02145. ಮಾಡುವೆ ಕೈಲಾದಷ್ಟು


02145. ಮಾಡುವೆ ಕೈಲಾದಷ್ಟು
__________________________


ಕುಂದೆಣಿಸದೆ ಕಂದ
ಕಾವಲಿಗಿರುವೆ ಜೊತೆಗೆ
ಹೊಡೆದಾಡುವೆ ಬಡಿದಾಡುವೆ
ತಿಂದ ಹೊಡೆತ ಲೆಕ್ಕಕಿಡದೆ..

ಏನು ಮಾಡಲೀ ಅಸಹಾಯಕ
ಮೂಲಮಂತ್ರದ ಮದ್ದಿಲ್ಲ ಕರಗತ
ಅಲೆದಾಡುತಿರುವೆ ಸಿಗುವುದೆಂದು
ಅರಿಯದೆ ಮುಗಿವುದೆಂದೀ ಹುಡುಕಾಟ..

ಭೂತವೆಂದರು ಪ್ರೇತವೆಂದರು
ನಂಬಲಿ ಬಿಡಲಿ ದೇವರು ದಿಂಡರು
ಸುತ್ತಿ ಸುತ್ತಿ ಬಸವಳಿದು ಬವಳಿ
ಬಿಡಲೊಲ್ಲೆ ಕಂದ ಬರಲೆಡರುತೊಡರು..

ಕೊನೆಗಾಣದ ಕಲಿಯುಗ ಮಹಿಮೆ
ಪಾಪ ಪುಣ್ಯ ಕರ್ಮ ಜನ್ಮಗಳ ಕೊಸರು
ಇರಲೇನಾದರು ಸರಿ ಮುಗಿಯಲಿ ಲೆಕ್ಕ
ಕೊನೆಯೆಂದೊಂದಿರಬೇಕಲ್ಲವೆ ಕಾದಿರು..

ಅವನೊಡನಿದೆ ಒಂದೆರಡಲ್ಲ ತಕರಾರು
ಕೇಳಿರುವೆ ನಿತ್ಯ ಕಾಯುವ ಸಖರಾರು?
ಉತ್ತರಿಸದೆ ನಗುವವನ ಲೀಲೆಯಂತೆ ಅಪಾರ
ಕಾದಿರುವೆನದಕೆ ಸಹನೆಯಿಂದ ಇದ್ದರೂ ಕಠೋರ..

– ನಾಗೇಶ ಮೈಸೂರು

(Picture Source: internet / social media)

Advertisements