01424. ಚೆಲ್ಲು ಚೆಲ್ಲು ಚೆಲುವೆ…


01424. ಚೆಲ್ಲು ಚೆಲ್ಲು ಚೆಲುವೆ…
__________________________


ಚೆಲ್ಲಿದ್ದು ನೀರಲ್ಲ
ನೀರೆ ನಿನ ಯೌವನ
ಎಚ್ಚರ ಹಾಳು ಪ್ರಾಯ
ಹೆಜ್ಜೆ ಹೆಜ್ಜೆಗು ಅಪಾಯ ! ||

ತಲೆಗೊಂದು ಭಾರ
ನಡುವಿಗೊಂದು ಕೂತು
ಏನೇನೊ ಜಗ್ಗಿ ಒಳ ಹೊರಗೆಲ್ಲ
ಹಗುರ ಹತ್ತಿ ಅನಿಸಿ ಗೊಂದಲ ||

ಚೆಲ್ಲಿದ್ದೆಲ್ಲದರ ಪರಿವೆ
ಅವಳಿಗರಿವಿಲ್ಲ ಅರಿವೆಗು
ಚೆಲ್ಲಾಡಬಿಡದೆ ಹದಿ ಹರೆಯ
ಮುಡಿಗೆ ಮಲ್ಲಿಗೆಯಾಗುವೆಯ? ||

ಗೌತಮನಾ ಅಹಲ್ಯೆ
ಜಮದಗ್ನಿಯ ರೇಣುಕೆ
ಬಿಡು ಅನ್ಯಮನಸ್ಕತೆ ಶಾಪ
ನೋಡದೆ ಕಾರ್ಯಕಾರಣ ಲೋಪ ||

ಜಾರಿ ಹೋಗಿದ್ದು ಸಿಗದು
ನಡೆ ಕೊಡವ ಜಾರಬಿಡದೆ
ಅಂದ ಚಂದ ಬರಿ ಸೊಗಸು
ಹುಲ್ಲಾಗು ಬೆಟ್ಟದಡಿ ಹುಲುಸು ||

– ನಾಗೇಶ ಮೈಸೂರು

(Nagesha Mn)
(Picture source internet / social media received via Tejaswini Kesari 😍🙏👍👌😊 thanks madam!)

01423. ನಿಸರ್ಗಧರೆ


01423. ನಿಸರ್ಗಧರೆ
____________________

ಅವಳೊ ಧರೆ
ಮಧುರಾಧರೆ
ಸಿಹಿತುಟಿ ಹೂವಾದರೆ
ಚಿಟ್ಟೆ ಮೂಗಿಗು ಹಾತೊರೆ !

ನಯನಾ ಸುರೆ
ನಿಸರ್ಗದೆಲೆ ಸೀರೆ
ಕೆನ್ನೆಯಾಗೆ ಬಳ್ಳಿಯ ಗೆರೆ
ಕಣ್ರೆಪ್ಪೆ ಮೊಗ್ಗು ಸಹಚರೆ !

ವೈಯಾರ ಕಲೆ
ನಿರಾಸಕ್ತ ಬಾಲೆ
ಥಳುಕು, ಸುಗಂಧ ಮಾಲೆ
ಬಳ್ಳಿ ಬಳುಕು, ಪ್ರಕೃತಿ ಲೀಲೆ !

ಹಸಿರಾಗೊ ಕೆಂಪು
ಹಳದಿ ಹಚ್ಚೆ ಕದಪು
ಅರೆಬರೆ ಕಣ್ಣಾ ನಿದಿರೆ
ರೆಪ್ಪೆ ಬಡಿತ ಜಗ ಕುದುರೆ !

ಹೂವಾಗಿ ಕಾಯಿ ಹಣ್ಣು
ಫಲವತ್ತಾಗಿ ಫಲಿತ ಹೆಣ್ಣು
ಸೂಸೆ ಭಾವ ಸಂತೃಪ್ತಿ ಕಾಣು
ಅರಳಿ ತೆರೆಸುವಳು ಮನದ ಕಣ್ಣು !

– ನಾಗೇಶ ಮೈಸೂರು
(Nagesha Mn)

(Picture source: from Internet / social media received via Mohan Kumar D M – thanks Mohan sir! 😍👌🙏👍😊)
– ನಾಗೇಶ ಮೈಸೂರು
(Nagesha Mn)
೧೫.೧೧.೨೦೧೭

(Picture source: from Internet / social media received via Mohan Kumar D M – thanks Mohan sir! 😍👌🙏👍😊)