01450. ಕಾಯುವ ಸೊಗ


01450. ಕಾಯುವ ಸೊಗ
_______________________


ಇಬ್ಬನಿ ಮುಸುಕು ಮಸುಕು ಹಾದಿ
ನೀರೆರೆದುಕೊಂಡು ನಿಂತ ಧರಣಿ
ತುಂತುರು ಹನಿಗಳಾಗುತ ಪುಲಕ
ಕಾಯಿಸುವುದರಲೇನಿಷ್ಟು ಸೊಗ ? ||

ಕಾಯುತಿಹಳೊ? ಕಾಯಿಸಿಹಳೊ?
ಅವರವರ ಭಾವದನುರುಕ್ತಿ ಫಸಲು
ಕಾದಿಹನೇನು, ಸೇತುವೆಯಾಚೆ ಮುಗ್ಧ
ಕಾಯಿಸಿಹನೆ ಕೊಟ್ಟು ಗೊಂದಲ ಸಂದಿಗ್ಧ ? ||

ಚೆಲ್ಲಿ ಸ್ವಾಗತಕೆ ಇಳೆ, ಹೂ ತೊಟ್ಟ ಮಹಿಳೆ
ಬಾಡದ ಹಾಗೆ ನೀರ, ಕೊಳವಾಗಿಸಿ ನೀರೆ
ಮರದಿಂದುರಿ ವಿರಹ ಪ್ರತಿ ರೆಂಬೆ ಕೊಂಬೆ
ನಡುಗಿ ನಿಂತವಳಲ್ಲಿ ಚಂದನದ ಗೊಂಬೆ ||

ಮತ್ತೆ ಮತ್ತೆ ನೋಟ ತಲೆಯೆತ್ತಿ ಚೆಲ್ಲಾಟ
ಎದೆಬಡಿತ ಹೃದಯ ಕದ ಸ್ಥಾನಪಲ್ಲಟ
ಅಲ್ಲೋಲ ಕಲ್ಲೋಲ ಅಂತರಾಳ ಧ್ಯಾನ
ನಿರಾಳ ಮುಖಮುದ್ರೆ ನಾಟಕೀಯ ಭಾವ ||

ತೊಟ್ಟುಡುಗೆ ಅದುರಿಸಿ ತನುವೆಲ್ಲ ನಡುಕ
ಮೆಚ್ಚಿಸುವ ಹಂಬಲ ದಿರುಸಾಗಿ ಪ್ರಕಟ
ಕಾಯಬಲ್ಲುದು ಕಾದ ಹೆಂಚಂತೆ ಯೌವ್ವನ
ಹೊತ್ತು ಮೀರಿದರೇನು ಮುನಿಸಿಗದೆ ಸಂಭ್ರಮ ||

– ನಾಗೇಶ ಮೈಸೂರು
(Nagesha Mn)

(Picture source internet / social media received via Muddu Dear – thanks madam! 😍👌👍🙏😊)

01449. ಮಂಕುತಿಮ್ಮನ ಲಗ್ಗ ೮೨ ರ ಟಿಪ್ಪಣಿ: ಅಜ್ಜಿಯಾಟದಿ ಬೊಮ್ಮ (ಕಣ್ಣಾಮುಚ್ಚೆ ಕಾಡೇ ಗೂಡೆ..)


01449. ಮಂಕುತಿಮ್ಮನ ಲಗ್ಗ ೮೨ ರ ಟಿಪ್ಪಣಿ: ಅಜ್ಜಿಯಾಟದಿ ಬೊಮ್ಮ (ಕಣ್ಣಾಮುಚ್ಚೆ ಕಾಡೇ ಗೂಡೆ..)

ಮಂಕುತಿಮ್ಮನ ಲಗ್ಗ ೮೨ ರ ಟಿಪ್ಪಣಿ ರೀಡೂ ಕನ್ನಡದಲ್ಲಿ,…

https://www.facebook.com/story.php?story_fbid=1081839858619154&id=640670512736093&notif_id=1511922811515420&notif_t=notify_me_page&ref=notif

01448. ಯಾಕಳೆಯುವಾಟ?


01448. ಯಾಕಳೆಯುವಾಟ?
______________________


ಯಾಕಳೆಯುವೆ ನಖಶಿಖಾಂತ
ಸಂತೆಯಲಿಟ್ಟ ಪಶುವಿನಂತೆ ?
ಬಿಕರಿಗಿಟ್ಟ ಸರಕಲ್ಲ ಈ ಜೀವ
ಹೆಣ್ಣೆಂದರಷ್ಟು ತುಚ್ಛವೆ ದೊರೆಯೆ ? ||

ಯಾಕ್ಹೀಗೆ ಮುಜುಗರಕಿಡುವೆ?
ಮಾತಾಗದೇನು ಸರಳ ಸಭ್ಯ
ಎದುರುಬದುರು ಮುಖಾಮುಖಿ
ಸರಿಸಮವಾಗದೆ ಸರಿಗಮ ? ||

ಓದಲು ಜಾಣೆ ನುಡಿಸುವೆ ವೀಣೆ
ಉಂಡು ತಣಿವಷ್ಟಡಿಗೆ ಮಾಡುವೆ
ನಯವಿನಯ ಜತೆ ಸಿಟ್ಟು ಸೆಡವು
ನಾನೂ ನಿನ್ನಮ್ಮನಂತೆ ಸಂಗಡವೆ ||

ಯಾಕೀ ಚೌಕಾಬಾರ ಕವಡೆಯಾಟ ?
ಯಾಕ್ಹೀಗೆ ತೋರಿಕೆ ಒಳ್ಳೆಯ ಮುಖ ?
ಕೇಳುವುದಾದರೆ ಕೇಳು ದೌರ್ಬಲ್ಯ
ಹೇಳು ಅದರೊಟ್ಟಿಗೆ ಜೀವಿಸಬಲ್ಲೆಯಾ ? ||

ನಾನೇನು ಮಾಡುವುದಿಲ್ಲ ಆಣೆ ವಚನ
ನಾನಾಗಿರುವೆ ಜತೆಗೆ ನೊಗಕೆ ಹೆಗಲು
ಕಷ್ಟವೊ ಸುಖವೊ ನೀಸುವ ಒಂದಾಗಿ
ಅಳೆಯೋಣ ಬದುಕ ಅಳೆಯದೆ ನಮ್ಮ ||

– ನಾಗೇಶ ಮೈಸೂರು
(Nagesha Mn)

(Photo source internet / social media received viaMadhu Smitha – thank you 😍👌👍🙏😊)

01447. ಮನಸಿನಾಕೃತಿ


01447. ಮನಸಿನಾಕೃತಿ
________________________


ಏನೀ ವಿಸ್ಮೃತಿ ? ಮನಸಿನಾಕೃತಿ
ತಳೆಯುತಿದೆ ರೂಪ ತನ್ನಿಚ್ಛೆ ಸರತಿ
ಕಾಣದ ಸರಕು ಕಾಡುವ ಕುಹಕ
ನಿಯಂತ್ರಿಸುತ ನರನ ಅಹಂಪಾಕ ||

ಬಯಸಿದ್ದುದರ ಹಿಂದೆ ಓಡಿದಾ ಛಲ
ಪಡೆವವರೆಗೆ ಬಿಡದೆ ಕಾಡೊ ಹಂಬಲ
ಪಡೆದ ಮೇಲೇಕೊ ಉಢಾಫೆ ನಿರಾಸಕ್ತಿ
ಹೊಸ ಆಟಿಕೆ ಮೋಹ ಮಕ್ಕಳಾ ರೀತಿ ||

ಇಲ್ಲದುದರ ಮೋಹ ಇದ್ದಾಗ ನೀರಸ
ದಾಹಕಿದ್ದರು ನೀರೆ ಬಯಕೆ ಅಭಾಸ
ಸಹಜವಿದೇನು ಅಂತರಂಗ ತಾಮಸಿ ?
ಅರಸಿ ಮತ್ತೇನೊ ಒಳಗಿದ್ದರು ಕಸಿವಿಸಿ ||

ನೂರೆಂಟು ಪಾಠ ನೀತಿ ಸಂಹಿತೆ ವ್ರತ
ಮಾಯೆ ಮುಸುಕೆಂದು ಮಾಡಿ ಕಮ್ಮಟ
ಜಿತೆಂದ್ರಿಯತೆ ಸುತ್ತ ಗಿರಕಿ ಹೊಡೆದರು
ಪ್ರಲೋಭನೆ ಪ್ರಚೋದನೆ ಗೆಲುವ ತೇರು ||

ವಿಸ್ಮಯವದೆ ಜಗದೆ ಮರುಕಳಿಕೆ ಸತ್ಯ
ಮತ್ತದನೆ ವರಿಸೊ ಮನಸಿನ ಸಾಂಗತ್ಯ
ಜೀವಿಗೊಂದೊಂದು ಮನ ವಿಭಿನ್ನ ಕಲಿಕೆ
ಒಂದೆ ಬ್ರಹ್ಮವದೇಕೊ ಬೇರೆ ಅವತರಣಿಕೆ ||

– ನಾಗೇಶ ಮೈಸೂರು
(Nagesha Mn)

(ಚಿತ್ರ: ನಿನ್ನೆಯದರ ಹಾಗೆ ಶ್ರೀಧರ ಬಂಡ್ರಿಯವರ ಲಲಿತ ಸಹಸ್ರನಾಮದ ಕಂತೊಂದರಿಂದ ಎರವಲು ಪಡೆದದ್ದು – ಇಲ್ಲು ಸೋಜಿಗವೆಂದರೆ ಕವಿತೆಗೆ ಸೂಕ್ತ ಹೊಂದುವ ಚಿತ್ರ ದೊರಕಿದ್ದು; ಮನಸಿನಂಥ ವಸ್ತು ವಿಷಯಗಳಿಗೆ ಸೂಕ್ತ ಚಿತ್ರ ದೊರಕುವುದು ಸ್ವಲ್ಪ ಕಷ್ಟವೆ Sridhar Bandri – thank you again 😍👌👍🙏😊)

01446. ಏಕೋ ಏನೊ


01446.ಏಕೋ ಏನೊ
______________________


ಏಕೋ ಏನೊ ಕುತೂಹಲ ಪ್ರಕೃತಿ
ವಿಕೃತಿಯಲ್ಲ ಜಾಗೃತ ಮನ
ಸಾರವದೇನೊ ಅವಸರವಸರ
ಬೆನ್ನಟ್ಟಿ ಒಳಗಿನದೇನೊ ಅತಂತ್ರ ! ||

ತಂತ್ರ ಮಂತ್ರ ಕುತಂತ್ರ ಕುಚೇಷ್ಟೆ
ಯಾವುದಲ್ಲದ ಶೋಧ ಸಮಷ್ಟಿ
ಹುಟ್ಟ ಮೂಲ ಸಾವಿನ ಪಾತಾಳ
ನಟ್ಟ ನಡುವಿನ ಬದುಕೆಂಬ ಕಾಷ್ಠಾ ||

ಯಾರೊ ನುಡಿದರು ಪ್ರಕೃತಿ ಸೃಷ್ಟಿ
ದೃಷ್ಟಿಯಲದೇನೊ ಮಲಿನ ಸಂಗತಿ
ಭಾವದಾದರ ಸಮಭೋಗ ಸದರ
ಆಳದಲ್ಲಿಹುದೆ ಹುಡುಕಾಟಕೆ ತೆರೆ ? ||

ಸೃಷ್ಟಿ ಸ್ಥಿತಿ ಲಯ ದೃಷ್ಟಿ ಸಮನ್ವಯ
ಒಬ್ಬನಲ್ಲ ಮೂವ್ವರಾಗಿ ಸಂಶಯ
ಯಾರನರಿವೆ? ಯಾರಾಗಿ ಅರಿವೆ?
ಯಾರರಿವೆಯಲ್ಲಿ ಅರಿವನ್ನೆ ಕಾಣುವೆ ? ||

ಕಿತ್ತೊಗೆದು ಮುಸುಕ ಬತ್ತಲೆ ಸರಸ
ಮಾಡಬಲ್ಲವನಿಗದೆ ನೈಜ ಪಂಥ
ತಣಿಸದ ಮೋಹ ಗೆದ್ದಾಗ ಕುತೂಹಲ
ಸಿಕ್ಕರೂ ಸಿಕ್ಕೀತು ಅಲೆದಾಟಕೆ ಮೋಕ್ಷ! ||

– ನಾಗೇಶ ಮೈಸೂರು
(Nagesha Mn)
(Picture : ಗೂಗಲ್ ಚಿತ್ರ ಶ್ರೀಧರ ಬಂಡ್ರಿಯವರ Sridhar Bandri ಪೋಸ್ಟಿನಿಂದ ಎರವಲು ಪಡೆದಿದ್ದು – thank you 😍👌🙏👍)

01445. ಋಣ ತೀರಿಸಲೆಂತೆ ?


01445. ಋಣ ತೀರಿಸಲೆಂತೆ ?
________________________


ಮನೆಯೆ ಮೊದಲ ಪಾಠಶಾಲೆ
ಅಮ್ಮ ತಾನೆ ಮೊದಲ ಗುರು..!
ಯಾರಿಹರಿಲ್ಲಿ ಬಿಡವಳಾ ಸರಿಸಮ
ಬಳಸವಳನಪ್ಪಿ ಕಲಿಯೊ ಘಮಘಮ ! ||

ತಿದ್ದಲ್ಲೊಲ್ಲೆ ಮುದ್ದಿನಾಟ ಲೇಸು
ಹುಸಿ ಹಠ ತೋರೆ ಬರುವಳಿತ್ತ..
ನೋಯುವ ಕೈಗಿತ್ತು ಸಿಹಿಮುತ್ತು
ತಿದ್ದುವಳವಳೆ ಬರಿ ಬಾಯ್ನುಡಿಸಿ ||

ಕಣ್ಕಟ್ಟವಳದು ಸೋತೆಲ್ಲ ಚರ್ಯೆ
ಅನುಕರಿಸುವುದೆಲ್ಲ ಅವಳಾಣತಿ
ಕಟ್ಟಳೆಯೊ ಕಟ್ಟಿಲ್ಲದ ಹಕ್ಕಿಯೊ
ಅವಳ ಮಾತಂತೆಲ್ಲ ವೇದವಾಕ್ಯ ! ||

ಬೆನ್ನಿಗಾತು ಕಲಿಯುವೆ ಇಣುಕುತ
ತಪ್ಪೆನಿಸದಲ್ಲ ತಪ್ಪೆಲ್ಲಾ ಸಂಗೀತ
ಬೇಸತ್ತಾಗೆಲ್ಲ ಕಣ್ಣಮುಚ್ಚಾಲೆಯಾಟ
ಆಟಪಾಠಓಟ ನಗಿಸುವ ಅದ್ಭುತ ! ||

ಕೆತ್ತುತಿಹಳವಳೊಂದು ಶಿಲ್ಪಿಯಂತೆ
ತೆತ್ತು ತೇದು ಜೀವನವಿಡಿ ಚಂದನ..
ಕಲಿಸಿದೆರಡಕ್ಷರವಲ್ಲ ಬಾಳುವ ಬಗೆ
ಕಲಿಸದೆ ಅರಿತೆ, ಋಣ ತೀರಿಸಲೆಂತೆ ? ||

– ನಾಗೇಶ ಮೈಸೂರು
(Nagesha Mn)

(Photo source internet / social media)

01444. ನಾನಾಗುವ ಸಂದಿಗ್ಧ..


01444. ನಾನಾಗುವ ಸಂದಿಗ್ಧ..
_________________________


ದಾವಣಿ ತುಂಬಿದ ಕನಸುಗಳು
ಹೊತ್ತು ಗೊತ್ತಿಲ್ಲದೆ ಮುತ್ತುವುದಲ್ಲೆ
ನೆರಿಗೆ ಸೀರೆಯನುಟ್ಟು ಕಾಡೆ ಹಂಬಲ
ಬಚ್ಚಿಡಲೆಷ್ಟೆಂದು ಹೇಳೆ, ಎಳೆ ಪ್ರಾಯ ? ||

ಲಾವಣಿ ಹಾಡುತ ಅರಳಿದ ಹೂವು
ಈ ತನುವಾದಾಗ ಬಿಗಿದಪ್ಪಿದ ಕುಪ್ಪಸ
ಬೆವರಾಗಿ ನೀರಾಗಿ ನೀರೆ ನಾಚಿದಳೆ
ಬಚ್ಚಿಡಲೆಂತು ತೊಟ್ಟಿಕ್ಕುವ ತುಣುಕ? ||

ಯಾರಿಲ್ಲಾ ಮನದಲಿನ್ನೂ ಮೂರುತಿ
ಯಾರೆಲ್ಲಾ ಬಂದು ಕಾಡುವ ಅಸ್ಪಷ್ಟ
ಮೂರ್ತಾಮೂರ್ತವೆಲ್ಲ ಗುಟ್ಟಾಗಿರದೆ
ರಟ್ಟಾಗುವ ಪರಿಯುಣಿಸಿದೆ ಆತಂಕ! ||

ಹಕ್ಕಿಯಾಗುವ ಭಾವ ಹಾರದ ಮನ
ಯಾಕೊ ಹೊಡೆದಿದೆ ಗಿರಕಿ ಸುತ್ತಲೆ
ಯಾವ ಭೀತಿಯ ಹಿಡಿತವೊ, ಕೂತಿದೆ
ಹಾರಿದರನಾವರಣ ತೆರೆದ ರೆಕ್ಕೆಯಡಿ! ||

ಕೈ ಕಟ್ಟಿದೆ ಸಂಯಮ ಕೋಟೆಯನು
ಕಾದು ಕುಳಿತಿದೆ ಕಾಲದ ಹಕ್ಕಿಗಾಗಿ
ತಾನೆ ಬಿಚ್ಚಲಿ, ತಾನೆ ಗರಿಗೆದರಿಸಲಿ
ನಾನಾಗುವುದಿಲ್ಲ ರೆಕ್ಕೆ ಸುಟ್ಟ ಪತಂಗ ! ||

– ನಾಗೇಶ ಮೈಸೂರು
(Nagesha Mn)

(Picture source : webneel.com , received via internet / social media , )