02132. ಕಡಲ ತೀರದಲೊಂದು ಹೆಜ್ಜೆ..


02132. ಕಡಲ ತೀರದಲೊಂದು ಹೆಜ್ಜೆ..
________________________________


ಉಕ್ಕುತಿದೆ ಕಡಲು, ಉಕ್ಕುಕ್ಕಿಸುತ ಒಡಲು
ನಕ್ಕು ನಲಿವಲೆಯು, ತೆರೆತೆರೆಯ ಮರೆ ಬಯಲು ||

ಕಪ್ಪೆಚಿಪ್ಪಿನ ಸುರತ, ಮರಳಲುರುಳಾಡುವ ಸ್ವಗತ
ನುಚ್ಚು ಮರಳಿನ ರೀತಿ, ನೂರಾಗಿ ಸ್ವಚ್ಚ ಮನ ಕವಿತ ||

ಅಲ್ಲೊಂದಿಲ್ಲೊಂದು ಶಂಖ, ಬಾರಿಸೆದೆಯೊಳ ಡೊಂಕ
ಬಿಟ್ಟು ಬಿಗುಮಾನ ಬಿಂಕ, ನಡೆವ ಪಾದದ ಬಿಸಿ ಕುಹಕ ||

ಬಿಸಿಲು ಬೆಚ್ಚಿಸಿದ ರಾಶಿಕಣ, ತಣ್ಣೀರಲೆ ನೇವರಿಸೋಣ
ತಂದೊತ್ತಿಕ್ಕುತ ಕಲ್ಲು ನುಣುಪು, ಬನ್ನಿ ಆರಿಸಿಕೊಳ್ಳೋಣ ||

ಭುವಿ ತೊಗಲ ಮಲಿನ ಪಾತ್ರೆ, ಮಾಡಿಟ್ಟಿದೆ ಜನ ಜಾತ್ರೆ
ನಿತ್ಯ ತೊಳೆವಾ ಶರಧಿ, ಸೆರಗಡಿ ಸರದಿ ಹಗಲು ರಾತ್ರೆ ||

– ನಾಗೇಶ ಮೈಸೂರು
೨೭.೦೭.೨೦೧೭
(ಚಿತ್ರ : ಸ್ವಯಂಕೃತಾಪರಾಧ)

02131. ಆಷಾಢ ಭಾದ್ರಪದ ನಡುವೆ


02131. ಆಷಾಢ ಭಾದ್ರಪದ ನಡುವೆ
________________________


ಸಮನೆ ಬಿಕ್ಕುತಿದೆ ಶ್ರಾವಣ
ಮುಸಲಧಾರೆಗೆ ಮುನ್ನುಡಿ
ಬಿಟ್ಟುಹೋದ ಆಷಾಢ ಕೆಳೆ
ದಕ್ಕದೆ ಹೋದ ವಿರಹಗಳು

ಯಾರರೆಲ್ಲಾ ಹೊದ್ದರೋ ?
ಆಷಾಢದ ತುಂತುರು ಗಾಳಿ
ಸೋನೆ ಸಿಡುಕುವ ಮುನ್ನ
ಚಡಪಡಿಸುತ್ತಾ ಶ್ರಾವಣ

ಅತ್ತ ಅಳಲಲ್ಲ ನಗಲಿಲ್ಲ
ದುಃಖ ದುಮ್ಮಾನ ಸುಖವಲ್ಲ
ಎದೆಯಲೇನೋ ತೀಡಿ ಒತ್ತಿದ ಹಾಗೆ
ತುಂಬಿದ ನದಿ ಭೋರ್ಗರೆತ ಒಳಗೆ

ಹಬ್ಬದ ಸಂಭ್ರಮ ಹಾಡು
ಶ್ರಾವಣಿಯ ಎದೆಗೂಡು
ಗೆಲ್ಲ ಹೊರಟವರ ಗೆದ್ದು ಬಿಡೆ
ಬಿದ್ದವರ ಕನಸೆಚ್ಚರ ಕೆಸರು..

ಮುದವದು ಶ್ರಾವಣ ಶ್ರವಣ
ಆಷಾಢ ಹಿನ್ನಲೆ ಗಾಯನ
ನೆನಪ ತಳ್ಳುತ ಜೀವ ದುಂಬಿ
ಹೂವಾಗಿ ಭಾದ್ರಪದ ಗುಂಗು !

– ನಾಗೇಶ ಮೈಸೂರು
೨೭.೦೭.೨೦೧೭
(ಚಿತ್ರ : ಸ್ವಯಂಕೃತಾಪರಾಧ)

02130. ನಮಗೋಸ್ಕರ ಬದುಕೋದ್ಯಾವಾಗ ?


02130. ನಮಗೋಸ್ಕರ ಬದುಕೋದ್ಯಾವಾಗ ?
_______________________________


ಹುಟ್ಟಿಂದ ಕಟ್ಟಿದ ಜುಟ್ಟು
ಸೋತು ಬರಿ ನೂಲಾಗೋತನಕ
ಹೆಣಗಾಡಿದ್ದೆ ಆಯ್ತು ಬರಿ ಲಾಗ
ನಮಗೋಸ್ಕರ ಬದುಕೋದ್ಯಾವಾಗ ?

ಚಿಕ್ವಯಸ್ಸಿನ ಸ್ಕೂಲ್ ಚಾಕ್ರಿ
ಉರು ಮಗ್ಗಿ ಪದ್ಯ ವಿಜ್ಞಾನ
ದೊಡ್ಡೋರ್ನ ಮೆಚ್ಚ್ಸೋದೆ ಕಾಯಕವಾಗ
ನಮಗೋಸ್ಕರ ಬದುಕೋದ್ಯಾವಾಗ ?

ಓದಿದ್ದು ನೌಕ್ರಿಗಾಯ್ತು ಖಾತ್ರಿ
ಗತ್ತಲ್ಲಿ ಪಗಾರ ಕೈಗೆ ಹಾಕ್ರಿ
ಹೆತ್ತವ್ರೋ ಹೆಂಡ್ರೋ ಜಮಾನ ಆಗ
ನಮಗೋಸ್ಕರ ಬದುಕೋದ್ಯಾವಾಗ ?

ನೋಡ್ನೋಡ್ತಾ ಮಕ್ಳು ಮರಿ ಸುಗ್ಗಿ
ಬೇಡ್ತಾವೆಲ್ಲ ನಮ್ ಕನಸ್ಗು ಜಗ್ಗಿ
ಮಾಡ್ತಾನೆ ಕಳೆದ್ಹೋಯ್ತಲ್ಲ ದುಮ್ಮಾನ
ನಮಗೋಸ್ಕರ ಬದುಕೋದ್ಯಾವಾಗ ?

ಸಂದಿಗೊಂದೀಲೇ ಬದುಕೆಲ್ಲ
ಹುಡುಕಾಡ್ಬೇಕಲ್ಲ ಆಯ್ಕೊಳ್ತಾ
ಸಿಕ್ಸಿಕ್ಕಿದ್ದೆಲ್ಲಾ ತುಣುಕು ಅದರಾಗ
ನಮಗೋಸ್ಕರ ಬದುಕೋ ತೃಣ ಜಾಗ

– ನಾಗೇಶ ಮೈಸೂರು
೨೭.೦೭.೨೦೧೭
(ಚಿತ್ರ :ಸ್ವಯಂಕೃತಾಪರಾಧ)