02140. ಬರುವಳಿಲ್ಲಿಗೆ ಲಕುಮಿ


02140. ಬರುವಳಿಲ್ಲಿಗೆ ಲಕುಮಿ !
___________________________


ಬರುವಳಿಲ್ಲಿ ಲಕುಮಿ ವ್ರತಕೆ
ಬರುವಳಿಲ್ಲಿ ಮಾ ಲಕುಮಿ..
ತರುವಳಂತೆ ಧನ ಕನಕ ಸೌಭಾಗ್ಯ
ವರವ ನೀಡಿ ಹರಸಲು ಅವಸರದೇ !

ತಾಯ ಬರುವಿಗೆಂದು ಶ್ರಾವಣಿ
ತೊಳೆದಿಹಳು ಇಳೆಗೆ ಮಳೆ ಚೆಲ್ಲಿ
ಬಹ ಹಾದಿಗೆಲ್ಲ ಲಲನೆಯರು
ಇಡುತಿಹರು ಚುಕ್ಕೆ ರಂಗೋಲಿ ರಂಗು !

ಕಲಶ ಒಡವೆ ದೀಪ ನಾಣ್ಯಗಳೆಲ್ಲ
ನಳನಳಿಸುತ್ತಿವೆ ಫಳಫಳ ಹೊಳೆದು
ಉಡಿಸಿಟ್ಟ ರೇಷ್ಮೆ ಸೀರೆಯದೆ ಬೆಡಗು
ಕರ ಕಮಲದಲ್ಲಿ ಕಮಲದಾ ಸೊಬಗು !

ಮಾವಿನೆಲೆ ತೋರಣ ಬಾಗಿಲಲಿ ಧನ್ಯ
ಬಾಳೆಕಂಬದಲಂಕರಣ ಕಾಣುತೇ ಅನನ್ಯ
ಸಿದ್ಧವಾಗಿದೆಯೆಲ್ಲ ಸ್ವಾಗತಿಸೆ ಮಾತೆಯ
ಹೆಜ್ಜೆಯಿಕ್ಕುತ ಬಂದವಳ ಓಲೈಸೆ ವಿನಯ !

ಸಡಗರ ಸಂಭ್ರಮ ತೊಟ್ಟುಡುಗೆಯಲ್ಲಿ
ಹರ್ಷ ವೈಭವ ನಲಿವು ಹೆಂಗಳೆ ಮೊಗದಲ್ಲಿ
ಆರತಿಯನೆತ್ತಿ ಉಡುಗೊರೆ ಹಂಚುವಾ ಕಾರ್ಯ
ವರಮಹಾಲಕುಮಿವ್ರತ ನಡೆಸಿ ಬದುಕಲಿ ಜಯ !

– ನಾಗೇಶ ಮೈಸೂರು
೦೩.೦೮.೨೦೧೭
(Picture source: internet / social media)

02139. ನೆಗಡಿ ನೆಗಡಿ..


02139. ನೆಗಡಿ ನೆಗಡಿ..
____________________


ಮೂಗಿನ ತುಂಬಾ ನೆಗಡಿ
ಸೊಂಡಿಲ ಭಾರ ಹರಡಿ
ಒಂದು ಕೊಳಾಯಿ ಗೊರಗೊರ
ಮತ್ತೊಂದರಿಂದ ಪ್ರವಾಹ ಅಪಾರ !

ಹುಮ್ಮಸ್ಸೆಲ್ಲ ಖಾಲಿ ಖಾಲಿ
ಬಂಡವಾಳ ಕರವಸ್ತ್ರದಲಿ
ಸೀಟಿ ಮುಗಿಸಿ ಪಕ್ಕಕ್ಕಿಡಲಿಕ್ಕಿಲ್ಲ
ಮತ್ತೆ ಎತ್ತಿ ಒತ್ತಿಕೊಳುವ ಧಾವಂತ !

ಮೂಗಿನ ತುದಿ ಕೋಪವೆಲ್ಲ
ಶರಣಾಗತ ಹೆಡೆಮುರಿ ಬಲ
ಕಟ್ಟಿದಂತೆ ಕುಸಿದು ತಲೆ ಕೆಳಗೆ
ಮತ್ತೆ ಸೋರೊ ಭೀತಿ ಅಡಿಗಡಿಗೆ !

ಶಯನೋತ್ಸವ ಎತ್ತರದ ದಿಂಬು
ಕೂತಲ್ಲೆ ದಿನವೆಲ್ಲಾ ಕೊರಗು
ಮಾಡಲುಂಟು ನೂರು ಕೆಲಸ
ಮಾಡಲೆಲ್ಲಿ ಬಿಡದಾ ಸಹವಾಸ !

ಯಾರೊಡನೆ ಮಾಡಲಿ ಜಗಳ
ಹೊಡೆದಾಡಲು ಸಿಡಿಯುವ ಭಯ
ಹರಡಬಾರದಲ್ಲ ನೆಗಡೀ ವೈರಸ್ಸು
ಅಲ್ಲಿಂದಲೆ ಶುರು ಜ್ವರ ಕೆಮ್ಮಿನ ಬಸ್ಸು !

– ನಾಗೇಶ ಮೈಸೂರು
೦೨.೦೮.೨೦೧೭
(Just for fun 😊)
(Picture source: http://www.clipartpanda.com/categories/cold-clip-art-free)