02172. ಬಯಲಾಗು ಬಾರೆ ಮುಗಿಲಂತೆ..


02172. ಬಯಲಾಗು ಬಾರೆ ಮುಗಿಲಂತೆ..

___________________________________________

(ಅನುಕರಿಸು ಬಾರೆ ಮುಗಿಲ – ಮತ್ತೊಂದು ಆವೃತ್ತಿ😍)

ಬಯಲಾಗು ಬಾರೆ ಮುಗಿಲಂತೆ

ಹಿತ ವರ್ಷಧಾರೆ ಹೆಗಲೇರುವಂತೆ

ತೊಳೆದೆಲ್ಲ ಹೊರಗ ಹನಿಸುತ ಒದ್ದೆ

ಇಳಿದಾಳ ತೊಗಲು ಮೈಯೆಲ್ಲ ಮುದ್ದೆ ||

ನೋಡೆಲ್ಲ ದಿರಿಸು ತೊರೆದೆಲ್ಲ ಬಿಂಕ

ಮುದುಡಿದೆ ಕುಸಿದು ನಿರ್ವಾತ ಅಂಟುತ

ಕೊರೆದರೂ ಶೀತಲ ಭಾವವಲ್ಲಿ ಅಮಲ

ಅಮಲದು ತಂಪಲೆ ಬೆಚ್ಚಗಾಗಿಸೊ ಧೂಪ ||

ಎಷ್ಟಿತ್ತು ಬೆಡಗು ಬಿನ್ನಾಣ ಉಡುಗೆಯಲಿ ?

ಎಷ್ಟು ಹುಡುಕಾಟವಿತ್ತು ಆಯುವ ವೇದನೆ ?

ಎಲ್ಲಾ ಹುಡುಗಾಟದಲ್ಲಿ ಚೆಲ್ಲಾಪಿಲ್ಲಿ ನಿರ್ಲಕ್ಷ್ಯ

ಕಸಿದರೂ ಸಿಂಗಾರ ಹಣೆ ಜಾರಿದ ಹನಿ ಹಿತ ||

ಅಂಟಿದಂತೆ ವಸ್ತ್ರ ನಂಟಲಿ ಬೆಸೆಯಲಿ ಹಸ್ತ

ಕುಳಿರ್ಗಾಳಿಯೆರಚಲು ಅಪ್ಪಿಸುತ ಸಂಘರ್ಷ

ಮುಗಿಲ ಪ್ರಸ್ತದ ಹೊತ್ತು ಪ್ರಸವದಲಿ ಮೋಡ

ವೇದನೆ ಯಾತನೆ ಮೂಲ ಸುಖದಲಿಟ್ಟಾ ನಿಗೂಢ ||

ನೀರೆ ನೀರಾಗಿ ನಿರಾಕಾರ ಬಾ ನಿರಾಕರಿಸದೆಲೆ

ಬಯಲಿಗೆ ಬಾರದ ಹೊರತು ಕಾಣದು ಹೊರಗು

ಕೂಪಮಂಡೂಕ ಮನ ಗರಿಬಿಚ್ಚದು ಪ್ರಮಾಣಿಸದೆ

ಮೆಚ್ಚಿದ ಮೇಲಿನ್ನೇನಿದೆ ಶರಣು, ಬದುಕೆಲ್ಲ ನಿನದೆ ||

– ನಾಗೇಶ ಮೈಸೂರು

(ಚಿತ್ರ : ಸ್ವಯಂಕೃತಾಪರಾಧ )

02171. ಗಣಗಣಗಣ ಗಣಾಧಿಪತಿ


02171. ಗಣಗಣಗಣ ಗಣಾಧಿಪತಿ

________________________________

ಓಂ ಗಣಗಣಗಣ ಗಣಾಧಿಪತಿ

ಬಂತೀಗ ನೋಡು ನಿನ್ನ ಸರತಿ

ಗುಡಿ ದೇಗುಲ ಬೀದಿ ಪೂಜಾರತಿ

ಘಂಟಾಘೋಷ ಭುವಿಗೆಲ್ಲಾ ಪ್ರಣತಿ || ಗಣಗಣ ||

ಕಳೆದೂ ಶ್ರಾವಣ, ಭಾದ್ರಪದ ಚೌತಿ

ಇಳೆ ಸಂಭ್ರಮ ನೆನೆಯುತ ಸಂಪ್ರೀತಿ

ಅನುವಾಗುತಿಹವೆಲ್ಲಾ ಮರಗಿಡ ಸೃಷ್ಟಿ

ನೀ ಬಂದಾಗ ಬೀಳಲೆಂದು ನಿನ್ನ ದೃಷ್ಟಿ || ಗಣಗಣ ||

ಕಥೆ ನೂರೆಂಟು ನಿನಗೆ ಗಂಟೂ ಬೆನಕ

ಶಮಂತಕ ಮಣಿ ಜಾಂಬವಂತನು ಸಖ

ಕಾಡಿದೆ ಗೊಲ್ಲನ ಮತ್ತೆ ಬಿಡಲ್ಲಿಲ್ಲ ಚಂದ್ರನ

ಮರೆಸಿಡು ಮೋಡದೆ, ಕಾಡದಂತೆ ಜಗವನ್ನ || ಗಣಗಣ ||

ತರಿದ ಶಿರಕೆ ಮಹೇಶ ತೆರಬೇಕಾಯ್ತೆಷ್ಟು ಕರ

ವರದ ಮೇಲಿತ್ತು ವರ ಗಜವದನವಾಗಿಸಿ ಶಿರ

ಗಣಕೆಲ್ಲ ಒಡೆಯ ಸುರಬಲದೆ ಪೂಜಿತ ಆರಾಧ್ಯ

ಸಿದ್ಧಿಬುದ್ಧೀ ಸಹಿತ ಮೊದಲವಗೆ ಆರತಿ ನೈವೇದ್ಯ || ಗಣಗಣ ||

ಬಂದೊಂದು ದಿನವಿದ್ದರು ಪ್ರಭು ವಿಘ್ನನಾಶಕ

ಸಂಭ್ರಮ ಸಡಗರ ನಿರಂತರ ಜನಮಾನಸಿಕ

ಬೇಡುವರಯ್ಯ ಬವಣೆಗೆ ಬೇಯುವ ಬಾಳು

ನೀಡಿ ಧೈರ್ಯ ಸ್ಥೈರ್ಯ ಬಗೆಹರಿಸಯ್ಯ ಗೋಳು || ಗಣಗಣ ||

– ನಾಗೇಶ ಮೈಸೂರು

02170. ಅನುಕರಿಸು ಬಾರೆ ಮುಗಿಲ….!


02170. ಅನುಕರಿಸು ಬಾರೆ ಮುಗಿಲ….!

________________________________

ಹೆಪ್ಪುಗಟ್ಟಿದೆ ಮುಗಿಲು, ನೆರೆದ ಮೇಘಕು ದಿಗಿಲು

ಎತ್ತರದ ಜಾರುಮಣೆ, ಬೀಳಬಹುದೇ ಜೋಪಾನ ?

ಬಾರೆ ಸಖಿ ಬಯಲಿಗೆ, ಬಿಟ್ಟೆಲ್ಲ ಬಗೆ ಅನುಮಾನ

ನಿನ್ನ ಕಣ್ಣಾ ಕಾಂತಿಗೆ, ಸೋತು ಸುರಿವುದು ಖಚಿತ ! ||

ಯಾರಿಗಿಲ್ಲ ಆತಂಕ? ಮುಚ್ಚೊ ಬಿಗುಮಾನ ಬಿಂಕ

ಗುಡುಗು ಸಿಡಿಲು ಸದ್ದಲಿ, ಮುಚ್ಚಿಡುವಾ ಹವಣಿಕೆ

ನೀನೇನು ಹೊರತಲ್ಲಾ ಗೆಳತಿ, ಮೋಡ ನಿನ್ನದೆ ರೀತಿ

ನಿನ್ನ ಸಿಡಿಮಿಡಿ ಮುನಿಸ, ಸದ್ದಲಡಗಿದೆ ಪ್ರೀತೀ ಭೀತಿ ||

ಖಾತರಿಯಿಲ್ಲದ ಹೆಜ್ಜೆ, ತುಂತುರಾಗುತ ಮೊದಲು

ಹನಿ ಹನಿ ಝೇಂಕರಿಸೊ ದನಿ, ಗೆಜ್ಜೆ ದನಿ ನರ್ತನದೆ

ನಿನದೇನು ಹೊಸತಲ್ಲ ಬಿಡು, ಅನುಕರಿಸೆ ಮುಗಿಲ

ತುಂತುರಾಗಿ ಬಾರೆ ಜತೆಗೆ, ತುದಿಬೆರಳ ಸ್ಪರ್ಷದಂತೆ ||

ನೋಡು ನೋಡುತೆ ಬಾನ, ಗೋಪುರ ಧ್ವಂಸ ತಲ್ಲಣ

ಎಲ್ಲಿತ್ತೆ ಹುಚ್ಚು ಮಳೆ? ಪ್ರತಿಹನಿ ಧಾರಾಕಾರ ಸಂಭ್ರಮ

ನೋಡಿದೆಯ ಕಳೆಯೆ ಸಂಶಯ, ಮುಸಲಧಾರೆ ಪ್ರೇಮ ?

ಪ್ರೀತಿ ಪ್ರಣಯ ಪರಿಣಯ, ಮಿಲನೋತ್ಸಾಹದ ಉರವಣಿ ||

ಅಂಬೆಗಾಲಿನ ಶಿಶುವೆ, ಹೆಜ್ಜೆಯಿಕ್ಕುತ ಓಡುವ ಉಲ್ಲಾಸ

ತೆರೆದುಕೊಂಡ ಬಾನಲಿದೆ, ಅದೆ ಮುಗ್ದತೆ ಉತ್ಸಾಹ ಜತೆ

ನಿನ್ನ ಸರದಿ ಮರುಳೆ, ತೆವಳೆದ್ದು ನಿಲ್ಲುತ ಕುತೂಹಲದೆ

ಎಚ್ಚರೋದ್ಗಾರದಲಿ ನಡೆವ, ನೆನೆದು ಭಾವದ ಮಳೆಯಲಿ ||

– ನಾಗೇಶ ಮೈಸೂರು

(Picture source: internet / social media)