಸ್ ಮಾತ್ರ ತೊಗೋತಾರೆ ಸಾರ್.. ಮಿಕ್ಕವರು ಹೆಣಗಾಡೋದು ತಪ್ಪೊಲ್ಲ’ ಎಂದರೊಬ್ಬರು ಪರಿಚಯದವರು.

‘ ಮತ್ತೆ ಅವರೇನು ಕೆಲಸ ಇಲ್ಲದೆ ಒದ್ದಾಡ್ತಿರ್ತಾರ ?’ ನಾನೂ ಕುತೂಹಲಕ್ಕೆ ಕೇಳಿದೆ.

‘ಹಾಗೇನು ಇಲ್ಲಾ ಸಾರ್ ಹೋಲಿಕೇಲಿ ತೀರಾ ಕಮ್ಮಿ ಸಂಬಳಕ್ಕೆ ಸಿಗೋ ಕೆಲಸಗಳು ಬೇಕಾದಷ್ಟು ಇರುತ್ತೆ.. ಎಲ್ಲೋ ಒಂದ್ಕಡೆ ಸೇರ್ಕೊಂಡು ಎಕ್ಸ್ಪೀರಿಯೆನ್ಸ್ ಮಾಡ್ಕೊಂಡು ಆಮೇಲೆ ಸುಮಾರಾಗಿರೋ ಕಂಪನಿಗೆ ಜಂಪ್ ಆಗ್ತಾರೆ..’

ಅದು ನಿಜವೇ – ನಮ್ಮಲ್ಲಿನ ಐಟಿ ಜಗದ ಕೆಲಸಗಳು ತೀರಾ ಮಾಡಲಾಗದ ಘನಂದಾರಿ ಸ್ತರದವೇನಲ್ಲ. ಅನುಭವ ಇಟ್ಟುಕೊಂಡು ಬಂದರೆ, ಸರಿಯಾದ ಮನೋಭಾವ ಇರುವ ವ್ಯಕ್ತಿತ್ವವಿದ್ದರೆ ಸಾಕು. ಅದರಲ್ಲೂ ಬುದ್ಧಿವಂತರೆಂದು ಕ್ಯಾಂಪಸ್ಸಿನಲ್ಲಿ ಆಯ್ದುಕೊಂಡವರು ಕೂಡ ಅಲ್ಲೇ ಭದ್ರವಾಗಿ ನೆಲೆ ನಿಲ್ಲುವರೆಂದು ಹೇಳಲಾಗದು. ಕೊಂಚ ದಿನಗಳಲ್ಲೇ ಚಡಪಡಿಕೆ ಶುರುವಾಗುತ್ತದೆ – ಹೆಚ್ಚಿನ ಸಂಬಳ, ಪ್ರಮೋಷನ್ ಹಂಬಲ, ವಿದೇಶಿ ಅಸೈನ್ಮೆಂಟಿನ ಅವಕಾಶ ಇತ್ಯಾದಿಗಳನ್ನು ಬೆನ್ನಟ್ಟುವ ಹುನ್ನಾರ. ಒಂದಲ್ಲ ಒಂದು ಕಾರಣಕ್ಕೆ ಬಿಟ್ಟುಹೋಗುವ ಅವರ ಜಾಗವನ್ನು ಇಂತಹವರು ತುಂಬಿಸುತ್ತಾರೆ. ಕ್ಯಾಂಪಸ್ಸಿನ ಇಂಟರ್ವ್ಯೂನಲ್ಲಿರದಿದ್ದ ಅಂಕಗಳ ಬೆಂಬಲ, ಅನುಭವದ ಹಿನ್ನಲೆಯಲ್ಲಿ ನಗಣ್ಯವಾಗಿಬಿಡುತ್ತದೆ. ಇಂತಹವರದೊಂದು ಗುಂಪೇ ಮೌನಸಾಧಕರ ಹಾಗೆ ಸದ್ದು ಮಾಡದೆ ತಮ್ಮ ಪಾಡಿಗೆ ತಮ್ಮ ಕೆಲಸ ಮಾಡಿಕೊಂಡು ಹೋಗುವವರ, ಮೇಲ್ನೋಟಕ್ಕೆ ಎದ್ದುಕಾಣದ ಸಮೂಹ. ನಮ್ಮ ಬಹುಪಾಲು ಐಟಿ ಕಂಪನಿಗಳಲ್ಲಿ ಮಾಡುವ ಕೆಲಸಗಳ ಸ್ತರ ತೀರಾ ಹೆಚ್ಚಿನದಲ್ಲವಾಗಿ, ಕೆಲಸ ನಿಭಾಯಿಸಿಕೊಂಡು ಹೋಗುವುದೇನು ದೊಡ್ಡ ತಲೆನೋವಲ್ಲ. ಮಸಲಾ, ಕ್ಯಾಂಪಸ್ ಇಂಟರ್ವ್ಯೂನಲ್ಲಿ ಆಯ್ದುಕೊಂಡಾಗಲೂ ಅವರಾರು ಸಿದ್ದ ಸ್ಥಿತಿಯಲ್ಲೇನು ಇರುವುದಿಲ್ಲ; ತರಬೇತು ಕೊಟ್ಟೆ ರೆಡಿಯಾಗಿಸಬೇಕು. ಅದಕ್ಕೆಂದೇ ಅವರು ಯಾವ ಬ್ರಾಂಚಿನಲಿದ್ದರು ಸರಿ – ಅಂಕದ ಪರಿಗಣನೆ, ರಿಟನ್ ಟೆಸ್ಟ್ , ಇಂಟರ್ವ್ಯೂ ಆಧಾರದ ಮೇಲೆ ಆಯ್ದುಕೊಳ್ಳುತ್ತಾರೆ.

ಇದೇನೋ ಹೀಗೇ ನಡೆದುಕೊಂಡು ಬಂದಿದೆ ಇಲ್ಲಿಯತನಕ. ಆದರೆ ಪ್ರಶ್ನೆ – ಹೀಗೆಯೇ ಮುಂದುವರೆಯುತ್ತದೆಯಾ? ಅಂತ. ಈಚಿನ ದಿನಗಳಲ್ಲಿ ಮೆಲುವಾಗಿ ಕೇಳುತ್ತಿರುವ ಅತಂಕದ ದನಿ – ‘ಹತ್ತಿರದ ಭವಿಷ್ಯದಲ್ಲಿ ಎಷ್ಟೋ ಕೆಳಗಿನ ಸ್ತರದ ಐಟಿ ಕೆಲಸಗಳು ಮಂಗಮಾಯವಾಗಿಬಿಡಲಿವೆ’ ಎನ್ನುವುದು. ನಿರಂತರವಾಗಿ ಆಧುನಿಕರಣಗೊಳ್ಳುತ್ತ, ಸ್ವಯಂಚಾಲಿತ ಸ್ತರಕ್ಕೆ (ಆಟೋಮೇಷನ್) ವರ್ಗಾವಣೆಗೊಳ್ಳುವ ಕೆಲಸಗಳು ಎಲ್ಲಾ ಕ್ಷೇತ್ರಗಳಲ್ಲೂ ಇದ್ದದ್ದೇ. ಇದು ಐಟಿ ಜಗವನ್ನು ಬಿಟ್ಟಿದ್ದಲ್ಲ. ವ್ಯತ್ಯಾಸವೆಂದರೆ ಐಟಿ ಜಗದಲ್ಲಿ ಅದರ ವೇಗೋತ್ಕರ್ಷ, ಉದ್ದಗಲದಳತೆ ಮತ್ತು ವಿಸ್ತಾರ ವ್ಯಾಪ್ತಿ ತುಂಬಾ ಹೆಚ್ಚು. ವಿಪರ್ಯಾಸವೆಂದರೆ, ಒಂದು ಹಂತದಲ್ಲಿ ಆ ಕೆಳಸ್ತರದ ಕೆಲಸಗಳೇ ಸಾವಿರಾರು ಐಟಿ ಉದ್ಯೋಗಗಳನ್ನು ಹುಟ್ಟುಹಾಕಿರುತ್ತದೆ. ಕಾಲಾನುಕ್ರಮಣದ ನಿರಂತರ ಕ್ಷಮತೆ, ದಕ್ಷತೆಯ ಬೆನ್ನಟ್ಟುವ ಪ್ರಕ್ರಿಯೆಯಲ್ಲಿ , ಅದನ್ನು ಮಾಡುವವರಲ್ಲೇ ಒಂದು ಗುಂಪು ಅವುಗಳನ್ನಧಿಗಮಿಸುವ ಮುಂದಿನ ಹಂತ ಅಥವಾ ಉನ್ನತಸ್ತರದ ಕಾರ್ಯ ಕ್ಷೇತ್ರದಲ್ಲಿ ತೊಡಗಿರುತ್ತಾರೆ. ಅವರ ಸೃಜನಶೀಲತೆ ಮತ್ತು ಬುದ್ದಿವಂತಿಕೆ ಹೊಸತಿನ ಸೃಷ್ಟಿಗೆ ಕಾರಣವಾದಷ್ಟೇ ಹಳತನ್ನು ಕಬಳಿಸುವ ಉಪವಲಯವನ್ನು ಸೃಷ್ಟಿಸುತ್ತದೆ. ಇದು ೧:೧ ರ ಅನುಪಾತದಲ್ಲಿ ರೂಪಾಂತರವಾಗುವ ಉದ್ಯೋಗಾವಕಾಶವಾದರೆ ಪರವಾಗಿಲ್ಲ – ಆಗ ಹಳಬರು ಹೊಸತನ್ನು ಕಲಿತು ಹೊಂದಿಕೊಳ್ಳಬೇಕಾದ ತರಬೇತಿಯ ಅಗತ್ಯ ಮಾತ್ರವಿರುತ್ತದೆ. ಆದರೆ ನಿಜದಲ್ಲಾಗುವುದು ಹಾಗಲ್ಲ. ಆಧುನೀಕರಣ, ಆಟೋಮೇಷನ್ ಎಂದಾಗ ಹತ್ತು ಜನರ ಉದ್ಯೋಗವನ್ನು ಕಬಳಿಸುವ ದೈತ್ಯ ಹೊಸದಾಗಿ ಒಂದು ಕೆಲಸಕ್ಕೆ ಮಾತ್ರ ಅವಕಾಶವೀಯುತ್ತಾನೆ – ಅದೂ ತರಬೇತಿ, ಕೌಶಲ್ಯ ಪರಿವರ್ತನೆಯ ತರುವಾಯ. ಅಂದಾಗ ಮಿಕ್ಕ ೯ ಉದ್ಯೋಗಗಳ ಪಾಡೇನು ? ಹೆಚ್ಚಿನ ಸ್ತರದ ಅಥವಾ ಇನ್ನು ಬದಲಾಗದ ಮತ್ತೊಂದು ಕಡೆಯ, ಸಿಕ್ಕಿದ್ದಕ್ಕೆ ಹೊಂದಿಕೊಳ್ಳುವ ಕೆಲಸ ಮಾಡಬೇಕಾಗುತ್ತದೆ. ಹಳತನ್ನು ಹೇಗೂ ಸ್ವಲ್ಪ ಕಾಲ ಉಳಿಸಿಕೊಳ್ಳುವ ಅನಿವಾರ್ಯತೆಯಿರುವುದರಿಂದ ಒಂದಷ್ಟು ಜನ ಅಲ್ಲೇ ಹೆಣಗುತ್ತಾ ಒದ್ದಾಡುತ್ತಾರೆ. ಎಲ್ಲಿಯತನಕ ಅದು ಪ್ರಸ್ತುತವೋ ಅಲ್ಲಿಯತನಕ ನಡೆಯಬಹುದು; ಆದರೆ ಒಂದಲ್ಲಾ ಒಂದು ದಿನ ಬದಲಾವಣೆಯ ಚಕ್ರಕ್ಕೆ ತಲೆಯೊಡ್ಡದೆ ವಿಧಿಯಿಲ್ಲ. ಹೀಗೆ ಐಟಿಯಲ್ಲಿ ಕೆಲಸ ಮಾಡುವ ಅದೇ ಜನರೇ ತಮ್ಮ ಸಂಕುಲದ ಉದ್ಯೋಗಗಳನ್ನು ಕಬಳಿಸುವ ಹೊಸತರ ಸೃಷ್ಟಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುತ್ತಾರೆ ತಮ್ಮರಿವಿಲ್ಲದೆಯೆ !

ಅಂದರೆ ಈ ಐಟಿ ಜಗದ ಒಂದು ಅಲಿಖಿತ ನಿಯಮ ನಿರಂತರ ಬದಲಾವಣೆ; ಜತೆಗೆ ನಿರಂತರ ಕೌಶಲ ಗಳಿಕೆಯ ಅನಿವಾರ್ಯತೆ. ಅಲ್ಲೂ ಸಾಕಾಗುವಷ್ಟು ಅವಕಾಶಗಳು ಸೃಷ್ಟಿಯಾಗಲೆಂಬ ಬೇಡಿಕೆ. ಈ ಕಾರಣದಿಂದಲೇ ಐಟಿ ಕಂಪನಿಗಳು ಸ್ಪರ್ಧಾತ್ಮಕವಾಗಿ ಇರಬೇಕೆಂದರೆ ಹೊಸ ಹೊಸ ಗ್ರಾಹಕರನ್ನು ಸೇರಿಸುತ್ತಲೇ ಇರಬೇಕು, ಹೊಸ ಅಗತ್ಯಗಳಿಗನುಸಾರ ಕೌಶಲ್ಯ ವೃದ್ಧಿಗೆ ಯತ್ನಿಸುತ್ತಲೇ ಇರಬೇಕು. ಇರುವ ಎಲ್ಲರ ಕೌಶಲ್ಯಗಳನ್ನು ಏಕಾಏಕಿ ಪರಿವರ್ತಿಸುವುದು ಹೇಳಿದಷ್ಟು ಸುಲಭವಲ್ಲ, ಅರ್ಧಕ್ಕರ್ಧ ಸಾಧ್ಯವೂ ಆಗುವುದಿಲ್ಲ. ಹಾಗೆಂದು ಲಾಭವಿಲ್ಲದ ಕಡೆಯ ಕೆಲಸವಿಲ್ಲದವರನ್ನ ಇಟ್ಟುಕೊಂಡು ಪುಕ್ಕಟೆ ಸಾಕಲು ಕಂಪೆನಿಗಳೇನು ಧರ್ಮಛತ್ರವಲ್ಲವಲ್ಲ ? ಅಲ್ಲಿಂದಲೇ ಶುರುವಾಗುವುದು ಪಿಂಕ್ ಸ್ಲಿಪ್, ಲೋ ಹೈ ಪರ್ಫಾರ್ಮ ಇತ್ಯಾದಿಗಳ ಭರಾಟೆ. ಇದು ಸದಾ ನಡೆಯುತ್ತಿರುವ ಪ್ರಕ್ರಿಯೆಯಾದರು, ‘ ಏಕಾಏಕಿ ಸಾವಿರಸಾವಿರಗಟ್ಟಲೆ ಕೆಲಸಗಳು ನಿರುಪಯೋಗಿಯಾಗಿಬಿಡುತ್ತವಾ ? ಒಟ್ಟಾರೆ ಅಷ್ಟೊಂದು ಜನ ಕೆಲಸಕಳೆದುಕೊಳ್ಳುವ ಮಟ್ಟ ಬಂದುಬಿಡುತ್ತದೆಯಾ? ಅಷ್ಟೂ ಜನಕ್ಕೆ ಬದಲಿ ಉದ್ಯೋಗ ಸಿಗದೇ ದೊಡ್ಡ ನಿರುದ್ಯೋಗಿ ಬಣ ನಿರ್ಮಾಣವಾಗಿಬಿಡುತ್ತದೆಯಾ?’ ಎನ್ನುವುದು ಈಗ ಕಾಡಲಾರಂಭಿಸಿರುವ ಪ್ರಶ್ನೆಗಳು.

ಒಂದು ವೇಳೆ ಐಟಿ ಜಗದ ಸಿಕ್ಕಾಪಟ್ಟೆ ಜನ ನಿಜಕ್ಕೂ ನಿರುದ್ಯೋಗಿಗಳಾಗಿ ಬಿಡುತ್ತಾರೆ ಅಂದುಕೊಳ್ಳೋಣ. ಆಗ ಅವರ ಜೀವನ ಶೈಲಿಯ ಮೇಲಾಗುವ ಪರಿಣಾಮ ನಿಜಕ್ಕೂ ಊಹಾತೀತ. ಹೆಚ್ಚಿನ ಸಂಬಳದೊಡನೆ ಅದಕ್ಕೊಂದುವ ಜೀವನ ಶೈಲಿಗೆ ಒಗ್ಗಿಕೊಂಡ ಯುವ ಜನತೆ ಏಕಾಏಕಿ ಎಲ್ಲವನ್ನು ನಿಯಂತ್ರಿಸುವ, ಹತೋಟಿಯಲ್ಲಿಡುವ ನಿರ್ಬಂಧಿತ ಜೀವನಕ್ರಮಕ್ಕೆ ಪರಿವರ್ತಿಸಿಕೊಳ್ಳಬೇಕೆಂದರೆ ಅಷ್ಟು ಸುಲಭವಲ್ಲ. ಸರೀಕರ ಮತ್ತು ಜನರ ಕಣ್ಣೆದುರು ಅದುವರೆಗೂ ನಿಭಾಯಿಸಿಕೊಂಡ ಜೀವನಶೈಲಿಯ ಮಟ್ಟವನ್ನು ಉಳಿಸಿಕೊಂಡು ಬರುವಲ್ಲಿ ಹೆಣಗಬೇಕಾಗುತ್ತದೆ. ಬದುಕು, ಆದಾಯ, ಸಂಬಳ ಹೀಗೆ ಇರುತ್ತದೆಂಬ ಉತ್ಸಾಹದಲ್ಲಿ ಖರೀದಿಸಿದ ಕಾರು, ಮನೆ ಇತ್ಯಾದಿಗಳ ಮೇಲಿನ ಸಾಲ ಏಕ್ದಂ ಏರಲಾಗದ ಕಡಿದಾದ ಬೆಟ್ಟದ ಹಾಗೆ ಎದುರು ನಿಂತುಬಿಡುತ್ತದೆ. ಸಾಲಗಳ ಮಾತಿರಲಿ ಮಾಮೂಲಿ ಊಟಕ್ಕೆಂದು ಹೋಗುತ್ತಿದ್ದ ರೆಸ್ಟೋರೆಂಟುಗಳತ್ತ ಕಣ್ಣು ಹಾಯಿಸಲು ಭಯಪಡಬೇಕಾಗುತ್ತದೆ. ಅಲ್ಲಿ ಕೊಡುತ್ತಿದ್ದ ಟಿಪ್ಸ್ನಲ್ಲಿ ಊಟ ಮುಗಿಸಬೇಕಾದ ಅನಿವಾರ್ಯ ಕಾಡುತ್ತದೆ. ಹಾಕುವ ಬಟ್ಟೆಬರೆ, ಮಾಡುವ ಶೋಕಿ ಎಲ್ಲವು ಹೊಸ ಗಡಿಯಾರದ ಗಣನೆಗೆ ತಾಳ ಹಾಕಬೇಕಾಗುತ್ತದೆ. ಎಲ್ಲವು ಚೆನ್ನಾಗಿದ್ದಾಗ ಚೌಕಾಸಿ ಮಾಡದೆ ಕೇಳಿದಷ್ಟು ಕೊಟ್ಟು ಒಟ್ಟಾರೆ ಜೀವನ ವೆಚ್ಚ ಅಡೆತಡೆಯಿಲ್ಲದೆ ಅಡ್ಡಾದಿಡ್ಡಿ ಏರಿಸಲು ಕಾರಣವಾಗಿದ್ದವರೇ, ಅಂದು ಅದರೆದುರು ತತ್ತರಿಸುವಂತಾಗುತ್ತದೆ. ಅವರಿಗೆ ಹೊಂದುವ ಮತ್ತೊಂದು ಕೆಲಸ ಸಿಕ್ಕಿತೋ ಬಚಾವು. ಇಲ್ಲದಿದ್ದರೆ ದೇವರೇ ಗತಿ…!

ಹೀಗೆ ದೊಡ್ಡ ಸಂಖ್ಯೆಯಲ್ಲಿ ಕಳುವಾಗಿಹೋಗುವ ಉದ್ಯೋಗಗಳು – ನಿಜಕ್ಕೂ ಹಾಗಾಗಲಿದೆಯಾ ? ಆಗುವುದೋ ಬಿಡುವುದೋ – ಹಾಗಾಗಬಹುದೆನ್ನುವ ಮಾತಂತೂ ಅಲ್ಲಲ್ಲಿ ಕೇಳಿಬರತೊಡಗಿದೆ. ಕಂಪನಿಗಳು ಇದನ್ನು ‘ಮಾಮೂಲಿಯಾಗಿ ನಡೆವ ಪ್ರಕ್ರಿಯೆ, ವಾರ್ಷಿಕ ಗಣತಿ, ಮೌಲ್ಯಮಾಪನದಲ್ಲಿ ಎಳ್ಳುಜೊಳ್ಳು ಬೇರ್ಪಡಿಸಿ ಏಗಲಾಗಲಾರದವರನ್ನು ಒಂದೆರಡು ಬಾರಿ ಅವಕಾಶ ನೀಡಿ, ತದನಂತರ ಗೇಟ್ ಪಾಸ್ ಕೊಟ್ಟುಕಳಿಸುವುದು ಸದಾ ನಡೆಯುತ್ತಿರುತ್ತದೆ’ ಎನ್ನುತ್ತಿದ್ದಾರೆ. ಇದು ನಿಜವೇ ಆದರೂ, ಗಣನೀಯ ಸಂಖ್ಯೆಯಲ್ಲಿ ಕಡಿತವಾಗಬೇಕಾದಾಗಲೂ ಇದೇ ಪರಿಕರವನ್ನು ತುಸು ಕಠಿಣ ಸ್ತರದಲ್ಲಿ, ಕಟ್ಟುನಿಟ್ಟಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಹೇಳಿ ಕೇಳಿ ಅದು ವ್ಯಾಪಾರಿ ಜಗ.. ಅಲ್ಲಿ ಜಾಗವಿರುವುದು ಸೆಂಟಿಮೆಂಟಿಗಲ್ಲ. ‘ಉಳಿವಿಗಾಗಿ ಹೋರಾಟ’ ಎಂದಾಗ ಕಂಪನಿ ಮೊದಲು, ಮಿಕ್ಕಿದ್ದೆಲ್ಲ ನಂತರ. ಹೀಗಾಗಿ ಏಕಾಏಕಿ ದೊಡ್ಡದೊಡ್ಡ ಸಂಖ್ಯೆಯಲ್ಲಿ ಉದ್ಯೋಗಗಳು ಕಡಿತವಾದರೆ ಅಚ್ಚರಿ ಪಡಬೇಕಿಲ್ಲ. ಈಗಂತೂ ಅಮೇರಿಕ, ಸಿಂಗಾಪುರದಂತಹ ದೇಶಗಳು ಸೇರಿದಂತೆ ಹಲವಾರು ಅಭಿವೃದ್ಧಿ ಹೊಂದಿದ ದೇಶಗಳು ಕೂಡ ‘ನೇಷನ್ ಫಸ್ಟ್’ ಎನ್ನುವ ಸ್ವಯಂವಾದಿ ಆಂದೋಲನದತ್ತ ಗಮನವಿಯುತ್ತ ಸಾಧ್ಯವಾದಷ್ಟು ಉದ್ಯೋಗಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವತ್ತ ಯೋಜನೆ ಹಾಕುತ್ತಿವೆ. ಅದರ ಪರಿಣಾಮವೂ ಜತೆಗೂಡಿ ಸನಿವೇಶವನ್ನು ಇನ್ನಷ್ಟು ಗೊಂದಲಮಯವಾಗಿಸುತ್ತಿದೆಯೆನ್ನುವುದಂತೂ ನಿಸ್ಸಂದೇಹ.

ಇಲ್ಲೂ ಕಾಡುವ ಮತ್ತೊಂದು ವಿಪರ್ಯಾಸವಿದೆ: ಈಗಿನ ಆಧುನಿಕ ಜಗದ ಓಘ ಮುಂದಿನ ಕೆಲವರುಷಗಳಲ್ಲಿ ಎತ್ತ ಹರಿಯುತ್ತಿದೆ ಎಂದು ನೋಡಿದರೆ ಅಲ್ಲಿ ಸಿಗುವ ಉತ್ತರ – ಐಟಿಯೇ! ಆದರೆ ಅಲ್ಲೊಂದು ಮೂಲಭೂತ ವ್ಯತ್ಯಾಸವಿದೆ. ಇದುವರೆಗಿನ ಕೆಳಸ್ತರದ ಐಟಿ, ಆಟೋಮೇಷನ್ ಹೆಸರಲ್ಲಿ ಒಂದು ರೀತಿ ‘ಸಿದ್ದ ಸಾಮಾಗ್ರಿ’ ಯಾಗಿ (ಕಮಾಡಿಟಿ) ಬಿಟ್ಟಿದೆ. ಅರ್ಥಾತ್ ಪಕ್ವತೆಯ ಲೆಕ್ಕದಲ್ಲಿ ಅದು ಪ್ರಬುದ್ಧತೆಯ ಮೆಟ್ಟಿಲನ್ನೇರಿ ಮುಂದೆ ಸಾಗಿಬಂದಿದೆ. ಅಂದರೆ ಅದೀಗ ಮುಂದಿನ ಪ್ರಗತಿಯಲೆಗೆ ಬೇಕಾದ ಪರಿಪಕ್ವತೆಯೊಡನೆ, ಅಂತಹ ಪ್ರಗತಿಗೆ ತಾನೇ ವೇದಿಕೆಯಾಗಲು ಸಿದ್ಧವಾಗಿ ನಿಂತಿದೆ. ಆ ವೇದಿಕೆಯೇ ಈಗ ನೂರೆಂಟು ಹೊಸ ಸಾಧ್ಯತೆಗಳನ್ನು, ತಂತ್ರಜ್ಞಾನಗಳನ್ನು, ವ್ಯಾಪಾರಿ ಅವಕಾಶಗಳನ್ನು ಹುಟ್ಟುಹಾಕುವ ಮಂತ್ರವಾದಿಯಾಗಲಿದೆ. ಅದಕ್ಕೆ ಕಂಪನಿಗಳ ಕಣ್ಣು ಈ ಹೊಸತಿನ ಸಾಧ್ಯತೆಯ ಮೇಲೆ. ಹೊಸ ಬಿಸಿನೆಸ್ ಮಾಡೆಲ್ ಜೊತೆಗೆ ಭವಿಷ್ಯದಲ್ಲಿ ಅಳಿಯದೆ ಉಳಿಯುವ ಇಂತಹ ನಾನಾ ತರದ ಯೋಜನೆಗಳನ್ನು ಎಲ್ಲಾ ಕಂಪನಿಗಳು ಹುಟ್ಟುಹಾಕುತ್ತಿವೆ.

ಒಂದು ಅಂದಾಜಿನ ಪ್ರಕಾರ ಇನ್ನು ಕೆಲವೇ ವರ್ಷಗಳಲ್ಲಿ ೫೦ ಬಿಲಿಯನ್ ಗಿಂತಲೂ ಹೆಚ್ಚು ಪರಿಕರಗಳು ಇಂಟರ್ನೆಟ್ ಮುಖಾಂತರ ಒಂದಕ್ಕೊಂದು ಸಂಪರ್ಕ ಸಾಧಿಸಬಲ್ಲ ಶಕ್ತಿ ಪಡೆದುಕೊಂಡುಬಿಡುತ್ತವೆ. ತಾಂತ್ರಿಕ ಪರಿಭಾಷೆಯಲ್ಲಿ ‘ಇಂಟರ್ನೆಟ್ ಆಫ್ ಥಿಂಗ್ಸ್’ ಅಥವಾ ಚುಟುಕಾಗಿ ‘ಐಓಟಿ’ ಎಂದು ಕರೆಯಲ್ಪಡುವ ವಿದ್ಯಾಮಾನದಲ್ಲಿ ಮೂರೂ ‘ಎಸ್’ಗಳ (ಸಾಫ್ಟ್ವೇರ್, ಸೆನ್ಸರ್, ಸರ್ವಿಸ್) ಸಂಯೋಜಿತ ಸಾಧ್ಯತೆಗಳು ದೊಡ್ಡ ಸಂಚಲನೆಯನ್ನುಂಟು ಮಾಡಿ ನಾವು ಬದುಕುತ್ತಿರುವ ರೀತಿಯನ್ನೇ ಬದಲಾಯಿಸಿಬಿಡಲಿವೆಯಂತೆ ! ಯಂತ್ರ ಪರಿಕರಗಳು ತಮ್ಮತಮ್ಮಲ್ಲೇ ಸಂಭಾಷಿಸುವ, ಸಂವಹಿಸುವ ‘ಕೃತಕ ಬುದ್ಧಿಮತ್ತೆ’ ( ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ) ಯನ್ನು ಕರಗತ ಮಾಡಿಕೊಂಡು ಮನುಷ್ಯರಿಗಿಂತ ಹೆಚ್ಚಾಗಿ ಸಹಬಾಳ್ವೆ ನಡೆಸಲು ಸಿದ್ಧವಾಗುತ್ತಿದೆಯಂತೆ. ಕಾರಿನ ಭಾಗ ತಾನು ಕೆಡುವ ಮೊದಲೇ – ತಾನೇ ಅದರ ಕುರಿತು ಸುದ್ಧಿ ರವಾನಿಸುವುದು, ನಿರ್ಜನ ರಸ್ತೆಯ ನಡುವಲೆಲ್ಲೊ ಕೆಟ್ಟುನಿಂತ ಕಾರಿನ ರಿಪೇರಿಗೆ ಯಾರೂ ಕೇಳದೆಯೇ ತಂತ್ರಜ್ಞ ಹೊರಟು ಬರುವುದು, ವಾಷಿಂಗ್ ಮೆಷಿನ್ ಬಟ್ಟೆಯನುಸಾರ ಯಾವ ಪ್ರೋಗ್ರಾಮ್ ಸೂಕ್ತವೆಂದು ತಾನೇ ನಿರ್ಧರಿಸುವುದು, ಡ್ರೈವರನಿಲ್ಲದ ಸ್ವಯಂಚಾಲಿತ ಕಾರು – ಹೀಗೆ ಕಲ್ಪನೆಯ ಲಹರಿಯನ್ನು ಲಂಗುಲಗಾಮಿಲ್ಲದೆ ಬಿಟ್ಟುಕೊಂಡೇ ಸಂಪೂರ್ಣ ವಿಭಿನ್ನ ಜಗವನ್ನು ಚಿತ್ರಿಸಿಕೊಳ್ಳಬಹುದು. ಬಿಗ್ ಡೇಟಾ , ಕ್ಲೌಡ್ ತಂತ್ರಜ್ಞಾನ, ಕನೆಕ್ಟೆಡ್ ಇಂಡಸ್ಟ್ರಿ, ಐಓಟಿ, ಸ್ಮಾರ್ಟ್ ಸಿಟಿ, ಸ್ಮಾರ್ಟ್ ಹೋಂ – ಹೀಗೆ ಸಾಲುಸಾಲಾಗಿ ಹೊಸತರ ಆಗಮನಕ್ಕೆ ಕಾದು ಕೂತಿದೆ ಹತ್ತಿರದ ಭವಿಷ್ಯ. ಇಲ್ಲಿ ಐಟಿ ಯಾವುದು-ಐಟಿಯಲ್ಲದ್ದು ಯಾವುದು ಎನ್ನುವುದು ಗೊತ್ತೇ ಆಗದಂತೆ ಎಲ್ಲವು ಕಲಸುಮೇಲೋಗರವಾಗಿಬಿಡಲಿದೆ. ಇಂಟರ್ನೆಟ್ ಜಾಲದಲ್ಲಿ ಬಂಧಿತವಾದ ಎಲ್ಲವು (ನಾವೂ ಸೇರಿದಂತೆ) ತಂತಮ್ಮ ವೈಯಕ್ತಿಕ ಮಾಹಿತಿಯ ಗೋಪ್ಯತೆಯನ್ನು ಹೊಂದಾಣಿಕೆ ಮಾಡಿಕೊಂಡೆ ಈ ಹೊಸಜಗದ ಹೊಸಕ್ರಾಂತಿಯಲ್ಲಿ ಪಾಲುದಾರರಾಗಬೇಕಾಗುತ್ತದೆ…!

ಅಂದಮೇಲೆ ‘ಹಳೆ ಐಟಿ ಉದ್ಯೋಗ ಹೋದರೂ ಹೊಸತರ ಅವಕಾಶವಿದೆ ಎಂದಾಯ್ತಲ್ಲವೇ ?’ ಎಂದರೆ ಉತ್ತರ ಹೌದು ಮತ್ತು ಅಲ್ಲಾ. ಯಾಕೆಂದರೆ ಹೊಸತಿನ ಜಗದಲ್ಲಿ ಐಟಿಯು ನಾನ್-ಐಟಿಯ ಜೊತೆ ಕೈ ಕೈ ಮಿಲಾಯಿಸಿಬಿಡುವುದರಿಂದ ಅಲ್ಲಿ ಬೇಕಾಗುವ ಪರಿಣಿತಿ ಬರಿ ಐಟಿ ಮಾತ್ರದ್ದಾದರೆ ಸಾಕಾಗುವುದಿಲ್ಲ. ಒಂದು ರೀತಿಯ ವ್ಯಾವಹಾರಿಕ, ವಾಣಿಜ್ಯಪ್ರೇರಿತ ಮತ್ತು ಹೊಸ ತಾಂತ್ರಿಕತೆಯ ಸಂಯೋಜಿತ ಅಂಗಗಳ ಜ್ಞಾನ ಬೇಕಾಗುತ್ತದೆ. ಅಂದರೆ ಹೆಚ್ಚುಕಡಿಮೆ ಹಳೆಯದನ್ನೆಲ್ಲ ಮರೆತು ಹೊಸತನ್ನು ಕಲಿಯಬೇಕು. ಅನುಭವವಿಲ್ಲದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಲೇ ಹೊಸತ ಕಲಿಯುವ ಚಾಕಚಾಕ್ಯತೆ ಬೆಳೆಸಿಕೊಳ್ಳಬೇಕು. ಹಾಗಾದವರು ಮಾತ್ರ ಉಳಿದುಕೊಂಡು ಹೋಗಲು ಸಾಧ್ಯ. ಮಾತ್ರವಲ್ಲ – ಈಗಿನ ವಿಭಾಗಾಧಿಕಾರಿಗಳು, ಮ್ಯಾನೇಜರುಗಳು, ಟೀಮ್ ಲೀಡರುಗಳು, ಗ್ರೂಪ್ ಲೀಡರುಗಳು ಇಂತಹವರೆಲ್ಲರ ಕೆಲಸದ ವ್ಯಾಪ್ತಿ, ಜವಾಬ್ದಾರಿಯ ಪರಿಭಾಷೆ ಗುರುತೇ ಸಿಕ್ಕದ ಹಾಗೆ ಬದಲಾಗಲಿದೆ. ಇದೆಲ್ಲದರ ನಡುವೆ ಅಜೈಲ್ ಚಟುವಟಿಕೆಗಳು, ಯು ಎಕ್ಸ್ (ಯೂಸರ್ ಎಕ್ಸ್ ಪೀರಿಯೆನ್ಸ್ ) ಇತ್ಯಾದಿ ಅಭಿಯಾನಗಳು ಎಲ್ಲೆಡೆ ಕಾಣುವ ಸಾಮಾನ್ಯ ಅಂಶಗಳಾಗಲಿವೆ.

ಸಾರಾಂಶದಲ್ಲಿ ಹೇಳುವುದಾದರೆ ನಿಂತ ನೀರಾಗದ ಐಟಿ ಜಗದಲ್ಲಿ ನಿಂತ ನೀರಾಗದೆ ನಡೆವವ ಹೇಗೋ ಬದುಕಿಕೊಳ್ಳುತ್ತಾನೆ; ನಡೆಯದವ ಅಪ್ರಸ್ತುತವಾಗಿ ಮಾಯವಾಗುತ್ತಾನೆ. ಆದರೆ ನಿಂತ ನೀರಾಗದಂತಿರಲು ತೆರಬೇಕಾದ ಬೆಲೆ ಮಾತ್ರ ಅಪಾರ. ವೈಯಕ್ತಿಕ ಬದುಕಿನ ಎಷ್ಟೋ ಅನುಭವ-ಅನುಭಾವ-ಅನುಭೂತಿಗಳನ್ನು ಅನುಭವಿಸಲಾಗದೆ ವಂಚಿತರಾಗುತ್ತಾ , ಕಾರ್ಪೊರೇಟ್ ಜಗದ ಜಂಜಾಟದಲ್ಲಿ ಕಳೆದುಹೋಗಿ ಗೊತ್ತುಗುರಿಯಿಲ್ಲದ ಕುರಿಯ ಹಾಗೆ ಯಾವುದೋ ಗಮ್ಯದ ಬೆನ್ನಟ್ಟಿ ಉಸಿರಾಡಲು ವ್ಯವಧಾನವಿಲ್ಲದವನಂತೆ ನಡೆಯುತ್ತಿರಬೇಕು. ಈ ಜಗದಲ್ಲಿ ಅಪ್ರಸ್ತುತವಾಗದೆ ಹೇಗೋ ಹೆಣಗಾಡಿಕೊಂಡಿರಬೇಕೆಂದರೆ ಪರ್ಯಾಯ ಮಾರ್ಗವಿಲ್ಲದ ಅನಿವಾರ್ಯ ಪಥವಿದು. ಅದರಲ್ಲಿ ನಡೆವವರ ಜೊತೆಗೆ ಅವರ ಸುತ್ತಲ ಪರಿಸರ, ಅವರ ಸಂಸಾರ, ಮತ್ತಿತರ ‘ಎಕೋ ಸಿಸ್ಟಮ್’ ಕೊಂಡಿಗಳೂ ಅದೇ ದಾರಿಯಲ್ಲಿ ನಡೆಯುತ್ತಾ ಕೊನೆಗೆ ಸಮಷ್ಟಿ ಪೂರಾ ಆ ಸಮೂಹ ಸನ್ನಿಯ ಭಾಗವಾಗುವುದನ್ನು ನಾವಾರು ತಡೆಹಿಡಿಯಲಾಗದೇನೋ…!

ಬಹುಶಃ ಈ ಚಕ್ರವ್ಯೂಹದಲ್ಲಿ ಸಿಕ್ಕಿಕೊಳ್ಳಬಾರದೆಂದಿದ್ದರೆ ಐಟಿ ಜಗದಿಂದ ಮೊದಲಿಂದಲೇ ದೂರವಿದ್ದು ಬೇರಾವುದಾದರೂ ಉದ್ಯಮವನ್ನು ಆಯ್ಕೆ ಮಾಡಿಕೊಂಡರೆ ಒಳಿತೇನೋ – ಸ್ವಲ್ಪ ಕಡಿಮೆ ಸಂಪಾದನೆಯಿದ್ದರೂ ಸರಿ. ಈಗಂತೂ ಲಾಯರು, ಅಕೌಂಟೆಂಟ್ ಗಳಂತಹ ಸಾಂಪ್ರಾದಾಯಿಕ ಉದ್ಯೋಗಗಳಲ್ಲದೆ ಕಂಡು ಕೇಳರಿಯದ ಅನೇಕ ರೀತಿಯ ಹೊಸಹೊಸ ಸಾಧ್ಯತೆಗಳು ಹುಟ್ಟಿಕೊಂಡಿವೆ. ಅಲ್ಲೂ ಐಟಿ ಆಧುನಿಕತೆಯ ಪ್ರಭಾವ ತಡೆಯಲಾಗದಿದ್ದರು ಅದು ಬಹುತೇಕ ಗ್ರಾಹಕತ್ವ ರೂಪದಲ್ಲಿ ಹೆಚ್ಚಿರುತ್ತದೆಯೇ ಹೊರತು ಪೂರ್ಣಾಧಿಪೂರ್ಣ ಐಟಿ ಜಗವಾಗುವುದಿಲ್ಲ. ಅಥವಾ ಐಟಿಯಲ್ಲೇ ಇರಬೇಕೆಂದರು ಏನಾದರೂ ಸ್ವಂತದ ಉದ್ಯಮದ ಆಲೋಚನೆ ಮಾಡುತ್ತಾ ಕೃಷಿ, ಹೈನುಗಾರಿಕೆ, ಗುಡಿ ಕೈಗಾರಿಕೆಯಂತಹ ಸ್ಥಳೀಯ ಸಮಸ್ಯೆಗಳಿಗೆ ಐಟೀ ಪ್ರೇರಿತ ಚಮತ್ಕಾರಿಕ, ಕ್ರಾಂತಿಕಾರಕ ಉತ್ತರ ಕಂಡು ಹಿಡಿಯುವ ಹಾದಿಯಲ್ಲಿ ನಡೆದರೆ ಹೊಸ ಉದ್ಯೋಗಗಳ ಸೃಷ್ಟಿಯೂ ಆದಂತಾಗುತ್ತದೆ. ಈಗಿನ ಕೇಂದ್ರ ಸರಕಾರದ ‘ಮೇಕ್ ಇನ್ ಇಂಡಿಯಾ’ದಂತ ಅನೇಕಾನೇಕ ಯೋಜನೆಗಳ ಲಾಭ ಪಡೆದು ಆ ದಾರಿಯಲ್ಲಿ ಮುನ್ನಡೆದರೆ ಬೇರೆಯವರ ಐಟಿ ಕೆಲಸ ಮಾಡುವ ‘ಸೇವಕ ಎಕಾನಮಿ’ ಯಿಂದ ಬೇರೆಯವರಿಗೆ ಅಂತಹ ಕೆಲಸ ನೀಡಬಲ್ಲ ‘ಮಾಲೀಕ ಎಕಾನಮಿ’ಗೆ ಸುಲಭದಲ್ಲಿ ಪರಿವರ್ತಿತರಾಗಬಹುದು.

– ನಾಗೇಶ ಮೈಸೂರು
(Picture source : internet)