02162. ಇಳೆ ಮಳೆ ಕಥೆ


02162. ಇಳೆ ಮಳೆ ಕಥೆ
________________________

ಮಳೆ ಮಾತಾಡಿತು
ಇಳೆಯ ಜತೆ ಸಮನೆ
ಲೆಕ್ಕಿಸಬೇಡವೆ ಇನಿತೂ ?
ಹಳ್ಳ ಕೊಳ್ಳ ಹೊಂಡದ ಕಥೆ !

ಇಳೆ ಮಳೆ ಹೆಣ್ಣೆರಡು
ಇಜ್ಜೋಡಿನ ಸಂಭಾಷಣೆ
ಎರಚಾಟಾ ಅರಚಾಟಾ ಆಟ
ಇರಬಹುದಪರೂಪದ ಭೇಟಿ !

ಕಾರುವವಳವಳು ಇಳೆಗೆ
ಮಳೆ ಹೀರುವವಳು ಕೆಳಗೆ
ಇವರಿಬ್ಬರ ತಾಳಮೇಳ ಜಿದ್ದಿಗೆ
ದೈನಂದಿನವಾಗದಿರಲಿ ಕೊರಗು !

ಕೊಟ್ಟುಕೊಳ್ಳುವರವರು
ಕೆಟ್ಟರೆ ತಪಿಸುವರು ಜನರು
ಹಾದಿ ಬೀದಿ ನಡಿಗೆ ತೇಲಾಡಿಸೆ
ಕೊಚ್ಚಿ ಹೋಗುವ ಸಹನೆ ದುಮ್ಮಾನ !

ನೀವಿಬ್ಬರು ಮಾತೆಯರು
ಭುವಿಯಾಗಸ ಬೆಸೆದ ಬಂಧ
ನಿಮ್ಮಲಿರೆ ಹೊಂದಾಣಿಕೆ ಸತತ
ಪಾಮರರ ಜಗದಲಿ ಬದುಕೆ ಚಂದ !

– ನಾಗೇಶ ಮೈಸೂರು
(Picture source : internet / social media)

02161. ಯಾರವಳೂ ?


02161. ಯಾರವಳೂ ?
________________________________

ಕಣ್ಣ ಸನ್ನೆಯಲೆ ಪ್ರೇಮ ಪತ್ರ ಬರೆದವಳು
ಹುಬ್ಬುಗಂಟಲೇ ಹುಸಿ ಮುನಿಸ ತರುವಳು
ಮುಗುಳ್ನಗುವಿನಾ ಜತೆ ಜಗಳಾಡೊ ಕೆನ್ನೆ ಗುಳಿ
ಫಕ್ಕನೆಲ್ಲ ಮರೆಸೊ ಸಿಹಿ ಮಾತಾಡೊ ವಾಚಾಳಿ !

ತುಟಿಯ ಕೊಂಕಿಸಿ ಅಣಕವಾಡಿದ ಸೊಗಸು
ಮುಗ್ಗುರಿಸೊ ಮುಂಗುರುಳ ತಳ್ಳುವಾ ಬಿರುಸು
ಉದ್ದಂಡರನೂ ಮಣಿಸೊ ಕಿರುನಗೆ ಮಂತ್ರದಂಡ
ಜಗ ಗೆದ್ದ ಹಮ್ಮ ಮರೆತು ಕಾಲಡಿ ಕೂತ ಪ್ರಚಂಡ !

ಬಣ್ಣನೆಗೆ ನಿಲುಕದ ಎತ್ತರದ ನೀಳ ನಿಲುವು
ಭೌತಿಕವಲ್ಲ ಅಮೇಯ ವ್ಯಕ್ತಿತ್ವ ಸಂಗಮವು
ಬರಿ ಮಾತಲ್ಲ ಮುತ್ತು ಗತ್ತಿನಾ ಮಾತೊಡತಿ
ಚಿಪ್ಪಿನೊಳಗ ಮುತ್ತ ಪೋಣಿಸಿ ಜೋಡಿಸೊ ಛಾತಿ !

ಸಂಜ್ಞೆ ಸನ್ನೆ ಸೂಚನೆ ಮಾತಾಡದವಳಾ ಭಾಷೆ
ಸಂವಹನ ಚಿಲುಮೆ ಅವರವರ ಭಾವದ ಕೂಸೆ
'ಅಹುದು ಅಲ್ಲಾ' ಎನದೆ ಗೊಂದಲದಲಿಡೊ ಜಾಣೆ
ಕೊರಗೇಕೆ ಮಾಯೆಯವಳು, ಚಂಚಲ ಚಿತ್ತೆ ತಾನೆ?

ನೀನರಿಯೊಂದು ಸತ್ಯ ಪ್ರಕೃತಿ ಪುರುಷ ವಿಭಿನ್ನ
ಚಂಚಲತೆ ಜಡತೆ ಎರಡನಾಗಿಸುವ ಮನೋಧರ್ಮ
ಮಿಳಿತವಾದರೆ ಸೂಕ್ತ ಪಕ್ವ-ಪ್ರಬುದ್ಧ ಆಯ್ಕೆ ಬದುಕಿಗೆ
ಹೊಂದುವುದನಾಯುವುದೆ ಕಠಿಣ, ಸೌಭಾಗ್ಯವಿರೆ ಹಿಗ್ಗೇ !

– ನಾಗೇಶ ಮೈಸೂರು
೧೫.೦೮.೨೦೧೭

ಅಮೇಯ: ಅಳೆಯಲಾಗದ

(Picture source: internet / social media)

02160. – ಮತ್ತೊಂದು ಪಿಸುಗುಟ್ಟಾಟ…


02160. – ಮತ್ತೊಂದು ಪಿಸುಗುಟ್ಟಾಟ…

ಪಿಸುಗುಟ್ಟುವ ಮಾರುತ
_____________________

ಪಿಸುಗುಟ್ಟುತಿದೆ ಮಂದ ಮಾರುತ
ಆಹ್ಲಾದದ ಜತೆ ತನ್ನನ್ನೇ ಮಾರುತ
ತನಿತನಿ ಹನಿಹನಿ ತುಂತುರ ಚೆಲ್ಲಿ
ನೇವರಿಸುತಿದೆ ಮೊಗ ಕಣ್ಮುಚ್ಚುತಲಿ ||

ಕೊಳ್ಳುವಾ ವೆಚ್ಚ ಬಯಲಿನಾ ಸ್ವೇಚ್ಛೇ
ಬಂದು ನಿಲ್ಲಲ್ಲಿರಬೇಕು ಮನದೇ ಇಚ್ಛೆ
ನಸುಕು ಮುಸುಕು ಮುಂಜಾವಿನ ಚಳಿ
ಮುಸ್ಸಂಜೆ ಹೊತ್ತಲೂ ಸುಳಿವ ತಿಳಿಗಾಳೀ ||

ಪಿಸುಗುಟ್ಟುವ ಪ್ರೇಮದ ಪದಗಳಲಿಲ್ಲ ಅರ್ಥ
ಪಿಸುಗುಟ್ಟಬೇಕು ಬರಿ ಬೇಕ್ಯಾರಿಗೆ ಮಥಿತಾರ್ಥ ?
ಪಿಸುಗುಟ್ಟುವ ಖುಷಿ ಹಂಚಿಕೊಳ್ಳುವ ಭಾವನೆ
ಪಿಸುಗುಟ್ಟದು ಯಾರಾರೊ ಸಿಕ್ಕಸಿಕ್ಕವರೊಡನೆ ||

ಬೇಧವೆಣಿಸದು ತಂಗಾಳಿ ಚರಾಚರ ಪ್ರೀತಿ
ಒಂದೇ ಹದದೆ ಬೀಸುತೆ ಸಮಪಾಲ ನೀತಿ
ಒಡ್ಡಿಕೊಂಡವಗೆಲ್ಲರಿಗು ಪುಕ್ಕಟೆ ಸಿಗುವ ಭಾಗ್ಯ
ನಿಸ್ವಾರ್ಥದಲೆ ಬೀಸೊ ಮಂದಮಾರುತ ಸಾಮ್ರಾಜ್ಯ ||

ಪಿಸುಗುಟ್ಟುತಿವೆ ಹಕ್ಕಿ, ಚಿಲಿಪಿಲಿಗುಟ್ಟುತ ಗುಟುಕು
ಗುಟ್ಟೆಲ್ಲಿದೇ ಕಾಣೇ, ನಿಸರ್ಗದಲಿ ಬಿಚ್ಚಿಟ್ಟ ಬದುಕು
ಮುಚ್ಚುಮರೆಯೇಕೊ ನಮ್ಮಲಿ? ಏನಿಲ್ಲ ಹೆಚ್ಚುವರಿ ಮೊತ್ತ
ಬರಿ ನಮಗಾಗಿ ಬದುಕೊ ಬಗೆ – ಕೊಡದೆ ಪಡೆಯಲಷ್ಟೆ ಚಿತ್ತ ||

– ನಾಗೇಶ ಮೈಸೂರು