02194. ನಮ್ಮ ಬಿಡದಾ ‘ನಾನು’


02194. ನಮ್ಮ ಬಿಡದಾ ‘ನಾನು’
________________________


ಮುನಿಸ ಸೆರಗಲಿ ಇಣುಕಿ ನೋಡುತಿದೆ
ನಾನೆಂಬ ಹಮ್ಮು ಅಹಂಕಾರ
ಬಡಿದೆಬ್ಬಿಸೇನೊ ಕ್ಷುಲ್ಲಕಾ ಪರಿಗಣನೆ
ಬಾಯಿ ಕಟ್ಟಿಹಾಕಿ ಕರಿ ಮೌನ.. ||

ಸಾಗರಾ ಸೇರಿದ ನದಿ ಬಾಳಲೆಲ್ಲಿ ಸಿಹಿ
ಮುಕ್ಕಿದೆಲ್ಲೆಡೆಯೂ ಉಪ್ಪುಪ್ಪು.
ಯಾರಾರು ಬಂದರೊ? ಹೇಗೆ ಸಂದರೊ ?
ಯಾರ ತೆರೆಯೇರಿ, ಯಾವ ಅಲೆಯೊ ? ||

ಅಪ್ಪಳಿಸಿತೆಲ್ಲ ಸಪ್ಪಳದ ಖೂಳ ಖಳ
ಸುರುಳಿ ಸುತ್ತಿ ಬಸವಳಿಸಿ ಎಸೆದಾಟ
ಯಾವ ಘೋರ ಗಳಿಗೆ ಮಾತಾಗೊ ಕ್ರೂರ
ವಿಷ ಜಲಚರಗಳಾಗಿ ಆಕ್ರಮಣ ||

ವಿಫಲ ಸಕಲಾಸ್ತ್ರ ಕಂಬನಿ ದುರಾಚಾರ
ಬಿಕ್ಕಿಬಿಕ್ಕಿ ಬುಸುಗುಟ್ಟೊ ಭಾವ
ಒಣ ಸ್ವಾಭಿಮಾನ ನುಂಗೆಲ್ಲ ಆಪೋಶನ
ಅಗಸ್ತ್ಯನೆದುರ ಲೋಪಾಮುದ್ರೆ ||

ಯಾವ ಚಿಂತನೆಯ ಬಿತ್ತನೆ ಮುನಿಸು
ಮುಗಿದ ಗಳಿಗೆ ಪರವಶವೆ;
ಯಾವ ಕುರುಹು ಲವಲೇಶವಿರದ ನಗು
ಅಬ್ಬಬ್ಬಾ! ಹೆಣ್ತನದ ಸೊಗವೆ ! ||


– ನಾಗೇಶ ಮೈಸೂರು
(Nagesha Mn)

(picture source: internet / social media)

02193. ನಾನವನಲ್ಲ ನಾನವನಲ್ಲ


02193. ನಾನವನಲ್ಲ ನಾನವನಲ್ಲ
____________________________


ನಾನವನಲ್ಲ ನಾನವನಲ್ಲ
ನಾನಲ್ಲ ಅವತಾರ ಪುರುಷ
ನಾನಾ ಕ್ಲೇಷದ ಭೂಚರ ಲೋಕವ
ನಿಮ್ಮಂತೆ ಅನುಭವಿಸ ಬಂದವ ||

ನಾನವನಲ್ಲ ನಾನವನಲ್ಲ
ನಾನಲ್ಲ ಚಾಣಾಕ್ಷ ಕುತಂತ್ರಿ
ತಂತ್ರ ಕುತಂತ್ರಗಳ ತೊಡರ ಮಧ್ಯೆ
ಮಂತ್ರಮುಗ್ದನಂತೆ ನನ್ನಾಟವಾಡಿದೆ ||

ನಾನವನಲ್ಲ ನಾನವನಲ್ಲ
ನಾನಲ್ಲ ಗೋಪಿಗೆ ಗೋಪಾಲ
ಮುಗ್ದ ಮನದ ಆರಾಧನೆ ಯಾಚನೆ
ಮುಗ್ದನಾಗೆ ನುಡಿಸಿದೆ ಕೊಳಲಿನ ಕೊನೆ ||

ನಾನವನಲ್ಲ ನಾನವನಲ್ಲ
ನಾನಲ್ಲ ಬರಿ ದಾನವಾಂತಕ
ದುಷ್ಟಶಿಕ್ಷಣ ಶಿಷ್ಟರಕ್ಷಣ ಕಾಯಕ
ಎಲ್ಲರದೆಂದು ತೋರಿಸೇ ಪೂರಕ ||

ನಾನವನಲ್ಲ ನಾನವನಲ್ಲ
ನಾನಲ್ಲ ಬರಿ ನಾರಿಲೋಲ
ನೂರಾರಿದ್ದರು ನಾರಿಯರಿತವರಲ್ಲ
ಅರಿಯುವುದೆಂತು ತೋರಿಸೆ ಹಂಬಲ ||

ನಾನವನಲ್ಲ ನಾನವನಲ್ಲ
ನಾನಲ್ಲ ನಿಮ್ಮ ಮನದ ಭಾವ
ನಾನೂ ನಿಮ್ಮಂತೆ ಅರಸಿ ಶೋಧಿಸಿ
ಕಂಡುಕೊಳ್ಳೆ ಹೆಣಗಿದೆ ಸೃಷ್ಟಿಯಾತ್ಮವ ||

– ನಾಗೇಶ ಮೈಸೂರು
(Nagesha Mn)
(Picture source : snap taken of a calendar picture)