02190. ಆಟ ಅಲ್ರಪ್ಪೊ ಮದ್ವೆ !


02190. ಆಟ ಅಲ್ರಪ್ಪೊ ಮದ್ವೆ !
____________________________
(ಸುಮ್ನೆ ಹಳೆ ಆಟಾ ಗ್ಯಾಪುಸ್ಕೊಳ್ತಾ..)


ಯಾವಳಪ್ಪೊ ಚಕೋರಿ
ಇವಳಾಡ್ತಳಲ್ಲೊ ಲಗೋರಿ
ಕೈಬೀಸಿ ಚೆಂಡು ಎಸುದ್ಲು ಅಂದ್ರೆ
ಎದೆ ನೇರಕ್ಕೆ ಬಿತ್ತು ಹೃದಯಕ್ಕೆ ತೊಂದ್ರೆ ! ||

ನೀನೇನಪ್ಪ ಕಮ್ಮಿ ಚಿನ್ನಿ ದಾಂಡು
ಆಡೊದಿಲ್ವಾ ಕಟ್ಕೊಂಡ್ಹುಡ್ಗರ ದಂಡು ?
ನಾವೇನು ಗಿಲ್ಲಿನಾ, ದಾಂಡಲ್ಸಿಕ್ಹಾರೋಕೆ
ಹಿಡ್ದಂಗಲ್ಲಾ ಚಿನ್ನಿ, ನಾವ್ಬೀಳೊದು ಸರಿ ಪ್ರೀತಿಗೆ ! ||

ಸಾಕಮ್ಮಿ ಸುಮ್ಕಿರು ಬ್ಯಾಡ
ನಾ ಟಕ್ಕಾಟಿಕ್ಕಿ ಎಷ್ಟಾಡಿರ್ಬೇಡ?
ಬಚ್ಚಾ ಕೈಲ್ಹಿಡಿದು ಎಸೆದಾಂದ್ರೆ ಗೊತ್ತಾ
ಒಂದೇ ಏಟಲಿ ಪೂರಾ ಬಾಚ್ತಿದ್ದೆ ಪೂರ್ತಾ ! ||

ಸಾಕ್ಸುಮ್ಕಿರೊ ಕೂಸೆ ಕುಂಟಾಬಿಲ್ಲೆ
ನಾನೆಸ್ಟಾಡಿಲ್ಲ ಅದೂ ಒಂಟಿ ಕಾಲಲ್ಲೆ
ಬಾಚೊಕೇನ್ಟಿಕ್ಕಿನಾ ಗೂಬೆ ಕೂತಂಗೊಂದ್ಕಡೆ ?
ಅಮಟೆ ಅನ್ಕೊಂಡಡ್ಡಾದಿಡ್ಡಿ ನುಲ್ಯೊ ನವಿಲಿನ್ಪಾಡೇ ! ||

ಏಯ್ ಅವಲಕ್ಕಿ ಪವಲಕ್ಕಿ ಹುಡ್ಗಿ
ಹೆಣ್ಮಕ್ಳಾಟ ಏನ್ಮಹಾ ಬಿಡೆ ಸಣ್ಹುಡುಗಿ
ಸಾಕ್ಮಾಡು ಬಿಂಕ ಜಂಬ ಹುಡ್ಗಾಟ ಬೇಡ
ಮೆರ್ದಾಡ್ಕೊಂಡೆ ಹಳ್ಳಕ್ಬಿದ್ರು ನಿಂದೇನ್ತಡಾ ? ||

ಕೇಳೋ ಮಂಕ್ದಿಣ್ಣೆ ಹೆಣ್ಣು ಬುಗುರಿ
ನಿಲ್ಲೋದಲ್ಲ ಮನ್ಸು ಒಂದ್ಕಡೆ ತೂರಿ
ನೀನಿಟ್ಕೊಬೇಕು ನಿಯತ್ತಿನ್ಚಾಟಿ ಆಡ್ಸೋಕೆ
ತಲೆತಗ್ಸಿದ್ಕುರಿ ಆಗ್ಬೇಕೊ ಕ್ವಾಪ ಬಂದೊತ್ಗೆ ! ||

ಹೊಡಿ ಗೋಲಿ ಯಾಕ್ಬೇಕಿಂತ ಹುಡ್ಗಿ
ಹುಡುಕ್ತೀನಿ ಸಿಕ್ತಾರೆ ನೂರಾರ್ಜನ ಸುಗ್ಗಿ
ಯಾರಿಗ್ಬೇಕ್ಹೇಳು ಬಜಾರಿ ಗಂಡ್ಬೀರಿ ಜೋಡಿ
ಹೇಳ್ದಂಗ್ಕೇಳೊ ಹೆಣೈಕಳ್ಗೇನು ಸಿಕ್ತವೆ ದಾಢಿ ||

ಹೂ ಸಿಗ್ತವೆ ಹೋಗು ಹಳ್ಳಿಮುಕ್ಕ
ಅಳ್ಳೀಗುಳ್ಳಿ ಮಣೆ ಆಡ್ಕೊಂಡ್ಕೂತಾಡಕ
ಸಿಕ್ತಾವೆ ಆಯ್ಕೊ ತಲ್ಯಾಗಿರ್ತದೆ ಬರಿ ಲದ್ಧಿ
ಕೇಳ್ಕೊಂಡ್ಬಂದಿರ್ಬೇಕಪ್ಪ ಅಂದ ಚಂದ ಬುದ್ಧಿ ! ||

ಆಗಿರ್ಲೇಳು ಪೆದ್ದಿ ಆಡ್ತೀನ್ಕಟ್ಟೇಮನೆ
ಹುಣ್ಸೆ ಬೀಜ ಬಳಪ ಸಾಕು ಆಟ ಶ್ಯಾನೆ
ಬಂದ್ರೆ ಸಾಕು ಬೇಯ್ಸಿ ಗುಡ್ಸಿ ತೋಳೆಯೊಕೆ
ನಾ ತಂದಾಕ್ತೀನಿ ಗಂಡ್ಸು ಮನೆವಾರ್ತೆ ಸಾಕೆ ! ||

ಪೆದ್ಮುಂಡೇದೆ ಬಾಳ್ವೆ ಪಗಡೆ ಆಟ
ಜೋಡಿ ನೆಟ್ಗಿರ್ದಿದ್ರೆ ಪೂರ್ತಾ ನಳ್ಳಾಟ
ನೆಟ್ಗಿದ್ದೋಳ್ಜತೆಗಿದ್ರೆ ರಾಜಂಗವಳೆ ಮಂತ್ರಿ
ಕೂಳಾಕೋದೇನ್ಬಂತು ಕುಳ ಮಾಡ್ತಾಳ್ಖಾತ್ರಿ ! ||

ನೀನೇನೇನೊ ಹೇಳಿ ಕೆಡಿಸ್ಬುಟ್ಟೆ ತಲೆ
ಅಯ್ನೋರತ್ರ ಕವಡೆ ಹಾಕ್ಸಿ ಕೇಳ್ತಿನ್ತಾಳೆ
ಗಂಟಾಕೊ ಸಮಾಚಾರ ಹುಸಾರಿರ್ಬೇಕಪ್ಪ
ನೋಡ್ದೆ ಮಾಡ್ದೆ ಕಟ್ಕೊಂಡಾಗಲ್ಲ ನಾ ಬೇಕೂಫ ||

ಹೌದೌದು ಹೋಗಪ್ಪ ಅಯ್ನೋರಿಂದೇನೆ
ಹಾಕ್ತಾರೆ ಮೂರ್ನಾಮ ಸಿಂಗ್ಲೀಕ ಆಗೋನೆ
ಕಣ್ಮುಚ್ಚಾಲೆ ಬಾಳಾಟ ನಿಂಗ್ಹೇಳೋದ್ಬರಿ ದಂಡ
ಹೋಗೋಗ್ಕಟ್ಕೊ ಯಾವಳ್ನೊ ಆಗ್ತಿ ಅಮ್ಮವ್ರ ಗಂಡ ! ||

– ನಾಗೇಶ ಮೈಸೂರು
(just for fun 😁)
(Picture source : internet / online news portals )