01406. ಎಲ್ಲಿ ಹೋದವು


01406. ಎಲ್ಲಿ ಹೋದವು
_________________

ಅಂಗಳದೆ ಸದ್ದಿಲ್ಲ
ಮಕ್ಕಳಾ ದನಿಯಿಲ್ಲ
ಕಿರುನಗೆಯ ಸ್ವಾಗತವಿಲ್ಲ
ಬಂದಪ್ಪುಗೆಯ ಉತ್ಸವವಿಲ್ಲ ||

ನೀರವ ಖಾಲಿ ಖಾಲಿ
ಜನರಿದ್ದೂ ಜೊತೆಯಲ್ಲಿ
ಕದ ತೆರೆವರಿಲ್ಲಾ ಖುದ್ಧು
ಮಾಡದು ಬಾಗಿಲು ಸದ್ದು ||

ಅಮ್ಮಗೆ ಕೆಮ್ಮೆ ಸಹಚರ
ನೀಡುವರಿಲ್ಲ ಉಪಚಾರ
ಕೇಳುವವರೇ ದಿಕ್ಕಿಲ್ಲ
ಬರಿ ನೀನೇ ನಿನಗೆ ಎಲ್ಲ ||

ಬೀಳುತ ಹಾರಿ ಮೈಗೆ
ತುಂಟಾಟ ಸಿಕ್ಕದೆ ಕೈಗೆ
ಕಂಪ್ಯೂಟರೀಗ ಮಗಳ ಕೈಲಿ
ಮೊಬೈಲಾಟ ಮಗನ ಶೈಲಿ ||

ಒಲೆಯಲಿಟ್ಟದೇನೊ ವನಿತೆ
ರೂಮಿಗೊಂದು ಟಿವಿಯ ಕಥೆ
ಮೈ ಮರೆತವಳಲ್ಲಿಡೆ ಗಮನ
ಕಡೆಗಣಿಸಿ ಕಂಡರು ರಮಣನ ||

ಮರೆತಂತೆ ಗದ್ದಲ ಗಲಿಬಿಲಿ
‘ಬಿಕೋ’ ಎನುವ ವಸತಿಯಲಿ
ಮರೆಯದೊಂದೇ ಜೀವದ ಲೆಕ್ಕ
ಎಂದಿನಂದೆ ಸ್ವಾಗತಿಸೊ ಶುನಕ ||

ಆ ದಿನಗಳು ಕೈಕೊಟ್ಟು ಪರಾರಿ
ಆಧುನಿಕತೆ ಹಿಡಿಸಿ ಹೊಸ ದಾರಿ
ಮಂಕು ಹಿಡಿದ ಮೌಲ್ಯ ಸಂಸ್ಕೃತಿ
ಇದ್ದೂ ಇಲ್ಲದೆ ನರಳೋ ದುರ್ಗತಿ ||

ಐಹಿಕದ ಮೋಹ ನುಂಗಿದೆ ನಮ್ಮ
ಕುರುಡಾಗಿಸಿ ಕೊಳ್ಳುಬಾಕ ಮರ್ಮ
ಸಾಗಿದೆಯೆತ್ತ ಬದಲಾಗುವ ಜಗತ್ತು ?
ಗೊತ್ತು ಗುರಿಯಿರದ ಕುರಿಗಳ ಗತ್ತು ! ||

– ನಾಗೇಶ ಮೈಸೂರು
(Nagesha Mn)

(Video source received from Chandrashekar Hs – thank you 🙏🙏👍👌😊)

01405. ಕಾಯಿಸ ಬೇಡವೊ ಇನ್ನೂ..


01405. ಕಾಯಿಸ ಬೇಡವೊ ಇನ್ನೂ..
__________________________


ಪಲ್ಲಂಗದ ಮೇಲೆ ಕೂತು
ಇನ್ನೆಷ್ಟು ಕಾಯಲೊ ರಮಣಾ ?
ಸಾಕು ಚೆಲ್ಲಾಟದ ಹುನ್ನಾರ
ಕಾಡದೆ ಬಂದುಬಿಡೋ ಸಾಕಿನ್ನು.. ||

ನೀನಲ್ಲ ಗೋವಿಂದ ಮಾಧವ
ನಾನಲ್ಲ ರಾಧೆಯ ಅವತಾರ
ಗರಿ ಹಿಡಿದಿರುವೆ ನೆನಪಿಸಲು
ರಾಧೆ ನಿದ್ರಿಸಳು ಕೃಷ್ಣ ಬರದೆ ||

ಬೇಸರವೇಕೊ ಮುನಿದು ಮೆತ್ತೆ
ಒರಗು ದಿಂಬಿಗು ನಿನ್ನದೆ ಕೊರಗು
ಪಲ್ಲಂಗದ ಜೊತೆಗತ್ತು ಶೋಕ
ಆಚರಿಸಿವೆ ಸರಪಳಿ ಗಾಳಿ ಜೀಕುತ್ತ ||

ಮುನಿಸು ದುಃಖ ದುಗುಡ ದುಮ್ಮಾನ
ನನದಲ್ಲವೊ ಬೇಗುದಿ ಎದೆಯೊಳಗೆ
ಬೇಯಿಸಿದೆ ಬೇಯುತಿದೆ ಅಂತರಂಗ
ಕೂಡದೆ ಚಡಪಡಿಸಿವೆ ಪಾದಕು ಕ್ರೋಧ ||

ಹೊತ್ತು ಜಾರುವ ಮೊದಲೆ ಬಾರೊ
ಬಾರದೆ ಹೋದರೆ ಭಂಗ ಪ್ರಸಂಗ
ಸಿಂಗರಿಸಿದ ಕೇಶ ಬಂಗಾರದ ಒಡವೆ
ಕಿತ್ತೆಸೆದೆಲ್ಲ ಕೋಪಗೃಹ ಸೇರೊ ಮೊದಲೆ ||

– ನಾಗೇಶ ಮೈಸೂರು
(Nagesha Mn)

(Picture source : Internet / social media received via Tejaswini Kesari – thanks a lot madam for another beautiful picture!😍🙏👍👌😊)

01404. ಹೂವಾಗಿ ಹಕ್ಕಿಯಂತೆ..


01404. ಹೂವಾಗಿ ಹಕ್ಕಿಯಂತೆ..
___________________________


ಕಂಡೆಯಾ ಸೊಗಸು !?
ಹೂವು ಹಕ್ಕಿಯ ಹಾಗೆ
ಹಾರಿದ್ದುಂಟೆ ಜಗದಿ ?
ಹಾರುತಿದೆ ನೋಡಿಲ್ಲಿ ! ||

ರೆಕ್ಕೆ ಬಿಚ್ಚಿದ ಸೊಬಗೆ
ನೋಡಲ್ಲಿ ದಳ ಹೀಗೆ
ಹಾರೇಬಿಟ್ಟಿತು ಈಗಲೆ
ಮನ ಹಕ್ಕಿಯ ಹಾಗೆ ತೇಲೆ ||

ನಭದ ಗುಣವೆ ಹೀಗೆ
ಕಾಣದ ಕತ್ತಲೆ ಬೇಗೆ
ನೀನಾಗು ಬೆಳ್ಳಂಬೆಳಕು
ಕಗ್ಗತ್ತಲಲೆ ದಾರಿ ಹುಡುಕು ||

ತೊಟ್ಟು ಕಟ್ಟಿದೆಯೆನದಿರು
ಗುಟ್ಟು ಸುಗಂಧವೆ ತೇರು
ಪಸರಿಸೆ ನಿನ್ನಾ ಪರಿಮಳ
ಹರಡುವುದೆ ನಿನದೆ ಜಾಲ ||

ಎಲ್ಲಿರಲಿ ಎಂತಿರಲಿ ಬಂಧ
ಗರಿ ಬಿಚ್ಚಿ ಹಾರಿದರೆ ಸ್ವಚ್ಚಂದ
ಎಟುಕಿದ್ದೆಲ್ಲಾ ನಮ್ಮದೆ ಪಾಲು
ಹಾಕಿರೆ ಮಿತಿ ತೊಡರುಗಾಲು ||

– ನಾಗೇಶ ಮೈಸೂರು
(Nagesha Mn)

(Picture source: Internet / social media received via Tejaswini Kesari – thanks a lot madam 👌👍🙏😊)

01403. ಬಾರೆ ಮನಕೆ..


01403.ಬಾರೆ ಮನಕೆ..
_________________________


ಮನದೊಳಗೊಂದು ಹೂವಾಗರಳು
ಅರಳು ಹುರಿದ ಮಾತಾಗಿ ಸಾಲು
ಮುಗುಳುನಗೆ ಮುತ್ತಾಗಿ ಪ್ರಕಟಣೆ
ಹುಚ್ಚು ಮನ ನಿನ್ನ ಸುತ್ತೆ ಪರ್ಯಟನೆ ||

ನೀ ಹಾಕಿದ ಮುತ್ತಿಗೆ ದಂಡಿಲ್ಲದ ಧಾಳಿ
ಅಸ್ತ್ರ ಶಸ್ತ್ರವಿಲ್ಲದೆ ನಿರಾಯುಧ ಪಾಳಿ
ಕದನಕು ಮೊದಲೆ ಗೆಲ್ಲುವ ನಿನ್ನಾ ಪರಿ
ವದನದಲೆ ಕೊಲ್ಲುವ ಆಯುಧಾ ಸವಾರಿ ||

ಚಂದದಾ ಕುಸುರಿ, ಬ್ರಹ್ಮನವನೆ ಸಂತೃಪ್ತ
ಕೆತ್ತೆ ಅಂದದಾ ಕುವರಿ, ಪ್ರತಿಶತ ಮನಸಿತ್ತ
ಸಾಕಾರ ರೂಪ, ನಿನ್ನಾಕಾರ ಮನದೆ ನೆಲೆಸಿ
ಕಾಡಿರೆ ನಿರಂತರ, ದೂರ್ಯಾರಿಗೆ ಸಲ್ಲಿಸಲಿ ? ||

ಸಾಕಿನ್ನು ಕಾಡದೆ ಬಳಿ ಸಾರು, ಸಾಕಾಗಿಹೋಯ್ತೆ
ಬರಿ ಕಾದುಕಾದೂ ಬದುಕು, ಬೆಂಡಾಗಿ ಹೋಯ್ತೆ
ದಿವ್ಯಚೇತನವಾಗು ಬಾ, ತುಂಬು ಬಾಳಿಗೆ ಅಮೃತ
ಹರೆಯದಾ ಬಿಸಿ ಕಳೆದು, ಪಕ್ವವಾಗುತ ಪರಮಾಪ್ತ ||

ಬರೆದಿಟ್ಟಿರುವೆ ವಿಳಾಸ, ನರನಾಡಿ ಮನದ ರಸ್ತೆಗೆ
ಬಂದು ಬರೆದುಕೊಳ್ಳೆ ಪ್ರತಿ ರಸ್ತೆ, ನಿನ್ನದೆ ಹೆಸರಿಗೆ
ನಿನದಾದ ಮೇಲೆ ನಮದೆ ತಾನೆ, ಎಲ್ಲಿದೆ ಬೇಧಾ ?
ಸೋಜಿಗಪಡುವಂತೆ ಸೃಜಿಸುವ, ನಮ್ಮದೆ ಪ್ರಬೇಧ ! ||

– ನಾಗೇಶ ಮೈಸೂರು
(Nagesha Mn)
(Picture source: Internet / social media)

01402. ಅಲೆಮಾರಿ ಮನಸೆ..


01402. ಅಲೆಮಾರಿ ಮನಸೆ..
____________________________

ನಿನ್ನೆ ಶ್ರೀಯುತ ದೀಪಕ್ ಜಿ.ಕೆ. (Deepak GK) ಯವರು ಕಾಮೆಂಟೊಂದರಲ್ಲಿ ಸುಗಮ ಸಂಗೀತ ಲೋಕದಲ್ಲಿ ರಾಗ ಹಾಕಿ ಹಾಡಬಲ್ಲ ರಚನೆಗಳಿಗೆ ಪ್ರಯತ್ನಿಸಲು ಸಲಹೆ ನೀಡಿದ್ದರು. ಅದಕ್ಕೆಂದೆ ಬರೆದ ಅನುಭವವಿರದಿದ್ದರು ‘ಹೀಗಿದ್ದರೆ ಆದೀತೆ?’ ಎನ್ನುವ ಕುತೂಹಲಕ್ಕೆ ಪ್ರಯತ್ನಿಸಿದ ಗೀತೆಯಿದು. ಇದು ಸುಗಮ ಸಂಗೀತದ ಹಾಡುಗಾರಿಕೆಗೆ ಹೊಂದುವಂತಿದೆಯೆ? ಇರದಿದ್ದರೆ ಯಾವ ಅಂಶಕ್ಕೆ ಗಮನ ನೀಡಬೇಕು ಎಂದು ಸಲಹೆ ನೀಡಿದರೆ ನಾನು ಆಭಾರಿ. ಧನ್ಯವಾದಗಳು.

ಅಲೆಮಾರಿ ಮನಸೆ..
____________________________

ಸುಮ್ಮನೇಕೆ ಅಂಡಲೆವೆ ಮನಸೆ ?
ಅಂಗಳದಾಚೆ ಚೆಂಡಂತೆ ಪುಟಿದು
ಸ್ವಚ್ಚ ಮಾಡಿ ಮನೆಯೊಳಗಿನ ಕಸ
ಹಚ್ಚಬಾರದೆ ಮನದೊಳಗೆ ದೀಪಾ ? || ಸುಮ್ಮನೇಕೆ ||

ಹುಚ್ಚು ಕುದುರೆ ಹತ್ತಿ ನಾಗಾಲೋಟದೆ
ಗಳಿಗೆಗೊಂದು ಗಮ್ಯ ಬೆನ್ನಟ್ಟಿ ನಡೆಯೆ
ತಲುಪಲಿಲ್ಲ ಎಲ್ಲೂ ನಿಲ್ಲದ ಪಯಣದಲಿ
ಓಡಲೆಂತು? ಕಾಲಿಗೆ ತೊಡರೊ ಬಳ್ಳಿ ಬಾಳು || ಸುಮ್ಮನೇಕೆ ||

ಮನೆಯಂಗಳದಿ ಬಿರಿದ ಮಲ್ಲಿಗೆ ನೀನು
ಪಸರಿಸುತಿರುವೆ ಎಲ್ಲೆಲ್ಲೊ ಸರಿಯೇನು ?
ಓಡುವಾಟ ಬೇಡವೆನ್ನುವುದಿಲ್ಲ ಗುರುವೆ
ಮೂಗುದಾರ ಕುಣಿಕೆ ಹಗ್ಗದೆ ಕೈಲ್ಹಿಡಿಯೆ || ಸುಮ್ಮನೇಕೆ ||

ಇದ್ದೊ ಇಲ್ಲದೆಯೊ ಕಾಡುವ, ಕಾಣದ ಅಸ್ತಿತ್ವ
ನಿನ್ನ ಕಡಿವಾಣದ ಸೂತ್ರದೆ ಬಂಧಿಸೆಯ ಮಿತ್ರಾ?
ಹೇಳುತ್ತೆಲ್ಲ ಉಪದೇಶ ಹಿತವಚನ ಸರಿ-ತಪ್ಪು
ಜಾರಲು ಬಿಟ್ಟು ನಗುವೆ, ದಾರಿ ತಪ್ಪಿಸಿ ಕೈ ಬಿಟ್ಟು ! || ಸುಮ್ಮನೇಕೆ ||

ವಿಶ್ವಚಿತ್ತ, ನಿನ್ನನರಿವ ಪರಿಪಕ್ವತೆ ಎಲ್ಲಿದೆ ನನಗೆ ?
ಮನಸರಿತರೆ ಬ್ರಹ್ಮಾಂಡ ಅರಿತಂತೆ ಎಂದೂ ಬಲ್ಲೆ
ಅರಿವಿದ್ದೇನು ಕಣ್ಣಿಗೆ ಕಟ್ಟಿದ ವಸ್ತ್ರ ಜಾರದು, ಅಜ್ಞಾನ
ಬಿಟ್ಟಲೆಮಾರಿ ಅಲೆದಾಟ, ಬಾ ನೆಲೆಸೆನ್ನೊಳಗೆ ಮನಸೆ || ಸುಮ್ಮನೇಕೆ ||

– ನಾಗೇಶ ಮೈಸೂರು
೨೯.೧೦.೨೦೧೭
(Nagesha Mn)

01401. ಸಿಕ್ಕಾಗ ಸುಲಿದ್ಹಾಕ್ಕೊ ಬುಟ್ಟಿಗೆ !


01401. ಸಿಕ್ಕಾಗ ಸುಲಿದ್ಹಾಕ್ಕೊ ಬುಟ್ಟಿಗೆ !
_____________________________________


ಸುಲಭದೆ ಸಿಕ್ಕದ ಸರಕೊ
ತೋಚಿದಾಗ ಮೊದಲು ಬರ್ಕೊ!
ತೋಚಿದ್ದೆಲ್ಲಾ ಪದವಲ್ಲಾ
ಕಪ್ಪೆಚಿಪ್ಪೆಲ್ಲಾ ಮುತ್ತಲ್ಲಾ !!

ಬೆವರೊ ಬಿಸಿಲಲಿ ಮೋಡ
ತಟ್ಟನೆ ನೆರೆದಂಗೆ ಗಾಢ
ಸುರಿಸೊ ಮಳೆಗೆ ಮೂರೆ ಗಳಿಗೆ
ಹನಿ ಕಟ್ಟಿಬಿಡು ಹಾರ ನಿಲ್ಲೊದ್ರೊಳಗೆ ! ||

ಕವುಚಿಕೊಂಡ ಆಷಾಢ ಶ್ರಾವಣ
ಮುಂಗಾರಿನಲದೆ ಕುಂಭದ್ರೋಣ
ಧುತ್ತನೆ ಬಂತೊ ಕೊಡೆಯಿಲ್ಲದಾಗ
ಇದ್ದಾಗ ಬಿರುಗಾಳಿ ಹಿಡಿ ಸಿಕ್ಕಷ್ಟು ಬೇಗ ||

ಯಾಕೊ ಮುನಿಸು ಇನ್ನೆಲ್ಲೊ ಮನಸು
ಯಾಕೊ ಭಾವ ಬೇಡವೆನ್ನೊ ಕಲಸು
ಗೊಂದಲದಲೆ ಅರೆ! ಹಾಸಿ ಮಂದಲಿಗೆ
ಆರಿಸಿಕೊ ಮೊದಲು ಎಲ್ಲಾ ಮಲಗಬಿಡದೆ ||

ಕಳುವಾದರೊಮ್ಮೆ ಕಳುವಾದ ಹಾಗೆ
ಕಳಚಿದೊಲುಮೆಗೆ ಬಿದ್ದ ತೇಪೆ ಸೋಗೆ
ಬಿದ್ದಾಡಿ ಒದ್ದಾಡಿ ಚೆಲ್ಲಾಡಿದಾಗ ಅನಾಥ
ಹೆಕ್ಕಿ ಎತ್ತಿ ಮಗುವಂತೆ ಕಾಪಿಡೆ ಅದ್ಭುತ ! ||


– ನಾಗೇಶ ಮೈಸೂರು
(Nagesha Mn)
(Picture source : Internet / social media)

01400. ನಾವು ನಾವಾಗಿ..


01400. ನಾವು ನಾವಾಗಿ..
______________________


ತುಸು ಮೇಲೆತ್ತಿ ಉಡುಗೆ
ನಡಿಯೆ ಬರಿಗಾಲ ನಡಿಗೆ
ಕುಳುಕುಳು ಜುಳುಜುಳು
ಪಾದ ಸೋಕೆ ಜಲ ಕಂಗಾಲು! ||

ತಣ್ಣಗೇನೊ ನೇವರಿಸಿ ಹರಿದಾಟ
ನೀರೆ ಜತೆಗಾಡುವಾ ನೀರಿನಾಟ
ಬಿದ್ದೀಯಾ! ಹೀಗೆ ಹಿಡಿದುಕೊ ನನ್ನ
ಜಾರಿಯ, ನಿನ್ನ ಬಟ್ಟೆ ಜೋಪಾನ! ||

ಬಡಿದಾವೆ ಅಲೆ ಅಲೆಯಾಗಿ ತೆರೆ
ತೆರೆದೆದೆಯೊಳಗಣ ಭಾವ ಹೆದ್ದೊರೆ
ಪುಳಕ ಜಳಕ ಉದ್ವೇಗ ಸನ್ನಿಹಿತ
ಸ್ವೇಚ್ಛೆಯಾ ಸುಖ ಅಳುಕ ನಂಗುತ ||

ಸಖಿಯೊಬ್ಬಳೆ ಜತೆ, ಇನ್ನೆಲ್ಲಿ ಕೊರಗು ?
ಹಾರಾಡುವ ಹಕ್ಕಿ, ಮನಸಿನ ಸೊಬಗು
ಬಿಚ್ಚಿ ಬಿಟ್ಟೆವಲ್ಲ, ಮನದ್ಹಕ್ಕಿಯಾ ಜತೆಗೆ
ಸುತ್ತ ಹಾರಾಡಿ ತಣಿಸಿ ದಣಿದರೂ ನಗೆ! ||

ಯಾರ ಹಂಗಿಲ್ಲ ಬಿಡೆ, ನಮಗೆ ನಾವೆ
ನಾವಾಗುತ ನಮದೆ, ಜಗದೆ ಸಮವೆ
ಬಿಡು ಲೆಕ್ಕಿಸದೆ ನಡೆವ ಅಲೆಗಳೆರುತ
ಕಡೆಗಣಿಸಿ ಟೀಕೆಗಳ ಸರಿಯೆನಿಸಿದತ್ತ ||

– ನಾಗೇಶ ಮೈಸೂರು
(Nagesha Mn)

(Picture / painting from Internet / social media received via Tejaswini Kesari – thanks a lot madam 😍👌👍🙏😊)

01399. ಮನಸೆಂಬಾ…


01399. ಮನಸೆಂಬಾ…
____________________________


ಯಾರಿಗೊ ಹುಡುಕುತ
ಏನನೊ ತಡವಿ ತಡಕುತ
ತನ್ನನೆ ಮರೆತ ಜಗ
ಈ ಮನಸೇಕೊ ಚಪಲ..||

ಒಮ್ಮೆ ವಿಹ್ವಲ ತಲ್ಲಣ
ಮತ್ತೆಲ್ಲೊ ಹೋದ ಚಣ
ಬರುತ ಹೋಗುತ ಸ್ವೇಚ್ಛೆ
ಮೀರಿ ಗಾಳಿಯಾಣತಿಯ…||

ಯಾವುದಿ ವೇಗಾವೇಗ?
ತಟ್ಟನೆ ಪಯಣ ಗಮ್ಯಕೆ
ಶೂನ್ಯ ಕಾಲ ಕಾಲಿಲ್ಲದೆ
ಇಲ್ಲಿ ಕರಗಿ ಎಲ್ಲೊ ಅರಳಿ ||

ಸಮಯದ ಲೆಕ್ಕ ಆಯಾಮ
ಇಲ್ಲೇಕೊ ಸ್ತಬ್ಧ ಗಡಿಯಾರ
ಚಲಿಸಿದಂತೆ ಕಾಲ ನಡಿಗೆ
ಬೀಗ ಹಾಕಿ ನಡುವ ವಿಸ್ತಾರಕೆ ||

ಗೊತ್ತು ಗುರಿ ಗಮ್ಯ ಅಸ್ಪಷ್ಟ
ರಮ್ಯ ಅದಮ್ಯ ಚಕಿತ ನೋಟ
ಭೌತಿಕದೊಳಗಿಟ್ಟಾ ಅಲೌಕಿಕ
ಅಳೆಯಬಲ್ಲವರಿಲ್ಲ ಅತಿಶಯ ||

– ನಾಗೇಶ ಮೈಸೂರು
(Nagesha Mn)
(Picture source internet / social media received via @ Madhu Smitha – thanks ! 🙏👍👌😊)

01398. ಕಾಣದದ್ಭುತವೆ ಮಹಿಳೆ..!


01398. ಕಾಣದದ್ಭುತವೆ ಮಹಿಳೆ..!
______________________________________

ತನ್ನಷ್ಟಕ್ಕೆ ತಾನೆ, ಮೈಮರೆತು ನಕ್ಕಳೇಕೊ ಮುಗುದೆ
ಬಿಂಕದೆ ಕೊಂಕಿಸಿ ಕತ್ತು, ಕೊರಳ ಲಾಲಿತ್ಯದೆ
ಕಣ್ಣ ರೆಪ್ಪೆ ಮುಚ್ಚಿ ಸುಖದೆ, ಜಾರುತಲಿ ಕನಸಿಗೆ
ದಾಳಿಂಬೆ ದಂತ ಬಿಚ್ಚಿ, ನಗುತ ಸೊಗದನುಭೂತಿಗೆ ! ||

ಹಂಸಗಮನೆ ಸೊಗಡು, ಮೊಗವಾಗಿ ಚೆಂದಾವರೆ
ತಾನಾಗುತಲಿ ನೇಸರ, ಪಸರಿಸುತಿದೆ ತನ್ನದೆ ಧಾರೆ
ಕೆಂದಾವರೆ ತಡಬಡಿಸಿ, ಅರಳಿತಲ್ಲೆ ತಣ್ಣನೆ ಕೊಳದೆ
ಬೆಚ್ಚಗಾಗಿಸಿದವಳು ಲಲನೆ, ರವಿಯಲ್ಲವೆಂದರಿಯದೆ ! ||

ಯಾವುದೊ ಕನಸ ಲೋಕ, ಯಾವನೊ ಯುವರಾಜ
ಕುದುರೆಯನೇರಿ ಬಂದು, ಕೊಂಡೊಯ್ದಂತೆ ಸಹಜ
ವಿಹಾರದೆ ಗಗನ ಯಾತ್ರೆ, ಮುಗಿಲ ಮೇಘದ ಜಾತ್ರೆ
ಮೇಲೇರುತ ಸೊಗದೆ, ಸಖನೊಡನೆ ಮುಟ್ಟಲು ತಾರೆ ||

ಮುಗಿದರೇನು ಕನಸ ಯಾನ, ಮುಗಿಯದಲ್ಲ ಜೀವನ
ಬದುಕಿನ ವಾಸ್ತವ ಘೋರವ, ಗೆಲ್ಲಬೇಕಾಗದೆ ನಿತ್ರಾಣ
ಗೆಲಿಸುವ ಛಲ ತುಂಬೆ ಚದುರೆ, ಚೆಲುವಿನ ಅನುಭೂತಿ
ಮೂಲಧನವಾಗಿಸಿ ಮುಗ್ದೆ, ಸ್ಪೂರ್ತಿಯಾಗಿ ಮನಃಪೂರ್ತಿ ||

ತನ್ನದೇ ತಲ್ಲೀನತೆ, ಮೈಮರೆತ ಮೊಗ ನಗೆಯ ಹಿಂದೆ
ಯಾರೂ ಕಾಣದ ಅಗಾಧ, ಹೊಣೆಯ ನಿಭಾಯಿಸೊ ಶ್ರದ್ಧೆ
ಚೆಲ್ಲಾಟ ಬಲ್ಲ ಚಂಚಲೆ, ಹೆತ್ತ ಗಾಂಭಿರ್ಯಕು ಹೆಸರವಳೆ
ಮೋಸಹೋಗದಿರು ಮುಖದೆ, ಕಾಣದದ್ಭುತವೇ ಮಹಿಳೆ ! ||

– ನಾಗೇಶ ಮೈಸೂರು
(Nagesha Mn)
(picture source: Internet / social media received via @ Madhu Smitha – thank you 😍🙏👍😊)

01397. ಅವಳೊಂದು ಕವಿಶೈಲ…


01397. ಅವಳೊಂದು ಕವಿಶೈಲ…
_____________________________


ಅವಳೊಂದು ಕವಿಶೈಲ
ಕವಿತೆಗಳಿವೆ ಅವಳಾ ತುಂಬಾ
ನಖಾಶಿಖಾಂತ ಸ್ಪುರಿಸಿ ಸ್ಪೂರ್ತಿ
ಚೆಲ್ಲುವಳು ಕಣ್ಣೋಟದ ಬೆಳಕಲಿ ||

ನಡಿಗೆಯಲಿ ಹೆಜ್ಜೆಯಲಿ
ಲಾಲಿತ್ಯ ಅವಳಡಿಯಿಟ್ಟೆಡೆ
ಜಡ ಸಾಂಗತ್ಯ ಸಾಹಿತ್ಯ
ಚಲಿಸುತಿರಲವಳೆ ಮಿಂಚ ಬಳ್ಳಿ ||

ಮೌನದೆ ಕೂತಾಗ ಮಾತಾಗೊ
ಮಾತಲಿ ಮೌನದ ಸೆರಗು
ಅವಳೋ ಅಲ್ಲವೊ ಗೊಂದಲದೆ
ಕವಿತೆಯಾಗುವಳವಳು ಗದ್ದಲದೆ ||

ಹಣೆ ತುಟಿ ಕೆನ್ನೆ ಕಿವಿ ನಾಸಿಕ
ಕೊರಳು ಕಲಶ ನಾಭಿ ಜಘನ
ತೊಡೆ ತೋಳು ಕವಿ ಕಾಲಾಳು
ಯಾವುದಲ್ಲ ಕವಿತೆ ಅವಳೊಳಗೆ ? ||

ಮಾಗುತೆಲ್ಲ ಮಾಸುವ ಕಾಯ
ಮನಸು ಮಾಗಿದರೆ ದಿಗ್ವಿಜಯ
ಮಾನಸ ಸರೋವರ ನಿಜ ಶೈಲ
ಭೌತಿಕ ಬೆನ್ನಟ್ಟುವ ಕಾಲು ಹಾದಿ ! ||

– ನಾಗೇಶ ಮೈಸೂರು
(Nagesha Mn)
(Picture source : Internet / social media sent by Madhu Smitha – thank you 👍😍🙏😊 )

01396. ಪ್ರಾಯದ ಮಾಯೆ..


01396. ಪ್ರಾಯದ ಮಾಯೆ..
____________________________


ತುಂಬಿದ ಕೊಡ
ತುಂಬಿ ತುಳುಕಿದ ಯೌವನ
ತನ್ನೊಳಗೆ ತಾನೆ ಮುಳುಗಿ ಬಾಲೆ
ತನ್ನಂದಕೆ ತಾನೆ ಬೆರಗಾದ ಪರವಶತೆ ||

ಮುಗ್ದತೆ ಚೆಲ್ಲಾಡಿ
ಹರಿದಿದೆ ನಖಶಿಖಾಂತ
ತೊಳೆಯಲದ ತಾರುಣ್ಯದ ಮಳೆ
ತುಂತುರು ಹನಿಯಾಗಿ ಮುಸಲಧಾರೆ ||

ಒದ್ದೆ ಮೈಗಂಟಿದ ವಸ್ತ್ರ
ನೀರೆಯ ಹೀರಲಾಗದೆ ಸೋತಿದೆ
ತುಳುಕಿದ್ದೆಲ್ಲಾ ಅರಳಿದಂತೆ ಮೊಗ್ಗು
ಹಿಗ್ಗುತ ಯೌವನ ನಿವಾಳಿಸಿದೆ ಸಿಗ್ಗನು ||

ಕಂಡವರಿಲ್ಲ ಒಳಗು
ಬೆರಗಿಸಿ ಹೊರಗ ಸೊಗಡು
ಬೆಚ್ಚಿ ಹಾತೊರೆದ ದನಿ ಸಾಲಾಗಿ
ಪ್ರತಿ ಎದೆಯಲು ಕವನದ ಗೊಂಚಲು ! ||

ನೋಡುವವರ ನೋಟ
ಗ್ರಹಿಸುತ ಅವರವರ ಭಾವ
ಕವಿಗಿದು ಬರೆದು ಮುಗಿಯದ ಕಥೆ
ಅವಳ ಯೌವನವೆ ಅವಳನುಟ್ಟು ತೊಟ್ಟಂತೆ ||

– ನಾಗೇಶ ಮೈಸೂರು
(Nagesha Mn)

(ಸಂಗೀತ ಕಲ್ಮನೆಯವರ ಫೆಸ್ಬುಕ್ ಪೋಸ್ಟೊಂದರ ಚಿತ್ರ ನೋಡಿ ಬರೆದ ಸಾಲುಗಳಿವು. ಅವರೂ ಅವರ ಫ್ರೆಂಡ್ ಲಿಸ್ಟಿನಿಂದ ಆಯ್ದುಕೊಂಡ ಚಿತ್ರ – ಧನ್ಯವಾದಗಳು Geeta G. Hegde 🙏👍😊)

01395. ನಾಟ್ಯ ಲೋಕ


01395. ನಾಟ್ಯ ಲೋಕ
_______________________


ತಲ್ಲೀನ, ತನ್ಮಯ, ಪರವಶ
ಮನಗಳಾಗಿ ಅದ್ಭುತ
ಚಿತ್ತವೆಲ್ಲೊ ಕಿನ್ನರ ಲೋಕ
ಯಕ್ಷಿಣಿ ಗಂಧರ್ವ ಸಾಕ್ಷಾತ್ಕಾರ ! ||

ಕಳೆದುಹೋದಂತೆಲ್ಲೊ ಯಾನ
ಏಕೀಭವಿತ ತನುಮನ ತಿಲ್ಲಾನ
ರಾಧೆ, ಭಾಮೆ, ರುಕ್ಮಿಣಿಯೊ ?
ಕೊಳಲನ್ಹಿಡಿದ ಪಾತ್ರ ಮಾಧವನೊ ? ||

ನೊಸಲ ನೀಲಿ ವಿರಳ ಸರಳ
ಹರನ ಗರಳವಲ್ಲ ಪ್ರೀತಿಯಾಳ
ಚೆಲುವೆ ಲಲಾಟ ಹೊಳಪೊಳಪು
ಮುನಿಸಲ್ಲ ತೆರೆದ ಮನಸ ಪ್ರಕಟ ||

ನಾಟ್ಯ ಲಯ ಪ್ರಶಾಂತ ನಿಶ್ಯಬ್ಧ
ಸ್ತಬ್ಧ ತಪ ಮುದ್ರೆ ಸುಷುಪ್ತಿ ನಿದಿರೆ
ಅಂತರ್ಯಾನ ಗಾನ ಗಾಯನ
ತಾದಾತ್ಮ್ಯಕತೆ ಅದ್ವೈತ ಅದ್ಭುತ ||

ಪರಕಾಯ ಪ್ರವೇಶ ದೇವಾಯಾಮ
ಅರ್ಧನಾರೀಶ್ವರ-ನಾರೀಶ್ವರಿ ಸೂತ್ರ
ಅರ್ಪಣ ಭಾವ ಅಪರ್ಣ ಸಂತೃಪ್ತಿ
ನಟನವಾಡುತ ಲೌಕಿಕದಿಂ ವಿಮುಕ್ತಿ ||

– ನಾಗೇಶ ಮೈಸೂರು
೨೦.೧೦.೨೦೧೭
(Photo from Internet / social media sent by Mohan Kumar D M – thank you mohan sir! 😍🙏👍😊)

01394. ಪ್ರೀತಿ ಕುಲುಮೆಯಲಿ..


01394. ಪ್ರೀತಿ ಕುಲುಮೆಯಲಿ..
____________________________


ಬದುಕಿನಾ ಕುಲುಮೆ
ಹೊತ್ತಿಸಿದ ಒಲುಮೆ
ಇನ್ನೂ ಬತ್ತದ ಚಿಲುಮೆ
ಉರುವಲು ಪ್ರೀತಿ ಕಾವಲು ||

ಬಾಳಿನಲದೆ ಹೊಡೆತ
ನಮ್ಮನ್ನೂ ತಟ್ಟುತ್ತ
ಕಾಡಲ್ಹೊರಟ ಹೊತ್ತು
ನಮ್ಮ ಪ್ರೀತಿಯದೆ ಕಾಯ್ದಿತ್ತು ||

ಅಡೆತಡೆ ಕಷ್ಟ ಕಾರ್ಪಣ್ಯ
ಕಾದ ಕಬ್ಬಿಣ ತಾರುಣ್ಯ
ಒಂದರ ಮೇಲೊಂದು ಹೊಡೆತ
ನಮ್ಮ ಮೊನೆಚಾಗಿಸಿ ಸಲಹಿತ್ತ ||

ಇಂದು ನೆಮ್ಮದಿ ಬದುಕು
ನಮ್ಮ ಲಹರಿಯ ಪಲುಕು
ನೆಲೆಗೆ ಊರು ತಲೆಗೆ ಸೂರು
ಹೇಳು ನಮ್ಮ ಹಿಡಿವವರಾರು ? ||

ಸುಖದ ಅರ್ಥ ಹುಡುಕದೆ
ಸುಖಿಸುವ ಬಾಳುವೆ ನಮದೆ
ಯಾರಿಗುಂಟು ಯಾರಿಗಿಲ್ಲ ?
ನಮ್ಮ ಭಾಗ್ಯಕಂತೂ ಎಣೆಯಿಲ್ಲಾ! ||

– ನಾಗೇಶ ಮೈಸೂರು
(Nagesha Mn)
(Picture from Internet / social media , sent by Mohan Kumar D M 😍🙏😊 thanks a lot again Mohan sir🙏👍)

01393. ಚದುರಿದ ಚಿತ್ರಗಳು….


01393. ಚದುರಿದ ಚಿತ್ರಗಳು….
__________________________


ಹಬ್ಬದ ದಿನದಡಿಗೆ
ಯಾಕೊ ತುಂಬದ ಗಡಿಗೆ
ಅನ್ನವಿಲ್ಲದ ಪಾತ್ರೆ
ಇರುಸುಮುರುಸು ಮನಸು ||

ಹಚ್ಚುವರೆಷ್ಟೋ ದೀವಟಿಕೆ
ಯಾರಿಟ್ಟರೊ ಆರಿದ ಲೆಕ್ಕ ?
ಮತ್ತೆ ಹಚ್ಚುವರಿದ್ದರೆ ಜಗ
ಜಗಮಗಿಸುವ ಸೊಬಗು ||

ಸಾಲು ಸಾಲು ಹಣತೆ
ನಡುವಲಲ್ಲಿಲ್ಲೊಂದು ಮೌನ
ಬತ್ತಿದೆಣ್ಣೆ ಬಸವಳಿದ ಬತ್ತಿ
ಶೃಂಗಾರದ ದೃಷ್ಟಿಬೊಟ್ಟು ||

ಏನೆಲ್ಲ ಎಡರು ತೊಡರು !
ಗಾಳಿಗೆ ಸಿಕ್ಕಾಡುವ ಸೊಡರು
ಹೊಯ್ದಾಡಿ ಗೆದ್ದರು ಬದುಕು
ಮುಗಿಸಲೇಬೇಕು ಆಟ ನಶ್ವರ ||

ನಿತ್ಯ ತಮ ಸಂಚಯ
ತೊಳೆಯೆ ದೀವಿಗೆ ಹಚ್ಚುತ
ಸಂಭ್ರಮಿಸಿ ಮನಗಳ ಹಬ್ಬ
ಸಡಗರ ಮುಗಿದರೆ ಮತ್ತದೆ ||

– ನಾಗೇಶ ಮೈಸೂರು
(Nagesha Mn)
(Picture source : Internet / social media)

01392. ದೀಪಾರಾಧನೆ..


01392. ದೀಪಾರಾಧನೆ..
______________________


ದೀಪಾರಾಧನೆ ಮಾಡುವ ಬಾರೆ
ಹಚ್ಚುತೊಂದು ಪ್ರಣತಿ ಮನದೆ
ಹಣತೆ ಬೆಳಗಲಲ್ಲಿ ಅಂಧಕಾರ
ಕರಗಿ ಮನೆ ತುಂಬುವ ಬೆಳಕು ||

ಯುಗಯುಗ ಜಗದಾ ಇತಿಹಾಸ
ಬರೆದಿಟ್ಟುಕೊಂಡ ಕಥೆ ಪುರಾಣ
ನಿಜ ಜ್ಞಾನದೆ ಅಜ್ಞಾನ ತೊಡೆದ
ದೀವಿಗೆಯಲಿ ಬೆಳಕ ಹಂಚೋಣ ||

ಸುತ್ತಲ ತಮ ಕಾಡದೆ ಬಿಡದಲ್ಲ
ಪ್ರಾಂಜಲಮನ ಸೋಕೆ ಮಲಿನ
ಕಪ್ಪಿಡಿದು ಕರಕಲಾಗುವ ಮುನ್ನ
ದೀವಟಿಗೆ ಹಚ್ಚಿ ಬೆಳಗುವ ಬಾರೆ ||

ನನ್ನೊಳಗಡೆ ನೀನಾಗು ಜ್ಯೋತಿ
ನಿನ್ನೊಳಗಡೆ ನಾನಿರುವೆ ಬೆಳಕು
ಕಳೆವ ಅಂಧಕಾರ ಸಮ್ಮಿಲನದೆ
ಪಸರಿಸುತದನೆ ಪ್ರಭೆಯಾಗಿಸಿ ||

ನಮ್ಮಾಶಯಗಳಿವೆ ಮಹಾಪೂರ
ಅಧಿಗಮಿಸೊ ಸದಾಶಯ ತೈಲ
ಸಮಷ್ಟಿ ಚಿತ್ತ ಸಂತೈಸುತ ಸ್ಚಾರ್ಥ
ಜಗದಾ ಬತ್ತಿಯ ಬೆಳಗಿರಲಿ ಸದಾ ||

– ನಾಗೇಶ ಮೈಸೂರು
(Nagesha Mn)
(picture from : Mohan Kumar D M – thank you Mohan sir 🙏🙏🙏😍)

ಎಲ್ಲರಿಗು ದೀಪಾವಳಿ ಶುಭಾಶಯಗಳು!

01391. ನಿದ್ದೆ ಮಾಡಲಿ ಬಿಡವನ…


01391. ನಿದ್ದೆ ಮಾಡಲಿ ಬಿಡವನ…
_________________________________


ನಿದ್ದೆ ಮಾಡಲವನು ಸದ್ದು ಮಾಡದೆ ಬಾ
ಮುದ್ದು ಮಾಡಲ್ಹೊರಟು ಎಬ್ಬಿಸೀಯಾ ಜೋಕೆ!
ಮುದ್ದು ಕಂಗಳ ಮುಖದಾ ಮುಗುಳುನಗೆ
ಚದುರಿಸೀಯಾ ಕಂದನ ಕನಸಿನ ಮೆರವಣಿಗೆ ||

ನೀನಿದ್ದರೇನು ಅವನಮ್ಮ ಗರ್ಭದೆ ಹೊತ್ತು
ಹೆತ್ತವಳು ನೆತ್ತರು ಹಂಚಿ ಕರುಳಿಗೆ ಜೋತು
ಭುವಿಗೆ ಬಿದ್ದವನವನು ಎದ್ದು ನಡೆಯಬೇಕು
ಮಲಗಿರಲಲ್ಲಿಯವರೆಗೆ ನಿನ್ನಾಸೆಗೆ ತಡೆ ಹಾಕು ||

ಅಪ್ಪ ನನಗಿಲ್ಲವೆನಬೇಡ ಭಾವನೆ ಮೃದುಲ
ತೋರದೆ ನಡೆಯಬೇಕಂತೆ ಒಟ್ಟಾರೆ ಸಮತೋಲ
ಮುದ್ದಾಟದೆ ಜಿಪುಣ ಮಾತಾಟದೆ ನಿಪುಣ
ಗದರಿಸುತ ಸಂತುಲನ ಅವನಾಗಬೇಡವೆ ಜಾಣ? ||

ನಾ ತೋರಲಾರೆ ಪ್ರಕಟ ನಿನ್ನಂತೆ ಪ್ರೀತಿ
ಮಲಗಿದೀ ಹೊತ್ತಲೂ ಮುಟ್ಟೆ ಮನಸಾಗದು ಭೀತಿ
ಎಚ್ಚರವಾದರೆ ಬೆಚ್ಚುತ ಅತ್ತಾನು ಬೆದಬೆದರಿ
ಬೆಚ್ಚಗೆ ಮಲಗಿರಲಿ ಹೇಗು ಎದ್ದಾಗ ನಾನವನ ಕುದುರಿ ||

ಅಂದುಕೊಳ್ಳುವರೆಲ್ಲ ಅಪ್ಪನೆದೆ ಕಲ್ಲು
ಅಮ್ಮನ ಪ್ರೀತಿ ಸುಧೆಯಲಿ ಕೆತ್ತುವ ಉಳಿಗಲ್ಲು
ಕಾಣಲಿ ಬಿಡಲಿ ಗಣಿಸದೆ ಶಿಲ್ಪಿ ತನ್ನ ಪಾಡಿಗೆ
ತನ್ನರಿವಂತೆ ಕೆತ್ತುವ ಜರುಗದಂತೆ ಆ ಕಿರುನಗೆ ||


– ನಾಗೇಶ ಮೈಸೂರು
(Nagesha Mn)
(Picture source: Internet / social media)

01390. ಕಾದು ಮಾಧವನ ಹಾದಿ..


01390. ಕಾದು ಮಾಧವನ ಹಾದಿ..
___________________________


ನೋಡಿರೆ ಇದೇ ನವಿಲ ಗರಿ
ಸಿಕ್ಕಿಸಿಕೊಂಡಿಹನು ಜುಟ್ಟಲಿ
ಕೈಲೊಂದು ಕೊಳಲ್ಹಿಡಿದವನ
ಕಂಡಿರಾ ನೀವು ಕಂಡಿರಾ ? ||

ಗೋಪಿಯರೆಲ್ಲರ ಮಾಧವ
ಗೋಳಾಡಿಸಿ ಕಾಡುವವನು
ಬೆಣ್ಣೆಯಾಗಿಸಿ ಮನ ಕದ್ದವನ
ಕಂಡಿರಾ ನೀವು ಕಂಡಿರಾ ? ||

ಗೋವುಗಳ ನಡುವೆ ಕೂತು
ಕಾಮಧೇನು ತಾನಾದವನು
ನನ್ನೊಲವು ಹೃದಯ ಗೆದ್ದವನ
ಕಂಡಿರಾ ನೀವು ಕಂಡಿರಾ ? ||

ರಾಧೆಯರೆಷ್ಟೊ ಅವನ ಸುತ್ತ
ಹಂಬಲಿಸುತ ನೆರೆದವರ ಮಧ್ಯೆ
ನನ್ನ ನೆನೆದು ಮೌನವಾದವನ
ಕಂಡಿರಾ ನೀವು ಕಂಡಿರಾ ? ||

ನಾನಿಲ್ಲಿ ಏಕಾಂಗಿ ಒಬ್ಬಂಟಿ
ಗುಂಪಿನಲಿದ್ದೂ ಅವ ಏಕಾಕಿ
ಕರ್ಮನಿರತನ ಸೆಳೆ ತಹ ಬಗೆ
ಬಲ್ಲಿರಾ ನೀವು ಬಲ್ಲಿರಾ ? ||

– ನಾಗೇಶ ಮೈಸೂರು
(Nagesha Mn)
(Picture source : Internet / social media – sent by Mohan Kumar D M – 😍 thanks a lot sir!🙏🙏👍👌😊)

01389. ಮಂಕುತಿಮ್ಮನ ಕಗ್ಗ ೭೭ : ಬ್ರಹ್ಮಗೆ ಸೃಷ್ಟಿಯೇ ವೃತ್ತಿ, ಸೃಷ್ಟಿಯೇ ಪ್ರವೃತ್ತಿ


01389. ಮಂಕುತಿಮ್ಮನ ಕಗ್ಗ ೭೭ : ಬ್ರಹ್ಮಗೆ ಸೃಷ್ಟಿಯೇ ವೃತ್ತಿ, ಸೃಷ್ಟಿಯೇ ಪ್ರವೃತ್ತಿ

ಮಂಕುತಿಮ್ಮನ ಕಗ್ಗ ೭೭ ರ ಮೇಲಿನ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ :

https://kannada.readoo.in/2017/10/ಸೃಷ್ಟಿಯೆ-ವೃತ್ತಿ-ಬ್ರಹ್ಮಗ

01388. ತನ್ನನಾವರಣ….


01388. ತನ್ನನಾವರಣ….
__________________________


ಹೊತ್ತೆ ಬುತ್ತಿಯ ಭಾರ
ಜತೆಗ್ಹೊತ್ತೆ ಯೌವ್ವನ ಭಾರ
ನಡೆದೆ ನಲಿದು ಕುಣಿದು
ಕರುವಿನ ಜತೆ ಹಸು ನಾನಾಗಿ ! ||

ಒಳಗಣ ಮುಗ್ದತೆ ಕಳಚಿ
ತನುವರಳಿದೆ ತನ್ನೆ ಮೊಗಚಿ
ಮನದ ಮೊಗಸಾಲೆ ಜಳಕ
ಏನೋ ಪುಳಕ ಉತ್ಸಾಹ ಕೆಣಕಿ ! ||

ಕುಸುರಿ ಕುಪ್ಪಸ ಜರಿ ಜರತಾರಿ
ಎದೆಯೊಳಗುಬ್ಬಸ ಚಿತ್ತ ಚದುರಿ
ಚಾಕರಿ ನಡುವೆ ಎತ್ತಲೊ ಧ್ಯಾನ
ಬಚ್ಚಿಡಲಾಗದ ಏನೇನೊ ತಲ್ಲಣ ||

ಉಟ್ಟುದ ಮೀರಿಸಿ ಬೆಳೆವಾ ಪ್ರಾಯ
ವಯಸಿನಾಟವಿದೇನು ಮಾಯ ?
ಜಡೆ ನೀಳ ತನುವಪ್ಪಿದ ನಾಗರ
ಒಳಗೆಲ್ಲ ಮಿಡುಕಾಡಿ ಬಸಿರಾಟ ||

ಮಗುವಂತಿರೆ ಜತೆ ಕರು ಮುಗ್ದ
ಬೆಳೆಸೆ ನೇಗಿಲ ಯೋಗಿ ಪ್ರಬುದ್ಧ
ನಡುವಿನ ಸೇತುವೆಯಾಗಿ ಮನಸು
ವಾಸ್ತವದಡಿಯೆ ಕನಸ ನೇಯುತಿದೆ ||

ನವಿಲಂತೆ ಯೌವ್ವನ ಹೀಗೆ ಗರಿ ಕೆದರೆ
ಬಿತ್ತುವ ಮೊದಲುತ್ತರೆ ಗೆಲ್ಲುವ ಕುದುರೆ !
ಮಳೆ ಕಾದರೆ ತೆನೆ ಫಸಲಾಗುವ ಕಾಲ
ಬೆಳೆಯುತ ಕಾಯುವೆ ಪಕ್ವತೆ, ಪ್ರಬುದ್ಧತೆಗೆ ! |

– ನಾಗೇಶ ಮೈಸೂರು
(Nagesha Mn)

(picture source: Internet / social media -ಚಿತ್ರ ಕಳಿಸಿ ಪದ್ಯ ಬರೆಸಿದ್ದು Mohan Kumar D M – ಧನ್ಯವಾದಗಳು ಸಾರ್ 😍🙏👌😊👍)

01387. ಮಳೆ ಹನಿ ಸಾಲದ ಲೆಕ್ಕ


01387. ಮಳೆ ಹನಿ ಸಾಲದ ಲೆಕ್ಕ
______________________________


ಲೆಕ್ಕ ಹಾಕುತ ಕುಳಿತೆ
ಮಳೆ ಹನಿ ಮೊತ್ತ
ಗಗನವಿತ್ತ ಸಾಲ ಭುವಿಗೆ..
ಯುಗಯುಗಾಂತರ ಯಾರಿಟ್ಟಿಹರೊ ?
ಅಸಲು ಬಡ್ಡಿ ಚಕ್ರಬಡ್ಡಿಯೆ ಕರಾಳ.. ||

ತೀರಲಿಲ್ಲ ಅಸಲು ಸಹಜ
ಕಟ್ಟಲಿಲ್ಲ ಬಡ್ಡಿಗು ವನವಾಸ
ಬದುಕಬೇಕಲ್ಲ ಸಾಲ ನಿರಂತರ
ತುಂತುರಲ್ಲೆ ಬಾಕಿ ಏರುತ್ತಾ ದರ
ಈ ಲೇವಾದೇವಿ ಚುಕ್ತಾ ಮಾಡುವವರಾರು ? ||

ಎಲ್ಲಾ ಅವರವರ ಬದುಕಲಿ ವ್ಯಸ್ಥ
ಸ್ವಂತ ಸ್ವಸ್ಥಕೆ ಅಲ್ಲೆ ಮೊಗೆಯುತ್ತ
ಹನಿ ಸಾಲವೆಲ್ಲ ಸಿಕ್ಕೆಲ್ಲೆಡೆ ಚೆಲ್ಲಾಪಿಲ್ಲಿ
ತಿರುಗಿ ಕೊಡರಲ್ಲ ತುಂಬಿರೆ ಸರಿ ಪೆಟಾರಿ
ಏರಿ ಸಾಲದ ಮೊತ್ತ ಇಳೆ ಮೇಲೆ ಸವಾರಿ ||

ಕಾದ ಕೊಟ್ಟವ ಈಗಾದ ಕೆಟ್ಟವ
ಕೊಟ್ಟದ್ದನೆ ಸುರಿಸಿ ಮಾಡಿಹ ನಿರ್ಜೀವ
ಮೋಡದಾರ್ಭಟ ಮುಸುಕಿ ಧೂರ್ತ
ಅಸಲು ಬಡ್ಡಿ ಹನಿಯಲೆ ಮುಳುಗಿಸುತ
ಸೇಡಿಗಿಳಿದು ವಸೂಲಿ ಧ್ವಂಸ ಮಾಡುತ.. ||

– ನಾಗೇಶ ಮೈಸೂರು
(Nagesha Mn)
(picture source: from Readoo Kannada)

01386. ಮುತ್ತಿವೆ ಮುತ್ತಲಿ..


01386. ಮುತ್ತಿವೆ ಮುತ್ತಲಿ..
____________________________________


ಮುತ್ತಿಗೆ ಹಾಕಿವೆ ಮನಸುಗಳ ಲಗ್ಗೆ
ಮುತ್ತಿಡುವಾಟದಲೆ ಏನೀ ಸ್ಪರ್ಧೆ?
ತುತ್ತಿಟ್ಟವಳಿಗೊಂದು ಮುತ್ತಿನ ನಮನ
ತುತ್ತುಮುತ್ತಿನೊಡೆಯನತ್ತವಳ ಗಮನ ||

ಅವನಿಟ್ಟಾ ಮುತ್ತಲಿ ಹಕ್ಕು, ಕಕ್ಕುಲತೆ
ಏನೆಲ್ಲಾ ಕೊಟ್ಟವಳ ರಮಿಸುವ ಪ್ರೀತಿ
ಧನ್ಯತೆ ಕೃತಜ್ಞತೆ ವಂದನೆ ನಾನ ಭಾವ
ಭಟ್ಟಿ ಇಳಿಸಿ ಪರಿಶುದ್ಧ ಕಾಣದು ಕಾವ ||

ಅವಳಲದೇನೊ ತಲ್ಲೀನತೆ ತಾದಾತ್ಮ್ಯ
ಮುಚ್ಚಿದ ಕಣ್ಣಲಿ ಬಚ್ಚಿಹಳೇನು ಕಂದನ ಜೀವಾ?
ಮುತ್ತಿಕ್ಕಿಹಳೊ ತಿಂದಿಹಳೊ – ತಿನ್ನಬಾರದ ಹಣ್ಣ ?
ನಿರ್ಲಕ್ಷಿಸಿ ಬೆರಳಾ ಮೆದ್ದ ಕಂದನ ನಿರಾಳ ಧೈರ್ಯ ! ||

ಇಬ್ಬರ ನಡುವಿನ ಸೇತುವೆ ಗಟ್ಟಿಯಾಗಿಸುತ
ಭಾವ ವಿವೇಚನೆ ತಿರುಗಿಸಿ ಅಮ್ಮನ ಮಡಿಲತ್ತ
ಬಿಡು ಅಪ್ಪಾ ಅರಿತವ ಬೆನ್ನು ಹಾಕೆ ತಪ್ಪೆಣಿಸದವ
ಬೆನ್ನೆಲುಬಾದವಗೆ ಬೆನ್ನಾಗುವ ಕಾಲವನೆಣಿಸುತ್ತ ||

ಅವನೂದಿದ ಕಹಳೆ ಅವಳಿಂದಿಳಿದು ಕಂದಗೆ
ಸ್ವಗತದಲೂದುತ ಕಲಿವ ಪಾಳಿ ಮಗುವೆ
ಕಲಿತಾಡುತಲೆ ಸೇತುವೆ ಬಿಗಿಯಾಗಿಸು ಬಂಧ
ಆಕರ್ಷಣೆ ಮೀರಿದೆಡೆ ಗಟ್ಟಿಯಾಗಿಸೊ ಸಂಬಂಧ ||

– ನಾಗೇಶ ಮೈಸೂರು
(Nagesha Mn)
(picture via Suma Sreepada Rao – thanks a lot 😍🙏🙏😊 – luckily the picture has the artist name Mr. Abhishek – hence picture credit to the source artist !🙏🙏🙏👍👌👏😊)

01385. ಸುಖೀ ಗೀತ..


01385. ಸುಖೀ ಗೀತ..
_________________________


ಬಾ ಮಾತಾಡೋಣ
ಕೂತಾಡೋಣ
ಬಿಡಿ ಹೂವ ಪೋಣಿಸುವ ಹೊತ್ತು ;
ಹೊತ್ತೆ ಮಲಗಿತ್ತು.

ಬಾರೆ ಬಿಡಿಬಿಡಿ ಬೇಡ
ಇಡಿ ಮಾತಾಡುವ ಹಿಡಿ ತುಂಬಾ..
ಹೂ ಮುಡಿ ತುಂಬಲಿ ಬಿಡಲಿ
ಮಾತಾಗಲಿ ಮಡಿಲ ಪೂರ..

ಯಾರ ಮಾತು, ಏನು ವಿಷಯ
ಯಾರಿಗೆ ಬೇಕದೆಲ್ಲ ಪರಿವೆ ?
ಕುಂಟಾಬಿಲ್ಲೆ ಮೈನೆರೆದ ತವಕ
ಅಳ್ಳಿಗುಳ್ಳಿ ಚೌಕ ಭಾರದ ಕೊಡ..

ಗೊತ್ತೇನೆ ಮಲ್ಲಿ, ಮಳ್ಳಿಗಂತೆ ಮದುವೆ !?
ರಾಶಿ ರಾಶಿ ಹೂವ್ವ ಕಟ್ಟುವ ಒಸಗೆ
ಮಂಚವೆ ಬಯಲು ಸಿಂಗಾರವಂತೆ
ಮರಗಿಡಗಳಿರದೆ ಹೂವುದುರಿ ಪವಾಡ..

ಬಿಡೆ ಬೇರೆ ಮಾತಾಡೆ ಜಡೆಯ ತುಂಬ
ಮುಡಿಸಿಡೆ ಹೂವು ಆಗುವುದೇ ಸುದ್ಧಿ?
ಘಮಘಮಿಸೊ ಪರಿಮಳ ನಮ್ಮದೇನು ?
ನಾವೂ ಅದರಂತೆ ಆಗಲುಂಟೇನು ?

– ನಾಗೇಶ ಮೈಸೂರು
೧೩.೧೦.೨೦೧೭

(೩ಕೆ ನಮ್ಮ ಚಿತ್ರ ನಿಮ್ಮ ಕವನ ೫೧ಕ್ಕೆ ಬರೆದ ಕವನ)

01384. ಸೂಜಿ ದಾರದ ಕಥೆ..


01384. ಸೂಜಿ ದಾರದ ಕಥೆ..
_________________________


ನೀ ಸೂಜಿ ನಾ ದಾರ
ಯಾರೋ ನಮ್ಮ ಪೋಣಿಸಿದವರು ?
ನೋಡು ಬಾಳ ಹರಿದ ಬಟ್ಟೆ
ನಾವು ಹಚ್ಚಿದ ತೇಪೆ ಸುಂದರ ಚಿತ್ತಾರ ! ||

ನೀನೆಲ್ಲೊ ಬಿದ್ದಿದ್ದ ಸೂಜಿ
ಒಂಟಿ ಕಣ್ಣಲ್ಲೆ ಮಾಡಿದ್ದೆ ಮೋಡಿ
ನಾನೆಲ್ಲೊ ಬಿದ್ದಿದ್ದೆ ಅನಾಥ
ಕುರುಡು ದಾರ ಕಣ್ಣಾದೆ ಜೋಡಿ ||

ನಿಜ ನಾ ಖರ್ಚಾಗುವ ದಾರ
ಆಗೀಗೊಮ್ಮೆ ದೂರಾದರು ದೂರಿ
ಮುನಿಸಿ ಕಣ್ತಪ್ಪಿಸಿ ಹುಡುಗಾಟ
ಮತ್ತೆ ಮಡಿಲಲಿ ತೂರಿ ನಿರಾಳ ||

ನೋಡಿದೆಯಾ ವಿಚಿತ್ರ ಸತ್ಯ?
ನೀನದೆ ಜಡ ಸೂಜಿ ಸ್ಥಿರ ಪುರುಷ
ನಾ ಅಸ್ಥಿರ ಚಂಚಲ ಪ್ರಕೃತಿ
ನಿರಂತರ ಬದಲಾಗುವದೇ ಸೂತ್ರ ||

ಪ್ರಕೃತಿ ಪುರುಷದಾಟ ಎಲ್ಲೆಡೆ
ಸೂಜಿ ದಾರ ವಸ್ತ್ರ ಬಂಧಿಸುವಾಟ
ಸಹಬಾಳುವೆಯಿರೆ ಸಮರಸ
ದಾರವಿಲ್ಲದ ಸೂಜಿ ಅನಾಥ ಪ್ರೇತ ||


– ನಾಗೇಶ ಮೈಸೂರು
(Nagesha Mn)

(Picture 1: https://thenounproject.com/term/needle-and-thread/
Picture 2: Internet / social media)

01383. ಕುಡ್ಕರ ಹಾಡು, ಪಾಡು..


01383. ಕುಡ್ಕರ ಹಾಡು, ಪಾಡು..
____________________________


ಬಿಡೊ ಎಣ್ಣೆ ಹಾಕೊ ಹೊತ್ನಲ್ಲಿ ಮಂಜಾ
ಎಳ್ನೀರು ಕುಡಿಯೊ ಸುದ್ಧಿ ಆಡ್ ಬ್ಯಾಡ
ವಡೆ ಬಜ್ಜಿ ಬೊಂಡ, ಕಾಫಿ ಟೀ ಜತೆ ಮಸ್ತು
ತೊಗೊ ಕೋಳಿ ಕಾಲು, ಮತ್ತೇನ್ಲಾ ಸುದ್ಧಿ ಹೊಸ್ದು ? ||

ಯಾವನಿಗ್ಬೇಕೊ ಬಿಡೊ ಇನ್ಯಾರ್ದೊ ಸುದ್ಧಿ ?
ನಮ್ದೆ ನೂರೆಂಟಿದ್ರು ಇನ್ನು ಕಲ್ತಿಲ್ಲಾ ಬುದ್ಧಿ !
ಕೂತ್ಕಳಲೆ ತೊಗೊ ಭರ್ತಿ ಇನ್ನೊಂದ್ಪಾಕೀಟು
ಉಪ್ಪುಪ್ಪು ಉಪ್ಪಿನ್ಕಾಯಿ ನೆಕ್ಕೊಂಡೇ ಸಕತ್ತು ! ||

ಅವ್ಳಾಡ್ತಾಳೆ ಅವ್ತಾರ ಲೌಡಿ ಬಲ್ಜೋರು
ಕತ್ತಿನ್ಪಟ್ಟಿ ಇಡ್ಕೊಂಡಾಡಿಸ್ತಾಳೆ ಪೊಗರು
ಬಾರಣ್ಣ ಬೈದಾಡ್ಕೊಂಡು ಮಾನ ತೆಗ್ಯೋಣ
ಮನೇಗ್ಹೋದ್ಮೇಲ್ಬಿಚ್ಚಂಗಿಲ್ಲ ಹಾಳ್ಬಾಯಿಗ್ಬೀಗ ! ||

ನಿಂದೇ ವಾಸಿ ಕಟ್ಕೊಂಡೆಣ್ತಿ ವದ್ರೂ ಹಕ್ಕೈತೆ
ಕೇಳ್ನನ್ಕತೆ ನಮ್ಮತ್ತೆ, ಬಂದ್ವಕ್ಕರ್ಸ್ಕೊಂಡವ್ಳೆ
ಕಿವಿ ಕಚ್ತಾಳೆ ಚುಚ್ತಾಳೆ ಕಳ್ಬಾಟ್ಲಿಗು ಎಡ್ವಟ್ಟು
ಕಳ್ಕುಡ್ದಂಗೆ ಕುಣ್ದಾಡ್ತಾಳೆ, ಇವ್ಳನ್ನ ಛೂ ಬುಟ್ಟು ! ||

ಬಿಟ್ಟಾಕ್ಮಂಜಾ ಬಲ್ಗರ್ತಿರ್ಸುದ್ಧಿ, ಎಂಗವ್ಳೆ ಸುಂದ್ರಕ್ಕ ?
ಶ್ಯಾನೆ ದಿನ್ವಾಯ್ತು ಹೋಗ್ದೇನೆ , ಯಾಕೊ ನೆಪ್ಪಾಗ್ತವ್ಳೆ !
ಹೂನ್ಲೆ ಸಿದ್ಧ ಅವ್ಳೇನೆ ಸರಿ, ನಡಿ ಅವುಳ್ದೇನೆ ನಿಯ್ಯತ್ತು
ಬಡ್ಕೋಳ್ಳಿ ಹಾಳ್ಕೆಂಚಿ ಬೋರಿ, ಬಾ ಮನೆಗ್ಚಕ್ಕರಿವತ್ತು ||


– ನಾಗೇಶ ಮೈಸೂರು
(Nagesha Mn)
(Picture source: Internet / social media)

01382. ಬಾಟಲಿ-ಮದ್ಯದ ಕಥೆ…


01382. ಬಾಟಲಿ-ಮದ್ಯದ ಕಥೆ…
_____________________________


ಅವನ ಕೈಯಲಿ ನಾನು ಬಾಟಲಿ
ತಿರುಗಿಸಿಬಿಟ್ಟ ತಲೆ ಬಿರಡೆ ತರ…
ಬಾಟಲಿಯೊಳಗಿನ ಮದಿರೆ ಕುಡಿಸಿ
ಮತ್ತೇರಿಸಿಬಿಟ್ಟ ಹುಚ್ಚು ಕುದುರೆ ಸ್ವರ ||

ಜತೆ ಕುದುರಿಸಿಬಿಟ್ಟ ಕಥೆ ಕಾವ್ಯ ಕಟ್ಟಿ
ಕುಡಿಸಿದಾ ಮಾತಲೆ ಮದಿರೆ ಗಮ್ಮತ್ತು
ಹೊಗಳಿದನೊ ನಟಿಸಿದನೊ ಎಲ್ಲಾ ಮಂಪರು
ಎಚ್ಚೆತ್ತುಕೊಳ್ಳುವ ಹೊತ್ತಿಗೆ ನಾನಾಗಿಲ್ಲ ನಾನು ||

ಮರೆಸಿಬಿಟ್ಟ ಹುಟ್ಟು-ಮನೆ-ಮಠದ ಔದಾರ್ಯ
ತೆರೆದಿಟ್ಟನೇನೊ ಒಳಗೆಲ್ಲಾ ಪುಳಕ ಜ್ವರ ತರ
ಅದದ್ದಾಗಲಿ ಬಿಡು ಎನಿಸೊ ಭಂಡ ಮಾಯಾಜಾಲ
ಮಾರ್ಜಾಲವೊ ಮಾಧುರ್ಯವೊ ಎಲ್ಲಾ ಅಯೋಮಯ! ||

ಕುಡಿದಷ್ಟೂ ಮತ್ತು, ತಲೆ ತಿರುತಿರುಗಿ ಸುತ್ತು
ನೆಟ್ಟಗಾಗುವ ಮೊದಲೆ ಹೊಸ ಮದಿರೆ ಮತ್ತಷ್ಟು
ಎಚ್ಚೆತ್ತುಕೊಳ್ಳಲಾಸೆ, ಎಚ್ಚರಕೆ ಬಿಡದಾ ಪ್ರಲೋಭನೆ
ಹಾಳು ವಯಸಿನ ಗಮಕ, ತುಸುತುಸುವೆ ಪ್ರಚೋದನೆ ||

ಮದಿರೆ ಹಳತಾಗಿ ಬಾಟಲಿಯೂ ಬರಿ ಮಂಕು
ತಿರುಗಿಸಲೊಲ್ಲದ ಮನಸ ಪೀಡಿಸುವ ಚೀತ್ಕಾರ
ಘಮಗುಟ್ಟುತಿದ್ದ ಭಾವನೆ ಪೆಟ್ಟಿಗೆಯಲೆ ಕೊಳೆದಿದೆ
ಹಳೆ ಬಾಟಲಿನ ಬಿನ್ನಾಣ ಗಣಿಸುವರಿಲ್ಲ ಕೊರಗ ||

– ನಾಗೇಶ ಮೈಸೂರು
(Nagesha Mn)

(picture source from internet : https://www.google.com.sg/search?q=girl+inside+wine+bottle&prmd=ivn&source=lnms&tbm=isch&sa=X&ved=0ahUKEwjmi8HX8uDWAhXBf7wKHdsJA0MQ_AUIESgB&biw=375&bih=553#imgrc=RSQ6PRHg_ICTeM:)

01381. ಮಳೆ – ಮ‘he’ಳೆ…


01381. ಮಳೆ – ಮ‘he’ಳೆ…
___________________________


ಅವನು – ಮಳೆಯ
ನಡುವೆ ಸಿಕ್ಕಿಬಿದ್ದವನು
ಹಿ he ಹಿ ಆಂಗ್ಲದವನು
ಮಳೆ ನಡುವೆ ಸೇರಿಕೊಂಡು
ಮ’ಹಿ’ಳೆಯಾಗಿಸಿದವನು ! ||

ಅವನು ಪುರುಷ
ಪ್ರಕೃತಿ ಮಿಲನ ಸಹಜ
ಬೇಕಿತ್ತೆ ಪ್ರಕೃತಿ ಮಳೆ ?
ಮಹಿಳೆಯಾಗಿ ರೂಪಾಂತರ –
ಮಳೆಯಂತೆ ಮಹಿಳೆ ! ||

ಮಳೆ ಮಹಿಳೆ ಒಂದೇ ತರ
ಅತ್ತಾಗ ಮೀರಿಸುವವರಾರಿಲ್ಲಿ?
ಇಬ್ಬರದೂ ಚಲನಶೀಲ ಪ್ರವೃತ್ತಿ
ನೀರೊ, ಮಾತೊ ಮುರಿವಾ ಶಕ್ತಿ !
ಪುರುಷಕೇಕೊ ಎರಡೂ ಆಸಕ್ತಿ.. ||

ಮಳೆ ಮಹಿಳೆ ಒಂದೇ ಮನೋಧರ್ಮ
ಮೋಡ ಮುಸುಕು ಗುಸುಗುಸು ಸದ್ದು
ಬಿಕ್ಕುವುದೊ ಇಕ್ಕುವುದೊ ನಕ್ಕ ಸದ್ದೊ
ಗೊತ್ತಾಗದು ಎಲ್ಲಾ ಮೂಡಿನ ಮಾತು.. ||

ಆದರೂ ಏಕೊ ಎರಡೂ ಹಿತಕರ ಸುಖ
ಜಡಚೇತನವೆಬ್ಬಿಸಿ ಪುಳಕಿಸೊ ಸೊಬಗು
ಕವಿಯಾಗಿಸುತ ಕುಣಿಸುವ ಮಳೆ ಮಹಿಳೆ
ಕಥೆಯಾಗಿ ಉಳಿದೇಬಿಡುವ ನೆನಪಿನ ಮೂಲೆ ! ||


– ನಾಗೇಶ ಮೈಸೂರು
(Nagesha Mn)
(Picture from social media via Madhu Smitha posts – thank you😍🙏👍)

01380. ‘ಮುಳುಗು’ನಗೆ..


01380. ‘ಮುಳುಗು’ನಗೆ..
____________________________


ನೆನೆದುಕೊಂಡು ನಡೆದಿದ್ದೆ
ಅವಳ ಸುಂದರ ಮುಗುಳುನಗೆ
ಪೂರಾ ನೆನೆಸಿ ಏಮಾರಿಸಿತ್ತು
ಮಳೆರಾಯನ ಮುಳುಗು ನಗೆ ! ||

ನಗೆಯವಳದು ಬಿಳಿ ಮಾಂತ್ರಿಕ ಶಕ್ತಿ
ನೆನೆಸಿ ಮೈ ಪುಳಕ ಪೌರ್ಣಿಮೆ ಮಜ್ಜನ
ನೆನೆಸಿದ ಮಳೆಯದು ಮುಸಲ ದೈತ್ಯ
ದಿರಿಸೆಲ್ಲಾ ನೆನೆಸಿ ಕೆಸರಾಗಿಸೊ ಸಜ್ಜನ ! ||


ಸಾಲು ದಾಳಿಂಬೆಯ ನೆನೆದಿತ್ತು ಮನ
ಕೆಡವಿತ್ತು ಬಲೆಯೊಳಗೆ ಮುಗುಳುನಗೆ
ಸಾಲು ಹೊಂಡದೆ ಮುಳುಗು ನಗೆ ಮಳೆಗೆ
ವಾಸ್ತವಕಿಳಿಸಿತ್ತು ನೆನೆದಾ ನಂತರ ಶೀತ! ||

ಮುಗುಳುನಗೆಯಲಿ ಮುಳುಗಿಸವಳ ಹುಡುಗಾಟ
ಮುಳುಗು ಬಯಲಲಿ ಬಟ್ಟೆ ಮಡಚಿಸಿ ಮಳೆ ಕಾಟ
ಮಾತವಳದೆಲ್ಲ ಮಂತ್ರ ಮುಗುಳ್ನಗುವಡಿ ಆಹ್ಲಾದ
ತುಂತುರು ಹನಿಯೂ ಉಗುಳಾಟ ಸುರಿಮಳೆ ಖಾದ್ಯ ||

ಅವಳ ಮುಗುಳುನಗೆಯಲಿ ಮುಳುಗಡೆಯಾದವರೆಷ್ಟೊ
ಮಳೆಯ ಮುಳುಗು ನಗೆಯಲಿ ಕೊಚ್ಚಿಹೋದವರೂ ಅಷ್ಟೆ
ಎರಡೂ ಪ್ರಬಲ ತಂತಮ್ಮ ಅಸ್ತ್ರ ಶಸ್ತ್ರಗಳಲಿಟ್ಟರೆ ಧಾಳಿ
ಮಾತಿಲ್ಲದ ಮೂಕವೇದನೆ ನೆನೆ ಸಿಹಿಕಹಿ ಗಣಿಸದೆ ವಾಚಾಳಿ ||


– ನಾಗೇಶ ಮೈಸೂರು
(Pictures received via Madhu Smitha thanks 😍🙏👌👍)

01379. ಹೊಳೆಯಾದವೊ ರಸ್ತೆಗಳು..


01379. ಹೊಳೆಯಾದವೊ ರಸ್ತೆಗಳು..
________________________________


ಆಕಾಶದಲ್ಲು ಹೆಚ್ಚಾಗಿಹೋಗಿವೆ
ಮೋಡಾಮೋಡಗಳ ನಡುವೆ
ಪ್ರೇಮ ಪ್ರಣಯ ಪ್ರಸಂಗಗಳು…
ಮೋಡ ಬಸಿರಾಗೊ ಪರಸಂಗಗಳು
ಪ್ರಸವಿಸಿ ಮಳೆಯಾಗೊ ಕಥೆಗಳು..||

ಇತ್ತೀಚಿನ ಹೊಸ ಕಥೆಯೆ ಬೇರೆ
ಇದ್ದಕ್ಕಿದ್ದಂತೆ ಸಂಗತಿಗಳ ಬಡ್ತಿ
ಗರ್ಭಾಂಕುರಗಳಾಗಿ ಅಗಣಿತ
ನೆರೆದುಬಿಟ್ಟು ಗಗನದಲ್ಲು ಇಕ್ಕಟ್ಟು
ತಡೆ ಹಾಕುವ ಯೋಜನೆ, ಬವಣೆ.. ||

ವಿಷಯವೆಂತೊ ತಲುಪಿ ಭುವಿಗೆ
ಸಾಲು ಸಾಲು ಹೈಟೆಕ್ ಆಸ್ಪತ್ರೆಗಳು
ತೆರೆದುಬಿಟ್ಟವಲ್ಲೆ ಗರ್ಭಪಾತ ಕೇಂದ್ರ
ನೂರೆಂಟು ತರ ಪರೀಕ್ಷೆಗಳ ಬೆರಗು
ಬೇಕಿರಲಿ ಬಿಡಲಿ ಸಹಜತೆಗು ಕತ್ತರಿ ||

ಬ್ರಹ್ಮಾಂಡಕಿಹ ವಿಮೆ ವಾತಾವರಣ
ಸಮತೋಲನವಿರಲಷ್ಟೆ ಪ್ರಶಾಂತ
ಹೆಚ್ಚಿದ ಗರ್ಭಪಾತ ಶಸ್ತ್ರಚಿಕಿತ್ಸೆ ಕೃತಕ
ಹರಿದು ವ್ಯೋಮದೊಡಲ ಕೊರೆದು ತೂತ
ಕಾರಿವೆ ಬೀದಿ ರಸ್ತೆ ಕೊಚ್ಚೆ ಹೊಳೆಯಾಗಿ ರಾಡಿ ||

– ನಾಗೇಶ ಮೈಸೂರು
(Nagesha Mn)
(Picture source : social media)

01378. ಹೇಳೊಂದೆ ಒಂದು ಸಕಾರಣಾ


01378. ಹೇಳೊಂದೆ ಒಂದು ಸಕಾರಣಾ
______________________________


ಹೇಳೊಂದೆ ಒಂದು ಸಕಾರಣಾ
ದೂರವಿರಲೆಂತು ಬೇಡ ಮೌನ
ನೋಡಿಲ್ಲಿ ಸುಡುತಿದೆ ನಿನ್ನ ಪ್ರೇಮದ ವಿಕಿರಣ
ಉಳಿಯಲುಂಟೆ ನಾ ಬಡಪಾಯಿ ಸಾಧಾರಣ ||

ದೂರವಿರು ಎನ್ನುವ ದೂರಲ್ಲೆ
ಹತ್ತಿರವಿಹ ಖಾತರಿ ಇದೆಯಲ್ಲೆ
ಬಿಟ್ಟುಕೊಂಡಾದ ಮೇಲೆ ಮನದೆ ಇನ್ನೇಕೆ
ಹತ್ತಿರದ ಛಾಯೆ ದೂಡುವ ಈ ಬಯಕೆ ||

ಬಲ್ಲೆ ನೀ ವಿತರಿಸೊ ವ್ಯಾಪಾರಿ
ವಿತರಿಸದೆ ನೀ ಪ್ರೇಮದ ತರಕಾರಿ
ವಿತರಿಸಿದರೆ ಹೀಗೆ ವಿರಹದ ಒಣ ಸರಕ
ಹೇಗೆ ವಿತರಿಸಲೆ ನನ್ನ ಪ್ರೀತಿ ಪ್ರೇಮ ಚಳಕ ||

ದಿನ ರಾತ್ರಿ ನಿನ್ನ ನೆನಪ ಹಿಂದೆ
ಬೆಂಬಿಡದ ಭೇತಾಳ ಬೆನ್ನು ಬಿದ್ದೆ
ಕರಗಿತು ಕಲ್ಲು ಹೃದಯ ಕೊನೆಗೂ ಇನಿತೆ
ಇನ್ನೇಕೆ ಕಲ್ಲು ಮಾಡಿಕೊಳ್ಳುವೆ ಮನ ಮತ್ತೆ ||

ನೀ ಕೊಟ್ಟ ಕಾರಣಗಳಲ್ಲ ನೈಜ
ಪ್ರೀತಿಗೆ ಬಿದ್ದಾಗ ಭೀತಿ ಸಹಜ
ನಿವಾರಿಸುವ ಕೂತು ಮಾತು ಭಯದಾತಂಕ
ಎಲ್ಲ ಪ್ರೀತಿಯಲು ಇದ್ದೇ ಇರುವ ಸಮರಾಂಕ ||

– ನಾಗೇಶ ಮೈಸೂರು
(Nagesha Mn)
(Picture source: internet / social media)

01377. ಒರಗಲೊಂದು ಹೆಗಲು


01377. ಒರಗಲೊಂದು ಹೆಗಲು
___________________________


ಒರಗಲೊಂದು ಹೆಗಲು
ಬೇಕಲ್ಲ ಹಗಲಿರುಳು
ಬೇಕೆನ್ನುವವರೆ ಸುತ್ತ
ಬೇಡಲ್ಯಾರ ಮೊತ್ತ ? ||

ಮೊಗೆಮೊಗೆದು ಕೊಟ್ಟು
ಖಾಲಿಯಾಗುವ ಗುಟ್ಟು
ಹಾಕಬರದಲ್ಲಾ ಪಟ್ಟು
ಹಾಕುವರ ಕೈಲಿ ಜುಟ್ಟು ||

ಹಸ್ತ ಕೇಳುವವರೆ ಎಲ್ಲ
ಕೈಯೆತ್ತಿ ಕೊಡುವವರಿಲ್ಲ
ಅಳುವಿಗೆ ಹೆಗಲಾಗಬೇಕು
ಕೇಳದೆಯು ಬಗಲಾಗಬೇಕು ||

ಕೊಟ್ಟವರ ಸುಲಿವಾ ಜಾಲ
ಕೊಡುವವರಿಗಲ್ಲ ಈ ಕಾಲ
ಇಲ್ಲಿ ಕೊಟ್ಟು ಕೆಟ್ಟವರೆ ಹೆಚ್ಚು
ಕೊಟ್ಟವರ ಕಾಲೆಳೆವ ಕಿಚ್ಚು ||

ಕಾಡುವ ಭಾವರಾಹಿತ್ಯತೆ
ಬೆಸುಗೆಗಲ್ಲಿ ಮಾನವೀಯತೆ
ಯಾಕಲ್ಲು ಯಾಂತ್ರಿಕ ಸ್ವಾರ್ಥ?
ಬಂಧ ಸಂಬಂಧ ಕೆಡಿಸಿ ಅನರ್ಥ ||

– ನಾಗೇಶ ಮೈಸೂರು
(Nagesha Mn)

(Picture source: http://clipart-library.com/clipart/kiMbygaqT.htm)

01376.ಬೀದಿ ನಲ್ಲಿ ಜಗಳ


01376.ಬೀದಿ ನಲ್ಲಿ ಜಗಳ
________________________


ಜಗ್ಗಾಡುತ ಜುಟ್ಟು ಮುಂದಲೆ
ಎಳೆದಾಡಿ ಬೀಳಿಸೊ ಕಲೆ
ಸೆರಗು ಸಿಕ್ಕಿಸಿದ್ದೆ ಸೊಂಟ
ನಲ್ಲಿ ಮುಂದೆ ಕೊಡ ಅನಾಥ ! ||

ಸಹಸ್ರ ನಾಮಾರ್ಚನೆ ಭಲೆ ಭಲೆ
ಬೈಗುಳದಲು ಅಬ್ಬಾ ! ಎಂಥಾ ಕಲೆ !!
ನಾ ಮೊದಲು ನೀ ಮೊದಲು, ವಾದ
ಗೊರಗೊರ ನಲ್ಲಿ ನೀರಿಗು ವಾಗ್ಯುದ್ಧ ||

ತಗುಲಬೇಕು ಮರ್ಮಕೆ ಮಾತು
ನಿಸ್ಸಂಕೋಚ ಬರುತಿರಬೇಕು ಸತತ
ಶೀಲಾಶ್ಲೀಲ ಪದ ಗೊಡವೆ ಪರಿಗಣನೆ
ಬಿಟ್ಟರೆ ಗೆಲುವು, ಬಿಡದವರದೆ ಬವಣೆ ! ||

ಕೆಲವೊಮ್ಮೆ ಕರ್ಣಾರ್ಜುನ ಕಾಳಗ
ಕೊಡ ಬಕೀಟುಗಳೆ ಕೈಯಲಿ ಆಯುಧ
ನೆರಿಗೆಯೆತ್ತಿ ಸೊಂಟಕೆ ಕಟ್ಟೆದರದೆ ರಣರಂಗ
ರಂಗೇರುತ ಕದನೋತ್ಸವ ಪ್ರಮಿಳಾ ರಾಜ್ಯ ||

ಕಣ್ಣೀರು ಕಂಬನಿ ಕೆದರಿದ ಕೂದಲು
ಮುಖ ಕೆಂಪಾಗಿ ಬಿಕ್ಕಳಿಕೆ ತೊದಲು
ನಿಲ್ಲದ ಧುಮುಗುಟ್ಟುವಿಕೆ ನಿಂತರು ನಲ್ಲಿ
ಭುಸುಗುಟ್ಟುತಲೆ ಮನೆಗೆ ಖಾಲಿ ಕೊಡದಲ್ಲಿ ||


– ನಾಗೇಶ ಮೈಸೂರು
(Nagesha Mn)
(Picture source : internet / social media)

01375. ನಿನ್ನ ಮುಂಗುರುಳಾಟ..


01375. ನಿನ್ನ ಮುಂಗುರುಳಾಟ..
__________________________


ನಿನ್ನ ಮುಂಗುರುಳಾಟ
ನೋಡೆಲ್ಲೆಲ್ಲೊ ಉರುಳಾಟ
ಹಿಂದೆ ಸರಿಸಿದರು ಬಿಡದೆ
ಅತಿಕ್ರಮಣ ಮರಳಿ ಧಾಳಿ ||

ಎಷ್ಟು ಧೈರ್ಯ ರಪರಪನೆ
ಬಡಿಯುವ ಪದೇಪದೇ ಅತ್ತೆ
ಮಂದ ಮಾರುತನಾ ನೆಪದಿ
ಕೆನ್ನೆ ಮುತ್ತಿಕ್ಕುತ ಮತ್ತೆ ಮತ್ತೆ ||

ಎಂಥಾ ನಯವಂಚಕನವ !
ನಯವ ಬಳಸೇ ಜಾರುವ
ಕಟ್ಟಿದ ಬಂಧ ಬದಿ ಸರಿಸಿ
ಅವಳ ಸುತ್ತೆ ಹಾರಾಡುವ ||

ಚಿಗುರು ಬೆರಳೊಡನೆ ಸ್ಪರ್ಧೆ
ಎಳೆದಾಟ ಸರಿದಾಟ ಸತತ
ಯಾರು ಗೆದ್ದರೂ ಕೊನೆಗವಳೆ
ಗೆಲ್ಲುವಾ ಕ್ರೀಡೆ ಸುಖಾನುಭವ ||

ಗಾಳಿ ಜೋರಾಗಿ ಬೀಸಿದರೆ
ವದನ ಪೊರೆವ ನೆಪದಲಿ
ಸುತ್ತುವರಿದು ಮುತ್ತಿಬಿಡುವ
ಕೇಶರಾಶಿ ಕಂಡಾಗ ಅಸೂಯೆ ||

– ನಾಗೇಶ ಮೈಸೂರು
(Nagesha Mn)

(picture from http://tinazone.wordpress.com/category/ಪಡಖಾನೆಯ-ಕವಿತೆಗಳು/page/2/)

01374. ಸತಿ ಶಕ್ತಿ…


01374. ಸತಿ ಶಕ್ತಿ…
_____________________


ಸತಿಶಕ್ತಿಯೇ ಅಪಾರ
ಗೆದ್ದಿದೆಯಂತೆ ಅಪ್ಸರೆಯರ
ಪರೀಕ್ಷಿಸಲ್ಹೊರಟೀರಾ ಜೋಕೆ !
ಇಂಗು ತಿಂದ ಮಂಗನಾಗೊ ಶಂಕೆ !! ||

ತೋರಿಸಬೇಡೀ ಪ್ರತಾಪ
ಬಂದುಬಿಟ್ಟೀತು ಭೀಕರ ಕೋಪ
ಧುಮುಗುಟ್ಟುವ ಚಂಡಿ ಚಾಮುಂಡಿ
ಅಡಿಗೆ ಮನೆ ಸದ್ದಲೆ ಮುಷ್ಕರ ದಂಡಿ ||

ಅಪ್ಪಿತಪ್ಪಿ ಅವರ ತವರ
ಜೋಪಾನಾ, ಟೀಕಿಸಿಬಿಟ್ಟೀರಾ !
ಅಲ್ಲಿಗೆ ಕೆಟ್ಟಂತೆ ನಿಮ್ಮಾ ಗ್ರಹಚಾರ
ಬರಿ ಮಾತಲೆ ನಿಮ್ಮ ಬೆವರಿಳಿಸುವರ ! ||

ಹೋಲಿಸಬೇಡಿ ದಮ್ಮಯ್ಯ
ನಿಮ್ಮನೆ ಹೆಣ್ಗಳ ಈಡಲ್ಲ ಭಾರ್ಯ
ಆದರೆ ಹೊಗಳಿ ತವರ ತೊರೆದ ತ್ಯಾಗ
ಮೆತ್ತಗೆ ತೆಗಳಿ ನಿಮ್ಮನೆ ಜನಗಳ ಆಗಾಗ ! ||

ಅಂತಿಂಥಾದ್ದಲ್ಲ ಅವರ ಶಕ್ತಿ
ಬೆನ್ನಾದರೆ ಗೆಲುವಿಗವರೆ ಸ್ಪೂರ್ತಿ
ಹದವರಿತು ಸಂಭಾಳಿಸೆ ಜಗನ್ಮಾತೆ ತರ
ಆಗರಿವಾಗುವುದು ಸತಿಶಕ್ತಿಯೆಷ್ಟು ಪ್ರಖರ ||


– ನಾಗೇಶ ಮೈಸೂರು
(ಲಘು ಲಹರಿಯಲ್ಲಿ 😁)
(Nagesha Mn)

(Picture source : internet / social media)

01373. ಒರಟುತನವೇನಾಯ್ತು?


01373. ಒರಟುತನವೇನಾಯ್ತು?
_______________________________________


ಏಣಿ ಹತ್ತಲು ಹೋದೆ
ಯಾಕೊ ಕಾಲೊತ್ತಿತು ನಿಲಬಿಡದೆ ಗಳಿಗೆ ;
ಚಪ್ಪಲಿಯನೂ ತೂರಿ ಎಲುಬಿಗೆ ತಾಕುವಷ್ಟು –
ಅಷ್ಟೊಂದು ನಯವಾಗಿ ಬಿಟ್ಟವೆ, ಒರಟಾಟ ಬಿಟ್ಟು ? ||

ಗೇಟಿನಾಚೆಯ ರಸ್ತೆ
ನರಳುತಿತ್ತೊಂದು ನಾಯಿಮರಿ ಬಿಸಿಲಲಿ
ನೆರಳಿಗೆತ್ತಿಡುವ ಸೌಜನ್ಯ ದಾಟಬೇಕಾ ಬದಿಗೆ
ಒಳನಡೆದೆ ಮೆಟ್ಟಿಗೆ, ಅವಸ್ಥೆ ರಸ್ತೆಯದೊ ಕಾಲಿನದೊ ? ||

ಗುಡಿಯ ಗೇಟಿನ ದೂರ
ಕಲ್ಲು ಮಣ್ಣಿನ ಕಾಲುಹಾದಿ ಸುಖಿಸುತ್ತ ಇತ್ತು.
ನಡೆಯಲೊಂದೊಂದು ಹೆಜ್ಜೆ ಚುಚ್ಚಿದಂತೆ ಮುಳ್ಳು
ಕವುಚಿ ನಡೆವ ಪಾದಗಳಷ್ಟೊಂದು ಸುಕೋಮಲವೆ ? ||

ಚಾಪೆಯ ಮೇಲೆ ಮಲಗದು
ಕೂರದು ಜಮಖಾನದ ನೆಲದ ಮೇಲೆ
ಮಣೆಯೂಟವಲ್ಲ ಮೇಜಿನೂಟದಚ್ಚುಕಟ್ಟು
ಗ್ರಾನೈಟು ನೆಲದಲು ಶೀತ, ಧರಿಸಿದರೆ ವಿಹಿತ ||

ಯಾವತ್ತಾದೆವಿಷ್ಟೊಂದು ಸೂಕ್ಷ್ಮ ?
ತೋಪು ಬೀದಿಯ ತುಂಟಾಟ ಮರೆತು..
ಕಳಚಿಕೊಂಡೆಲ್ಲ ಒರಟುತನ ಹೊರಗಿನ ಕಾಯ
ಒರಟಾಗಿಸಿಬಿಟ್ಟಿದೆ ಒಳಗೆಲ್ಲ ಕಲ್ಲು ಮನಸಿನ ಕರ್ಮ ||

– ನಾಗೇಶ ಮೈಸೂರು
(Nagesha Mn)

(Picture source: This work is licensed under a Creative Commons Attribution 3.0 Unported License)