02155. ಮಾತು ಮುತ್ತಾದ ಕಥೆ


02155. ಮಾತು ಮುತ್ತಾದ ಕಥೆ
_____________________________

ನಿನ್ನಧರಗಳದುರುತಲಿ
ಉದುರಿಸುತಿದೆ ಮುತ್ತು
ಹೆಕ್ಕಲೆಂದೇ ಬಾಗಿದರು
ದಕ್ಕದೆ ಹೋಯ್ತೆ ಅಡಿಗಡಿಗೆ !

ನಿನ್ನ ಮಾತಾಗಿ ಹರಿದ ಸುಧೆ
ತುಟಿ ಸಿಹಿಯಲದ್ಧಿ ತೆಗೆದಂತೆ
ಜುಳುಜುಳು ಮಂಜುಳ ಗಾನ
ಬೊಗಸೆಯೊಡ್ಡಿಯೂ ತುಂಬಲಿಲ್ಲ..!

ಅರಿವಾಗಲೊಲ್ಲದು ಏನೊಂದೂ
ತುಟಿಯಲುಗಾಟದಲಿ ಮಿಂಚು
ಸುಳಿದಂತೆ ಮಾಯಾ ಗಾಂಭೀರ್ಯ
ಮತ್ತೆ ಕಾತರದಿ ಕಾಯುವ ತಪನೆ..

ಕಾದು ಬಾಯಾರಿ ಯಾತನೆ
ಏನೇನೆಲ್ಲಾ ಹುನ್ನಾರ ಕಾಡಿದೆ ?
ಕೊನೆಗೂ ಹೆಣಗಾಡಿಸಿ ಸಿಕ್ಕಳು ಮೊತ್ತ
ಕೊಟ್ಟು ಮೊದಲ ಮುತ್ತ, ಲಾಲಿಸುತ !

ಮೊದಲ ಚುಂಬನ ಸ್ಪಂದನದೆ
ಕಾಣದ ಹೃದಯ ಸ್ತಂಭನವಿತ್ತೆ
ಮಾತಿಲ್ಲದ ಮಧುರ ಸವಿ ಕವಿತೆ
ಅದ ಬಣ್ಣಿಸಲೆಂತೇ ? ಬರಿದೇ ಮಾತೆ !

ಲಾಲನೆ ಪಾಲನೆ ಪೋಷಣೆ
ಈಗ ಬದುಕಾಗಿ ಹೋಗಿದೆ ಪ್ರೀತಿ
ಬವಣೆ ನಡುವೆ ಅದೇ ಮತ್ತು
ಇದು ತಾನೇ ಬದುಕುವ ರೀತಿ ?

– ನಾಗೇಶ ಮೈಸೂರು

(Picture source: internet / social media)

Advertisements

02154. ಯಾರವನು ಮೊತ್ತದೆ ?


02154. ಯಾರವನು ಮೊತ್ತದೆ ?
____________________________________

ಉರಿವಗ್ನಿ ಕಾಯವೊ? ಸುಡುಸುಡುವ ಕೆಂಡವೊ?
ತಂಪು ಶೀತಲ ಹಿಮವೊ? ಗಾಢಾಂಧಕಾರಾ ತಮವೊ?
ಬೆಳಕೊಳಗಣ ಶಾಖವೊ? ಶಾಖದೊಳಗಣ ಬೆಳಕೊ?
ಕತ್ತಲೊಳಗಡಗಿದ ಕುರುಡೊ? ಸುತ್ತಲಾವರಿಸಿದ ಸೊಗಡೊ?

ಯಾರು ಯಾರಯ್ಯ ನೀನ್ಯಾರು ಜಗದೇಕ ನಿಯಾಮಕ ?
ತೋರಿ ತೋರದೆಲೆ ತೋರುತ ಗೊಂದಲಿಸಿ ಮಾಡುವೆ ಮೂರ್ಖ
ಹುಡುಕಲ್ಹೊರಟವರೆಲ್ಲರ ಹುಡುಕಾಟ ಹುಡುಗಾಟ ಹೆಣಗಾಟ
ಮಾಯೆ ಸಂಸಾರ ಬಂಧನದಿ ಕಟ್ಟಿ ಕದಲಿಸುವೆ ಚಂಚಲ ಚಿತ್ತ

ಯಾಕಯ್ಯ ನಿನಗೆ ಪೂಜೆ? ನೀ ಬೇಡಿದ್ದೊ? ಅಭದ್ರತೆ ಕಾಡಿದ್ದೊ?
ಎಳ್ಳು ಜೊಳ್ಳುಗಳ ಸೋಸೆ ನೀತಿ ನಿಯಮವಿರಲೆಂದು ಮಾಡಿದ್ದೊ ?
ಯಾರಿಲ್ಲ ಅಭದ್ರರಿಲ್ಲಿ ಪ್ರಭುವೆ? ಪಾಪಪ್ರಜ್ಞೆ ಕಟ್ಟಿದೆ ದೇಗುಲ ಗೋಜೆ
ನೀನಿರುವೆಯೊ ಇಲ್ಲವೊ ಆಲಯ ಮೊಳಗುತಿದೆ ಗಂಟೆ ಸದ್ದಲಿ ಪೂಜೆ..

ಉಳ್ಳವರೊ ಇಲ್ಲದವರೊ ಮೊತ್ತ ಕಟ್ಟಬೇಕಲ್ಲವೆ ಎದೆಯಲಿ ಗುಡಿ ?
ತುಂಬಿಕೊಂಡಿದೆ ಮಜ್ಜೆ ಮಾಂಸ ರಾಗ ದ್ವೇಶಗಳ ಜತೆ ಮೈಲಿಗೆ ಮಡಿ
ವಿಕಾರವಿಲ್ಲದ ಚಿತ್ತ ಸಾಕಾರವಾಗಬೇಕಲ್ಲವೆ ನಿರಾಳದೆ ಭಕ್ತಿ ಮಂತ್ರ
ಪ್ರತಿ ಸಾಲಿನ ನಡುವಲೆ ಸುಳಿಯುವ ಭವಸಾಗರ ಚಿಂತೆಯ ಅತಂತ್ರ..

ಎಲ್ಲೊ ಹುಡುಕಿ ಇಲ್ಲದ ದೇವರ ಕುಣಿದಾಡುತಿದೆ ಜಗ ಕಂಡಂತೆ ಸತ್ಯ
ಎಲ್ಲೆಡೆಯು ಪ್ರಸ್ತುತ ಎಲ್ಲದರಲು ಅಸ್ತಿತ್ವ ಅನ್ನುತಲೆ ಕಟ್ಟಿ ಗುಡಿಯ ನಿತ್ಯ
ಹೋಮ ಹವನ ಯಾಗ ಯಜ್ಞ ಮಗ್ನ, ಮಾತಾಟ ಧರ್ಮ ಮತಬೇಧ ವಾದ
ಕಲಿಯುಗದ ಮಹಿಮೆ? ಕೈಮೀರಿದ ಸೃಷ್ಟಿ? ನಿನ್ನನೂ ಬಿಡದೆ ಕಾಡೊ ವಿವಾದ?

– ನಾಗೇಶ ಮೈಸೂರು
(Picture source : internet / social media)