02144. ಸರ್ವಜ್ಞನ ವಚನಗಳು ೧೧: ಮಗಳ ಮಕ್ಕಳು ಹೊಲ್ಲ


02144. ಸರ್ವಜ್ಞನ ವಚನಗಳು ೧೧: ಮಗಳ ಮಕ್ಕಳು ಹೊಲ್ಲ
_____________________________________________


ಮಗಳ ಮಕ್ಕಳು ಹೊಲ್ಲ | ಹಗೆಯವರಗೆಣೆ ಸಲ್ಲ |
ಜಗಳಾಡುವಳ ನೆರೆ ಹೊಲ್ಲ ಮೂಗಿಂಗೆ |
ನೆಗಡಿಯೇ ಹೊಲ್ಲ ಸರ್ವಜ್ಞ ||

ಹೊಲ್ಲ : ಕೂಡದು, ಸಲ್ಲದು, ಸುಖವಲ್ಲದ್ದು, ಬೇಡದ್ದು, ದೂರವಿರಿಸಬೇಕಾದ್ದು
ಗೆಣೆ : ಗೆಳೆತನ, ಸ್ನೇಹ

ಈ ವಚನದಲ್ಲಿ ಕೆಲವು ‘ಬೇಡ’ಗಳನ್ನು ಸೂಚ್ಯವಾಗಿ ಹೇಳುತ್ತಿದ್ದಾನೆ ಸರ್ವಜ್ಞ. ಇವುಗಳಲ್ಲಿ ಕೆಲವಕ್ಕೆ ಕಡಿವಾಣ ಹಾಕಲು ಸಾಧ್ಯತೆಯಿದ್ದರೆ ಮತ್ತೆ ಕೆಲವು ನಿಯಂತ್ರಣಕ್ಕೆ ಸಿಗದವು. ಅದೇನೇ ಇದ್ದರು ಸಾಧ್ಯವಿದ್ದರೆ ಇವುಗಳಿಂದ ದೂರವಿರುವುದು ವಾಸಿ ಎನ್ನುವುದು ಇದರ ಸಾರಾಂಶ.

ಮಗಳ ಮಕ್ಕಳು ಹೊಲ್ಲ |
_________________

ಈ ವಚನದಲ್ಲಿ ಮೊದಲ ಮೂರೂ ಪದಗಳ ಭಾವಾರ್ಥ ತುಸು ಪರೋಕ್ಷವಾಗಿರುವುದನ್ನು ಗಮನಿಸಬಹುದು. ನಮ್ಮ ಸಂಪ್ರದಾಯದಲ್ಲಿ ಸೋದರಿಕೆ ಸಂಬಂಧದಲ್ಲಿ ಮಗಳ ಮಕ್ಕಳನ್ನು (ಮೊಮ್ಮಕ್ಕಳನ್ನು) ತಂದುಕೊಂಡು ನಂಟು ಬೆಳೆಸುವುದು ಸಾಧಾರಣ ಪದ್ಧತಿ (ಮೊಮ್ಮಗಳನ್ನು ಮಗನಿಗೆ ತಂದುಕೊಳ್ಳುವುದು ಅಥವಾ ಮೊಮ್ಮಗನಿಗೆ ಮಗನ ಮಗಳನ್ನು ಕೊಟ್ಟು ಮದುವೆ ಮಾಡುವುದು). ಈ ಮೂರು ಪದಗಳು ಸೂಚಿಸುತ್ತಿರುವಿದು ಈ ನಂಟನ್ನು ಕುರಿತೇ ಎಂದು ನನ್ನ ಅನಿಸಿಕೆ.

ಈಗಿನ ವೈಜ್ಞಾನಿಕ ದೃಷ್ಟಿಕೋನದಲ್ಲಿ ಹತ್ತಿರದ ನಂಟಿನಲ್ಲಿ ಸಂಬಂಧ ಬೆಳೆಸಿದರೆ ಅದು ಅವರ ಪೀಳಿಗೆಯ ಮುಂದಿನ ಸಂತತಿಗಳನ್ನು ಅನುವಂಶೀಯಕವಾಗಿ ದುರ್ಬಲಗೊಳಿಸುವುದೆನ್ನುತ್ತಾರೆ. ಇದೆಲ್ಲಾ ಆ ಕಾಲದ ಜನ ಬಹುಶಃ ಅನುಭವದಿಂದಲೇ ಗ್ರಹಿಸಿದ್ದರೇನೋ ಏನೋ – ಅದಕ್ಕೆ ಸರ್ವಜ್ಞನೂ ಸಹ ಮಗಳ ಮಕ್ಕಳ ಜತೆಯ ನಂಟು ಕೂಡದು ಎನ್ನುತ್ತಾನೆ ಈ ಸಾಲಲ್ಲಿ.

ಈ ಮೂರು ಪದಗಳ ಮೊದಲ ಸಾಲನ್ನು ಬಿಟ್ಟರೆ ಮಿಕ್ಕ ಸಾಲುಗಳು ಹೆಚ್ಚುಕಡಿಮೆ ಸುಲಭ ಗ್ರಹಿಕೆಗೆ ದಕ್ಕುವಂತಹವು.

…ಹಗೆಯವರ ಗೆಣೆ ಸಲ್ಲ |
_________________

ಒಳಗೊಳಗೇ ಹಗೆ ಸಾಧಿಸುತ್ತ ಹಿತಶತೃಗಳಾಗಿರುವವರ ಜತೆ ಗೆಳೆತನ, ಸ್ನೇಹದಿಂದಿದ್ದರೇನು ಲಾಭ? ಅದು ಎಂದಿದ್ದರು ನಮಗೆ ಎರವಾಗುವಂತದ್ದೇ. ಅಂತಹ ಗೆಳೆತನ, ಸ್ನೇಹ ಬೇಡವೆನ್ನುತ್ತಿದ್ದಾನೆ ಸರ್ವಜ್ಞ.

ಜಗಳಾಡುವಳ ನೆರೆ ಹೊಲ್ಲ
__________________

ನೆಮ್ಮದಿಯಲ್ಲಿ ಬದುಕಬೇಕೆಂದರೆ ಬರಿ ಮನೆಯಲ್ಲಿ ಸುಖ,ಶಾಂತಿಯಿದ್ದರೆ ಸಾಲದು. ಸುತ್ತಮುತ್ತಲಲ್ಲೂ ಅದು ಪಸರಿಸಿಕೊಂಡಿರಬೇಕು. ಹಾಗಾಗಬೇಕೆಂದರೆ ಒಳ್ಳೆಯ ನೆರೆಹೊರೆಯಿರುವುದು ಬಲುಮುಖ್ಯ. ಅದರಲ್ಲೂ ನೆರೆಯವಳು ಜಗಳಗಂಟಿಯೇನಾದರೂ ಆಗಿದ್ದರೆ ದಿನ ನಿತ್ಯದ ಬದುಕಿನ ಕಿರಿಕಿರಿಗೆ ಜೀವನವೇ ಬೇಸರವಾಗಿಬಿಡುತ್ತದೆ. ಅದಕ್ಕೆ ಜಗಳಗಂಟಿಯಿರುವ ನೆರೆಯನ್ನೂ ಬೇಡವೆನ್ನುತ್ತಾನೆ ಸರ್ವಜ್ಞ

ಮೂಗಿಂಗೆ | ನೆಗಡಿಯೇ ಹೊಲ್ಲ ಸರ್ವಜ್ಞ ||
___________________________

ವಚನದಲ್ಲಿನ ಈ ಭಾಗ ಒಂದೆಡೆ ವಿನೋದದ ಲೇಪ ಹೊಂದಿದ್ದರೆ ಮತ್ತೊಂದೆಡೆ ಭರಿಸಲೇ ಬೇಕಾದ ಅನಿವಾರ್ಯವನ್ನೂ ಸೂಚಿಸುತ್ತದೆ. ಮೂಗಿರುವ ತನಕ ನೆಗಡಿ ತಪ್ಪಿದ್ದಲ್ಲಾ ಎನ್ನುವ ಆಡುಮಾತೆ ಇದೆ. ಅದು ಬಂದಾಗ ಕಾಡುವ ಬಗೆ ಯಾರನ್ನು ಬಿಟ್ಟಿದ್ದಲ್ಲಾ. ಸರ್ವಜ್ಞನ ಕಾಲದಲ್ಲೂ ಇದು ಕಾಡುವ ಪೀಡೆಯೇ ಆಗಿತ್ತೆನ್ನುವುದು ಇಲ್ಲಿ ಗೊತ್ತಾಗುತ್ತದೆ. ಮೂಗಿಗೆ ನೆಗಡಿ ತರವಲ್ಲ, ಮೂಗಿಗೆ ನೆಗಡಿ ಬರಬಾರದು ಎಂದೆಲ್ಲಾ ಆಶಿಸುತ್ತಲೇ ಮೂಗು ನೆಗಡಿಯ ನಡುವಿನ ಎಣ್ಣೆ-ಸೀಗೆಕಾಯಿ ಸಂಬಂಧವನ್ನು ಆಡಿ ತೋರಿಸುತ್ತಿದ್ದಾನಿಲ್ಲಿ ಸರ್ವಜ್ಞ.

– ನಾಗೇಶ ಮೈಸೂರು
೦೫.೦೮.೨೦೧೭

(ಈ ವಚನಕ್ಕೆ ನನಗೆ ತೋಚಿದಂತೆ ಟಿಪ್ಪಣಿ ಹಾಕಿದ್ದೇನೆ. ತಪ್ಪಿದರೆ ತಿದ್ದಿ ಎಂದು ಕೋರಿಕೊಳ್ಳುತ್ತೇನೆ)
(Picture source: Wikipedia )

02143. ನಕ್ಕಾಗ ಅರಳೆ..


02143. ನಕ್ಕಾಗ ಅರಳೆ..
________________________________

(Yamunab Bsy ರವರು ಈ ಚಿತ್ರ ಕೊಟ್ಟು ಕವಿತೆ ಹೊಸೆಯಲು ಕೇಳಿದರು : ಅದರ ಫಲಶ್ರುತಿ )


ನಕ್ಕಾಗ ಅರಳೆ, ಚಂದ್ರಿಕೆ ಮರುಳೆ
ಚೆಲ್ಲಿ ಹೋಗೊ ಮುತ್ತು, ರತ್ನಗಳ ಮಾಲೆ
ಚದುರಿ ಹೋಗೊ ಮುನ್ನ, ಬಾಚಿಕೊಂಡರೆ ಚೆನ್ನ
ಕೊಡದೆಲೇ ಕಾಡಿದರೆ, ಕೊನೆಗೆ ದೋಚಿದರು ಸರಿಯೆ !

ಬಿದ್ದೆಲ್ಲ ವ್ಯರ್ಥ, ಮಣ್ಣುಪಾಲಾಗಿ ಪೂರ್ತ
ಹೆಕ್ಕುವವರಿಲ್ಲದೆಡೆ ಬರಿ ವನಕುಸುಮ ಗೊತ್ತಾ?
ದಕ್ಕದಿರೆ ಯಾರಿಗೂ ಸಿಗದೆ ಒಣಗಿ ಬಾಡುವ ಹೂವು
ಮುಕ್ಕುವರುಂಟು ಸಾಲಲಿ ತುಟ್ಟಿಬೆಲೆ ತೆತ್ತಾದರೂ ಸರಿಯೆ !

ನೀ ಕಾಣದಾ ಸೊಗಡು, ನಿನ್ನ ನಗೆಯಾ ಪಾಡು
ಕೇಳಿಸದಲ್ಲ ದನಿಯದು, ಹೊರಟಿಹುದಾವ ಹಾಡು ?
ಹಾಡುತಿಹೆಯೊ ಮೋಡಿ ಮಾಡುತಿಹೆಯೊ? ಅನುಮಾನ
ನಾ ಕೇಳಬಯಸೊ ಶೋತೃ, ಆಗಬಿಡುವೆಯಾ ನಿನ್ನೆಜಮಾನ ?

ತಿರುಗಿದ ನೋಟದಲಿ, ಧಾರೆಧಾರೆ ಮಿಂಚು
ಕುಡಿ ನೋಟದಲ್ಲೆ ಕೆಡವಿಕೊಳ್ಳುವ ಒಳಸಂಚು
ಒಲವಿನ ಮಡುವಲ್ಲಿ, ಆಳ ಅಗಲ ಅರಿಯದ ಲೋಕ
ಸೆಳೆಯುತ್ತಿದೆ ಅಯಸ್ಕಾಂತ, ಅಂಟಿಕೊಳ್ಳದೆ ವಿಧಿಯಿಲ್ಲ !

ಬೇಡ ಮತ್ತೆ ಮತ್ತೆ ಹೀಗೆ, ಕೆಣಕುವಾ ಹುನ್ನಾರ
ಭೇಟಿಯಿದು ಮೊದಲು, ಸವೆಸಲಿದೆ ಬಲು ದೂರ
ಹುಡುಗಾಟಿಕೆಯ ನಗೆ ಬೇಡ, ನಗುವ ಹಿಂದಿನ ಹೃದಯ
ನೀಡುವ ಮನಸಿದ್ದರೆ ನೋಡು, ಒಂದಾಟ ಆಡಿಯೇ ಬಿಡುವಾ !

– ನಾಗೇಶ ಮೈಸೂರು
೦೫.೦೮.೨೦೧೭

(Picture source : internet / social media)

02142. ಅವನಿ ಹೆಜ್ಜೆ….(02/02)


02142. ಅವನಿ ಹೆಜ್ಜೆ….(02/02)

ಫೇಸ್ಬುಕ್ಕಲ್ಲಿ ಹರಿದಾಡುತ್ತಿದ್ದ ಈ ಒಂದೇ ಚಿತ್ರಕ್ಕೆ (ಕ್ಷಮಿಸಿ, ಚಿತ್ರ ಯಾರದೆಂದು ಗೊತ್ತಿಲ್ಲ) ಎರಡು ವಿಭಿನ್ನ ಭಾವಗಳ ಲೇಪನ ಕೊಟ್ಟು ಹೊಸೆದ ಹಾಡುಗಳು(2141 & 2142):

02. ಅವನಿ ಹೆಜ್ಜೆ….
____________________________________

ನೋಡಿರುವೆಯೇನ ಗೆಳತಿ ?
ನೆಟ್ಟ ನೋಟದಲದೇನಿದೆ ಸಂದೇಶ ?
ಹುಡುಕುತಿರುವುದದೇನು ಒಳಗೊ, ಹೊರಗೊ ?
ಬರಿ ಪ್ರಶ್ನೆಗಳಲ್ಲಿ – ಏನೆಂದವಳಿಗೂ ಅರಿವಿಲ್ಲ.

ಕಾಡಿರುವುದೇನು ? ಕಾಣದು ಕಣ್ಣಲಿದೆ ಆತಂಕ
ಅರೆ ನಿಮೀಲಿತ ನೇತ್ರ, ನಿರಾಳವಿಲ್ಲ ಅಸಹನೆ ;
ಬಚ್ಚಿಟ್ಟೆಲ್ಲಾ ವೇದನೆ, ಬೆಚ್ಚಿದ ಮನವಾ ಸಂತೈಸುತ
ಮೌನದ ಮೆಟ್ಟಿಲೇರಿ, ಕೈ ಕಟ್ಟಿ ನಿಂತ ಅನಿವಾಸಿ…

ತಗ್ಗಿ ತಲೆ, ಕೆದರಿ ಕೇಶ, ಕಿವಿ ಜುಮುಕಿಯೂ ಅನಾಥ
ಸೊಗದಲುಟ್ಟ ಸೀರೆ ಸೆರಗು, ಹೇಳಿದ ಕಥೆ ಅನಂತ
ನಿರೀಕ್ಷೆಗಳ ನೆರಿಗೆಯುಟ್ಟು, ಬಂದವೇನು ಚಿಮ್ಮುತ್ತಾ ?
ನಿರಾಶೆಯಡಿ ತೇಲಿ ನಲುಗಿ, ಬಾಡಿದವೇನು ಕುಗ್ಗುತ್ತಾ?

ಕಟ್ಟಿದ ಕೈಯಾಸರೆ, ಭುವಿಯನಪ್ಪಿ ಹಿಡಿದಿದೆ ಸಡಿಲ
ಜಾರಿ ಹೋದಿತೆಲ್ಲಿ ಹೃದಯವೆಂದು, ಕಟ್ಟಿ ಅಡ್ಡಗೋಡೆ
ಕೈ ಬಳೆಗಳನುರಣ ಗಲಗಲ, ಲೆಕ್ಕವಿಡುತ ಯಾತನೆ
ವೇದನೆ ಭಾರಕೆ ಕಂಬನಿ, ಜಾರಬಿಡದ ಹುಸಿ ಪಕ್ವತೆ..

ಅವಳಲ್ಲೆ ಅವಳಿಲ್ಲ ಅವಳೆ ಅವಳಾಗಿಲ್ಲದ ಹೊತ್ತು
ಅವಳಲೇನೊ ಅನಿವಾರ್ಯ ಮೂಕಸಂದೇಶ ಬಿತ್ತನೆ
ಸುತ್ತಮುತ್ತ ತನ್ನೆ ಪಸರಿಸಿ ಸದ್ದಡಗಿಸಿಹಳು ಅವನಿಜೆ
ಅವನಿ ಹೆಜ್ಜೆ ಅವಳಂತೆಯೆ ಅವಳೆ ಅವಳಾಗುವವರೆಗೆ.

– ನಾಗೇಶ ಮೈಸೂರು
೦೪.೦೮.೨೦೧೭
(ಚಿತ್ರಕೃಪೆ : ಅಂತರ್ಜಾಲ/ ಸೋಶಿಯಲ್ ಮೀಡಿಯಾ)

02141. ಎಂಥಾ ಸುಂದರ ಭಾವ ಹಂದರ (01/02)


02141. ಎಂಥಾ ಸುಂದರ ಭಾವ ಹಂದರ (01/02)
______________________________________
ಫೇಸ್ಬುಕ್ಕಲ್ಲಿ ಹರಿದಾಡುತ್ತಿದ್ದ ಈ ಒಂದೇ ಚಿತ್ರಕ್ಕೆ (ಕ್ಷಮಿಸಿ, ಚಿತ್ರ ಯಾರದೆಂದು ಗೊತ್ತಿಲ್ಲ) ಎರಡು ವಿಭಿನ್ನ ಭಾವಗಳ ಲೇಪನ ಕೊಟ್ಟು ಹೊಸೆದ ಹಾಡುಗಳು:

01. ಎಂಥಾ ಸುಂದರ ಭಾವ ಹಂದರ…!
_________________________________


ಎಂಥಾ ಸುಂದರ ಭಾವ ಹಂದರ ?!
ತಲೆ ತಗ್ಗಿಸಿ ನಿಂತ ಭಂಗಿ ಸುಂದರ !
ಮುಖ ಕಮಲವೇಕೊ ಬಾಡಿದ ಚಂದಿರ
ಮೊಗಭಾವ ಹಚ್ಚಿದೆ ಆಲೋಚನೆ ಸೊಡರ..

ನೀಳ ನಾಸಿಕವದುವೆ ಕ್ಲಿಯೋಪಾತ್ರ ?
ನಿವಾಳಿಸಿ ಎಸೆ ಸಾಂಪ್ರದಾಯಿಕ ಸೂತ್ರ
ತುಟಿ ಗಲ್ಲ ನೇತ್ರ ಹುಬ್ಬ ಕಾಮನ ಬಿಲ್ಲು
ತಬ್ಬಿಬ್ಬು ಮಾಡುತಿವೆ ನೋಡುಗನೆದೆ ಗಲ್ಲು !

ಲಲಾಟದೆ ಬಯಲಾಟ ಆಡುತಿವೆ ಜೊಂಪೆ
ಗರಿಗೆದರಿ ಕೆದರಿ ಗಾಳಿಗಾಡುತಿಹ ಹುರುಪೆ
ಕೆಂಪು ಕದಪು, ತುಟಿ ಸೊಬಗು ಅರೆಬಿರಿದ ಸಿಗ್ಗು
ಜೋತಾಡೊ ಕಿವಿ ಜುಮುಕಿ, ಅನುರಣಿಸುತಾ ಹಿಗ್ಗು..

ಯೌವ್ವನದ ಭಾರ, ಬಾಗಿಸಿತೆ ತಲೆಯ ತುಸು ?
ವಯಸ್ಸಿನಾ ಕನ್ಯೆ, ಅರಳಿದ ಮೈಯಲಿ ಕನಸು
ಮಿಂಚ ಸಂಚಾರ ಭಾವ, ಪ್ರತಿಫಲಿಸಿ ಅವಳನೆ
ಫಳಗುಟ್ಟಿಸುತ್ತಿದೆ ಮುಚ್ಚಿ, ಒಳಗುಟ್ಟನೆಲ್ಲ ಬಿಮ್ಮನೆ

ಕಂಡೆ ವಯಸ ಮೀರಿದ, ಪ್ರಬುದ್ಧತೆ ನಿಲುವಿನಲ್ಲಿ
ನೀಳ ಕೊರಳ ಬಿಸುಪು, ಗೌರವರ್ಣ ಸಂಸ್ಕಾರದಲಿ
ಸದ್ದು ಮಾಡದೇ ಕೂತ ಕೈ ಬಳೆಗಳೂ ಗೌರವಿಸಿ
ಚೆಲುವೆ ಮೌಲ್ಯ ಹೆಚ್ಚಿಸಿವೆ – ನಮಿಸುವುದೊಂದೆ ಬಾಕಿ !

– ನಾಗೇಶ ಮೈಸೂರು
೦೪.೦೮.೨೦೧೭

(ಚಿತ್ರಕೃಪೆ : ಅಂತರ್ಜಾಲ/ ಸೋಶಿಯಲ್ ಮೀಡಿಯಾ)