02151. ಮನಶ್ಯಾಂತಿ..


02151. ಮನಶ್ಯಾಂತಿ..
___________________________


ಹೊದ್ದು ಮಲಗಬೇಕಿದೆ ಜಗದೆಲ್ಲ ನಿದಿರೆ
ಸದ್ದಿಲ್ಲದೆಡೆ ಮಸಣ ಮೌನದಲಿ ಕೂತು
ಸಾಕಾಗಿಹೋಗಿದೆ ನಿದಿರೆಯಿಲ್ಲದೀ ರಾತ್ರಿ
ನಿದ್ರಿಸಲು ಬಿಡದು ಹಗಲ ಜಂಜಾಟ ಖಾತ್ರಿ ||

ನಿರಾಳದಲಿ ಕೂತು ಕೇಳಲಿಲ್ಲ ಗಾಯನ
ಎಷ್ಟು ಚಂದ ಸಾಹಿತ್ಯವಿದ್ದರೇನು ಎಲ್ಲಾ ಗೌಣ
ಅಷ್ಟದಿಕ್ಪಾಲಕರ ದಿರುಸುಟ್ಟು ಬರಿ ಕೋಟಲೆ
ಕಾಡುತಿರುವಾ ಗಳಿಗೆ ಪ್ರತಿನಿತ್ಯವೂ ಸಂಕೋಲೆ ||

ತಳವಿರದ ಬಾವಿ ಪಾತಾಳದಲೆಲ್ಲೊ ಅಂತ
ಇರಬಹುದೆಂದೆ ದೇಕುತ, ಜೀಕುತ ಕುಸಿತ
ಕುಸ್ತಿ ಜಟಾಪಟಿ ಪಟ್ಟುಗಳರಿಯದೆ ಪಟು ಜತೆಗೆ
ಅಸಮ ಬಲ ಜಂಗಾಜಂಗಿ ಜಂಘಾಬಲ ಉಡುಗೆ ||

ಬೇಡದ್ಯಾವ ಕಾರ್ಯ, ಸಮಾರಂಭ, ಸತ್ಕಾರ
ಬೇಡ ಸನ್ಮಾನ ಗೊಡವೆ ಶಾಂತಿ ಸಾಕೆಂಬ ಚೀತ್ಕಾರ
ಉಮ್ಮಳಿಸುಮ್ಮಳಿಸಿ ಬರುತಿದೆ ಕೂತರೂ ಏಕಾಂತ
ಸಿಕ್ಕದಲ್ಲಾ ಇನಿತೂ ಸುತ್ತುವರೆದಿರೆ ಕಾಡುವ ಧೂರ್ತ ||

ದೂರದಲೆಲ್ಲೊ ತೇಲಿ ಬರುತಿದೆ ಗೀತೆ ಗಾನದ ಗುಂಗು
ಎಲ್ಲಿ ಹೋದವೊ ತಲ್ಲೀನತೆಯಲಿ ತೇಲಿದ ಮುಗ್ದ ಬೆರಗು ?
ಇದ್ದರಲ್ಲವೆ ಮನದೆ ಶ್ಯಾಂತಿ, ಅಲ್ಲೆ ಮಿಕ್ಕೆಲ್ಲದರ ಬುನಾದಿ
ಸಿಕ್ಕದದು ಜಂಜಡಗಳಡಿ ಜರ್ಜರಿತ, ಮುಚ್ಚೆಲ್ಲ ಮಿಕ್ಕಾ ಹಾದಿ ||

– ನಾಗೇಶ ಮೈಸೂರು
(Picture source: internet / social media)