01372. ಕರೆಂಟಿಲ್ಲ, ಕರೆಂಟಿಲ್ಲ..


01372. ಕರೆಂಟಿಲ್ಲ, ಕರೆಂಟಿಲ್ಲ..
________________________


ಏನು ಹಬ್ಬ
ಖಾಲಿ ಡಬ್ಬಾ !
ಕರೆಂಟಿಲ್ಲ ದಿನ ಪೂರ
ಅಡಿಗೆ ಮನೆಗಿಲ್ಲಾ ದಸರ ||

ಎಲ್ಲಾ ಅರೆಬರೆ ಕಗ್ಗ
ತಾನೆ ಮಾಡುವುದೇನೀಗ ?
ಮಾಡದೆ ಎಡೆ ಕಾಗೆಗಿಲ್ಲ ನಿಗಾ
ಕರೆಂಟು ಹೊಡೆದ ಕಪಿಯ ಜಗ ||

ಕರೆಂಟಿಲ್ಲ ಅನ್ನ ಸಾರು
ತಿರುಗದು ಮಿಕ್ಸಿ ಗ್ರೈಂಡರು
ಕಾದು ಕುಳಿತ ನಳಪಾಕದಾಟ
ಅಸ್ತವ್ಯಸ್ತ ಗೊಂದಲದಾ ಕಮ್ಮಟ ||

ಭಕ್ಷ್ಯ ಭೋಜನ ಮೊತ್ತ
ಕೂತಿವೆ ಸರದಿ ಕಾಯುತ್ತ
ಮಾಡಲೆಂದು? ತಿನ್ನಲೆಂದು ?
ತಿನ್ನುವ ರಾತ್ರಿಗು ಕರೆಂಟಿನ ಗುದ್ದು ||

ರುಬ್ಬುಗುಂಡು ಅರೆವ ಕಲ್ಲು
ಬೇಕು ಕಷ್ಟಕಾಲ ಸಹಚರ
ತಪ್ಪಿಹೋದ ವ್ಯಾಯಮ ಮತ್ತೆ
ಬೆವರಿಳಿಸುವ ಕರೆಂಟಿನ ಚೋರ ||

ಹಬ್ಬಗಳಿಗು ಹಾಕಿ ಡುಬ್ಬ
ತಪ್ಪಿಸುವರಲ್ಲಾ ಹೊಲಬ
ಕರೆಂಟಿಲ್ಲಿ ಹಗಲಿರುಳು ಕಡಿತ
ಶಾಪಕೆ ಹಬ್ಬವೂ ಮಂಕಾಗಿತ್ತ ||

– ಮೈನಂನಾಗೇಶ
(Nagesha Mn)

ಹೊಲಬು = ದಾರಿ
ಡುಬ್ಬ = ಮೋಸ

(picture: http://newsfirst.lk/english/2015/09/ministry-of-power-and-energy-brings-reasons-for-blackout-to-light/112320)

01371. ಸರತಿ ಸಾಲಲಿ ಮೂರು…


01371. ಸರತಿ ಸಾಲಲಿ ಮೂರು…
___________________________


ಕುಂತೇ ಬಿಟ್ಟಳಲ್ಲ ಇವಳು
ಕುಡಿದ ನೀರಲುಗದಂತೆ
ಬರುವನೊ ಬಾರನೊ ಅವನು
ನಡುವಲಿ ನಿಂತ ನಾ ಕಂಗಾಲು ||

ಅವನೊಪ್ಪುವನೊ ಬಿಡುವನೊ
ಇವಳೊಪ್ಪಿದಳೊ ಬಿಟ್ಟಳೊ
ಸರತಿ ಸಾಲಲಿಬ್ಬರಿಹೆವಲ್ಲ
ಒಳಗಿನವಳಾಗಲೆ ಸಿಟ್ಟುಸಿರು ||

ಕೂತುಬಿಟ್ಟರಾಯ್ತೆ ಜಗುಲಿಯಲಿ
ಇಳಿದರೆ ಮೆಟ್ಟಿಲು ಮುಂದಿನ ದಾರಿ
ಹೊಸಿಲು ದಾಟುವೆ ನಾನಾಗ ಜಗುಲಿ
ನಿಟ್ಟುಸಿರವಳಿಗೆ ಹೊಸಿಲ ಬಿಟ್ಟುಕೊಟ್ಟು ||

ನೀ ಮೊದಲ ಬಿಳಿ ಪಾರಿವಾಳ ನಿಜ
ನಿನಗೆ ಮೊದಲ ಕಾಳು ಸಮೃದ್ಧ
ತಿಂದುಂಡು ಹಿಡಿಯದಿರೆ ನಿನ್ನ ದಾರಿ
ಮಿಕ್ಕವರಿಗಿಲ್ಲ ಬರಿ ಕೊಕ್ಕಿನ ಮಸೆದಾಟ ||

ನಿನ್ನ ಮಾಟ ಬಿನ್ನಾಣದ ಕೊಂಕು ನೋಟ
ನನ್ನ ಕಣ್ಣಲಿನ ಆತಂಕದ ಅಗಣಿತ
ಒಳಗವಳ ದಿಗ್ಭ್ರಮೆಯ ಹುಚ್ಚಾಟಕೆಲ್ಲ
ನೀನೇ ಮದ್ದು ಕೂರದೆ ನಡೆ ನಿನ್ನ ದಾರಿಗೆ ||

– ನಾಗೇಶ ಮೈಸೂರು
(Nagesha Mn)
(Picture from social media via Yamunab Bsy – thanks!!😍👍🙏🙏)

(ಈ ಚಿತ್ರ ಹಿಂದೊಮ್ಮೆ ನೋಡಿದಂತೆ ನೆನಪು : ಬಹುಷಃ ಗಿರೀಶ್ ಜಮದಗ್ನಿಯವರ ಸಣ್ಣಕಥೆ ಸಂಕಲನ ‘ ಕಣ್ಣೀರಜ್ಜ ಮತ್ತಿತರ ಕಥೆಗಳು’ ಇರಬೇಕು. ಇಳಂಗೋವನ್ ಎಂಬುವವರ ಚಿತ್ರ ಎಂದು ಓದಿದ ಮಸುಕು ನೆನಪು. ಇದು ಅದೇ ಚಿತ್ರವೆ? ಖಚಿತವಾಗಿ ಗೊತ್ತಿಲ್ಲ 😊)

01370. ಜಂಬೂ ಸವಾರಿ..


01370. ಜಂಬೂ ಸವಾರಿ..
______________________


ಬಿಡಿ ಬಿಡಿ ಬಿಡಿ ಬಿಡಿ ದಾರಿ
ಬರುತೈತೆ ಜಂಬೂ ಸವಾರಿ
ಬಲಪಕ್ಕ ಎಡಪಕ್ಕ ಸಾಗರ
ಜನಜಂಗುಳಿ ಜಾತ್ರೆ ಅಪಾರ ||

ಸ್ತಬ್ದಚಿತ್ರ ಕೋಲಾಟ ಮೇಲಾಟ
ಜನಪದ ಮನಪದ ಕುಣಿದಾಟ
ಕುಶಲಕಲೆ ನೃತ್ಯನಾಟಕ ಚಳಕ
ಜಿಲ್ಲೆ ಮೂಲೆಮೂಲೆ ಕಲೆ ಬೆಳಕ ||

ಆನೆ ಮೇಲಂಬಾರಿ ಸಾಲಲಿ
ನೋಡುವೆರಡು ಕಣ್ಣು ಸೋಲಲಿ
ಚಾಮುಂಡೇಶ್ವರಿ ವಿರಾಜಮಾನ
ದಸರೆಗದೆ ಅಂತಿಮ ನಿರ್ವಾಣ ||

ಕೊನೆಗೆಲ್ಲಾ ನಡೆ ಬನ್ನಿ ಮಂಟಪ
ವಿಧಿವಿಧಾನ ಬಾಣಬಿರುಸ ಕಪ್ಪ
ದರ್ಶನ ಪ್ರದರ್ಶನ ಪುನರಾಗಮ
ಇರುಳ ಉರವಣಿ ಮರಳಿ ಆಗಮ ||

ಅರಮನೆಯಿಂದುಗಮ ಸಕಲ
ಅರಮನೆಗೆ ಮರಳುವ ಕಾಲ
ಇತಿಹಾಸ ಚರಿತೆ ಪರಂಪರೆ
ಮರುಕಳಿಸಿ ಪ್ರತಿವರ್ಷದ ಕರೆ ||

– ನಾಗೇಶ ಮೈಸೂರು

01369. ಬುದ್ಧಂ ಶರಣಂ ಗಚ್ಛಾಮಿ..


01369. ಬುದ್ಧಂ ಶರಣಂ ಗಚ್ಛಾಮಿ..
____________________________


ಹೇ ಭಗವಾನ್ !
ಗೌತಮ ಬುದ್ಧನೊ ಸಿದ್ಧಾರ್ಥನೊ
ಬೋಧೀ ವೃಕ್ಷದಡಿಯ ಸಿದ್ದನೊ
ಯಾರಾದರು ಸರಿ ನನಗೀಗ
ಕೊಡು ಸತ್ತ ಮಗನ ಪ್ರಾಣ ಭಿಕ್ಷೆ.. ||

ಗಳಗಳನತ್ತಳು ತಾಯಿ
ಬುತ್ತಿಯ ಬಿಚ್ಚಿಟ್ಟು ಹಣ್ಣಂಫಲ
ಅಂಜಲಿಬದ್ಧಳಾಗಿ ಮಂಡಿಯೂರಿ
‘ನನ್ನಲ್ಲಿರುವುದಿಷ್ಟೆ ಕೊಡುವ ಶಕ್ತಿ..’
ನಗುವಳುವಿಲ್ಲದ ನಿರ್ಲಿಪ್ತ, ಗೌತಮ ||

ತಾಯೆ, ನನಗೂ ತಾಯೆ
ಬಿಡು ಚಿಂತೆ ಬಡಪಾಯಿಯ ಚಿತೆ
ಬದುಕಿಸಬಹುದೇನೊ ಎಳೆ ಜೀವ
ಬೇಕಿಷ್ಟೇ ಸಾವಿಲ್ಲದ ಮನೆ ಸಾಸಿವೆ
ತೇದು ಹಚ್ಚಿದ ಗಳಿಗೆಯೆ ಸಜೀವ ! ||

ಮಿರಮಿರ ಮಿಂಚು ಕಣ್ಣಲಿ
ಅರೆಕ್ಷಣ ಮರೆಯಾಗಿತ್ತು ದುಃಖ
ಆಸೆಯ ನಕ್ಷತ್ರ ಮಿನುಗಿ ಮಂದಹಾಸ
ಮನೆ ಮನೆ ಮೆಟ್ಟಿಲು ಕೈಲೊಂದು ಬಟ್ಟಲು
‘ನಿಮ್ಮಲುಂಟೆ? ಕೊಡಿ ಸಾವಿಲ್ಲದ ಮನೆ ಸಾಸಿವೆ ?’ ||

ಹಿಂದಿರುಗಿ ಬಂದಳು ಸಂಜೆಗೆ
ಬತ್ತಿ ಬಸವಳಿದ ಕಣ್ಣು ನಿರ್ಲಿಪ್ತತೆ
ಖಾಲಿ ಬಟ್ಟಲು ಮುಂದಿಟ್ಟು ಕೂತಳು
ತಗ್ಗಿದ ತಲೆ ನುಡಿಸಿತ್ತು ಪಿಸು ಮಾತಲಿ
‘ಸಾವಿಲ್ಲದ ಮನೆಯೆ ಇಲ್ಲವಲ್ಲಾ ದೊರೆಯೆ ?’ ||

ಮಂದಹಾಸ ತಬ್ಬಿದ ಮೊಗ
ಆಡಿತ್ತು ನೂರೆಂಟು ಮಾತಿನ ಮೊತ್ತ
‘ತಾಯಿ, ನಾನಾಗಬಾರದೇನು ನಿನ್ನ ಮಗ?’
ಮರು ನುಡಿಯಲಿಲ್ಲ ಮಾರುತ್ತರ ಕೊಡದವಳ
ತುಟಿ ಮಾತ್ರ ದನಿಸಿತ್ತು – ‘ಬುದ್ಧಂ ಶರಣಂ ಗಚ್ಛಾಮಿ..’ ||

– ನಾಗೇಶ ಮೈಸೂರು
(Nagesha Mn)
(Photo from social media via Yamunab Bsy – thanks 🙏😊)

01368. ಯಾಕೆ ಬರುತ್ತೊ ಹಬ್ಬಾ…


01368. ಯಾಕೆ ಬರುತ್ತೊ ಹಬ್ಬಾ…
____________________________


ಯಾಕೆ ಬರುತ್ತಪ್ಪೊ
ಈ ಹಾಳು ಹಬ್ಬ
ಹೆಸರಿಗೆ ರಜ ಗಂಡಸ್ರಿಗೆ
ಡಬ್ಬಲ್ಕೆಲ್ಸ ಮನೆ ಹೆಂಗಸ್ರಿಗೆ ! ||

ಹಬ್ಬದ ಹೆಸರಲ್ಲಿ ಮತ್ತೆ
ಗುಡಿಸಿ ಸಾರಿಸಿ ತೊಳೆದು
ಮನೆಯೇನೊ ಚೊಕ್ಕಟ
ಮೈಕೈ ನೋವು ಅಕಟಕಟಾ ! ||

ಪಾತ್ರೆ ಪಗಡಿ ಇಟ್ಟಂಗಡಿ
ಹಳೆಪಳೆಯದೆಲ್ಲ ಬೆಳಗಿ
ಉಜ್ಜಿ ತೊಳೆದು ಫಳಫಳ
ಮಡಿ ಪೂಜೆಯ ಹೆಸರಲಿ ||

ಖಾದ್ಯಗಳೊಂದೆ ಎರಡೆ ?
ಮಾತಿನ ವಾದ್ಯ ನಡುವೆ
ಹಬ್ಬದ ದಿನ ಹಿಂದೆ ಮುಂದೆ
ಜಗ್ಗಾಡಿಸಿಬಿಡುವ ಸರಹದ್ದೆ ||

ಕೊನೆಗೊಮ್ಮೆ ನಿಟ್ಟುಸಿರು
ಮುಗಿದಾಗ ಸಂಭ್ರಮ
ಭಣಗುಟ್ಟುವ ಮನೆ ಮನ
ನಿರಾಳ ಮುಗಿದಾ ಸಮಾಧಾನ ||

ಯಾರಿಗೆ ಹೇಳೋಣ ಗಂಡಸರ ಕಷ್ಟ ?
ಹಬ್ಬದ ರಜೆಗು ಕೂರಬಿಡದ ಗೊಣಗಾಟ
ಮಾಡಬೇಕೆಲ್ಲ ಸಿದ್ಧತೆ ಪೂಜೆಗೀಜೆ ಗೋಜು
ಬೈದರು ತಿರುಗಿ ಮಾತಾಡದ ಮೂಗ ಕರು ! ||

– ನಾಗೇಶ ಮೈಸೂರು
(Nagesha Mn)

(Picture source : internet / social media)

01367. ಜೋಡಿಗೆ ಕಾದ ಹಕ್ಕಿ…


01367. ಜೋಡಿಗೆ ಕಾದ ಹಕ್ಕಿ…
_______________________________


ದಿಗಿಲ್ಹುಟ್ಟಿಸುತಿದೆ ಸುತ್ತಲ ಪಂಚಭೂತ
ಭರಿಸಬಿಡುವುದೇ ಈ ಘೋರ ಏಕಾಂತ ?
ವ್ಯಾಪಿಸುತ ಕರಾಳ ಮೇಘಜಾತ್ರೆ ಖೂಳ
ನರಪೇತಲ ಪಿಶಾಚಿ ಒಂಟಿ ವೃಕ್ಷವೂ ಭೀಕರ..

ನೆರಳಲ್ಲ ಬೋಳುಮರ ನೆನಪಿನಾ ಖಳ
ನೆರಳಾಗುವ ಚಾಮರ ಹಾರಿಹೋಗುವ ಧೂರ್ತ
ಬಿರುಗಾಳಿ ಮಳೆಗಾಳಿ ತರಲಿದೆ ತೂಫಾನು
ಮಾತಿಗೆ ತಪ್ಪದೆ ಬಂದಾ ಮೂಢಳೇನು ನಾನು ?

ನಿನ್ನ ಮಾತ ನಂಬಿ ಕಾದುನಿಂತೆ ನಾನಿಲ್ಲಿ ಒಂಟಿ
ಬಂದೇ ಬರುವೆ ಲೆಕ್ಕಕುಂಟೆ ಅಡೆತಡೆ ಪ್ರೇಮದಲಿ ?
ಕಣ್ಣ ತಪ್ಪಿಸಿದೆ ಜನರ, ತಪ್ಪಿಸಿಕೊಳ್ಳಲೆಂತು ನಿಸರ್ಗ
ಪರಿಕಿಸುವ ಸಮಯ ಎಂದುಕೊಂಡು ನಡೆದ ಧೈರ್ಯ..

ಯಾಕೋ ಈಗ ಭೀತಿ, ನೀನಿನ್ನೂ ಕಾಣದೆ ತಾಣದಲಿ
ಸಹಿಸಲೆಂತೂ ಆಕ್ರೋಶ ಪಂಚಭೂತಗಳ ಅಟ್ಟಹಾಸ ?
ನೀನಿತ್ತ ಮಾತು ನೆನೆದು ತುಂಬುತಿರುವೆ ಮನಕೆ ಧೈರ್ಯ
ಬಂದೆ ಬರುವೆ ತಾನೆ, ಕೈಬಿಡದೆ ಹಿಡಿದು ಕರೆದೊಯ್ಯೆ ?

ಬರುವೆಯೊ ಬಿಡುವೆಯೊ ನಾನಂತೂ ನಡೆದೆ ಮಾತಂತೆ
ವಚನ ಭ್ರಷ್ಟಳಾಗದೆ ಜಯಿಸಿ ನಿಂತೆ ಪ್ರಕೃತಿಯನೂ ಗೆದ್ದು
ನಿನದೀಗ ಪಾಳಿ ಪರೀಕ್ಷೆಯ ಸಮಯ ನಿನಗೂ ಗೆಳೆಯಾ
ನೀ ಬಾರದಿದ್ದರು ಕದಲದೆ ನಿಲುವೆನಿಲ್ಲೆ ಭರವಸೆ ಬಿಡದೆ !

– ನಾಗೇಶ ಮೈಸೂರು
(Nagesha Mn)

(Picture from social media via: Madhu Smitha – thanks Madhu ji!🙏😊)

01366. ಮಳೆಯ ಸದ್ದಲಿ ಮೌನ ಹೊದ್ದು..


01366. ಮಳೆಯ ಸದ್ದಲಿ ಮೌನ ಹೊದ್ದು..
_________________________________


ಮಾತಿನ ಲಹರಿಗೆ
ಮಳೆ ಹೊದಿಸಿದೆ ಮೌನದ ಹೊದಿಕೆ
ಮಾತಾಡಲು ಬಿಡು ಮಳೆಗೆ
ಮಿಕ್ಕ ಮಾತೆಲ್ಲ ಅರ್ಥಹೀನ ಚಡಪಡಿಕೆ… ||

ಮಳೆ ಮಾತೆ ಲಯಬದ್ಧ
ತುಂತುರು ಚೌಕಾಸಿ ಹನಿಯುವ ಜಿಪುಣ
ಕೆಣಕದಿರು ತಿಣುಕಾಡಿಸಿಬಿಡುವ
ಮುಸಲಧಾರೆ ಕೊಚ್ಚಿಬಿಡುವ ನಿಪುಣ ! ||

ಹೇಳದಾವುದಿದೆ ಮಾತು ?
ಮಳೆ ನುಡಿಯಲಾಗದೆ, ಹೇಳದೆ ಮರೆತದ್ದು ?
ಬಿಚ್ಚಲ್ಹೊರಡೆ ತಡವರಿಕೆ ಮುರುಕು ನಿಘಂಟು
ಸುಮ್ಮನಾಲಿಸು ಕಲಿಸುತ್ತದೆ ಪ್ರತಿಹನಿ ಸದ್ದು ! ||

ಗೊತ್ತಾಗದದರ ಲೆಕ್ಕಾಚಾರ
ಮೋಡ ಮಿಂಚು ಗುಡುಗು ಸಹಚರ ಏನೆಲ್ಲಾ !
ಬಿತ್ತಿದ ಫಸಲಿಗಾಸರೆ ನಿಶ್ಯೇಷ ಕೊಚ್ಚಿದರೆ
ಮಾತು ಮನೆ ಕೆಡಿಸಿತು, ಮಳೆ ಮಾತೇನು ಕಮ್ಮಿ ? ||

ಮಳೆಯ ಮಾತಿನ ಮನೆಯಲಿ
ಎದೆಯ ಮಾತಾಗಬೇಕು ಮೌನದ ದೋಣಿ
ಹನಿದು ತೊರೆಯಾದ ನೀರಲಿ
ಮುಳುಗಡೆಯಾಗದಂತೆ ಮಾತಿನ ಲಾವಣಿ ||


– ನಾಗೇಶ ಮೈಸೂರು
(Nagesha Mn)
(Picture source 2 : internet / social media)