02150. ಅಂತರ್ದರ್ಪಣ:


02150. ಅಂತರ್ದರ್ಪಣ:
_______________


ವಾಸ್ತವವೆ ಹೀಗೆ
ಇರುವುದೆಲ್ಲವೂ ಒಳಗೆ
ಜತನ ಜೋಪಾನ ಗರ್ಭದೊಳಗೆ
ಕತ್ತಲ ಗೂಡಲಿಟ್ಟ ನಿಗೂಢ
ವಿಸ್ಮಯ ಕುತೂಹಲ ಬಯಲಾಗುವವರೆಗೆ.
ಕೈಯಳತೆಯಲಿದ್ದೂ ಕರಗತವಾಗದ ಗುಟ್ಟು
ಕನ್ನಡಿಯ ಗಂಟ ಕಾಣಬಯಸುವ ಮನ
ತನ್ನನಿಸಿಕೆ ಕುಂಚದಲೇ ಬರೆದ ಚಿತ್ರ ಪ್ರತಿಬಿಂಬ
ತನ್ನಾಸೆಯನಷ್ಟೆ ಕಾಣುವ ತನ್ಮಯತೆ
ಬಿಂಬದೊಳಗವಳ ಪ್ರತಿಬಿಂಬ ಎದೆಗವಚಿದ ಹಸುಳೆ..
ಹಸುಗೂಸಿನ ಪ್ರತಿಬಿಂಬದ ಗೊಂಬೆ
ಯಾಕೋ ಕಣ್ಮುಚ್ಚಿದೆ ಕೋಪಕೊ, ಬೇಸರಕೊ
ಗೊತ್ತಾಗಿರಬೇಕು ಬರಲಿಹ ಜೀವಂತ ಗೊಂಬೆಯ ಸುದ್ಧಿ
ಮೂಲೆಗುಂಪಾಗುವ ಭೀತಿಯಿರಬೇಕು
ಹಸುಗೂಸಿಗೆ ಕೂಸಾಗುವ ಕನಸಿನ್ನು ಮೊಳೆತಿಲ್ಲ..
ಇದ್ಯಾವುದರ ಪರಿವೆಯಿಲ್ಲದೆ ನಿಶ್ಚಿಂತೆ
ಮಾಯಾನಿದಿರೆಯಲಿ ಸೃಷ್ಟಿಯ ನಕಲು
ನಿರಾಳ ತನ್ಮಯ ನಲಿದಿದೆ ಮಾತೃಹೃದಯ
ಜಗದ ಪರಿವೆಯಿಲ್ಲದೆ ಮಲಗಿದೆ
ದರ್ಪಣ ಸೃಷ್ಟಿಕರ್ತನ ಪ್ರತಿಬಿಂಬ !

– ನಾಗೇಶ ಮೈಸೂರು
(ಹೆಸರು ಹೇಳಬಯಸದ ಸ್ನೇಹಿತರೊಬ್ಬರು ಕಳಿಸಿದ ಚಿತ್ರ)

02149. ಬೇಡ ನಮಗೀ ಮೀಸಲಾತಿ..


02149. ಬೇಡ ನಮಗೀ ಮೀಸಲಾತಿ..
______________________________


ಯಾಕೊ ಆ ಮಕ್ಕಳ
ಮಕ್ಕಳಂತಿರಲೇ ಬಿಡರು ಈ ಜನರು.. ||

ಒಂದೋ ಚಟುವಟಿಕೆ ವಿಪರೀತ ವಿಚಲಿತ
ಎಳ್ಳಷ್ಟೂ ಇರದಿರೆ ಪರಾವಲಂಬಿ ವೈಪರೀತ್ಯ
ಓದರೊ ಬರೆಯರೊ ಆಡರೊ ಹಾಡರೊ ಮೊತ್ತ
‘ಯಾಕೊ ಎಲ್ಲರಂತಿಲ್ಲ’ ಎಂದರು ಷರಾ ಬರೆಯುತ್ತ.. || ಯಾಕೊ ||

ಸೇರಬಯಸಿದರೂ ಎಲ್ಲರ ಜತೆಯಾಟದಲಿ
ಸೇರಬಿಡರು ಎಲ್ಲರಂತಲ್ಲ ದೂರವೇ ಕೂರು !
ಗೊತ್ತಾಗದ ಮಕ್ಕಳನೇನೊ ಕ್ಷಮಿಸಿಬಿಡೋಣ
ಗೊತ್ತಿದ್ದೂ ಮಾಡುವ ದೊಡ್ಡವರಿಗೇನು ಹೇಳೋಣ ? || ಯಾಕೊ ||

ನಾವಲ್ಲ ಕೀಳು ನಮಗಿಲ್ಲ ಮಾಂದ್ಯತೆ ಗೀಳು
ನಾವಷ್ಟೆ ಬೇರೆ ನಮ್ಮನರಿತವರಾದರು ಯಾರು ?
ಎಲ್ಲೆಡೆಯು ಬೇರ್ಪಡಿಸಿ ಎತ್ತಿ ತೋರಿಸಲೇಕೆ ವಿಭಿನ್ನತೆ ?
ಜೊತೆಗೆ ಬಿಟ್ಟರೆ ತಂತಾನೆ ಬರದೆ ವಿವಿಧತೆಯಲಿ ಏಕತೆ ? || ಯಾಕೊ ||

ನೀವೆಳೆದ ಪರಿಧಿ ಬಿಡದೇ ಕಾಡುತಿದೆ ಸತತ
ಹೋದಲೆಲ್ಲ ಕಾದಿರಿಸಿದ ಜಾಗ ಅನುಕಂಪ
ಯಾಕೆ ಬಿಡರಿ ತಲೆಯೆತ್ತಿ ನಿಲ್ಲಲು ಸಹಜದಲಿ ?
ಮಿಳಿತವಾಗೆ ಬೆಳೆಯುವೆವು ನಮ್ಮ ಸಾಮರ್ಥ್ಯದಲಿ.. || ಯಾಕೊ ||

ಬಿಡಲೊಲ್ಲಿರಿ ನೀವು ನಮ್ಮನಾಗಿಸಿ ಖಿನ್ನತೆ ರೋಗಿ
ಮಾನಸಿಕ ತೊಡಕು ನುಂಗುವಂತೆ ನಮ್ಮನೆ ಪೂರ್ತಿ
ಗುಡಿಯಲಿಟ್ಟು ದೂರವಿಟ್ಟಂತೆ ನಮಗೂ ಶಿಕ್ಷೇ
ಬಿಶೇಷ ಶಾಲೆ ಮದ್ದು ಮಾತ್ರೆ ನೀವಿತ್ತ ಜೀವನ ಭಿಕ್ಷೆ || ಯಾಕೊ ||

– ನಾಗೇಶ ಮೈಸೂರು

(Picture Source: http://www.mamashealth.com/mental/copesped.asp)

02148. ಕಂಕಣಕೆ ಮುನ್ನ..


02148. ಕಂಕಣಕೆ ಮುನ್ನ..
____________________


ಹತ್ತಿರವಾಗುವ ಹೊತ್ತಲೇಕೆ ಸಖಿ,
ಮನದಲ್ಲಿಂತಹ ತಲ್ಲಣ ?
ಮತ್ತೆ ಮತ್ತೆ ಬೇಕೆನಿಸುವುದಲ್ಲಾ
ದೂರವಿದ್ದರು ವಿನಾಕಾರಣ..

ಯಾವುದದೋ ಗೊತ್ತೂ ಗಳಿಗೆ
ಗೊತ್ತಿತ್ತೆಲ್ಲಿ ಭೇಟಿಯಲಿ ?
ಗೊತ್ತಿಲ್ಲದೆ ಹತ್ತಿರ ಹೇಗೋ ಎಂತೋ
ಏಕೋ ಏನೋ ಕಸಿವಿಸಿಯಲಿ..

ಏಕಾಏಕಿ ಅನಿಸಿತಲ್ಲೆ ಒಮ್ಮೆ
ನಿನ್ನ ಬಿಟ್ಟಿರಲೆಂತು ಬದುಕಲಿ ?
ಬಿಡದೇ ಹಿಡಿದೆ ಜಾಡು ನೋಡಲ್ಲಿ
ಹುಟ್ಟಿಕೊಂಡಿತು ನಂಟಿನ ಹೆಸರಲ್ಲಿ..

ನೆಚ್ಚಿನದಾಯ್ತಲ್ಲೇ ನಿನ್ನ ದೌರ್ಬಲ್ಯ
ಯಾಕೆ ಬೇಕು ಲೆಕ್ಕ ಸಾಮರ್ಥ್ಯ?
ಒಪ್ಪಿರೆ ಅರೆಕೊರೆ ಮಿಕ್ಕೆಲ್ಲ ಮೊಕ್ತಾ
ಚುಕ್ತವಾದಂತೆ ಬಾಕಿ ಅದೇ ಬಾಳರ್ಥ..

ಇಂದೇಕೋ ಭೀತಿ ಕಂಕಣದ ಹೆಜ್ಜೆ
ಹೀಗೆ ಉಳಿದಿರುವುದೇನು ಸಾಂಗತ್ಯ?
ಸುಮ್ಮನೇಕೆ ಭ್ರಮಿಸಲಿ ತೆರೆ ಸರಿದ ಮೇಲೆ
ನಿಚ್ಚಳ ಕಪ್ಪು ಬಿಳುಪು ಬಣ್ಣ ಹಚ್ಚೆ ನಿತ್ಯ..

– ನಾಗೇಶ ಮೈಸೂರು
(Picture source : internet / social media)

02147. ಮಂಕುತಿಮ್ಮನ ಕಗ್ಗ ೦೭೧ ರ ಟಿಪ್ಪಣಿ (ರೀಡೂ ಕನ್ನಡದಲ್ಲಿ) : ‘ಸಂತುಲಿತ ವ್ಯವಸ್ಥೆಗಳ ನಂಟಿನ ಸಂತುಲಿತ ವ್ಯವಸ್ಥೆ’ ಈ ವಿಶ್ವ !


02147. ಮಂಕುತಿಮ್ಮನ ಕಗ್ಗ ೦೭೧ ರ ಟಿಪ್ಪಣಿ (ರೀಡೂ ಕನ್ನಡದಲ್ಲಿ) : ‘ಸಂತುಲಿತ ವ್ಯವಸ್ಥೆಗಳ ನಂಟಿನ ಸಂತುಲಿತ ವ್ಯವಸ್ಥೆ’ ಈ ವಿಶ್ವ !

http://kannada.readoo.in/2017/08/ಸಂತುಲಿತ-ವ್ಯವಸ್ಥೆಗಳ-ನಂಟಿ

02146. ದೂರವಾದೆ ನೀನು, ದೂರುವುದಿಲ್ಲ ನಾನು


02146. ದೂರವಾದೆ ನೀನು, ದೂರುವುದಿಲ್ಲ ನಾನು
______________________________________


ದೂರವಾಗುವ ಮೊದಲು ನೀಡಲಿಲ್ಲ ಸುಳಿವು
ದೂರಬಾರದಿತ್ತೆ ಒಂದಿಷ್ಟು, ಕುರುಹಾಗುವಷ್ಟು ?
ದೂರ ನಿಲ್ಲುತ ನಾನೇ, ಬಿಡುತ್ತಿದ್ದೆ ದಾರಿಯನು
ಗೌರವ ರಕ್ಷೆಯ ಜತೆಗೆ, ಬಿಳ್ಕೊಡುಗೆಯೌತಣದೆ..

ಹೇಳಲಿಲ್ಲ ಕೇಳಲಿಲ್ಲ ಇನಿತೂ, ನೆಪಕ್ಕಾದರೊಮ್ಮೆ
ಕೇಳದ ಮನ ಸಂತೈಕೆ, ಮಾಡಲೆಂತೂ ಮರುಳೆ ?
ಹೇಳಿ ಹೇಳಿ ಸೋತು, ಸೊರಗಿತಲ್ಲೆ ಎದೆ ಮಾತು
ನೀನಾದರೂ ಹೇಳಿಬಿಟ್ಟು, ಹೋಗಬಾರದಿತ್ತೇಬಿಟ್ಟು ?

ಕಟ್ಟಿದ ಗಂಟಲ ಮಾತು, ಮುಟ್ಟಲೆಂತೆ ಹೃದಯಕೆ ?
ಮಾತು ಮಾತಿನ ಮೊಗ್ಗು, ಪೋಣಿಸಿದ ಹೂ ದಂಡೆ
ಮುಡಿಯನೇರುವ ಮೊದಲೇ, ಒಣಗಿ ಬಾಡಿದ ಗಳಿಗೆ
ಕನಸುಗಳ ಗಣಿ ಹವಳ, ಚೆಲ್ಲಾಡಿಹೋದವೆ ಮರುಗಿ..

ಏನೆಲ್ಲಾ ಹೇಳಿದ ಕಣ್ಣು, ಸೂಸಿ ಕಾಂತಿಯ ಪ್ರಜ್ವಲ
ಮಾಡಿದವಲ್ಲೇ ಮೋಸ, ತೋಡಿ ಅನಿಸಿಕೆಯ ಆಳ
ನಂಬಿದ್ದೆ ತಪ್ಪೆನ್ನುತ, ದೂಷಿಸಬೇಡವೆ ಮತ್ತೆ ನನ್ನಾಣೆ
ಮಾತಿಗೆಟುಕದ ಭಾವ, ನಂಬಿಕೆಗಳದೆ ಜಾತ್ರೆ ಬಾಳಲಿ..

ಪಾಠ ಕಲಿಸಿದೆಯೆಂದು, ದೂಷಿಸಲೆಂತು ಬೆನ್ನಲಿ
ನಿನದೇನಿತ್ತೋ ಅನಿವಾರ್ಯ, ಬಲ್ಲವರು ಯಾರು ?
ಇನಿತು ಸಖ್ಯದೆ ಮೊಗೆದು, ನೀ ಚೆಲ್ಲಿದಾ ಸುಗಂಧ
ಕಂಪ ಸೂಸಿದೆ ಇನ್ನು, ಬಿಟ್ಟುಹೋಗದೆ ನೆಲೆಸಿ ಶಾಶ್ವತ !

– ನಾಗೇಶ ಮೈಸೂರು
೦೮.೦೮.೨೦೧೭
(Picture source : internet / social media)