02157. ಕೃಷ್ಣಾಂತರಾಳ


02157. ಕೃಷ್ಣಾಂತರಾಳ
_________________________

ಸಖಿ, ಬಲ್ಲೆಯ ಕೃಷ್ಣಾಂತರಾಳ ?
ಒಲ್ಲದವನಾ ಸೋಗಿನ ಕಥನ
ಬೇಡದವನಂತೆ ನಟಿಸುವ ಕುಟಿಲ
ಬೆಣ್ಣೆ ಮೊಸರಿಗೆ ಕೈ ಹಾಕಿದ ಚೋರ !

ಬಿಡು ಸಖಿ, ನಿನದೆ ಪುಣ್ಯ
ಬರಿ ಗಡಿಗೆಯನ್ಹೊಡೆದ ಪೋರ
ನೋಡಿಲ್ಲಿ ಹಾಲಿನ ನೆಪದಲ್ಲಿ
ಚೆಲ್ಲಿದ ಸೆರಗೆಲ್ಲ ನೆನೆದು ಶೀತಲ !

ಸಾಕು ಸುಮ್ಮನಿರಲಾರಿರ ನೀವೆಲ್ಲ ?
ನನ್ನಯ ಕಥೆಯಿನ್ನೂ ಕೇಳಿಲ್ಲ !
ಕೊಳಲನೂದುವ ನೆಪದಿ ಮೈ ಮರೆಸಿ
ವಸ್ತ್ರವ ಕದ್ದೋಡಿದ ಬೆತ್ತಲೆ ನಿಲಿಸಿ..!

ನಾನ್ಯಾರಿಗೆ ಹೇಳಲೆ ನನ್ನ ಕಥನ
ಮನೆಯಲಿಲ್ಲದ ಹೊತಲ್ಲಿ ಯಜಮಾನ
ಹಿಂದಿನಿಂದ ಬಂದು ಕಣ್ಮುಚ್ಚಿದನೆ
ಕೆನ್ನೆ ಮುಖ ತುಟಿ ಬೆಣ್ಣೆ ಹಚ್ಚಿ ಓಡಿದನೆ !

ಬನ್ನಿರೆಲ್ಲರೀಗ ನಿಮ್ಮ ದೂರಿನ ಪಟ್ಟಿ
ನೋಡೇಬಿಡುವೆ ಎಷ್ಟಿದೆ ಪೊಳ್ಳೂ ಗಟ್ಟಿ !
ಎನ್ನುತ ಬಂದಳು ಮಾತೆ ಯಶೋಧೆ
ಸೆರಗಿನ ಮರೆಯಲಿ ನಗು, ಕೃಷ್ಣನ ಮೊಗದೆ..

ಯಾಕೊ ಎಲ್ಲರ ಬಾಯಾಗುತ ಸ್ತಬ್ಧ
ಧುತ್ತೆಂದಾವರಿಸಿತಲ್ಲೀ ನಿಶ್ಯಬ್ದ ತೊದಲು
ಮುಸಿ ಮುಸಿ ನಕ್ಕವನಾ ಸದ್ದಷ್ಟೇ ಸಶಬ್ಧ
ದೂರೇ ಕಸಿವಿಸಿ ತಪ್ಪಲಿ ಭಾಗ ತನದರ್ಧ !

ಮರೆತೇಹೋದರೆಲ್ಲ ತುಂಟನ ಮಾಯಾಜಾಲ
ಮುಗ್ದ ನಗುವಲಿ ತಾವರಿತಂತೆ ಕೃಷ್ಣಾಂತರಾಳ
ಎದ್ದುಬಿಟ್ಟರೆಲ್ಲ ನೆಪದೆ ನನದಲ್ಲ ದೂರವಳದೆನುತ
ಆಗಿಂದೀಗಿನವರೆಗು ದೂರೊ ಮೋಹ ಮಾತ್ರ ಕರಗಿಲ್ಲ !

– ನಾಗೇಶ ಮೈಸೂರು
೧೩.೦೮.೨೦೧೭
(Picture source : internet / social media)

02156. ಒಲವಿನಾ ಕಡಲವಳು…


02156. ಒಲವಿನಾ ಕಡಲವಳು…
___________________________________

ನಿನ್ನೊಲವು ಚೆಲ್ಲುತಿಹ ತಂಬೆಲರು ಚೆಲುವೆ
ಬೊಗಸೆ ಬೊಗಸೆ ಮೊಗೆದರು ಮುಗಿಯದಕ್ಷಯ ಪಾತ್ರೆ
ದಣಿದು ಸೋತೆನು ರಮಣಿ ಜಿಗಿದೆ ಪ್ರೀತಿಯ ಕೊಳದೆ
ಮಿಂದ ಮಜ್ಜನ ಸಜ್ಜನ ಪ್ರೇಮ ಸರೋವರದೆ

ನೀನಾರೊ? ನಾನಾರೊ? ಯಾವ ಜನ್ಮದ ಮೈತ್ರಿ?
ಅಪರಿಚಿತಳಾರೊ ಚಿರ ಪರಿಚಿತಳೆನಿಸುವ ಖಾತ್ರಿ
ಇದ್ದಿರಲೆಬೇಕಲ್ಲಿ ಪೂರ್ವ ವಾಸನೆ ನಂಟನುಬಂಧ
ನೀಡದೆಯೂ ಅಧಿಕಾರ ವಹಿಸಿಕೊಳ್ಳುವ ಚಂದ !

ಹಳತೊ ಹೊಸತೊ ಕಾಲ ಮುಡಿಯ ಮಲ್ಲಿಗೆ ನವಿರು
ನಿನ್ನ ಮಾತಾಗುತಿದೆ ಬಿರಿದು ನಗುತ ನೆನೆದಂತೆ ತವರು
ಘಮಘಮಿಸಿದಾ ಕಂಪು ಹೂವಿನದೊ, ನಿನದೊ ಅರಿಯೆ
ಹೂವೆರಡರಲಿ ಚಂದ, ಯಾವುದೆಂದರೆ ನೀನೇ ಸರಿಯೆ ?

ನೀ ನುಡಿಯುತಿರೆ ದನಿ ವೀಣೆ ಜೇನ ಹಚ್ಚಿದ ಮಾತಾಣೆ
ಹಾಡಾಗಲಿ ಬಿಡಲಿ ಸ್ವಗತ ತಲ್ಲೀನ ಬೇರೆ ದಾರಿ ಕಾಣೆ
ನೌಕೆಯೇರಿದ ವಿಹಾರ ಸರೋವರವೆಲ್ಲ ನನದೆ ಬಿಡು
ನಿತ್ಯ ಗಾಯನ ಗೋಷ್ಠಿ ವಾದ ಸಂವಾದ ನೀ ಗೆದ್ದುಬಿಡು !

ಉರಿದುಹೋಗಲಿ ಕಾಲ ತೊಳೆದುಹೋಗಲಿ ಕಶ್ಮಲ
ನಿನ್ನೊಲವಿನ ಹಣತೆ ಪ್ರಜ್ವಲಿಸಲಿ ಬದುಕಿನ ಒಡಲ
ನಾ ಪ್ರಣತಿ ನೀ ಜ್ಯೋತಿ ಎಣ್ಣೆ ಬತ್ತಿ ನಮ್ಮಿಬ್ಬರ ಪ್ರೀತಿ
ಸಾಕದರ ಕಾಂತಿಯಲೆ ತೇಲುವಾ ಮುಳುಗದ ರೀತಿ !

– ನಾಗೇಶ ಮೈಸೂರು
(picture source : internet / social media)

(ಭಾನುವಾರದ ಬೆಳಗಿಗೊಂದು ಪ್ರೇಮ ಕವಿತೆ….)