02192. ಯಾವನವ?


02192. ಯಾವನವ?
___________________


ಯಾವನವ ? ಯಾವನವ? ಯಾವನವ ಯಾದವ ?
ಯಾವ ನವ? ಯಾರ ಜೀವ? ಹೆಸರು ಮಾತ್ರ ಮಾಧವ ! ||

ಯಾರ ಸಖ ? ಯಾರ ಪುಳಕ ? ಯಾರಿಗವನು ನೆಂಟ ?
ಯಾರಿಗುಂಟು ಯಾರಿಗಿಲ್ಲ ನಂಬಿದವಗೆ ನೆಚ್ಚಿನ ಭಂಟ ! ||

ಯಾವ ಕೆಳೆ? ಯಾವ ಬಂಧ? ಮಾವನನೆ ಕೊಂದ ಕಂದ
ಮಾನವನೊ? ಮಧುಸೂದನನೊ? ಗೊಂದಲದ ಕಿಷ್ಕಿಂಧ ! ||

ಸಾರಥಿಯೊ? ಸಹಚರನೊ? ಸಾರಿದ ಕರ್ಮಸಿದ್ಧಾಂತ
ಗುರುವವನೊ? ಶಿಷ್ಯೋತ್ತಮನೊ? ಬಾಳಿದ ಭಗವದ್ಗೀತ ||

ಯಾವನವ? ಯಾವನಲ್ಲ? ಎಲ್ಲವವನೆ ಕಾಯುವ ಬಲ
ಯಾರ ನಾವೆ ನಾವಿಕನವ? ಎಂದು ಗುರಿ ತಲುಪೊ ಕಾಲ ||


– ನಾಗೇಶ ಮೈಸೂರು
(Nagesha Mn)
(Picture source : internet / social media)

02191. ಕಣ್ಗೊಳದಲಿ ಕನಸಿತ್ತ


02191. ಕಣ್ಗೊಳದಲಿ ಕನಸಿತ್ತ
________________________


ಕಣ್ಣು ರೆಪ್ಪೆ ತೆರೆದಳವಳು
ತೆರೆಯಿತಚ್ಚರಿಯ ನೋಟ
ಬೊಗಸೆ ಕಣ್ಣು ಮೊಗೆಮೊಗೆದು
ಸುತ್ತ ಸುರಿದು ಬೆಳದಿಂಗಳು ||

ಬಡಿಯಿತು ರೆಪ್ಪೆ ಪಟಪಟನೆ
ರೆಕ್ಕೆ ಬಿಚ್ಚಿ ಹಕ್ಕಿ ಹಾರಿದಂತೆ
ಕುತೂಹಲ ವಿಸ್ಮಯ ಕೌತುಕ
ನೋಟದೊಡನೆ ಮನ ಹಾರಾಟ ||

ಕಣ್ಣಾಲಿ ದೋಣಿ ಆಡುತ್ತತ್ತಿತ್ತ
ಚಂಚಲ ಚೆಲುವಿನೆಸಳರಳಿಸಿ
ಆಕಳಿಸಿದ ನಸುಕಿಗು ಚೇತನ
ನಕ್ಕ ಮುಗುಳ್ನಗೆ ಬೆಳಗ ದೀಪ ||

ಮತ್ತೆ ಕಣ್ಭಾರಕೆ ಸೋಲುತಲಿತ್ತ
ಕಣ್ಣುಜ್ಜಿ ನಿದ್ದೆಗೆ ಮರಳೊ ಸನ್ನಾಹ
ತನ್ನಲ್ಲೆ ನಕ್ಕಳೆ ಚಂದದ ಚೆದುರೆ
ಮುಚ್ಚಿದ ನಯನ ಎಷ್ಟು ಸುಂದರ !?||

ಮತ್ತೆ ತೇಲಿ ಸ್ವಪ್ನಲೋಕಕೆ ಅಪ್ಸರೆ
ತಾವರೆಗಣ್ಣಿನ ಪಾತ್ರೆ ಕನಸ ತುಂಬೆ
ಕಾದಿಹ-ನಲ್ಲ ಅಲ್ಲೆ ಹೆಕ್ಕುತ ತುಳುಕಿದ್ದ
ಚೆಲ್ಲಾಪಿಲ್ಲಿಯಾಗಬಿಡದಂತೆ ಕಾಯುತ್ತ ||

– ನಾಗೇಶ ಮೈಸೂರು
(Nagesha Mn)
(Picture Source : internet / social media)