02116. ಸರ್ವಜ್ಞನ ವಚನಗಳು-೦೦೦೪ (ಎಲ್ಲ ಬಲ್ಲವರಿಲ್ಲ)


02116. ಸರ್ವಜ್ಞನ ವಚನಗಳು-೦೦೦೪ (ಎಲ್ಲ ಬಲ್ಲವರಿಲ್ಲ)
_________________________________________________


ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ|
ಬಲ್ಲಿದರು ಇದ್ದು ಬಲವಿಲ್ಲ, ಸಾಹಿತ್ಯ
ಎಲ್ಲರಿಗೆ ಇಲ್ಲ-ಸರ್ವಜ್ಞ||

ಇದೊಂದು ಸರಳ ಪದಗಳ ತ್ರಿಪದಿ. ಪದಗಳ ಅರ್ಥ ನೇರ ಮತ್ತು ಸರಳವಿರುವುದರಿಂದ ಅದರ ಸಾರಾರ್ಥ ಎಲ್ಲರ ಗ್ರಹಿಕೆಗೆ ತಟ್ಟನೆ ನಿಲುಕುತ್ತದೆ. ಒಂದೆರಡು ಪದಗಳ ಅರ್ಥ ತಿಳಿದರೆ ಸಾಕು ಮಿಕ್ಕೆಲ್ಲವೂ ಆಡುನುಡಿಗಳೇ.

ಬಲ್ಲವರು = ಅರಿತವರು, ತಿಳಿದವರು
ಬಲ್ಲಿದರು = ವಿದ್ವಾಂಸರು, ಪಂಡಿತರು, ಬಲಶಾಲಿಗಳು, ಸಾಮರ್ಥ್ಯ ಉಳ್ಳವರು, ಶ್ರೀಮಂತರು (ಬಡವ-ಬಲ್ಲಿದ ಪ್ರಯೋಗದಲ್ಲಿ)

ಎಲ್ಲ ಬಲ್ಲವರಿಲ್ಲ

ನಾವು ಬದುಕಿರುವ ಈ ಜಗದ ವೈಶಾಲ್ಯ, ಸಂಕೀರ್ಣತೆ, ಅಗಾಧತೆ ಹೇಗಿದೆಯೆಂದರೆ ಯಾರೊಬ್ಬರೂ ಎಲ್ಲವನು ಅರಿಯುವುದು ಸಾಧ್ಯವೇ ಇಲ್ಲ. ಯಾವುದೇ ಕ್ಷೇತ್ರವಾಗಲಿ, ಆರಿಸಿಕೊಂಡ ವಿಷಯದಲ್ಲಿ ಆಳಕ್ಕಿಳಿದು ಹೆಚ್ಚು ಅರಿತವರಾಗಬಹುದೇ ಹೊರತು ಎಲ್ಲಾ ವಿಷಯದಲ್ಲಿ ಒಟ್ಟಿಗೆ ಪರಿಣಿತರಾಗುವುದು ಅಸಾಧ್ಯವೇ ಸರಿ (ಉದಾಹರಣೆಗೆ ವೈದ್ಯಕ್ಷೇತ್ರದಲ್ಲಿರುವ ವಿವಿಧ ಪರಿಣಿತಿಯ ತಜ್ಞ ವೈದ್ಯರ ಹಾಗೆ). ಹೆಚ್ಚೆಚ್ಚು ಬಲ್ಲವರಿರಬಹುದೇ ಹೊರತು ಎಲ್ಲವನ್ನು ಬಲ್ಲವರಿರುವುದು ಅಸಂಭವ. ಇಲ್ಲಿ ಸರ್ವಜ್ಞ ಅದನ್ನೇ ಪೀಠಿಕೆಯನ್ನಾಗಿ ಬಳಸಿಕೊಂಡಿದ್ದಾನೆ.

ಬಲ್ಲವರು ಬಹಳಿಲ್ಲ|

ಎಲ್ಲಾ ಬಲ್ಲವರಿಲ್ಲ ಎನ್ನುವುದರ ನಡುವಲ್ಲೇ ಅಲ್ಪಸ್ವಲ್ಪ ಭಾಗಾಂಶ ಬಲ್ಲವರು ಇರುವುದಂತೂ ನಿಸ್ಸಂದೇಹ. ನಮ್ಮ ಸುತ್ತಲೇ ಕಣ್ಣಾಡಿಸಿದರೂ ಸಾಕು ಅವೆಲ್ಲದರ ಒಂದೊಂದು ತುಣುಕು ನೋಟ ನಮ್ಮ ಕಣ್ಣಿಗೆ ಬೀಳುತ್ತದೆ. ವಕೀಲರೋ, ವೈದ್ಯರೋ, ಉಪಾಧ್ಯಾಯರೊ, ನೌಕರರೋ – ಎಲ್ಲರು ಒಂದೊಂದು ಬಗೆಯಲ್ಲಿ ಪರಿಣಿತಿ, ಪಾಂಡಿತ್ಯವನ್ನು ಸಂಪಾದಿಸಿದವರೇ. ಅವರಲ್ಲೇ ಒಬ್ಬೊಬ್ಬರು ಒಂದೊಂದು ವಸ್ತು ವೈವಿಧ್ಯದಲ್ಲಿ ಪರಿಣಿತರಾಗಿ ಮತ್ತಷ್ಟು ಪರಿಣಿತಿಯ ಪ್ರಭೇಧಗಳಿಗೆ ಕಾರಣಕರ್ತರಾಗುತ್ತಾರೆ – ಉಪಾಧ್ಯಾಯರಲ್ಲೇ ವಿಜ್ಞಾನಕ್ಕೆ, ಗಣಿತಕ್ಕೆ, ಭಾಷಾವಿಷಯಕ್ಕೆ ಬೇರೆ ಬೇರೆ ಪರಿಣಿತರಿರುವ ಹಾಗೆ. ಹಾಗಾದರೆ ಇವತ್ತೆಲ್ಲರನ್ನು ಅವರವರ ಕ್ಷೇತ್ರದಲ್ಲಿ ಬಲ್ಲವರೆಂದು ಹೇಳಿಬಿಡಬಹುದೇ ?

ಆ ಪ್ರಶ್ನೆಗೆ ಉತ್ತರ ‘ಇಲ್ಲಾ’ ಎಂಬುದೇ. ಏಕೆಂದರೆ ಅಷ್ಟೊಂದು ಪರಿಣಿತರಲ್ಲಿಯೂ ಯಾರೊಬ್ಬರೂ ಸಹ ತಂತಮ್ಮ ವಿಷಯದಲ್ಲಿ ಸಂಪೂರ್ಣ ಪ್ರಭುತ್ವ ಸಾಧಿಸಿದ್ದಾರೆಂದು ಹೇಳಿಕೊಳ್ಳಲಾಗದು. ತಮಗೆ ತಿಳಿದ ಸೀಮಿತ ಕ್ಷೇತ್ರದಲ್ಲಿಯೇ ಆಳದಾಳಕ್ಕಿಳಿದು ಅದರ ಎಡಬಲಮೂಲಗಳನ್ನೆಲ್ಲ ಶೋಧಿಸಿ ಅರಿತು ‘ಬಹುತೇಕ ಪರಿಪೂರ್ಣ’ ಪಾಂಡಿತ್ಯ ಗಳಿಸಿ ವಿದ್ವಾಂಸರೆನಿಸಿಕೊಂಡವರ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಅಥವಾ ಬೆರಳೆಣಿಕೆಯಷ್ಟು ಮಾತ್ರವೇ. ಅಂತಹ ನಿಜಕ್ಕೂ ಬಲ್ಲವರು ನಮ್ಮಗಳ ಮಧ್ಯೆ ಇರುವುದು ಕೂಡ ಕಡಿಮೆಯೇ. ಜ್ಞಾನಿಗಳಾಗಿ, ಯೋಗಿಗಳಾಗಿ ತಮ್ಮದೇ ಏಕಾಂತ ಜಗದಲ್ಲಿ ಮೌನವಾಗಿದ್ದುಬಿಡುವವರೇ ಹೆಚ್ಚು. ಅದನ್ನೇ ಸರ್ವಜ್ಞ ಇಲ್ಲಿ ‘ಬಲ್ಲವರು ಬಹಳಿಲ್ಲ’ ಎಂದು ಹೇಳಿರುವುದು. ತಾವು ಬಲ್ಲವರು ಎಂದುಕೊಂಡವರು ಅನೇಕರಿರಬಹುದು, ಆದರೆ ನಿಜವಾದ ಜ್ಞಾನಿಗಳು ತಮ್ಮನ್ನು ಹಾಗೆಂದು ತೋರಿಸಿಕೊಳ್ಳುವುದೇ ಇಲ್ಲ. ಇನ್ನು ಡೋಂಗಿಗಳ ವಿಷಯಕ್ಕೆ ಬಂದರೆ ಅದೇ ಮತ್ತೊಂದು ಮೋಸದ ಜಗವಾದ ಕಾರಣ ಆ ಚರ್ಚೆ ಇಲ್ಲಿ ಬೇಡ.

ಅಲ್ಲಿಗೆ ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ – ಎಂದಾಗ ಸಾರದಲ್ಲಿ ಸಕಲವನ್ನರಿತವರಾರು ಇಲ್ಲ, ಅಷ್ಟಿಷ್ಟು ಅರಿತವರಿದ್ದರು ಅಂತಹವರ ಸಂಖ್ಯೆಯು ಕಡಿಮೆಯೇ ಎಂದಾಗುತ್ತದೆ.

ಬಲ್ಲಿದರು ಇದ್ದು ಬಲವಿಲ್ಲ, ಸಾಹಿತ್ಯ

ಬಲ್ಲಿದರು ಎಂದಾಗ ಅಷ್ಟಿಷ್ಟಾದರೂ ಬಲ್ಲವರು ಅಥವಾ ಅರಿಯುವ ಸಾಮರ್ಥ್ಯ ಉಳ್ಳವರು ಎಂದು ಹೇಳಬಹುದು. ಹಿಂದಿನ ಸಾಲಲ್ಲಿ ಬಲ್ಲವರೂ ಕಡಿಮೆಯೇ ಎಂದು ಹೇಳಿದ್ದಾಯ್ತು. ಅದರರ್ಥ ಮಿಕ್ಕವರಿಗೆ ಯಾರಿಗೂ ಆ ಸಾಮರ್ಥ್ಯ ಇಲ್ಲವೆಂದಲ್ಲ. ಅವರಲ್ಲಿ ಕೆಲವರಿಗಾದರೂ ಆ ಸಾಧ್ಯತೆ ಇರುತ್ತದೆಯಾದರು ಎಷ್ಟೋ ಜನರಿಗೆ ಆ ಕುರಿತಾದ ಆಸಕ್ತಿ ಇರುವುದಿಲ್ಲ. ಹೀಗಾಗಿ ಅಷ್ಟಿಷ್ಟು ತಿಳಿದವರು ಮತ್ತು ತಿಳಿಯಬಲ್ಲ ಶಕ್ತಿ ಇರುವವರು ಇದ್ದರು ಏನು ಸುಖವಿಲ್ಲ. ಅವರು ಅದನ್ನು ಬಳಸಿಕೊಂಡು ತಾವರಿತಿದ್ದನ್ನ ಆ ಸಾಮರ್ಥ್ಯವಿರದ ಮಿಕ್ಕವರಿಗೆ ಹಂಚುವ ಕೆಲಸ ಮಾಡಬಹುದಿತ್ತು. ಅವರ ಸಾಮರ್ಥ್ಯ ಅಸಮರ್ಥರಿಗೂ ಬಲ ತುಂಬುವ ಸಲಕರಣೆಯಾಗಬಹುದಿತ್ತು. ಆದರೆ ಒಂದೋ ಅವರು ತಮ್ಮ ಬಲ ಬಳಸಿಕೊಳ್ಳುತ್ತಿಲ್ಲ ಅಥವಾ ಅದನ್ನು ತಮ್ಮ ಸ್ವಾರ್ಥಕ್ಕೆ ಮಾತ್ರ ಬಳಸಿಕೊಳ್ಳುವ ವ್ಯಾವಹಾರಿಕ ಮನೋಭಾವದವರಾಗಿದ್ದಾರೆ. ಹೀಗಾಗಿ ಅಂತಹವರಿದ್ದೂ ಮಿಕ್ಕ ಪ್ರಪಂಚಕ್ಕೆ ಯಾವ ರೀತಿಯಲ್ಲೂ ಬಲ ಸಂವರ್ಧನೆಯಾಗುತ್ತಿಲ್ಲ – ಅದರಲ್ಲೂ ಸಾಹಿತ್ಯದ ವಿಷಯದಲ್ಲಿ. ಅಂದಹಾಗೆ ಈ ತ್ರಿಪದಿ, ಸಾಹಿತ್ಯದ ಮಾತ್ರವೇ ಕುರಿತು ಬರೆದದ್ದೇ ? ಎನ್ನವುದನ್ನು ಅರಿಯಲು ಈ ‘ಸಾಹಿತ್ಯ’ ಪದವನ್ನೇ ಹೆಚ್ಚು ಒರೆಗಚ್ಚಿ ನೋಡಬೇಕು.

ಇಲ್ಲಿ ಸಾಹಿತ್ಯ ಎನ್ನುವಾಗ ಕೊಂಚ ಆಳವಾಗಿ ನೋಡಬೇಕಾಗುತ್ತದೆ – ಸಮಕಾಲೀನ ಮಾತ್ರವಲ್ಲದೆ ಪ್ರಾಚೀನ ದೃಷ್ಟಿಕೋನದಲ್ಲಿಯೂ. ಸಾಹಿತ್ಯವೆನ್ನುವುದು ಆ ಕಾಲದ ಬದುಕಿನ ಆಗುಹೋಗುಗಳ ಪ್ರತಿಬಿಂಬ. ಎಲ್ಲವನ್ನು ಎಲ್ಲರು ಅನುಭವಿಸಿಯೇ ಕಲಿಯಲಾಗದು – ಆದರೆ ಸಾಹಿತ್ಯದ ಮೂಲಕ ಅನುಭಾವಿಸಿಕೊಂಡು ಕಲಿಕೆಯನ್ನು ಸಾಧಿಸಬಹುದು. ಸಾಹಿತ್ಯದ ಮತ್ತೊಂದು ಮುಖ್ಯ ಆಯಾಮ – ಜ್ಞಾನ. ಯಾರಾದರೊಬ್ಬರು ಯಾವುದೇ ಕ್ಷೇತ್ರದಲ್ಲಿಯಾದರು ಸರಿ – ತಾವು ಸಂಪಾದಿಸಿದ ಜ್ಞಾನವನ್ನು ಸಾಹಿತ್ಯದ ರೂಪದಲ್ಲಿ ಹಿಡಿದಿಟ್ಟಿದ್ದರೆ ಅದನ್ನು ತಲತಲಾಂತರಗಳವರೆಗೆ ವರ್ಗಾಯಿಸಿಕೊಂಡು ಹೋಗಬಲ್ಲ ಸಾಮರ್ಥ್ಯ ಸಾಹಿತ್ಯಕ್ಕಿದೆ. ಆಗ ಪ್ರತಿ ಪೀಳಿಗೆ, ಪ್ರತಿ ಸಂತತಿಯು ಮತ್ತೆ ಮತ್ತೆ ಶೋಧಿಸಿದ್ದನ್ನೇ ಮರುಶೋಧಿಸಿ ಹೊಸತಾಗಿ ಕಲಿತು ಬಳಸುವ ಪ್ರಮೇಯ ಬರುವುದಿಲ್ಲ (ಉದಾಹರಣೆಗೆ ಅನ್ನ ಮಾಡುವುದು ಹೇಗೆಂದು ಜಗತ್ತು ಪ್ರತಿಬಾರಿಯೂ ಸಂಶೋಧಿಸುತ್ತಾ ಕೂತಿಲ್ಲ . ಒಮ್ಮೆ ಕಲಿತದ್ದು ವರ್ಗಾವಣೆಯಾಗುತ್ತಿದೆ ನಿರಂತರವಾಗಿ). ಆ ಸಾಹಿತ್ಯವನ್ನು ಓದಿ ಅರ್ಥೈಸಿಕೊಂಡು ಬಳಸಬಲ್ಲ ಸಾಮರ್ಥ್ಯವಷ್ಟೇ ಇದ್ದರೆ ಸಾಕು. ಹೀಗೆ ಸಾಹಿತ್ಯವೆನ್ನುವ ಪದ ಇಲ್ಲಿ ವಿಶಾಲ ವ್ಯಾಪ್ತಿಯಲ್ಲಿ ಬಳಕೆಯಾಗಿದೆ ಎನ್ನುವುದು ಮೊದಲ ಮುಖ್ಯ ಅಂಶ.

ನಮ್ಮ ಸಮಕಾಲೀನ ಜಗದಲ್ಲಿಯೂ ಸಾಹಿತ್ಯವಿದೆ, ಹಿಂದೆಯೂ ಇತ್ತು, ಮುಂದೆಯೂ ಇರುತ್ತದೆ. ಈಗಲೂ ಇರುವ ಎಷ್ಟೋ ಸಾಹಿತ್ಯದಲ್ಲಿ ಎಲ್ಲವು ಎಲ್ಲರಿಗು ಅರ್ಥವಾಗುವುದಿಲ್ಲ. ಎಲ್ಲವನ್ನು ಬಲ್ಲ ಬಲ್ಲಿದರು ಇಲ್ಲಿಯೂ ಇಲ್ಲವೆನ್ನುವುದು ನಿಜವೇ. ಹೀಗಾಗಿಯೇ ಸಾಹಿತ್ಯ ತನ್ನದೇ ಆದ ವಿಭಿನ್ನ ಮತ್ತು ಸಮಾನಾಂತರ ಹಳಿಗಳಲ್ಲಿ ಅಸ್ತಿತ್ವದಲ್ಲಿರುವುದು. ಇಲ್ಲಿ ಮಕ್ಕಳ ಸಾಹಿತ್ಯದ್ದೊಂದು ಹಳಿಯಾದರೆ, ಜನಸಾಮಾನ್ಯರದ್ದು ಮತ್ತೊಂದು; ಬುದ್ಧಿಜೀವಿಗಳದೇ ಇನ್ನೊಂದು, ವಸ್ತು ನಿರ್ದಿಷ್ಠ ವ್ಯಾಸಂಗಕಾರಣ ಹಳಿ ಮಗದೊಂದು. ಹೆಚ್ಚು ಕಠಿಣ ಸ್ತರದ ಹಳಿಯಾದಷ್ಟು ಬಲ್ಲವರು ಕಡಿಮೆಯಾಗುತ್ತಾರೆ, ಮತ್ತದನ್ನು ಅರಿತು ಹಂಚುವವರು ಇನ್ನೂ ಕಡಿಮೆಯಾಗಿರುತ್ತಾರೆ. ಹೀಗಾಗಿ ಎಷ್ಟೋಬಾರಿ ಪ್ರಶ್ನೆಗೆ ಉತ್ತರ ಅಸ್ತಿತ್ವದಲ್ಲಿದ್ದರೂ ನಮ್ಮರಿವಿನಲ್ಲಿರುವುದಿಲ್ಲ ಅಥವಾ ನಮ್ಮೆಟುಕಿನ ಗುಟುಕಿಗೆ ನಿಲುಕುವುದಿಲ್ಲ. ಈ ಪ್ರಕ್ರಿಯೆಯನ್ನು ಈಗಲೂ ನೋಡಬಹುದು, ಅನುಭವಿಸಬಹುದು.

ಇನ್ನು ತೀರಾ ಪುರಾತನ ಕಾಲಕ್ಕೆ ಅಡಿಯಿಟ್ಟರೆ ತಟ್ಟನೆ ಮನಸಿಗೆ ಬರುವ ಸಾಹಿತ್ಯ ವೇದಶಾಸ್ತ್ರಗಳಂತಹ ಆಧ್ಯಾತ್ಮಿಕ ಸ್ತರದ್ದು. ಇಲ್ಲಂತೂ ನಮಗೆ ಗೊತ್ತಿಲ್ಲದ ಅದೆಷ್ಟೋ ಸತ್ಯ, ಸತ್ವಗಳು ಅಪಾರ ಜ್ಞಾನದ ರಾಶಿಯಾಗಿ ಹರಡಿಕೊಂಡಿದೆಯೆಂಬ ನಂಬಿಕೆ ಬಲವಾಗಿದೆ. ಆದರೆ ವಿಪರ್ಯಾಸವೆಂದರೆ ಇದನ್ನೆಲ್ಲಾ ಅರಿತ , ಖಚಿತವಾಗಿ ಮತ್ತು ಸೂಕ್ತವಾಗಿ ವಿಮರ್ಶಿಸಿ ಹೇಳಬಲ್ಲ ಬಲ್ಲಿದರದೆ ಕೊರತೆ. ಸಾಲದ್ದಕ್ಕೆ ಬಳಸಿರುವ ಭಾಷೆ ಎಲ್ಲರು ತಿಳಿದ ಆಡುಭಾಷೆಯಲ್ಲ. ಹೀಗಾಗಿ ಆ ಸಾಹಿತ್ಯ ಒಂದು ರೀತಿ ಅಸ್ತಿತ್ವದಲ್ಲಿದ್ದೂ, ಅದರ ಬಲವನ್ನು ಸದುಪಯೋಗಪಡಿಸಿಕೊಳ್ಳಲಾಗದ ಅಸಹಾಯಕತೆ ನಮ್ಮದು. ಅದರ ಸಾಮರ್ಥ್ಯವನ್ನು ಸಕಲರಿಗೂ ತಲುಪುವಂತೆ ಹಂಚಲಾಗದ ವಿಚಿತ್ರ – ಇದ್ದೂ ಇಲ್ಲದ ಪರಿಸ್ಥಿತಿ. ಇದ್ದುದ್ದೆಲ್ಲ ಕೆಲವರಿಗೆ ಮಾತ್ರ ಅನ್ನುವ ವಿಚಿತ್ರ ವಾಸ್ತವ.

ಇನ್ನು ಸರ್ವಜ್ಞನ ಕಾಲದಲ್ಲಿಯೂ ಇದೇನು ಭಿನ್ನವಾಗಿರಲು ಸಾಧ್ಯವಿಲ್ಲ. ಆಗಲೂ ಸಾಹಿತ್ಯದ ಕುರಿತಾದ ಇದೇ ದ್ವಂದ್ವ ಸಮಾಜವನ್ನು ಕಾಡಿರಬೇಕು. ಅಂತೆಯೇ ಪ್ರಾಚೀನವನ್ನು ನೋಡಿದಾಗ ಮುಂದೆಯೂ ಹೀಗೆ ಇರಬಹುದೆಂದು ಊಹಿಸುವುದು ಸಹ ಕಷ್ಟವೇನಲ್ಲ. ಅದರ ಆಧಾರದ ಮೇಲೆ ಸಾಹಿತ್ಯವನ್ನು ಸಾರ್ವಕಾಲಿಕವೆನ್ನುವ ಈ ವಿಶಾಲಾರ್ಥದಲ್ಲಿ ಸರ್ವಜ್ಞನು ಬಳಸಿದ್ದಾನೆಂದು ನನ್ನ ಅನಿಸಿಕೆ. ಹೀಗಾಗಿ ಈ ವಚನದಲ್ಲಿ ಸಾಹಿತ್ಯವನ್ನು ಬರಿಯ ಬರವಣಿಗೆಯ ಜ್ಞಾನ ಎಂದು ಮಾತ್ರ ಗಣಿಸದೆ ಅದರ ಪ್ರಾಯೋಗಿಕ ಬಳಕೆ – ಉಪಯೋಗದ ಸಾರ್ವತ್ರಿಕ ಸ್ವರೂಪವವನು ಸಮೀಕರಿಸಿ ಅರ್ಥೈಸಿಕೊಳ್ಳಬೇಕು.

…, ಸಾಹಿತ್ಯ ಎಲ್ಲರಿಗೆ ಇಲ್ಲ-ಸರ್ವಜ್ಞ

ಹಿಂದಿನ ವಿವರಣೆಯನ್ನೆಲ್ಲಾ ಕ್ರೋಢೀಕರಿಸಿಕೊಂಡರೆ ಈ ಸಾಲು ತಾನಾಗಿಯೇ ಅರ್ಥವಾಗುತ್ತದೆ. ಅಂದು ಇಂದು ಮುಂದು – ಈ ಎಲ್ಲಾ ಕಾಲದಲ್ಲಿಯೂ ಅಸ್ತಿತ್ವದಲ್ಲಿರುವ ಸಾಹಿತ್ಯ ಎಲ್ಲರಿಗು ಸುಲಭದಲ್ಲಿ, ಸರಳದಲ್ಲಿ ಸಿಕ್ಕುವ ರೀತಿಯಲ್ಲಿ ಇಲ್ಲ ಅಥವಾ ವಿತರಣೆಯಾಗುತ್ತಿಲ್ಲ ಎನ್ನುವ ಇಂಗಿತವನ್ನು ಇಲ್ಲಿ ವ್ಯಕ್ತಪಡಿಸುತ್ತಿದ್ದಾನೆ ಸರ್ವಜ್ಞ. ಆ ಮಾತು ಶಾಸ್ತ್ರೋಕ್ತ ವೇದ ಪುರಾಣ ಗ್ರಂಥಗಳಿಂದ ಹಿಡಿದು ಸ್ವಯಂ ಸರ್ವಜ್ಞನ ವಚನಗಳವರೆವಿಗೆ ಎಲ್ಲೆಡೆಯೂ (ಎಲ್ಲ ತರಹದ ಸಾಹಿತ್ಯದಲ್ಲಿಯೂ) ಅನ್ವಯವಾಗುವ ಸಾರ್ವತ್ರಿಕ ಸತ್ಯ.

ಎಲ್ಲ ಬಲವರಿದ್ದು, ಹಾಗೆ ನಿಜವಾಗಿಯೂ ಬಲ್ಲವರು ಹಲವಾರು ಮಂದಿಯಿದ್ದು ಅಂತಹ ಬಲ್ಲಿದರು ತಮ್ಮ ಅರಿವಿನ ಮೂಲಕ ಗಳಿಸಿದ್ದನ್ನು ಸರಳವಾಗಿ ಹಂಚುತ್ತಾ ಮಿಕ್ಕ ಜಗತ್ತನ್ನು ಬಲಪಡಿಸಹೊರಟರೆ ಆಗ ಸಾಹಿತ್ಯವೆನ್ನುವುದು ಎಲ್ಲರನ್ನು ತಲುಪುವ ಸರಕಾಗುತ್ತದೆ. ಅದರ ನೀತಿ, ಪಾಠ, ಕಲಿಕೆಗಳು ಎಲ್ಲರೂ ಅಳವಡಿಸಿಕೊಳಬಲ್ಲ, ಬಳಸಿಕೊಳಬಲ್ಲ ಸಂಗತಿಗಳಾಗುತ್ತವೆ. ಆಗ ಅದರ ನಿಜ ಪ್ರಯೋಜನ ಎಲ್ಲರಿಗೂ ದೊರಕಿದಂತಾಗುತ್ತದೆ ಎನ್ನುವ ಆಶಯ ಈ ವಚನದ್ದು. ರಾಮಾಯಣ, ಮಹಾಭಾರತದಂತಹ ಸಾಹಿತ್ಯಗಳು ಅದರ ಮೂಲ ಭಾಷೆ ಮತ್ತು ಸಂಕೀರ್ಣತೆಯ ಹೊರತಾಗಿಯೂ ಜನಮಾನಸದಲ್ಲಿ ಹರಡಿಕೊಂಡಿರುವುದು ‘ಇದು ಸಾಧ್ಯ’ ಎನ್ನುವುದಕ್ಕೆ ಉದಾಹರಣೆಯಾದರೆ, ನಾವರಿಯದ ಅದೆಷ್ಟೋ ಸಾಹಿತ್ಯಗಳು ಅಸ್ತಿತ್ವದಲ್ಲಿದ್ದೂ ನಿಲುಕಿಗೆಟುಕದು ಎನ್ನುವುದು ಅದರ ಕಷ್ಟಸಾಧ್ಯತೆಯ ಉದಾಹರಣೆ.

ಪರಂಪರಾನುಗತವಾಗಿ ಬಂದ ಜ್ಞಾನ, ಪ್ರಗತಿ, ಫಲಶ್ರುತಿಗಳು ನಿರಂತರವಾಗಿ ಹರಿವ ನದಿಯ ನೀರಿನಂತೆ ಸತತವಾಗಿ ಎಲ್ಲಾ ಪೀಳಿಗೆಗೂ, ಸಂತತಿಗೂ ನೈಸರ್ಗಿಕವಾಗಿ ಹಂಚಿಕೆಯಾಗುತ್ತಿರಬೇಕೆನ್ನುವ ಮೂಲ ಆಶಯದ ಜೊತೆಗೆ ಅಂತಹ ಅದ್ಭುತ ಜ್ಞಾನ ಸಂಪತ್ತು ನಮ್ಮಲಿದೆ ಆದರೆ ಅದರ ನ್ಯಾಯೋಚಿತ ಸದ್ಬಳಕೆಯಾಗುತ್ತಿಲ್ಲ ಎನ್ನುವ ಇಂಗಿತವನ್ನೂ ಈ ವಚನ ಪರೋಕ್ಷವಾಗಿ ತೋರಿಸಿಕೊಡುತ್ತಿದೆ.

– ನಾಗೇಶ ಮೈಸೂರು
೧೬.೦೭.೨೦೧೭

(Picture Source : Wikipedia)

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s