02189. ಈ ಲೋಕ ವ್ಯಾಪಾರ


02189. ಈ ಲೋಕ ವ್ಯಾಪಾರ
__________________________
(‘೩ಕೆ – ನಮ್ಮ ಚಿತ್ರ ನಿಮ್ಮ ಕವನ’)


ಬಂದಿದ್ದೇನೊ ? ಹೋಗಿದ್ದೇನೊ ?
ಬದುಕೆ ಓಟದ ಮೂಟೆ
ಯಾರೊ ಓಡುತ್ತಾರೆ
ಇನ್ಯಾರೊ ಓಡಿಸುತ
ಮತ್ತಾರೊ ಬೆನ್ನಾಗೊ ಮಂದಿ..

ಕೆಲ ಸಮತಟ್ಟು ರಸ್ತೆ
ಉರುಳೋ ಚಕ್ರದ ಜತೆ
ಹೊರಟಿದ್ದರೆ ಅರಸಿ ಗಮ್ಯ..
ಗೊತ್ತಿದೆಯೊ ಇಲ್ಲವೊ
ಸರಿ ಗುರಿಯಿಲ್ಲದಿರೆ ಮೊತ್ತ
ತಪ್ಪು ಜಾಗಕೆ ತಲುಪೊ ಬೇಗ !

ಹಾಸಿಕೊಂಡ ಪರಂಪರೆ
ಪೂರ್ವನಿಶ್ಚಿತ ನಿಲ್ದಾಣ
ಗೊತ್ತಿಲ್ಲದೆಯು ತಲುಪಿಸುವ;
ಇರದಿದ್ದರೇನು ಅಚ್ಚರಿ ರೋಮಾಂಚನ ?
ಸಮಷ್ಟಿಯನೊಯ್ಯುವ ದೂತ
– ತಾನಾಗದಿದ್ದರೆ ಧೂರ್ತ !

ಇದುವೆ ವಿಚಿತ್ರ ಒಂದೇ ಜಗ
ವಿಭಜಿಸಿಬಿಟ್ಟಿದೆ ಜೀವನ ಸೊಗ!
ಅವರವರವರು, ಅವರವರ ದಾರಿ
ಧನಿಕ ಶ್ರಮಿಕ ನಿರ್ಗತಿಕ ಬೀದಿ
ಹರಿಯುತೆಲ್ಲ ಸಮನಾಂತರ ಪಥ
ವಿವಿಧತೆಯಲಿ ಏಕತೆ ಸಮಗ್ರ ತತ್ತ್ವ !

ಒಗಟೊಂದು ನಿಶ್ಚಿತ ಚಿತ್ರ ಪಥ
ಹೋಗುತಿದೆಯೊ ಬರುತಿದೆಯೊ ಅನಿಶ್ಚಿತ..
ಹೋಗುತಿದೆಯೆಂದು ಹೋದವರ ಕಂಡೇ
ಬರುತಿರುವುದೆಂಬ ಭ್ರಮೆಯನೂ ಉಂಡೆ
ನಿಜದಲ್ಲಿ ಬಂದು ಹೋಗುವರ ಸಂತೆ
ಈ ಸಂತೆಯಾ ಬದುಕು ಮೂರೇ ದಿನವಂತೆ !

– ನಾಗೇಶ ಮೈಸೂರು
೨೬.೦೮.೨೦೧೭

02188. ಹಂಚಿಕೊಳ್ಳೋ ಮನುಜ…


02188. ಹಂಚಿಕೊಳ್ಳೋ ಮನುಜ…
___________________________


ಚಂದ ಕುಂದಗಳಾ ಲೋಕ
ಅಂದ ಅಂಟಿಸಿ ಬೆಡಗಾಟ
ಸುಗಂಧ ಸುಂದರ ಅನಿಸೆ
ಹಂಚಿಕೊಳೆಲೊ ಮನುಜಾ! ||

ಹಂಚೇ ಬಾರದು ಮನಸು
ಹೊಂಚಿ ಕೂಡಿಸು ಗುಣಿಸು
ಮುಂಚಿನದೆ ತೀರಿಲ್ಲ ಭಾರ
ಇಂಚಿಂಚೆ ಬೆಳೆದರೆಲ್ಲಿ ಹಗುರ ? ||

ಕೊಟ್ಟು ಕೊಟ್ಟಾಗದೋ ಖಾಲಿ
ಇಟ್ಟುಕೊಳ್ಳೆ ವ್ಯಸನ ಜೋಲಿ
ನೀನುಂಡಷ್ಟೆ ದಕ್ಕುವಾ ಜಗವೊ
ಕೊಟ್ಟು ಗಳಿಸಿದ್ದೆಲ್ಲ ಪರಕೆ ನಗವೊ ||

ಹಂಚದಿದ್ದರು ಬೇಡಾ ಸಂಪತ್ತು
ಹಂಚಿಕೊಳ್ಳೋ ನಗುವ ಮಾತು
ಹೊಂಚುವ ಜನರಿರುವ ಜಗದಲಿ
ಸಿಕ್ಕದೇನು ಖಾಲಿ ಸಂಚಿ ಹುಡುಕಲಿ ||

ಆಧುನಿಕ ಜಗ ಹಂಚಲೆ ಸುಲಭ
ಫೇಸ್ಬುಕ್ವಾಟ್ಸಪ್ ಜ್ಞಾನದಾ ನಭ
ಕಂಡರೊಂದು ಪೋಸ್ಟು ಸುಂದರ
ಹಂಚಿಕೊಳ್ಳಿರೊ ಪುಕ್ಕಟ್ಟೆ ವ್ಯಾಪಾರ ||


– ನಾಗೇಶ ಮೈಸೂರು
೨೬.೦೮.೨೦೧೭

(Pictures from:

1. https://www.google.com.sg/amp/m.vijaykarnataka.com/state/karnataka/divorce-case-asked-to-calculate-the-cost-of-the-first-night/amp_articleshow/51319187.cms

2. https://antekante.com/2264)

02187. ಮನದ ಕದ(ನ)


02187. ಮನದ ಕದ(ನ)
_____________________


ಅವಿರತ ನಡೆಯುವ ಕದನ
ಕದ ತೆಗೆಯಬೇಡ ಮನ
ಕದ್ದು ನುಸುಳೊ ಚತುರ ಜೇಡ
ಬಲೆ ಹೆಣೆವಾ ಬಗೆಯೆ ನಿಗೂಢ ||

ಸುಳಿಗೆ ಸಿಕ್ಕಲೊಂದೇ ತುಣುಕು
ಶುರುವಿಗೊಂದು ಚಿಂತೆ ಕೊಳಕು
ಕೊರೆವ ಕೀಟ ಇರಿಯುತ ಆಳ
ಬೃಹದಾಕಾರ ತಾಳುವ ಖಳ ||

ಪ್ರಲೋಭನೆ ತರ ಪ್ರಚೋದನೆ
ಒತ್ತಾಸೆ ನಿಲ್ಲೊ ದುರಾಲೋಚನೆ
ಹೊಕ್ಕರೊಮ್ಮೆ ಗುದ್ದಿ ಕದ ತೆರೆದು
ನೆಲೆಸಿ ಮಿಕ್ಕೆಲ್ಲವ ಕೆಡಿಸದೆ ಬಿಡದು ||

ಅಬ್ಬಾ! ಏನಪ್ಪಾ ಅದರಾ ಸಹನೆ ?
ನಿರಂತರ ಕದ ತಟ್ಟುವ ತಾಳ್ಮೆ, ಜಾಣ್ಮೆ !
ಸಾಕೊಂದೇ ಬಾರಿ ಸೋತರೆ ಗೆಲುವು
ಬಿತ್ತಿ ಬೆಳೆಯುತ್ತಲೆ ತೆಗೆವುದು ಫಸಲು ||

ಮುಚ್ಚಿರಲಾಗದು ಕದ ತೆರೆದಿಡು ಮರುಳೆ
ನೆಚ್ಚು, ಮೆಚ್ಚಿನದೂ ಬರಬೇಕಲ್ಲವೆ ಒಳಗೆ ?
ಬರಲೇಳು ಕೊಳೆ ಕಶ್ಮಲ ಜೊತೆಗೆ ಧಾಳಿಗೆ
ಕದಕಿಡು ಅಂತರಂಗದ ಶೋಧಕ ತಡೆಗಟ್ಟೆ ||

ಗೆದ್ದವರಿಲ್ಲ ನಿತ್ಯ ನಿಜ, ಸೋಲಲ್ಲ ಸೋಲು
ಗೆಲುವಿನ ಮೆಟ್ಟಿಲನೇರುವ ಹಾದಿಗೆ ಕಲ್ಲು
ಕಲಿತೇರುತ ಸೋಪಾನ ಪಕ್ವವಾಗಿರೆ ಮನ
ತಂತಾನೆ ಅರಿವುದು ಮುಚ್ಚಿ ತೆರೆವ ಬಗೆಯನ್ನ ||

– ನಾಗೇಶ ಮೈಸೂರು
೨೬.೦೮.೨೦೧೭
(Picture source: http://www.stuffyoushouldknow.com/blogs/doorways-and-the-mind-or-the-deeper-meaning-of-walking-into-a-glass-door.htm)