02153. ನಾಚಿದಳೊ, ನಾಚಿಸಿದವಳೋ ?


02153. ನಾಚಿದಳೊ, ನಾಚಿಸಿದವಳೋ ?
____________________________________

ಬಾಲಿಕೆ ನಟಿಸಬೇಡ ನಾಚಿಕೆ
ನಗೆ ನಾಚಿ ಅಡಗುತಿದೆ ಮುಖದೊಳಗೆ
ಬಿಗುಮಾನ ಬಿಟ್ಟು ಚೆಲ್ಲುವ ಮಲ್ಲಿಗೆ
ಬೆರಳಾಚಿಚೆಗೆ ಚದುರಿ ಅರೆಬರೆ ಮುಗುಳ್ನಗೆ !

ನಿನ್ನ ನೋಡಿ ಕಲಿತಂತೆ ಪಾಠ
ನೋಡಲ್ಲಿ ಅರಳೇ ಅರಳೀ ಅರೆಬರೆ
ನಾಚಿಕೆ ನಟಿಸುತ ತಲೆ ಬಾಗಿಸಿವೆ
ಆ ನೆಪದಲೆ ನಿನ್ನ ಮುಟ್ಟಲ್ಹವಣಿಸುತ..

ಲಂಗ ದಾವಣಿ ನುಡಿದಿದೆ ತಾರುಣ್ಯ
ಸಿಗ್ಗಿಗೊ ಹಿಗ್ಗು ನಗೆಯಾದವಳ ಸಖ್ಯ
ಹತ್ತಿ ಹೂವ ಬಿಡಿಸಿ ಮಾಲೆಯಾಗಿಸಿ
ತೊಡಿಸಲೆಣಿಸಿದೆ ಒಲಿಸಿಕೊಳಲವಳ..

ಯಾರದೊ ದನಿ ದೂರದೆ ಕೇಳುತಿದೆ
ಇವಳು ಯಾರು ಬಲ್ಲೆಯೇನೆ? ಎಂದು
ಹೇಳುವಳೋ ನಾಚಿ ಓಡುವಳೋ ಕಾಣೆ
ಕೇಳದ ಕಾಲಂದುಗೆ ದನಿ, ಕಾಣದಂಗಾಲ ಕೆಂಪು !

ಮತ್ತೇರಿದ ಮರವವಳನಪ್ಪುವ ಮೊದಲೆ
ತನ್ನ ಬಳ್ಳಿ ಬಾಹು ಚಾಚಿ ಕಬಳಿಸಬಿಡದೆ
ನಳಿರ್ದೋಳುಗಳ ಬರಸೆಳೆದು ಬಯಲಿಗೆ
ಬೆತ್ತಲಾಗಿಸಬೇಕಿದೆ ಹುಣ್ಣಿಮೆಯ ನಗುವಾ !

– ನಾಗೇಶ ಮೈಸೂರು
(Picture Source : circulated in internet / one of the social media / FB posting)

Advertisements

02152. ಪಿಸುಗುಟ್ಟುವ ಮಾತು..


02152. ಪಿಸುಗುಟ್ಟುವ ಮಾತು..
_________________________


ಪಿಸುಗುಟ್ಟುವ ಬಾರೆ ಗುಟ್ಟುಗುಟ್ಟಲಿ
ಸ್ವಪ್ನ ಲೋಕದಲಿ ನಾವಾಗಿ ವಿಹರಿಸುತ
ಗುಸುಗುಟ್ಟಲಿ ಜಗ ಲೆಕ್ಕಿಸದೆ ಗುನುಗು
ಮನದ ಹಾಡಿದು ಹಚ್ಚಿಕೊಂಡ ಸಾಂಗತ್ಯ ||

ಪಿಸುಗುಟ್ಟಿ ಹೇಳುವೆ ಗುಟ್ಟಿನಾ ಮಾತಿದು
ಗಟ್ಟಿ ಹೇಳಲಾರೆ ಕಿವಿಗುಸುರೊ ಪದವೆ
ಹೇಳಲೆಂತೆ ನಿನಗೆ ನೀ ದೂರ ನಿಂತರೆ ?
ಹತ್ತಿರಕೆ ಕರೆಯೊ ನೆಪವಿದು ಬಳಿ ಬಾರೆ ! ||


ಸುತ್ತ ಮರಗಳುಂಟು ನೆರಳಲ್ಲೆ ಮರೆಯಿದೆ
ಬುಡಕೊರಗಿ ನಿಂತವರ ಕಾಯೆ ಪೊದೆಯಿದೆ
ಕಣ್ಣಲೀ ಕಣ್ಣಿಟ್ಟು ಮೌನ ಮಾತಾಡುವ ಹೊತ್ತಲಿ
ಪಿಸುಗುಟ್ಟೊ ಸದ್ದಿರಲಿ ಏಕತಾನತೆ ಮುರಿಯೆ ! ||

ಪಿಸುಗುಟ್ಟಲೇನು ಕೊರತೆಯೆ ವಿಷಯ ?
ವೈವಿಧ್ಯವೇನು ಬೇಕಿಲ್ಲ ಇದು ಹೃದಯ
ಕೇಳಬಯಸುತದನೆ ಮತ್ತೆ ಮತ್ತೆ ಆಲಿಸೊ
ತವಕಕೇಕೆ ಬೇಕು, ಹೇಳಿದ್ದನೆ ಪುನರುಚ್ಚರಿಸೆ ! ||

ಪಿಸುಗುಟ್ಟುತಿರಲಿ ದನಿಯಲ್ಲಿ ಸೊಗದಲಿ
ದಾಖಲಿಸುತಿರಲಿ ತರಂಗಗಳ ಎದೆಯಡಿ
ನಡೆದಿರಲಿ ವಿನಿಮಯ ನಿನದಾಗಲಿ ನನದು
ಗುರುತಾಗದಂತೆ ಬೆರೆತಾಗ ಪ್ರೀತಿಗೆ ಸೊಬಗು ||


– ನಾಗೇಶ ಮೈಸೂರು

(Picture source: https://pixabay.com/en/pigeons-doves-and-pigeons-413073/)