02186. ಜಟಕಾ ಸಾರೋಟು ಮೋಟಾರು


02186. ಜಟಕಾ ಸಾರೋಟು ಮೋಟಾರು
_________________________________


ಬದುಕು ಜಟಕಾಬಂಡಿ ವಿಧಿಯದರ ಸಾಹೇಬ
ಎಂದು ನಂಬಿಕೊಂಡೇ ಗಾಡಿಯೇರಿದೆ ಜೀಯಾ
ಹುಟ್ಟಿಸಿದ ದೇವರು ಹುಲ್ಲು ಮೇಯಿಸದಿಹನೆ ?
ನಂಬಿಕೆ ನಡೆಸಿತ್ತು ಸುತ್ತಮುತ್ತಲ ಕಂದಕವಿದ್ದೂ || ಬದುಕು ||

ಕಾಯಕವೆ ಕೈಲಾಸ ನುಡಿಗಟ್ಟು ಮೊದಲಿಟ್ಟೆ
ಕಷ್ಟಪಟ್ಟರೆ ಸುಖವು ಕಿವಿಗೊಟ್ಟೆ ನಾಣ್ಣುಡಿಗೆ
ಓದಿ ಬರೆದೆ ಕಲಿಯುತ ಉರು ಹೊಡೆದೆ ಮಗ್ಗಿ
ಗುರು ಹಿರಿಯರಿಗೆ ನಮಿಸಿ ಗೌರವದೆ ತಲೆಬಾಗಿ || ಬದುಕು ||

ಬೆಳೆಯುವ ಮೊಳಕೆ ಕುಡಿಯಲಿ ನೋಡೆಂದರು
ಹಿಗ್ಗುತಲೆ ಅಂಕಕೆ ಅಂಕದ ಕೋಳಿಯಾದೆ ಮುನ್ನುಗ್ಗಿ
ಅಂಕದ ಪರದೆಯೆತ್ತಿ ಮಂಕುದೀಪದೆ ನಟಿಸೊ ಹೊತ್ತು
ಪದವಿ ಪರಾಕು ಸಿರಿಗೆ ಸಾರೋಟು ಕುದುರೆ ಮಾಯಾ! || ಬದುಕು ||

ಅರಿವಾಗಿಸಿತು ಬದುಕು ಸತ್ಯ ಕಷ್ಟಪಡುವವ ಮೂರ್ಖ
ಸುಖಿಸುವ ಚಾಣಾಕ್ಷ್ಯ ಚುರುಕುಬುದ್ಧಿ ತಂತ್ರದೆ ಕೆಡವುವ
ನ್ಯಾಯನೀತಿ ಧರ್ಮಕರ್ಮ ಹೆಸರಿಗಿರೆ ಸಾಕು ತೋರಿಕೆ
ಮೋಸದ ಬದುಕೂ ಸರಿಯೆ ಹಿಡಿಯದಂತೆ ಬದುಕಿರೆ ! || ಬದುಕು ||

ಮೋಟಾರು ಜಗದಲಿ ಜಟಕಾಬಂಡಿ ಪಳೆಯುಳಿಕೆ
ಸಾಂಕೇತಿಕ ವೈಭವ ಅಣುಕು ದಸರೆಯ ರಂಗಿಗೆ
ಸಿಂಗರಿಸಿಕೊಂಡಿದೆ ಕುದುರೆಗಾಡಿ ರಾಜ ವೈಭವ
ರಾಜರಿಲ್ಲದ ಬೀದಿ ನೀವೆ ರಾಜರೆನ್ನುವ ಪ್ರಭುತ್ವ || ಬದುಕು ||

ಅದರೂ ಬಿಡದಲ್ಲ ಒಳಗೊಳಗೆ ಕಾಡುವ ನೈತಿಕ
ಪಾಪ ಪುಣ್ಯಗಳೆಂಬ ಸಂಕೋಲೆ ಕಾಯುತ ಸಮೃದ್ಧ
ಯಾರೆಂತಿದ್ದರೇನು? ಇರಬೇಕು ಮನಸೊಪ್ಪೊ ಹಾಗೆ
ಆತ್ಮಸಾಕ್ಷಿಯಾಗೆ ಸಂತೃಪ್ತ ಬೇಕಿಲ್ಲ ಓಲೈಕೆ ಮತ್ತಾರದು ||ಬದುಕು ||

– ನಾಗೇಶ ಮೈಸೂರು
(Nagesha Mn)
(picture from: https://www.flickr.com/photos/aviisme/3203518549)

02185. ನೈಪುಣ್ಯತೆ


02185. ನೈಪುಣ್ಯತೆ
__________________________________


ನಿಪುಣ ನೀ ಮಾತಲಿ ಜಾಣ
ಬಿಡು ಹೊಗಳಿಕೆಯ ಹೂ ಬಾಣ
ಸುಳ್ಳೆಂದು ಗೊತ್ತಿದ್ದೂ ಸೋಲುವಳು
ಹುಡುಗಿ ದೌರ್ಬಲ್ಯವೆ ಮಾತುಗಳು ||

ಎಲ್ಲರಂತಲ್ಲವೆ ನೀ ನಿಪುಣೆ
ಸತಾಯಿಸುವೆ ಪ್ರೀತಿಯಲೂ ಜಿಪುಣೆ
ಬಿಡು ಬೇರೆ ಹೆಣ್ಣಿನ ಮಾತು ನಾನರಿಯೆ
ನಿನಗಲ್ಲ ಉತ್ಪ್ರೇಕ್ಷೆ ಪ್ರತಿಶತವು ಸರಿಯೆ ||

ಗೊತ್ತು ಮಾತಲೆ ಕೆಡವಿ ಬಲೆಗೆ
ಕರಗಿಸುವ ಛಾತಿಯು ಗಂಡಸಿಗೆ
ಜಾರಿಬೀಳದಿರುವ ಹಠವು ಒಳಗೆ
ತುಣುಕಾಗಿ ಜಾರುತಲದೆ ಬಲೆಗೆ ||

ಅನುಮಾನ ಬಿಡುವೆಯ ಮಹರಾಣಿ
ಮನವ ಗೆಲ್ಲೊ ಅವಸರದ ಪುರವಣಿ
ಮೆಚ್ಚಿಸಲು ಹುಚ್ಚಾಟಗಳ ಸರಮಾಲೆ
ಅಪಕ್ವವಲ್ಲ ಅಸಹಾಯಕ ಪ್ರೇಮಸೆಲೆ ||

ಏನೊ ಗೊತ್ತಾಗದ ವ್ಯವಹಾರ ಪ್ರೀತಿ
ಸಿಕ್ಕುಸಿಕ್ಕು ಕಾಡುವ ಗೊಂದಲ ಜಾಸ್ತಿ
ನೈಪುಣ್ಯವೆಲ್ಲ ಭಾವಯಾನದಲಿ ಅನಾಥ
ಹಾಳಾಗಲೆಂದು ಕೊಟ್ಟೆ ಮನಸು ಸೋಲುತ ||


– ನಾಗೇಶ ಮೈಸೂರು
೨೫.೦೮.೨೦೧೭

(Picture Source: This work is licensed under a Creative Commons Attribution 3.0 Unported License)

02184. ಎಲ್ಲಾ ಮರೆತು..


02184. ಎಲ್ಲಾ ಮರೆತು..
_____________________


ಎಲ್ಲಾ ಮರೆತು ಮಗುವಿನ ಹಾಗೆ
ಮಲಗಬೇಕು ನಾನು
ಯಾವುದಿದೆಯೊ ಮಡಿಲು ಕಾಣೆ
ಹುಡುಕಬೇಕು ಇನ್ನು ||

ಮಗುವಾಗಿ ಮಾತೆಯ ಮಡಿಲಲಿ
ಇದ್ದರೇನು ಹುಟ್ಟಲಿ
ಹೇಗಿದ್ದೆನು? ಹೇಗಿತ್ತು ಸೊಗಡು ?
ಇರುವುದೇನು ನೆನಪಲಿ ? ||

ಇದ್ದಿರಬಹುದು ಹಲವು ವರ್ಷ
ಹಾಲೂಡಿದವಳ ಸೆರಗಲಿ
ಅಂದೆಲ್ಲಿತ್ತು ಈ ಬವಣೆ ಗೋಳು
ಸುಖ ಬೇಡವಿದ್ದ ಹೊತ್ತಲಿ ||

ದೇಕುತ ತೆವಳುತ ಬೆವರುತ
ಬಳಲಿದ ಈ ದಿನಗಳಲಿ
ಒರಗಲೊಂದು ಮಡಿಲು ಬೇಕು
ನಿಸ್ವಾರ್ಥದ ಹೆಗಲಲಿ ||

ಬರಿ ಮಡಿಲುಗಳೆ ತುಂಬಿದೂರು
ಕಾಣದೊಂದು ಸರಿ ಮಡಿಲು
ಕಾಣೆಯಾಗಿ ಹೋಗುವ ಮೊದಲೆ
ಸಿಗದೆ ಹೋದಿತೆಂಬಾ ದಿಗಿಲು ||

– ನಾಗೇಶ ಮೈಸೂರು

(picture source: http://tvtropes.org/pmwiki/pmwiki.php/Main/LapPillow)