02122. ಸರ್ವಜ್ಞನ ವಚನಗಳು ೦೦೦೭. ಸಿರಿ ಬಂದ ಕಾಲಕ್ಕೆ


02122. ಸರ್ವಜ್ಞನ ವಚನಗಳು ೦೦೦೭. ಸಿರಿ ಬಂದ ಕಾಲಕ್ಕೆ
_____________________________________________


ಸಿರಿ ಬಂದ ಕಾಲಕ್ಕೆ | ಕರೆದು ದಾನವ ಮಾಡು |
ಪರಿಣಾಮವಕ್ಕು ಪದವಕ್ಕು ಕೈಲಾಸ |
ನೆರೆಮನೆಯು ಅಕ್ಕು ಸರ್ವಜ್ಞ ||

ಈ ತ್ರಿಪದಿಯ ಪದಗಳು ನೇರ ಮತ್ತು ಸರಳವಾದ ಕಾರಣ ಇದರ ಭಾವಾರ್ಥ ಓದುತ್ತಿದ್ದಂತೆಯೇ ಗ್ರಹಿಕೆಗೆ ನಿಲುಕಿಬಿಡುತ್ತದೆ. ಇದ್ದುದ್ದರಲ್ಲಿ ‘ಅಕ್ಕು’ ಪದ ಮಾತ್ರ ಸ್ವಲ್ಪ ವಿಶಿಷ್ಠವೆನಿಸುವ ಕಾರಣ ಅದನ್ನು ಮೊದಲು ಗಮನಿಸಿ ನಂತರ ಮಿಕ್ಕದ್ದನ್ನು ಅರ್ಥೈಸೋಣ.

ಅಕ್ಕು ಪದದ ಹಲವಾರು ಅರ್ಥಗಳು ಈ ರೀತಿ ಇವೆ (ಕೆಲವು ನಾಮಪದವಾದರೆ ಕೆಲವು ಕ್ರಿಯಾಪದಗಳು) ದಕ್ಕು, ಜೀರ್ಣವಾಗು; ಅನುಕೂಲವಾಗುವಿಕೆ; ಅಪ್ಪಿಕೊಳ್ಳುವಿಕೆ, ಅಳವಡಿಸುವಿಕೆ ; ಸಂಭವನೀಯತೆ, ಸಾಧ್ಯತೆ; ಲಾಭ ; ಅಭಿಪ್ರಾಯ, ದೃಷ್ಟಿಕೋನ; ನನ್ನ ಅನಿಸಿಕೆಯ ಪ್ರಕಾರ ಈ ವಚನಕ್ಕೆ ಸೂಕ್ತವಾಗಿ ಹೊಂದುವ ಅರ್ಥಗಳು – ದಕ್ಕುವಿಕೆ /ಸಂಭವನೀಯತೆ / ಸಾಧ್ಯತೆ. ಮಿಕ್ಕವುಗಳಲ್ಲಿ ಕೆಲವನ್ನು ಪರೋಕ್ಷವಾಗಿ ಹೊಂದಿಸಿ ವಿವರಿಸಬಹುದಾದರೂ ಒಟ್ಟಾರೆ ಅರ್ಥ ಗ್ರಹಿಕೆಗೆ ಇವಿಷ್ಟೇ ಸಾಕು.

ಸಿರಿ ಬಂದ ಕಾಲಕ್ಕೆ | ಕರೆದು ದಾನವ ಮಾಡು |
________________________________________

ಹುಟ್ಟಿನಿಂದಲೇ ಸಿರಿವಂತರಾಗಿರುವ ಭಾಗ್ಯ ಎಲ್ಲರಿಗೂ ಇರುವುದಿಲ್ಲ. ಹುಟ್ಟಿನಿಂದ ಸಿರಿವಂತರಾಗಿದ್ದವರು ನಂತರ ನಿರ್ಗತಿಕರಾದ ಉದಾಹರಣೆಗಳೇನು ಕಡಿಮೆಯಿಲ್ಲ. ಸಿರಿಯೆನ್ನುವುದು ಯಾವಾಗ ಬರುವುದೋ, ಯಾವಾಗ ಹೋಗುವುದೋ ಹೇಳಬರದು. ಸಿರಿಯಿಲ್ಲದ ಹೊತ್ತಲಿ ಅದರ ಬೇಗೆ ಅನುಭವಿಸಿದವರೂ ಕೂಡ, ಸಿರಿ ಕೈಗೂಡಿತೆಂದರೆ ತಮ್ಮ ಬೇಗೆಯ ದಿನಗಳನ್ನು ಮರೆತುಬಿಡುತ್ತಾರೆ. ಸಿರಿ ಎಷ್ಟು ಕೂಡಿದರೆ ಸಿರಿತನ? ಎಂದಳೆಯುವ ಯಾವ ಮಾನದಂಡವೂ ಇರದ ಕಾರಣ, ಇನ್ನೂ ಸಾಲದು ಮತ್ತಷ್ಟು ಬೇಕೆನ್ನುವತ್ತ ಗಮನವಿರುತ್ತದೆಯೇ ಹೊರತು, ನಾನು ಮೊದಲಿಗಿಂತ ಸಿರಿವಂತನಾದೆ, ನನಗಿಂತ ಕೆಳಗಿರುವವರಿಗೆ ಆದಷ್ಟು ಸಹಾಯ ಮಾಡಬಹುದೆನ್ನುವ ಆಲೋಚನೆ ಬರುವುದಿಲ್ಲ. ಅದನ್ನು ಕಂಡ ಸರ್ವಜ್ಞ ‘ಸಿರಿ ಬಂದಾಗ ಅಗತ್ಯವಿರುವವರನ್ನು ನೀನಾಗಿಯೇ ಕರೆದು ಕೈಲಾದಷ್ಟು ಕೊಡು’ ಎನ್ನುತ್ತಾನೆ. ಇಲ್ಲಿ ಯಾರಾದರೂ ಬಂದು ಬೇಡುವ ತನಕ ಕಾಯದೆ ತಾನಾಗಿಯೇ ಕರೆದು ದಾನ ಮಾಡಬೇಕು ಎನ್ನುವುದು ಗಮನಿಸಬೇಕಾದ ಸಂಗತಿ. ಒಂದೆಡೆ ಇದು ಉದಾರತೆಯ ಸಂಕೇತವಾದರೆ ಮತ್ತೊಂದೆಡೆ ಸಾಮಾಜಿಕ ಸಮತೋಲನವನ್ನು ಸಾಧಿಸಲು ವ್ಯಕ್ತಿಗತ ನೆಲೆಗಟ್ಟಿನಲ್ಲಿಯೂ ಮಾಡಬಹುದಾದ ಕಾರ್ಯಗಳನ್ನು ಸೂಚಿಸುತ್ತದೆ. ಏಕೆಂದರೆ ಇದ್ದವರೆಲ್ಲ ಇಲ್ಲದವರೊಡನೆ ಹಂಚಿಕೊಂಡು ಬಾಳ್ವೆ ನಡೆಸಿದರೆ ಸಮಗ್ರ ಮಟ್ಟದಲ್ಲಿ ಕೊರತೆಯೆನ್ನುವುದು ಸಮಾಜವನ್ನು ಬಾಧಿಸಬಾರದಲ್ಲವೇ ? ಈ ದೃಷ್ಟಿಯಿಂದಲೂ ಈ ಸಾಲು ಅರ್ಥಪೂರ್ಣ.

ಪರಿಣಾಮವಕ್ಕು ಪದವಕ್ಕು..
_____________________________________

ಕರೆದು ಕೊಡಬೇಕೇನೋ ಸರಿ. ಆದರೆ ಅದರಿಂದೇನೂ ಪ್ರಯೋಜನ ? ಯಾಕೆ ದಾನ ಮಾಡಬೇಕು ? ಎನ್ನುವುದರ ಉತ್ತರ ಈ ಸಾಲಿನಲ್ಲಿದೆ. ಹೀಗೆ ದಾನ ಕೊಡುವುದರಿಂದಾಗುವ ಪರಿಣಾಮವೆಂದರೆ ಬಹುಮಾನದ ರೂಪದಲ್ಲಿ ‘ಪದವಿ’ ದಕ್ಕುವುದು. ಯಾವ ಪದವಿ ಎನ್ನುವುದನ್ನು ಅರಿಯಲು ಸ್ವಲ್ಪ ಲೌಕಿಕ ಮತ್ತು ಅಲೌಕಿಕ ಸ್ತರಗಳೆರಡರಲ್ಲು ಇಣುಕಿ ನೋಡಬೇಕು. ದಾನ ಕೊಡುವುದು ಲೌಕಿಕ, ಇಹ ಜಗದ ಕ್ರಿಯಾ ಕರ್ಮ. ಅದರ ಹಿಂದಿರುವ ಅಲೌಕಿಕ ಉದ್ದೇಶ ಪುಣ್ಯ ಸಂಪಾದನೆ. ಪುಣ್ಯ ಹೆಚ್ಚಾದಷ್ಟೂ ಪಾಪ ಕಡಿಮೆಯಾದಷ್ಟೂ ಪರಲೋಕದಲ್ಲಿ ಸಿಕ್ಕುವ ಸ್ಥಾನ ಉನ್ನತ್ತದ್ದಾಗಿರುತ್ತದೆಯೆನ್ನುವ ನಂಬಿಕೆ. ಇನ್ನು ಲೌಕಿಕ ಜಗದಲ್ಲಿನ ಪದವಿಗಳ ಬಗ್ಗೆ ಹೇಳುವಂತೆಯೇ ಇಲ್ಲ. ಕೊಡುಗೈ ದೊರೆಗಳೆಂಬ ಬಿರುದಿನ ಜತೆಜತೆಗೆ, ಲೌಕಿಕ ವ್ಯವಹಾರದ ಅದೆಷ್ಟೋ ನಾಯಕತ್ವದ ಹೊಣೆ, ಜವಾಬ್ದಾರಿಗಳು ಪದವಿಯ ರೂಪದಲ್ಲಿ ಸಿಕ್ಕುವುದು ಸಾಮಾನ್ಯ. ಸ್ವಂತದ್ದನ್ನೇ ಕೈ ಬಿಚ್ಚಿ ದಾನಗೈಯುವವರು ತಾನೇ ಸಮಾಜದ ಸಂಪತ್ತನ್ನು ನಿಸ್ವಾರ್ಥದಿಂದ, ದುರ್ಬಳಕೆ ಮಾಡದೆ ನೋಡಬಲ್ಲವರು ? ಒಟ್ಟಿನಲ್ಲಿ ‘ಕರೆದು ದಾನವ ಮಾಡು’ ಎಂದಾಗ ‘ಸಂಪತ್ತನ್ನು ಕೊಟ್ಟು ಕಳೆದುಕೊ’ ಎನ್ನುವ ಅನಿಸಿಕೆ ಮೂಡಿದರೂ, ನೈಜದಲ್ಲಿ ಕೊಟ್ಟದ್ದನ್ನು ಮೀರಿಸುವ ಪದವಿ ಅವರನ್ನು ಅರಸಿಕೊಂಡು ಬರುತ್ತದೆ ಎನ್ನುವುದು ಇಲ್ಲಿನ ತಾತ್ಪರ್ಯ.

ಕೈಲಾಸ | ನೆರೆಮನೆಯು ಅಕ್ಕು ಸರ್ವಜ್ಞ ||
_____________________________________

ಹೀಗೆ ಕರೆದು ದಾನ ಮಾಡುವ ಮಹತ್ಕಾರ್ಯದಿಂದ ಇಹದ ಪದವಿಯ ಜತೆ ಪರದ ಉನ್ನತ ಪದವಿಯೂ ದಕ್ಕುವ ಸಂಭವನೀಯತೆ ಹೆಚ್ಚು ಎಂದು ಈಗಾಗಲೇ ನೋಡಿದೆವು. ಆ ಪರದ ಪದವಿಯ ಔನ್ಯತ್ಯದ ಸಾಧ್ಯತೆ ಎಷ್ಟು ಮಟ್ಟಿಗಿರಬಹುದು ? ಎನ್ನುವುದು ಇಲ್ಲಿ ಸೂಚಿತವಾಗಿದೆ. ಪದವಿಗಳಲೆಲ್ಲ ಪರಮ ಶ್ರೇಷ್ಠ ಪದವಿಯೆಂದರೆ ಯಾವುದು ? ಅಂತಿಮ ಮುಕ್ತಿ, ಮೋಕ್ಷವನಿಯಬಲ್ಲ ಕೈಲಾಸಪದ ತಾನೇ ? ನೀ ಕೊಟ್ಟದ್ದಕ್ಕನುಗುಣವಾಗಿ ಫಲ ಪ್ರಾಪ್ತಿಯಾಗುವುದಲ್ಲದೆ ಕಡೆಗೆ ಕೈಲಾಸ ಪದವಿ ಕೂಡ ದಕ್ಕುವ ಸಾಧ್ಯತೆ, ಸಂಭವನೀಯತೆ ಇರುತ್ತದೆ ಎನ್ನುವ ಸಾರ ಈ ಸಾಲಿನಲ್ಲಿದೆ.

ಈ ತ್ರಿಪದಿಯಲ್ಲಿ ನನಗೆ ಕೊಂಚ ಕಾಡಿದ ಸಾಲು ‘ನೆರೆಮನೆಯು ಅಕ್ಕು’. ಆದರೆ ‘ಕೈಲಾಸ’ ಪದದ ಜತೆಗೆ ಸೇರಿಸಿ ನೋಡಿದರೆ ಹೆಚ್ಚು ಅರ್ಥಗರ್ಭಿತ ಅನಿಸಿತು. ಪರದಲ್ಲೇನೋ ಕೈಲಾಸ ಪದವಿ ಸಿಕ್ಕುತ್ತದೆಯೆನ್ನುವುದು ಸರಿ – ಆದರೆ ಅದು ಇಹದ ಬದುಕಿನ ನಂತರದ ಮಾತಾಯ್ತು. ಹಾಗಾದರೆ ಇಹದ ಸ್ಥಿತಿ ಹೇಗೆ? – ಎಂದರೆ ಕೈಲಾಸವೇ ನೆರೆಮನೆಯೇನೋ ಎನ್ನುವಂತಹ ಅನುಭೂತಿ, ಅನುಭವ, ಅನುಭಾವಗಳು ಇಹಜೀವನದಲ್ಲಿಯೂ ದಕ್ಕುವ ಸಾಧ್ಯತೆ ಇರುತ್ತದೆ. ಕರೆದು ಸಿರಿಯನ್ನು ಕೊಡುವ ಸಂತಸ ಕೈಲಾಸ ಸಾದೃಶ್ಯ ಸಂತೃಪ್ತಿಯನ್ನು ಲೌಕಿಕ ಜಗದಲ್ಲಿಯೂ ಕರುಣಿಸುತ್ತದೆ.

ಈ ವಚನದ ಒಟ್ಟಾರೆ ಸಾರವನ್ನು ಸಮಗ್ರರೂಪದಲ್ಲಿ ಹೇಳುವುದಾದರೆ – ಸಿರಿ ಬಂದ ಹೊತ್ತಲ್ಲಿ ಯಾರು ಅದನ್ನು ತಾವು ಮಾತ್ರವಲ್ಲದೆ ಅಗತ್ಯವಿರುವ ಅರ್ಹರೊಡನೆಯೂ ಹಂಚಿಕೊಂಡು ಬದುಕುವರೋ ಅವರಿಗೆ ಇಹ ಮತ್ತು ಪರ ಎರಡರಲ್ಲೂ ಕೈಲಾಸಕ್ಕೆ ಸರಿಸಮಾನವಾದ ಪದವಿ, ತೃಪ್ತಿ, ಆನಂದ, ಸುಖ, ಸಂತೋಷಗಳು ಸಿಕ್ಕುತ್ತವೆ. ಹೆಚ್ಚು ಕೊಟ್ಟಷ್ಟೂ ಹೆಚ್ಚೆಚ್ಚು ಫಲ ದೊರಕುವ ಸಾಧ್ಯತೆ ಹೆಚ್ಚು.

– ನಾಗೇಶ ಮೈಸೂರು

( Yamunab Bsyಯವರ ಕೋರಿಕೆಯ ಮೇರೆಗೆ ವಿವರಿಸಲು ಯತ್ನಿಸಿದ್ದು. ವಿವರಣೆ ಅಸಮರ್ಪಕ ಅಥವಾ ಅಸಂಪೂರ್ಣವೆನಿಸಿದರೆ ಕ್ಷಮೆಯಿರಲಿ)