02108. ಐಟಿ ಜಗದ ಹೆಣಗಾಟ – ದಿಕ್ಕು ತಪ್ಪಿದ ನಾವೆಯ ಪಯಣಿಗರ ಪಾಡೇನು ?


02108. ಐಟಿ ಜಗದ ಹೆಣಗಾಟ – ದಿಕ್ಕು ತಪ್ಪಿದ ನಾವೆಯ ಪಯಣಿಗರ ಪಾಡೇನು ?
____________________________________________________________
(ಪ್ರಬಂಧ / ಲೇಖನ : ಸ್ವಲ್ಪ ಸಂಡೇ ಪುರುಸೊತ್ತಿಗೆ ಸೀರಿಯಸ್ ಮ್ಯಾಟರ್ 😊)


ದೇಶದ ಹೊರಗೆ ವಿದೇಶದಲ್ಲಿ ಕೂತು, ಆಗೀಗೊಮ್ಮೆ ಊರೊಳಗಿನ ಸುದ್ದಿಯತ್ತ ಇಣುಕುವುದು ನನ್ನ ದಿನನಿತ್ಯದ ಹವ್ಯಾಸ. ಹಾಗೆ ನೋಡುವಾಗ ತಪ್ಪದೆ ಓದುವ ವಸ್ತುವೆಂದರೆ ಐಟಿ ಜಗಕ್ಕೆ ಸಂಬಂಧಿಸಿದ್ದು. ಪ್ರಾಜೆಕ್ಟು ಮ್ಯಾನೇಜ್ಮೆಂಟಿನ ಜಗದೊಡನಿರುವ ಕೊಂಡಿಯಿಂದಾಗಿ ಕೆಲವು ಕುತೂಹಲಜನ್ಯವಾದರೆ ಮಿಕ್ಕಿದವು ಅನಿವಾರ್ಯತೆಯಿಂದ ಪ್ರೇರಿತವಾದ ಶಿಶುಗಳು. ಆಗೆಲ್ಲ ರಾಚುವ ಹಾಗೆ ಎದ್ದು ಕಾಣುವ ವಿದ್ಯಾಮಾನಗಳಲ್ಲಿ ಕೆಲವು ಗಮನಾರ್ಹ ಸಂಗತಿಗಳು ಕಾಡದೆ ಬಿಡವು. ಅದಕ್ಕೆ ಆ ಕ್ಷೇತ್ರದಲ್ಲೇ ಕೆಲಸ ಮಾಡಿಕೊಂಡಿರುವುದು ಒಂದು ಕಾರಣವಾದರೆ, ಜಾಗತಿಕ ಗೋಮಾಳದಲ್ಲಿ ಎಲ್ಲಿ ಏನೇ ನಡೆದರೂ ಅದರ ಪರಿಣಾಮ ಎಲ್ಲರಿಗು ಒಂದಲ್ಲ ಒಂದು ರೀತಿ ತಟ್ಟಿಯೇ ತೀರುವುದರಿಂದ ಐಟಿ ಜಗದ ವಿದ್ಯಾಮಾನಗಳ ಮೇಲೆ ಒಂದು ಕಣ್ಣಿಟ್ಟಿರಬೇಕಾದ ಅನಿವಾರ್ಯ ಇನ್ನೊಂದು ಕಾರಣ.

ವರ್ಷಕ್ಕೋ ಆರು ತಿಂಗಳಿಗೋ, ಊರಿಗೆ ಬಂದಾಗಲೊ ಅಥವಾ ಇಲ್ಲಿಗೆ ಬಂದವರಾರೊ ಸಿಕ್ಕಿದಾಗಲೋ – ಹೀಗೆ ಯಾರಾದರೂ ಸಂಪರ್ಕಕ್ಕೆ ಬಂದಾಗ ಒಂದಲ್ಲ ಒಂದು ರೀತಿಯಲ್ಲಿ ತಪ್ಪದೆ ಇಣುಕುವ ವಿಷಯ – ಅವರ ಕುಟುಂಬದಲ್ಲೊ ಅಥವಾ ಹತ್ತಿರದ ಸಂಬಂಧದಲ್ಲೋ ಯಾರೋ ಒಬ್ಬರು ಇಂಜಿನಿಯರಿಗೂ ಮಾಡುತ್ತಿರುವ ಕುರಿತದ್ದು . ಯಾವ ಬ್ರಾಂಚ್, ಎಷ್ಟನೇ ವರುಷ ಇತ್ಯಾದಿಗಳೆಲ್ಲದರ ಯಾದಿ ಮುಗಿದ ಮೇಲೆ ಕೊನೆಯಲ್ಲಿ ತಪ್ಪದೆ ಬರುವ ಕೋರಿಕೆ – ‘ಇನ್ನೆರಡು ವರ್ಷಕ್ಕೆ ಕೋರ್ಸ್ ಮುಗಿಯುತ್ತೆ.. ಆಗ ನಿಮ್ಮ ಕಂಪನಿಲೋ, ಇನ್ನೆಲ್ಲಾದ್ರೂ ಒಂದು ಕೆಲಸಕ್ಕೆ ಹೆಲ್ಪ್ ಮಾಡಿ ಸಾರ್..’ ಅಂತ ಯಾವುದಕ್ಕೂ ಇರಲಿ ಅನ್ನೋ ಒಂದು ಅರ್ಜಿ ಗುಜರಾಯಿಸುತ್ತಾರೆ. ಆ ಮಾತಿನ ಹಿಂದೆ ‘ಕ್ಯಾಂಪಸ್ ಇಂಟರ್ವ್ಯೂಲೇ ಸಿಗುತ್ತೆ.. ಬೈ ಚಾನ್ಸ್ ಮಿಸ್ ಆದ್ರೆ ಇರಲಿ, ಹೇಳಿಟ್ಟುಕೊಂಡಿರೋಣ’ ಅನ್ನೋ ಭಾವನೆ ಹೇಳದೆ ಇದ್ರೂ ಇಣುಕಿರುತ್ತೆ.

ನಾನೂ ಹೊರಗಿನ ದೇಶದಲ್ಲಿರೋದ್ರಿಂದ ಇಲ್ಲಿನ ಸ್ಥಳೀಯ ಸಂಪರ್ಕ ಕಡಿಮೆ ಅಂದರೂ ‘ನಿಮ್ ಫ್ರೆಂಡ್ಸ್ ಗೊತ್ತಿರ್ತಾರಲ್ಲ ಬಿಡಿ ಸಾರ್’ ಅಂತ ನನ್ನನ್ನೇ ಅನಧಿಕೃತ ‘ಎಂಪ್ಲಾಯ್ಮೆಂಟ್ ಎಕ್ಸ್ಚೇಂಜ್’ ಲೆವೆಲ್ಲಿಗೆ ಏರಿಸಿ ನಕ್ಕುಬಿಡುತ್ತಾರೆ. ಆ ಲೋಕಾಭಿರಾಮದ ಮಾತಿನಲ್ಲೇ ಬೇರೇನೂ ಕೇಳಲು ವಿಷಯವಿರದಿದ್ದರೆ ನಾನೂ ತಪ್ಪದೆ ಕೇಳುವ ಒಂದು ಪ್ರಶ್ನೆ , ‘ ಯಾವ ಕಾಲೇಜು ?’ ಪ್ರತಿಬಾರಿಯೂ ಅವರ ಉತ್ತರ ನನ್ನನ್ನ ಮೂಕವಿಸ್ಮಿತನನ್ನಾಗಿಸುತ್ತದೆ. ಯಾಕೆಂದರೆ ಅವರು ಹೇಳುವ ಕಾಲೇಜ್ಯಾವುದೂ ನಾ ಕೇಳೇ ಇರದ ಹೆಸರುಗಳು. ನಾನೂ ಮೈಸೂರಿನಲ್ಲಿ ಓದುತ್ತಿದ್ದಾಗ ಇಂಜಿನಿಯರಿಂಗ್ ಅಂದರೆ ಕಿವಿಗೆ ಬೀಳುತ್ತಿದ್ದುದ್ದು ಎರಡೇ ಕಾಲೇಜುಗಳ ಹೆಸರು – ಏನ್.ಐ.ಇ ಮತ್ತು ಜೆ.ಸಿ.ಇ. ‘ ಯಾವ ಕಾಲದಲ್ಲಿದೀರಿ ಸಾರ್ ನೀವು , ಈಗ ಹತ್ತದಿನೈದು ಇಂಜಿನಿಯರಿಂಗ್ ಕಾಲೇಜುಗಳಿವೆ ಮೈಸೂರಲ್ಲಿ’ ಎಂದಾಗ ‘ಅಷ್ಟೊಂದಾಗಿವೆಯ?’ ಅನಿಸಿ ದಿಗ್ಭ್ರಮೆಯ ಜತೆ ಪಿಚ್ಚೆನಿಸುವ ಭಾವವು ಮೂಡುತ್ತದೆ. ‘ಇಷ್ಟೊಂದು ಕಾಲೇಜುಗಳಿಂದ ಬರುವ ಎಲ್ಲರಿಗು ಸಿಗುವಷ್ಟು ಕೆಲಸಗಳು ನಮ್ಮಲ್ಲಿ ಪ್ರತಿವರ್ಷವೂ ಹುಟ್ಟಿಕೊಳ್ಳುತ್ತಿದೆಯಾ ?’ ಎಂದು ತಲೆಕೆರೆದುಕೊಳ್ಳುತ್ತೇನೆ.

‘ದೊಡ್ಡ ದೊಡ್ಡ ಕಂಪನಿಯವರು ಬಂದು ಕ್ಯಾಂಪಸ್ ಇಂಟರ್ವ್ಯೂ ಮಾಡಿದರು ಬರಿ ಟಾಪರ್ಸ್ ಮಾತ್ರ ತೊಗೋತಾರೆ ಸಾರ್.. ಮಿಕ್ಕವರು ಹೆಣಗಾಡೋದು ತಪ್ಪೊಲ್ಲ’ ಎಂದರೊಬ್ಬರು ಪರಿಚಯದವರು.

‘ ಮತ್ತೆ ಅವರೇನು ಕೆಲಸ ಇಲ್ಲದೆ ಒದ್ದಾಡ್ತಿರ್ತಾರ ?’ ನಾನೂ ಕುತೂಹಲಕ್ಕೆ ಕೇಳಿದೆ.

‘ಹಾಗೇನು ಇಲ್ಲಾ ಸಾರ್ ಹೋಲಿಕೇಲಿ ತೀರಾ ಕಮ್ಮಿ ಸಂಬಳಕ್ಕೆ ಸಿಗೋ ಕೆಲಸಗಳು ಬೇಕಾದಷ್ಟು ಇರುತ್ತೆ.. ಎಲ್ಲೋ ಒಂದ್ಕಡೆ ಸೇರ್ಕೊಂಡು ಎಕ್ಸ್ಪೀರಿಯೆನ್ಸ್ ಮಾಡ್ಕೊಂಡು ಆಮೇಲೆ ಸುಮಾರಾಗಿರೋ ಕಂಪನಿಗೆ ಜಂಪ್ ಆಗ್ತಾರೆ..’

ಅದು ನಿಜವೇ – ನಮ್ಮಲ್ಲಿನ ಐಟಿ ಜಗದ ಕೆಲಸಗಳು ತೀರಾ ಮಾಡಲಾಗದ ಘನಂದಾರಿ ಸ್ತರದವೇನಲ್ಲ. ಅನುಭವ ಇಟ್ಟುಕೊಂಡು ಬಂದರೆ, ಸರಿಯಾದ ಮನೋಭಾವ ಇರುವ ವ್ಯಕ್ತಿತ್ವವಿದ್ದರೆ ಸಾಕು. ಅದರಲ್ಲೂ ಬುದ್ಧಿವಂತರೆಂದು ಕ್ಯಾಂಪಸ್ಸಿನಲ್ಲಿ ಆಯ್ದುಕೊಂಡವರು ಕೂಡ ಅಲ್ಲೇ ಭದ್ರವಾಗಿ ನೆಲೆ ನಿಲ್ಲುವರೆಂದು ಹೇಳಲಾಗದು. ಕೊಂಚ ದಿನಗಳಲ್ಲೇ ಚಡಪಡಿಕೆ ಶುರುವಾಗುತ್ತದೆ – ಹೆಚ್ಚಿನ ಸಂಬಳ, ಪ್ರಮೋಷನ್ ಹಂಬಲ, ವಿದೇಶಿ ಅಸೈನ್ಮೆಂಟಿನ ಅವಕಾಶ ಇತ್ಯಾದಿಗಳನ್ನು ಬೆನ್ನಟ್ಟುವ ಹುನ್ನಾರ. ಒಂದಲ್ಲ ಒಂದು ಕಾರಣಕ್ಕೆ ಬಿಟ್ಟುಹೋಗುವ ಅವರ ಜಾಗವನ್ನು ಇಂತಹವರು ತುಂಬಿಸುತ್ತಾರೆ. ಕ್ಯಾಂಪಸ್ಸಿನ ಇಂಟರ್ವ್ಯೂನಲ್ಲಿರದಿದ್ದ ಅಂಕಗಳ ಬೆಂಬಲ, ಅನುಭವದ ಹಿನ್ನಲೆಯಲ್ಲಿ ನಗಣ್ಯವಾಗಿಬಿಡುತ್ತದೆ. ಇಂತಹವರದೊಂದು ಗುಂಪೇ ಮೌನಸಾಧಕರ ಹಾಗೆ ಸದ್ದು ಮಾಡದೆ ತಮ್ಮ ಪಾಡಿಗೆ ತಮ್ಮ ಕೆಲಸ ಮಾಡಿಕೊಂಡು ಹೋಗುವವರ, ಮೇಲ್ನೋಟಕ್ಕೆ ಎದ್ದುಕಾಣದ ಸಮೂಹ. ನಮ್ಮ ಬಹುಪಾಲು ಐಟಿ ಕಂಪನಿಗಳಲ್ಲಿ ಮಾಡುವ ಕೆಲಸಗಳ ಸ್ತರ ತೀರಾ ಹೆಚ್ಚಿನದಲ್ಲವಾಗಿ, ಕೆಲಸ ನಿಭಾಯಿಸಿಕೊಂಡು ಹೋಗುವುದೇನು ದೊಡ್ಡ ತಲೆನೋವಲ್ಲ. ಮಸಲಾ, ಕ್ಯಾಂಪಸ್ ಇಂಟರ್ವ್ಯೂನಲ್ಲಿ ಆಯ್ದುಕೊಂಡಾಗಲೂ ಅವರಾರು ಸಿದ್ದ ಸ್ಥಿತಿಯಲ್ಲೇನು ಇರುವುದಿಲ್ಲ; ತರಬೇತು ಕೊಟ್ಟೆ ರೆಡಿಯಾಗಿಸಬೇಕು. ಅದಕ್ಕೆಂದೇ ಅವರು ಯಾವ ಬ್ರಾಂಚಿನಲಿದ್ದರು ಸರಿ – ಅಂಕದ ಪರಿಗಣನೆ, ರಿಟನ್ ಟೆಸ್ಟ್ , ಇಂಟರ್ವ್ಯೂ ಆಧಾರದ ಮೇಲೆ ಆಯ್ದುಕೊಳ್ಳುತ್ತಾರೆ.

ಇದೇನೋ ಹೀಗೇ ನಡೆದುಕೊಂಡು ಬಂದಿದೆ ಇಲ್ಲಿಯತನಕ. ಆದರೆ ಪ್ರಶ್ನೆ – ಹೀಗೆಯೇ ಮುಂದುವರೆಯುತ್ತದೆಯಾ? ಅಂತ. ಈಚಿನ ದಿನಗಳಲ್ಲಿ ಮೆಲುವಾಗಿ ಕೇಳುತ್ತಿರುವ ಅತಂಕದ ದನಿ – ‘ಹತ್ತಿರದ ಭವಿಷ್ಯದಲ್ಲಿ ಎಷ್ಟೋ ಕೆಳಗಿನ ಸ್ತರದ ಐಟಿ ಕೆಲಸಗಳು ಮಂಗಮಾಯವಾಗಿಬಿಡಲಿವೆ’ ಎನ್ನುವುದು. ನಿರಂತರವಾಗಿ ಆಧುನಿಕರಣಗೊಳ್ಳುತ್ತ, ಸ್ವಯಂಚಾಲಿತ ಸ್ತರಕ್ಕೆ (ಆಟೋಮೇಷನ್) ವರ್ಗಾವಣೆಗೊಳ್ಳುವ ಕೆಲಸಗಳು ಎಲ್ಲಾ ಕ್ಷೇತ್ರಗಳಲ್ಲೂ ಇದ್ದದ್ದೇ. ಇದು ಐಟಿ ಜಗವನ್ನು ಬಿಟ್ಟಿದ್ದಲ್ಲ. ವ್ಯತ್ಯಾಸವೆಂದರೆ ಐಟಿ ಜಗದಲ್ಲಿ ಅದರ ವೇಗೋತ್ಕರ್ಷ, ಉದ್ದಗಲದಳತೆ ಮತ್ತು ವಿಸ್ತಾರ ವ್ಯಾಪ್ತಿ ತುಂಬಾ ಹೆಚ್ಚು. ವಿಪರ್ಯಾಸವೆಂದರೆ, ಒಂದು ಹಂತದಲ್ಲಿ ಆ ಕೆಳಸ್ತರದ ಕೆಲಸಗಳೇ ಸಾವಿರಾರು ಐಟಿ ಉದ್ಯೋಗಗಳನ್ನು ಹುಟ್ಟುಹಾಕಿರುತ್ತದೆ. ಕಾಲಾನುಕ್ರಮಣದ ನಿರಂತರ ಕ್ಷಮತೆ, ದಕ್ಷತೆಯ ಬೆನ್ನಟ್ಟುವ ಪ್ರಕ್ರಿಯೆಯಲ್ಲಿ , ಅದನ್ನು ಮಾಡುವವರಲ್ಲೇ ಒಂದು ಗುಂಪು ಅವುಗಳನ್ನಧಿಗಮಿಸುವ ಮುಂದಿನ ಹಂತ ಅಥವಾ ಉನ್ನತಸ್ತರದ ಕಾರ್ಯ ಕ್ಷೇತ್ರದಲ್ಲಿ ತೊಡಗಿರುತ್ತಾರೆ. ಅವರ ಸೃಜನಶೀಲತೆ ಮತ್ತು ಬುದ್ದಿವಂತಿಕೆ ಹೊಸತಿನ ಸೃಷ್ಟಿಗೆ ಕಾರಣವಾದಷ್ಟೇ ಹಳತನ್ನು ಕಬಳಿಸುವ ಉಪವಲಯವನ್ನು ಸೃಷ್ಟಿಸುತ್ತದೆ. ಇದು ೧:೧ ರ ಅನುಪಾತದಲ್ಲಿ ರೂಪಾಂತರವಾಗುವ ಉದ್ಯೋಗಾವಕಾಶವಾದರೆ ಪರವಾಗಿಲ್ಲ – ಆಗ ಹಳಬರು ಹೊಸತನ್ನು ಕಲಿತು ಹೊಂದಿಕೊಳ್ಳಬೇಕಾದ ತರಬೇತಿಯ ಅಗತ್ಯ ಮಾತ್ರವಿರುತ್ತದೆ. ಆದರೆ ನಿಜದಲ್ಲಾಗುವುದು ಹಾಗಲ್ಲ. ಆಧುನೀಕರಣ, ಆಟೋಮೇಷನ್ ಎಂದಾಗ ಹತ್ತು ಜನರ ಉದ್ಯೋಗವನ್ನು ಕಬಳಿಸುವ ದೈತ್ಯ ಹೊಸದಾಗಿ ಒಂದು ಕೆಲಸಕ್ಕೆ ಮಾತ್ರ ಅವಕಾಶವೀಯುತ್ತಾನೆ – ಅದೂ ತರಬೇತಿ, ಕೌಶಲ್ಯ ಪರಿವರ್ತನೆಯ ತರುವಾಯ. ಅಂದಾಗ ಮಿಕ್ಕ ೯ ಉದ್ಯೋಗಗಳ ಪಾಡೇನು ? ಹೆಚ್ಚಿನ ಸ್ತರದ ಅಥವಾ ಇನ್ನು ಬದಲಾಗದ ಮತ್ತೊಂದು ಕಡೆಯ, ಸಿಕ್ಕಿದ್ದಕ್ಕೆ ಹೊಂದಿಕೊಳ್ಳುವ ಕೆಲಸ ಮಾಡಬೇಕಾಗುತ್ತದೆ. ಹಳತನ್ನು ಹೇಗೂ ಸ್ವಲ್ಪ ಕಾಲ ಉಳಿಸಿಕೊಳ್ಳುವ ಅನಿವಾರ್ಯತೆಯಿರುವುದರಿಂದ ಒಂದಷ್ಟು ಜನ ಅಲ್ಲೇ ಹೆಣಗುತ್ತಾ ಒದ್ದಾಡುತ್ತಾರೆ. ಎಲ್ಲಿಯತನಕ ಅದು ಪ್ರಸ್ತುತವೋ ಅಲ್ಲಿಯತನಕ ನಡೆಯಬಹುದು; ಆದರೆ ಒಂದಲ್ಲಾ ಒಂದು ದಿನ ಬದಲಾವಣೆಯ ಚಕ್ರಕ್ಕೆ ತಲೆಯೊಡ್ಡದೆ ವಿಧಿಯಿಲ್ಲ. ಹೀಗೆ ಐಟಿಯಲ್ಲಿ ಕೆಲಸ ಮಾಡುವ ಅದೇ ಜನರೇ ತಮ್ಮ ಸಂಕುಲದ ಉದ್ಯೋಗಗಳನ್ನು ಕಬಳಿಸುವ ಹೊಸತರ ಸೃಷ್ಟಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುತ್ತಾರೆ ತಮ್ಮರಿವಿಲ್ಲದೆಯೆ !

ಅಂದರೆ ಈ ಐಟಿ ಜಗದ ಒಂದು ಅಲಿಖಿತ ನಿಯಮ ನಿರಂತರ ಬದಲಾವಣೆ; ಜತೆಗೆ ನಿರಂತರ ಕೌಶಲ ಗಳಿಕೆಯ ಅನಿವಾರ್ಯತೆ. ಅಲ್ಲೂ ಸಾಕಾಗುವಷ್ಟು ಅವಕಾಶಗಳು ಸೃಷ್ಟಿಯಾಗಲೆಂಬ ಬೇಡಿಕೆ. ಈ ಕಾರಣದಿಂದಲೇ ಐಟಿ ಕಂಪನಿಗಳು ಸ್ಪರ್ಧಾತ್ಮಕವಾಗಿ ಇರಬೇಕೆಂದರೆ ಹೊಸ ಹೊಸ ಗ್ರಾಹಕರನ್ನು ಸೇರಿಸುತ್ತಲೇ ಇರಬೇಕು, ಹೊಸ ಅಗತ್ಯಗಳಿಗನುಸಾರ ಕೌಶಲ್ಯ ವೃದ್ಧಿಗೆ ಯತ್ನಿಸುತ್ತಲೇ ಇರಬೇಕು. ಇರುವ ಎಲ್ಲರ ಕೌಶಲ್ಯಗಳನ್ನು ಏಕಾಏಕಿ ಪರಿವರ್ತಿಸುವುದು ಹೇಳಿದಷ್ಟು ಸುಲಭವಲ್ಲ, ಅರ್ಧಕ್ಕರ್ಧ ಸಾಧ್ಯವೂ ಆಗುವುದಿಲ್ಲ. ಹಾಗೆಂದು ಲಾಭವಿಲ್ಲದ ಕಡೆಯ ಕೆಲಸವಿಲ್ಲದವರನ್ನ ಇಟ್ಟುಕೊಂಡು ಪುಕ್ಕಟೆ ಸಾಕಲು ಕಂಪೆನಿಗಳೇನು ಧರ್ಮಛತ್ರವಲ್ಲವಲ್ಲ ? ಅಲ್ಲಿಂದಲೇ ಶುರುವಾಗುವುದು ಪಿಂಕ್ ಸ್ಲಿಪ್, ಲೋ ಹೈ ಪರ್ಫಾರ್ಮ ಇತ್ಯಾದಿಗಳ ಭರಾಟೆ. ಇದು ಸದಾ ನಡೆಯುತ್ತಿರುವ ಪ್ರಕ್ರಿಯೆಯಾದರು, ‘ ಏಕಾಏಕಿ ಸಾವಿರಸಾವಿರಗಟ್ಟಲೆ ಕೆಲಸಗಳು ನಿರುಪಯೋಗಿಯಾಗಿಬಿಡುತ್ತವಾ ? ಒಟ್ಟಾರೆ ಅಷ್ಟೊಂದು ಜನ ಕೆಲಸಕಳೆದುಕೊಳ್ಳುವ ಮಟ್ಟ ಬಂದುಬಿಡುತ್ತದೆಯಾ? ಅಷ್ಟೂ ಜನಕ್ಕೆ ಬದಲಿ ಉದ್ಯೋಗ ಸಿಗದೇ ದೊಡ್ಡ ನಿರುದ್ಯೋಗಿ ಬಣ ನಿರ್ಮಾಣವಾಗಿಬಿಡುತ್ತದೆಯಾ?’ ಎನ್ನುವುದು ಈಗ ಕಾಡಲಾರಂಭಿಸಿರುವ ಪ್ರಶ್ನೆಗಳು.

ಒಂದು ವೇಳೆ ಐಟಿ ಜಗದ ಸಿಕ್ಕಾಪಟ್ಟೆ ಜನ ನಿಜಕ್ಕೂ ನಿರುದ್ಯೋಗಿಗಳಾಗಿ ಬಿಡುತ್ತಾರೆ ಅಂದುಕೊಳ್ಳೋಣ. ಆಗ ಅವರ ಜೀವನ ಶೈಲಿಯ ಮೇಲಾಗುವ ಪರಿಣಾಮ ನಿಜಕ್ಕೂ ಊಹಾತೀತ. ಹೆಚ್ಚಿನ ಸಂಬಳದೊಡನೆ ಅದಕ್ಕೊಂದುವ ಜೀವನ ಶೈಲಿಗೆ ಒಗ್ಗಿಕೊಂಡ ಯುವ ಜನತೆ ಏಕಾಏಕಿ ಎಲ್ಲವನ್ನು ನಿಯಂತ್ರಿಸುವ, ಹತೋಟಿಯಲ್ಲಿಡುವ ನಿರ್ಬಂಧಿತ ಜೀವನಕ್ರಮಕ್ಕೆ ಪರಿವರ್ತಿಸಿಕೊಳ್ಳಬೇಕೆಂದರೆ ಅಷ್ಟು ಸುಲಭವಲ್ಲ. ಸರೀಕರ ಮತ್ತು ಜನರ ಕಣ್ಣೆದುರು ಅದುವರೆಗೂ ನಿಭಾಯಿಸಿಕೊಂಡ ಜೀವನಶೈಲಿಯ ಮಟ್ಟವನ್ನು ಉಳಿಸಿಕೊಂಡು ಬರುವಲ್ಲಿ ಹೆಣಗಬೇಕಾಗುತ್ತದೆ. ಬದುಕು, ಆದಾಯ, ಸಂಬಳ ಹೀಗೆ ಇರುತ್ತದೆಂಬ ಉತ್ಸಾಹದಲ್ಲಿ ಖರೀದಿಸಿದ ಕಾರು, ಮನೆ ಇತ್ಯಾದಿಗಳ ಮೇಲಿನ ಸಾಲ ಏಕ್ದಂ ಏರಲಾಗದ ಕಡಿದಾದ ಬೆಟ್ಟದ ಹಾಗೆ ಎದುರು ನಿಂತುಬಿಡುತ್ತದೆ. ಸಾಲಗಳ ಮಾತಿರಲಿ ಮಾಮೂಲಿ ಊಟಕ್ಕೆಂದು ಹೋಗುತ್ತಿದ್ದ ರೆಸ್ಟೋರೆಂಟುಗಳತ್ತ ಕಣ್ಣು ಹಾಯಿಸಲು ಭಯಪಡಬೇಕಾಗುತ್ತದೆ. ಅಲ್ಲಿ ಕೊಡುತ್ತಿದ್ದ ಟಿಪ್ಸ್ನಲ್ಲಿ ಊಟ ಮುಗಿಸಬೇಕಾದ ಅನಿವಾರ್ಯ ಕಾಡುತ್ತದೆ. ಹಾಕುವ ಬಟ್ಟೆಬರೆ, ಮಾಡುವ ಶೋಕಿ ಎಲ್ಲವು ಹೊಸ ಗಡಿಯಾರದ ಗಣನೆಗೆ ತಾಳ ಹಾಕಬೇಕಾಗುತ್ತದೆ. ಎಲ್ಲವು ಚೆನ್ನಾಗಿದ್ದಾಗ ಚೌಕಾಸಿ ಮಾಡದೆ ಕೇಳಿದಷ್ಟು ಕೊಟ್ಟು ಒಟ್ಟಾರೆ ಜೀವನ ವೆಚ್ಚ ಅಡೆತಡೆಯಿಲ್ಲದೆ ಅಡ್ಡಾದಿಡ್ಡಿ ಏರಿಸಲು ಕಾರಣವಾಗಿದ್ದವರೇ, ಅಂದು ಅದರೆದುರು ತತ್ತರಿಸುವಂತಾಗುತ್ತದೆ. ಅವರಿಗೆ ಹೊಂದುವ ಮತ್ತೊಂದು ಕೆಲಸ ಸಿಕ್ಕಿತೋ ಬಚಾವು. ಇಲ್ಲದಿದ್ದರೆ ದೇವರೇ ಗತಿ…!

ಹೀಗೆ ದೊಡ್ಡ ಸಂಖ್ಯೆಯಲ್ಲಿ ಕಳುವಾಗಿಹೋಗುವ ಉದ್ಯೋಗಗಳು – ನಿಜಕ್ಕೂ ಹಾಗಾಗಲಿದೆಯಾ ? ಆಗುವುದೋ ಬಿಡುವುದೋ – ಹಾಗಾಗಬಹುದೆನ್ನುವ ಮಾತಂತೂ ಅಲ್ಲಲ್ಲಿ ಕೇಳಿಬರತೊಡಗಿದೆ. ಕಂಪನಿಗಳು ಇದನ್ನು ‘ಮಾಮೂಲಿಯಾಗಿ ನಡೆವ ಪ್ರಕ್ರಿಯೆ, ವಾರ್ಷಿಕ ಗಣತಿ, ಮೌಲ್ಯಮಾಪನದಲ್ಲಿ ಎಳ್ಳುಜೊಳ್ಳು ಬೇರ್ಪಡಿಸಿ ಏಗಲಾಗಲಾರದವರನ್ನು ಒಂದೆರಡು ಬಾರಿ ಅವಕಾಶ ನೀಡಿ, ತದನಂತರ ಗೇಟ್ ಪಾಸ್ ಕೊಟ್ಟುಕಳಿಸುವುದು ಸದಾ ನಡೆಯುತ್ತಿರುತ್ತದೆ’ ಎನ್ನುತ್ತಿದ್ದಾರೆ. ಇದು ನಿಜವೇ ಆದರೂ, ಗಣನೀಯ ಸಂಖ್ಯೆಯಲ್ಲಿ ಕಡಿತವಾಗಬೇಕಾದಾಗಲೂ ಇದೇ ಪರಿಕರವನ್ನು ತುಸು ಕಠಿಣ ಸ್ತರದಲ್ಲಿ, ಕಟ್ಟುನಿಟ್ಟಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಹೇಳಿ ಕೇಳಿ ಅದು ವ್ಯಾಪಾರಿ ಜಗ.. ಅಲ್ಲಿ ಜಾಗವಿರುವುದು ಸೆಂಟಿಮೆಂಟಿಗಲ್ಲ. ‘ಉಳಿವಿಗಾಗಿ ಹೋರಾಟ’ ಎಂದಾಗ ಕಂಪನಿ ಮೊದಲು, ಮಿಕ್ಕಿದ್ದೆಲ್ಲ ನಂತರ. ಹೀಗಾಗಿ ಏಕಾಏಕಿ ದೊಡ್ಡದೊಡ್ಡ ಸಂಖ್ಯೆಯಲ್ಲಿ ಉದ್ಯೋಗಗಳು ಕಡಿತವಾದರೆ ಅಚ್ಚರಿ ಪಡಬೇಕಿಲ್ಲ. ಈಗಂತೂ ಅಮೇರಿಕ, ಸಿಂಗಾಪುರದಂತಹ ದೇಶಗಳು ಸೇರಿದಂತೆ ಹಲವಾರು ಅಭಿವೃದ್ಧಿ ಹೊಂದಿದ ದೇಶಗಳು ಕೂಡ ‘ನೇಷನ್ ಫಸ್ಟ್’ ಎನ್ನುವ ಸ್ವಯಂವಾದಿ ಆಂದೋಲನದತ್ತ ಗಮನವಿಯುತ್ತ ಸಾಧ್ಯವಾದಷ್ಟು ಉದ್ಯೋಗಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವತ್ತ ಯೋಜನೆ ಹಾಕುತ್ತಿವೆ. ಅದರ ಪರಿಣಾಮವೂ ಜತೆಗೂಡಿ ಸನಿವೇಶವನ್ನು ಇನ್ನಷ್ಟು ಗೊಂದಲಮಯವಾಗಿಸುತ್ತಿದೆಯೆನ್ನುವುದಂತೂ ನಿಸ್ಸಂದೇಹ.

ಇಲ್ಲೂ ಕಾಡುವ ಮತ್ತೊಂದು ವಿಪರ್ಯಾಸವಿದೆ: ಈಗಿನ ಆಧುನಿಕ ಜಗದ ಓಘ ಮುಂದಿನ ಕೆಲವರುಷಗಳಲ್ಲಿ ಎತ್ತ ಹರಿಯುತ್ತಿದೆ ಎಂದು ನೋಡಿದರೆ ಅಲ್ಲಿ ಸಿಗುವ ಉತ್ತರ – ಐಟಿಯೇ! ಆದರೆ ಅಲ್ಲೊಂದು ಮೂಲಭೂತ ವ್ಯತ್ಯಾಸವಿದೆ. ಇದುವರೆಗಿನ ಕೆಳಸ್ತರದ ಐಟಿ, ಆಟೋಮೇಷನ್ ಹೆಸರಲ್ಲಿ ಒಂದು ರೀತಿ ‘ಸಿದ್ದ ಸಾಮಾಗ್ರಿ’ ಯಾಗಿ (ಕಮಾಡಿಟಿ) ಬಿಟ್ಟಿದೆ. ಅರ್ಥಾತ್ ಪಕ್ವತೆಯ ಲೆಕ್ಕದಲ್ಲಿ ಅದು ಪ್ರಬುದ್ಧತೆಯ ಮೆಟ್ಟಿಲನ್ನೇರಿ ಮುಂದೆ ಸಾಗಿಬಂದಿದೆ. ಅಂದರೆ ಅದೀಗ ಮುಂದಿನ ಪ್ರಗತಿಯಲೆಗೆ ಬೇಕಾದ ಪರಿಪಕ್ವತೆಯೊಡನೆ, ಅಂತಹ ಪ್ರಗತಿಗೆ ತಾನೇ ವೇದಿಕೆಯಾಗಲು ಸಿದ್ಧವಾಗಿ ನಿಂತಿದೆ. ಆ ವೇದಿಕೆಯೇ ಈಗ ನೂರೆಂಟು ಹೊಸ ಸಾಧ್ಯತೆಗಳನ್ನು, ತಂತ್ರಜ್ಞಾನಗಳನ್ನು, ವ್ಯಾಪಾರಿ ಅವಕಾಶಗಳನ್ನು ಹುಟ್ಟುಹಾಕುವ ಮಂತ್ರವಾದಿಯಾಗಲಿದೆ. ಅದಕ್ಕೆ ಕಂಪನಿಗಳ ಕಣ್ಣು ಈ ಹೊಸತಿನ ಸಾಧ್ಯತೆಯ ಮೇಲೆ. ಹೊಸ ಬಿಸಿನೆಸ್ ಮಾಡೆಲ್ ಜೊತೆಗೆ ಭವಿಷ್ಯದಲ್ಲಿ ಅಳಿಯದೆ ಉಳಿಯುವ ಇಂತಹ ನಾನಾ ತರದ ಯೋಜನೆಗಳನ್ನು ಎಲ್ಲಾ ಕಂಪನಿಗಳು ಹುಟ್ಟುಹಾಕುತ್ತಿವೆ.

ಒಂದು ಅಂದಾಜಿನ ಪ್ರಕಾರ ಇನ್ನು ಕೆಲವೇ ವರ್ಷಗಳಲ್ಲಿ ೫೦ ಬಿಲಿಯನ್ ಗಿಂತಲೂ ಹೆಚ್ಚು ಪರಿಕರಗಳು ಇಂಟರ್ನೆಟ್ ಮುಖಾಂತರ ಒಂದಕ್ಕೊಂದು ಸಂಪರ್ಕ ಸಾಧಿಸಬಲ್ಲ ಶಕ್ತಿ ಪಡೆದುಕೊಂಡುಬಿಡುತ್ತವೆ. ತಾಂತ್ರಿಕ ಪರಿಭಾಷೆಯಲ್ಲಿ ‘ಇಂಟರ್ನೆಟ್ ಆಫ್ ಥಿಂಗ್ಸ್’ ಅಥವಾ ಚುಟುಕಾಗಿ ‘ಐಓಟಿ’ ಎಂದು ಕರೆಯಲ್ಪಡುವ ವಿದ್ಯಾಮಾನದಲ್ಲಿ ಮೂರೂ ‘ಎಸ್’ಗಳ (ಸಾಫ್ಟ್ವೇರ್, ಸೆನ್ಸರ್, ಸರ್ವಿಸ್) ಸಂಯೋಜಿತ ಸಾಧ್ಯತೆಗಳು ದೊಡ್ಡ ಸಂಚಲನೆಯನ್ನುಂಟು ಮಾಡಿ ನಾವು ಬದುಕುತ್ತಿರುವ ರೀತಿಯನ್ನೇ ಬದಲಾಯಿಸಿಬಿಡಲಿವೆಯಂತೆ ! ಯಂತ್ರ ಪರಿಕರಗಳು ತಮ್ಮತಮ್ಮಲ್ಲೇ ಸಂಭಾಷಿಸುವ, ಸಂವಹಿಸುವ ‘ಕೃತಕ ಬುದ್ಧಿಮತ್ತೆ’ ( ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ) ಯನ್ನು ಕರಗತ ಮಾಡಿಕೊಂಡು ಮನುಷ್ಯರಿಗಿಂತ ಹೆಚ್ಚಾಗಿ ಸಹಬಾಳ್ವೆ ನಡೆಸಲು ಸಿದ್ಧವಾಗುತ್ತಿದೆಯಂತೆ. ಕಾರಿನ ಭಾಗ ತಾನು ಕೆಡುವ ಮೊದಲೇ – ತಾನೇ ಅದರ ಕುರಿತು ಸುದ್ಧಿ ರವಾನಿಸುವುದು, ನಿರ್ಜನ ರಸ್ತೆಯ ನಡುವಲೆಲ್ಲೊ ಕೆಟ್ಟುನಿಂತ ಕಾರಿನ ರಿಪೇರಿಗೆ ಯಾರೂ ಕೇಳದೆಯೇ ತಂತ್ರಜ್ಞ ಹೊರಟು ಬರುವುದು, ವಾಷಿಂಗ್ ಮೆಷಿನ್ ಬಟ್ಟೆಯನುಸಾರ ಯಾವ ಪ್ರೋಗ್ರಾಮ್ ಸೂಕ್ತವೆಂದು ತಾನೇ ನಿರ್ಧರಿಸುವುದು, ಡ್ರೈವರನಿಲ್ಲದ ಸ್ವಯಂಚಾಲಿತ ಕಾರು – ಹೀಗೆ ಕಲ್ಪನೆಯ ಲಹರಿಯನ್ನು ಲಂಗುಲಗಾಮಿಲ್ಲದೆ ಬಿಟ್ಟುಕೊಂಡೇ ಸಂಪೂರ್ಣ ವಿಭಿನ್ನ ಜಗವನ್ನು ಚಿತ್ರಿಸಿಕೊಳ್ಳಬಹುದು. ಬಿಗ್ ಡೇಟಾ , ಕ್ಲೌಡ್ ತಂತ್ರಜ್ಞಾನ, ಕನೆಕ್ಟೆಡ್ ಇಂಡಸ್ಟ್ರಿ, ಐಓಟಿ, ಸ್ಮಾರ್ಟ್ ಸಿಟಿ, ಸ್ಮಾರ್ಟ್ ಹೋಂ – ಹೀಗೆ ಸಾಲುಸಾಲಾಗಿ ಹೊಸತರ ಆಗಮನಕ್ಕೆ ಕಾದು ಕೂತಿದೆ ಹತ್ತಿರದ ಭವಿಷ್ಯ. ಇಲ್ಲಿ ಐಟಿ ಯಾವುದು-ಐಟಿಯಲ್ಲದ್ದು ಯಾವುದು ಎನ್ನುವುದು ಗೊತ್ತೇ ಆಗದಂತೆ ಎಲ್ಲವು ಕಲಸುಮೇಲೋಗರವಾಗಿಬಿಡಲಿದೆ. ಇಂಟರ್ನೆಟ್ ಜಾಲದಲ್ಲಿ ಬಂಧಿತವಾದ ಎಲ್ಲವು (ನಾವೂ ಸೇರಿದಂತೆ) ತಂತಮ್ಮ ವೈಯಕ್ತಿಕ ಮಾಹಿತಿಯ ಗೋಪ್ಯತೆಯನ್ನು ಹೊಂದಾಣಿಕೆ ಮಾಡಿಕೊಂಡೆ ಈ ಹೊಸಜಗದ ಹೊಸಕ್ರಾಂತಿಯಲ್ಲಿ ಪಾಲುದಾರರಾಗಬೇಕಾಗುತ್ತದೆ…!

ಅಂದಮೇಲೆ ‘ಹಳೆ ಐಟಿ ಉದ್ಯೋಗ ಹೋದರೂ ಹೊಸತರ ಅವಕಾಶವಿದೆ ಎಂದಾಯ್ತಲ್ಲವೇ ?’ ಎಂದರೆ ಉತ್ತರ ಹೌದು ಮತ್ತು ಅಲ್ಲಾ. ಯಾಕೆಂದರೆ ಹೊಸತಿನ ಜಗದಲ್ಲಿ ಐಟಿಯು ನಾನ್-ಐಟಿಯ ಜೊತೆ ಕೈ ಕೈ ಮಿಲಾಯಿಸಿಬಿಡುವುದರಿಂದ ಅಲ್ಲಿ ಬೇಕಾಗುವ ಪರಿಣಿತಿ ಬರಿ ಐಟಿ ಮಾತ್ರದ್ದಾದರೆ ಸಾಕಾಗುವುದಿಲ್ಲ. ಒಂದು ರೀತಿಯ ವ್ಯಾವಹಾರಿಕ, ವಾಣಿಜ್ಯಪ್ರೇರಿತ ಮತ್ತು ಹೊಸ ತಾಂತ್ರಿಕತೆಯ ಸಂಯೋಜಿತ ಅಂಗಗಳ ಜ್ಞಾನ ಬೇಕಾಗುತ್ತದೆ. ಅಂದರೆ ಹೆಚ್ಚುಕಡಿಮೆ ಹಳೆಯದನ್ನೆಲ್ಲ ಮರೆತು ಹೊಸತನ್ನು ಕಲಿಯಬೇಕು. ಅನುಭವವಿಲ್ಲದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಲೇ ಹೊಸತ ಕಲಿಯುವ ಚಾಕಚಾಕ್ಯತೆ ಬೆಳೆಸಿಕೊಳ್ಳಬೇಕು. ಹಾಗಾದವರು ಮಾತ್ರ ಉಳಿದುಕೊಂಡು ಹೋಗಲು ಸಾಧ್ಯ. ಮಾತ್ರವಲ್ಲ – ಈಗಿನ ವಿಭಾಗಾಧಿಕಾರಿಗಳು, ಮ್ಯಾನೇಜರುಗಳು, ಟೀಮ್ ಲೀಡರುಗಳು, ಗ್ರೂಪ್ ಲೀಡರುಗಳು ಇಂತಹವರೆಲ್ಲರ ಕೆಲಸದ ವ್ಯಾಪ್ತಿ, ಜವಾಬ್ದಾರಿಯ ಪರಿಭಾಷೆ ಗುರುತೇ ಸಿಕ್ಕದ ಹಾಗೆ ಬದಲಾಗಲಿದೆ. ಇದೆಲ್ಲದರ ನಡುವೆ ಅಜೈಲ್ ಚಟುವಟಿಕೆಗಳು, ಯು ಎಕ್ಸ್ (ಯೂಸರ್ ಎಕ್ಸ್ ಪೀರಿಯೆನ್ಸ್ ) ಇತ್ಯಾದಿ ಅಭಿಯಾನಗಳು ಎಲ್ಲೆಡೆ ಕಾಣುವ ಸಾಮಾನ್ಯ ಅಂಶಗಳಾಗಲಿವೆ.

ಸಾರಾಂಶದಲ್ಲಿ ಹೇಳುವುದಾದರೆ ನಿಂತ ನೀರಾಗದ ಐಟಿ ಜಗದಲ್ಲಿ ನಿಂತ ನೀರಾಗದೆ ನಡೆವವ ಹೇಗೋ ಬದುಕಿಕೊಳ್ಳುತ್ತಾನೆ; ನಡೆಯದವ ಅಪ್ರಸ್ತುತವಾಗಿ ಮಾಯವಾಗುತ್ತಾನೆ. ಆದರೆ ನಿಂತ ನೀರಾಗದಂತಿರಲು ತೆರಬೇಕಾದ ಬೆಲೆ ಮಾತ್ರ ಅಪಾರ. ವೈಯಕ್ತಿಕ ಬದುಕಿನ ಎಷ್ಟೋ ಅನುಭವ-ಅನುಭಾವ-ಅನುಭೂತಿಗಳನ್ನು ಅನುಭವಿಸಲಾಗದೆ ವಂಚಿತರಾಗುತ್ತಾ , ಕಾರ್ಪೊರೇಟ್ ಜಗದ ಜಂಜಾಟದಲ್ಲಿ ಕಳೆದುಹೋಗಿ ಗೊತ್ತುಗುರಿಯಿಲ್ಲದ ಕುರಿಯ ಹಾಗೆ ಯಾವುದೋ ಗಮ್ಯದ ಬೆನ್ನಟ್ಟಿ ಉಸಿರಾಡಲು ವ್ಯವಧಾನವಿಲ್ಲದವನಂತೆ ನಡೆಯುತ್ತಿರಬೇಕು. ಈ ಜಗದಲ್ಲಿ ಅಪ್ರಸ್ತುತವಾಗದೆ ಹೇಗೋ ಹೆಣಗಾಡಿಕೊಂಡಿರಬೇಕೆಂದರೆ ಪರ್ಯಾಯ ಮಾರ್ಗವಿಲ್ಲದ ಅನಿವಾರ್ಯ ಪಥವಿದು. ಅದರಲ್ಲಿ ನಡೆವವರ ಜೊತೆಗೆ ಅವರ ಸುತ್ತಲ ಪರಿಸರ, ಅವರ ಸಂಸಾರ, ಮತ್ತಿತರ ‘ಎಕೋ ಸಿಸ್ಟಮ್’ ಕೊಂಡಿಗಳೂ ಅದೇ ದಾರಿಯಲ್ಲಿ ನಡೆಯುತ್ತಾ ಕೊನೆಗೆ ಸಮಷ್ಟಿ ಪೂರಾ ಆ ಸಮೂಹ ಸನ್ನಿಯ ಭಾಗವಾಗುವುದನ್ನು ನಾವಾರು ತಡೆಹಿಡಿಯಲಾಗದೇನೋ…!

ಬಹುಶಃ ಈ ಚಕ್ರವ್ಯೂಹದಲ್ಲಿ ಸಿಕ್ಕಿಕೊಳ್ಳಬಾರದೆಂದಿದ್ದರೆ ಐಟಿ ಜಗದಿಂದ ಮೊದಲಿಂದಲೇ ದೂರವಿದ್ದು ಬೇರಾವುದಾದರೂ ಉದ್ಯಮವನ್ನು ಆಯ್ಕೆ ಮಾಡಿಕೊಂಡರೆ ಒಳಿತೇನೋ – ಸ್ವಲ್ಪ ಕಡಿಮೆ ಸಂಪಾದನೆಯಿದ್ದರೂ ಸರಿ. ಈಗಂತೂ ಲಾಯರು, ಅಕೌಂಟೆಂಟ್ ಗಳಂತಹ ಸಾಂಪ್ರಾದಾಯಿಕ ಉದ್ಯೋಗಗಳಲ್ಲದೆ ಕಂಡು ಕೇಳರಿಯದ ಅನೇಕ ರೀತಿಯ ಹೊಸಹೊಸ ಸಾಧ್ಯತೆಗಳು ಹುಟ್ಟಿಕೊಂಡಿವೆ. ಅಲ್ಲೂ ಐಟಿ ಆಧುನಿಕತೆಯ ಪ್ರಭಾವ ತಡೆಯಲಾಗದಿದ್ದರು ಅದು ಬಹುತೇಕ ಗ್ರಾಹಕತ್ವ ರೂಪದಲ್ಲಿ ಹೆಚ್ಚಿರುತ್ತದೆಯೇ ಹೊರತು ಪೂರ್ಣಾಧಿಪೂರ್ಣ ಐಟಿ ಜಗವಾಗುವುದಿಲ್ಲ. ಅಥವಾ ಐಟಿಯಲ್ಲೇ ಇರಬೇಕೆಂದರು ಏನಾದರೂ ಸ್ವಂತದ ಉದ್ಯಮದ ಆಲೋಚನೆ ಮಾಡುತ್ತಾ ಕೃಷಿ, ಹೈನುಗಾರಿಕೆ, ಗುಡಿ ಕೈಗಾರಿಕೆಯಂತಹ ಸ್ಥಳೀಯ ಸಮಸ್ಯೆಗಳಿಗೆ ಐಟೀ ಪ್ರೇರಿತ ಚಮತ್ಕಾರಿಕ, ಕ್ರಾಂತಿಕಾರಕ ಉತ್ತರ ಕಂಡು ಹಿಡಿಯುವ ಹಾದಿಯಲ್ಲಿ ನಡೆದರೆ ಹೊಸ ಉದ್ಯೋಗಗಳ ಸೃಷ್ಟಿಯೂ ಆದಂತಾಗುತ್ತದೆ. ಈಗಿನ ಕೇಂದ್ರ ಸರಕಾರದ ‘ಮೇಕ್ ಇನ್ ಇಂಡಿಯಾ’ದಂತ ಅನೇಕಾನೇಕ ಯೋಜನೆಗಳ ಲಾಭ ಪಡೆದು ಆ ದಾರಿಯಲ್ಲಿ ಮುನ್ನಡೆದರೆ ಬೇರೆಯವರ ಐಟಿ ಕೆಲಸ ಮಾಡುವ ‘ಸೇವಕ ಎಕಾನಮಿ’ ಯಿಂದ ಬೇರೆಯವರಿಗೆ ಅಂತಹ ಕೆಲಸ ನೀಡಬಲ್ಲ ‘ಮಾಲೀಕ ಎಕಾನಮಿ’ಗೆ ಸುಲಭದಲ್ಲಿ ಪರಿವರ್ತಿತರಾಗಬಹುದು.

– ನಾಗೇಶ ಮೈಸೂರು
(Picture source : internet)

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s